ಹಣಕಾಸಿನಾಟದಲ್ಲಿ ಕಳೆದು ಹೋದ ಒಂದು ಪೀಳಿಗೆ- 'ದಿ ಲಾಸ್ಟ್ ಜೆನರೇಷನ್'!!

ಇಂದಿನ ಅಂಕಣ ಬರಹದ ಉದ್ದೇಶ ಹೇಗೆ ಅಮೆರಿಕ ಮತ್ತು ಯೂರೋಪಿನಲ್ಲಿ 2005 ರಿಂದ 2018 ರವರೆಗೆ ವಿತ್ತ ಪ್ರಪಂಚದಲ್ಲಿ ಆದ ಬದಲಾವಣೆಯಿಂದ ಒಂದು ಪೀಳಿಗೆಯ ಜನ ಉನ್ನತಿಯನ್ನ ಕಾಣದೇ ಜೀವನವನ್ನ ಸವೆಸಿದರು
ಹಣಕಾಸಿನಾಟದಲ್ಲಿ ಕಳೆದು ಹೋದ ಒಂದು ಪೀಳಿಗೆ- 'ದಿ ಲಾಸ್ಟ್ ಜೆನರೇಷನ್'!!
ಹಣಕಾಸಿನಾಟದಲ್ಲಿ ಕಳೆದು ಹೋದ ಒಂದು ಪೀಳಿಗೆ- 'ದಿ ಲಾಸ್ಟ್ ಜೆನರೇಷನ್'!!
ನಮ್ಮದು ಇನ್ನೂ ಅವಿಭಕ್ತ ಕುಟುಂಬದ ಸಮಾಜ ಎನ್ನಬಹದು. ನಗರ ಪ್ರದೇಶಗಳಲ್ಲಿ ಕೂಡ ಮದುವೆಯಾಗಿ ಮಕ್ಕಳಿದ್ದರೂ ಹೆತ್ತವರೊಂದಿಗೆ ವಾಸಿಸುವ ಜನರ ಸಂಖ್ಯೆ ಕಡಿಮೆಯೇನಿಲ್ಲ. ಅಲ್ಲದೆ ಯೂರೋಪು ಮತ್ತು ಅಮೆರಿಕಗಳಿಗೆ ಹೋಲಿಸಿದರೆ ನಮ್ಮದು ಅವಿಭಕ್ತ ಕುಟುಂಬ ಅಂತ ಹೇಳಬಹದು. ತೀರಾ ಇತ್ತೀಚಿಗೆ ಕೆಲಸ, ಬದುಕು ಅರಸಿ ಛಿದ್ರವಾಗುತ್ತಿರುವ ಕುಟುಂಬಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇರಲಿ. ಇಂದಿನ ಅಂಕಣ ಬರಹದ ಉದ್ದೇಶ ಹೇಗೆ ಅಮೆರಿಕ ಮತ್ತು ಯೂರೋಪಿನಲ್ಲಿ 2005 ರಿಂದ 2018 ರವರೆಗೆ ವಿತ್ತ ಪ್ರಪಂಚದಲ್ಲಿ ಆದ ಬದಲಾವಣೆಯಿಂದ ಒಂದು ಪೀಳಿಗೆಯ ಜನ ಉನ್ನತಿಯನ್ನ ಕಾಣದೇ ಜೀವನವನ್ನ ಸವೆಸಿದರು ಎನ್ನುವುದರ ಕುರಿತು ಒಂದಷ್ಟು ಮಾಹಿತಿ ಹಂಚಿಕೊಳ್ಳುವುದಾಗಿದೆ.
ಅಮೆರಿಕದಲ್ಲಿ ಹಣಕಾಸು ಮಹಾ ಕುಸಿತ ಶುರುವಾಗಿದ್ದು 2007 ರಲ್ಲಿ ಆದರೆ ಗಮನಿಸಿ ಯಾವುದೇ ಒಂದು ಕುಸಿತ ದಿಢೀರ್ ಅಂತ ಆಗುವುದಕ್ಕೆ ಸಾಧ್ಯವೇ ಇಲ್ಲ. ಇದು ಹೀಗೆ ಆಗುತ್ತದೆ ಎನ್ನುವುದರ ಲಕ್ಷಣಗಳು ಕನಿಷ್ಟವೆಂದರೂ ಎರಡು ವರ್ಷದಿಂದ ಕಾಣಲು ಶುರುವಾಗಿರುತ್ತದೆ. ಹೀಗಾಗಿ 2005  ರಿಂದ 2018 ಎನ್ನುವ ನಿರ್ಧಾರಕ್ಕೆ ಇಲ್ಲಿ ಬರಲಾಗಿದೆ. ಹದಿನೈದು ವರ್ಷದ ಅವಧಿಯನ್ನ ಒಂದು ಜನರೇಷನ್ ಅಥವಾ ಪೀಳಿಗೆ ಎಂದು ಕರೆಯುತ್ತೇವೆ. ಆ ಅರ್ಥದಲ್ಲಿ ನೋಡಿದರೂ ಕೂಡ ಹಣಕಾಸಿನ ಹುಚ್ಚಾಟದಲ್ಲಿ ಒಂದು ಪೀಳಿಗೆ ಸದ್ದಿಲ್ಲದೆ ಕಳೆದು ಹೋಗಿದೆ. 
ಆರ್ಥಿಕ ವ್ಯವಸ್ಥೆ ಕುಸಿಯಲು ಕಾರಣವೇನು? 
ಇದಕ್ಕೆ ನೇರವಾಗಿ ಮತ್ತು ನಿಖರವಾಗಿ ಉತ್ತರ ನೀಡುವ ಮೊದಲು ಒಂದು ಸಣ್ಣ ಪ್ರಶ್ನೆಯನ್ನ ನಿಮಗೆ ಕೇಳಲು ಬಯಸುತ್ತೇನೆ. ನೀವು ಎಷ್ಟು ದೂರ ನಿಲ್ಲದೆ ಓಡಬಲ್ಲಿರಿ? ಎಷ್ಟೇ ಪ್ರಬಲ ಮತ್ತು ತಾಕತ್ತು ಹೊಂದಿರುವ ವ್ಯಕ್ತಿಯೆಂದರೂ ೨೫ ಕಿಲೋಮೀಟರ್ ನಂತರ ನಿಲ್ಲಲೇಬೇಕಲ್ಲವೇ? ಅದೇ ನೀವು ನೆಡೆಯುತ್ತಿದ್ದರೆ? ಇನ್ನಷ್ಟು ಹೆಚ್ಚಿನ ದೂರ ಕ್ರಮಿಸಬಹುದಲ್ಲವೇ? ಅಂದರೆ ಸಮಾಜದಲ್ಲಿ ಯಾವಾಗ ಸೌಲಭ್ಯಗಳನ್ನ ಹಿತಮಿತವಾಗಿ ಬಳಸುತ್ತಾರೆ ಆ ಸಮಾಜ ಹೆಚ್ಚು ಸಮಯ ಆರ್ಥಿಕ ಕುಸಿತ ಕಾಣದೆ ನೆಡೆಯಬಲ್ಲದು. ಇದು ಹೇಗೆಂದರೆ ಉತ್ಪಾದನೆ ನಿಲ್ಲಬಾರದು ಹಾಗೆಯೇ ಅದರ ಖರೀದಿ ಕೂಡ ನಿಲ್ಲಬಾರದು ಎರಡರಲ್ಲಿ ಒಂದು ಹೆಚ್ಚು ಕಡಿಮೆಯಾದರೂ ಸಮಾಜದಲ್ಲಿ ಏರುಪೇರು ಶುರುವಾಗುತ್ತದೆ. ಅಂದರೆ ಯಾರನ್ನೂ ತಪ್ಪು ಎಂದು ಬೊಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲದಿದ್ದರೂ ಇಂತಹ ಕುಸಿತಗಳು ಸಹಜ. ಆದರೆ ಸೃಷ್ಟಿತ ಕುಸಿತವಾದರೆ? ಅದರಿಂದ ಚೇತರಿಸಿಕೊಳ್ಳುವುದು ಕೂಡ ಹೆಚ್ಚಿನ ಸಮಯ ಹಿಡಿಯುತ್ತದೆ. ಈ ಮಧ್ಯದಲ್ಲಿ ಒಂದು ಪೀಳಿಗೆ ತನ್ನದಲ್ಲದ ತಪ್ಪಿಗೆ ಬೆಲೆ ತೆರುತ್ತದೆ. 
ಅಮೆರಿಕ ಮತ್ತು ಯೂರೋಪಿನಲ್ಲಿ ಇಲ್ಲದ ಹಣವನ್ನ ಸೃಷ್ಟಿಸಲಾಯಿತು ಅಂದರೆ ಮುಂದೆ ಹತ್ತು ಅಥವಾ ಇಪ್ಪತ್ತು ವರ್ಷದಲ್ಲಿ ದುಡಿಯುವ ಹಣವನ್ನ ಇಂದೇ ಖಾತೆಗೆ ಹಾಕಿ ಅದರಿಂದ ಬೇಕಾದ ಮನೆ ಕಾರು ಕೊಳ್ಳಿ ಎಂದು ಹುರಿದುಂಬಿಸಲಾಯಿತು. ಹಣವಿದ್ದ ಜನ ಕಡಿಮೆ ಬೆಲೆಯಲ್ಲಿ ಜಾಗ ಕೊಂಡು ಅಲ್ಲಿ ಕಟ್ಟಿದ ಮನೆಯನ್ನ ಹೀಗೆ ಸಾಲ ಪಡೆದವರ ತಲೆಗೆ ಕಟ್ಟಲು ಶುರುಮಾಡಿದರು. ಯಾವಾಗ ಇಂತಹ ಕ್ರಿಯೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತೋ ಇಂತಹ ದಲ್ಲಾಳಿಗಳಿಗೆ ಹೆಚ್ಚಿನ ಉತ್ಸಾಹ ಬಂದಿತು. ನಿನ್ನೆಗಿಂತ ಇಂದಿನ ಬೆಲೆ ಹೆಚ್ಚು ಎನ್ನ ತೊಡಗಿದರು. ಜನ ನಾಳೆ ಇನ್ನು ಹೆಚ್ಚಾಗುತ್ತದೆ ಎನ್ನುವ ಭರವಸೆಯಲ್ಲಿ ಬ್ಯಾಂಕಿನಿಂದ ಸ್ವಇಚ್ಛೆಯಿಂದ ಸಾಲ ಪಡೆದು ದಲ್ಲಾಳಿಗಳ ಕಿಸೆಯನ್ನ ತುಂಬತೊಡಗಿದರು. 
ಬ್ಯಾಂಕ್ಗಳು, ಸರಕಾರ ಎಲ್ಲವೂ ಇಂತಹ ಒಂದು ವ್ಯವಸ್ಥಿತ ವಂಚನೆಯ ಜಾಲದ ಸದಸ್ಯರು. ಬ್ಯಾಂಕು ನಿನ್ನ ದುಡಿಮೆಗೆ ಇಷ್ಟು ಹಣ ಸಾಲ ನೀಡಲು ಬರುವುದಿಲ್ಲ ಎಂದಿದ್ದರೆ ಇಂತಹ ಹುಚ್ಚಾಟಕ್ಕೆ ಒಂದಷ್ಟು ಕಡಿವಾಣವಾದರೂ ಬೀಳುತಿತ್ತು. ಬ್ಯಾಂಕು ಸಾಲ ಕೇಳಿ ಬಂದವರಿಗೆಲ್ಲ ಅವರ ಹಣಕಾಸು ಸ್ಥಿತಿಗತಿ ನೋಡದೆ ಹಣವನ್ನ ನೀಡಿತು. ಇಲ್ಲಿನ ಮುಖ್ಯ ಉದ್ದೇಶ ಬಂಡವಾಳ ಹಾಕಿ ವಸತಿ ಸಮುಚ್ಚಯ ನಿರ್ಮಿಸಿದ ಹಣವಂತನನ್ನ ಇನ್ನಷ್ಟು ಸಿರಿವಂತನಾಗಿ ಮಾಡುವುದು. ಎಲ್ಲಕ್ಕಿಂತ ಆಶ್ಚರ್ಯ ಎಂದರೆ ಯಾರ ಒತ್ತಾಯವಿಲ್ಲದೆ ಜನ ಸಾಮಾನ್ಯ ತಾನಾಗೇ ಹೋಗಿ ಇಂತಹ ಖೆಡ್ಡಾಕ್ಕೆ ಬೀಳುವುದು. ಹೀಗೆ ಕಡಿವಾಣವಿಲ್ಲದೆ ನೀಡಿದ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಹೋಗಿದ್ದು ವಿತ್ತ ಪ್ರಪಂಚ ಕುಸಿಯಲು ಮುಖ್ಯ ಕಾರಣ. ಇಲ್ಲದ ಹಣವನ್ನ ಸೃಷ್ಟಿಸುವ ಪ್ರಕ್ರಿಯೆಯಲ್ಲಿ ಕೆಲವೊಂದು ಊಹೆಗಳನ್ನ ಮಾಡಿಕೊಳ್ಳಲಾಗುತ್ತದೆ. ಹೀಗೆ  ಮಾಡಿಕೊಂಡ ಊಹೆಗಳಲ್ಲಿ ಒಂದೆರಡು ಏರುಪೇರಾದರೂ ಸಾಕು ಇಡಿ ವ್ಯವಸ್ಥೆ ಕುಸಿಯುತ್ತದೆ. ಒಂದು ದೇಶ ಅಥವಾ ವಿತ್ತ ವ್ಯವಸ್ಥೆ ಕುಸಿಯುತ್ತಿದೆ ಎಂದು ಹೇಳಲು ಪ್ರಮುಖವಾಗಿ ಈ ಅಂಶಗಳು ಕಾರಣಾವಾಗುತ್ತವೆ. 
  1. ವೇತನದಲ್ಲಿ ಇಳಿಕೆ: ಇಷ್ಟು ವರ್ಷ ಮಾಡಿಕೊಂಡು ಬಂದ ಕೆಲಸಕ್ಕೆ ನಿನ್ನೆ ಸಿಗುತ್ತಿದ್ದ ಹಣಕ್ಕಿಂತ ಕಡಿಮೆ ಹಣ ಸಿಗುವುದು ಅಂದರೆ ಹಣಕಾಸಿನ ಲಭ್ಯತೆ ಕಡಿಮೆ ಎಂದು ಹೇಳಿ ವೇತನದಲ್ಲಿ ಕಡಿತ ಮಾಡಿದರೆ ಅದು ಆ ಸಮಾಜದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನ ತೋರಿಸುತ್ತದೆ. 
  2. ಕೆಲಸದಲ್ಲಿ ಇಳಿಕೆ: ಕಡಿಮೆ ವೇತನಕ್ಕೂ ಜನ ಸೈ ಎಂದಾರು ಆದರೆ ಅವರಿಗೆ ಮಾಡಲು ಕೆಲಸವೇ ಸಿಗದಿದ್ದರೆ? ಇದು ವೇತನ ಇಳಿಕೆಯ ನಂತರದ ಹಂತ. ಅಮೆರಿಕ ಮತ್ತು ಯೂರೋಪಿನಲ್ಲಿ ಆಗಿರುವುದೂ ಇದೆ. 
  3. ಆಸ್ತಿಯ ಬೆಲೆಯಲ್ಲಿ ಇಳಿಕೆ: ಸಾಲ ಮಾಡಿಕೊಂಡ ಆಸ್ತಿಯ ಬೆಲೆ ಇಳಿಮುಖವಾದರೆ? ಅಂದರೆ ಗಮನಿಸಿ ಸಾಲ ಮಾಡಿ ಮೂರು ಲಕ್ಷ ನೀಡಿ ಒಂದು ಮನೆಯನ್ನ ಖರೀದಿಸುತ್ತೀರಿ ಎಂದುಕೊಳ್ಳಿ ಅದು ಆರು ತಿಂಗಳ ಅವಧಿಯಲ್ಲಿ ಎರಡು ಲಕ್ಷವಾದರೆ ಸುಮ್ಮನೆ ಒಂದು ಲಕ್ಷ ಹಣವನ್ನ ಕಳೆದುಕೊಂಡ ಹಾಗಾಯಿತಲ್ಲವೇ? ಯೂರೋಪಿನ ಹಲವು ನಗರಗಳಲ್ಲಿ ನೂರು ರುಪಾಯಿಗೆ ಕೊಂಡ ಮನೆಯ ಮೌಲ್ಯ ಐವತ್ತು ರುಪಾಯಿಗೆ ಕುಸಿದ ಉದಾಹರಣೆಯನ್ನ ಕಣ್ಣಾರೆ ಕಂಡ ಅನುಭವ ನನ್ನದು. ಹೀಗಾದಾಗ ಜನ ಸಾಲವನ್ನ ತೀರಿಸುವ ಬದಲು ಮನೆಯನ್ನ ಬ್ಯಾಂಕಿಗೆ ಹಿಂತಿರುಗಿಸುತ್ತಾರೆ. ಹೀಗೆ ಬ್ಯಾಂಕಿನ ಬಳಿ ಬಹಳಷ್ಟು ಮನೆಗಳ ಸಂಗ್ರಹವಾಗುತ್ತದೆ. ಪುಸ್ತಕದಲ್ಲಿ ಅವುಗಳ ಬೆಲೆಯೂ ಚನ್ನಾಗಿದೆ ಆದರೆ ಮಾರುಕಟ್ಟೆಯಲ್ಲಿ ಅವುಗಳನ್ನ ಕೇಳುವರಿಲ್ಲ. ಹೀಗಾಗಿ ಬ್ಯಾಂಕಿಂಗ್ ವ್ಯವಸ್ಥೆ ಹಣದ ಕೊರತೆಯಿಂದ ಕುಸಿಯುತ್ತದೆ. 
  4. ಇಂಟರೆಸ್ಟ್ ರೇಟ್ ಅಥವಾ ಬಡ್ಡಿ ದರದಲ್ಲಿ ಕುಸಿತ: ಇದು ಚೈನ್ ರಿಯಾಕ್ಷನ್. ಮನೆಗಳ ಮೌಲ್ಯ ಕುಸಿದು ಅವುಗಳ ಬೇಡಿಕೆ ಕುಸಿದರೆ, ಬ್ಯಾಂಕಿನಲ್ಲಿ ಸಾಲ ಕೇಳುವರ ಸಂಖ್ಯೆ ಕುಸಿಯುತ್ತದೆ. ಹೀಗಾಗಿ ಠೇವಣಿ ಮೇಲೆ ನೀಡುವ ಬಡ್ಡಿದರ ಮತ್ತು ಸಾಲದ ಮೇಲೆ ನೀಡುವ ಬಡ್ಡಿದರ ಎರಡೂ ಕುಸಿತ ಕಾಣುತ್ತದೆ. 
  5. ಸಾಮಾಜಿಕ ಅಸ್ಥಿರತೆ ಮತ್ತು ಅಪನಂಬಿಕೆ ಹೆಚ್ಚಾಗುವುದು: ಆರ್ಥಿಕ ಕುಸಿತ ಸಮಯದಲ್ಲಿ ಎಲ್ಲರ ಬಳಿಯೂ ಹಣದ ಕೊರತೆ ಇರುತ್ತದೆ ಎಂದರ್ಥವಲ್ಲ, ಆದರೆ ಸಮಾಜದಲ್ಲಿ ಶುರುವಾಗುವ ಇಂತಹ ಅಪನಂಬಿಕೆ ಹಣವಿದ್ದವರನ್ನೂ ತಟಸ್ಥರನ್ನಾಗಿ ಮಾಡುತ್ತದೆ. ಹೀಗಾಗಿ ಸಮಾಜದಲ್ಲಿ ಹಣದ ಹರಿವು ಬಹಳ ಕಡಿಮೆಯಾಗುತ್ತದೆ. 
ಹೀಗೆ ಇನ್ನು ಹಲವಾರು ಸಣ್ಣಪುಟ್ಟ ಕಾರಣಗಳು ಜೊತೆಗೆ ಮನುಷ್ಯನ ಭಾವನೆಗಳು ತಾನೇ ಕಟ್ಟಿದ ನಂಬಿದ ವ್ಯವಸ್ಥೆಯನ್ನ ಕುಸಿಯುವಂತೆ ಮಾಡುತ್ತದೆ. ಇದರಿಂದ ಯೂರೋಪಿನ ಸಮಾಜದಲ್ಲಿ ಅನೇಕ ಬದಲಾವಣೆಗಾಳಿವೆ. ಕೆಲವು ಒಳ್ಳೆಯದು ಎನ್ನಿಸಬಹದು ಕೆಲವು ಕೆಟ್ಟವು ಅನ್ನಿಸಬಹದು. ಒಟ್ಟಿನಲ್ಲಿ ಆರ್ಥಿಕ ಕುಸಿತ ಅಲ್ಲಿನ ಸಮಾಜದಲ್ಲಿ ಕಣ್ಣಿಗೆ ಕಾಣುವ ಬದಲಾವಣೆ ತಂದಿರುವುದಂತೂ ದಿಟ. ಅವೇನು ಎನ್ನುವುದನ್ನ ನೋಡೋಣ. 
  • ನಿರುದ್ಯೋಗ ಅಥವಾ ಅರೆಕಾಲಿಕ ಉದ್ಯೋಗದಿಂದ ಜನರ ಸಂಪಾದನೆಯಲ್ಲಿ ಕುಸಿತ ಕಂಡಿದೆ. ಇಲ್ಲಿನ ಸಮಾಜ ಭಾರತೀಯ ಸಮಾಜದಂತಲ್ಲ. ಇಲ್ಲಿ ಎಲ್ಲರೂ ಪ್ರತ್ಯೇಕ ಬದುಕಲು ಇಷ್ಟಪಡುತ್ತಾರೆ. ಆದರೆ ನಿರುದ್ಯೋಗ ಮತ್ತು ಸಂಪಾದನೆಯಲ್ಲಿ ಕುಸಿತ ಒಂದು ಪೀಳಿಗೆಯನ್ನ ಇನ್ನೊಂದು ಪೀಳಿಗೆಯೊಂದಿಗೆ ಇಷ್ಟವಿರಲಿ ಬಿಡಲಿ ಹೊಂದಿಕೊಂಡು ಬಾಳಲು ಒತ್ತಾಯ ಮಾಡಿದೆ. ಅಂದರೆ ಯುವ ಜನತೆ ಸ್ವತಃ ಬದುಕಲು, ಬಾಡಿಗೆ ಕಟ್ಟಲು ಸಾಧ್ಯವಿಲ್ಲದೆ ಹೆತ್ತವರ ಜೊತೆಯಲ್ಲಿ ಬದುಕಲು ಶುರುಮಾಡಿದ್ದಾರೆ. 
  • 2005 ಅಥವಾ 2007ರಲ್ಲಿ ಪದವಿ ಪಡೆದು ಹೊರಬಂದ ಒಂದು ಪೀಳಿಗೆ ತಮ್ಮ ಓದಿಗೆ ತಕ್ಕ ಉದ್ಯೋಗ ಸಿಗದೇ ದಿನದೂಡಲು ಸಿಕ್ಕ ಉದ್ಯೋಗವನ್ನ ಮಾಡಿಕೊಂಡು ಕಾಲ ತಳ್ಳುತ್ತಿದೆ. ಗಮನಿಸಿ ಅಂದು 25 ರ ತರುಣ ಅಥವಾ ತರುಣಿ ಇಂದಿಗೆ ನಲವತ್ತರ ಹತ್ತಿರಕ್ಕೆ ಬಂದಿರುತ್ತಾರೆ. ಕಾರ್ಪೊರೇಟ್ ವಲಯದಲ್ಲಿ ಈ ವಯೋಮಾನಕ್ಕೆ ತಕ್ಕ ಅನುಭವಿರದಿದ್ದರೆ ಪ್ರವೇಶ ಹೇಗೆ ಸಿಕ್ಕೀತು? ಅಮೆರಿಕ, ಇಂಗ್ಲೆಂಡ್, ಸ್ಪೇನ್, ಗ್ರೀಸ್, ಪೋರ್ಚುಗೀಸ್, ಇಟಲಿ ಜೊತೆಗೆ ಇನ್ನು ಹಲವಾರು ದೇಶಗಳಲ್ಲಿ ಲಕ್ಷಾಂತರ ಸಂಖ್ಯೆಯ ಈ ಸಮಯದಲ್ಲಿನ ಯುವ ಜನತೆ ಸಂಪಾದನೆಯಿಲ್ಲದೆ ತಮ್ಮ ಹಿರಿಯರು ಬದುಕಿದ ರೀತಿ ಬಾಳಲು ಆಗದೆ ಉನ್ನತಿಯನ್ನ ಕಾಣದೆ ಜೀವನವನ್ನ ಕಳೆದಿದ್ದಾರೆ. 
  • ಹತ್ತು ವರ್ಷ ಹಿಂದೆ ಈ ದೇಶಗಳಲ್ಲಿ ಇದ್ದ ಮಧ್ಯವರ್ಗದ ಸಂಖ್ಯೆ ತೀವ್ರ ಕುಸಿತ ಕಂಡು. ಶ್ರೀಮಂತ ಮತ್ತು ಬಡವ ಎನ್ನುವ ಭೇದ ಹೆಚ್ಚಾಗುತ್ತಿದೆ. ಇವೆರೆಡರ ಮಧ್ಯದಲ್ಲಿದ್ದ ಜನ ನಿಧಾನವಾಗಿ ಬಡತನದ ಬಾಹುವಿಗೆ ಸಿಲುಕಿದ್ದಾರೆ. 
  • ಗಮನಿಸಿ ಇವೆಲ್ಲಾ ಚಳಿ ದೇಶಗಳು. ಬೇಸಿಗೆಯ ಒಂದಷ್ಟು ತಿಂಗಳು ಬಿಟ್ಟರೆ ಮುಕ್ಕಾಲು ಪಾಲು ಚಳಿ! ಚಳಿಯಿಂದ ಬಚಾವಾಗಲು ಹೀಟರ್ ಗಳ ಅವಶ್ಯಕೆತೆ ಇರುತ್ತದೆ. ಹೀಗೆ ರಾತ್ರಿಯೆಲ್ಲ ಹೀಟರ್ ಬಳಸಿದರೆ ಹೆಚ್ಚಾಗುವ ವಿದ್ಯುತ್ ಬಿಲ್ ಕಟ್ಟುವರಾರು? ಹೀಗಾಗಿ ಚಳಿಯಿಂದ ಸಾವು ನೋವುಗಳ ಸುದ್ದಿಯೂ ಹೆಚ್ಚಾಗುತ್ತಿದೆ. 
  • ಹಿರಿಯ ನಾಗರಿಕರು ಕಸದ ಡಬ್ಬದಲ್ಲಿ ತಿಂದು ಬಿಟ್ಟಿರುವ ತಿನ್ನುವ ಪದಾರ್ಥಗಳು ಏನಾದರೂ ಸಿಗುತ್ತದೆಯೇ? ಎಂದು ಹುಡಕುವುದು ಕೂಡ ಸಾಮಾನ್ಯ ದೃಶ್ಯ. 
  • ಮನೆಯಿಲ್ಲದವರು ಅಥವಾ ಹೋಂ ಲೆಸ್ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ರಸ್ತೆಯಲ್ಲಿ , ಪಾರ್ಕ್ಗಳಲ್ಲಿ ಮತ್ತು ಬ್ಯಾಂಕಿನ ಎಟಿಎಂ ಗಳಲ್ಲಿ ಮುದುಡಿ ಮಲಗುವರ ಸಂಖ್ಯೆ ಕೂಡ ಹೆಚ್ಚಾಗಿದೆ. ಮೆಟ್ರೋ, ರೈಲು ಮತ್ತು ಪ್ರವಾಸಿ ತಾಣಗಳ ಬಳಿ ಭಿಕ್ಷೆ ಬೇಡುವರ ಸಂಖ್ಯೆ ಹೆಚ್ಚಾಗಿದೆ. 
  • ಪಿಕ್ ಪ್ಯಾಕೆಟ್ ನಿಂದ ಹಿಡಿದು ಇತರ ಕಳ್ಳತನಗಳು ಹೆಚ್ಚಾಗಿವೆ. ಸುಖ ಶಾಂತಿಯಿಂದ ಇದ್ದ ಸಮಾಜದಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಿದೆ. 
  • ನಾಳಿನ ಬಗ್ಗೆಯ ಭರವಸೆ ಇಲ್ಲದೆ ಯುವಜನತೆ ಇಂದಿಗೂ ಕಾಲ ಕಳೆಯಲು ಏನೋ ಒಂದು ಕೆಲಸ ಎನ್ನುವಂತೆ ಇದ್ದಾರೆ. ಇದು ಅವರನ್ನ ಸಿಗರೇಟು, ಮಾದಕ ದ್ರವ್ಯಗಳ ವ್ಯಸನಕ್ಕೆ ದೂಡುತ್ತಿವೆ. 
ಕೊನೆ ಮಾತು: ಅಮೆರಿಕ ಮತ್ತು ಯೂರೋಪಿನಲ್ಲಿ 2005-2018 ನಡುವಿನ ಯುವ ಜನತೆಯನ್ನ 'ದಿ ಲಾಸ್ಟ್ ಜೆನರೇಷನ್' ಎನ್ನುತ್ತಾರೆ. ಇದರ ಬಗ್ಗೆ ಪ್ರಬಂಧ ಮಂಡನೆ ಮಾಡಿ ಡಾಕ್ಟ್ರೇಟ್ ಪದವಿ ಕೂಡ ಪಡೆಯಲು ಶುರು ಮಾಡಿದರೆ ಎಂದರೆ ಸಮಸ್ಯೆಯ ಅರಿವಾದೀತು. ಹೀಗೆ ತಮ್ಮ ಬದುಕಿನ ಅಮೂಲ್ಯ ದಿನಗಳನ್ನ ಯಾವುದೇ ಭರವಸೆ, ನಾಳಿನ ಬಗ್ಗೆ ಆಶಾಭಾವನೆ ಇಲ್ಲದೆ ಲಕ್ಷಾಂತರ ಜನ ತಮ್ಮ ಜೀವನವನ್ನ ಕಳೆದಿದ್ದಾರೆ. ಅಂತಹ ಒಂದು ಪೀಳಿಗೆಯನ್ನ ಕಳೆದು ಹೋದ ಪೀಳಿಗೆ ಎನ್ನುತ್ತಾರೆ. ತಮ್ಮದಲ್ಲದ ತಪ್ಪಿಗೆ ಬದುಕಿನ ರಸಾಸ್ವಾದನೆ ಮಾಡದೆ ದಿನ ಕಳೆದ ಇವರ ದಿನವನ್ನ ಮರಳಿ ಕೊಡಲಾದೀತೇ? ಸಮಾಜ ಆರ್ಥಿಕವಾಗಿ ಬದಲಾದರು ಹೆಚ್ಚಿನ ನೈಪುಣ್ಯತೆ ಹೊಂದಿರದ ಈ ಪೀಳಿಗೆ ಮುಂದಿನ ಯುದ್ಧಕ್ಕೆ ಸಿದ್ದವಾಗಿ ನಿಂತಿರುವ ಹೊಸ ಪೀಳಿಗೆಯೊಂದಿಗೆ ಹೇಗೆ ತಾನೇ ಸೆಣೆಸಾಡಿ ಗೆದ್ದೀತು?   'ದಿ ಲಾಸ್ಟ್ ಜೆನರೇಷನ್' ಎನ್ನುವ ಜ್ವಾಲಾಮುಖಿ ಸಿಡಿದರೆ ಯೂರೋಪು ಮತ್ತೆ ಆರ್ಥಿಕ ಕುಸಿತ ಕಾಣದೆ ಇದ್ದೀತೆ?  ಅಸ್ಥಿರತೆಯೊಂದೇ ಸ್ಥಿರತೆಯಾಗಿದೆ. ಇವಕ್ಕೆಲ್ಲಾ ಉತ್ತರ, ಮದ್ದು ಸಮಯ. ಸಮಯ ಎಲ್ಲವನ್ನೂ ಮರೆಮಾಚಿ ಬಿಡುತ್ತದೆ. ಕಳೆದು ಹೋದ ಜನಾಂಗದ ಬಿಸಿ  ಉಸಿರು ಚರಿತ್ರೆಯಲ್ಲಿ ಮಣ್ಣಾಗಿ ಹೋಗುತ್ತದೆ.  
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com