ಹಾವು-ಏಣಿಯ ಹೂಡಿಕೆಯಾಟ, ಸೋತರು ಕಲಿಯದ ಪಾಠ!

ಜಗತ್ತಿನಲ್ಲಿ ಹಲವು 'ಇಸಂ' ಗಳಿಗೆ ಪರ ವಿರೋಧ ನಿತ್ಯ ಹೊಡೆದಾಟ ನಡೆಸುತ್ತಲೇ ಬಂದಿದ್ದೇವೆ, ಹುಟ್ಟಿದ ಮರುಕ್ಷಣ ನಿಮಗೊಂದು ಹೆಸರು ಕೊಡುತ್ತಾರೆ, ಜಾತಿ, ಭಾಷೆ, ದೇಶದ ಹಣೆಪಟ್ಟಿ ಕೂಡ ನಿಮ್ಮ ಒಪ್ಪಿಗೆ ಇಲ್ಲದೆ...
ಹೂಡಿಕೆ
ಹೂಡಿಕೆ
ಜಗತ್ತಿನಲ್ಲಿ ಹಲವು 'ಇಸಂ' ಗಳಿಗೆ ಪರ ವಿರೋಧ ನಿತ್ಯ ಹೊಡೆದಾಟ ನಡೆಸುತ್ತಲೇ ಬಂದಿದ್ದೇವೆ, ಹುಟ್ಟಿದ ಮರುಕ್ಷಣ ನಿಮಗೊಂದು ಹೆಸರು ಕೊಡುತ್ತಾರೆ, ಜಾತಿ, ಭಾಷೆ, ದೇಶದ ಹಣೆಪಟ್ಟಿ ಕೂಡ ನಿಮ್ಮ ಒಪ್ಪಿಗೆ ಇಲ್ಲದೆ ನಿಮಗೆ ಸಂದಾಯವಾಗಿ ಬಿಡುತ್ತದೆ. ಹುಟ್ಟಿದಾರಭ್ಯ ಸಾಯುವ ತನಕ ಇವುಗಳನ್ನು ತನ್ನದೆಂದು ಅದನ್ನು ಕಾಯ್ದಿಡಲು ಜಗತ್ತಿನ 99ಕ್ಕೂ ಹೆಚ್ಚು ಜನ ಬದುಕುತ್ತಾರೆ. ಬದುಕ ಬೇಕು ಅದು ಈ ಜಗದ ಅಲಿಖಿತ  ನಿಯಮ. ಹೀಗೆ 99 ಭಾಗ ಜನತೆಯನ್ನ ಕುರಿಯಂತೆ ಒಂದು ಕಡೆ ಕೂಡಿ ಹಾಕಿ ನೆಡೆಸಿಕೊಂಡು ಹೋಗುವುದು ಸುಲುಭದ ಕೆಲಸವಲ್ಲ. ಇವರೆಲ್ಲ ಜೀವವಿರುವ ವಸ್ತುಗಳು!!
ಹೌದು ನಮ್ಮನ್ನಾಳುವರ ದೃಷ್ಟಿಯಲ್ಲಿ ನಾವೆಲ್ಲಾ ಲೈವ್ ಸ್ಟಾಕ್ ಗಳು. ಇವು ಚಿಂತಿಸಲು ಶುರುಮಾಡಿದರೆ ಕೆಲಸ ಕೆಡುತ್ತದೆ. ಆಳುವವರಿಗೆ ಕಷ್ಟವಾಗುತ್ತದೆ. ಹೀಗಾಗಿ ಅವರು ಕೆಲವೊಂದು ನಿಯಮಗಳನ್ನ ಹುಟ್ಟಿಹಾಕಿದ್ದಾರೆ. ಆ ನಿಯಮಗಳು ಯಾವಾಗಲೂ ಅವರಿಗೆ ಸಹಾಯಕವಾಗೇ ಇರುತ್ತವೆ. ಅಲ್ಪಸ್ವಲ್ಪ ಈ ನಿಯಮಗಳ ಅರ್ಥ ಮಾಡಿಕೊಂಡವರು ಸುಖವಾಗಿ ಜೀವನ ನೆಡೆಸಬಹದು. ಅವರ ಮಟ್ಟಕ್ಕೆ ಏರಲು ಆಗದಿದ್ದರೂ ಬದುಕನ್ನ ಸರಾಗವಾಗಿ ನೆಡೆಸಿಕೊಂಡು ಹೋಗಲು ಅಡ್ಡಿಯಿರುವುದಿಲ್ಲ. ಇವರ ನಿಯಮಗಳೇನು? ಅದಕ್ಕೆ ನಾವೇನು ಮಾಡಬೇಕು? ಎನ್ನುವುದ ತಿಳಿದು ಕೊಂಡರೆ ಕನಿಷ್ಠ ಅವರು ಬೀಸಿದ ಬಲೆಗೆ ಬೀಳದೆ ಇರಲು ಸಹಾಯಕವಾಗುತ್ತದೆ. 
ಅವರ ನಿಯಮಗಳು: 
ಜನರನ್ನ ವಿಭಜಿಸುವುದು: ಜನರನ್ನ ಬಣ್ಣ, ಜಾತಿ, ಧರ್ಮ, ದೇಶ, ಭಾಷೆ, ಲಿಂಗ, ಅಭಿರುಚಿಗೆ ತಕ್ಕಂತೆ ವಿಭಜಿಸುವುದು. ಸಾಕಷ್ಟು ಜನ ಒಂದೇ ವಿಷಯ ಕುರಿತು ಒಗ್ಗಾಟಾಗಲು/ ಮಾತಾಡಲು ಬಿಡದೆ ಇರುವುದು ಇವರ ತಂತ್ರ. ನಾವೆಲ್ಲಾ ಒಂದೇ ಎಂದಾಗ ನಮ್ಮ ಸಂಖ್ಯೆ ಬಹಳ ಹೆಚ್ಚು. ಅವರ ತಾಳಕ್ಕೆ ತಕ್ಕಂತೆ ನಾವು ಬೇರ್ಪಟ್ಟಷ್ಟೂ ನಮ್ಮನ್ನ ಕಂಟ್ರೋಲ್ ಮಾಡುವುದು ಅವರಿಗೆ ಸುಲಭ. ಹೀಗೆ ಸಣ್ಣ ಗ್ರೂಪ್ ಗಳನ್ನ ಮತ್ತಷ್ಟು ಒಡೆಯುವುದು ಮತ್ತು ತಮಗೆ ಬೇಕಾದ ನಾಯಕನನ್ನ ಕೂರಿಸಿ ತಮ್ಮ ಕೆಲಸ ಸಾಧಿಸಿಕೊಳ್ಳುವುದು ಅವರ ಹುನ್ನಾರ. ನೋಡಿ ನಮ್ಮಲ್ಲಿ ಶುರುವಾಗಿರುವ ಐಪಿಎಲ್ ಇದಕ್ಕೆ ಉತ್ತಮ ಉದಾಹರಣೆ. ಭಾಷೆ ಅಥವಾ ನಗರದ ಆಧಾರದ ಮೇಲೆ ಇಲ್ಲಿ ಜನ ಯಾವ ಮಟ್ಟಿಗೆ ಡಿವೈಡ್ ಆಗಿದ್ದಾರೆ ಎನ್ನುವುದು ನಿಮಗೆಲ್ಲಾ ಗೊತ್ತಿದೆ. ಇದರಿಂದ ನಿಮಗೇನು ಲಾಭ ಬಂತು? ಅವರ ಬಿಸಿನೆಸ್ ಫಾರ್ಮ್ಯಾಟ್ ಅದೇ ಜನರ ಭಾವನೆ ಕೆರಳಿಸಿ ಅವರನ್ನ ಡಿವೈಡ್ ಮಾಡಿ ಹಣ ಮಾಡುವುದು. ಸೂಕ್ಷ್ಮವಾಗಿ ನೋಡಿ ವರ್ಷದಿಂದ ವರ್ಷಕ್ಕೆ ಪುಣೆಯ ಟೀಮ್ ನಲ್ಲಿ ಮರಾಠಿ ಇರುವುದಿಲ್ಲ ಆರ್ಸಿಬಿ ಯಲ್ಲಿ ಕನ್ನಡಿಗರಿರುವುದಿಲ್ಲ ಆದರೂ ನೀವು ನಿಮ್ಮ ಟೀಮ್ ಗಾಗಿ ಹೊಡೆದಾಡುತ್ತಿರಿ. ಇದೊಂದು ಸಣ್ಣ ಉದಾಹರಣೆ ನಿಮ್ಮ ಜೀವನದ ಪ್ರತಿ ಹಂತವನ್ನೂ ನಿಮ್ಮ ಭಾವನೆಯಿಂದ 'ಅವರು' ಕಂಟ್ರೋಲ್ ಮಾಡುತ್ತಿದ್ದಾರೆ. 
ಹಣಕಾಸು ಕಟ್ಟುಪಾಡು: ವಿಭಜನೆಯ ಪಾಶಕ್ಕೆ ಸಿಕ್ಕವರನ್ನೂ ಇಲ್ಲಿಯೂ ಮತ್ತೆ  ಹಣಿಯಲಾಗುತ್ತದೆ.  ಕೆಲವೊಮ್ಮೆ ಬಹಳಷ್ಟು ಜನ ಈ ವಿಭಜನೆಯ ಮಂತ್ರಕ್ಕೆ ಮರುಳಾಗುವುದಿಲ್ಲ. ಅಂತವರನ್ನ ಇಲ್ಲಿ ಹಿಡಿಯಲಾಗುತ್ತದೆ. ವೇತನ, ಖರ್ಚು, ಉಳಿತಾಯ ಮತ್ತು ಹೂಡಿಕೆಗಳ ನಡುವೆ ಗಿರಕಿ ಹೊಡೆದು ಸುಸ್ತಾಗುವಂತೆ ಮಾಡುವುದು ಇವರ ಪ್ಲಾನ್. ಉದಾಹರಣೆ ನೋಡಿ 2009 ರಲ್ಲಿ ಯೂರೋಪ್ ಆರ್ಥಿಕವಾಗಿ ಬಹಳಷ್ಟು ಕುಸಿಯಿತು. ಅಮೇರಿಕಾ ದೇಶದ ಕುಸಿತದ ಅಲೆ ಎರಡು ವರ್ಷದ ನಂತರ ಅಪ್ಪಳಿಸಿದ್ದು ಯೂರೋಪಿಗೆ. ಜನ ತಾವು ಕೊಂಡ ಮನೆಯ ಕಂತು ಕಟ್ಟಲಾಗದೆ ಅದನ್ನ ಬ್ಯಾಂಕಿಗೆ ವಾಪಸ್ಸು ಮಾಡಿದ ಉದಾಹರಣೆ ಸಾವಿರಾರು. ಹೀಗೆ ಬ್ಯಾಂಕಿನಲ್ಲಿ ಪಾವತಿಸಲಾಗದೆ ಉಳಿದ ಮನೆಗಳನ್ನ ಮಾರ್ಕೆಟ್ ವ್ಯಾಲ್ಯೂಗೆ ಹರಾಜು ಹಾಕಿ ಬಂದ ಹಣವನ್ನ ಬ್ಯಾಂಕು ತೆಗೆದುಕೊಂಡಿದೆ. ಆಗೆಲ್ಲಾ ಕಡಿಮೆ ಬೆಲೆಗೆ ಮನೆಯನ್ನ ಕೊಂಡ ಹೂಡಿಕೆದಾರರು ಮತ್ತೆ ಈಗ ಹೊಸ ಹೂಡಿಕೆ ಆಟಕ್ಕೆ ಸಜ್ಜಾಗುತ್ತಿದ್ದಾರೆ. ಮಾರುಕಟ್ಟೆ ಉತ್ತಮ ಗೊಂಡಿದೆ, ಕ್ರೈಸಿಸ್ ಮುಗಿಯಿತು ಎನ್ನುವುದನ್ನ ಜನರ ಮನದಲ್ಲಿ ತುಂಬುವುದು ಮಾಡಿಯಾಗಿದೆ. ಈಗ ಮತ್ತೆ ಹೊಸದಾಗಿ ಸಾಲ ಬ್ಯಾಂಕು ಕೊಡಲು ಶುರು ಮಾಡುತ್ತದೆ. ನಿಧಾನವಾಗಿ ಮತ್ತೆ ಮನೆಗಳ ಮೌಲ್ಯ ಆಕಾಶ ಮುಟ್ಟಲು ಶುರುವಾಗುತ್ತೆ. ಜನ ಇಂತಹ ಒಂದು ಅವಕಾಶದಿಂದ ವಂಚಿತರಾದರೆ ಗತಿಯೇನು? ಎನ್ನುವ ನಿರ್ಧಾರಕ್ಕೆ ಬರಲು ಅವರನ್ನ, ಅವರ ಭಾವನೆಯನ್ನೇ ಬಳಸಲಾಗುತ್ತದೆ. ಮತ್ತೆ ಡೆಟ್ ಟ್ರ್ಯಾಪ್ ನಲ್ಲಿ ಅವರು ಸಿಲುಕುತ್ತಾರೆ. ಕಳೆದ ವರ್ಷ ಅಂದರೆ ಮೇ 2017 ರಿಂದ ಈ ವರ್ಷ 2018 ಮೇ ವರೆಗೆ ಯೂರೋಪಿನಲ್ಲಿ ಮನೆಗಳ ಬೆಲೆ ಹತ್ತಿರತ್ತಿರ 5 ಪ್ರತಿಶತ ಹೆಚ್ಚಾಗಿರುವುದು ಇದಕ್ಕೆ ಸಾಕ್ಷಿ. 
ಗಮನಿಸಿ ನೀವು ಬ್ಯಾಂಕ್ ಬೇರೆಯವರು ಇಟ್ಟಿರುವ ಹಣವನ್ನ ನಿಮಗೆ ಸಾಲದ ರೂಪದಲ್ಲಿ ಕೊಡುತ್ತದೆ ಎಂದುಕೊಂಡಿದ್ದರೆ ಅದು ತಪ್ಪು. ನಾವಿರುವುದು ಡಿಜಿಟಲ್ ಯುಗದಲ್ಲಿ! ನೀವು ಬ್ಯಾಂಕಿನ ಬಳಿ ಹೋಗುತ್ತೀರಿ, ಲಕ್ಷ ರೂಪಾಯಿ ಹಣ ಸಾಲ ಕೇಳುತ್ತೀರಿ. ಬ್ಯಾಂಕು ಒಪ್ಪಿಗೆ ಕೊಟ್ಟು ನಿಮ್ಮ ಅಕೌಂಟ್ ನಲ್ಲಿ ಒಂದು ಲಕ್ಷ ಹಣವಿದೆ ಎಂದು ಒಂದು ಎಂಟ್ರಿ ಪಾಸ್ ಮಾಡುತ್ತದೆ. ನಿಮ್ಮ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಲಕ್ಷ ಅಂತ ತೋರಿಸುತ್ತೆ. ಹೌದು ನಮ್ಮ ಇಂದಿನ ಹಣ ಗಾಳಿಯಲ್ಲಿ ಸೃಷ್ಟಿಯಾಗುತ್ತದೆ. ಹೀಗೆ ನಿಮ್ಮ ಅಕೌಂಟ್ ನಲ್ಲಿ ತೋರಿಸಿದ ಹಣವನ್ನ ನೀವು ಖರ್ಚು ಮಾಡಿ ಬೇಕಾದ್ದನ್ನು ಪಡೆಯುತ್ತೀರಿ. ಮುಂದಿನ ದಿನಗಳ ಆ ಹಣವನ್ನ ವಾಪಸ್ಸು ಮಾಡಲು ಕೆಲಸ ಮಾಡುತ್ತೀರಿ. ಇಲ್ಲಿ ಎರಡು ಅಂಶಗಳನ್ನ ಗಮನಿಸಿ. ಮೊದಲನೆಯದು ಇಲ್ಲಿ ಬ್ಯಾಂಕು ಇಲ್ಲದ ಹಣವನ್ನ ಸೃಷ್ಟಿಸಿದೆ. ಅಂದರೆ ನಾಳಿನ ಹಣದ ಮೌಲ್ಯವನ್ನ ಇಂದಿಗೆ ತಂದಿದೆ. ನೀವು ಮುಂದಿನ ಐದೋ ಹತ್ತೋ ವರ್ಷ ಕಂತನ್ನ ಸರಿಯಾಗಿ ಕಟ್ಟಿದರಷ್ಟೇ ಆ ಹಣ ಉತ್ಪತ್ತಿಯಾಗುವುದು ಅಲ್ಲಿಯವರೆಗೆ ಆ ಹಣ ಕೆಲವ ಗಾಳಿಯಲ್ಲಿ ಸೃಷ್ಟಿಯಾದ ಹಣ.! ಎರಡನೆಯದಾಗಿ ನೀವು ಮುಂದಿನ ಐದೋ ಹತ್ತೋ ವರ್ಷ ಯಾವುದೇ ಹೊಸ ಅವಕಾಶಕ್ಕೆ ಕೈ ಹಾಕದ ಹಾಗೆ ಇಲ್ಲಿ ಕಟ್ಟಿ ಹಾಕಲ್ಪಟ್ಟಿರಿ. ನೀವೇ ಖುಷಿಯಾಗಿ ಕೊಂಡ ನಿಮ್ಮ ಕಾರು ಅಥವಾ ನಿಮ್ಮ ಮನೆ ನಿಮ್ಮ ಕೊರಳಿಗೆ ಕುಣಿಕೆ. 
ಕ್ರೈಸಿಸ್ ಏಕೆ ಉಂಟಾಗುತ್ತದೆ ಗೊತ್ತೇ? ನಾಳಿನ ಮೌಲ್ಯವನ್ನ ಇಂದೇ ಬಳಸಿಬಿಟ್ಟರೆ ಆಕಸ್ಮಾತ್ ಮೌಲ್ಯ ವನ್ನ ಇಂದು ಸಾಲದ ರೂಪದಲ್ಲಿ ಪಡೆದ ಜನ ವಾಪಸ್ಸು ಕೊಡಲು ಅಂದರೆ ಕಂತು ಕಟ್ಟಲು ವಿಮುಖರಾದರೆ ಈ ಕ್ರೈಸಿಸ್ ಉಗಮವಾಗುತ್ತದೆ. ಕೊನೆಗೂ ಈ ಆಟವನ್ನ ಹುಟ್ಟಿಹಾಕಿದವರಿಗೆ ನಷ್ಟವಂತೂ ಇಲ್ಲ ಏಕೆಂದರೆ ಸರಕಾರ ಸಮಾಜದ ನಂಬಿಕೆ ಉಳಿಸಿಕೊಳ್ಳಲು ಬೈಲ್ ಔಟ್ ಮೂಲಕ ಬ್ಯಾಂಕಿಗೆ ಹಣ ತುಂಬುತ್ತದೆ. 
ಯಾರು ಈ ರೀತಿಯ ವ್ಯವಸ್ಥೆಯ ಹರಿಕಾರರು ? 
ಏಳನೇ ಶತಮಾನದಲ್ಲಿ ಚೀನಾ ದೇಶವನ್ನ ಆಳಿದ ಟಾಂಗ್ ಮನೆತನ (tang dynasty )ದ ಅವಧಿಯಲ್ಲಿ ಈ ರೀತಿಯ ಒಂದು ವ್ಯವಸ್ಥೆ ಜಾರಿಗೆ ಬಂದಿತು. ಶ್ರೀಮಂತ ವರ್ತಕರು ವ್ಯಾಪಾರ ವಹಿವಾಟು ಸರಾಗವಾಗಿ ಆಗಲು 'ಮುಚ್ಚಳಿಕೆ ಪತ್ರ' ಅಥವಾ ಪ್ರಾಮಿಸರಿ ನೋಟ್ ಬರೆದು ಕೊಡಲು ಶುರು ಮಾಡಿದರು. ಅವು ಖಾಸಗಿ ವ್ಯಕ್ತಿಗಳು ಬರೆದು ಕೊಟ್ಟ ಮುಚ್ಚಳಿಕೆ ಪಾತ್ರವಾಗಿತ್ತು. ಅಂದಿನ ದಿನಗಳಲ್ಲಿ ಹಲವು ಶ್ರೀಮಂತ ವರ್ತಕರು ಈ ರೀತಿಯ ಪತ್ರಗಳನ್ನ ನೀಡುತಿದ್ದರು. ಟಾಂಗ್ ಮನೆತನ ಅಧಿಕೃತವಾಗಿ ಇಂತಹ ಪತ್ರಗಳನ್ನ ಚಲಾವಣೆ ಕೂಡ ತಂದಿತ್ತು. 
ಈ ರೀತಿಯ ವ್ಯವಸ್ಥೆ ಅಭಾದಿತವಾಗಿ 5೦೦ ವರ್ಷ ನೆಡದಕ್ಕೆ ಇತಿಹಾಸ ಸಾಕ್ಷಿ. ನಂತರದ ದಿನಗಳಲ್ಲಿ ವ್ಯವಸ್ಥೆ ಕುಸಿಯಲು ಮನಷ್ಯನ ಲೋಭ, ಕಡಿಮೆಯಲ್ಲಿ ಹೆಚ್ಚು ಪಡೆಯುವ ಹಪಹಪಿಕೆ ಕೆಲಸ ಮಾಡುತ್ತದೆ. ತನ್ನಲ್ಲಿರುವ ಲೋಹದ  (ಚಿನ್ನ) ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯದ ಪತ್ರಗಳ ವಿತರಣೆ  ಜಗತ್ತಿನ ಮೊಟ್ಟ ಮೊದಲ ಇನ್ಫ್ಲೇಶನ್  (ಹಣದುಬ್ಬರ) ಸೃಷ್ಟಿ ಮಾಡುತ್ತೆ. ಚೀನಾ ಜಗತ್ತಿನ ಪ್ರಥಮ ಆರ್ಥಿಕ ಕುಸಿತಕ್ಕೂ ಸಾಕ್ಷಿ ಆಗುತ್ತದೆ. 
ಇವರು ತೋರಿದ ದಾರಿಯಲ್ಲಿ ನೆಡೆದ ಅಮೇರಿಕಾ ಮತ್ತು ಯೂರೋಪ್ ನ ಹೂಡಿಕೆದಾರರು ವಿತ್ತ ಜಗತ್ತನ್ನ 17 ನೇ ಶತಮಾನದಿಂದ ಇಂದಿನವರೆಗೆ ಆಳುತ್ತಲೇ ಬಂದಿದ್ದಾರೆ. ಎಲ್ಲಕ್ಕೂ ಹೆಚ್ಚು ಕೌತುಕದ ವಿಚಾರವೆಂದರೆ ಜನ ನಿನ್ನೆ ಮೋಸಕ್ಕೆ ಒಳಗಾದುದನ್ನ ಮರೆತು ಇಂದು ಮತ್ತೆ ಅದೇ ಮೋಸದ ಜಾಲಕ್ಕೆ ಬೀಳಲು ರೆಡಿಯಾಗುವುದು. ಕೇವಲ ಒಂದು ದಶಕದ ಹಿಂದೆ ಇಲ್ಲಿನ (ಯೂರೋಪಿನ) ಮನೆಗಳ ಮೌಲ್ಯ ಕುಸಿದು ಮಾರುಕಟ್ಟೆ ದಿವಾಳಿಯ ಅಂಚಿಗೆ ಬಂದದ್ದ ಕಣ್ಣಾರೆ ನೋಡಿದ ಅನುಭವ ನನ್ನದು. ಈಗ ಮತ್ತೆ ಕುಸಿದ ಮೌಲ್ಯದ ಮನೆಗಳ ಹೊಸ ಬೆಲೆಗೆ ಕೊಳ್ಳಲು ಹೊಸ ಹುರುಪಿನೊಂದಿಗೆ ಜನ ಸಿದ್ಧರಾಗುತ್ತಿದ್ದಾರೆ. ಅದನ್ನೂ ನೋಡುತ್ತಿದ್ದೇನೆ. ಮೊದಲು ಕೊಳ್ಳುವರು ಒಂದಷ್ಟು ಹಣ ಮಾಡುತ್ತಾರೆ. ನಂತರ ಕೊಳ್ಳುವವರು ಮತ್ತೆ ಕಳೆದುಕೊಳ್ಳುವರ ಸಾಲಿಗೆ ಸೇರುತ್ತಾರೆ. ಹೀಗಾಗಿ ಎಲ್ಲರೂ ಮೊದಲಿಗರಾಗಲು ಮತ್ತೆ ಕ್ಯೂ ಶುರುವಾಗಿದೆ!!. ಹೀಗಾಗಿ ಯೂರೋಪಿನಲ್ಲಿ ಮನೆಗಳ ಬೆಲೆ ಏರುಗತಿಯಲ್ಲಿದೆ.  ಚರಿತ್ರೆಯಿಂದ ಮತ್ತು ತನ್ನ ಹಿಂದಿನ ತಪ್ಪಿನಿಂದ ಒಂದಷ್ಟೂ ಕಲಿಯದೇ ಮೀನಿನ ನೆನಪಿನ ಜನ ಸಾಮಾನ್ಯನಿರುವವರೆಗೆ ಇವೆಲ್ಲವೂ ಪ್ರತಿ ಹತ್ತರಿಂದ ಹದಿನೈದು ವರ್ಷ ಮರುಕುಳಿಸುತ್ತಲೇ ಇರುತ್ತದೆ. ನೀವೀಗ ಕೇಳಬಹದು ನಮ್ಮ ಬಳಿ ಪರ್ಯಾಯ ವೇನಿದೆ ? ಜಗತ್ತು ಮತ್ತು ಅಲ್ಲಿನ ಬಹು ಜನರು ಮಾಡಿದ್ದ ಮಾಡದೆ ಇರಲು ಮಾನಸಿಕವಾಗಿ ದೃಢತೆ ಬೇಕು. ಆ ದೃಢತೆ ಬೆಳಸಿಕೊಂಡರೆ ಉಳಿದದ್ದು ತಾನಾಗೇ ಸಿಗುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com