ಮಾತು ಉಳಿಸಿಕೊಳ್ಳಲು ರಘುವಂಶದ ಶಿಬಿರಾಜ ದೇಹಾನೇ ಕತ್ತರಿಸಿಕೊಟ್ಟ, ಅಲರ್ಕ ಕಣ್ಣುಗಳನ್ನೇ ದಾನ ಮಾಡಿದ!

ಶಿಬಿರಾಜ ತನ್ನ ದೇಹಾನೇ ಕತ್ತರಿಸಿಕೊಟ್ಟು ಮಾತು ಉಳಿಸಿಕೊಂಡ. ನಿನ್ನ ವಂಶದ ರಾಜ ಅಲರ್ಕ ಕಣ್ಣುಗಳನ್ನೇ ದಾನ ಮಾಡಿದ. ಧರ್ಮವನ್ನು ಬಿಟ್ಟು ಮಾತಿಗೆ ತಪ್ಪಿ, ರಾಮನಿಗೆ ಪಟ್ಟ ಕಟ್ಟಿ ಕೌಸಲ್ಯೆ ಜೊತೆಗೆ ಮಜಾ....
ರಾಮ
ರಾಮ
(ಓದುಗರೇ, ಕೈಕೆ ಮಹಾ ಬುದ್ಧಿವಂತೆ. ಹಳೆಯ ವರಗಳನ್ನು ದಶರಥ ಕೊಡಲಾರನೋ? ಸಮಯಾಧಿಕ್ಯವಾಗಿದೆ ಎಂದು ಹೇಳುವನೋ? ಇಂದಿಗೆ ಅವು ಪ್ರಸ್ತುತವಲ್ಲ ಎಂದು ಜಾರುವನೋ? ಮಗನ ಮೇಲಿನ ಮೋಹ ಅಡ್ಡಿ ಹಾಕುವುದೋ? ಹೀಗೆ ಏನೇನೋ ಆಗಿ ತನ್ನ ಅಪೇಕ್ಷೆ ಜಾರಿ ಹೋಗಬಾರದೆಂದು, ಇಂದು ಮತ್ತೊಮ್ಮೆ ಪ್ರಮಾಣ ಮಾಡಿಸಿದಳು. ಹಿಂದಿನ ವರಗಳನ್ನು ಸಲ್ಲಿಸುವೆನೆಂದು ರಾಮನ ಮೇಲೇ ಆಣೆ ಇಟ್ಟುಬಿಟ್ಟ ದಶರಥ!!! ಕುತ್ತಿಗೆಯನ್ನು ಬಿಗಿದು ಸುತ್ತಿದ ಹೆಬ್ಬಾವು, ಇದೀಗ ಮೂಗು ಬಾಯಿಗಳನ್ನೂ ಆವರಿಸಿ , ಕಬಳಿಸಿ ಕುರಿಯನ್ನು ನಿಶ್ಚೇತನ ಮಾಡಿಬಿಟ್ಟಿತು. ಲೇಖಕರು)
ದಶರಥನ ಕಣ್ಣಲ್ಲಿ ಕಣ್ಣಿಟ್ಟು ಮೊದಲನೆಯ ಬಾಣ ಬಿಟ್ಟಳು; "ರಾಮನಿಗೆ ಪಟ್ಟ ಕಟ್ಟಲು ಯಾವ ಮುಹೂರ್ತ ನಿಶ್ಚಯಿಸಿರುವೆಯೋ, ಅದೇ ಮಂಗಳ ಕ್ಷಣದಲ್ಲಿ ನನ್ನ ಮಗ ಭರತನಿಗೆ ಪಟ್ಟ ಕಟ್ಟಬೇಕು." (ಯೋ ಅಭಿಷೇಕ ಸಮಾರಂಭೋ ರಾಘವಸ್ಯ ಉಪಕಲ್ಪಿತಃ
ಅನೇನೈವ ಅಭಿಷೇಕೇಣ ಭರತೋ ಮೇ ಅಭಿಷಿಚ್ಯತಾಂ)
ಕುಸಿದು ಬಿದ್ದ ದಶರಥನ ಒಂದು ಕಣ್ಣಿಗೆ ಬಲವಾಗಿ ಬಾಣ ನಾಟಿಬಿಟ್ಟಿತು. ಬಿದ್ದ ಗಂಡನ ದುರವಸ್ಥೆಯಾಗಲೀ, ಅವನ ದೈನ್ಯವಾಗಲೀ ಕೈಕೆಯ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ! ಉಳಿದ ವಾಕ್ಯವನ್ನು ಹೇಳಿ ನೇಣಿನ ಗಂಟನ್ನು ಬಿಗಿ ಮಾಡಿದಳು. "ಹದಿನಾಲ್ಕು ವರ್ಷಗಳಷ್ಟು ಕಾಲ ರಾಮ ದಂಡಕಾರಣ್ಯಕ್ಕೆ ಹೋಗಬೇಕು. (ನವಪಂಚ ಚ ವರ್ಷಾಣಿ ದಂಡಕಾರಣ್ಯಮಾಶ್ರಿತಃ) ತಲೆ ಮೇಲೆ ಬಂಡೆ ಬಿದ್ದಂತೆ, ನೀರಲ್ಲಿ ಅಕಸ್ಮಾತ್ ಜಾರಿ ಉಸಿರು ಕಟ್ಟಿದಂತೆ, ಗಂಟಲಲ್ಲಿ ಬೇಯದ ಬೀಜವೊಂದು ಸಿಕ್ಕಿಕೊಂಡಂತೆ, ಅಲ್ಲಾಡಲಾಗದಂತೆ ಹಗ್ಗಗಳಿಂದ ಕಟ್ಟಿಹಾಕಿದಂತೆ, ವಿಲವಿಲ ಒದ್ದಾಡಲೂ ಆಗದೇ ಮೂರ್ಛಿತನಾಗಿಬಿಟ್ಟ ದಶರಥ ಕೈಕೆಯ ಮಾತು ಕೇಳುತ್ತಿದ್ದಂತೆಯೇ.
*****************
ಗಂಡನ ಕಿವಿಗೆ ಕೇಳಿಸಿತೋ ಬಿಟ್ಟಿತೋ ಇನ್ನೊಂದು ತುಂಡುವಾಕ್ಯವೂ ಹೊರಬಂತು. "ಹಾಗೆ ಅರಣ್ಯಕ್ಕೆ ಹೋಗುವ ರಾಮನಿಗೆ ಮೂರು ನಿಯಮಗಳಿವೆ. ಒಂದು, ನಾರು ಬಟ್ಟೆಯುಡಬೇಕು. ಎರಡು, ಜಟೆ ಕಟ್ಟಬೇಕು. ಮೂರು, ತಪಸ್ವಿಯಾಗಿರಬೇಕು"
( ಚೀರಾಜಿನ ಜಟಾಧಾರೀ ರಾಮೋ ಭವತು ತಾಪಸಃ )
(ಕೇಳಿದ್ದು ಎರಡೇ ವರ. ಆದರೆ ಎರಡನೆಯದಕ್ಕೆ ಅಂಟಿಸಿದ ನಿಯಮವೂ ಮೂರನೆಯದೆಂದು ಬಾಯಿ೧ಟ್ಟು ಹೇಳದಿದ್ದರೂ ಗುಪ್ತ ವರವೇ ಆಗಿ ಶ್ರೀರಾಮರಿಗೆ ಕಡುಕಷ್ಟ ತಂದಿತು. ಮೇಲ್ನೋಟಕ್ಕೆ ಎರಡೇ ಆದರೂ ಮೂರು ವರಗಳಾಗಿಬಿಟ್ಟಿತು; ಪಾದಗಳಿಗೆ ಬಳ್ಳಿ ಪಾಶ ಸುತ್ತಿ! ಈ ಗುಪ್ತವರ ಕೇಳದಿದ್ದಿದ್ದರೆ ಶ್ರೀರಾಮರು ಸಹಜ ಉಡುಗೆ ತೊಡಬಹುದಿತ್ತು! ಜಟೆ ಕಟ್ಟದೇ ಸಾಮಾನ್ಯ ನಾಗರಿಕರಿದ್ದಂತೆ ಇರಬಹುದಿತ್ತು! ಎಲ್ಲಕ್ಕಿನ್ನ ಮುಖ್ಯವಾಗಿ ತಪಸ್ವಿಯಾಗಬೇಕಿರಲಿಲ್ಲ!!! ಈ ನಿಯಮಗಳೇ ಇರದಿದ್ದರೆ, ಶ್ರೀರಾಮರು ಅಸ್ತ್ರಶಸ್ತ್ರಾಭ್ಯಾಸ ಶಾಲೆಯನ್ನೋ, ವೇದಾಂತೋಪನ್ಯಾಸ ಮಂದಿರವನ್ನೋ ತೆಗೆದು, ಅರ್ಹರಿಗೆ ಪಾಠ ಹೇಳಿ ಸಂಪಾದಿಸಬಹುದಿತ್ತು. ಮಡದಿಯೊಡನೆ ದಾಂಪತ್ಯ ಸುಖ ಅನುಭವಿಸುತ್ತ, ಗೃಹಸ್ಥಾಶ್ರಮಿಯಾಗಿರಬಹುದಿತ್ತು. ತಾಪಸಿಯಾದ್ದರಿಂದ ಯಾವ ಊರಿನೊಳಗೂ ಹೋಗಲು ಆಗದೇ, ಕೇವಲ ಅಡವಿಯಲ್ಲೇ ಕಡುಕಷ್ಟಪಟ್ಟು ಹದಿನಾಲ್ಕು ವರ್ಷಗಳ ಕಾಲ ಪರದಾಡಬೇಕಾಯ್ತು! ಯುವ ಸುಂದರ ಪತ್ನಿ ಇದ್ದೂ, ಆರೋಗ್ಯ ಪೂರ್ಣ ದೃಢ ದೇಹವಿದ್ದೂ, ಶೃಂಗಾರ ತ್ಯಕ್ತ ಅಕಾಲಿಕ ವೈರಾಗ್ಯದಲ್ಲಿ ಮನಸ್ಸು-ದೇಹಗಳನ್ನು ದಂಡಿಸಬೇಕಾಯಿತು. ಇದು ಕೈಕೆಯ ದುಷ್ಟ ಬುದ್ಧಿಗೆ ಸೇರಿದ ನಾಗರ ನಂಜಾಯಿತು- ಲೇಖಕರು)
ದಶರಥ ಕಣ್ಣು ಬಿಟ್ಟಾಗ ಕಂಡಿದ್ದು ಮೋಹಿನಿಯನ್ನಲ್ಲ; ಮಾರಿಯನ್ನು. ಕೋಮಲೆಯನ್ನಲ್ಲ; ಕಠೋರ ರಕ್ಕಸಿಯನ್ನು. ಮೃದು ಮಾಟವನ್ನಲ್ಲ; ವಿಷ ಮೆತ್ತಿಕೊಂಡ ಬಿಳಿ ಬೊಂಬೆಯನ್ನು. ’ಏನಾಯಿತಿವಳಿಗೆ? ತಾನು ಸುಂದರಿಯೆಂದು ಭ್ರಮಿಸಿದ್ದು ಈ ಕರಾಳ ಮನಸ್ಕಳನ್ನೇ? ಒಬ್ಬ ಹೆಣ್ಣಲ್ಲಿ ಈ ಪ್ರಮಾಣದ ಕ್ರೌರ್ಯ ಇರಬಹುದೆಂದು ಅಂದುಕೊಂಡೇ ಇರಲಿಲ್ಲ ತಾನು. ಇಷ್ಟು ದಿನಗಳೂ ಅವಳು ತೋರಿಸಿದ ಪ್ರೀತಿಯೆಲ್ಲ ನಾಟಕವೇ? ಥೂ ಥೂ ಮುದುಕರು ಮದುವೆಯಾಗಬಾರದು. ಅಕಸ್ಮಾತ್ ಆದರೂ ತರುಣಿಯನ್ನಾಗಬಾರದು. ಹಾಳಾಗಲಿ ಯುವತಿಯನ್ನಾದರೂ ಖಂಡಿತ ಸುಂದರಿಯನ್ನು ಆಗಲೇ ಬಾರದು! ಆದರೆ ಈಗ ಹಳಹಳಿಸಿ ಏನು ಪ್ರಯೋಜನ? ಹಾಳಾದವಳು ಈಗ ಹೇಳುತ್ತಿದ್ದಾಳೆ! 
ರಾಮನಲ್ಲಿ ಇವಳೆಷ್ಟು ಪ್ರೀತಿ ಹರಿಸಿಲ್ಲ? ಭರತನಿಗಿನ್ನ ಅವನೇ ತನ್ನನ್ನು ಹೆಚ್ಚು ಗೌರವಿಸುತ್ತಾನೆಂದು ಎಷ್ಟು ಬಾರಿ ಹೇಳಿಲ್ಲ? ಅವಳಿಗೆ ರಾಮನ ಬಗ್ಗೆ ಇದ್ದ ಅವಿಚ್ಛಿನ್ನ ಪ್ರೀತಿ ಮಮತೆ ಎಲ್ಲಾ ಎಲ್ಲಿ ಹೋಯಿತೀಗ? ಗುಲಾಬಿ ಕೆಂಡವಾಗುವುದೆಂದರೇನು? ಹುಲ್ಲು ಹಾಸು ಬಂಡೆ ಬೀಡಾಗುವುದೆಂದರೇನು? ಬೆಳಿಗ್ಗೆ ನಾನೇ ರಾಮನನ್ನು ಕರೆಸಿ, ಪಟ್ಟ ಕಟ್ಟುವುದಾಗಿ ಹೇಳಿಬಿಟ್ಟೆ. ಸಭೆಯಲ್ಲಿ ಘೋಷಿಸಿಬಿಟ್ಟೆ. ಅತ್ತ ಅವನಿಗೂ ಮಾತು ಕೊಟ್ಟಂತೇ ಈ ಕಡೆ ಇವಳಿಗೂ ಭಾಷೆ ಕೊಟ್ಟುಬಿಟ್ಟೆ. ಏನು ಮಾಡಲಿ? ಅಯ್ಯೋ! ರಾಮನನ್ನು ಕಾಡಿಗೆ ಕಳಿಸುವುದೇ?’ ನೆನೆಸಿಕೊಂಡೇ ಅಳು ಬಂದುಬಿಟ್ಟಿತು. (ವಯಸ್ಸಾಗುತ್ತ ಆಗುತ್ತ ನಾವು ದುರ್ಬಲರಾಗುತ್ತ ಹೋದಹಾಗೆ, ಕೊಂಚ ಕಷ್ಟವನ್ನೂ ಸಹಿಸಿಕೊಳ್ಳಲಾಗುವುದಿಲ್ಲ! ಮುದಿತನ ಬಂದಿತೋ, ಕಣ್ಣಲ್ಲಿ ನೀರು ಕಾದಿರುತ್ತದೆ ಕಾರಲು! -ಲೇಖಕರು) ಮುಂದೇನು ಗತಿ ? ತಪ್ಪಿಸಿಕೊಳ್ಳಲು ಯಾವುದಾದರೂ ಮಾರ್ಗವಿದೆಯೆ? ದಶರಥನಿಗೆ ಮಾರ್ಗವೇ ತೊಚುತ್ತಿಲ್ಲ. ದೈನ್ಯದಿಂದ ಅಂಗಲಾಚಿತೊಡಗಿದ. "ಕೈಕೆ, ನಾನು ಮುದುಕ. ಸಾವಿನ ಹತ್ತಿರ ಬಂದಿದ್ದೇನೆ. ತಪಸ್ವಿಯಂತೆ ಬದುಕಿದ್ದೇನೆ. ನನ್ನ ದೈನ್ಯವನ್ನಾದರೂ ನೋಡಿ ನಿನಗೆ ಕರುಣೆ ಬಾರದೆ? ಇಡೀ ಭೂಮಂಡಲದಲ್ಲಿ ನೀನೇನು ಬಯಸುವೆಯೋ ಅದೇನಿದ್ದರೂ ತಂದುಕೊಡುವೆ; ರಾಮನನ್ನು ಕಾಡಿಗೆ ಕಳಿಸೆಂದು ಮಾತ್ರ ಹೇಳಬೇಡ. ನಿನ್ನ ಕಾಲು ಹಿಡಿದುಕೊಳ್ಳುತ್ತೇನೆ; ರಾಮನನ್ನು ಅನುಗ್ರಹಿಸು. ಅವನನ್ನು ಕಾಡಿಗೆ ಅಟ್ಟಿ ನಾನು ಅಧರ್ಮಿಯಾಗುವಂತೆ ಮಾಡಬೇಡ. 
(ಮಮ ವೃದ್ಧಸ್ಯ ಕೈಕೇಯಿ ಗತಾಂತಸ್ಯ ತಪಸ್ವಿನಃ
ದೀನಂ ಲಾಲಪ್ಯಮಾನಸ್ಯ ಕಾರುಣ್ಯಂ ಕರ್ತುಮರ್ಹಸಿ
ಪೃಥಿವ್ಯಾಂ ಸಾಗರಾಂತಾಯಾಂ ಯತ್ ಕಿಂಚಿತ್ ಅಧಿಗಮ್ಯತೇ
ತತ್ ಸರ್ವಂ ತವ ದಾಸ್ಯಾಮಿ ಮಾ ಚ ತ್ವಾಂ ಮನ್ಯುರಾವಿಶೇತ್
ಅಂಜಲಿಂ ಕುರ್ಮಿ ಕೈಕೇಯಿ ಪಾದೌಚಾಪಿ ಸ್ಪೃಶಾಮಿ ತೇ
ಶರಣಂ ಭವ ರಾಮಸ್ಯ ಮಾಧರ್ಮ ಮಾಂ ಇಹ ಸ್ಪೃಶೇತ್ ) 
ರುದ್ರೆಯಾಗಿಬಿಟ್ಟಳು ಕೈಕೆ. ಮುದಿಯನ ಮೂತಿ ತಿವಿದು ಬೆಂಕಿ ಕಾರಿಬಿಟ್ಟಳು. " ಮಾತು ಕೊಟ್ಟು ಈಗ ಒದ್ದಾಡ್ತಾ ಇದೀಯ. ಊರಲ್ಲಿ ಹೇಗೆ ನಿನ್ನನ್ನ ಧಾರ್ಮಿಕ ಅಂತ ಕರೆಸಿಕೊಳ್ತೀ? ಕೈಕೆಗೆ ಕೊಟ್ಟ ವರದಂತೆ ನಡಕೊಂಡೆಯಾ ಅಂತ ಬೇರೆ ರಾಜರು ಕೇಳಿದರೆ, "ಅವಳು ನನ್ನನ್ನ ರಣರಂಗದಲ್ಲಿ ರಕ್ಷಿಸಿದಳು. ನಾನು ಮಾತ್ರ ಅವಳಿಗೆ ಮಾತು ಕೊಟ್ಟು ತಪ್ಪಿದೆ. ಅವಳ ಹಂಗಿನಲ್ಲಿದ್ದೀನಿ "ಅಂತ ಹೇಳ್ತೀಯ? ಶಿಬಿರಾಜ ತನ್ನ ದೇಹಾನೇ ಕತ್ತರಿಸಿಕೊಟ್ಟು ಮಾತು ಉಳಿಸಿಕೊಂಡ. ನಿನ್ನ ವಂಶದ ರಾಜ ಅಲರ್ಕ ಕಣ್ಣುಗಳನ್ನೇ ದಾನ ಮಾಡಿದ. ಧರ್ಮವನ್ನು ಬಿಟ್ಟು ಮಾತಿಗೆ ತಪ್ಪಿ, ರಾಮನಿಗೆ ಪಟ್ಟ ಕಟ್ಟಿ ಕೌಸಲ್ಯೆ ಜೊತೆಗೆ ಮಜಾ ಮಾಡ್ಬೇಕು ಅಂತ ಇದೀಯಾ? ನಾನು ಕೇಳಿದ್ದು ಧರ್ಮಾನೋ ಅಧರ್ಮಾನೋ, ಸತ್ಯವೋ ಸುಳ್ಳೋ ಅದು ಮುಖ್ಯ ಅಲ್ಲ. ನೀನು ಕೊಟ್ಟ ಮಾತು ಉಳಿಸಿಕೊಳ್ತೀಯೋ ಇಲ್ವೋ; ಅಷ್ಟೇ ಮುಖ್ಯ. ರಾಮನಿಗೆ ಪಟ್ಟ ಕಟ್ಟಿದೆಯೋ, ನಿನ್ನ ಮುಂದೆ ನಾನು ವಿಷ ಕುಡಿದು ಸಾಯ್ತೀನಿ. " 
(ಯದಿದತ್ವಾ ವರೌ ರಾಜನ್ ಪುನಃ ಪ್ರತ್ಯನುತಪ್ಯತೇ
ಧಾರ್ಮಿಕತ್ವಂ ಕಥಂ ವೀರ ಪೃಥಿವ್ಯಾಂ ಕಥಮಿಷ್ಯಸಿ
ಯದಾ ಸಮೇತಾ ಬಹವಸ್ತ್ವಯಾ ರಾಜರ್ಷಯಃ ಸಹ
ಕಥಯಿಷ್ಯಂತಿ ಧರ್ಮಙ್ಞ ತತ್ರ ಕಿಂ ಪ್ರತಿವಕ್ಷ್ಯಸಿ
ಯಸ್ಯಾಃ ಪ್ರಸಾದೇ ಜೀವಾಮಿ ಯಾ ಚ ಮಾಮಭ್ಯಪಾಲಯತ್
ತಸ್ಯಾಃ ಕೃತಂ ಮಯಾ ಮಿಥ್ಯಾ ಕೈಕೇಯ್ಯಾ ಇತಿ ವಕ್ಷಸಿ
ಶೈಬ್ಯಃ ಶೈನ ಕಪೋತಿಯೇ ಸ್ವ ಮಾಂಸಂ ಪಕ್ಷೀ ದದೌ
ಅಲರ್ಕಶ್ಚಕ್ಷುಷಿ ದತ್ವಾ ಜಗಾಮ ಗತಿ ಉತ್ತಮಂ
ಸತ್ವಂ ಧರ್ಮಂ ಪರಿತ್ಯಜ್ಯ ರಾಮಂ ರಾಜ್ಯೇ ಅಭಿಷಿಚ್ಯಚ
ಸಹ ಕೌಸಲ್ಯಯಾ ನಿತ್ಯಂ ರಂತುಂ ಇಚ್ಛಿಸಿ ದುರ್ಮತೇ 
ಭವತ್ವಧರ್ಮೋ ಧರ್ಮೋವಾ ಸತ್ಯಂ ವಾ ಯದಿವಾ ಅನೃತಂ
ಯತ್ ತ್ವಯಾ ಸಂಶ್ರುತಂ ಮಹ್ಯಂ ತಸ್ಯ ನಾಸ್ತಿ ವ್ಯತಿಕ್ರಮಃ
ಅಹಂ ಹಿ ವಿಷಮದ್ಯೈವ ಪೀತ್ವಾ ಬಹುತಾವಗ್ರತಃ
ಪಶ್ಯತಸ್ತೇಮರಿಷ್ಯಾಮಿ ರಾಮೋ ಯದ್ಯಭಿಷಿಚ್ಯತೇ )
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com