ಬ್ರೆಕ್ಸಿಟ್ ಒಂದು, ಆಯಾಮ ಹಲವು!

ದಕ್ಷಿಣ ಸ್ಪೇನ್ ನಲ್ಲಿ ಕಾಡೀಸ್ ಎನ್ನುವ ನಗರವಿದೆ ಇದರ ಬಳಿಯಲ್ಲೇ ಇರುವ ಸ್ಯಾನ್ ರೋಕೆ ಎನ್ನುವ ಹಳ್ಳಿಯಿಂದ ಹನ್ನೊಂದು ಕಿಲೋಮೀಟರ್ ಮತ್ತಷ್ಟು ದಕ್ಷಿಣಕ್ಕೆ ಪ್ರಯಾಣಿಸಿದರೆ ಸಿಗುವುದೇ ಜಿಬ್ರಾಲ್ಟರ್ ಎನ್ನುವ...
ಬ್ರೆಕ್ಸಿಟ್ ಒಂದು ಆಯಾಮ ಹಲವು!
ಬ್ರೆಕ್ಸಿಟ್ ಒಂದು ಆಯಾಮ ಹಲವು!
ದಕ್ಷಿಣ ಸ್ಪೇನ್ ನಲ್ಲಿ ಕಾಡೀಸ್ ಎನ್ನುವ ನಗರವಿದೆ ಇದರ ಬಳಿಯಲ್ಲೇ ಇರುವ ಸ್ಯಾನ್ ರೋಕೆ ಎನ್ನುವ ಹಳ್ಳಿಯಿಂದ ಹನ್ನೊಂದು ಕಿಲೋಮೀಟರ್ ಮತ್ತಷ್ಟು ದಕ್ಷಿಣಕ್ಕೆ ಪ್ರಯಾಣಿಸಿದರೆ ಸಿಗುವುದೇ ಜಿಬ್ರಾಲ್ಟರ್ ಎನ್ನುವ ನಗರ. ಹಿಬ್ರಾಲ್ಟಾರ್ ಎನ್ನುವುದು ಸ್ಪ್ಯಾನಿಷ್ ಉಚ್ಚಾರ. ಜಿಬ್ರಾಲ್ಟರ್ 6.5 ಸ್ಕ್ವೇರ್ ಕಿಲೋಮೀಟರ್ ವಿಸ್ತೀರ್ಣತೆ ಹೊಂದಿರುವ ಒಂದು ಪುಟ್ಟ ನಗರ. ಹತ್ತಿರತ್ತಿರ ಮೂವತ್ತು ಸಾವಿರ ಇಲ್ಲಿನ ಜನಸಂಖ್ಯೆ. ಭೂಪಟದಲ್ಲಿ ನೋಡಿದರೆ ಇದು ಸ್ಪೇನ್ ದೇಶಕ್ಕೆ ಸೇರಿದಂತೆ ಕಾಣುತ್ತದೆ. ಏಕೆಂದರೆ ಇದರ ಭೂಭಾಗ ಬೇರ್ಪಡಿಸಲಾಗದಂತೆ ಹೊಂದಿಕೊಂಡಿದೆ. ಸ್ಪೇನ್ ನ ದಕ್ಷಿಣ ರಾಜ್ಯ ಅಂದಲುಸಿಯಾದಿಂದ ಇಲ್ಲಿಗೆ ರಸ್ತೆಯ ಮೂಲಕ ಹೋದರೆ ನಮ್ಮಲ್ಲಿ ಮಾಲ್ ಗೆ ಸಿನಿಮಾ ನೋಡಲು ಹೋದಾಗ ನಿಲ್ಲಿಸಿ ಕಾರು ತಪಾಸಣೆ ಮಾಡುವಷ್ಟೇ ಸಮಯದಲ್ಲಿ ಅಷ್ಟೇ ಸುಲಭವಾಗಿ ಸರಹದ್ದು ದಾಟಬಹದು. ಸರಹದ್ದು? ಹೌದು ಇದು ಕಾನೂನಿನ ಪ್ರಕಾರ ಬ್ರಿಟನ್ ದೇಶಕ್ಕೆ ಸೇರಿದ್ದು. ಆಂಗ್ಲೋ-ಡಚ್ ಸೇನೆ 1704 ರಲ್ಲಿ ಸ್ಪೇನ್ ನಿಂದ ಈ ಭೂಪ್ರದೇಶವನ್ನ ವಶ ಪಡಿಸಿಕೊಳ್ಳುತ್ತದೆ. ನಂತರದ ದಿನಗಳಲ್ಲಿ ಇದು ಗ್ರೇಟ್ ಬ್ರಿಟನ್ ಗೆ ವರ್ಗಾವಣೆ ಆಗುತ್ತದೆ. ಅಂದಿನಿಂದ ಇಂದಿನವರೆಗೆ ಸ್ಪೇನ್ ಈ ಭೂಪ್ರದೇಶಕ್ಕೆ ಬ್ರಿಟನ್ ನೊಂದಿಗೆ ಹೋರಾಡುತ್ತಲೇ ಬಂದಿದೆ. ಇದಿಷ್ಟು ಇತಿಹಾಸ. ವರ್ತಮಾನದಲ್ಲಿ ಜಿಬ್ರಾಲ್ಟರ್ ಗೆ ಇನ್ನಿಲ್ಲದ ಬೇಡಿಕೆ ಹೆಚ್ಚಾಗಿದೆ. ಏಕೆ? ಎನ್ನುವುದು ಊಹಿಸುವುದು ಬುದ್ದಿವಂತ ಓದುಗರಿಗೆ ಕಷ್ಟವಾಗದು. ಇದು ಹೇಳಿಕೇಳಿ ಹಣಕಾಸಿಗೆ ಸಂಬಂಧಪಟ್ಟ ಬರಹಗಳಿಗೆ ಮೀಸಲಿರುವ ಜಾಗ ಅಂದಮೇಲೆ ಖಂಡಿತ  ಜಿಬ್ರಾಲ್ಟರ್ ನಲ್ಲಿ ಕಾಂಚಾಣದ ಸದ್ದಿಗೆ ಆರ್ಥಿಕತ ಸಂಕಷ್ಟದಿಂದ ಬಳಲುತ್ತಿರುವ ಬ್ರಿಟನ್ ಮತ್ತು ಸ್ಪೇನ್ ಎದ್ದು ಕೂತಿವೆ. 
ಸ್ಪೇನ್ - ಬ್ರಿಟನ್ ಜಟಾಪಟಿ. 
ಬ್ರೆಕ್ಸಿಟ್ ನಿಂದ ಸ್ಪೇನ್ ಜಿಬ್ರಾಲ್ಟರ್ ತನಗೆ ಸೇರಿದ್ದು ಎನ್ನುವ ವಾದಕ್ಕೆ ಯುರೋ ಒಕ್ಕೊಟದ ಇತರ ದೇಶಗಳು ಸ್ಪೇನ್ ನನ್ನ ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ. ಜಿಬ್ರಾಲ್ಟರ್ ನಲ್ಲಿ ಬ್ರಿಟನ್ ತನ್ನ ಹಣಕಾಸು ಸಂಸ್ಥೆಗಳ ಕಚೇರಿ ತೆಗೆಯಲು ಅವಕಾಶ ಮಾಡಿಕೊಡಲು ಉತ್ಸುಕವಾಗಿದೆ. ಭೌಗೋಳಿಕವಾಗಿ ಯುರೋ ಒಕ್ಕೊಟದಲ್ಲಿ ಇದ್ದಾಗ ಆಗುತ್ತಿದ್ದ ಎಲ್ಲಾ ಅನುಕೂಲತೆಯನ್ನ ಇದರಿಂದ ಪಡೆಯುವುದು ಮತ್ತು ಅನಾನುಕೂಲದಿಂದ ದೂರಾಗುವುದು ಎರಡೂ ಇದರಿಂದ ಸಾಧ್ಯ. ಬ್ರೆಕ್ಸಿಟ್ ಗೆ ಜನಮತ ಸಿಗುತ್ತಿದಂತೆ ಜಿಬ್ರಾಲ್ಟರ್ ನಲ್ಲಿ ಕಚೇರಿ ಸ್ಥಳಕ್ಕೆ ಬೇಡಿಕೆ ಹೆಚ್ಚಿದೆ ಬಾಡಿಗೆ ಕೂಡ ಏರಿದೆ. ಜಿಬ್ರಾಲ್ಟಾರ್ನಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲವೇ ಇಲ್ಲ ಅನ್ನುವಷ್ಟು ಅಂದರೆ ಕೇವಲ 1 ಪ್ರತಿಶತ. ಕೆಲವೇ ಕಿಲೋಮೀಟರ್ ಪ್ರಯಾಣಿಸಿದರೆ ಸ್ಪೇನ್ ದೇಶದ ದಕ್ಷಿಣ ರಾಜ್ಯ ಅಂದಲುಸಿಯಾ ಸಿಗುತ್ತೆ. ಇಲ್ಲಿ ಬರೋಬ್ಬರಿ 35 ಪ್ರತಿಶತ ನಿರುದ್ಯೋಗ . 
ಇಷ್ಟು ಪುಟ್ಟ ಜಾಗಕ್ಕೆ ಸ್ಪೇನ್ ಹೊಡೆದಾಡುವ ಅವಶ್ಯಕತೆ ಏನು? 
ವಿಸ್ತೀರ್ಣದಲ್ಲಿ ಇದು ಪುಟ್ಟ ನಗರ. ಆದರೆ ಇಲ್ಲಿ ವಿಶ್ವ ಮಾನ್ಯ ಕಂಪನಿಗಳ ಕೇಂದ್ರ ಕಚೇರಿಗಳಿವೆ. ಜಗತ್ತಿನ ಪ್ರಸಿದ್ಧ ಕಂಪನಿಗಳ ಕನಿಷ್ಠ ಒಂದು ಸಣ್ಣ ಕಚೇರಿಯಾದರು ಇಲ್ಲಿದೆ. ಜಿಬ್ರಾಲ್ಟಾರ್ ಹಣಕಾಸು, ಇನ್ಶೂರೆನ್ಸ್ ಮತ್ತು ಆನ್ಲೈನ್ ಗೇಮಿಂಗ್ ಕಂಪನಿಗಳ ಕೇಂದ್ರ ಸ್ಥಾನ. ನೆನಪಿರಲಿ ಜಿಬ್ರಾಲ್ಟಾರ್ ಟ್ಯಾಕ್ಸ್ ಹೆವನ್ ಪ್ರದೇಶ. ರಾಜಕೀಯವಾಗಿ ಮತ್ತು ಆರ್ಥಿಕ ಸ್ಥಿರತೆಯುಳ್ಳ ದೇಶ, ತನ್ನ ದೇಶದ ಪ್ರಜೆಯಲ್ಲದವನಿಗೆ ಯಾವುದೇ ಪ್ರಶ್ನೆ ಕೇಳದೆ ಆತನ ಹಣವನ್ನ ತನ್ನ ದೇಶದಲ್ಲಿ ಇಡಲು ಅನುಮತಿ ನೀಡುತ್ತದೆ. ಆತನನ್ನು ತನ್ನ ದೇಶದಲ್ಲಿ ವಾಸಿಸಬೇಕು ಆಥವಾ ವ್ಯಾಪಾರ ಮಾಡಬೇಕು ಎಂದು ಕೂಡ ಒತ್ತಾಯಿಸುವುದಿಲ್ಲ. ಅಲ್ಲದೆ ಆತನ ಬಗ್ಗೆಯ ಮಾಹಿತಿಯನ್ನ ಗೌಪ್ಯವಾಗಿ ಇಡುವುದಾಗಿ ಭರವಸೆ ಕೂಡ ನೀಡುತ್ತದೆ. ಇವೆಲ್ಲಕ್ಕೆ ಬದಲಾಗಿ ಒಂದಷ್ಟು ಹಣವನ್ನ ಸೇವಾ ಶುಲ್ಕದ ಮೂಲಕ ಪಡೆಯುತ್ತದೆ. ಹೀಗೆ ಈ ರೀತಿಯ ಸೇವೆಯನ್ನ ನೀಡುವ ದೇಶಗಳನ್ನ ಟ್ಯಾಕ್ಸ್ ಹೆವನ್ ದೇಶಗಳು ಏನು ಕರೆಯುತ್ತಾರೆ.  ಗಮನಿಸಿ ಕೇವಲ ಹಲವು ಕಿಲೋಮೀಟರ್ ದೂರದ ನಗರ ಸ್ಪೇನ್ ಗೆ ಸೇರಿದ್ದು ಇಲ್ಲಿ ಸ್ಟ್ಯಾಂಡರ್ಡ್ ಕಾರ್ಪೊರೇಟ್ ಟ್ಯಾಕ್ಸ್ 25 ಪ್ರತಿಶತ. ಜಿಬ್ರಾಲ್ಟಾರ್ ನಲ್ಲಿ ಕೇವಲ 10 ಪ್ರತಿಶತ. ತನ್ನ ಲಾಭದ ಮೇಲೆ 15 ಪ್ರತಿಶತ ಹಣ ಉಳಿಯುವುದಾದರೆ ಯಾವ ಕಂಪನಿ ಅಲ್ಲಿ ಕಚೇರಿ ತೆಗೆಯುವುದಿಲ್ಲ? ಇಷ್ಟೇ ಅಲ್ಲ ಪನಾಮ ಲೀಕ್ಸ್ ನಂತರ ಪನಾಮ ಎನ್ನುವ ಇನ್ನೊಂದು ಟ್ಯಾಕ್ಸ್ ಹೆವನ್ ಪ್ರದೇಶ ತನ್ನ ಹಳೆಯ ವರ್ಚಸ್ಸು ಕಳೆದು ಕೊಂಡಿದೆ. ಹಿಂದೆ ಜಗತ್ತಿನ ಎಲ್ಲಾ ಶ್ರೀಮಂತರು, ಕಾರ್ಪೊರೇಟ್ ಕಂಪನಿಗಳು ಪನಾಮದಲ್ಲಿ ತಮ್ಮ ಹೆಚ್ಚಿನ ಹಣವನ್ನ ಹೂಡಿಕೆ ಮಾಡಿ ಕಪ್ಪನ್ನ ಬಿಳಿ ಮಾಡಿಕೊಂಡಿದ್ದು ಪನಾಮ ಲೀಕ್ಸ್ನಿಂದ ಎಲ್ಲರಿಗೂ ತಿಳಿಯುವಂತೆ ಆಯಿತು. ಇದೀಗ ಈ ಶ್ರೀಮಂತರ ಮತ್ತು ಕಾರ್ಪೊರೇಟ್ ಕಂಪನಿಗಳ ಕಣ್ಣು ಜಿಬ್ರಾಲ್ಟಾರ್ ಮೇಲೆ ಬಿದ್ದಿದೆ. ಜಗತ್ತಿನ ಅತಿ ಹೆಚ್ಚು ತಲಾದಾಯ ಹೊಂದಿರುವ ಹಲವು ದೇಶಗಳ ನಡುವೆ ಪುಟ್ಟ ಜಿಬ್ರಾಲ್ಟಾರ್ ಸ್ಥಾನ ಪಡೆದಿದೆ ಅಂದರೆ ಇದರ ಮಹತ್ವದ ಅರಿವು ನಿಮಗಾದೀತು. 
ಆನ್ಲೈನ್ ಜೂಜಾಟ ಮತ್ತಿತರ ಆಟಗಳ ಕೇಂದ್ರ ಸ್ಥಾನ ಜಿಬ್ರಾಲ್ಟಾರ್
ಜಿಬ್ರಾಲ್ಟಾರ್ ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ ಸ್ವರ್ಗ. ಜಗತ್ತಿನ 100 ಆನ್ಲೈನ್ ಗೇಮಿಂಗ್ ವ್ಯಾಪಾರ ಸಂಸ್ಥೆಗಳಿದ್ದರೆ 6೦ ಜಿಬ್ರಾಲ್ಟಾರ್ ನಲ್ಲಿವೆ. ಜಿಬ್ರಾಲ್ಟಾರ್ ನ 12 ರಿಂದ 14 ಪ್ರತಿಶತ ಜನಸಂಖ್ಯೆ ಗೇಮಿಂಗ್ ಕಂಪನಿಗಳಿಗೆ ಕೆಲಸ ಮಾಡುತ್ತದೆ. ಜೂಜಾಟ ಈ ಗೇಮಿಂಗ್ ವ್ಯಾಪಾರದಲ್ಲಿ ಅತಿ ಮುಖ್ಯ ಪಾಲು ಕಸಿಯುತ್ತದೆ. ಜಿಬ್ರಾಲ್ಟಾರ್ ಫೈನಾನ್ಸಿಯಲ್ ಸರ್ವಿಸಸ್ ಕಮಿಷನ್ ಪ್ರಕಾರ ಆನ್ಲೈನ್ ಗೇಮಿಂಗ್ ಸೇರಿದಂತೆ ಒಟ್ಟು ಜಗತ್ತಿನ ಪ್ರಸಿದ್ಧ 400 ಕ್ಕೂ ಹೆಚ್ಚು ಕಾರ್ಪೊರೇಟ್ ಸಂಸ್ಥೆಗಳನ್ನ ಅದು ನಿರ್ವಹಿಸುತ್ತಿದೆಯಂತೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಹೆಚ್ಚು ಸಾಧ್ಯತೆ ಇದೆ ಎಂದು ಹೇಳಿಕೆ ಕೂಡ ಕೊಟ್ಟಿದೆ. 
ಬ್ರೆಕ್ಸಿಟ್: ಜಿಬ್ರಾಲ್ಟಾರ್ ಭವಿಷ್ಯದ ಕತೆಯೇನು? 
ಗಮನಿಸಿ, ಜಿಬ್ರಾಲ್ಟಾರ್ ಬ್ರಿಟನ್ ಅಧಿಪತ್ಯಕ್ಕೆ ಸೇರಿದ್ದರೂ, ತನ್ನದೇ ಸಂವಿಧಾನ ಹೊಂದಿದ ಸಣ್ಣ ದೇಶದಂತ ಕಾರ್ಯ ನಿರ್ವಹಿಸುತ್ತಿದೆ. ಕಾನೂನು, ಹಣಕಾಸು ಎಲ್ಲ ಬೇರೆ ಬೇರೆ. ಬ್ರಿಟನ್ ನ ಟ್ಯಾಕ್ಸ್ ಸಿಸ್ಟಮ್ ಗೂ ಜಿಬ್ರಾಲ್ಟಾರ್ ಗೂ ಅಜಗಜಾಂತರ ವ್ಯತ್ಯಾಸ. ಮಿಲಿಟರಿ ಸಹಾಯ ಮಾತ್ರ ಬ್ರಿಟನ್ ದೇಶದ್ದು ಉಳಿದಂತೆ ಇದೊಂದು ಪ್ರತ್ಯೇಕ ದೇಶವಿದ್ದಂತೆ. ಬ್ರೆಕ್ಸಿಟ್ ನಂತರ ಸ್ಪೇನ್ ಜಿಬ್ರಾಲ್ಟಾರ್ ನನಗೆ ಸೇರಿದ್ದು ಎಂದು ಒತ್ತಾಯಿಸಿದರೆ ಉಳಿದ ಯುರೋ ದೇಶಗಳು ಸ್ಪೇನ್ ನನ್ನ ಅನುಮೋದಿಸುತ್ತವೆ. ಹೀಗಾದರೂ ಕೊನೆಗೆ ಅಲ್ಲಿನ ಜನಾಭಿಪ್ರಾಯ ಕೇಳುತ್ತಾರೆ.25 ಸಾವಿರ ಜನ ನಾವು ಜಿಬ್ರಾಲ್ಟಾರ್ ನವರು ಎನ್ನುತ್ತಾರೆ. ಹೀಗಾಗಿ ಅವರಿಗೂ ಸೇರದೆ, ಇವರಿಗೂ ಸೇರದೆ ಸ್ವಂತಂತ್ರರಾಗಿ ಉಳಿದು ಮಿಲಿಟರಿ ಸಹಾಯಕ್ಕೆ ಇಬ್ಬರಲ್ಲಿ ಒಬ್ಬರನ್ನ ಅವಲಂಬಿಸುವ ಸಾಧ್ಯತೆ ಹೆಚ್ಚು. 
ಕೇವಲ 6.5 ಸ್ಕ್ವೇರ್ ಕಿಲೋಮೀಟರ್ ವಿಸ್ತೀರ್ಣದ  ಒಂದು ನಗರ (ದೇಶ) ವಾರ್ಷಿಕ 50 ಬಿಲಿಯನ್ ಅಮೇರಿಕನ್ ಡಾಲರ್ ವ್ಯಾಪಾರದ 60 ಭಾಗ ಕೇವಲ 1800 ಜನ ಕೆಲಸಗಾರರನ್ನಾಗಿ ಇಟ್ಟು ನೆಡೆಸುತ್ತಿದೆ ಎನ್ನುವುದು ಕೌತುಕವೇ ಸರಿ. ಬರಡು ಭೂಮಿಗೆ ಕಿತ್ತಾಡುವಾಗ ಪಲವತ್ತಾದ ಜಿಬ್ರಾಲ್ಟಾರ್ ಪಡೆಯಲು ಗುದ್ದಾಟವಾಗದೆ ಇದ್ದಿತೇ? ಇವತ್ತು ಜಗತ್ತು ಪೂರ್ತಿ ಹಣದ ಹಿಂದೆ ಓಡುತ್ತಿದೆ. ಸಣ್ಣ ಪುಟ್ಟ ದೇಶಗಳನ್ನ ಚೀನಾ ದೇಶ ತನ್ನ ಸಾಲದ ಸುಳಿಯಲ್ಲಿ ಸಿಲುಕಿಸಿ ಕಬಳಿಸುತ್ತಿದೆ. ಯೂರೋಪಿನಲ್ಲಿ ಸಣ್ಣ ಸಣ್ಣ ದೇಶಗಳು ಹೆಚ್ಚು ಹೀಗಾಗಿ ಒಂದಲ್ಲ ಒಂದು ರೀತಿಯಲ್ಲಿ ಇವುಗಳ ಮೇಲೆ ನಿಯಂತ್ರಣ ಹೊಂದಲು ದೊಡ್ಡ ದೇಶಗಳು ಕಸರತ್ತು ನೆಡೆಸದೆ ಬಿಟ್ಟಾವೆಯೇ? ಅದೂ ತನ್ನ ಹಣಕಾಸು ಪರಿಸ್ಥಿತಿ ಹೇಳಿಕೊಳ್ಳುವಷ್ಟು ಸರಿ ಇಲ್ಲದಿದ್ದಾಗ? ಗೋಲದ ಮೇಲಿನ ಅಗಣಿತ ಸಮಸ್ಯೆಗಳಿಗೆ ಉತ್ತರವಿದೆ ಆಸೆಬುರುಕ ಮನುಷ್ಯ ಪ್ರಾಣಿಗೆ ಸಮಸ್ಯೆಗೆ ಸಮಾಧಾನ ಬೇಕಿಲ್ಲ ಎನ್ನುವುದು ಘೋರ ಸತ್ಯ. 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com