ಏಕಮ್ಮ ಅಪ್ಪನಿಗೆ ಭರತನ ಮೇಲೆ ಅಸಮಾಧಾನ? ಏಕೆ ಸಂದೇಹ? ಎಷ್ಟು ಒಳ್ಳೆಯವನು ಭರತ !

ನಿನ್ನ ತಮ್ಮ ಭರತ ಒಳ್ಳೆಯವನೇ. ಸನ್ಮಾರ್ಗದಲ್ಲಿದ್ದಾನೆ. ಸುಸ್ನೇಹಿತರೊಡನೂ ಇದ್ದಾನೆ. ಹಿರಿಯರ ವಿಷಯದಲ್ಲಿ ತುಂಬ ವಿಧೇಯ ಆದರೂ ಜನರ ಮನಸ್ಸು ಒಂದೇ ಸಮ ಇರುವುದಿಲ್ಲ....
ದಶರಥ-ರಾಮ
ದಶರಥ-ರಾಮ
ದಶರಥನಿಗೆ ಎಣೆ ಇಲ್ಲದ ಆನಂದವಾಯಿತು. ತನ್ನ ಮಗ ಜನರ ಹೃದಯದಲ್ಲಿ ಈ ಪ್ರಮಾಣದಲ್ಲಿ ಸ್ಥಾಪಿತನಾಗಿರುವುದು, ಜನರೆಲ್ಲ ಅವನನ್ನು ಕೊಂಡಾಡುತ್ತಿರುವುದೂ ಅತೀವ ಸಂತೋಷವನ್ನು ಉಂಟು ಮಾಡಿತು. " ಮಹಾ ಜನಗಳೇ ನನಗೆ ತುಂಬ ಸಂತಸವಾಗಿದೆ.  ನಿಮ್ಮ ಮಾತುಗಳನ್ನು ಕೇಳಿ ಪರಮ ಪ್ರೀತನಾಗಿದ್ದೇನೆ. ನನ್ನ ಸೌಭಾಗ್ಯಕ್ಕೆ ಸೀಮೆಯೇ ಇಲ್ಲವಾಗಿದೆ. ನೀವೆಲ್ಲ ನನ್ನ ಜ್ಯೇಷ್ಠ ಪುತ್ರ ಶ್ರೀರಾಮನನ್ನು ಯುವರಾಜನಾಗಲೆಂದು ಇಚ್ಛಿಸುತ್ತಿದ್ದೀರಿ. ನಿಮ್ಮ ಈ ಬಯಕೆ ತುಂಬ ಹರ್ಷದಾಯಕವಾಗಿದೆ. "
(ಅಹೋ ಅಸ್ಮಿ ಪರಮಪ್ರೀತಃ ಪ್ರಭಾವಶ್ಚಾತುಲೋ ಮಮ
ಯನ್ಮೇ ಜ್ಯೇಷ್ಠಂ ಪ್ರಿಯಂ ಪುತ್ರಂ ಯೌವರಾಜ್ಯಸ್ಥಂ ಇಚ್ಛತಾ)
************
" ಅಮ್ಮ, ನಾನು ಶ್ರೀರಾಮ ನಿನಗೆ ನಮಸ್ಕರಿಸುತ್ತಿದ್ದೇನೆ. "ಪೂಜೆ ಮಾಡುತ್ತಿದ್ದ ಕೌಸಲ್ಯೆಯ ಕಾಲಿಗೆ ನಮಸ್ಕರಿಸಿ ಪಕ್ಕದಲ್ಲಿ ಕುಳಿತ ಶ್ರೀರಾಮರು ಹೇಳಿದರು; " ಅಮ್ಮ, ಇದ್ದಕ್ಕಿದ್ದಂತೆಯೇ ಮಹಾಮಂತ್ರಿಗಳು ನನ್ನನ್ನು ರಾಜಸಭೆಗೆ ಕರೆದೊಯ್ದರು. ಅಲ್ಲಿ ಅಪ್ಪ ಅನಿರೀಕ್ಷಿತವಾಗಿ ದೊಡ್ಡ ಭಾಷಣವನ್ನೇ ಮಾಡಿಬಿಟ್ಟರು. "ದಶರಥನ ಮಾತುಗಳನ್ನು ನೆನಪಿಸಿಕೊಂಡು, ದಶರಥ ಹೇಳಿದಂತೇ ಅದೇ ಶೈಲಿಯಲ್ಲಿ ರಾಮರು ಹೇಳುತ್ತ ಹೋದರು. "ರಾಮ, ನನಗೆ ವಯಸ್ಸಾಯಿತು. ವೃದ್ಧನಾದೆ. ಬಹು ದೀರ್ಘ ಕಾಲ ರಾಜ್ಯ ಆಳಿದೆ. ಎಲ್ಲ ಸುಖಗಳನ್ನೂ ಅನುಭವಿಸಿದೆ. ನೂರು ಯಾಗಗಳನ್ನೂ ಮಾಡಿದೆ. ಸಂತರ್ಪಣೆಗಳ ಮೇಲೆ ಸಂತರ್ಪಣೆಗಳಿಂದ ಬ್ರಾಹ್ಮಣರನ್ನು ತೃಪ್ತಿ ಪಡಿಸಿದೆ. ಸಾಕಷ್ಟು ದಕ್ಷಿಣೆಗಳನ್ನೂ ಕೊಟ್ಟಿದ್ದೇನೆ. ಬೇರೆಯವರಿಗೆ ಲಭ್ಯವಾಗದ ಶ್ರೇಷ್ಠ ಮಗನಾಗಿ ನೀನು ನನಗೆ ಹುಟ್ಟಿದ್ದೀಯ. ದಾನ, ಯಙ್ಞ, ವೇದಪ್ರಚಾರ, ಎಲ್ಲವನ್ನೂ ಮಾಡಿದ್ದೇನೆ. ನಮಗೆ ಕಾಲಕಾಲಕ್ಕೆ ಮಳೆಬೆಳೆಗಳನ್ನು ನೀಡುತ್ತಿರುವ, ಅನಾವೃಷ್ಟಿ-ಅತೀವೃಷ್ಟಿಗಳಿಲ್ಲದೇ, ಕ್ಷಾಮ-ಡಾಮರಗಳಿಲ್ಲದೇ ರಕ್ಷಿಸುತ್ತಿರುವ ದೇವಋಣ ತೀರಿಸಬೇಕಾದ್ದು ಮೊದಲ ಕರ್ತವ್ಯ. ಅದನ್ನು ಈಗಾಗಲೇ ಹೇಳಿದ ಯಾಗಗಳನ್ನು ಮಾಡಿ ತೀರಿಸಿದ್ದೇನೆ. ಇಡೀ ಪ್ರಪಂಚದ ಆದಿ ಸಾಹಿತ್ಯ, ಮೌಖಿಕ ಸಾಹಿತ್ಯ ವೈದಿಕ ಸಾಹಿತ್ಯ. ದ್ರಷ್ಟಾರರಾಗಿ ನಾಲ್ಕು ವೇದಗಳನ್ನು ಕೊಟ್ಟವರು ಋಷಿಗಳು. ಙ್ಞಾನ ದಾನ ಮಾಡಿರುವ ಅವರ ಋಣವನ್ನು,  ಅವರಿತ್ತ ವೇದಗಳನ್ನು ಆಧರಿಸಿರುವ ನಾವು ಅವಶ್ಯ  ತೀರಿಸಬೇಕಾದ್ದು ಎರಡನೇ ಕರ್ತವ್ಯ. ಪ್ರತಿಯೊಂದು ವೇದಕ್ಕೂ ನೂರು ನೂರು ಮಂದಿ ಶಿಕ್ಷಕರನ್ನಿಟ್ಟು ವಿದ್ಯಾರ್ಥಿಗಳಿಗೆ ಹದಿನಾಲ್ಕು ವರ್ಷಗಳ ಕಾಲ ಅನ್ನಾಹಾರ ವಸತಿ ಸೌಕರ್ಯಗಳನ್ನು ಕೊಟ್ಟು ಋಷಿ ಋಣವನ್ನು ತೀರಿಸಿದ್ದೇನೆ. "ಪ್ರಜಾ ತಂತುಂ ಮಾ ವ್ಯವಚ್ಛೇತ್ಸೀಃ " ಎಂಬುದು ಘಟಿಕೋತ್ಸವದಲ್ಲಿ ಕೊಡುವ ಪ್ರಮಾಣ ವಚನ. ಅದರಂತೆ ನಾವು ವಿದ್ಯಾಭಾಸ ಮುಗಿದಮೇಲೆ ಅವಶ್ಯ ವಿವಾಹಿತರಾಗಬೇಕು. ಹಾಗೂ ಸಂತಾನದಿಂದ ಇಲ್ಲಿವರೆಗೆ ಬಂದಿರುವ ವಂಶವನ್ನು ಮುಂದುವರಿಸಬೇಕು. ಹಾಗೆ ಮಾಡಿದಾಗಲೇ ಪಿತೃದೇವತೆಗಳು ತೃಪ್ತರಾಗುತ್ತಾರೆ. ನಿನ್ನನ್ನೂ ಸೇರಿ ನಾಲ್ಕು ಮಕ್ಕಳನ್ನು ಪಡೆದು ಪಿತೃ ಋಣವನ್ನೂ ತೀರಿಸಿದ್ದೇನೆ. ಗೃಹ ಕೃತ್ಯದಲ್ಲಿ ಅನೇಕಾನೇಕ ವ್ರತಗಳು, ಪೂಜೆಗಳು, ಯಙ್ಞಗಳನ್ನು ಮಾಡಬೇಕಾಗುತ್ತದೆ. ಶಾಸ್ತ್ರಗಳಲ್ಲಿ ಒಂದು ಕಲ್ಪಶಾಸ್ತ್ರ. ಅದರಲ್ಲಿ ನಾಲ್ಕು ಭಾಗ. ಅವುಗಳಲ್ಲಿ ಒಂದು ಗೃಹ್ಯಸೂತ್ರಗಳು. ಇದರಲ್ಲಿ ಗೃಹಸ್ಥನ ಧರ್ಮಗಳನ್ನು ರೂಪಿಸಿದ್ದಾರೆ.  ಸುಮಾರು ನಲವತ್ತಕ್ಕೂ ಹೆಚ್ಚು ಧಾರ್ಮಿಕ ಕರ್ಮಗಳಿವೆ.  ಪ್ರಧಾನವಾದದ್ದು ಹದಿನಾರು. ಅವುಗಳನ್ನೇ ಷೋಡಷ ಕರ್ಮಗಳೆನ್ನುತ್ತಾರೆ. ಅವರನ್ನು ಮಾಡಿಸುವವರೇ ಪುರೋಹಿತರು. ಅವರಿಗೆಲ್ಲ ನಿವಾಸ, ಧನ, ಪಶು, ಉಡಿಗೆ, ತೊಡಿಗೆ ಎಲ್ಲವನ್ನೂ ಇತ್ತು ನಾಲ್ಕನೆಯ ಬ್ರಾಹ್ಮಣ ಋಣದಿಂದ ಬಿಡುಗಡೆಗೊಂಡಿಗೊಂಡಿದ್ದೇನೆ. ಕೊನೆಯದು ಆತ್ಮ ಋಣ. ನಮ್ಮ ದೇಹಗಳೊಳಗೆ , ನಮಗೆ ಕಾಣದೇ ನಮ್ಮೆಲ್ಲ ಆಗು ಹೋಗುಗಳಿಗೆ ಕಾರಣವಾಗಿರುವುದೇ ಆತ್ಮ. ಆತ್ಮಕ್ಕೆ ಮನೆಯಾಗಿರುವ ಈ ದೇಹಕ್ಕೆ ಹಲವಾರು ಸುಖಗಳನ್ನು ಕೊಟ್ಟರೇ ಆತ್ಮಕ್ಕೆ ಸಂತೋಷ. ಪಂಚೇಂದ್ರಿಯಗಳಿಗೆ ಸಂತಸವನ್ನು ಉಂಟುಮಾಡಬೇಕಾದ್ದು ನಮ್ಮ ಕರ್ತವ್ಯ. ಸನ್ಯಾಸ ಸ್ವೀಕರಿಸುವ ತನಕ ನಮ್ಮ ದೇಹಗಳನ್ನು ರೋಗ ರುಜಿನಗಳಿಗೆ ಕೊಡದೇ , ದುರ್ಬಲವಾಗದಂತೆ ಪೋಷಿಸಿ , ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ್ದು ಅವಶ್ಯ ಕರ್ತವ್ಯ. ಅದನ್ನು ಕ್ರಮವರಿತು ಇಲ್ಲಿವರೆಗೆ ರಕ್ಷಿಸಿದ್ದು ನನ್ನ ಆತ್ಮ ಋಣವನ್ನೂ ತೀರಿಸಿದ್ದೇನೆ. ನನ್ನ ಕರ್ತವ್ಯಗಳನ್ನೆಲ್ಲ ಯಾವ ಲೋಪವೂ ಇಲ್ಲದೇ ಪೂರೈಸಿದ್ದೇನೆ,  ಒಂದನ್ನು ಬಿಟ್ಟು ! ಅದೆಂದರೆ ಔರಸಪುತ್ರನಾದ ನಿನಗೆ ಪಟ್ಟ ಕಟ್ಟುವುದು. "
(ರಾಮೋ ವೃದ್ಧೋಸ್ಮಿ ದೀರ್ಘಾಯುಃ ಭುಕ್ತಾ ಭೋಗಾ ಮಯೇಪ್ಸಿತಾ
ಅನ್ನವದ್ಬಿಃ ಕ್ರತುಶತೈಸ್ತಥೇಷ್ಟಂ ಭೂರಿ ದಕ್ಷಿಣೈಃ
ಜಾತಮಿಷ್ಟಮಪತ್ಯಂ ಮೇ ತ್ವಮದ್ಯಾನುಪಮಂ ಭುವಿ 
ದತ್ತಮಿಷ್ಟಮಧೀತಂಚ ಮಯಾ ಪುರುಷ ಸತ್ತಮ
ಅನುಭೂತಾನಿ ಚೇಷ್ಟಾನಿ ಮಯಾ ವೀರ ಸುಖಾನ್ಯಪಿ
ದೇವರ್ಷಿ ಪಿತೃವಿಪ್ರಾಣಾಂ ಅನೃಣೋಸ್ಮಿ ತಥಾ ಆತ್ಮನಃ
ನಕಿಂಚಿತ್ ಮಮ ಕರ್ತವ್ಯಂ ತವ ಅನ್ಯತ್ರ ಅಭಿಷೇಚನಂ )
ದಶರಥನ ಮಾತನ್ನು ತದ್ವತ್ತಾಗಿ ಹೇಳಿ ಮುಗಿಸಿ, "ಅಮ್ಮ, ಅಪ್ಪ ಕೊನೆಯ ಮಾತು ಹೇಳುವವರೆಗೆ ಏಕೆ ಇದೆಲ್ಲ ಹೇಳುತ್ತಿದ್ದರೆಂದೇ ಅರ್ಥವಾಗಲಿಲ್ಲ. ಕೊನೆಗೆ ನಾನು ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ಅವರಿಗೆ ವಂದಿಸಿ ನಿನಗೆ ಹೇಳೋಣವೆಂದು ಬಂದರೆ, ನಿನಗೀಗಾಗಲೇ ಗೊತ್ತಾಗಿಬಿಟ್ಟಿದೆ. ಅಪ್ಪ ಹೇಳಿದ ಒಂದು ಮಾತು ಏಕೆ ಹೇಳಿದರೆಂದು ನನಗೆ ಅರ್ಥವಾಗುತ್ತಿಲ್ಲ. ಆದರೆ ಅದೇಕೋ ನನಗೆ ಅದು ಹಿತವಾಗಲಿಲ್ಲ. ಆದರೆ ನಾನೆಂದಾದರೂ ಅಪ್ಪನ ಮುಂದೆ ನಿಂತು ಅಪ್ಪನ ಮಾತನ್ನು ಪ್ರಶ್ನಿಸಿದ್ದೇನೆಯೆ? " ಕೌಸಲ್ಯೆ ಕೇಳಿದಳು, "ಏನು ನಿನಗೆ ಅಪ್ರಿಯವಾದದ್ದನ್ನು ಹೇಳಿದರು? " ರಾಮರು ಕೊಂಚು ತಡೆದು, ಅಷ್ಟು ಹೊತ್ತಿಗೆ ಅಲ್ಲಿಗೆ ಬಂದಿದ್ದ ಸುಮಿತ್ರೆ - ಲಕ್ಷ್ಮಣರನ್ನು ನೋಡುತ್ತ ಹೇಳಿದರು; "ಅವರು ನನಗೆ ಅಪ್ರಿಯವಾದದ್ದನ್ನು ಹೇಳಲಿಲ್ಲ; ಆದರೆ ಅಪ್ಪ ಹೇಳಿದ್ದು ಕೇಳಿ ನನಗೆ  ಅಹಿತವಾಯಿತು. ಅವರೆಂದರು; ನಿನ್ನ ತಮ್ಮ ಭರತ ಒಳ್ಳೆಯವನೇ. ಸನ್ಮಾರ್ಗದಲ್ಲಿದ್ದಾನೆ. ಸುಸ್ನೇಹಿತರೊಡನೂ ಇದ್ದಾನೆ. ಹಿರಿಯರ ವಿಷಯದಲ್ಲಿ ತುಂಬ ವಿಧೇಯ. ಧರ್ಮಬುದ್ಧಿಯುಳ್ಳವ. ದಯಾಳು. ತನ್ನ ಇಂದ್ರಿಯಗಳನ್ನು ಮಿತಿಯಲ್ಲಿಟ್ಟುಕೊಂಡಿರುವ ಜಿತೇಂದ್ರಿಯ. ಆದರೂ.... ಆದರೂ ಜನರ ಮನಸ್ಸು ಒಂದೇ  ಸಮ ಇರುವುದಿಲ್ಲ. ಅಕಸ್ಮಾತ್ ವಿಚಲಿತರಾದರೂ ಕಾರ್ಯ ಆಗಿಹೋಗಿಬಿಟ್ಟರೆ, ಆಮೇಲೆ ಒಪ್ಪಿಗೆ ಕೊಟ್ಟಿಬಿಡುತ್ತಾರೆ. ಹೇಗೂ ಭರತ ಊರಿನಲ್ಲಿಲ್ಲ. ನಿನಗೆ ಪಟ್ಟಾಭಿಷೇಕ ಮಾಡುವುದಕ್ಕೆ ಇದೇ ಸೂಕ್ತ ಕಾಲ ಅಂತ ನಿರ್ಧರಿಸಿದ್ದೇನೆ.
(ಕಾಮಂ ಖಲುಸತಾಂ ವೃತ್ತೇ ಭ್ರಾತಾ ತೇ ಭರತಃ ಸ್ಥಿತಃ
ಜ್ಯೇಷ್ಠಾನುವರ್ತೀ ಧರ್ಮಾತ್ಮಾ ಸಾನುಕ್ರೋಶೋ ಜಿತೇಂದ್ರಿಯಃ
ಕಿಂತು ಚಿತ್ತಂ ಮನುಷ್ಯಾಣಾಂ ಅನಿತ್ಯಂ ಇತಿ ಮೇ ಮತಿಃ
ಸತಾಂಚ ಧರ್ಮನಿತ್ಯಾನಾಂ ಕೃತ ಶೋಭಿಚ ರಾಘವ
ವಿಪ್ರೋಷಿಸ್‌ತಶ್ಚ ಭರತೋ ಯಾವದೇವ ಪುರಾದಿತಃ
ತಾವತ್ ಏವ ಅಭಿಷೇಕಸ್ತೇ ಪ್ರಾಪ್ತಕಾಲೋ ಮತೋ ಮಮ )
ಮಾತು ಮುಂದುವರಿಸಿ ರಾಮರು ಕೇಳಿದರು ; "ಏಕಮ್ಮ, ಅಪ್ಪನಿಗೆ ಭರತನ ಮೇಲೆ ಅಸಮಾಧಾನ? ಏಕೆ ಸಂದೇಹ? ಎಷ್ಟು ಒಳ್ಳೆಯವನು ಭರತ! ಅಪ್ಪನೇ ಹೊಗಳೂ ಬಿಟ್ಟರು! ಆದರೂ ಕೊನೆಗೆ ಏಕೋ ಕಹಿ ಹೇಳಿಬಿಟ್ಟರಲ್ಲ, ಏಕೆ ? " 
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com