ಪಾಕಿಸ್ತಾನ ಪಾಪರ್ ಹೇಗೆ? ಏಕೆ? ಇಲ್ಲಿದೆ ಖಬರ್!

ಗಮನಿಸಿ ಮಾಧ್ಯಮಗಳು ಹೊಸ ಪ್ರಧಾನಿ ಇಮ್ರಾನ್ ಖಾನ್ ಸರಕಾರಿ ಸಾಮ್ಯದ ಗುಜರಿ ವಸ್ತುಗಳನ್ನ ಹರಾಜು ಹಾಕಿ ಹಣ ಸಂಪಾದಿಸಿ ಸರಕಾರ ನೆಡೆಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಬೊಬ್ಬೆ ಹಾಕುತ್ತಿವೆ. ಇದೆಷ್ಟು..
ಪಾಕಿಸ್ತಾನ  ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನ ಮತ್ತೆ ಸುದ್ದಿಯಲ್ಲಿದೆ. ಪಾಕಿಸ್ತಾನ ಎಂದು ಸುದ್ದಿಯಲ್ಲಿರಲಿಲ್ಲ? ಎನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದ್ದರೆ ಅದು ಸರಿ ಕೂಡ. ಪಾಕಿಸ್ತಾನ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿ ಇದ್ದೇ ಇರುತ್ತದೆ. 
ಭಾರತದ ಪಾಲಿಗಂತೂ ಕಾರಣವಿಲ್ಲದೆ ಕಾಲು ಕೆರೆದು ಜಗಳ ಮಾಡುವ ನೆರೆರಾಷ್ಟ್ರವದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡ ಪಾಕಿಸ್ತಾನಿ ಎಂದರೆ ಮೂಗು ಮುರಿಯುವವರ ಸಂಖ್ಯೆಯೇ ಹೆಚ್ಚು. ಭಯೋತ್ಪಾದನೆ ಎನ್ನುವ ಪದ ಕೇಳಿ ಬಂದಾಗೆಲ್ಲ ಬೇಕೋ ಬೇಡವೋ ಪಾಕಿಸ್ತಾನದ ಹೆಸರು ಮಸ್ತಕದಲ್ಲಿ ಹಾದು ಹೋಗುತ್ತದೆ. ಪಾಕಿಸ್ತಾನವೆಂದರೆ ಅಷ್ಟೊಂದು ಕುಖ್ಯಾತಿ. ಇರಲಿ. ಈಗ ಪಾಕಿಸ್ತಾನ ಸದ್ಯಕ್ಕೆ ಸುದ್ದಿಯಲ್ಲಿರುವುದು ದಿವಾಳಿಯಾಗಲಿದೆ ಎನ್ನುವ ವಿಷಯಕ್ಕೆ. ಆ ದೇಶದ ಹೊಸ ಪ್ರಧಾನಿ ಸರಕಾರದ ಸಾಮ್ಯದಲ್ಲಿರುವ ಎಮ್ಮೆ, ಕಾರು, ಉಪಯೋಗಿಸದೆ ಇದ್ದ ಹಲವು ವಸ್ತುಗಳನ್ನ ಹರಾಜು ಹಾಕಿ ಹಣವನ್ನ ಹೊಂದಿಸುತ್ತಿದ್ದಾರೆ ಎನ್ನುವ ವಿಷಯ ಕೂಡ ಭಾರಿ ಸದ್ದು ಮಾಡುತ್ತಿದೆ. ಒಂದಷ್ಟೂ ವಿವೇಚನೆ ಮಾಡದ ನಮ್ಮ ಮಾಧ್ಯಮಗಳು ಅದನ್ನ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಪಾಕಿಸ್ತಾನದ ಇಂದಿನ ನಿಜವಾದ ಹಣಕಾಸು ಸ್ಥಿತಿ ಏನು ಎಂದು ತಿಳಿಸಿ ಹೇಳುವುದು ಈ ಬರಹದ ಉದ್ದೇಶ. ಪಾಕಿಸ್ತಾನ ದಿವಾಳಿಯ ಅಂಚಿನಲ್ಲಿದೆಯೇ? ಇದಕ್ಕೆ ಮುಖ್ಯ ಕಾರಣಗಳೇನು ಎನ್ನುವುದನ್ನ ಕೂಡ ತಿಳಿಸುವ ಪ್ರಯತ್ನ ಇಲ್ಲಿದೆ. 
ಪಾಕಿಸ್ತಾನದ ಇಂದಿನ ನಿಜವಾದ ಹಣಕಾಸು ಸ್ಥಿತಿ ಹೇಗಿದೆ? 
ಗಮನಿಸಿ ಮಾಧ್ಯಮಗಳು ಹೊಸ ಪ್ರಧಾನಿ ಇಮ್ರಾನ್ ಖಾನ್ ಸರಕಾರಿ ಸಾಮ್ಯದ ಗುಜರಿ ವಸ್ತುಗಳನ್ನ ಹರಾಜು ಹಾಕಿ ಹಣ ಸಂಪಾದಿಸಿ ಸರಕಾರ ನೆಡೆಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಬೊಬ್ಬೆ ಹಾಕುತ್ತಿವೆ. ಇದೆಷ್ಟು ಬಾಲಿಶ, ಜನರನ್ನ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ ಎನ್ನುವುದಕ್ಕೆ ಉದಾಹರಣೆ ಹೇಳುತ್ತೇನೆ. ಪಾಕಿಸ್ತಾನದ ಸಾಮಾನ್ಯ ಜನರ ಖಾತೆಯನ್ನ ಉಪಯೋಗಿಸಿಕೊಂಡು ವಿದೇಶಕ್ಕೆ ಹಣವನ್ನ ಕಳಿಸಲಾಗುತ್ತದೆ. ಹೀಗೆ ಪಾಕಿಸ್ತಾನದಿಂದ 15,253 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಹಣವನ್ನ ವಿದೇಶಕ್ಕೆ ಕಳಿಸಲಾಗಿದೆ. ಚೀನಾ ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ (CPEC) ಯೋಜನೆಗಾಗಿ ಪಾಕಿಸ್ತಾನ ಚೀನಾ ದೇಶದಿಂದ 60 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಹಣವನ್ನ ಚೀನಾದಿಂದ ಸಾಲದ ರೂಪದಲ್ಲಿ ಪಡೆದಿದೆ. ಗಮನಿಸಿ ಸಾಲದ ಒಂದನೇ ನಾಲ್ಕು ಭಾಗ ದೇಶದಿಂದ ಹೊರಹೋಗಿಯಾಗಿದೆ. ತನ್ನ ಖಾತೆಯಿಂದ ವಿದೇಶಕ್ಕೆ ಹಣವನ್ನ ಕಳಿಸಲಾಗಿದೆ ಎನ್ನುವ ಮಾಹಿತಿ ಕೂಡ ಇರದ ಅಲ್ಲಿನ ನಾಗರೀಕ ನಿಟ್ಟುಸಿರು ಕೂಡ ಬಿಡಲಾಗದ ಪರಿಸ್ಥಿತಿ ಅಲ್ಲಿದೆ. ಇನ್ನು ಅಲ್ಲಿನ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವಂತಿದೆ. ಹೊಸ ಸರಕಾರದ ಖಜಾನೆ ಖಾಲಿ. ಅದೇನೇ ಮಾಡಿದರೂ ಸರಕಾರ ನೆಡೆಸಿ, ದೇಶವನ್ನ ಕುಸಿಯದಂತೆ ತಡೆದು ಚೀನಾ ದೇಶದ ಸಾಲವನ್ನ ವಾಪಸ್ಸು ಕೊಡುವುದು ಕನಸಿನ ಮಾತು. ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಚೀನಾದ ಸಾಲದ ಖೆಡ್ಡಾದಲ್ಲಿ ಬಂಧಿ. ಪಾಕಿಸ್ತಾನವನ್ನ ಬೈಲ್ ಔಟ್ ಮಾಡುವ ಒಂದು ಮನವಿಯನ್ನ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಮುಂದೆ ಇಡಲಾಗಿದೆ. ಇದಕ್ಕಾಗಿ ಪಾಕಿಸ್ತಾನ 12 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಕೇಳಿದೆ. ಈ ಹಣವನ್ನ ಕೊಡಬೇಡಿ ಎಂದು ಅಮೇರಿಕಾ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಮೇಲೆ ಒತ್ತಡ ಹೇರುತ್ತಿದೆ. ನಾವು ಕೊಡುವ ಸಾಲವನ್ನ ಪಡೆದು ಅದನ್ನ ಚೀನಾ ದೇಶಕ್ಕೆ ಪಾಕಿಸ್ತಾನ ನೀಡುತ್ತದೆ ಖಂಡಿತ, ಅದು ನಮ್ಮ ಹಣವನ್ನ ವಾಪಸ್ಸು ಮಾಡುವುದೆಂದು? ಎನ್ನುವುದು ಅಮೇರಿಕಾ ವಾದ. ಒಂದು ವೇಳೆ 12 ಬಿಲಿಯನ್ ಹಣವನ್ನು ಕೊಟ್ಟರೂ ಅದು 'ರಾವಣನ ಹೊಟ್ಟೆಗೆ ಆರುಕಾಸಿನ ಮಜ್ಜಿಗೆ' ಯಂತಾಗುತ್ತದೆ. 
ಒಂದು ಸಣ್ಣ ಲೆಕ್ಕಾಚಾರ ಮಾಡೋಣ ಪಾಕಿಸ್ತಾನ ಇಂದಿರುವ ದೈನೇಸಿ ಸ್ಥಿತಿಯಿಂದ ಹೊರಬರಲು ಎಷ್ಟು ಹಣಬೇಕು ಎನ್ನುವುದನ್ನ ಲೆಕ್ಕ ಹಾಕೋಣ. ಟ್ರೇಡ್ ಡೆಫಿಸಿಟ್ 35 ಬಿಲಿಯನ್, ಚೀನಾದ ಸಾಲ 60 ಬಿಲಿಯನ್, ಇತರೆ ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳಿಗೆ 5 ಬಿಲಿಯನ್ ಎಂದು ಕೊಂಡರೂ, ಇದು ನಿಖರ ಲೆಕ್ಕ ಅಲ್ಲದಿದ್ದರೂ ಕೊನೆ ಪಕ್ಷ 100 ಬಿಲಿಯನ್ ಅಮೆರಿಕನ್ ಡಾಲರ್ ಹಣ ಬೇಕು. ಇದೆಷ್ಟು ದೊಡ್ಡ ದುಡ್ಡು? 100 ಕೋಟಿಗೆ ಒಂದು ಬಿಲಿಯನ್, ಇದಕ್ಕೆ ವಿನಿಮಯ ದರವನ್ನು ಗುಣಿಸಿ., ಒಂದು ಲಕ್ಷ ಕೋಟಿಗೂ ಮೀರಿದ ಪಾಕಿಸ್ತಾನಿ ರೂಪಾಯಿ ಇವರಿಗೀಗ ಬೇಕು. ಇಲ್ಲವೇ ಪಾಕಿಸ್ತಾನ ದಿವಾಳಿಯೆದ್ದು ಹೋಗಲಿದೆ. 
ಹೀಗಾಗಲು ಕಾರಣವೇನು? 
  1. ಟ್ರೇಡ್ ಡೆಫಿಸಿಟ್: ಪಾಕಿಸ್ತಾನ ತನ್ನಲ್ಲಿ ಉತ್ಪನ್ನವಾಗುವ ವಸ್ತುಗಳನ್ನ ಬೇರೆ ದೇಶಗಳಿಗೆ ರಫ್ತು ಮಾಡುತ್ತದೆ. ಹಾಗೆಯೇ ತನಗೆ ಬೇಕಾದ ವಸ್ತುಗಳನ್ನ ಆಮದು ಮಾಡಿಕೊಳ್ಳುತ್ತದೆ. ಈ ಕ್ರಿಯೆ ಜಗತ್ತಿನ ಎಲ್ಲಾ ದೇಶಗಳೂ ಮಾಡುತ್ತವೆ. ನಮ್ಮ ರಫ್ತು ಮತ್ತು ಆಮದಿನ ನಡುವೆ ನಿಯಂತ್ರಣವಿರಬೇಕು. ರಫ್ತಿಗಿಂತ ಹೆಚ್ಚಾದ ಆಮದು ಒಳ್ಳೆಯದಲ್ಲ. ಅದು ಆ ದೇಶದ ಬೆಳವಣಿಗೆಗೆ ಮಾರಕ. ಹೀಗೆ ರಫ್ತು ಮತ್ತು ಆಮದಿನ ನಡುವಿನ ವ್ಯತ್ಯಾಸವನ್ನ ಟ್ರೇಡ್ ಡೆಫಿಸಿಟ್ ಎನ್ನುತ್ತಾರೆ. ಉದಾಹರಣೆಗೆ ಪಾಕಿಸ್ತಾನ ನೂರು ರೂಪಾಯಿ ರಫ್ತು ಮಾಡಿದೆ. ಆಮದು 135 ರೂಪಾಯಿ ಮಾಡಿಕೊಂಡಿದೆ ಎಂದುಕೊಳ್ಳಿ. 35 ರೂಪಾಯಿಯನ್ನ ಟ್ರೇಡ್ ಡೆಫಿಸಿಟ್ ಎನ್ನಲಾಗುತ್ತದೆ. ಇಂದಿಗೆ ಪಾಕಿಸ್ತಾನದ ಟ್ರೇಡ್ ಡೆಫಿಸಿಟ್ 35 ಬಿಲಿಯನ್ ಅಮೆರಿಕನ್ ಡಾಲರ್ . 
  2. ಕುಸಿಯುತ್ತಿರುವ ಫಾರಿನ್ ಕರೆನ್ಸಿ ರಿಸರ್ವ್: ಪ್ರತಿ ದೇಶವೂ ಒಂದಷ್ಟು ಹಣವನ್ನ ವಿದೇಶಿ ಹಣದ ರೂಪದಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಆಕಸ್ಮಾತ್ ಆ ದೇಶದ ಹಣ ಕುಸಿತ ಕಂಡರೆ ಬೇರೆ ದೇಶಗಳಿಗೆ ಪಾವತಿ ಮಾಡಲು ಹಣವಿರುತ್ತದೆ. ವಿದೇಶಿ ಹಣದ ಮೊತ್ತ ಹೆಚ್ಚಾಗಿದ್ದಷ್ಟೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ದೇಶದ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ವಿದೇಶಿ ಹಣದ ಮೌಲ್ಯ ಬಹಳ ಕಡಿಮೆಯಿದೆ. ಎರಡರಿಂದ ಎರಡೂವರೆ ತಿಂಗಳು ವಹಿವಾಟು ನೆಡೆಸುವ ಮಟ್ಟಿನ ಮೀಸಲು ಹಣ ಮಾತ್ರ ಅಲ್ಲಿದೆ. 
  3. ತೆರಿಗೆ ಸಂಗ್ರಹದಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ: ಮೊದಲ ಸಾಲುಗಳಲ್ಲಿ ಹೇಳಿರುವಂತೆ ಪಾಕಿಸ್ತಾನದ ಕೆಲವೇ ಕೆಲವು ಸಾಹುಕಾರರು ಅಲ್ಲಿನ ಜನ ಸಾಮಾನ್ಯನ ಬ್ಯಾಂಕ್ ಖಾತೆಯನ್ನ ಬಳಸಿಕೊಂಡು ಆ ಮೂಲಕ ವಿದೇಶಕ್ಕೆ ಹಣವನ್ನ ಕಳಿಸುತ್ತಾರೆ. ಹೀಗೆ ತನ್ನ ಖಾತೆಯಿದೆ ಅಥವಾ ಆ ಖಾತೆಯಿಂದ ಇಂತಹ ಒಂದು ವ್ಯವಹಾರ ನೆಡೆದಿದೆ ಎನ್ನುವುದು ಕೂಡ ಆ ಸಾಮಾನ್ಯ ಜನರಿಗೆ ಗೊತ್ತಾಗುವುದಿಲ್ಲ. ಹಾಗೊಮ್ಮೆ ತೆರಿಗೆ ಕಛೇರಿ ನೋಟೀಸ್ ಕಳಿಸಿದರೂ ನೋವು ಮಾತ್ರ  ಸಾಮಾನ್ಯ ಪ್ರಜೆಗಷ್ಟೇ ಸೀಮಿತ. ಒಂದು ಸರಕಾರ ನಡೆಯಲು ಹಣ ಬೇಕು ಅದು ಎಲ್ಲಿಂದ ಬರುತ್ತದೆ? ತೆರಿಗೆಯ ರೂಪದಲ್ಲಿ ಪ್ರಜೆಗಳಿಂದ ಅದನ್ನ ಸಂಗ್ರಹಿಸಬೇಕು. ಇಂತಹ ಸಂಗ್ರಹ ಪ್ರಕ್ರಿಯೆಯಲ್ಲೇ ದೋಷವಿದ್ದರೆ? ಅಲ್ಲಿರುವ ಅಧಿಕಾರಿಗಳೇ ಸಿಕ್ಕಷ್ಟು ಹಣವನ್ನ ಪಡೆದು ಅದನ್ನ ಬೇನಾಮಿ ಖಾತೆಯ ಮೂಲಕ ತಮ್ಮ ವಿದೇಶಿ ಖಾತೆಗೆ ಕಳಿಸಲು ಶುರು ಮಾಡಿದರೆ ಏನಾಗುತ್ತದೆ? ಕಾವಲು ಕಾಯಲು ನಿಲ್ಲಿಸಿದ ತೋಳವೇ ಕುರಿಯನ್ನ ತಿಂದರೆ? ಪಾಕಿಸ್ತಾನದಲ್ಲಿ ಇಂದು ಭ್ರಷ್ಟಾಚಾರ ತನ್ನ ಹೆಚ್ಚು ಮಟ್ಟದಲ್ಲಿದೆ. ಇಡೀ ವ್ಯವಸ್ಥೆಯೆ ಹೀಗಿರುವಾಗ ಯಾರನ್ನ ದೂಷಿಸುವುದು? ಹೀಗಾದಾಗ ವ್ಯವಸ್ಥೆ ಕುಸಿಯಲೇ ಬೇಕಲ್ಲವೇ? 
  4. ಅಭಿವೃದ್ಧಿ ಹೆಸರಲ್ಲಿ ಪಡೆದ ಸಾಲದ ಭಾರ: ಚೀನಾ ಹೇಳಿದ ಬಣ್ಣದ ಮಾತಿಗೆ ಹುಟ್ಟಿನಿಂದಲೇ ಭ್ರಷ್ಟರಾದ ಪಾಕಿಸ್ತಾನದ ಅಧಿಕಾರಿ ಮತ್ತು ರಾಜಕಾರಿಣಿ ವರ್ಗ ಜೈ ಎಂದಿದೆ. ಏನೇ ಮಾಡಿದರೂ ವಾಪಸ್ಸು ಕೊಡಲಾಗದಷ್ಟು ದೊಡ್ಡ ಮೊತ್ತದ ಸಾಲವನ್ನ ಚೀನಾದಿಂದ ಪಡೆದಿದೆ. ಹೀಗೆ ಪಡೆದ ಸಾಲದ ನಾಲ್ಕನೇ ಒಂದು ಭಾಗವನ್ನ ಇದೆ ಅಧಿಕಾರಿ ಮತ್ತು ರಾಜಕಾರಿಣಿ ವರ್ಗ ವಿದೇಶದ ತಮ್ಮ ಖಾತೆಗೆ ಆಗಲೇ ವರ್ಗಾವಣೆ ಮಾಡಿಕೊಂಡಿವೆ. ಧರ್ಮದ ಹೆಸರಲ್ಲಿ ಜನರನ್ನ ದಿಕ್ಕು ತಪ್ಪಿಸುವ ಈ ವರ್ಗ ಸದ್ದಿಲ್ಲದೇ ದೇಶ ಕುಸಿಯುವ ಸಮಯದಲ್ಲಿ ದೇಶವನ್ನ ತೊರೆದು ಹೋಗಲಿದ್ದಾರೆ. ಹಾಗೆ ನೋಡಲು ಹೋದರೆ ಪಾಕಿಸ್ತಾನದ ರಿಚ್ ಅಂಡ್ ಎಲೈಟ್ ವರ್ಗದ ಕುಟುಂಬದವರು ಲಂಡನ್ ನಗರವನ್ನ ತಮ್ಮ ಮನೆಯನ್ನಾಗಿ ಮಾಡಿಕೊಂಡು ದಶಕಗಳು ಕಳೆದಿವೆ. 
  5. ಪಾಕಿಸ್ತಾನದ ಹಣದ ಮೌಲ್ಯದಲ್ಲಿ ಭಾರಿ ಕುಸಿತ: ಪಾಕಿಸ್ತಾನದ ಹಣ 2018 ರಲ್ಲಿ ಕಡಿಮೆಯೆಂದರೂ ಮೂರು ಬಾರಿ ಅಪಮೌಲ್ಯ ಗೊಂಡಿದೆ. ಹೀಗೆ ಹಣ ಅಪಮೌಲ್ಯಗೊಂಡರೆ ಸಾಲದ ಮೇಲೆ ನೀಡುವ ಬಡ್ಡಿ, ಸಾಲದ ಮೊತ್ತ ಜೊತೆಗೆ ಆಮದಿಗೆ ನೀಡುವ ಹಣ ಎಲ್ಲವೂ ಹೆಚ್ಚಾಗುತ್ತದೆ. ಏನೂ ಮಾಡದೆ ವಸ್ತುವಿನ ಬೆಲೆ ಹೆಚ್ಚಾಗುತ್ತದೆ. ಜನರ ನಡುವೆ ಓಡಾಡುವ ಹಣದ ಮೊತ್ತ ಮಾತ್ರ ಅಷ್ಟೇ ಇರುತ್ತದೆ. ಹೀಗಾದಾಗ ಮಾರುಕಟ್ಟೆಯಲ್ಲಿ ವಸ್ತು ಮತ್ತು ಸೇವೆಯ ಲಭ್ಯತೆ ಇದ್ದರೂ ಅದನ್ನ ಕೊಳ್ಳುವ ಶಕ್ತಿ ಮಾತ್ರ ಜನರಲ್ಲಿ ಇರುವುದಿಲ್ಲ. ಉದಾಹರಣೆ ನೋಡೋಣ. ಒಂದು ಡಾಲರ್ ಗೆ 1೦೦ ಪಾಕಿಸ್ತಾನಿ ರೂಪಾಯಿ ಎಂದುಕೊಳ್ಳಿ. ಪಾಕಿಸ್ತಾನಿ ರೂಪಾಯಿ ಅಪಮೌಲ್ಯಗೊಂಡು 1 ಡಾಲರ್ ಗೆ 110 ರೂಪಾಯಿ ಆಯಿತು ಎಂದುಕೊಳ್ಳಿ. ಆಗ ಒಂದು ಡಾಲರ್ ಸಾಲದ ಹಣವನ್ನ ವಾಪಸ್ಸು ಕೊಡಲು ಹಿಂದೆ 1೦೦ ರೂಪಾಯಿ ಕೊಡಬೇಕಾಗಿತ್ತು ಈಗ 11೦(ನೂರಾಹತ್ತು) ಕೊಡಬೇಕು. ಅಂದರೆ ಸಾಲದ ಮೊತ್ತ ಪ್ರತಿ ಡಾಲರಿಗೆ ಹತ್ತು ರೂಪಾಯಿ ಜಾಸ್ತಿ ಆಯ್ತು. ಇದನ್ನ ತೈಲ ಕೊಳ್ಳಲು ಮತ್ತಿತರ ವಹಿವಾಟಿಗೂ ಅನ್ವಯಿಸಿ. ಮತ್ತು ಇದನ್ನ ಕೋಟಿಗಳ ಮೌಲ್ಯದಲ್ಲಿ ಗಮನಿಸಿ ಇದೆಷ್ಟು ದೊಡ್ಡ ಪ್ರಮಾಣದ ಹೊಡೆತ ನೀಡುತ್ತದೆ ಎನ್ನುವ ಅರಿವು ನಿಮ್ಮದಾಗುತ್ತದೆ. 
  6. ಬದಲಾದ ಅಮೇರಿಕಾ ನಿಲುವು: ಇತ್ತೀಚಿಗೆ ಅಮೇರಿಕಾ ಅಧ್ಯಕ್ಷ ಮತ್ತು ಪಾಕಿಸ್ತಾನದ ಹೊಸ ಪ್ರಧಾನಮಂತ್ರಿ ನಡುವೆ ಟ್ವೀಟ್ ಸಮರ ನೆಡೆದದ್ದು ತಿಳಿದಿರುವ ವಿಷಯ. ಅಮೇರಿಕಾ ದೇಶ ಪಾಕಿಸ್ತಾನಕ್ಕೆ ಹಿಂದಿನಿಂದಲೂ ಹಣವನ್ನ ದೇಣಿಗೆ ರೂಪದಲ್ಲಿ ನೀಡುತ್ತಾ ಬಂದಿದೆ. ಇದೀಗ ತಾನು ನೀಡುವ ಸಹಾಯದಲ್ಲಿ ಅದು ಕಡಿತ ಮಾಡಿದೆ. ಜೊತೆಗೆ ಪಾಕಿಸ್ತಾನಕ್ಕೆ ಸಹಾಯವಾಗಲಿ ಎಂದು ನೀಡುವ ಹಣವನ್ನ ಅದು ಭಯೋತ್ಪಾದನೆಗೆ ಬಳಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಳಿಕೆ ನೀಡಿದೆ. ತಾನು ನೀಡುವ ಸಹಾಯವನ್ನ ಸಂಪೂರ್ಣ ನಿಲ್ಲಿಸುವುದಾಗಿ ಕೂಡ ಅದು ಹೇಳಿಕೆ ಕೊಟ್ಟಿದೆ. ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಮುಂದೆ ಕೈಚಾಚಿ ನಿಂತಿರುವ ಪಾಕಿಸ್ತಾನಕ್ಕೆ ಹಣವನ್ನ ಕೊಡಬೇಡಿ. ನಾವು ಕೊಡುವ ಹಣವನ್ನ ಅವರು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಅಲ್ಲಿ ಕೂಡ ಅಮೇರಿಕಾ ಅಡ್ಡಗಾಲು ಹಾಕಿದೆ. ಪಾಕಿಸ್ತಾನ ಇಷ್ಟು ವರ್ಷ ತನ್ನೆಲ್ಲಾ ಕುಕರ್ಮಗಳ ನಡುವೆಯೂ ಜೀವಿಸಿಕೊಂಡು ಬರಲು ಅಪರೋಕ್ಷವಾಗಿ ಅಮೇರಿಕಾ ಕಾರಣ. ಸದ್ಯದ ಪರಿಸ್ಥಿತಿಯಲ್ಲಿ ವ್ಯಾಪಾರಕ್ಕೆ ಮತ್ತು ಚೀನಾವನ್ನ ಸಮರ್ಥವಾಗಿ ಮೆಟ್ಟಿ ನಿಲ್ಲುವ ಮತ್ತು ಹಣಕ್ಕಾಗಿ ತನ್ನ ಅವಲಂಬಿಸಿದ ಭಾರತ ಅಮೆರಿಕಾಕ್ಕೆ ಹೆಚ್ಚು ಅಪ್ಯಾಯಮಾನವಾಗಿ ಕಂಡಿದೆ. ಒಂದರ್ಥದಲ್ಲಿ ಇದು ಭಾರತದ ಕೇಂದ್ರ ಸರಕಾರದ ರಾಜತಾಂತ್ರಿಕ ಗೆಲುವು ಕೂಡ ಆಗಿದೆ. 
  7. ಭಾರತದ ನೋಟ್ ಬ್ಯಾನ್ ಮತ್ತು ಅಚ್ಚುಕಟ್ಟಾದ ಬೇಹುಗಾರಿಕೆ ನಿರ್ವಹಣೆ: ಭಾರತ ಡಿಮೋನಿಟೈಸೇಶನ್ ಮಾಡಿದ್ದು ಅಪರೋಕ್ಷವಾಗಿ ಪಾಕಿಸ್ತಾನದಲ್ಲಿ ಬೇರೋರಿದ್ದ ಹಲವಾರು ಭಯೋತ್ಪಾದನೆ ಸಂಸ್ಥೆಗಳಿಗೆ ಸಿಗುತ್ತಿದ್ದ ಹಣಕಾಸಿಗೆ ಕತ್ತರಿ ಬಿದ್ದಿದೆ. ಇಂತಹ ಭಯೋತ್ಪಾದನೆ ಮಾಡುವ ಸಂಘಟನೆಗಳಿಗೆ ಕಳೆದ ನಾಲ್ಕು ವರ್ಷದಿಂದ ಭಾರತದ ನೆಲದಲ್ಲಿ ಕೆಲಸವಿಲ್ಲ. ಅವಕ್ಕೆ ಕೆಲಸ ಸಿಗುವುದು ಅವು ತಮ್ಮ ಕಾರ್ಯದಲ್ಲಿ ಯಶಸ್ಸು ಕಂಡಾಗ ಮಾತ್ರ. ಭಾರತದ ಬೇಹುಗಾರಿಕೆ ಸಂಸ್ಥೆ ಇಂತಹ ಹಲವು ಕೃತ್ಯಗಳನ್ನ ತಡೆದಿದೆ. ಹೀಗಾಗಿ ಇಂದು ಈ ಸಂಘಟನೆಗಳು ತಮ್ಮ ನೆಲೆಯನ್ನ ಕಳೆದುಕೊಳ್ಳುತ್ತಿದೆ. ಪಾಕಿಸ್ತಾನ ಏನೇ ಹೇಳಲಿ ಇಂತಹ ಸಂಘಟೆನೆಗಳು ಅಲ್ಲಿ ಹಣಕಾಸು ಹರಿದಾಡಲು ಸಹಾಯ ಮಾಡುತ್ತಿದ್ದವು ಎನ್ನುವುದನ್ನ ಅಲ್ಲಗೆಳೆಯಲು ಮಾತ್ರ ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿ ಇನ್ನೊಂದು ಪರ್ಯಾಯ ವ್ಯವಸ್ಥೆ ಸೃಷ್ಟಿಯಾಗಿತ್ತು. ಇದೀಗ ಅದು ಕುಸಿತ ಕಂಡಿದೆ. 
ಕೊನೆಮಾತು: ಪಾಕಿಸ್ತಾನದಲ್ಲಿ ಇಂದಿಗೆ ಯಾವುದೂ ಸರಿಯಿಲ್ಲ. ಒಂದಷ್ಟು ಹಣಕಾಸು ಭದ್ರತೆ ಹೊಂದಿರುವ ಜನ ಸದ್ದಿಲ್ಲದೇ ಪಾಕಿಸ್ತಾನದಿಂದ ಪಲಾಯನ ಮಾಡುತ್ತಿದ್ದಾರೆ. ಅಲ್ಲಿನ ಹಣ ದೇಶದ  ಜನರಿಗಿಂತ ಮುಂಚೆಯೆ ವಿದೇಶ ಸೇರಿಯಾಗಿದೆ. 
ಜನ ಸಾಮಾನ್ಯ ಮಾತ್ರ ನಾಳಿನ ಬದುಕಿನ ಬಗ್ಗೆ ಭರವಸೆಯಿಲ್ಲದೆ ಬಂದದ್ದು ಬರಲಿ ಎನ್ನುವ ಮನೋಭಾವದಲ್ಲಿದ್ದಾನೆ. ಆತ ಇನ್ನೇನು ತಾನೇ ಮಾಡಿಯಾನು? ಧರ್ಮದ ಹೆಸರಲ್ಲಿ ಒಂದು ದೇಶವನ್ನ ಲೂಟಿ ಮಾಡಲಾಗಿದೆ. ಜನ ಹೆಚ್ಚೆಚ್ಚು ಅಕ್ಷರಸ್ಥರು ಮತ್ತು ತಿಳುವಳಿಕೆ ಉಳ್ಳವರೂ ಆದರೆ ಆಗ ಒಂದು ಸಮಾಜ/ದೇಶ ಅಭಿವೃದ್ಧಿ ಕಾಣಬಲ್ಲದು. ಕೇವಲ ಧರ್ಮದ ಹೆಸರಲ್ಲಿ ಮೆಜಾರಿಟಿ ಜನರನ್ನ ದಾರಿ ತಪ್ಪಿಸಿ ದೇಶದ ಖಜಾನೆ ಖಾಲಿ ಮಾಡಿ ಯಾವುದೆಲ್ಲ ಧರ್ಮದಲ್ಲಿ ಮಾಡಬಾರದು ಎನ್ನುತ್ತಾರೆ ಅವೆಲ್ಲಾ ಮಾಡಿಕೊಂಡು ಒಂದು ವರ್ಗ ಸುಖವಾಗಿರುತ್ತದೆ. ಉಳಿದ 99 ಜನ ಹತಾಶೆಯಲ್ಲಿ ದಿನ ದೂಡಬೇಕಿದೆ. ಹಣಕ್ಕಿಂತ ಬೇರೆ ಧರ್ಮವಿಲ್ಲ ಎನ್ನುವುದನ್ನ ಪಾಕಿಸ್ತಾನದ ರಿಚ್ ಅಂಡ್ ಎಲೈಟ್ ವರ್ಗ ಮತ್ತೆ ಸಾಬೀತುಪಡಿಸಿದ್ದಾರೆ. ಇವೆಲ್ಲಾ ಕಳೆದು ಪಾಕಿಸ್ತಾನದಲ್ಲಿ ಹೊಸಗಾಳಿ ಬೀಸಬಹುದೆ? ಸದ್ಯಕ್ಕೆ ಇದು ಉತ್ತರವಿಲ್ಲದ ಪ್ರಶ್ನೆ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com