ವ್ಯಕ್ತಿಯ ಸೌಂದರ್ಯ ಕೂಡ, ಆರೋಗ್ಯ-ಧನ-ವಿದ್ಯೆಯಂತೆಯೇ ಪೂರ್ವಜನ್ಮ ಪುಣ್ಯದಿಂದ ಬರುವುದು!

ಎಷ್ಟೆಲ್ಲ ಕುರೂಪಿಗಳನ್ನು, ಭೀಕರರನ್ನು ಕಂಡಿಲ್ಲ ತಾನು? ಆದರೆ ಇವಳು ಅಸಹ್ಯ, ಕರಾಳ, ಕ್ರೂರ, ವಿಕಾರ, ಸರ್ವ ವಕ್ರಗಳ ಅನಿಷ್ಟಮೂರ್ತಿ. ಒಕ್ಕಣ್ಣು. ಕೂದಲೇ ಇಲ್ಲದ ಹುಬ್ಬನ್ನು ಮುಚ್ಚಿದ ಹಣೆಯಿಂದ ಜಾರಿದ ಚರ್ಮ. ಮಧ್ಯ ತಲೆಯತನಕ ಬೋಳು. ಸುರುಟಿಹೋಗಿರುವ ಮೂಗು. ತುಟಿ ಚೂರು ಚೂರಾದಂತೆ.
ಮಂಥರೆ
ಮಂಥರೆ
ಎಷ್ಟೆಲ್ಲ ಕುರೂಪಿಗಳನ್ನು, ಭೀಕರರನ್ನು ಕಂಡಿಲ್ಲ ತಾನು? ಆದರೆ ಇವಳು ಅಸಹ್ಯ, ಕರಾಳ, ಕ್ರೂರ, ವಿಕಾರ, ಸರ್ವ ವಕ್ರಗಳ ಅನಿಷ್ಟಮೂರ್ತಿ. ಒಕ್ಕಣ್ಣು. ಕೂದಲೇ ಇಲ್ಲದ ಹುಬ್ಬನ್ನು ಮುಚ್ಚಿದ ಹಣೆಯಿಂದ ಜಾರಿದ ಚರ್ಮ. ಮಧ್ಯ ತಲೆಯತನಕ ಬೋಳು. ಸುರುಟಿಹೋಗಿರುವ ಮೂಗು. ತುಟಿ ಚೂರು ಚೂರಾದಂತೆ. ಸಾವಿರ ಸುಕ್ಕಿನ ಮುಖ. ಜೋತಾಡುತ್ತಿರುವ ಕೆಳತುಟಿ. ಹಳದಿಗಟ್ಟಿದ ವಕ್ರ ಹಲ್ಲುಗಳು. ತುಟಿಯೊಳಗೇ ಅಡಗಿ ಹೋಗಿರುವ ಗಲ್ಲ! ಎಡಭುಜ ಅಡಿಯಷ್ಟು ಎದ್ದಿದೆ. ಅಲ್ಲಲ್ಲಿ ಉಬ್ಬಿದ ಹಳ್ಳತಿಟ್ಟಿನ ತೋಳುಗಳು. ಒಂದೊಂದೂ ಒಂದೊಂದು ದಿಕ್ಕಿಗೆ ತಿರುಗಿರುವ ಬೆರಳುಗಳು. ಆಳಕ್ಕಿಳಿದಿರುವ ಎದೆ. ಊದಿರುವ ಹೊಟ್ಟೆ. ಅದೂ ಕಾಣದಂತೆ ಸದಾ ಬಗ್ಗಿರುವ ಭಂಗಿ. ಗೂನು ಬೆನ್ನು ಒಂಟೆಯ ಬೆನ್ನಂತೇ! ಬಲಗಾಲು ಎಡಗಾಲಿಗಿನ್ನ ಅರ್ಧ ಅಡಿ ಉದ್ದ ಹೆಚ್ಚು. ಹೀಗಾಗಿ ನಡೆಯುವಾಗ ಎಡಗಾಲನ್ನು ಎತ್ತೆತ್ತಿ ಇಡಬೇಕು. ಹಾಗೆ ಇಟ್ಟಾಗಲೆಲ್ಲ ಗೂನು ಅಲ್ಲಾಡಿ ಅದೊಂದು ಅಸಹ್ಯ ಹುಟ್ಟಿಸುವ ಭಂಗಿ! ಅದೆಂತು ಇಷ್ಟು ವಕ್ರವಾಗಿ ಬ್ರಹ್ಮ ಸೃಷ್ಟಿಸಿದ ಎಂದೇ ವಾಣಿ ಗಂಡನ ಮುಖ ನೋಡಿದಳು. "ವ್ಯಕ್ತಿಯ ಸೌಂದರ್ಯ ಕೂಡ, ಆರೋಗ್ಯ-ಧನ-ವಿದ್ಯೆಯಂತೆಯೇ ಪೂರ್ವ ಜನ್ಮ ಪುಣ್ಯದಿಂದ ಬರುತ್ತದೆ. ಕುರೂಪಿಯಾಗಿದ್ದರೆ ಯಾವ ಯಾವ ಜನ್ಮದಲ್ಲಿ ಯಾರ ಯಾರ ಶರೀರಕ್ಕೆ ಏನೇನು ತೊಂದರೆ ಕೊಟ್ಟಿರುತ್ತಾರೋ, ಆ ಪಾಪವೆಲ್ಲ ಮೂಟೆಗಟ್ಟಿ ಈ ಜನ್ಮದಲ್ಲಿ ಅಂಟಿಬರುತ್ತದೆ. "ಬ್ರಹ್ಮ ಉತ್ತರಿಸಿದ. "ಅಷ್ಟೇ ಅಲ್ಲ, ಕೆಲವರು ಸ್ವಭಾವತಃ ವಿನಾಕಾರಣ ಅನ್ಯರ ಕೆಡುಕಲ್ಲಿ ಸಂತೋಷಿಸುತ್ತಾರೆ. ತಮಗೆ ಲಾಭವಾಗಬೇಕೆಂದೇನೂ ಇಲ್ಲ, ಬೇರೆಯವರು ಹಾಳಾದರೆ ಇವರಿಗೆ ಮಹಾ ಸಂತೋಷ. ಯಾರಾದರೂ ಬಿದ್ದು ಹಲ್ಲು ಮುರಿದುಕೊಂಡರೆ ಚಪ್ಪಾಳೆ ತಟ್ಟಿ ನಗುವ ಹೀನ ಸಂಸ್ಕೃತಿ. ಇವರಿಗೆ ಯಾರೂ ಬೇಕಿಲ್ಲ. ಊಟಕ್ಕೋ, ವಸತಿಗೋ ಆಸರೆಗಾಗಿ ಯಾರಾದರೊಬ್ಬರು ಬೇಕು. ಅವರನ್ನೂ ಸುಖವಾಗಿರಲು ಬಿಡುವುದಿಲ್ಲ. ಅಂತಹವಳು ಇವಳು. " 
**************
ಸೂರ್ಯಹುಟ್ಟಿ ಎಷ್ಟೋ ಕಾಲವಾಗಿತ್ತು. ಈಗ ಏಳುತ್ತಿದ್ದಾಳೆ ಗೂನಿ. ಅಡುಗೆ ಮನೆಗೆ ನುಗ್ಗಿ ನಿನ್ನಿನ ಹಳಸಿದ ಆಹಾರವನ್ನೇ ನುಂಗಿದಳು. ಮುಖಕ್ಕೇನೋ ತಂಬಿಗೆ ನೀರನ್ನು ಸಿಂಪಡಿಸಿದಳು. "ಈ ಹೊತ್ತು ಸ್ನಾನ ಬೇಡ. ನಾಳೆ ಮಾಡುತ್ತೇನೆ" ಎಂದು ವಾರದಿಂದ ಮುಂದಕ್ಕೆ ಹಾಕುತ್ತಿದ್ದಾಳೆ. ಬಣ್ಣಬಣ್ಣದ ಲಂಗ ಸಿಕ್ಕಿಸಿಕೊಂಡು, ಅಂಗಿಯಂಥದ್ದೇನೋ ಹಾಕಿಕೊಂಡಳು. ಕೈಲಿ ಕೋಲು ಊರಿಕೊಂಡು ದಾಸಿಯರ ಕೋಣೆ ಬಿಟ್ಟು ಹೊರಗೆ ಬಂದಳು. ಇನ್ನೆಲ್ಲಿ ಹೋಗುವುದು? ತನ್ನ ಒಡತಿಯ ಗೃಹಕ್ಕೆ. ಅಲ್ಲಿಗೆ ಹೋಗುವ ಮುನ್ನ ಮಹಾರಾಣಿ ಕೌಸಲ್ಯೆಯ ಗೃಹ ದಾಟಬೇಕು. "ಏನಿದು? ಎಂದೂ ಇಲ್ಲದ ಸಡಗರ ಅಲ್ಲಿ?" ವರಾಂಡದಲ್ಲೆಲ್ಲ ನಗು. ಹೊಸ ಬಟ್ಟೆಯುಟ್ಟ ದಾಸ-ದಾಸಿಯರು. ಜನರು ಸರತಿಯ ಸಾಲಿನಲ್ಲಿ ನಿಂತಿದ್ದಾರೆ. ಕೌಸಲ್ಯೆಯ ಮುಂದೆ ಪಾತ್ರೆಗಳಲ್ಲಿ ಹೊಸಬಟ್ಟೆಗಳು, ಫಲಗಳು, ಚಿನ್ನದ ನಾಣ್ಯಗಳು, ತಿಂಡಿ ಪೊಟ್ಟಣಗಳು. ಪ್ರತಿಯೊಬ್ಬರಿಗೂ ದಾನ ಮಾಡುತ್ತಿದ್ದಾಳೆ. " ಇವಳಿಗೇನು ಬಂತು? ಇವಳು ಮಹಾ ಜಿಪುಣಿ. ಎಂದೂ ದಾನ ಮಾಡಿದ್ದನ್ನೇ ಕಾಣೆ. ಈಗೇನು ಉಬ್ಬುಬ್ಬಿ ಕೊಡುತ್ತಿದ್ದಾಳೆ? "ಯಾರಾದರೂ ಏನನ್ನಾದರೂ ಯಾರಿಗಾದರೂ ಕೊಟ್ಟರೂ ಸಹಿಸದ ವ್ಯಕ್ತಿತ್ವ. ಹತ್ತಿರದಲ್ಲಿದ್ದ ಮತ್ತೊಬ್ಬ ದಾಸಿಯನ್ನು ಕೇಳಿದಳು ಮಂಥರೆ; 
( ಅವಿದೂರೇ ಸ್ಥಿತಾಂ ದೃಷ್ಟ್ವಾ ಧಾತ್ರೀಂ ಪಪ್ರಚ್ಛ ಮಂಥರಾ )
"ಏನೇ! ಏನಾಗಿದೆ ಈ ರಾಮನ ಅಮ್ಮನಿಗೆ? ಹಿಡಿ ಹಿಡಿ ತುಂಬ ಹಣ ಕೊಡುತ್ತಿದ್ದಾಳಲ್ಲ ಜನರಿಗೆ! ಏಕೆ? ಈ ಜನರೂ ಏನು ಕುಣಿಯುವುದು ಬಾಕಿ; ಏನು ಅಷ್ಟು ಖುಷಿಪಡುತ್ತಿದ್ದಾರೆ? ಮಹಾರಾಜನೇನಾದರೂ ಹರ್ಷದಿಂದ ವಿಶೇಷ ಕಾರ್ಯ ಮಾಡಿಸ್ತಿದ್ದಾನೋ? ಈ ಉತ್ಸಾಹಕ್ಕೆ ಏನು ಕಾರಣ ಹೇಳು?" 
( ರಾಮಮಾತಾ ಧನಂ ಕಿಂ ನು ಜನೇಭ್ಯಃ ಸಂಪ್ರಯಚ್ಛತಿ
ಅತಿಮಾತ್ರ ಪ್ರಹರ್ಷೋಯಂ ಕಿಂ ಜನಯಸ್ಯಚ ಶಂಸ ಮೇ 
ಕಾರಯಿಷ್ಯತಿ ಕಿಂ ವಾಪಿ ಸಂಪ್ರಹೃಷ್ಟೋ ಮಹೀಪತಿಃ ? )
ಮಂಥರೆ ಹತ್ತಿರ ಬಂದರೇ ಕೆಟ್ಟ ವಾಸನೆ. ಅವಳನ್ನು ಯಾರೂ ಹತ್ತಿರ ಸೇರಿಸುತ್ತಿರಲಿಲ್ಲ. ಅವಳ ಕೊಳಕು ಬುದ್ಧಿ, ಚಾಡಿ ಹೇಳುವ ಅವಳ ಸ್ವಭಾವ, ಕಾರಣವಿಲ್ಲದೇ ಜಗಳ ತೆಗೆಯುವ ಪರಿ... ಇವ್ಯಾವುವೂ ಯಾರಿಗೂ ಇಷ್ಟವಿರಲಿಲ್ಲ. ಅಲ್ಲದೇ ತಮ್ಮೊಡತಿಯನ್ನು ಸಹಿಸದ ಕಿರಿರಾಣಿ ಕೈಕೆಯ ಎಲ್ಲ ದಾಸಿಯರಿಗೆ ನಾಯಕಿಯಂತೆ ಇವಳು. ಎಂದೂ ಕೌಸಲ್ಯೆಯ ಬಗ್ಗೆ ಒಳ್ಳೆಯದನ್ನು ಮಾತಾಡಳು. ಅಂತಹುದರಲ್ಲಿ ಇಂದು ಕೇಳುತ್ತಿದ್ದಾಳೆ. ಬೇರೇ ದಿನವಾಗಿದ್ದರೆ, ಅವಳ ಮಾತಿಗೆ ಉತ್ತರ ಕೊಡದೇ ದೂರ ಹೋಗುತ್ತಿದ್ದಳು. ಆದರೆ ಇಂದು ಅವಳಿಗೆ ಎಷ್ಟು ಸಂತಸವಾಗಿತ್ತೆಂದರೆ, ಮುಖ ಅಗಲಿಸಿಕೊಂಡು ತುಂಬ ಉತ್ಸಾಹದಿಂದ ಹೇಳಿದಳು; " ಓಹ್ ನಿನಗೆ ಗೊತ್ತೇ ಇಲ್ಲವಾ? ನಿನ್ನೆ ಬೆಳಿಗ್ಗೆಯಿಂದ ಏನೇನೆಲ್ಲ ಅಯೋಧ್ಯೆಯಲ್ಲಿ ನಡೆಯಿತೋ ಗೊತ್ತಿಲ್ಲವೋ? ಹಾಗಾದರೆ ಕೇಳು. ನಾನು ಎಲ್ಲರಿಗೂ ಹೇಳಿ ಹೇಳಿ ಖುಷಿ ಪಡುತ್ತಿದ್ದೇನೆ, ನಿನಗೂ ಹೇಳುವೆ. ನಮ್ಮ ಮಹಾರಾಣಿಗೆ ಈಗ ಶುಕ್ರಮಹರ್ದಶೆ! ನಿನ್ನೆ ಬೆಳಿಗ್ಗೆ ಮಹಾರಾಜರು ರಾಜಸಬೆ ಕರೆದಿದ್ದರು..... 
---೦೦೦---
ಮಾಂಡಲಿಕರು, ಪುರಪ್ರಮುಖರು, ಅರಮನೆಯ ಮುಖ್ಯರು, ಸ್ನೇಹಿತರು, .... ಎಲ್ಲರನ್ನೂ ಆಹ್ವಾನಿಸಿದ್ದಾನೆ ದಶರಥ. ಜನಕ ಮಹಾರಾಜನನ್ನು ಕರೆಸಿಕೊಂಡಿಲ್ಲದ್ದೂ, ಭರತ-ಶತ್ರುಘ್ನರು ಊರಿನಲ್ಲಿರದ್ದೂ ಗಮನಾರ್ಹವಾಗಿದೆ. ಕಿಕ್ಕಿರಿದ ಸಭೆಗೆ ವೇದಘೋಷ ಮಾಡುತ್ತ ವಸಿಷ್ಠ ವಾಮದೇವೇತ್ಯಾದಿ ವೃಂದ ಪ್ರವೇಶಿಸಿತು. ಅವರ ಹಿಂದೆ ತಾಳ, ಮೇಳ, ಕೊಂಬು, ಕಹಳೆಗಳ ಕಿವಿಗಡಚಿಕ್ಕುವ ಧ್ವನಿ, ಅವರ ಹಿಂದೆ ರಾಜ ಚಿನ್ಹೆಗಳಾದ ನಂದಿ, ಹಸು, ಆನೆ, ಕುದುರೆ, ಸೂರ್ಯ, ಇಕ್ಷ್ವಾಕು ವಂಶದಲ್ಲಿ ಆಗಿಹೋದ ಪ್ರಮುಖ ರಾಜರು........ ಈ  ಎಲ್ಲ ಭಿತ್ತಿ ಚಿತ್ರಗಳೂ ಬರುತ್ತಿವೆ. ಅದರ ಹಿಂದೆ ಮೃದು ಕೆಂಪು ಹಾಸಿನ ಮೇಲೆ ಪಾದ ಊರುತ್ತ ಗಂಭೀರವಾಗಿ ವೃದ್ಧ ದಶರಥನ ಆಗಮನ. ರಾಜ ಸಿಂಹಾಸನಕ್ಕೆ ಕೈ ಮುಗಿದು ಜನಸ್ತೋಮದೆಡೆಗೆ ತಿರುಗುತ್ತಿದ್ದಂತೆಯೇ ನಿಮಿಷವಾದರೂ ನಿಲ್ಲದ ಕರತಾಡನ. ಕೆಂಪು ಮಂಡಾಸಿನ ಭಟರು, ಕೋಲೆತ್ತಿ ಸದ್ದು ಸದ್ದು  ಎಂದ ಮೇಲೇ ಅದು ನಿಂತದ್ದು. ರಾಜನ ಪಕ್ಕದಲ್ಲಿ ಐದು ಅಡಿ ಅಂತರ ಬಿಟ್ಟು ಬಲಗಡೆಗೆ ಐದು ಮೆಟ್ಟಿಲು ಕೆಳಗೆ, ವಸಿಷ್ಠ ಬ್ರಹ್ಮರ್ಷಿಗಳಿಗೆ ಚೊಕ್ಕ ಚಿನ್ನದ ಆಸನ. ದಶರಥ ಅವರಿಗೆ ಕೈ ಮುಗಿದು ಆಸನ ಸ್ವೀಕರಿಸಲು ಪ್ರಾರ್ಥಿಸಿದ. ರುದ್ರಾಕ್ಷಿಮಾಲೆಯನ್ನು ಧರಿಸಿದ್ದ ಬಲಗೈ ಎತ್ತಿ ಹರಸಿ ವಸಿಷ್ಠರು ಕುಳಿತ ಮೇಲೆ ಮಹಾರಾಜ ಮತ್ತೊಮ್ಮೆ ಜನರಿಗೆ ಅಭಿವಾದಿಸಿ ಮಂಡಿಸಿದ ಮೇಲೆ, ಮಹಾಜನರೆಲ್ಲ ಕುಳಿತು ಮುಂದಿನ ಘೋಷಣೆಗಾಗಿ ಉತ್ಕಂಠಿತರಾಗಿ ಕಾಯತೊಡಗಿದರು.
ಮಹಾಮಂತ್ರಿ ಸ್ಥಾನೋಚಿತ ದಂಡ ಹಿಡಿದು, ದಶರಥನ ಪಕ್ಕಕ್ಕೆ ಬಂದು ಆತನಿಗೆ ಬಾಗಿ ನಮಿಸಿ, ತಾನು ಮಾತನಾಡಲು ಅನುಮತಿ ಕೇಳಿದ. ದಶರಥನ ತಲೆ ಚಲಿಸಿ ಒಪ್ಪಿಗೆ ಸೂಚಿಸುತ್ತಿದ್ದಂತೆಯೇ, ಜನಗಳೆಡೆ ತಿರುಗಿ ತನ್ನ ಮಾತು ಆರಂಭಿಸಿದ ಸುಮಂತ್ರ...
pavagadaprakashrao@gmail.com   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com