ಬದಲಾಗುತ್ತಿರುವ ಅಮೇರಿಕಾ ಆರ್ಥಿಕತೆ: ಟ್ರೇಡ್ ವಾರ್ ಗೆ ನೆಡೆದಿದೆ ಸಿದ್ಧತೆ !

ಟ್ರಂಪ್ ಚೀನಾದ ಮೇಲಿನ ಟ್ರೇಡ್ ವಾರ್ನಿಂದ ಜಗತ್ತಿನ ಮೇಲೆ ಯಾವ ಪರಿಣಾಮ ಉಂಟಾಗಬಹದು ಎನ್ನುವುದನ್ನ ಮುಂದಿನ ದಿನಗಳು ತೆರೆದಿಡಲಿವೆ. ಈ ದೇಶಗಳ ನಡುವಿನ ಟ್ರೇಡ್ ವಾರ್ ಜಗತ್ತಿನಲ್ಲಿ...
ಅಮೆರಿಕಾ ಧ್ವಜ
ಅಮೆರಿಕಾ ಧ್ವಜ
ಭಾರತದಲ್ಲಿ ನರೇಂದ್ರ ಮೋದಿಯವರನ್ನ ಅಸಾಂಪ್ರದಾಯಿಕ ನಿಲುವು, ನಿರ್ಧಾರ ತೆಗೆದುಕೊಂಡ ನಾಯಕ ಎಂದು ಚಿಂತಿಸದೆ ಹೇಳಿಬಿಡಬಹುದು. ಏಕೆಂದರೆ ಮತ್ತ್ಯಾವುದೇ ನಾಯಕ ಡಿಮೋನಿಟೈಸೇಶನ್ ನಂತಹ  ದಿಟ್ಟ ನಿಲುವು ತಳೆಯಲು ಸಾಧ್ಯವಾಗುತ್ತಿತ್ತು? ಇದರಿಂದ ಆದ ಲಾಭ ನಷ್ಟಕ್ಕಿಂತ ಅಂತಹ ಒಂದು ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಕಠಿಣ. ಸಾಂಪ್ರದಾಯಿಕ ಮನಸ್ಥಿತಿಯ ನಾಯಕರಿಂದ ಇದು ಸಾಧ್ಯವಿಲ್ಲ. ಇಂದಿಗೂ ಜಗತ್ತಿನ ದೊಡ್ಡಣ್ಣ ಅಮೇರಿಕ ಅದರಲ್ಲಿ ಬದಲಾವಣೆ ಇಲ್ಲ. ಅಮೇರಿಕಾ ಆರ್ಥಿಕತೆ ಚೇತರಿಸಿಕೊಂಡರೆ ಜಗತ್ತು ಸ್ವಲ್ಪ ನಿಟ್ಟಿಸುರು ಬಿಡಬಹುದು. ಇದು ಸಾಮಾನ್ಯ ಲೆಕ್ಕಾಚಾರ ಮನೆಯೊಡೆಯ ಖುಷಿಯಾಗಿರದೆ ಮನೆಯ ಇತರ ಸದಸ್ಯರು ತಾನೇ ಹೇಗೆ ಖುಷಿಯಾಗಿದ್ದಾರು? ಟ್ರಂಪ್ ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೆ ತನ್ನ ಮುಂದಿನ ನೆಡೆಗಳ ಬಗ್ಗೆ ಬಹಳ ಗೌಪ್ಯತೆಯನ್ನ ಕಾಪಾಡಿಕೊಂಡು ಬರುತ್ತಿದ್ದಾರೆ. ಮುಚ್ಚುಮರೆಯಿಲ್ಲದೆ ಹೇಳಿಕೆ ನೀಡಿದರೂ ಅದನ್ನ ನಿಜವೆಂದು ನಂಬುವು ಸ್ಥಿತಯಲ್ಲಿ ಇತರ ದೇಶಗಳಿಲ್ಲ. ಇವೇನೇ ಇರಲಿ ಟ್ರಂಪ್ ಅಧಿಕಾರವಹಿಸಿಕೊಂಡ ನಂತರ ಸಾಕಷ್ಟು ಬದಲಾವಣೆ ಕಂಡಿದೆ ಅದು ಅಮೇರಿಕಾ ಆರ್ಥಿಕತೆಗೆ  ಧನಾತ್ಮಕವಾಗಿದೆ. ಗ್ರಾಹಕರು,ಸಣ್ಣ ಉದ್ದಿಮೆದಾರರು ಮತ್ತು ಕಾರ್ಪೊರೇಟ್ ಸಂಸ್ಥೆಯ ಮುಖ್ಯಸ್ಥರ ಮುಖದಲ್ಲಿ ಮುಗುಳ್ನಗೆ ಪುನಃ ಕಾಣುತ್ತಿದೆ. ಯಾವ ಕ್ಷೇತ್ರದಲ್ಲಿ ಏನೇನು ಬದಲಾಗಿದೆ ನೋಡೋಣ. 
ಉದ್ಯೋಗ: ಅಮೇರಿಕಾದಲ್ಲಿ ನಿರದ್ಯೋಗ ದೊಡ್ಡ ಸಮಸ್ಯೆಯಾಗಿತ್ತು. ಏಪ್ರಿಲ್ ತಿಂಗಳ ಮಾಹಿತಿಯ ಪ್ರಕಾರ ನಿರುದ್ಯೋಗ 4.4 ಪ್ರತಿಶತ. ಟ್ರಂಪ್ ಚುನಾಯಿತರಾದ ಸಮಯದಲ್ಲಿ ಇದು 4.6 ಪ್ರತಿಶತವಿತ್ತು. ಇದಲ್ಲದೆ ಅರೆಕಾಲಿಕ ಉದ್ಯೋಗದಲ್ಲಿರುವ ಜನರನ್ನ ಕೂಡ ಪೂರ್ಣ ಪ್ರಾಮಾಣದ ಉದ್ಯೋಗವಿಲ್ಲದವರೆಂದು ಪರಿಗಣಿಸಿದರೆ ಅಂತವರ ಸಂಖ್ಯೆ 8.8 ಪ್ರತಿಶತ. ಕಳೆದ ಹತ್ತು ವರ್ಷದಲ್ಲಿ ಇದು ಕಡಿಮೆ ಸಂಖ್ಯೆ. ಟ್ರಂಪ್ ಅಧಿಕಾರವಹಿಸಿಕೊಂಡ ನಂತರ ಐದು ಲಕ್ಷಕ್ಕೂ ಹೆಚ್ಚು ಕೆಲಸಗಳ ಸೃಷ್ಟಿಯಾಗಿದೆ, ವೇತನದಲ್ಲಿ 2.5 ಪ್ರತಿಶತ ಏರಿಕೆಯಾಗಿದೆ ಎನ್ನುತ್ತದೆ ಅಂಕಿಅಂಶ. 
ರಿಯಲ್ ಎಸ್ಟೇಟ್: ಅಮೇರಿಕಾದಲ್ಲಿನ ಜನರ ಜೀವನ ಜಗತ್ತಿನ ಇತರ ದೇಶಗಳ ಜನರ ಜೀವನಕ್ಕಿಂತ ಅತ್ಯಂತ ಬಿನ್ನ. ಇಲ್ಲಿ ಪ್ರತಿಯೊಬ್ಬರೂ ಸಾಲ ತೆಗೆದುಕೊಳ್ಳಬೇಕು ಇದೊಂತರ ಅಲಿಖಿತ ನಿಯಮ. ಕ್ರೆಡಿಟ್ ಹಿಸ್ಟ್ರಿ ನಿರ್ಮಿಸಿಕೊಳ್ಳಬೇಕು ಇಲ್ಲದಿದ್ದರೆ ಕಷ್ಟ ಎನ್ನುವ ಮಟ್ಟಕ್ಕೆ ಜನರ ಚಿಂತನೆ ಬದಲಾಗಿದೆ. ಈ ಮಾತು ಏಕೆ ಬಂತೆಂದರೆ ಅಮೇರಿಕಾ ದೇಶದ ಮುಕ್ಕಾಲು ಪಾಲು ಜನರ ದುಡಿತದ ಮುಕ್ಕಾಲು ಪಾಲು ಹಣ ಈ ಕ್ಷೇತ್ರದಲ್ಲಿ ಇದೆ. ನ್ಯಾಷನಲ್ ಅಸೋಸಿಯೇಷನ್ ಆಫ್ ರಿಲೇಟರ್ಸ್ ಸಂಸ್ಥೆಯ ಪ್ರಕಾರ ಮನೆಗಳ ಬೆಲೆಯಲ್ಲಿ 4 ಪ್ರತಿಶತ ಏರಿಕೆ ಕಂಡಿದೆ. ಮಾರುಕಟ್ಟೆ ಚೇತರಿಕೆ ಕಾಣುತ್ತಿರುವ ಮತ್ತು ಜನರಲ್ಲಿ ಮತ್ತೆ ವಿಶ್ವಾಸ ಮರುಕುಳಿಸಿದ ಸಂಕೇತವಿದು. 
ಸಾಲಗಳು: ಬ್ಯಾಂಕ್ಗಳು ಸಾಲವನ್ನ ಮತ್ತೆ ಉದಾರತೆಯಿಂದ ಕೊಡಲು ನಿಧಾನವಾಗಿ ಮುಂದಾಗಿವೆ. ಗ್ರಾಹಕರು ಕೂಡ ತೆರೆದ ಬಾಹುವಿನಿಂದ ಮತ್ತೆ ಸಾಲ ತೆಗೆದುಕೊಳ್ಳಲು ಶುರುಮಾಡಿದ್ದಾರೆ. ಅಮೇರಿಕಾ ಆರ್ಥಿಕತೆ ನಿಂತಿರುವುದೇ ಸಾಲದ ಮೇಲೆ. ಗ್ರಾಹಕರು ಸಾಲ ತೆಗೆದುಕೊಳ್ಳದೆ ಹೋದರೆ ಅಮೇರಿಕಾ ಆರ್ಥಿಕತೆ ಕುಸಿಯುತ್ತದೆ. ಎಲ್ಲಕ್ಕೂ ಸಂತಸದ ವಿಷಯವೆಂದರೆ ಕೊಂಡ ಸಾಲದ ಮೇಲಿನ ಕಂತನ್ನ ಗ್ರಾಹಕರು ತಪ್ಪದೆ ಪಾವತಿಸಲು ಶುರು ಮಾಡಿದ್ದಾರೆ. ಸಾಲ ಪಾವತಿಸಲು ಆಗದವರ ಸಂಖ್ಯೆ 7 ಪ್ರತಿಶತ 2009 ರಲ್ಲಿ ಇದ್ದದ್ದು ಇಂದು 2.3 ಪ್ರತಿಶತಕ್ಕೆ ಕುಸಿದಿದೆ. ಇದು ಸಾಮಾನ್ಯ ಗ್ರಾಹಕನ ಕಥೆ. ವ್ಯಾಪಾರಸ್ಥರು ಸಾಲ ತೆಗೆದುಕೊಳ್ಳುತ್ತಿಲ್ಲ.ಇವರು ಸಾಲ ತೆಗೆದುಕೊಳ್ಳಲು ಶುರುಮಾಡಬೇಕು ಇಲ್ಲದಿದ್ದರೆ ಇದು ಟ್ರಂಪ್ ಸರಕಾರಕ್ಕೆ ಮುಂದಿನ ದಿನಗಳಲ್ಲಿ ತಲೆನೋವು ತರಬಹುದು. 
ಕನ್ಸೂಮರ್ ಸ್ಪೆನ್ಡಿಂಗ್: ಜನ ಸಾಮಾನ್ಯ ಖರ್ಚು ಮಾಡಲು ಶುರು ಮಾಡಿದರೆ ಅದು ಸಮಾಜ ಆರೋಗ್ಯಕರವಾಗಿದೆ ಎನ್ನುವುದರ ಸೂಚನೆ. ಅಮೇರಿಕಾದದಲ್ಲಿ  'ಶಾಪ್ ಟಿಲ್ ಯು ಡ್ರಾಪ್ ' ಅಂದರೆ ಸುಸ್ತಾಗುವವರೆಗೆ ಖರೀದಿ ಮಾಡುತ್ತಿರುವುದು ಒಂದು ರೀತಿಯಲ್ಲಿ ಸಾಮಾನ್ಯ ಮಾತಾಗಿತ್ತು. ಜನ ಸಾಮಾನ್ಯ ಮಾಡುವ ದೈನಂದಿನ ಖರ್ಚು ಸಮಾಜದ ಆರ್ಥಿಕತೆಯ ಅಡಿಪಾಯ. ಅಮೇರಿಕಾ ಜನ ಸಾಮಾನ್ಯ ತನಗೇನು ಬೇಕು ಅದನ್ನ ಕೊಳ್ಳುತ್ತಿದ್ದಾನೆ. ಹಿಂದಿನಂತೆ ಕಣ್ಣಿಗೆ ಕಂಡಿದೆಲ್ಲ ಬೇಕು ಎನ್ನುವ ಗುಣ ಅವನಲ್ಲಿ ಮಾಯವಾಗಿದೆ. ಅರ್ಥ ಮಾರುಕಟ್ಟೆಯಲ್ಲಿ ಇನ್ನೂ ಹಣದ ಸುಲುಭ ಹರಿವು ಶುರುವಾಗಿಲ್ಲ. 
ವಾಣಿಜ್ಯ: ಟ್ರಂಪ್ ಅಧಿಕಾರ ವಹಿಸಿಕೊಂಡ ದಿನದಿಂದ 'ಬಯ್ ಅಮೇರಿಕನ್, ಹೈರ್ ಅಮೇರಿಕನ್' ಅಂದರೆ ಅಮೇರಿಕಾದ ಉತ್ಪನ್ನ ಕೊಳ್ಳಿ ಮತ್ತು ಅಮೇರಿಕನ್ ಪ್ರಜೆಯನ್ನ ಕೆಲಸಕ್ಕೆ ತೆಗೆದುಕೊಳ್ಳಿ ಎನ್ನುವ ಘೋಷಣೆ ಮಾಡಿದ್ದಾರೆ. ಇದರಿಂದ ಟ್ರಂಪ್ ನೇರವಾಗಿ ಚೀನಾ, ಯೂರೋಪ್, ಜಪಾನ್, ಕೆನಡಾ, ಮೆಕ್ಸಿಕೋ ದೇಶಗಳೊಂದಿಗೆ ಘರ್ಷಣೆಗೆ ಇಳಿದಂತಾಗಿದೆ. ಟ್ರೇಡ್ ಡೆಫಿಸಿಟ್ ಈ ಘೋಷಣೆಯಿಂದ ಹೇಳಿಕೊಳ್ಳುವಂತ ಕಡಿಮೆಯೇನು ಆಗಿಲ್ಲ. ಅಮೇರಿಕಾ ದ ಟ್ರೇಡ್ ಡೆಫಿಸಿಟ್ 43.7 ಟ್ರಿಲಿಯನ್ ಡಾಲರ್! ಇದನ್ನ ಸರಿದೂಗಿಸಲು ಏನೇ ಮಾಡಲು ಹೋದರು ಇನ್ನೊಂದು ಏನೂ ಏರುಪೇರು ಆಗುವುದರಲ್ಲಿ ಸಂಶಯವಿಲ್ಲ. ಈ ವಿಷಯವನ್ನ ಟ್ರಂಪ್ ಹೇಗೆ ನಿಭಾಯಿಸುತ್ತಾರೆ ಎನ್ನವುದನ್ನ ಜಗತ್ತು ಕೌತುಕದಿಂದ ನೋಡುತ್ತಿದೆ. 
ಷೇರು ಮಾರುಕಟ್ಟೆ: ಇದೊಂದು ಮಾರುಕಟ್ಟೆ ಮಾತ್ರ ಟ್ರಂಪ್ ಬಂದ ದಿನದಿಂದ ಹೊಸ ಹುರುಪಿನಲ್ಲಿದೆ. ಬಹುತೇಕ ಎಲ್ಲಾ ಸ್ಟಾಕ್ಸ್ ಅಂಡ್ ಷೇರು ಗಳು ತಮ್ಮ ಉನ್ನತ ಮೌಲ್ಯವನ್ನ ದಾಖಲಿಸಿವೆ. ಷೇರು ಮಾರುಕಟ್ಟೆಯ ಅನುಭವ ಇರುವವರಿಗೆ ಚನ್ನಾಗಿ ಗೊತ್ತು ಹೀಗೆ ಏರಿದ್ದು ಹಾಗೆ ಇಳಿಯಬಹುದು ಎಂದು. ಟ್ರಂಪ್ ಈ ವರ್ಷ ಮಂಡಿಸಿದ ಹೊಸ ತೆರಿಗೆ ನೀತಿ ಅಮೆರಿಕನ್ ಷೇರು ಮಾರುಕಟ್ಟೆ ಕುಸಿಯುವಂತೆ ಮಾಡಿದ್ದು ಸುಳ್ಳಲ್ಲ. ಷೇರು ಮಾರುಕಟ್ಟೆ ತನ್ನ ಎಂದಿನ ಕಣ್ಣಾಮುಚ್ಚಾಲೆ ಆಟ ಮುಂದುವರಿಸಿದೆ. 'ನಾನು ಅಮೆರಿಕನ್ ಎಕಾನಮಿ ಪಾಸಿಟಿವ್ ಆಗಿರಲು ಇಷ್ಟೊಂದು ಶ್ರಮ ಪಡುತ್ತಿದ್ದೇನೆ ಹೊಸ ತೆರಿಗೆ ನೀತಿಯಿಂದ ಲಾಭವೇ ಹೊರತು ನಷ್ಟವಲ್ಲ ಆದರೆ ಷೇರು ಮಾರುಕಟ್ಟೆ ಈ ವಿಷಯ ಹಿಡಿದು ಕುಸಿದದ್ದು ದುರದೃಷ್ಟ' ಎನ್ನುವುದು ಟ್ರಂಪ್ ಉವಾಚ. ಇದೇನೇ ಇರಲಿ ಈ ಕ್ಷೇತ್ರವನ್ನ ದೇಶದ ಆರ್ಥಿಕತೆಯ ಆರೋಗ್ಯ ಅಳೆಯಲು ಮಾಪನವಾಗಿ ಬಳಸಲು ಬಾರದು. 
ಅಮೇರಿಕಾ ದೇಶದ ಆರ್ಥಿಕತೆಗೆ ಮೂಡ ಮುಸುಕಿದರೆ ಅದು ಪರೋಕ್ಷವಾಗಿ ಜಗತ್ತಿನ ಇತರ ದೇಶಗಳ ಮೇಲೂ ಪರಿಣಾಮ ಬೀರುತ್ತದೆ. ಸಶಕ್ತ ಮತ್ತು ಸಂತೋಷಭರಿತ ಅಮೇರಿಕಾ ಜಗತ್ತಿಗೆ ಅತ್ಯಂತ ಅವಶ್ಯಕ. ಮುಂಬರುವ ದಿನಗಲ್ಲಿ ಅಮೇರಿಕಾ ಆರ್ಥಿಕತೆ ಏರುಗತಿ ಕಾಣುವ ಸೂಚನೆಗಳು ಅಂಕಿಅಂಶ ನೀಡುತ್ತಿದೆ. ಅಮೇರಿಕಾ ತನ್ನ ಎಕಾನಮಿಯನ್ನ ಮತ್ತೆ ಬಲಿಷ್ಠ ಮಾಡಲು ಪಣ ತೊಟ್ಟಿದೆ ಅದಕ್ಕೆ ಯಾವುದೇ ರೀತಿಯ ಬೆಲೆ ತರಲು ಸಿದ್ಧವಿದೆ ಹಾಗಾಗಿ ಅದು ತನ್ನ ಪ್ರಭಲ ವೈರಿ ಚೀನಾದ ಮೇಲೆ ಟ್ರೇಡ್ ವಾರ್ ಶುರು ಮಾಡಿದೆ. ಯುದ್ಧದ ಸಮಯದಲ್ಲಿ ಕೇವಲ ವೈರಿ ಸೈನಿಕರು ಮಾತ್ರ ಸಾಯುತ್ತಾರೆಯೇ? ಅಮಾಯಕ ಪ್ರಜೆಗಳು, ನಮ್ಮ ಸೈನಿಕರು ಕೂಡ ಯುದ್ಧದಲ್ಲಿ ಸಾವನ್ನಪ್ಪುತ್ತಾರೆ. ಟ್ರಂಪ್ ಚೀನಾದ ಮೇಲಿನ ಟ್ರೇಡ್ ವಾರ್ನಿಂದ ಜಗತ್ತಿನ ಮೇಲೆ ಯಾವ ಪರಿಣಾಮ ಉಂಟಾಗಬಹದು ಎನ್ನುವುದನ್ನ ಮುಂದಿನ ದಿನಗಳು ತೆರೆದಿಡಲಿವೆ. ಈ ದೇಶಗಳ ನಡುವಿನ ಟ್ರೇಡ್ ವಾರ್ ಜಗತ್ತಿನಲ್ಲಿ ಇನ್ನೊಂದು ರೀತಿಯ ಅಸಮತೋಲನ ಹುಟ್ಟುಹಾಕಲಿದೆಯೇ? ಎನ್ನುವುದು ಕೂಡ ಸಮಯವೇ ಉತ್ತರಿಸಲಿದೆ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com