ದುಡಿಮೆಯೊಂದೇ ಸಿರಿವಂತಿಕೆಯ ಗುಟ್ಟೇ? 

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ದುಡಿಮೆಯೊಂದೇ ಸಿರಿವಂತಿಕೆಯ ಗುಟ್ಟೇ?
ದುಡಿಮೆಯೊಂದೇ ಸಿರಿವಂತಿಕೆಯ ಗುಟ್ಟೇ?

ನಮ್ಮ ಜನರಲ್ಲಿ ಹಣಕಾಸಿಗೆ ಸಂಬಂಧಪಟ್ಟ ಹಲವು ಮಿಥ್ಯೆಗಳಿವೆ. ಜೀವನ ಪೂರ್ತಿ ಅವು ತಪ್ಪುಎಂದು ತಿಳಿಯದೆ ಆ ಸುಳ್ಳಿನಲ್ಲೇ ಬದುಕಿ, ಜೀವನ ಸವೆಸಿ ಹೊರಟು ಹೋಗುತ್ತಾರೆ. ಅಪ್ಪನ ಆಸ್ತಿ ಇದ್ದರೆ ಸಿರಿವಂತರಾಗಬಹುದು, ಕಷ್ಟಪಟ್ಟು ದುಡಿದು ಹಣಗಳಿಸುವುದು ಬಹಳ ಕಷ್ಟ ಎನ್ನವುದು ಅಂತಹ ಮಿಥ್ಯೆಗಳಲ್ಲಿ ಒಂದು. 

ಹಣಗಳಿಸಲು ಹೆಣಗಬೇಕಾಗಿಲ್ಲ ತಿಣುಕಬೇಕಾಗಿಲ್ಲ. ಇಲ್ಲಿ ಪ್ರಮುಖವಾಗಿ ಬೇಕಾಗಿರುವುದು ಹಣದ ಬಗ್ಗೆ ಅದಮ್ಯ ಪ್ರೀತಿ, ಗೌರವ. ಜೊತೆಗೆ ಒಂದಷ್ಟು ಕಷ್ಟಪಟ್ಟು ದುಡಿಯುವ ಮನಸ್ಸು ಮತ್ತು ಒಳ್ಳೆಯ ಸಂಪರ್ಕಗಳ ಜೊತೆಗೆ ನಿಲ್ಲದ ಕೌಶಲ್ಯ ವೃದ್ಧಿ. ಅಮೇರಿಕಾ ಇರಬಹುದು ಅಥವಾ ಯೂರೋಪ್ ಅಥವಾ ಭಾರತ...., ದೇಶ ಯಾವುದೇ ಇರಲಿ ಸ್ವಂತ ಬಲದಿಂದ ಮಿಲಿಯನೇರ್ ಅಥವಾ ಬಿಲಿಯನೇರ್ ಆದವರನ್ನ ಸೂಕ್ಷ್ಮವಾಗಿ ಗಮನಿಸಿ ನೋಡಿ. ಅವರಲ್ಲಿ ದಣಿವು ಕಾಣುವುದಿಲ್ಲ ತಮ್ಮ ಕೆಲಸದಲ್ಲಿ ಅವರಿಗೆ ಅಪರಿಮಿತ ಆಸಕ್ತಿ. ಮೂರು ತಲೆಮಾರು ಕುಳಿತು ತಿನ್ನುವಷ್ಟು ಆಸ್ತಿಯ ಒಡೆಯರಾಗಿದ್ದೂ ಅವರು ದುಡಿಯುತ್ತಾರೆ. ದಣಿವಿಲ್ಲದ ದುಡಿಮೆ ಅವರ ಸಿರಿವಂತಿಕೆಯ ಗುಟ್ಟು. ಶನಿವಾರ ಅವರು ಜನ ಸಾಮಾನ್ಯರಂತೆ ರಜಾ ಬಯಸುವುದಿಲ್ಲ. ಅವಶ್ಯಕತೆ ಬಿದ್ದಾಗ ಬೇಕಾದ ರಜಾ ಪಡೆಯುತ್ತಾರಷ್ಟೆ. ಅಪ್ಪನಿಂದ ಸಂಪತ್ತು ಪಡೆದ ಜನರ ಬಗ್ಗೆ ಇದೆ ಮಾತು ಹೇಳಲು ಬರುವುದಿಲ್ಲ. ಸ್ವಂತ ಬಲದಿಂದ ಮೇಲೆ ಬಂದ ಜನ ಖರ್ಚು ಮಾಡುವುದಕ್ಕೆ ಮುನ್ನ ಹತ್ತು ಬಾರಿ ಯೋಚಿಸುತ್ತಾರೆ. ಮಾಡುವ ಖರ್ಚು ಅವಶ್ಯಕವೇ? ಎನ್ನುವ ಪ್ರಶ್ನೆ ಮಾಡಿಕೊಳ್ಳದೆ ಅಳೆದು ತೂಗಿ ನೋಡದೆ ಒಂದು ರುಪಾಯಿ ಕೂಡ ಅವರು ಖರ್ಚು ಮಾಡುವುದಿಲ್ಲ.

ನೋಡಿ ನಮ್ಮಲ್ಲಿ ಮುಕ್ಕಾಲು ಪಾಲು ಜನರಿಗೆ ಅಪ್ಪನಿಂದ ಹೆಚ್ಚಿನ ಸಂಪತ್ತು ಸಿಕ್ಕುವುದಿಲ್ಲ ಹಾಗೆಂದ ಮಾತ್ರಕ್ಕೆ ನಾವು ಸಿರಿವಂತರಾಗಲು ಸಾಧ್ಯವೇ ಇಲ್ಲವೇ? ಇದಕ್ಕೆ ಉತ್ತರ-’ಸಾಧ್ಯವಿದೆ’. ನಮ್ಮಲ್ಲಿ ಯಾರು ಬೇಕಾದರೂ ಸಿರಿವಂತರಾಗಬಹುದು. ಮೊದಲೇ ಹೇಳಿದಂತೆ ಅದಮ್ಯ ಬಯಕೆ ಇರಬೇಕು ಜೊತೆಗೆ ಕೆಲವೊಂದು ಮೂಲಭೂತ ಸಿದ್ಧಾಂತಗಳನ್ನು ಪಾಲಿಸಬೇಕು. ಇಂತಹ ಆರ್ಥಿಕ ಸಿದ್ಧಾಂತಗಳ ಬಗ್ಗೆ ಇಂದು ಒಂದಷ್ಟು ಗಮನ ಹರಿಸೋಣ. 

  1. ದಿನ ಒಪ್ಪೊತ್ತಿನಲ್ಲಿ ಸಿರಿವಂತರಾಗುವುದು ಸಾಧ್ಯವಿಲ್ಲದ ಮಾತು. ಎಲ್ಲಕ್ಕೂ ಮೊದಲು ಇದನ್ನ ಮನನ ಮಾಡಿಕೊಳ್ಳಬೇಕು. ಇದು ನೂರು ಮೀಟರ್ ಓಟದ ಪಂದ್ಯವಲ್ಲ. ಇದೊಂದು ಮ್ಯಾರಥಾನ್ ಓಟದ ಪಂದ್ಯ. ಹೀಗಾಗಿ ಸಿದ್ಧತೆ ಬಹಳ ಮುಖ್ಯ. ಸಿದ್ಧತೆಯ ಜೊತೆಗೆ ಬದ್ಧತೆಯೂ ಸೇರಿದರೆ ಗೆಲುವಿಗೆ ಇಲ್ಲ ಅಡ್ಡಿ. 
  2. ಸಂಪರ್ಕ ಕಟ್ಟಿಕೊಳ್ಳುವುದು, ಇನ್ನೊಂದು ಮುಖ್ಯವಾಗಿ ಮಾಡಲೇಬೇಕಾದ ಕೆಲಸ. ಒಮ್ಮೆ ನಿಮ್ಮ ಅಕ್ಕ-ಪಕ್ಕ ತಿರುಗಿ ನೋಡಿ, ಪರವಾಗಿಲ್ಲ ಎನ್ನುವ ಮಟ್ಟದಲ್ಲಿ ಇರುವ ಜನರ ನೆಟ್ವರ್ಕ್ ಚೆನ್ನಾಗಿರುತ್ತದೆ. ಇಂದಿನ ಯುಗದಲ್ಲಿ ಬಹಳಷ್ಟು ವ್ಯಾಪಾರ ವಹಿವಾಟು ನಡೆಯುವುದು ಇಂತಹ ನೆಟ್ವರ್ಕ್ ಗಳ ಮೂಲಕವೇ. ಯಾರೋ ಗೊತ್ತು ಗುರಿಯಿಲ್ಲದ ಜನರನ್ನ ಬೇಕಾದ ಕೆಲಸಕ್ಕೆ ನೇಮಿಸಿಕೊಳ್ಳುವ ಬದಲು ತಮಗೆ ತಿಳಿದ ಸಂಪರ್ಕಗಳ ಮೂಲಕ ಬೇಕಾದ ಕೆಲಸ ಸಾಧಿಸಿಕೊಳ್ಳಲು ಯತ್ನಿಸುವುದು ಉತ್ತಮ ಮಾರ್ಗ. 
  3. ಬಜೆಟ್ ಅತ್ಯಂತ ಮುಖ್ಯವಾಗಿ ಗಮನ ಕೊಡಲೇ ಬೇಕಾದ ಇನ್ನೊಂದು ಅಂಶ. ಕೆಲಸ ಯಾವುದೇ ಇರಲಿ ಅದಕ್ಕೆ ಬೇಕಾದ ಹಣವೆಷ್ಟು, ನಾವು ಅದಕ್ಕೆ ಎಷ್ಟು ವೆಚ್ಚ ಮಾಡಲು ಸಿದ್ಧವಿದ್ದೇವೆ? ಎನ್ನುವುದು ಬಹಳ ಮುಖ್ಯ. ಯಾವುದೋ ವಸ್ತು ಬೇಕು ಅದನ್ನ ಮಾರುಕಟ್ಟೆಗೆ ಹೋಗಿ ತರುವುದು ಜನ ಸಾಮಾನ್ಯರು ಮಾಡುವ ಕೆಲಸ. ಯಶಸ್ವಿ ಜನ ಆ ವಸ್ತುವಿನ ಬೆಲೆ, ಗುಣಮಟ್ಟ ಮೊದಲು ತಿಳಿದುಕೊಳ್ಳುತ್ತಾರೆ ಅದಕ್ಕೆ ನಾನೆಷ್ಟು ಹಣ ವ್ಯಯಿಸಬಹುದು ಎನ್ನುವ ನಿಖರತೆ ಅವರಿಗಿರುತ್ತದೆ. ಆ ವಸ್ತುವನ್ನು ಈ ತಿಂಗಳೇ ಕೊಳ್ಳಬೇಕೆ ಅಥವಾ ಮುಂದಿನ ತಿಂಗಳೇ? ಯಾವ ತಿಂಗಳ ಬಜೆಟ್ನಲ್ಲಿ ಅದನ್ನ ಕೊಳ್ಳಬೇಕು? ಇವು ಮುಖ್ಯವಾಗುತ್ತವೆ. ಅಷ್ಟೇ ಅಲ್ಲದೆ ಒಮ್ಮೆ ಬಜೆಟ್ ನಲ್ಲಿ ಇದಕ್ಕೆ ಎಂದು ಒಂದಷ್ಟು ಹಣವನ್ನ ನಿಗದಿಪಡಿಸಿದ ಮೇಲೆ ಅದಕ್ಕಿಂತ ಹೆಚ್ಚಿನ ಹಣವನ್ನ ವ್ಯಯಿಸಬಾರದು. 
  4. ಕೌಶಲ್ಯ ವೃದ್ಧಿ (ಸ್ಕಿಲ್ ಡೆವಲಪ್ಮೆಂಟ್) ಸತತವಾಗಿ ಮಾಡಿಕೊಳ್ಳುತ್ತಿರಬೇಕು. ಜಗತ್ತಿಗೆ ನಾವು ಇಂದು ಪ್ರಸ್ತುತರಾಗಿರದೆ ಹೋದರೆ ನಮ್ಮನ್ನ ಯಾರೂ ಗೌರವಿಸುವುದಿಲ್ಲ. ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮತ್ತು ವೇಗಕ್ಕೆ ತಕ್ಕಂತೆ ನಮ್ಮನ್ನ ಬದಲಾಯಿಸಿಕೊಳ್ಳುವ ಶಕ್ತಿ ಮತ್ತು ಬದಲಾವಣೆಗೆ ಒಗ್ಗಿಕೊಳ್ಳುವ ಮನಸ್ಸು ಅತಿ ಮುಖ್ಯ. 
  5. ವಾರ್ಷಿಕ ಹಣಕಾಸು ಗುರಿಗಳನ್ನ ಹಾಕಿಕೊಳ್ಳಬೇಕು. ಗುರಿಯಿಲ್ಲದ ಬದುಕು ನಾವಿಕನಿಲ್ಲದ ನಾವೆಯಂತೆ. ಈ ವರ್ಷ ಇಷ್ಟು ಹಣ ಉಳಿಸಬೇಕು, ಇಷು ಲಾಭ ಮಾಡಬೇಕು, ಇಂತಹ ವಸ್ತು ಖರೀದಿಸಬೇಕು, ಕಂಪನಿಯ ಅಥವಾ ವ್ಯಕ್ತಿಗತವಾಗಿ ಮೌಲ್ಯ ಇಷ್ಟು ವೃದ್ಧಿಸಬೇಕು ಎನ್ನುವ ನೀಲನಕ್ಷೆ ತಯಾರಿಸಿಕೊಳ್ಳಬೇಕು. ಸಮಯ ಸಮಯಕ್ಕೆ ನೀಲನಕ್ಷೆಯೊಂದಿಗೆ ನಿಜವಾಗಿ ಏನಾಗುತ್ತಿದೆ ಎನ್ನವುದನ್ನ ಹೋಲಿಸಿನೋಡಬೇಕು. ಗುರಿಯಿಂದ ದೂರ ಸಾಗುತ್ತಿರುವ ಚಿತ್ರಣ ಕಂಡು ಬಂದರೆ ತಕ್ಷಣ ಮತ್ತೆ ಹಳಿಗೆ ತರಲು ಶ್ರಮಿಸಬೇಕು. 
  6. ಸಾಲದ ಮೇಲಿರಲಿ ನಿಗಾ. ಸಾಲವನ್ನು ಮಾಡುವಾಗ ನೋವು ಕಾಣುವುದಿಲ್ಲ, ಪಡೆದ ಸಾಲವನ್ನ ಮರಳಿ ಕೊಡುವಾಗ ಅತೀವ ನೋವು ದುಃಖ ಎಲ್ಲಾ ಆಗುತ್ತದೆ. ಅವಶ್ಯಕತೆ ಇದ್ದರೆ ಮಾತ್ರ ಸಾಲ ಮಾಡಬೇಕು. ಸಾಲ ಪಡೆದ ಉದ್ದೇಶಕ್ಕೆ ಮಾತ್ರ ಆ ಹಣದ ಬಳಕೆ ಆಗಬೇಕು. ಸಾಲ ಮರಳಿ ಕೊಡುವ ಸಮಯ ನಿಗದಿಪಡಿಸಿಕೊಂಡು ಅದರತ್ತ ಸದಾ ಗಮನ ನೀಡಬೇಕು. 
  7. ಆಪತ್ಕಾಲಕ್ಕೆ ಅಂತ ಒಂದಷ್ಟು ಹಣ ತೆಗೆದಿಡಬೇಕು. ಇಂದಿನ ವೇಗದ ಬದುಕಿನಲ್ಲಿ ಯಾವಾಗ ಏನಾಗುತ್ತೆ ಹೇಳಲು ಬಾರದು. ಕಂಪೆನಿಯಿರಲಿ, ವ್ಯಕ್ತಿಯೇ ಇರಲಿ ಎಮರ್ಜೆನ್ಸಿ ಫಂಡ್ ಎನ್ನುವುದು ಅವಶ್ಯಕವಾಗಿ ತೆಗೆದಿಡಬೇಕು. 
  8. ಭವಿಷ್ಯ ನಿಧಿ ಅಥವಾ ರಿಟೈರ್ಮೆಂಟ್ ಫಂಡ್ ಮತ್ತೊಂದು ನಮಗೆ ನಾವೇ ಸೃಷ್ಟಿಸಿ ಇಟ್ಟುಕೊಳ್ಳಬೇಕಾದ ಹಣ. ಕಳೆದ ಒಂದು ಅಥವಾ ಎರಡು ದಶಕದ ಹಿಂದೆ ಈ ರೀತಿಯ ವ್ಯವಸ್ಥೆ ಅಥವಾ ಇದರ ಬಗ್ಗೆ ಜನರ ಮಾತುಕತೆ ಇರಲಿಲ್ಲ. ಆದರೆ ಇಂದು, ನಾಳಿನ ವೃದ್ಧಾಪ್ಯಕ್ಕೆ ಹಣ ಉಳಿಸಲು ಬೇಕಾದ ಅವಶ್ಯಕತೆ ಅತಿ ಹೆಚ್ಚು. 

ಕೊನೆ ಮಾತು: ಹಣವಂತ ಅಥವಾ ಸಿರಿವಂತರು ಯಾರು ಬೇಕಾದರೂ ಆಗಬಹುದು. ಇದಕ್ಕೆ ಮೊದಲೇ ಹೇಳಿದಂತೆ ಹೆಣಗಬೇಕಾಗಿಲ್ಲ, ತಿಣುಕಬೇಕಾಗಿಲ್ಲ ಸರಳ ರೇಖೆಯಲ್ಲಿ ಗಳಿಕೆ-ಉಳಿಕೆ-ಹೂಡಿಕೆ ಎನ್ನುವ ಸಿದ್ಧಾಂತವನ್ನ ಚಾಚೂ ತಪ್ಪದೆ ಪಾಲಿಸುತ್ತಾ ಬಂದರೆ ಸಿರಿವಂತರಾಗುವುದು ಕಷ್ಟವಲ್ಲ. ಆದರೆ ಇಲ್ಲಿ ಇನ್ನೊಂದು ಪ್ರಮುಖ ಅಂಶವನ್ನ ನೆನಪಿನಲ್ಲಿಡಬೇಕು. ಅದು ವೇಳೆ ! ರಾತ್ರಿ ಕಳೆದು ಬೆಳಗಾಗುವುದರಲ್ಲಿ ಇದೆಲ್ಲ ಸಾಧ್ಯವಿಲ್ಲದ ಮಾತು. ಇಲ್ಲೇನಿದ್ದರೂ ನಿಧಾನವೇ ಪ್ರಧಾನ. ಅದನ್ನ ಅರಿತು ತಾಳ್ಮೆಯಿಂದ ಒಳ್ಳೆಯ ಹೂಡಿಕೆಯನ್ನ ಹುಡುಕಿ ಮಾಡಬೇಕಾಗುತ್ತದೆ. ಸಮಾಜದಲ್ಲಿ ತ್ವರಿತಗತಿಯಲ್ಲಿ ಹಣ ಮಾಡುವ ಬಗ್ಗೆ ಹಲವಾರು ಆಮಿಷಗಳು ಎದುರಾಗುತ್ತವೆ. ಅಂತಹವುಗಳ ಬಗ್ಗೆ ಕೂಡ ಜಾಗೃತರಾಗಿರುವುದು ಬಹುಮುಖ್ಯ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com