ಜಿಡಿಪಿ ಕುಸಿತಕ್ಕೆ ಕಾರಣಗಳೇನು?

ಗಮನಿಸಿ ನೋಡಿ ಭಾರತದಲ್ಲಿ ಎಲ್ಲವೂ ಸರಿಯಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುವ ಬದಲಾವಣೆ ಭಾರತದ ಮಾರುಕಟ್ಟೆಯನ್ನ ಕುಸಿಯುವಂತೆ ಮಾಡುತ್ತದೆ. ಇಂದು ಜಗತ್ತು ಹಿಂದೆಂದಿಗಿಂತ ಹೆಚ್ಚು ಅವಲಂಬಿತವಾಗಿವೆ.
ಜೆಡಿಪಿ ಕುಸಿತಕ್ಕೆ ಕಾರಣಗಳೇನು?
ಜೆಡಿಪಿ ಕುಸಿತಕ್ಕೆ ಕಾರಣಗಳೇನು?

ನಿತ್ಯ ನ್ಯೂಸ್ ಪೇಪರ್ ಓದುವಾಗಲೂ ಅಥವಾ ಟಿವಿಯಲ್ಲಿ ನ್ಯೂಸ್ ನೋಡುವಾಗಲೂ ಹೇಗೋ ನಾವೆಲ್ಲಾ ಒಂದಲ್ಲ ಒಂದು ಬಾರಿ ಈ ಪದಗಳನ್ನು ಕೇಳಿರುತ್ತೇವೆ. ಅವೆಂದರೆ ಎಕಾನಾಮಿ, ಜಿಡಿಪಿ, ಗ್ರೋಥ್ ರೇಟ್, ಫಿಸ್ಕಲ್ ಪಾಲಿಸಿ ಇತ್ಯಾದಿ. ಎಕಾನಮಿ ಎನ್ನುವ ಪದವಂತೂ ಕೇಳದೆ ಇರುವವರಿಲ್ಲ.

ನಿತ್ಯ ಜೀವನದ ಆಡು ಭಾಷೆಯಲ್ಲೂ ‘ಯಾಕೋ ಸ್ವಲ್ಪ ಎಕಾನಮಿ ಡೌನ್ ಇದ್ದಹಾಗೆ ಕಾಣುತ್ತೆ’ ಅಂತಲೋ ‘ಈ ವರ್ಷ ಜಿಡಿಪಿ ಗ್ರೋಥ್ ರೇಟ್ ಚೆನ್ನಾಗಿದೆ ಯಾಕೆಂದರೆ ಸರಕಾರದ ಫಿಸ್ಕಲ್ ಪಾಲಿಸಿ ಉತ್ತಮವಾಗಿದೆ’ ಎನ್ನುವ ಮಾತುಗಳನ್ನು ಕೇಳಿರುತ್ತೇವೆ. ಹೀಗೆ ಜನ ಸಾಮಾನ್ಯ ಕೂಡ ಬಹಳ ತಿಳಿದಿರುವಂತೆ ಹಲವಾರು ಪದಗಳನ್ನ ಉಚ್ಛರಿಸುತ್ತಾನಷ್ಟೇ. ಆದರೆ ಅವುಗಳ ನಿಜವಾದ ಅರ್ಥವೇನು? ಎಂದರೆ ತಬ್ಬಿಬ್ಬಾಗುವುದು ಕೂಡ ತಿಳಿದ ವಿಷಯ. ಇದರ ಬಗ್ಗೆ ಒಂದು ಸಣ್ಣ ನಿದರ್ಶನವಿದೆ. ಶೇಕ್ಸ್ಪಿಯರ್ ಅತ್ಯುತ್ತಮ ಬರಹಗಾರ ಎನ್ನುವುದನ್ನ ಸಮಾಜದಲ್ಲಿ ನೂರು ಜನರಿದ್ದರೆ ಅವರೆಲ್ಲ ಒಪ್ಪುತ್ತಾರೆ ಆದರೆ ಅವರಲ್ಲೂ ಒಬ್ಬ ಮಾತ್ರ ಶೇಕ್ಸ್ಪಿಯರ್ ಬಗ್ಗೆ ಆತನ ಬರಹಗಳನ್ನ ಓದಿರುತ್ತಾನೆ. ಉಳಿದವರು ಆತ ಬೆಸ್ಟ್ ಬರಹಗಾರ ಎನ್ನುವುದನ್ನ ಸುಮ್ಮನೆ ಎಂಡಾರ್ಸ್ ಮಾಡುತ್ತಾರೆ. ಆರ್ಥಿಕತೆಯ ಸ್ಥಿತಿಯು ಇದಕ್ಕಿಂತ ಹೊರತಾಗಿಲ್ಲ. ಇಂದಿನ ಅಂಕಣದಲ್ಲಿ ಇಂತಹ ಪದಗಳ ಡೆಫಿನಿಷನ್ ತಿಳಿದುಕೊಳ್ಳೋಣ ಜೊತೆಗೆ ಇವತ್ತು ಸಮಾಜದಲ್ಲಿ ಹೆಚ್ಚು ಚಲಾವಣೆಯಲ್ಲಿರುವ ಜಿಡಿಪಿ ಕುಸಿತಕ್ಕೆ ಕಾರಣಗಳನ್ನ ಹುಡುಕೋಣ. 

ಎಕಾನಮಿ ಎಂದರೇನು?: ಒಂದು ದೇಶದ ಒಟ್ಟು ಸರಕು ಉತ್ಪಾದನೆ, ಬಳಕೆ ಮತ್ತು ಮತ್ತು ಸಮಾಜದಲ್ಲಿ ಹಣದ ಹರಿಯುವಿಕೆಯನ್ನು ಒಗ್ಗೂಡಿಸಿ ಎಕಾನಮಿ ಎನ್ನುತ್ತಾರೆ. ಸರಳವಾಗಿ ಒಂದು ದೇಶದ ಹಣಕಾಸು ಆರೋಗ್ಯ ಹೇಳುವ ರಿಪೋರ್ಟ್ ಕಾರ್ಡ್ ಇದ್ದಹಾಗೆ. ಹೀಗೆ ದೇಶದ ಒಟ್ಟು ಆರ್ಥಿಕತೆಯನ್ನು ಅಧ್ಯಯನ ಮಾಡುವ ವಿಧಾನಕ್ಕೆ ಎಕನಾಮಿಕ್ಸ್ ಎನ್ನುತ್ತಾರೆ.

ಗ್ರಾಹಕರ ನಡವಳಿಕೆ, ವಸ್ತುವಿನ ಬೆಲೆ ನಿಗದಿ, ಲಾಭ, ನಷ್ಟ ಇವುಗಳ ಅಧ್ಯಯನ ಮಾಡುವುದಕ್ಕೆ ಮೈಕ್ರೋ ಎಕಾನಮಿ ಎನ್ನುತ್ತಾರೆ. ಜಿಡಿಪಿ, ಇಂಟರೆಸ್ಟ್ ರೇಟ್, ಬಿಸಿನೆಸ್ ಸೈಕಲ್ ಇಡೀ ದೇಶಕ್ಕೆ ಸಂಬಂಧಪಟ್ಟ ವಿಷಯಗಳ ಅಧ್ಯಯನಕ್ಕೆ ಮ್ಯಾಕ್ರೋ ಎಕಾನಮಿ ಎನ್ನುತ್ತಾರೆ. ಮೈಕ್ರೋ ಒಂದು ಸಮುದಾಯ, ಸಂಸ್ಥೆಗೆ ಪರಿಣಾಮ ಬೀರಬಲ್ಲ ವಸ್ತು-ವಿಷಯಗಳ ಅಧ್ಯಯನವಾದರೆ, ಮ್ಯಾಕ್ರೋ ದೇಶದ ಮೇಲೆ ಪ್ರಭಾವ ಬೀರುವ ವಸ್ತು ವಿಷಯಗಳ ಕುರಿತು ಅಧ್ಯಯನ ಮಾಡುತ್ತದೆ.

ಜಿಡಿಪಿ ಎಂದರೇನು?: ಗ್ರೋಸ್ ಡೊಮೆಸ್ಟಿಕ್ ಪ್ರಾಡಕ್ಟ್ ಎನ್ನುವುದು ಎಕಾನಾಮಿಯ ಗಾತ್ರ ಅಳೆಯಲು ಅಥವಾ ಜಗತ್ತಿಗೆ ನಾವಿಷ್ಟು ದೊಡ್ಡ ಸಮಾಜ, ದೇಶ ಎಂದು ಹೇಳಲು ಬಳಸುವ ಮಾನದಂಡ. ಒಂದು ದೇಶದ ಜನರ ಒಟ್ಟು ಆದಾಯ ಮತ್ತು ಆ ದೇಶದ ಒಟ್ಟು ಸರಕು-ಸೇವೆಯ ಮಾರುಕಟ್ಟೆ ಮೌಲ್ಯವನ್ನ ಜಿಡಿಪಿ ಎನ್ನುತ್ತಾರೆ. ಉದಾಹರಣೆಗೆ 120 ಕೋಟಿ ಭಾರತೀಯರ ಆದಾಯ 100 ಕೋಟಿ  ಎಂದುಕೊಳ್ಳಿ. ಸರಕು-ಸೇವೆಯ ಮೌಲ್ಯ ಇನ್ನೊಂದು 100 ಕೋಟಿ ಎಂದುಕೊಳ್ಳಿ. ಆಗ ನಾವು ಜಗತ್ತಿನ ಮುಂದೆ ನಾವು 200 ಕೋಟಿ ಎಕಾನಮಿ ಎಂದು ಹೇಳಿಕೊಳ್ಳಬಹುದು. ಜಗತ್ತಿನ ಒಟ್ಟು ಜಿಡಿಪಿಯ ಇಪ್ಪತೈದು ಭಾಗ ಹೊಂದಿರುವ ಅಮೆರಿಕದ  ಮೊದಲ ಸ್ಥಾನದಲ್ಲಿ ಅಬಾಧಿತವಾಗಿದೆ. ಅಮೆರಿಕಕ್ಕೆ ಸೆಡ್ಡು ಹೊಡೆದು ನಿಂತಿರುವ ಚೀನಾ ಜಗತ್ತಿನ 15 ಭಾಗ ತನ್ನದಾಗಿಸಿಕೊಂಡು ಎರಡನೇ ಸ್ಥಾನದಲ್ಲಿದೆ. ಜಗತ್ತಿನ ಜಿಡಿಪಿಯಲ್ಲಿ ಭಾರತದ ಭಾಗ ಕೇವಲ ಮೂರು. ಜಗತ್ತಿನ ಮೊದಲ ಹತ್ತು ದೇಶಗಳು ಜಗತ್ತಿನ 65 ಭಾಗ ಸಂಪತ್ತಿನ ಮೇಲೆ ಒಡೆತನ ಹೊಂದಿವೆ. ಉಳಿದ 186 ದೇಶಗಳಲ್ಲಿ ಮಿಕ್ಕ 35 ಭಾಗ ಜಿಡಿಪಿ ಹಂಚಿಕೆಯಾಗಿದೆ. 

ಗ್ರೋಥ್ ರೇಟ್ ಎಂದರೇನು?: ಗ್ರೋಥ್ ರೇಟ್ ಜಿಡಿಪಿಯೊಂದಿಗೆ ಬೆಸೆದುಕೊಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಯಿತೇ? ಹೌದಾದರೆ ಎಷ್ಟು ಎನ್ನುವುದನ್ನು ಸೂಚಿಸಲು ಗ್ರೋಥ್ ರೇಟ್ ಎನ್ನುತ್ತಾರೆ. ಒಟ್ಟು ರಾಷ್ಟೀಯ ಆದಾಯವನ್ನ ಜಿಡಿಪಿ ಎನ್ನುತ್ತೇವೆ. ಅದು 2018 ರಲ್ಲಿ 100 ರೂಪಾಯಿ ಇತ್ತು ಎಂದುಕೊಳ್ಳಿ. 2019ರಲ್ಲಿ 108 ರೂಪಾಯಿ ಎಂದುಕೊಳ್ಳಿ. ಇವೆರಡರ ನಡುವಿನ ಅಂತರ 8 ರೂಪಾಯಿ. 2018 ಕ್ಕೆ ಹೋಲಿಕೆ ಮಾಡಿ ನೋಡಿದರೆ ನಮ್ಮ ಜಿಡಿಪಿ 8 ಪ್ರತಿಶತ ವೃದ್ಧಿ ಹೊಂದಿದೆ ಎನ್ನಬಹುದು. ಅಂದರೆ ಗ್ರೋಥ್ ರೇಟ್ 8. 108-100=8. (8/100)100=8%.

ಫಿಸ್ಕಲ್ ಪಾಲಿಸಿ ಎಂದರೇನು?: ಸರಕಾರ ತನ್ನ ಎಕಾನಮಿ ಮೇಲೆ ಹಿಡಿತ ಹೊಂದಲು ತಾನು ಸಮಾಜಕ್ಕೆ ಮಾಡುವ ಖರ್ಚು ವೆಚ್ಚದ ನೀಲನಕ್ಷೆ ತಯಾರಿಸುತ್ತದೆ. ಇದು ಮಾಡಬೇಕು, ಇದು ಮಾಡಬಾರದು ಎನ್ನುವ ರೂಪುರೇಷೆಗೆ ಫಿಸ್ಕಲ್ ಪಾಲಿಸಿ ಎನ್ನುತ್ತಾರೆ. ಸಾಮಾನ್ಯವಾಗಿ ಒಂದು ದೇಶ ಹೈ ಗ್ರೋಥ್ ನಲ್ಲಿದ್ದಾಗ ಸರಕಾರ ತಾನು ಮಾಡುವ ಖರ್ಚನ್ನು ತುಂಬಾ ಕಡಿಮೆ ಮಾಡುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಒಂದು ದೇಶ ಸಂಕಷ್ಟದಲ್ಲಿದ್ದಾಗ ಸರಕಾರ ಹೆಚ್ಚು ಹಣ ಖರ್ಚು ಮಾಡುತ್ತದೆ. ಲೊ ಗ್ರೋಥ್ ಇರುವಾಗ ಹೆಚ್ಚು ಖರ್ಚು ಮಾಡುವ ಮೂಲಕ ಹೊಸ ಕೆಲಸ ಇತ್ಯಾದಿಗಳ ಸೃಷ್ಟಿ ಮಾಡಿ ಆತಂಕದಲ್ಲಿ ಇರುವ ಸಮಾಜವನ್ನ ಪುನಶ್ಚೇತನ ಮಾಡುವುದು ಉದ್ದೇಶ.

ಜಿಡಿಪಿ ಕುಸಿತಕ್ಕೆ ಕಾರಣಗಳೇನು?: ಮುದ್ರಣ ಮಾಧ್ಯಮದಿಂದ ಹಿಡಿದು ದೃಶ್ಯ ಮಾಧ್ಯಮದವರೆಗೆ ಎಲ್ಲಾ ಮಾಧ್ಯಮಗಳಲ್ಲಿ ಕಳೆದ ಆರು ವರ್ಷಗಳಲ್ಲಿ ಅತ್ಯಂತ ಕಡಿಮೆ ಜಿಡಿಪಿ ಇದೀಗ ದಾಖಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಂಕಿ ಸಂಖ್ಯೆಯ ಆಧಾರದ ಮೇಲೆ ನೋಡುವುದಾದರೆ ಅದು ಹೌದು ಜಿಡಿಪಿ ಕುಸಿದಿದೆ. ಇದಕ್ಕೆ ಕಾರಣಗಳೇನಿರಬಹದು. 

  1. ಬಾಹ್ಯ ಕಾರಣ: ಗಮನಿಸಿ ನೋಡಿ ಭಾರತದಲ್ಲಿ ಎಲ್ಲವೂ ಸರಿಯಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುವ ಬದಲಾವಣೆ ಭಾರತದ ಮಾರುಕಟ್ಟೆಯನ್ನ ಕುಸಿಯುವಂತೆ ಮಾಡುತ್ತದೆ. ಇಂದು ಜಗತ್ತು ಹಿಂದೆಂದಿಗಿಂತ ಹೆಚ್ಚು ಅವಲಂಬಿತವಾಗಿವೆ. ಬ್ರಿಟನ್ ಯೂರೋಪಿಯನ್ ಯೂನಿಯನ್ ಬಿಡುವುದಿರಬಹದು, ಚೀನಾ ಅಮೇರಿಕಾ ಟ್ರೇಡ್ ವಾರ್ ಇರಬಹದು ಇವೆಲ್ಲ ಅವರ ನಡುವಿನ ಸಮಸ್ಯೆಗಳು ಎನ್ನುವ ಹಾಗಿಲ್ಲ. ಇವು ಇಂದಿಗೆ ಗ್ಲೋಬಲ್ ಸಮಸ್ಯೆಗಳು. ಇವು ಭಾರತದ ಆಟೋಮೊಬೈಲ್ ಮತ್ತು ಟೆಕ್ಸ್ ಟೈಲ್ ಉದ್ದಿಮೆಗಳ ಮೇಲೆ ಭಾರಿ ಹೊಡೆತ ನೀಡಿವೆ. ಹೀಗಾಗಿ ಉತ್ಪಾದನಾ ವಲಯದಲ್ಲಿ ಕುಸಿತ ಕಂಡು ಬಂದಿದೆ. ಇದು ಜಿಡಿಪಿ ಕುಸಿಯಲು ಕಾರಣವಾಗಿದೆ. 
  2. ಹಣಕಾಸು ಸಂಸ್ಥೆಗಳಲ್ಲಿ ಇರುವ ಅನುತ್ಪಾದಕ ಆಸ್ತಿ ಮತ್ತು Infrastructure Leasing & Financial Services (ಐಎಲ್ಅಂಡ್ಎಫ್) ಕುಸಿತ ಕೂಡ ಜಿಡಿಪಿ ಕುಸಿತಕ್ಕೆ ದೇಣಿಗೆ ನೀಡಿದೆ. 
  3. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ ಹತ್ತು ವರ್ಷದಿಂದ ಹಣಕಾಸು ಮುಗ್ಗಟ್ಟು ಕಂಡು ಬರುತ್ತಿದೆ. ಅದು ಸರಿಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ ಗಳಿಗೆ ತಮ್ಮ ಹೂಡಿಕೆಯ ಮೇಲೆ ಹೆಚ್ಚಿನ ತೆರಿಗೆಯನ್ನ ವಿಧಿಸುವ ಅವಶ್ಯಕತೆ ಇರಲಿಲ್ಲ. 2019 ಬಜೆಟ್ ನಲ್ಲಿ ಇಂತಹ ಒಂದು ಪ್ರಮಾದ ಎಸಗಲಾಯಿತು. FII ತಮ್ಮ ಹೂಡಿಕೆಯ ಹಣವನ್ನ ಹೊರತೆಗೆದರು. ಇಂದಿನ ಕ್ಯಾಪಿಟಲ್ ಮಾರ್ಕೆಟ್ ನಲ್ಲಿ ಹೂಡಿಕೆಗೆ ಮತ್ತು ವೃದ್ಧಿಗೆ ಬೇಕಾದ ಹಣದ ಕೊರತೆಯಿದೆ. ಹೀಗಾಗಿ ಗ್ರೋಥ್ ರೇಟ್ ಕಡಿಮೆಯಾಗಿದೆ. ಇದು ಜಿಡಿಪಿ ಕಡಿಮೆಯಾಗಲು ಕಾರಣವಾಗಿದೆ. 
  4. ಗಮನಿಸಿ ಇವೆಲ್ಲಾ ಚೈನ್ ರಿಯಾಕ್ಷನ್ ಗೆ ದಾರಿ ಮಾಡಿಕೊಡುತ್ತವೆ. ಮೇಲಿನ ಕಾರಣಗಳು ಸ್ಟಾಕ್ ಮಾರ್ಕೆಟ್ ಕುಸಿತಕ್ಕೆ ಕಾರಣವಾದವು. ಹೂಡಿಕೆದಾರ ಅತ್ಯಂತ ಸೂಕ್ಷ್ಮ ಮನಸ್ಸಿನವನು. ತನ್ನ ಹಣ ಮುಳುಗುವ ಒಂದು ಸಣ್ಣ ಸಂಶಯ ಬಂದರೆ ಸಾಕು ಆತ ಅಲ್ಲಿಂದ ಪರಾರಿಯಾಗುತ್ತಾನೆ. ವಿಷಯ ಸುಳ್ಳೆ ಆಗಿದ್ದರೂ ಆತ ಕಾಡು ನೋಡುವ ತಂತ್ರಕ್ಕೆ ಮೊರೆ ಹೋಗುತ್ತಾನೆ. ಹೀಗಾಗಿ ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾಗಿದೆ. 
  5. ಇನ್ನೊಂದು ಗಮನಿಸ ಬೇಕಾದ ಅಂಶವೆಂದರೆ ನಮ್ಮ ದೇಶದಲ್ಲಿನ ಜಿಡಿಪಿ ಮತ್ತು ಗ್ರೋಥ್ ರೇಟ್ ಅಂಶಗಳು ಅವು ಸಕಾರಾತ್ಮಕವಾಗಿರಲಿ ಅಥವಾ ನಕಾರಾತ್ಮಕವಾಗಿರಲಿ ಅವುಗಳನ್ನ ಪೂರ್ಣವಾಗಿ ನಂಬಲು ಸಾಧ್ಯವಿಲ್ಲ. ಏಕೆಂದರೆ ಭಾರತದಲ್ಲಿ ಎಷ್ಟು ಆರ್ಗನೈಸ್ಡ್ ಸೆಕ್ಟರ್ ಗಳಿವೆ ಅಷ್ಟೇ ಆನ್ ಆರ್ಗನೈಸ್ಡ್ ಸೆಕ್ಟರ್ ಗಳಿವೆ. ಇಲ್ಲಿಯ ಅಂಕಿ-ಅಂಶವನ್ನ ಹೊರತೆಗೆಯುವುದು ಹೇಗೆ? ಸಮಾಜದ ಎಲ್ಲಾ ಸೆಕ್ಟರ್ ಗಳು ಕೆಟ್ಟದಾಗಿಲ್ಲ. ಆದರೆ ಹಲವು ಸೆಕ್ಟರ್ ಗಳಲ್ಲಿ ಕುಸಿದಿರುವ ಬೇಡಿಕೆ ಜಿಡಿಪಿ ಕುಸಿತಕ್ಕೆ ಕಾರಣವಾಗಿವೆ. 

ಕೊನೆ ಮಾತು: ನೆನಪಿಡಿ  ಜಿಡಿಪಿ, ಗ್ರೋಥ್ ರೇಟ್ ಇವೆಲ್ಲ ಫೋಟೋ ಇದ್ದಹಾಗೆ. ಅಂದರೆ ಗಮನಿಸಿ ಒಂದು ಫೋಟೋದಲ್ಲಿ ನೀವು ಕಣ್ಣು ಮುಚ್ಚಿರಬಹದು ಅಥವಾ ಬಾಯಿ ದೊಡ್ಡದಾಗಿ ತೆಗೆದಿರಬಹದು. ಕೆಲವೊಂದು ಫೋಟೋದಲ್ಲಿ ನೀವು ಅತ್ಯಂತ ಕೆಟ್ಟದಾಗಿ ಕಾಣಬಹದು ಅಥವಾ ಸುಂದರವಾಗಿ ಕಾಣಬಹದು. ಅವೆಲ್ಲ ಆ ಕ್ಷಣದ ಚಿತ್ರಗಳು. ಚಿತ್ರ ತೆಗೆದ ಮರುಗಳಿಗೆ ನೀವು ಕಣ್ಣು ಸಾಮಾನ್ಯವಾಗೇ ಬಿಟ್ಟಿರುತ್ತೀರಿ. ಅಲ್ಲವೇ? ಬದುಕಿನಲ್ಲಿ ಹೇಗೆ ಏರಿಳಿತ ಸಾಮಾನ್ಯವೂ ಅಷ್ಟೇ ಸಾಮಾನ್ಯವಾಗಿ ಇಂತಹ ಏರಿಳಿತಗಳು ಕೂಡ. ಅಂದಹಾಗೆ ನಮ್ಮ ಕುಸಿದ ಜಿಡಿಪಿ ಸಂಖ್ಯೆಯ ಅರ್ಧ ಕೂಡ ಜಗತ್ತಿನ 90 ಪ್ರತಿಶತ ದೇಶಗಳು ಸಾಧಿಸುತ್ತಿಲ್ಲ. ಚೀನಾ ಮತ್ತು ಅಮೇರಿಕಾ ಟ್ರೇಡ್ ವಾರ್ ನಿಂದ ಬಸವಳಿದಿವೆ. ಆರ್ಥಿಕ ಮಂದಗತಿ ಎನ್ನುವ ಕೂಗು ಬಂದಾಗೆಲ್ಲಾ ನಾವು ನೆನಪಿಡಬೇಕಾದ ಮಹಾ ಮಂತ್ರ ತಾಳ್ಮೆ. 


- ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com