ಆರ್ ಬಿ ಐ ಮತ್ತು ಕೇಂದ್ರ ಸರಕಾರದ ನಡುವಿನ ಸಮರ, ವಿತ್ತ ಜಗತ್ತಿನಲ್ಲಿ ಹಾಹಾಕಾರ!

ಆರ್ ಬಿಐ ಬಳಿ ಇರುವ ಮೀಸಲು ನಿಧಿಯನ್ನ ಬಳಸುವುದು ನಿಷಿದ್ಧ, ಅದು ಕೇವಲ ತುರ್ತು ಪರಿಸ್ಥಿತಿಯಲ್ಲಿ ಬಳಸಲು ಇರುವಂತದ್ದು ಎನ್ನವುದು ಆರ್ ಬಿಐ ವಾದ. ಹೀಗೆ ಜಟಾಪಟಿ ಮುಂದುವರಿದರೆ ಏನಾಗಬಹದು?
ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ಹಣಕಾಸು ಸಚಿವ ಅರುಣ್ ಜೇಟ್ಲಿ
ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ಹಣಕಾಸು ಸಚಿವ ಅರುಣ್ ಜೇಟ್ಲಿ
ಕಳೆದ ಒಂದು ವಾರದಿಂದ ನಮ್ಮ ಸೆಂಟ್ರಲ್ ಬ್ಯಾಂಕ್ ಆರ್.ಬಿ.ಐ ಮತ್ತು ಕೇಂದ್ರ ಸರಕಾರದ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ.
ಹಾಗೆ ನೋಡಲು ಹೋದರೆ ಸೆಂಟ್ರಲ್ ಬ್ಯಾಂಕ್ ಮತ್ತು ಕೇಂದ್ರದ ನಡುವಿನ ಈ ರೀತಿಯ ಗುದ್ದಾಟ ಹೊಸತೇನಲ್ಲ. ಆದರೆ ಅದು ಈಗ ಸಾಮಾನ್ಯ ಜನರಿಗೂ ಗೊತ್ತಾಗುವ ಮಟ್ಟಕ್ಕೆ ಹೋಗಿದೆ. ಇದಕ್ಕೆ ಸೋಶಿಯಲ್ ಮೀಡಿಯಾದ ಕಾಣಿಕೆಯೂ ಬಹಳಷ್ಟಿದೆ. ಇಂದು ಈ ರೀತಿಯ ಗುದ್ದಾಟಕ್ಕೆ ಕಾರಣ 'ಹಣ'. ಎಲ್ಲಾ ಜಗಳಕ್ಕೂ ಮುಕ್ಕಾಲು ಪಾಲು ಹಣವೇ ಕಾರಣವಲ್ಲವೇ...? ಇರಲಿ, ಗಮನಿಸಿ ಆರ್ ಬಿ ಐ ಸ್ವಾಯತ್ತತೆ ಹೊಂದಿರುವ ಸಂಸ್ಥೆಯಲ್ಲ. ಇಲ್ಲಿನ ಮುಖ್ಯಸ್ಥರನ್ನು ನೇಮಕ ಮಾಡುವುದು ಕೇಂದ್ರ ಸರಕಾರ. ಹಾಗೆಂದ ಮಾತ್ರಕ್ಕೆ ಆರ್ ಬಿಐ ಪೂರ್ಣವಾಗಿ ಸರಕಾರದ ಆಣತಿಯಂತೆ ಕೆಲಸ ಮಾಡುವುದಿಲ್ಲ. 
ಹಣ ಮುದ್ರಣ, ಬ್ಯಾಂಕುಗಳ ಮೇಲಿನ ಹಿಡಿತ, ವಿದೇಶಿ ವಿನಿಮಯ ನಿರ್ಧಾರಗಳು ಹೀಗೆ ಹಲವು ಹತ್ತು ಕಾರ್ಯವನ್ನ ಆರ್ ಬಿಐ ತನ್ನ ಬಳಿಯಿರುವ ನುರಿತ ಕಸುಬುದಾರರಿಂದ ನೆಡೆಸುತ್ತದೆ. ಹೀಗೆ ನೆಡೆಸುವ ಕೆಲಸದಿಂದ ಅದು ಖರ್ಚು ಕಳೆದು ಉಳಿವ ಬಹಳಷ್ಟು ಹಣವನ್ನ ತನ್ನ ಮಾಲೀಕ ಕೇಂದ್ರ ಸರಕಾರಕ್ಕೆ ವರ್ಗಾವಣೆ ಮಾಡುತ್ತದೆ. ಅಲ್ಲದೆ ಒಂದಷ್ಟು ಹಣವನ್ನ ಮೊದಲೇ ಊಹಿಸಲಾಗದ ಅನಿಶ್ಚಿತತೆಯನ್ನ ಎದುರಿಸಲು ಮೀಸಲು ಹಣ (ರಿಸರ್ವ್ ಮನಿ/ಫಂಡ್) ಎಂದು ತೆಗೆದಿರಿಸುತ್ತದೆ. ಸರಿಯಾಗಿದೆ ಅಲ್ಲವೇ...? ಮತ್ತೇಕೆ ಇಂತಹ ವಾಕ್ಸಮರ? ಕೇಂದ್ರ ಮತ್ತು ಸೆಂಟ್ರಲ್ ಬ್ಯಾಂಕ್ ನಡುವಿನ ಇಂತಹ ಗುದ್ದಾಟಕ್ಕೆ ಚರಿತ್ರೆಯಿದೆ.
ಪ್ರಸ್ತುತ ಜಗಳಕ್ಕೆ ಅಥವಾ ಒಮ್ಮತಕ್ಕೆ ಬಾರದೆ ಇರಲು ಕಾರಣಗಳೇನು?
  1. ರಿಸರ್ವ್ ಬ್ಯಾಂಕ್ ಬಳಿ 2018ಕ್ಕೆ ಇರುವ ಲಾಭ ನೂರು ರೂಪಾಯಿ ಅದರಲ್ಲಿ ಐವತ್ತು ರೂಪಾಯಿಯನ್ನ ಮುಂದೆ ಎದುರಾಗಬಹುದಾದ ಅನಿಶ್ಚಿತತೆಗಾಗಿ ಮೀಸಲು ನಿಧಿ ಎಂದು ತೆಗೆದಿರಿಸಿ ಉಳಿದ ಐವತ್ತು ರೂಪಾಯಿ ಕೇಂದ್ರ ಸರಕಾರಕ್ಕೆ ವರ್ಗಾವಣೆ ಮಾಡಲು ಸಿದ್ಧವಿದೆ. ಆದರೆ ಕೇಂದ್ರ ಸರಕಾರ ಮುಂದಿನ ದಿನಗಳಲ್ಲಿ ನೀವು ಊಹಿಸುವಷ್ಟು ಅನಿಶ್ಚಿತತೆ ಎದುರಾಗುವುದಿಲ್ಲ ನಿಮ್ಮ ಊಹೆ ತುಂಬಾ ಸಂಪ್ರದಾಯವಾದಿ (ಕನ್ಸರ್ವೇಟಿವ್) ನಮಗೆ ಐವತ್ತರ ಬದಲು 63 ರೂಪಾಯಿ ಕೊಡಿ ಉಳಿದ 37 ರೂಪಾಯಿಗಳನ್ನು ಮೀಸಲು ನಿಧಿಯಲ್ಲಿಡಿ ಎನ್ನುತ್ತಿದೆ.
  2. ಪ್ರತಿ ವರ್ಷ ಆರ್ ಬಿಐ ತನ್ನ ಲಾಭಂಶದ ಒಂದಷ್ಟು ಹಣವನ್ನ ಮೀಸಲು ನಿಧಿಯನ್ನಾಗಿ ತೆಗೆದಿಡುತ್ತದೆ ಅಲ್ಲವೇ ಹಾಗೆ ಇಲ್ಲಿಯವರೆಗೆ ಆರ್ ಬಿ ಐ ಬಳಿ ಸಂಗ್ರಹವಾಗಿರುವ ಒಟ್ಟು ನಿಧಿಯಲ್ಲಿ ಮೂರು ಲಕ್ಷ ಅರವತ್ತು ಸಾವಿರ ಕೋಟಿ ಬೇಕಾಗಿರುವುದಕ್ಕಿಂತ ಹೆಚ್ಚು ಸಂಗ್ರಹಿಸಿದೆ, ಹೀಗಾಗಿ ಆ ಹಣವನ್ನ ಸರಕಾರಕ್ಕೆ ನೀಡಬೇಕು ಎನ್ನುವುದು ಕೇಂದ್ರ ಸರಕಾರದ ವಾದ. ಆರ್ ಬಿಐ ಹೇಗೆ ನೆಡೆಸಬೇಕು ಎನ್ನುವ ಬೈ ಲಾ ಪ್ರಕಾರ ಸಾಮಾನ್ಯ ಪರಿಸ್ಥಿತಿಯಲ್ಲಿ ಹೀಗೆ ಮಾಡಲು ಸಾಧ್ಯವಿಲ್ಲ ಎನ್ನುವುದು ಆರ್ ಬಿಐ ಉವಾಚ. 
  3. ಆರ್ ಬಿಐ ಸಾಲ ಕೊಡುವ ನೀತಿಯನ್ನ ಬಲಿಷ್ಟಗೊಳಿಸಿದೆ. ಕೇಂದ್ರ ಸರಕಾರ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಹೆಚ್ಚಿನ ಸಾಲವನ್ನ ಹೆಚ್ಚಿನ ಕಡಿವಾಣ ಹಾಕದೆ ನೀಡಬೇಕೆಂದು ಬಯಸಿದೆ. ಹೀಗೆ ಸಾಲ ಕೊಡುವ ನೀತಿಯನ್ನ ಸಡಿಲಗೊಳಿಸಲು ಆರ್ ಬಿಐ ಸಿದ್ಧವಿಲ್ಲ. ಕೇಂದ್ರದ ವ್ಯಾಪಾರ ಉದ್ದಿಮೆ ಹೆಚ್ಚಿಸುವ ಮಹತ್ವಾಕಾಂಕ್ಷೆಗೆ ನೀತಿ ಸಡಿಲಗೊಳಿಸಲು ಸಾಧ್ಯವಿಲ್ಲ ಎನ್ನುತ್ತದೆ ಆರ್ ಬಿಐ. 
  4. ಬಾಂಕ್ಗುಗಳಿಗೆ 30 ಬಿಲಿಯನ್ ಡಾಲರ್ ಹಣವನ್ನ ಸಂಗ್ರಹಿಸಲು ಆರ್ ಬಿಐ ಅನುವು ಮಾಡಿಕೊಡಬೇಕು ಎನ್ನುವುದು ಕೇಂದ್ರ ಸರಕಾರ ಇನ್ನೊಂದು ವಾದ. ಆರ್ ಬಿ ಐ ಇದಕ್ಕೂ ಸೊಪ್ಪು ಹಾಕಿಲ್ಲ. 
  5. ಆರ್ ಬಿ ಐ ತನ್ನ ಅಧೀನದಲ್ಲಿರುವ 11 ಬ್ಯಾಂಕುಗಳಿಗೆ ತಮ್ಮ ತಪ್ಪನ್ನ ತಿದ್ದಿಕೊಂಡು ಕೊಟ್ಟು ಸಾಲವನ್ನ ಪೂರ್ಣ ಸಂಗ್ರಹಿಸುವರೆಗೆ ಯಾರಿಗೂ ಮರು ಸಾಲ ಕೊಡುವ ಹಾಗಿಲ್ಲ ಎಂದು ನಿರ್ಬಂಧ ಹಾಕಿದೆ. ಕೇಂದ್ರ ಸರಕಾರ 11 ಬ್ಯಾಂಕ್ಗಳ ಮೇಲಿರುವ ಈ ನಿಬಂಧನೆಯನ್ನ ಸಡಿಲಿಸಬೇಕು, ಇಂತಹ ಕಠಿಣ ನಡೆಯಿಂದ ವ್ಯಾಪಾರ ಉದ್ದಿಮೆ ಕುಸಿಯುತ್ತದೆ ಎನ್ನುತ್ತದೆ. ತಾವು ತೆಗೆದುಕೊಂಡ ಸಾಲದ 80 ಪ್ರತಿಶತ ಸಾಲವನ್ನ ತೀರಿಸಿದವರನ್ನ ಸುಸ್ತಿದಾರ ಎನ್ನಲಾಗುವುದಿಲ್ಲ ಅಂತವರಿಗೆ ಮರುಸಾಲ ಕೊಟ್ಟರೆ ಉದ್ಯಮ ಚೇತರಿಸಿಕೊಂಡು ಅವರು ತಮ್ಮ ಸಾಲವನ್ನ ಪೂರ್ಣ ವಾಪಸ್ಸು ಕೊಡಲು ಸಾಧ್ಯ ಎನ್ನುವುದು ಕೇಂದ್ರದ ನಿಲುವು. 
  6. ಜನ ಸಾಮಾನ್ಯನ ಮತ್ತು ಸಮಾಜದ ಒಟ್ಟು ಒಳಿತಿಗಾಗಿ ಆರ್ ಬಿಐ ಮೇಲೆ ಹೆಚ್ಚಿನ ಹಿಡಿತ ಹೊಂದುವುದು ಅವಶ್ಯಕ, ಒಂದು ಆದೇಶವನ್ನ ಪಾಲಿಸುವುದಕ್ಕೆ ಆರ್ ಬಿಐ ತೆಗೆದುಕೊಳ್ಳುತ್ತಿರುವ ಸಮಯ ಸಮಾಜಕ್ಕೆ ಮಾರಕ ಎನ್ನುವುದು ಕೇಂದ್ರದ ವಾದ. ಆರ್ ಬಿ ಐ ಅರ್ಜೆಂಟಿನಾ ಸರಕಾರದ ಉದಾಹರಣೆ ನೀಡಿ ಹುಷಾರು ಎನ್ನುತ್ತಿದೆ. ಅರ್ಜೆಂಟಿನಾ ಸರಕಾರ ಹೀಗೆ 2010 ರಲ್ಲಿ ತನ್ನ ಸೆಂಟ್ರಲ್ ಬ್ಯಾಂಕ್ ಅನ್ನು ಅಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದರ ಫಲ ಅಂದು ಅಲ್ಲಿ ಎಲ್ಲಾ ರೀತಿಯ ಹಣಕಾಸು ವ್ಯವಸ್ಥೆ ಮತ್ತು ಸಂಸ್ಥೆಗಳು ತೀವ್ರ ಕುಸಿತ ಕಂಡಿದ್ದವು. ಅದು ಭಾರತದಲ್ಲೂ ಆದೀತು ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಲೇಸು ಎನ್ನುವುದು ಆ ಬಿಐ ಅಂಬೋಣ. 
  7. ಆರ್ ಬಿಐ ಬಳಿ ಇರುವ ಅಷ್ಟೊಂದು ದೊಡ್ಡ ಮೊತ್ತದ ಮೀಸಲು ನಿಧಿಯಲ್ಲಿ ಅರ್ಧಕ್ಕೂ ಹೆಚ್ಚು ತೆಗೆದುಕೊಂಡು ಕುಸಿದಿರುವ ಬ್ಯಾಂಕಿಂಗ್ ವ್ಯವಸ್ಥೆಗೆ ಮರುಜೀವ ನೀಡುತ್ತೇನೆ ಎನ್ನುವುದು ಕೇಂದ್ರದ ವಾದ. ಯಾವುದೇ ಕಾರಣಕ್ಕೂ ಆರ್ ಬಿಐ ಬಳಿ ಇರುವ ಮೀಸಲು ನಿಧಿಯನ್ನ ಬಳಸುವುದು ನಿಷಿದ್ಧ, ಅದು ಕೇವಲ ತುರ್ತು ಪರಿಸ್ಥಿತಿಯಲ್ಲಿ ಬಳಸಲು ಇರುವಂತದ್ದು ಎನ್ನವುದು ಆರ್ ಬಿಐ ವಾದ. 
  8. ಮೀಸಲು ನಿಧಿಯನ್ನ ಬಳಸಿ ಅಂತಹ ತುರ್ತು ಪರಿಸ್ಥಿತಿ ಬರದಂತೆ ಮಾಡುವ ಜವಾಬ್ಧಾರಿ ನನ್ನದು, ಈಗ ಈ ಹಣವನ್ನ ಉಪಯೋಗಿಸದೆ ಹೋದರೆ ಖಂಡಿತ ಆ ಹಣವನ್ನ ಉಪಯೋಗಿಸಬೇಕಾದ ತುರ್ತು ಪರಿಸ್ಥಿತಿ ಬರುತ್ತದೆ ಹೀಗಾಗಿ ಆ ಹಣವನ್ನ ನೀಡಿ ಎನ್ನುವುದು ಕೇಂದ್ರದ ಕೋರಿಕೆ. ಮೀಸಲು ನಿಧಿಯನ್ನ ಸೂಕ್ತ ಸಮಯದ ಹೊರತು ಮೊದಲೇ ಬಳಸಲು ಬರುವುದಿಲ್ಲ ಎನ್ನುವುದು ಆರ್ ಬಿ ಐ ಹೇಳಿಕೆ. 
ಹೀಗೆ ಜಟಾಪಟಿ ಮುಂದುವರಿದರೆ ಏನಾಗಬಹದು? 
ಕೇಂದ್ರ ಸರಕಾರ ಸಮೂಹದ ಮತ್ತು ಹೆಚ್ಚಿನ ಜನರ ಹಿತಾಸಕ್ತಿ ಕಾಪಾಡಲು ಆರ್ ಬಿಐ ಆಕ್ಟ್ ನಲ್ಲಿರುವ ಸೆಕ್ಷನ್ 7 ಅನ್ನು ಲಾಗೂ ಮಾಡಬಹದು. ಈ ಸೆಕ್ಷನ್ ಪ್ರಕಾರ ಕೇಂದ್ರ ಸರಕಾರ ಆರ್ ಬಿಐ ಗವರ್ನರ್ ಗೆ ಹೀಗೆ ಮಾಡಬೇಕು ಎಂದು ನಿರ್ದಿಷ್ಟ ಆದೇಶ ಕೊಡುವ ಶಕ್ತಿಯನ್ನ ಪಡೆಯುತ್ತದೆ. ಆಗ ಆರ್ ಬಿಐ ಗವರ್ನರ್ ಕೇಂದ್ರ ಸರಕಾರ ಹೇಳಿದಂತೆ ನಡೆದುಕೊಳ್ಳದೆ ಬೇರೆ ದಾರಿಯಿರುವುದಿಲ್ಲ. 
ಅಲ್ಲಿಯವರೆಗೆ ಆರ್ ಬಿಐ ಗವರ್ನರ್ ತನ್ನ ಅಧಿಕಾರ ಬಳಸಿ ಸರಿ ಅನ್ನಿಸಿದ್ದ ಮಾಡಬಹದು. ಸರಕಾರದ ತಾಳಕ್ಕೆ ಅಥವಾ ಬಾಯಿ ಮಾತಿಗೆ ಹೇಳಿದಂತೆ ಕೇಳುವ ಅವಶ್ಯಕತೆ ಇಲ್ಲ. ಗಮನಿಸಿ ಇಲ್ಲಿಯವರೆಗೆ ಯಾವ ಕೇಂದ್ರ ಸರಕಾರವೂ ಆರ್ ಬಿಐ ಆಕ್ಟ್ ನ ಸೆಕ್ಷನ್ 7 ಅನ್ನು ಚಾಲನೆಗೆ ತಂದಿಲ್ಲ. ಆದರೆ ಈಗ ನಡೆಯುತ್ತಿರುವ ವಾಕ್ಸಮರ ಬೇರೊಂದು ಹಂತಕ್ಕೆ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಆಗ ಕೇಂದ್ರ ಸರಕಾರ ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸೆಕ್ಷನ್ 7 ಅನ್ನು ಲಾಗೂ ಮಾಡಿದ ಕುಖ್ಯಾತಿಗೆ ಪಾತ್ರವಾಗುತ್ತದೆ. ಹೀಗಾದರೆ ಆರ್ ಬಿಐ ಮುಖ್ಯಸ್ಥ ಇದರ ಪಾಲನೆ ಮಾಡಲು ಇಷ್ಟವಿಲ್ಲದ ಕಾರಣ ತನ್ನ ಹುದ್ದೆಗೆ ರಾಜೀನಾಮೆ ನೀಡಬಹದು. ಈಗಿನ ಸಂದರ್ಭದಲ್ಲಿ, ಗವರ್ನರ್ ಮತ್ತು ಡೆಪ್ಯುಟಿ ಗವರ್ನರ್ ಇಬ್ಬರೂ ಕೇಂದ್ರ ಸರಕಾರ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಹೀಗಾಗಿ ಇಬ್ಬರೂ ರಾಜೀನಾಮೆ ನೀಡಿದರೆ ಮುಂದೇನು? ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಜೊತೆಗೆ ಅಂತರರಾಷ್ಟ್ರಿಯ ಮಟ್ಟದಲ್ಲಿ ಭಾರತದ ಗೌರವಕ್ಕೆ ಇದರಿಂದ ಧಕ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಅಲ್ಲದೆ ವಿತ್ತ ವ್ಯವಸ್ಥೆ ತಾತ್ಕಾಲಿಕವಾಗಿಯಾದರೂ ಸರಿಯೇ ಸಾಕಷ್ಟು ಅಲ್ಲೋಲಕಲ್ಲೋಲವಾಗುತ್ತದೆ. 
ಯಾರು ಸರಿ ಯಾರು ತಪ್ಪು? 
ಆರ್ ಬಿ ಐ ನೆಡೆಸುತ್ತಿರುವವರು ಹೇಳಿಕೇಳಿ ಪ್ರೊಫೆಷನಲ್ ಗಳು, ಅವರ ಬಳಿ ಮುಂದೇನಾಗಬಹದು ಎನ್ನುವುದನ್ನ ಅಳೆದು ತೂಗಿ ಇಷ್ಟು ಮೀಸಲು ನಿಧಿ ಬೇಕು ಎಂದು ಹೇಳುವುದಕ್ಕೆ ಒಂದು ಪಡೆಯಿದೆ. ಈಗಿನ ಕೇಂದ್ರ ಸರಕಾರ ಅವೈಜ್ಞಾನಿಕವಾಗಿ ನೆಡೆದುಕೊಳ್ಳುತ್ತಿರುವುದು ಇದೆ ಮೊದಲೇನಲ್ಲ. ಹಣಕಾಸಿನ ವಿಷಯದಲ್ಲಿ ನಾನು ಹೇಳಿದಂತೆ ನೆಡೆಯಬೇಕು ಎನ್ನುವ ಧೋರಣೆ ಸರಿಯಲ್ಲ. ನೀವು ಹೇಳಿದಂತೆ ಎಲ್ಲವನ್ನ ಕೇಳುವುದಾದರೆ ಆರ್ ಬಿಐ ಏಕೆ ಬೇಕು? ಅಷ್ಟೊಂದು ಜನ ಪ್ರೊಫೆಷನಲ್ ಗಳು ಏಕೆ ಬೇಕು?
ಕೇಂದ್ರ ಸರಕಾರ ಆರ್ ಬಿಐ ಮೇಲೆ ಹೆಚ್ಚಿನ ಹಿಡಿತ ಹೊಂದುವುದು ಯಾವುದೇ ಕೋನದಲ್ಲೂ ಮೆಚ್ಚುವ ಸಂಗತಿಯಂತೂ ಅಲ್ಲ. ಉಳಿದಂತೆ ಥ್ಯಾಂಕ್ಸ್ ಟು ಗವರ್ನರ್ ಉರ್ಜಿತ್ ಪಟೇಲ್ ಡೆಪ್ಯುಟಿ ಗವರ್ನರ್ ಆಚಾರ್ಯ!! ಸರಕಾರದ ಹುಚ್ಚಾಟಕ್ಕೆ, ಒತ್ತಡಕ್ಕೆ ಮಣಿಯದೆ ಪಬ್ಲಿಕ್ ಆಗಿ ಮಾತನಾಡುತ್ತಿದ್ದಾರೆ.
ಕೇಂದ್ರ ಸರಕಾರ ಮೂಗಿನ ನೇರಕ್ಕೆ ನೋಡುವುದಾದರೆ 2019 ರ ಚುನಾವಣೆ ಗೆಲ್ಲಲು ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರ ಮನಸ್ಸು ಗೆಲ್ಲುವುದು ಅತ್ಯಂತ ಅವಶ್ಯಕ. ಡಿಮೋನಿಟೈಸಷನ್ ಮತ್ತು ಜಿಎಸ್ಟಿ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರನ್ನ ಹೈರಾಣು ಮಾಡಿದೆ. ಸದ್ಯಕ್ಕೆ ಈ ವರ್ಗಕ್ಕೆ ಹೆಚ್ಚಿನ ಸಾಲ ಕೂಡ ಸಿಗುತ್ತಿಲ್ಲ. ಇದರಿಂದ ಸಹಜವಾಗೆ ಕೇಂದ್ರ ಸರಕಾರದ ವಿರುದ್ಧ ಈ ವರ್ಗದಲ್ಲಿ ಅಸಮಾಧಾನವಿದೆ. ಗಮನಿಸಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರ ಸಂಖ್ಯೆ ನಮ್ಮ ದೇಶದಲ್ಲಿ ಬಹಳ ಹೆಚ್ಚು. 
ಕೊನೆ ಮಾತು: ಮೊದಲ ನಾಲ್ಕು ವರ್ಷ ನಾಗಾಲೋಟದಿಂದ ಯಾವ ಅಡೆತಡೆಯಿಲ್ಲದೆ ನೆಡೆದ ಕೇಂದ್ರ ಸರಕಾರಕ್ಕೆ ಒಮ್ಮೆಲೇ ಏರಿದ ಹಣದುಬ್ಬರ, ತೈಲಬೆಲೆ ಏರಿಕೆ ಜೊತೆಗೆ ಆರ್ ಬಿಐ ಕೂಡ ತನ್ನ ಮಾತು ಕೇಳದೆ ಇರುವುದು ದೊಡ್ಡ ತಲೆನೋವಾಗಿದೆ. ಭಾರತದಂತಹ ಅತಿ ದೊಡ್ಡ ದೇಶವನ್ನ ಅತಿ ಕಡಿಮೆ ಸಮಯದಲ್ಲಿ ಬದಲಾಯಿಸುತ್ತೇನೆ ಎನ್ನುವುದೇ ಮೂರ್ಖತನ. ದೂಡ್ಡ ಲಾರಿಯೊಂದು ಹೋಗುತ್ತಿರುವ ದಿಕ್ಕು ಸರಿಯಿಲ್ಲವೆಂದು ಒಮ್ಮೆಲೇ ತಿರುಗಿಸಿದರೆ ಏನಾಗುತ್ತೆ? ಲಾರಿ ಬಿದ್ದು ಹೋಗುವ ಸಾಧ್ಯತೆ ಇದೆಯಲ್ಲವೇ? ಇದೂ ಕೂಡ ಹಾಗೆಯೇ... ಆದರೆ ಚಾಲಕನಿಗೆ ಬುದ್ಧಿ ಹೇಳುವರಾರು??
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com