ಸತಿ ಸಹಗಮನ, ವಿಧವಾ ಪುನರ್ ವಿವಾಹದ ಬಗ್ಗೆ ರಾಮರ ನಿಲುವೇನಿತ್ತು ಗೊತ್ತೇ?

ಜನರಿಗೆ ಅವುಗಳ ಅಧ್ಯಯನ ಕಡಿಮೆಯಾಗುತ್ತ ಈ ಧರ್ಮಶಾಸ್ತ್ರಗಳು ದೂರಾದವು. ಹೀಗಾಗಿ ಹಲವಾರು ಸಂದೇಹಗಳು, ಅಪಾರ್ಥಗಳು ಜನರಲ್ಲಿ ಮನೆಮಾಡಿಕೊಂಡಿವೆ. ವಿಧವಾ ವಿವಾಹವನ್ನು ಸಂದೇಹವಾಗಿ....
ಸತಿ ಸಹಗಮನಕ್ಕೆ ವಿರೋಧ, ವಿಧವಾ ಪುನರ್ ವಿವಾಹ ಉತ್ತೇಜಿಸಿದ್ದ ಶ್ರೀರಾಮ!
ಸತಿ ಸಹಗಮನಕ್ಕೆ ವಿರೋಧ, ವಿಧವಾ ಪುನರ್ ವಿವಾಹ ಉತ್ತೇಜಿಸಿದ್ದ ಶ್ರೀರಾಮ!
ಸೀತೆ ಕಳೆದು ಹೋಗಿದ್ದಾಳೆ ರಾಮರ ವರ್ಣನೆ, ವಿವರಣೆಗಳಲ್ಲಿ. ಎಂದೂ ಇಷ್ಟು ಉತ್ಸಾಹದಿಂದ ಗಂಡ ಇದನ್ನೆಲ್ಲ ಮಾತನಾಡಿರಲಿಲ್ಲ! ಕಣ್ಣು ಬಾಯಿಬಿಟ್ಟು ಕೇಳುತ್ತಿದ್ದ ಸೀತೆ ರಾಮರ ಮಾತು ನಿಂತಾಗ ಇಹಕ್ಕೆ ಬಂದಳು. "ಅಬ್ಬಾ! ಏನೆಲ್ಲ ಮಾತನಾಡಿದೆ! ಏನೆಲ್ಲ ಗೊತ್ತಿದೆ ನಿನಗೆ! ಎಂಥ ದೊಡ್ಡ ದೊಡ್ಡ ಕನಸು ಕಟ್ಟುಕೊಂಡಿದ್ದಿ! ನಮ್ಮಂತಹ ಸಾಮಾನ್ಯರಿಗೆ ಈ ವಿಷಯಗಳೂ ಗೊತ್ತಿಲ್ಲ; ಹೀಗೆ ಯೋಚಿಸುವುದಕ್ಕೂ ಆಗುವುದಿಲ್ಲ. "ಶ್ರೀರಾಮರು ಮಾತು ಮುಂದುವರಿಸಿದರು" ನನಗೇನು ಮಹಾ ಗೊತ್ತಿದೆ. ಙ್ಞಾನ ಅಪಾರ. ಅದರಲ್ಲಿನ ಒಂದು ತೊಟ್ಟು ನಾನು ಕುಡಿದಿರಬಹುದಷ್ಟೆ! ಇರಲಿ. ಇನ್ನು ಸಮಾಜಕಲ್ಯಾಣ. "ಓಹ್! ಪತಿಯ ಮಾತು ಇನ್ನೂ ಮುಗಿದಿಲ್ಲ. ಈಗವನು ಮತ್ತೊಂದು ಆಸಕ್ತಿಯ ಬಗ್ಗೆ ಮಾತನಾಡುತ್ತಾನೆ!
"ನಮ್ಮ ಸಮಾಜ ವೇದಗಳ ಮೇಲೆ ನಿಂತಿದೆ. ಅದನ್ನು “ಪ್ರಭು ಸಂಹಿತೆ" ಎನ್ನುತ್ತಾರೆ. ಪ್ರಪಂಚದ ಅತಿ ಪ್ರಾಚೀನ ದಾಖಲಾತಿಗಳು ಅವು. ಬರವಣಿಗೆಯೇ ಇಲ್ಲದೇ ಕೇವಲ ನೆನಪಿನಲ್ಲಿಟ್ಟುಕೊಂಡು ನಮ್ಮ ತನಕ ಬಂದಿವೆ. ಸಾವಿರಾರು ವರ್ಷಗಳ ಕಾಲ ಕೇವಲ ಗುರುಗಳಿಂದ ಶಿಷ್ಯರು, ಈ ಶಿಷ್ಯರು ಗುರುಗಳಾದಾಗ ಆವರ ಶಿಷ್ಯರು, ಅವರು ಗುರುಗಳಾದಾಗ ಅವರ ಶಿಷ್ಯರು.... ಹೀಗೆ ಕೇವಲ ಗುರುವಿನಿಂದ ಶಿಷ್ಯನಿಗೆ ವೇದ ಙ್ಞಾನ ಹರಿದು ಬಂದಿದೆ. ಇದನ್ನು ಆಧರಿಸಿ ಆರು ಶಾಸ್ತ್ರಗಳು ಸೃಷ್ಟಿಯಾದುವು. ಅವನ್ನು ವೇದಾಂಗಗಳೆಂದು ಕರೆದರು. ಅವುಗಳಲ್ಲಿ ಒಂದು "ಕಲ್ಪ" ಎಂಬ ಶಾಸ್ತ್ರ. ಈ ಕಲ್ಪದಲ್ಲಿ ನಾಲ್ಕು ವಿಧದ ಸೂತ್ರಗಳಿವೆ. ಅವುಗಳಲ್ಲಿ ಒಂದು ಧರ್ಮ ಶಾಸ್ತ್ರ. ಇವೇ, ಎಂದರೆ ಈ ಧರ್ಮ ಶಾಸ್ತ್ರಗಳೇ ನಮ್ಮನ್ನಾಳುವ ಕಾನೂನುಗಳು. ಧರ್ಮ ಶಾಸ್ತ್ರಕ್ಕನುಗುಣವಾಗಿಯೇ ನಮ್ಮ ದೈನಂದಿನ ನಡೆವಳಿಕೆ. ನಾವು ಹೇಗೆ ಬದುಕಬೇಕೆಂಬುದಕ್ಕೆ ಹಲವಾರು ಘಟ್ಟಗಳನ್ನು ಆದೇಶಿಸಿದ್ದಾರೆ. ಇವುಗಳಲ್ಲಿ ಸಾಮಾನ್ಯವಾಗಿ ಹದಿನಾರನ್ನು ಷೋಡಷ ಸಂಸ್ಕಾರಗಳೆಂದು ಹೇಳಿದರು. ಅವುಗಳಲ್ಲಿ ಒಂದು ವಿವಾಹ. ಈ ವಿವಾಹ ಪದ್ಧತಿ ಅತ್ಯಂತ ಉತ್ತಮವಾಗಿದೆ. ಸ್ತ್ರೀಯರ ವಿಷಯದಲ್ಲಿ ಬೇರೆಲ್ಲೂ ಇರದ ಮಾನ್ಯತೆಯನ್ನು ಅವರಿಗೆ ಕೊಟ್ಟಿದ್ದಾರೆ. ಆದರೆ ಜನರಿಗೆ ಅವುಗಳ ಅಧ್ಯಯನ ಕಡಿಮೆಯಾಗುತ್ತ ಈ ಧರ್ಮಶಾಸ್ತ್ರಗಳು ದೂರಾದವು. ಹೀಗಾಗಿ ಹಲವಾರು ಸಂದೇಹಗಳು, ಅಪಾರ್ಥಗಳು ಜನರಲ್ಲಿ ಮನೆಮಾಡಿಕೊಂಡಿವೆ. ವಿಧವಾ ವಿವಾಹವನ್ನು ಸಂದೇಹವಾಗಿ ಕಾಣುತ್ತಿದ್ದಾರೆ ನಮ್ಮ ಶಾಸ್ತ್ರಙ್ಞರು. ಇದರ ಬಗ್ಗೆ ಜನರಿಗೆ ತಿಳುವಳಿಕೆ ಕೊಡಬೇಕಾಗಿದೆ!
ಸತೀ ಸಹಗಮನವನ್ನು ವಿರೋಧಿಸಬೇಕಿದೆ. ಗಂಡ ಸತ್ತ ನಂತರ ವಿಧವೆ ಪುನರ್ ವಿವಾಹವಾಗಬಹುದೆಂದು ನಾನು ಸಮರ್ಥಿಸಬೇಕಿದೆ. ನಾನದನ್ನು ಹೊಸದಾಗಿ ಹೇಳುತ್ತಿಲ್ಲ. ಋಗ್ವೇದದಲ್ಲಿಯೇ ಅದಕ್ಕೆ ಒಪ್ಪಿಗೆ ಇದೆ. ಅದನ್ನು ಸಂದರ್ಭ ಬಂದಾಗ ನಾನು ಬೆಂಬಲಿಸಬೇಕಿದೆ. ಒಬ್ಬ ಗಂಡಿಗೆ ಹಲವಾರು ಹೆಂಡಿರಿರುತ್ತಾರೆ. ನಮ್ಮಪ್ಪನನ್ನೇ ನೋಡು; ಮೂರು ನೂರ ಐವತ್ತು ಹೆಂಡತಿಯರಿದ್ದಾರೆ. ಅವರನ್ನೆಲ್ಲ ಸುಖವಾಗಿ ಇಡಲು ಹೇಗೆ ಸಾಧ್ಯ? ಇಬ್ಬರು ಹೆಂಡಿರೊಡನೇ ಅನ್ಯೋನ್ಯವಾಗಿರುವುದು ಕಷ್ಟಸಾಧ್ಯವಾದಾಗ, ಬಹುವಲ್ಲಭೆಯರಿದ್ದರೇನು ಗತಿ? ಗಂಡಿಗೇನೋ ಹಲವು ಹೆಂಡಿರಂತೆ! ಹೆಣ್ಣು ಮಾತ್ರ ಪತಿವ್ರತೆಯಾಗಿರಬೇಕೆಂದು ನಿರೀಕ್ಷಿಸುತ್ತಾರೆ. ಈ ಅನ್ಯಾಯವನ್ನು ಸರಿಪಡಿಸಬೇಕಿದೆ! ಒಟ್ಟಿನಲ್ಲಿ ಸ್ತ್ರೀಯರ ಬಗೆಗಿರುವ ಅತಂತ್ರ ಸ್ಥಿತಿ ಹಾಗೂ ಅಸಮಾನತೆಯನ್ನು ನಾನು ನಿವಾರಿಸಬೇಕಿದೆ. ಇದೇ ನನ್ನ ಗುರಿ..." 
ಓಹ್! ಸೀತೆ ಉಸಿರು ಕಟ್ಟಿ ಕೇಳುತ್ತಿದ್ದಳು. ಗಂಡ ಐದು ನಿಮಿಷಗಳಲ್ಲಿ ತೆಂಗಿನ ಮರದಷ್ಟು ಎತ್ತರ ಬೆಳೆದುಬಿಟ್ಟ! "ನಮಗೆ; ಭಾರತೀಯ ಹೆಣ್ಣುಗಳಿಗೆ ಬುದ್ಧಿ ಬಂದಾಗಿನಿಂದಲೂ ಪಾತಿವ್ರತ್ಯವನ್ನು ಬೋಧಿಸುತ್ತಾರೆ! ಗಂಡ ರೋಗಿ ಇರಲಿ, ಕುರುಡನಿರಲಿ, ಕುಂಟನಿರಲಿ, ಅವನನ್ನೇ "ಪತಿ ಪರಮೇಶ್ವರ" ಎಂದು ಪೂಜಿಸಬೇಕು ಎನ್ನುತ್ತಾರೆ! ಹೆಣ್ಣೇನಾದರೂ ಕೆಟ್ಟ ಗಂಡನನ್ನು ಬಿಟ್ಟು ಮರು ಮದುವೆಯಾದರೆ, ಅವಳಿಗೆ ಕುಲಟೆ, ಗಂಡುಬೀರಿ ಇತ್ಯಾದಿ ಬಿರುದು. ಗಂಡನ ಸೇವೆಯೇ ಹೆಣ್ಣಿನ ಕರ್ತವ್ಯ, ಅವನು ಬಯಸಿದರೆ ಮತ್ತೊಂದು ಹೆಣ್ಣನ್ನು ತಂದೊಪ್ಪಿಸಿದರೆ, ಅಂತಹ ಹೆಂಡತಿ ಪುಣ್ಯವಂತೆ! ಹೆಣ್ಣಿಗೆ ಗಂಡನ ಪೂಜೆ ಅನಿವಾರ್ಯ. ಗಂಡ ಹೆಂಡತಿಯ ಪೂಜೆ ಮಾಡಿದ ಉದಾಹರಣೆಯೇ ಇಲ್ಲ. ಇದೇ ಗಂಡಿನ ದಬ್ಬಾಳಿಕೆ. ಯಾವಾಗಲೂ ಹೆಣ್ಣೇ ತನ್ನ ತೌರುಮನೆ ಬಿಟ್ಟು ಅಪರಿಚಿತ ಗಂಡನ ಪರೀಕ್ಷಾ ಕೋಣೆಗೆ ಉಳಿದ ಜೀವನವಿಡೀ ಕಾಲ ಕಳೆಯಲು ಬರಬೇಕು. ಮನೆಯ ಎಲ್ಲ ಸದಸ್ಯರೊಡನೂ ಅವಳು ಹೊಂದಿಕೊಳ್ಳಲೇಬೇಕು. 
ವೇದಿಕೆಗೆ ಬರುವ ಮುನ್ನ ಹೆಣ್ಣೇ ಗೌರಿ ಪೂಜೆ ಮಾಡಬೇಕು. ಎಂದೂ ಗಂಡನಾಗುವವನು ಒಳ್ಳೆಯ ಹೆಂಡತಿಗಾಗಿ ಪೂಜೆ ಮಾಡುವುದೇ ಇಲ್ಲ! ಹೆಣ್ಣೇ ಗಂಡಿನ ಕಾಲಿಗೆ ಬೀಳಬೇಕು. ಗಂಡ ಹೇಳಿದಂತೆ ಕೇಳಬೇಕು. ಒಂದು ಗಂಡು ಹಲ ಮದುವೆಗಳಾಗಬಹುದಂತೆ! ಯಾವುದೇ ಹೆಣ್ಣಿಗೆ ಸವತಿಗಿನ್ನ ಹೆಚ್ಚಿನ ನರಕವಿಲ್ಲ! ಎಲ್ಲ ಕಷ್ಟಗಳೂ ಹೆಣ್ಣಿಗೇ!! ಇಂತಹ ಸ್ತ್ರೀ ವಿರೋಧಿ ನಿಯಮಗಳು ಸಮಾಜದಲ್ಲಿದ್ದಾಗ ತನ್ನ ಗಂಡ ಮಾತ್ರ ಅನನ್ಯ, ಅಸಾಧಾರಣ! ಎಷ್ಟು ನಿರಾಳವಾಗಿದೆ! ತನಗೆ ಸವತಿಯ ಮೊಗ್ಗಲು ಮುಳ್ಳಿಲ್ಲ!! ತನ್ನ ಗಂಡ ಎಷ್ಟು ಒಳ್ಳೆಯವ!! ಎಂಥ ಸಮಚಿತ್ತ! ಎಂಥ ಸುಮನಸ್ಕ!
ಸೀತೆಗೆ ಮದುವೆಯ ಮೊದಲ ರಾತ್ರಿ ನೆನಪಾಯಿತು. ಶೃಂಗಾರ ಕಾರಣಕ್ಕಲ್ಲ; ಅಂದು  ರಾಮರು ಹೇಳಿದ್ದ ಮಾತುಗಳಿಗೆ!! ಅಂದವರು ಕಟ್ಟುನಿಟ್ಟಾಗಿ ಹೇಳಿದ್ದರು; ತನ್ನನ್ನು ಬಹು ವಚನದಲ್ಲಿ ಕರೆಯಕೂಡದೆಂದು!! “ನಮ್ಮಲ್ಲಿ ಕೆಲವು ಪದ್ಧತಿಗಳು ಏಕೆ ಬಂದಿತೋ ಗೊತ್ತಿಲ್ಲ! ಬಹು ಮುಖ್ಯವಾಗಿ ಹೆಂಡತಿ ಗಂಡನನ್ನು ಸ್ವಾಮಿಯೆಂದೋ, ತಾವು ಎಂದೋ ಕರೆಯಬೇಕು; ಆದರೆ ಗಂಡ ಮಾತ್ರ ಏನೇ, ಬಾರೇ ಎಂದೇ ಕರೆಯುತ್ತಾನೆ. ಇದನ್ನು ತಿದ್ದಬೇಕು. ಇಲ್ಲವೇ ಇಬ್ಬರೂ ಬಹುವಚನ; ಅಥವಾ ಇಬ್ಬರೂ ಏಕವಚನ. ಯಾವುದು ನಿನಗಿಷ್ಟ? ತನಗೇನು ಹೇಳಬೇಕೆಂದೇ ತೋಚದಿದ್ದಾಗ ಅವರೇ ಹೇಳಿದ್ದರು; ಏಕವಚನವೇ ಹೆಚ್ಚು ಸಾಮೀಪ್ಯವೆಂದು! ಅದನ್ನು ಕಲಿತುಕೊಳ್ಳಲು ತನಗೆ ಬಹು ಕಾಲ ಹಿಡಿಯಿತು. ಈಗ ಅಭ್ಯಾಸಬಲದಿಂದ ಎಂದರೆ ಮನೆಯಲ್ಲಿ ಅಮ್ಮ ಮಾಡಿದ್ದ ಉಪದೇಶದಿಂದ ಒಮ್ಮೊಮ್ಮೆ ಬಹುವಚನ ಬಂದುಬಿಡುತ್ತದೆ. ಇರಲಿ. ಇಹಕ್ಕೆ ಬಂದ ಸೀತೆ ಭಾವುಕಳಾಗಿ ಬಾಗಿ ಮುತ್ತಿಟ್ಟು ಮುಖಮುಚ್ಚಿಕೊಂಡಳು ನಾಚುಗೆಯಿಂದ! ಬಿಗಿಯಾಗಿ ನಲ್ಲೆಯನ್ನಪ್ಪಿ ಕಿವಿಯಲ್ಲಿ ಪಿಸುದನಿಯಲ್ಲಿ ಕೇಳಿದರು ರಾಮರು; "ಮನದನ್ನೆ, ನಿನಗಾವ ಬಯಕೆ ಇದೆ? ನಾನು ಯುವರಾಜನಾದರೆ ನಿನಗೇನು ಉಡುಗೊರೆ ಕೊಡಲಿ? ನಿನಗೆ ಸುಖ ಕೊಡಲು ನಾನೇನು ಮಾಡಬೇಕು?"
ಸೀತೆ ಉತ್ತರ ಕೊಡುವ ಮುನ್ನವೇ ದಾಸಿ ಬಂದು ಹೇಳಿದಳು: "ಸಚಿವ ಪ್ರಧಾನರು ಬಂದಿದ್ದಾರೆ. ಒಳಗೆ ಬರಲು ಅಪ್ಪಣೆ ಕೇಳುತ್ತಿದ್ದಾರೆ." "ಓಹ್! ಕಳಿಸು, ಕಳಿಸು. "ಪತ್ನಿಯ ಕಡೆ ತಿರುಗಿ ಹೇಳಿದರು, "ನಮ್ಮ ತಂದೆಗೆ ಪರಮಾಪ್ತರು. ಅವರ ಸಲಹೆ ಇಲ್ಲದೇ ರಾಜರು ಏನೂ ಮಾಡುವುದಿಲ್ಲ. "ಎದ್ದ ಶ್ರೀರಾಮರು ಎರಡು ಹೆಜ್ಜೆ ಬಾಗಿಲೆಡೆಗೆ ಹೋಗಿ ಕೈಹಿಡಿದು ಸುಮಂತ್ರರನ್ನು ಕರೆತಂದರು. ಆಸನದಲ್ಲಿ ಕೂಡಿಸಿ ಕೇಳಿದರು; "ಹೇಳಿ ಬಂದ ಕಾರಣ. "ಅಳೆದು ಸುರಿದು ಸುಮಂತ್ರ ಹೇಳಿದ," ಅಭಿಷೇಕಕ್ಕೆಲ್ಲ ಸಿದ್ಧವಾಗಿದೆಯೆಂದು ಹೇಳಲು ಹೋಗಿದ್ದೆ. ಏಕೋ ರಾಜರು ತುಂಬ ಸುಸ್ತಾದಂತೆ ಕಂಡರು. ಅಸ್ತವ್ಯಸ್ತರಾಗಿದ್ದರು. ಕಿರಿರಾಣಿಯವರು ವ್ಯಗ್ರರಾಗಿದ್ದಂತೆ ಕಂಡಿತು. ತಮ್ಮನ್ನು ಕರೆತರಲು ಹೇಳಿದ್ದಾರೆ. "ಶ್ರೀರಾಮರದು ಶುದ್ಧ ಮನಸ್ಸು. ವಿನಾಕಾರಣ ಯಾರನ್ನೂ ಸಂದೇಹಿಸರು. "ಬಹುಶಃ ಇಂದಿನ ಕಾರ್ಯಕ್ರಮದ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಅಪ್ಪ-ಅಮ್ಮಂದಿರು ಚರ್ಚಿಸುತ್ತ ನಿದ್ದೆಗೆಟ್ಟಿದ್ದಾರೆ ಎಂದು ಕಾಣುತ್ತದೆ. ನಿಮಗೆ ಹಾಗೆ ಕಂಡಿದೆ. ಬಹುಶಃ ನಾನು ಚಿಕ್ಕ ತಾಯಿಯವರನ್ನು ಕಂಡು ಆಶೀರ್ವಾದ ತೆಗೆದುಕೊಳ್ಳಲಿಲ್ಲ. ತನಗೇಕೆ ಇಂತಹ ಶುಭವಾರ್ತೆ ಹೇಳಲಿಲ್ಲವೆಂಬ ಪ್ರಿಯ ಮೂದಲಿಕೆಗೆ ಹೇಳಿಕಳಿಸಿರಬೇಕು. "ಅನುಭವಿ ವೃದ್ಧ ಮಂತ್ರಿಗೆ ಶ್ರೀರಾಮರ ಭೋಳೇತನ ಕಂಡು "ಅಯ್ಯೋ! "ಎನ್ನಿಸಿತು. "ಅಥವಾ ಎಲ್ಲೋ ಭರತನ ಗೈರುಹಾಜರಿಯಲ್ಲಿ ಈ ಯೌವ್ವರಾಜ್ಯಾಭಿಷೇಕವೇ ಎಂಬ ಚರ್ಚೆ ನಡೆದಿರಬೇಕು. ಅದೇಕ್ಕೇನೂ ಸಂಬಂಧವಿಲ್ಲವೆಂದೂ, ಅದಷ್ಟು ಬೇಗ ಅಭಿಷೇಕವಾಗಬೇಕೆಂದು ಹೇಳಿ ಕರೆಸಿಕೊಳ್ಳುತ್ತಿರಬೇಕು." 
ಸುಮಂತ್ರನಿಗೆ ಗೊತ್ತಿಲ್ಲದಿದ್ದರೂ, ಏನೋ ಅಹಿತ ಸಂದರ್ಭವೆಂಬುದಷ್ಟು ಅರಿವಿಗೆ ಬಂದಿತ್ತು. ಅದಕ್ಕೂ ರಾಮರನ್ನು ಕರೆತರಲು ಹೇಳಿರುವುದಕ್ಕೂ ಸಂಬಂಧವಿದೆಯೇ ಎಂದು ಮನಸ್ಸು ಶಂಕಿಸುತ್ತಿತ್ತು! ಇಲ್ಲಿ ನೋಡಿದರೆ ರಾಮರದು ಹಾಲು ಮನಸ್ಸು. "ಅದರಲ್ಲಿ ಹುಳಿ ಹಿಂಡದಿರಲಿ ಪರಮೇಶ್ವರ" ಎಂದು ಮರುಗಿದರು. "ನಡೆಯಿರಿ ಸುಮಂತ್ರರೇ, ಹೊರಡುವ ಮುನ್ನ ಒಂದು ನಮಸ್ಕಾರ ಮಾಡಿಬರುವೆ. "ಹೇಳಿದ ಶ್ರೀರಾಮರು ಒಳಕೋಣೆಗೆ ತಿರುಗಿದರು. ಸುಮಂತ್ರ ನಿರೀಕ್ಷಣಾ ಕೋಣೆಗೆ ಬಂದ. ಲಕ್ಷ್ಮಣ ಅಲ್ಲಿ ಕಾಯುತ್ತಿದ್ದ. ಬೆಳ್ಳಿಯ ರಥವೊಂದು ಶ್ರೀರಾಮರಿಗಾಗಿ ಕಾಯುತ್ತಿತ್ತು. ಇತ್ತ ಸಿದ್ಧರಾದ ಶ್ರೀರಾಮರಿಗೆ ಆರತಿಯನ್ನು ಬೆಳಗಿ ಸೀತೆ ಹೇಳಿದಳು ; "ನೀನು ಹಿಂತಿರುಗುವ ಹೊತ್ತಿಗೆ ನಾನು ಸಿದ್ಧಳಾಗಿರುತ್ತೇನೆ. ಒಟ್ಟಿಗೇ ಹೋಗುವುದು ತಾನೇ ರಾಜಸಭೆಗೆ? "ಬಾಗಿದ್ದ ಸೀತೆಯನ್ನೆತ್ತಿ ಗಲ್ಲ ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ಉಲಿದರು; "ನೀನು ನನ್ನ ಜೀವನದಲ್ಲಿ ಪ್ರವೇಶಿಸಿದ ಮೇಲೆ ನಿನ್ನನ್ನು ಬಿಟ್ಟು ಒಂಟಿಯಾಗಿ ಎಂದು ಎಲ್ಲಿ ಹೋಗಿದ್ದೇನೆ? ಅಂದಹಾಗೆ ನೀನು ಹೇಳಲೇ ಇಲ್ಲವಲ್ಲ ಈ ಶುಭ ಸಮಯದಲ್ಲಿ ನಿನಗೆ ಏನು ಬೇಕೆಂದು? "ಸೀತೆ ನಯವಾಗಿ ಹೇಳಿದಳು; "ಈಗ ನನಗೇನೂ ಬೇಡ. ನಿನಗೀಗ ಯೌವ್ವರಾಜ್ಯಾಭಿಷೇಕವಾಗಲಿ. ಮುಂದೆ ಮಹಾರಾಜನಾದಾಗ ನನ್ನ ಬಯಕೆಯನ್ನು ತೀರಿಸುವಿಯಂತೆ! "ಕುತೂಹಲದಿಂದ ರಾಮರು ಕೇಳಿದರು, "ಅದು ಬಹು ದೂರದ ಮಾತು. ಇರಲಿ. ಆಗ ಏನು ಬೇಕು? "ತುಸು ತಡೆದು ಹೇಳಿದಳು ಸೀತೆ, "ಜನರಿಗೆ ಒಳಿತಾಗಲು ನಾವು ಯಙ್ಞ ಮಾಡಬೇಕು. ನೀನು ವ್ರತಧಾರಿಯಾಗಿ, ಕೃಷ್ಣಾಜಿನ ಉಟ್ಟು ವೇದಿಕೆಯ ಮುಂದೆ ಜಿಂಕೆಯ ಕೊಂಬು ಹಿಡಿದು ಕುಳಿತುಕೊಂಡ ದೃಶ್ಯ ನೋಡಬೇಕು. ನಿನ್ನ ಪಕ್ಕದಲ್ಲಿ ನಾನು ಕೂಡಬೇಕು! ಇದೇ ನನ್ನ ಬಯಕೆ! " " ಎಂಥ ಪೂಜ್ಯ ನಿಃಸ್ವಾರ್ಥ ಬಯಕೆ ಮಡದಿಯದು ! " ಯೋಚಿಸುತ್ತ ಹೊರಕೋಣೆಗೆ ಬಂದರು ಶ್ರೀರಾಮರು . 
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com