ಕುಸಿತದಿಂದ ಕಲಿಯದ ಪಾಠ! ವಿತ್ತ ಜಗತ್ತಿಗೆ ಸಿಗುವುದೆಂದು ಹೊಸ ನೋಟ?

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಕುಸಿತದಿಂದ ಕಲಿಯದ ಪಾಠ! ವಿತ್ತ ಜಗತ್ತಿಗೆ ಸಿಗುವುದೆಂದು ಹೊಸ ನೋಟ?
ಕುಸಿತದಿಂದ ಕಲಿಯದ ಪಾಠ! ವಿತ್ತ ಜಗತ್ತಿಗೆ ಸಿಗುವುದೆಂದು ಹೊಸ ನೋಟ?

ಸೆಪ್ಟೆಂಬರ್ 2020ಕ್ಕೆ ಗ್ಲೋಬಲ್ ಫೈನಾನ್ಸಿಯಲ್ ಕ್ರೈಸಿಸ್ ಗೆ ಹನ್ನೆರಡು ವರ್ಷ ತುಂಬಿತು. ಇದು ಇಷ್ಟು ದೊಡ್ಡ ಮಗುವಾಗುತ್ತದೆ ಎನ್ನುವ ಅರಿವು ಅಂದಿಗೆ ಇರಲಿಲ್ಲ. 

ಪರವಾಗಿಲ್ಲ ವಿತ್ತ ಜಗತ್ತು ಒಂದು ಹಂತಕ್ಕೆ ಬರುತ್ತಿದೆ ಎಂದು ನಿಟ್ಟಿಸಿರು ಬಿಡುವಷ್ಟರಲ್ಲಿ ಜಾಗತಿಕ ಮಟ್ಟದಲ್ಲಿ ಕೊರೋನಾಘಾತ ಶುರುವಾಯಿತು. ತೆವಳುತ್ತ, ಕುಂಟುತ್ತಾ ಸಾಗುತ್ತಿದ್ದ ವಿತ್ತ ಜಗತ್ತನ್ನ ಬರೋಬ್ಬರಿ ಆರೇಳು ತಿಂಗಳು ಮಕಾಡೆ ಮಲಗಿಸಿ ಬಿಟ್ಟಿತು. ಜಗತ್ತು ಸೆಪ್ಟೆಂಬರ್ ತಿಂಗಳನ್ನ ಬೇರೆ ಬೇರೆ ಕಾರಣಗಳಿಗೆ ನೆನಪಿಟ್ಟುಕೊಳ್ಳಬಹುದು ಆದರೆ ವಿತ್ತ ಪ್ರಪಂಚದ ಸುತ್ತಮುತ್ತ ಗಿರಕಿ ಹೊಡೆಯುವ ಜನ ಮಾತ್ರ ಲೆಹ್ಮನ್ ಬ್ರದರ್ಸ್ ಬ್ಯಾಂಕ್ ಕುಸಿದದ್ದು ಅದು ಗ್ಲೋಬಲ್ ಫೈನಾನ್ಸಿಯಲ್ ಕ್ರೈಸಿಸ್ ಗೆ ದಾರಿ ಮಾಡಿಕೊಟ್ಟದ್ದು ಎನ್ನುವುದನ್ನ ಮಾತ್ರ ಮರೆಯಲಾರರು. ಹೀಗಾಗಿ GFC ಅಂದರೆ ಗ್ಲೋಬಲ್ ಫೈನಾನ್ಸಿಯಲ್ ಕ್ರೈಸಿಸ್ ಗೆ ಈಗ ಹನ್ನೆರಡರ ಹರೆಯ. ಇವತ್ತು ಈ ಕೂಸು ಹೆತ್ತಮ್ಮ ಅಮೆರಿಕಾಗೆ ಮಾತ್ರ ಕಾಟ ಕೊಡುತ್ತಿಲ್ಲ ಅದು ಜಗತ್ತಿನ ಬಹುತೇಕ ದೇಶಗಳಿಗೆ ಬಹಳವೇ ಕಾಟ ಕೊಡ್ತಾ ಇದೆ. ಹೆತ್ತಮ್ಮನ ಕೆಟ್ಟ ಬುದ್ಧಿಯಿಂದ ಕಂಗೆಟ್ಟಿದ್ದ ಜಗತ್ತಿಗೆ ಚೀನಾ ದೊಡ್ಡಮ್ಮನ ರೀತಿಯಲ್ಲಿ ಕೊರೋನ ಕೊಡುಗೆಯನ್ನ ನೀಡಿದೆ. ಇಷ್ಟು ವರ್ಷದ ಆರ್ಥಿಕ ಹೊಡೆತದಿಂದ ನಾವೇನಾದರೂ ಪಾಠ ಕಲಿತಿದ್ದೇವೆಯೇ? ಈ ಮಹಾ ಕಿಡಿ ಹತ್ತಿ ಉರಿಯಲು ಕಾರಣವೇನು? ನಿಜವಾಗಿಯೂ ಅವತ್ತು ಏನಾಯ್ತು? ಅದರ ಪರಿಣಾಮ ಇವತ್ತಿಗೂ ಆಗುತ್ತಿದೆಯೇ? ಇವುಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ.  

ಈ ರೀತಿಯ ಮಹಾ ಕುಸಿತಕ್ಕೆ ಕಾರಣಗಳು ಇಂತಿವೆ:

ಹಣದ ಹರಿವು ಅಂದಿನ ದಿನದಲ್ಲಿ ಬಹಳಷ್ಟು ಹೆಚ್ಚಾಗಿತ್ತು. ಬ್ಯಾಂಕ್ಗಳಲ್ಲಿ ಹೀಗೆ ಸಂಗ್ರಹವಾದ ಹಣವನ್ನ ಸುಮ್ಮನೆ ಇಟ್ಟು ಕೂರುವ ಹಾಗಿಲ್ಲ. ಅದನ್ನ ಜನರಿಗೆ ಸಾಲದ ರೂಪದಲ್ಲಿ ಕೊಡಬೇಕು ಅದರಿಂದ ಬಡ್ಡಿ ದುಡಿಯಬೇಕು. ಅದನ್ನ ಖರ್ಚು ಮಾಡಬೇಕು. ಇಂತಹ ಒಂದು ವ್ಯವಸ್ಥೆ ಇಡಿ ವ್ಯವಸ್ಥೆ ಕುಸಿಯಲು ಕಾರಣವಾಯ್ತು.

ಸಾಲ ಕೊಡಬೇಕು ಸರಿ ಆದರೆ ಅದನ್ನ ಮರಳಿ ಕೊಡುವ ಶಕ್ತಿ ಇದ್ದವರಿಗೆ ಕೊಡಬೇಕು. ಆದರೇನು ಹಣವನ್ನ ಹೇಗಾದರೂ ಸಾಲ ನೀಡಿ ಬ್ಯಾಂಕಿಗೆ ಕೆಲಸ ತರಬೇಕು ಆದಾಯ ತರಬೇಕು ಎನ್ನುವ ತರಾತುರಿಯಲ್ಲಿ ಸಿಕ್ಕ ಸಿಕ್ಕವರಿಗೆ ಹಣವನ್ನ ಸಾಲದ ರೂಪದಲ್ಲಿ ನೀಡಲಾಯಿತು. ಕೆಲಸವಿಲ್ಲದವರಿಗೆ, ಆದಾಯವಿಲ್ಲದವರಿಗೆ, ಜೊತೆಗೆ ಯಾವುದೇ ಚರಾಸ್ತಿ ಇಲ್ಲದವರಿಗೆ ಸಾಲವನ್ನ ನೀಡಲಾಯಿತು. ಈ ರೀತಿಯ ಸಾಲಕ್ಕೆ ನಿಂಜಾ ಸಾಲ ಎನ್ನುವ ಹೆಸರನ್ನೂ ಇಡಲಾಯಿತು. ನಿಂಜಾ ಎಂದರೆ ನೋ ಇನ್ಕಮ್, ನೋ ಜಾಬ್ ಅಂಡ್ ಅಸೆಟ್  ಎಂದರ್ಥ. ಅಂದರೆ ಗಮನಿಸಿ ನೋಡಿ ಸಾಲ ಕೊಡುವಾಗಲೆ ಅದರ ವಸೂಲಿ ಬಗ್ಗೆ ಸಾಲ ಕೊಡುವವರಿಗೆ ಸಂಶಯವಿತ್ತು ಅದಕ್ಕೆ ಅಂತಹ ಸಾಲವನ್ನ ನಿಂಜಾ ಸಾಲ ಎಂದರು. ಇವತ್ತು ಜಗತ್ತು ಈ ಮಟ್ಟದ ಆರ್ಥಿಕ ಅಸ್ಥಿರತೆ ಅನುಭವಿಸಲು ಕಾರಣ ಕೇವಲ ಹತ್ತಾರು ಮಂದಿಯ ಲೋಭ ಮತ್ತು ಸ್ವಾರ್ಥ ಕಾರಣ.

ಬ್ಯಾಡ್ ಲೆಂಡಿಂಗ್ ಅಥವಾ ಕೆಟ್ಟ ಸಾಲ ಕೊಟ್ಟದ್ದು ಲೆಹ್ಮನ್ ಬ್ಯಾಂಕ್ ಕುಸಿಯಲು ಮುಖ್ಯ ಕಾರಣ. ಹೀಗೆ ಕೆಟ್ಟ ಸಾಲ ಕೊಡಲು ಕಾರಣ ಸಂಸ್ಥೆಯ ಮುಖ್ಯ ಅಧಿಕಾರಿಗಳು, ಮುಖ್ಯಸ್ಥರ ನಿರ್ಧಾರ ಅಥವಾ ಒಪ್ಪಿಗೆ. ಇಲ್ಲಿಯೂ ರಿಯಲ್ ಎಸ್ಟೇಟ್ ಮಾಫಿಯಾ ಗಳ ಕೈವಾಡ ಕಾಣಸಿಗುತ್ತದೆ. ಹೇಗಾದರೂ ಸರಿಯೇ ಯಾರಾದರೂ ಮನೆ ಕೊಳ್ಳಲು ಮುಂದೆ ಬಂದರೆ ಅವರ ತಲೆಗೆ ಸಾಲವನ್ನ ಕಟ್ಟಿ ಬಿಲ್ಡರ್ಸ್ ಖಾತೆಗೆ ಹಣವನ್ನ ತುಂಬುತ್ತ ಹೋದರು. ಬಿಲ್ಡರ್ ಗಳಿಗೆ ಜೋಬು ತುಂಬಾ ಹಣಬಂತು ಅದರಲ್ಲಿ ಒಂದು ಪಾಲು ವ್ಯವಸ್ಥೆಯಲ್ಲಿ ಛೇದ ಸೃಷ್ಟಿಸಲು ನೆರವಾದ ಎಲ್ಲರಿಗೂ ತಲುಪಿತು. ತಮ್ಮ ವ್ಯವಹಾರವ ವ್ಯವಸ್ಥಿತವಾಗಿ ಪೂರ್ಣವಾಗಿಸಿಕೊಂಡು ಅವರು ಹೊರನಡೆದರು. ತಮ್ಮ ಮುಂದಿನ ಮೂವತ್ತು ವರ್ಷ ದುಡಿದರೂ ಸಿಗದ ಹಣವನ್ನ ಸಾಲದ ರೂಪದಲ್ಲಿ ತಲೆಗೆ ಕಟ್ಟಿಸಿಕೊಂಡ ಜನರಿಗೆ ನಿಧಾನವಾಗಿ ಅದರ ಅರಿವಾಗ ತೊಡಗಿತು. ಆ ವೇಳೆಗೆ ಸಮಯ ಮೀರಿ ಹೋಗಿತ್ತು. ಕೆಲವಿಲ್ಲದ, ಇನ್ಕಮ್ ಇಲ್ಲದ ಯಾವುದೇ ಚರಾಸ್ತಿಯ ಬೆಂಬಲವಿಲ್ಲದ ಜನ ಅವರು ಕೊಟ್ಟರು ಎಂದು ಸಾಲದ ಖೆಡ್ಡಾಗೆ ಬೀಳಲು ಕಾರಣವೇನು ಗೊತ್ತೆ? ಬೆಲೆ ಹೆಚ್ಚಳ. ಹೌದು ಇವತ್ತು ಮನೆಯನ್ನ ಸಾಲ ತೆಗೆದುಕೊಂಡು ಎರಡುಲಕ್ಷಕ್ಕೆ ಕೊಂಡರೆ ಮುಂದಿನ ಒಂದೆರಡು ವರ್ಷದಲ್ಲಿ ಅದರ ಬೆಲೆ ಎರಡು ಲಕ್ಷ ಐವತ್ತು ಸಾವಿರವಾಗುತ್ತೆ ಎನ್ನುವ ನಂಬಿಕೆ. ಪ್ರಥಮವಾಗಿ ಕೊಂಡ ಒಂದಷ್ಟು ಜನ ತಮಗಾದ ಲಾಭವನ್ನ ಬಣ್ಣಿಸಿ ಹೇಳಲು ಶುರುಮಾಡಿದ ಮೇಲೆ ಅದನ್ನ ಬಂಡವಾಳ ಮಾಡಿಕೊಂಡ ಕಾರ್ಪೊರೇಟ್ ಬಿಲ್ಡರ್ಗಳು ಅದನ್ನ ಮಾರ್ಕೆಟ್ ಮಾಡಲು ಶುರು ಮಾಡಿದರು. ಇನ್ನು ಹೇಳುವುದಕ್ಕೆ ಬಾಕಿ ಏನಿದೆ. ನಮ್ಮ ಸಮಾಜದ ವಿದ್ಯಾವಂತ ಕುರಿಗಳು ಒಂದರ ಹಿಂದೆ ಒಂದು ಸಾವಧಾನವಾಗಿ ಸಾಲದ ಖೆಡ್ಡಾಕ್ಕೆ ಖುಷಿಯಿಂದ ಬಿದ್ದವು. ಹತ್ತಾರು ಮಂದಿ ಅತ್ಯಂತ ಹೆಚ್ಚಿನ ಹಣದ ಮೂಟೆಯ ಮೇಲೆ ಕೂತರು. ವ್ಯವಸ್ಥೆ, ಜೊತೆಗೆ ಜನತೆ ನಂಬಿಕೆ ಕುಸಿಯಿತು.

ಜೀವನವನ್ನ ಇಂದಿನ ರೀತಿಯಲ್ಲಿ ವ್ಯವಸ್ಥಿತವಾಗಿ ಕಳೆಯಲು ಹಣದ ಅವಶ್ಯಕತೆ ಇತ್ತು, ಇದೆ. ಆದರೆ ಹಣದ ಜೊತೆಗೆ ವೇಳೆಯ ನಂಟನ್ನ ಬೆಸದದ್ದು ಇವತ್ತಿನ ಕುಸಿತಕ್ಕೆ ಇನ್ನೊಂದು ಮಹಾನ್ ಕಾರಣ. ಗಮನಿಸಿ ನೋಡಿ. ಟೈಮ್ ವ್ಯಾಲ್ಯೂ ಆಫ್ ಮನಿ ಎನ್ನುವ ಕಾನ್ಸೆಪ್ಟ್ ಇರದೇ ಇದ್ದಿದರೆ ಏನಾಗುತ್ತಿತ್ತು? ಖಂಡಿತ ಜಗತ್ತು ಇಷ್ಟೊಂದು ಮಾತ್ರದ ಸಂಕಷ್ಟಕ್ಕೆ ಸಿಲುಕುತ್ತಿರಲಿಲ್ಲ. ಹಣದ ಕುರಿತು ಈ ಮಟ್ಟದ ಹಪಾಹಪಿ ಜನರಲ್ಲಿ ಬರುತ್ತಿರಲೂ ಇಲ್ಲ.

ಇದರ ಜೊತೆಗೆ ಬೆಲೆಯನ್ನ ನಿಗದಿ ಮತ್ತು ನಿಯಂತ್ರಣ ಮಾಡುವ ಒಂದು ಸಂಸ್ಥೆ ಇಲ್ಲದೆ ಹೋದದ್ದು, ಮನೆ ಮತ್ತು ಇತರ ವಸ್ತುಗಳ ಬೆಲೆಯನ್ನ ಮನಸ್ಸಿಗೆ ಬಂದಂತೆ ಹೆಚ್ಚಿಸಲು ಸಾಧ್ಯವಾಯಿತು. ಇದು ಜನರ ಮನದಲ್ಲಿ ಆಸೆಯನ್ನ ಸೃಷ್ಟಿಸಿತು. ಆಸೆ ಲಾಜಿಕ್ ಕಳೆದುಕೊಂಡು ಜೂಜಾಟದ ಹಂತ ತಲುಪಿದ್ದು ವ್ಯವಸ್ಥೆ ಕುಸಿಯಲು ಹೊಡೆದ ಕೊನೆಯ ಮೊಳೆ ಎನ್ನಬಹುದು.

ಸರಿ ಆದ ತಪ್ಪು ಆಯಿತು ಅದನ್ನ ಸರಿ ಪಡಿಸೋಣ ಎಂದು ತಕ್ಷಣ ಅದರ ಮೇಲೆ ಒಂದಷ್ಟು ಕಠಿಣ ನಿರ್ಧಾರಗಳನ್ನ ತೆಗೆದುಕೊಂಡಿದ್ದರೆ ಕುಸಿತವನ್ನ ಅಲ್ಪ ಮಟ್ಟಿಗಾದರೂ ತಪ್ಪಿಸಬಹುದಿತ್ತು. ಆದರೆ ಆದದ್ದೇ ಬೇರೆ. ತಪ್ಪನ್ನ ಜಗತ್ತಿನ ಮುಂದೆ ತೆಗೆದು ಇಟ್ಟರೆ ವಿಶ್ವದ ಆರ್ಥಿಕತೆ ಕುಸಿಯುತ್ತದೆ. ಅಲ್ಲದೆ ಉಳಿದ ಸಮಯವನ್ನ ಅಧ್ಯಕ್ಷ ಸ್ಥಾನದಲ್ಲಿ ಕಳೆಯಲು ಆಗುವುದಿಲ್ಲ ಎನ್ನುವ ರಾಜಕೀಯ ಕಾರಣಗಳಿಂದ ತಪ್ಪನ್ನ ಮುಚ್ಚಿಡಲಾಯಿತು. ಸೆರಗಿನಲ್ಲಿ ಕಟ್ಟಿದ ಕೆಂಡ ಎಷ್ಟು ಹೊತ್ತು ಮುಚ್ಚಿಡಬಹುದು? ಹತ್ತಾರು ತಿಂಗಳು ಅದುಮಿಟ್ಟ ವಿಷಯ ಜ್ವಾಲಾಮುಖಿಯಂತೆ ಸ್ಪೋಟಗೂಂಡಿತು. ಅಂದು ಹರಡಿದ ಲಾವ ಅದರ ಬಿಸಿ ಇಂದಿಗೂ ಆರಿಲ್ಲ ಎಂದರೆ ಅದರ ಪರಿಣಾಮ ಎಷ್ಟಿರಬಹುದು ಎನ್ನುವ ಅಂದಾಜಾಗಬಹುದು.

ಇದರ ಜೊತೆಗೆ ಇನ್ನು ಹಲವು ಹತ್ತು ಸಣ್ಣ ಪುಟ್ಟ ಕಾರಣಗಳು, ಮನುಷ್ಯನ ಆಸೆ, ಲೋಭಗಳು ಸೇರಿಕೊಂಡು ವಿಶ್ವದ ಆರ್ಥಿಕ ವ್ಯವಸ್ಥೆ ಕುಸಿಯಲು ದೇಣಿಗೆ ನೀಡಿದವು. ಕುಸಿದದ್ದು ಅಮೇರಿಕಾ ಆದರೆ ನಿಜಾರ್ಥದಲ್ಲಿ ಜಗತ್ತು ಕೂಡ ಅಂದು ಕುಸಿಯಿತು. ವಿಶ್ವದ ದೊಡ್ಡಣ್ಣ ಎಂದು ಮರೆಯುತ್ತಿದ್ದ ಅಮೇರಿಕಾ ಕುಸಿತ ಸಹಜವಾಗೇ ವಿಶ್ವಕ್ಕೆ ಕೊಟ್ಟ ಪೆಟ್ಟು ಕೂಡ. ಇವೆಲ್ಲವನ್ನ ಹೇಗೋ ಸಂಭಾಳಿಸೋಣ ಎನ್ನುವ ಪಂಡಿತರ ಲೆಕ್ಕಾಚಾರಕ್ಕೆ ಕೊರೋನ ಕೊಟ್ಟ ಪೆಟ್ಟು ಮಾತ್ರ ಅತಿ ದೊಡ್ಡದು.

ಸರಿ ವಿಶ್ವದ ಆರ್ಥಿಕ ವ್ಯವಸ್ಥೆ ಕುಸಿದು ಹನ್ನೆರಡು ವರ್ಷ ಆಯ್ತು ಇವತ್ತಿನ ಸ್ಥಿತಿ ಏನು? ನಾವೇನಾದರೂ ಕುಸಿತದಿಂದ ಪಾಠ ಕಲಿತಿದ್ದೇವೆಯೇ?

ಅಮೇರಿಕಾ ಶತಾಯಗತಾಯ ತನ್ನ ಹಳೆಯ ಉತ್ತುಂಗಕ್ಕೆ ಏರಲು ಸತತ ಪ್ರಯತ್ನ ಮಾಡುತ್ತಲೇ ಇದೆ. ಆ ನಿಟ್ಟಿನಲ್ಲಿ ಫೆಡರಲ್ ಇಂಟರೆಸ್ಟ್ ರೇಟ್ ಬದಲಾವಣೆ ಮಾಡಿಕೊಳ್ಳುತ್ತಿದೆ ತನ್ನ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡು ಹಾರಿ ಹೋದ ಹೂಡಿಕೆದಾರರನ್ನ ಮರಳಿ ಗೂಡಿಗೆ ತರುವುದು ಎಲ್ಲಕ್ಕೂ ದೊಡ್ಡ ಸವಾಲು ಅಮೇರಿಕಾ ಮುಂದಿದೆ. ಆ ದಾರಿಯಲ್ಲಿ ಅದು ನಡೆಯುತ್ತಿದೆ. ಆದರೂ ಅಮೇರಿಕಾ ಆರ್ಥಿಕತೆ 2008 ಕ್ಕೂ ಮುಂಚಿನ ಆರ್ಥಿಕ ಸ್ಥಿತಿ ತಲುಪಿಲ್ಲ. ಯಾವ ಎತ್ತರದಿಂದ ಬಿದ್ದಿತೋ ಆ ಎತ್ತರಕ್ಕೆ ಮತ್ತೆ ಏರಲು ಕ್ರಮಿಸಬೇಕಾದ ದಾರಿ ಬಹಳವಿದೆ. ಹೊಸ ಸರಕಾರದ ಮುಂದೆ, ಜೋಸೆಫ್ ಬೈಡನ್ ಮುಂದೆ ಸಾವಾಲುಗಳ ಸಾಲು ನಿಂತಿದೆ.

ಇನ್ನೂ ಅಮೇರಿಕಾ ಕುಸಿತವನ್ನ ತಾನು ಇನ್ನೊಂದು ಹಂತ ಏರಲು ಮೆಟ್ಟಿಲಾಗಿ ಬಳಸಿಕೊಳ್ಳುವ ಆತುರದಲ್ಲಿ ಚೀನಾ ಕೂಡ ಎಡವಿತು. ಅಮೆರಿಕನ್ ಡಾಲರ್ ಅತಿ ಹೆಚ್ಚು ನಂಬಿಕೆಗೆ ಪಾತ್ರವಾದ ಜಗತ್ತು ಉಪಯೋಗಿಸುತ್ತಿರುವ ಕರೆನ್ಸಿಯಾಗಿದೆ. ಚೀನಾದ ಮಹತ್ವಾಕಾಂಕ್ಷೆ ಎಷ್ಟೆಂದರೆ ಡಾಲರನ್ನು ಮಲಗಿಸಿ ತನ್ನ ಕರೆನ್ಸಿಯನ್ನ ಜಗತ್ತಿನ ಕರೆನ್ಸಿ ಮಾಡಬೇಕೆನ್ನುವ ಹುಚ್ಚು ಹುಮ್ಮಸ್ಸಿಗೆ ಬಿದ್ದು. ಬಂಗಾರವನ್ನ ಸಿಕ್ಕಾಪಟ್ಟೆ ಖರೀದಿಸಿತು. ಈ ಮೇಲಾಟದಲ್ಲಿ ಚೀನಾ ಗೆಲ್ಲುತ್ತಿತ್ತೋ ಏನೋ ಆದರೆ ತನ್ನೆಲ್ಲಾ ಜನರ ಮೇಲೆ ಅಧಿಪತ್ಯ ಮತ್ತು ಹಿಡಿತ ಹೊಂದಿರುವ ಚೀನಾ ಸರಕಾರ ತನ್ನ ಹೂಡಿಕೆದಾರರ ಮೇಲೆ ಹಿಡಿತ ಹೊಂದುವಲ್ಲಿ ವಿಫಲವಾಯಿತು ಆದ ಕಾರಣ ಕಳೆದ ನಾಲ್ಕು ವರ್ಷಗಳಲ್ಲಿ ಚೀನಾ ಷೇರು ಮಾರುಕಟ್ಟೆ ಹಿಂದೆಂದೂ ಕಂಡಿರದ ಮಹಾನ್ ಕುಸಿತ ಕಂಡಿತು. ಚೀನಾ ದಶಕಗಳಿಂದ ಕುಸಿತ ಕಾಣದ ತನ್ನ ಹಣವನ್ನ ತಾನೇ ಅಪಮೌಲ್ಯ ಮಾಡಿಕೊಳ್ಳುವ ಸಂದರ್ಭ ಕೂಡ ಬಂದಿತು. ಅದಕ್ಕೆ ವಿಶ್ವ ಸಾಕ್ಷಿಯೂ ಆಯಿತು. ತನ್ನ ಕುಸಿತವನ್ನ ಮರೆಮಾಚಲು ವಿಶ್ವಕ್ಕೆ ಚೀನಾ ಈ ವೈರಸ್ ಸೃಷ್ಟಿಸಿತೇ? ಇಂದಿಗೆ ಇದು ಪ್ರಶ್ನೆ. ಮುಂಬರುವ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಬಹುದು.

ಅಮೇರಿಕಾ ಜೊತೆಗೆ ವಿಶ್ವದ ಆರ್ಥಿಕ ವ್ಯವಸ್ಥೆ ಕುಸಿದಾಗ ಭಾರತದ ಆರ್ಥಿಕ ವ್ಯವಸ್ಥೆ ಕುಸಿಯದೆ ನಿಂತದ್ದು ವಿಶ್ವದ ಕಣ್ಣಿನಲ್ಲಿ ಭೇಷ್ ಅನ್ನಿಸಿ ಕೊಂಡದ್ದು ಎಲ್ಲರಿಗೂ ತಿಳಿದ ವಿಷಯ ಆದರೆ ಇವತ್ತೇನಾಗಿದೆ? ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಅತ್ಯಂತ ಸೂಕ್ಷ್ಮವಾಗಿದೆ. ಹಣದುಬ್ಬರ ಹೆಚ್ಚಾಗಿದೆ, ಡಾಲರ್ ಎದುರು ರುಪಾಯಿ ಒಂದೇ ಸಮನೆ ಕುಸಿತ ಕಾಣುತ್ತಿದೆ. ಇದಕ್ಕೆ ಕಾರಣ ಅಮೆರಿಕಾದ ಲೆಹ್ಮನ್ ಬ್ರದರ್ ಕುಸಿಯಲು ಇದ್ದ ಕಾರಣಗಳೇ. ಅಂದರೆ ಅಂದಿನ ಕುಸಿತದಿಂದ ಭಾರತ ಪಾಠ ಕಲಿಯಲಿಲ್ಲ. ಅಲ್ಲಿನ ರೀತಿಯಲ್ಲಿ ನಿಂಜಾ ಸಾಲವನ್ನ ಜನತೆಗೆ ಕೊಡದಿದ್ದರೂ, ದೊಡ್ಡ ಕಾರ್ಪೊರೇಟ್ ಕುಳಗಳಿಗೆ ಸಾಲವನ್ನ ಕೊಡುವಾಗ ಉದಾರತನ ತೋರಿದ್ದು, ಅಂದರೆ ಮೂಲಭೂತವಾಗಿ ಬ್ಯಾಡ್ ಲೆಂಡಿಂಗ್ ಅಥವಾ ಕೆಟ್ಟ, ವಸೂಲಿ ಮಾಡಲಾಗದ ಸಾಲ ನೀಡಿದ್ದು ಭಾರತದ ಇಂದಿನ ದುಸ್ಥಿತಿಗೆ ಕಾರಣವಾಗಿದೆ.

ಇನ್ನು ಆಸ್ಟ್ರೇಲಿಯಾ ಕೂಡ ಇಡಿ ವಿಶ್ವವೇ ಕುಸಿದಾಗ ಪರವಾಗಿಲ್ಲ ಎನ್ನುವ ದೇಶವಾಗಿತ್ತು. ಇಂದು ಅಮೇರಿಕಾ ಮಾಡಿದ ಅದೇ ತಪ್ಪನ್ನ ಮಾಡಿ ನ್ಯಾಷನಲ್ ರಿಯಲ್ ಎಸ್ಟೇಟ್ ಕ್ರೈಸಿಸ್ ನಲ್ಲಿ ದಿನ ದೂಡುತ್ತಿದೆ. ಯಾವಾಗ ದೇಶದಲ್ಲಿ ಅಸಮಾಧಾನ ಭುಗಿಲೇಳುತ್ತದೆ, ಯಾವಾಗ ಬ್ಯಾಂಕ್ಗಳೇ ದಿವಾಳಿ ಏಳುತ್ತವೆ ಎನ್ನುವುದನ್ನ ಸಮಯ ನಿರ್ಧರಿಸಲಿದೆ.

ಅರ್ಜೆಟೀನಾ, ಬ್ರೆಝಿಲ್, ಸೌತ್ ಆಫ್ರಿಕಾ ಜೊತೆಗೆ ರಷ್ಯಾ ಕೂಡ ಇವತ್ತು ಡಾಲರ್ ಎದುರು ತಮ್ಮ ಹಣವನ್ನ ಅಪಮೌಲ್ಯ ಆಗುವುದನ್ನ ತಡೆ ಹಿಡಿಯಲು ಹರಸಾಹಸ ಪಡುತ್ತಿವೆ. ಒಟ್ಟಿನಲ್ಲಿ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಜಗತ್ತಿಗೆ ಜಗತ್ತೇ ಒಂದಲ್ಲ ಒಂದು ತರಹದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಯೂರೋಪ್ ನೆಗೆಟೀವ್ ಇಂಟರೆಸ್ಟ್ ಎನ್ನುವ ಹೊಸ ರೋಗದಿಂದ ಬಳಲುತ್ತಿದೆ. ವರ್ಷ ಪೂರ್ತಿ ದುಡಿದು, ಉಳಿಸಿದ ಜಪಾನಿಗರಲ್ಲೂ ನಗುವಿನ ಸುಳಿವಿಲ್ಲ.

ನಾವೇನಾದರೂ ಕುಸಿತದಿಂದ ಪಾಠ ಕಲಿತಿದ್ದೇವೆಯೇ? ಎನ್ನುವ ಪ್ರಶ್ನೆಗೆ 'ಇಲ್ಲ' ಎನ್ನುವುದು ಉತ್ತರ. ಜನರ ನೆನೆಪು ಅತ್ಯಂತ ಕ್ಷೀಣ. ಮಾಡಿದ ತಪ್ಪನ್ನ ಮತ್ತೆ ಮಾಡುತ್ತಾರೆ. ಮೂಲಭೂತವಾಗಿ ದೇಶ ಭಾಷೆ ಗಡಿಗಳ ಮೀರಿ ನೆನಪಲ್ಲಿ ಇಡಬೇಕಾದ ಆರ್ಥಿಕ ಮಂತ್ರಗಳನ್ನ ನೆನಪಿಟ್ಟು ಕೊಂಡರೆ ಇಂತಹ ಕುಸಿತಗಳನ್ನ ತಡೆಯಬಹುದು.

  1. ಮನೆ ಹಣವಿದ್ದರೆ ಮಾತ್ರ ಕೊಳ್ಳಬೇಕು. ಮನೆ ಕಾರು ಇತ್ಯಾದಿಗಳನ್ನ ನಿಮ್ಮ ಬಳಿ ಉಳಿಕೆಯ ಹಣವಿದ್ದರೆ ಮಾತ್ರ ಕೊಳ್ಳಬೇಕು. ಸಾಲವೆಂಬ ಖೆಡ್ಡಾದಲ್ಲಿ ಬೀಳಬಾರದು.
  2. ಸಾಮಾಜಿಕ ಒತ್ತಡಗಳಿಗೆ ಮಣಿದು ಆರ್ಥಿಕ ನಿರ್ಧಾರ ತೆಗೆದುಕೊಳ್ಳದೆ ಇರುವುದು
  3. ನಿಮ್ಮ ಆದಾಯದ ಮೂಲದ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದುವುದು.
  4. ಅನಾವಶ್ಯಕ ಖರ್ಚಿಗೆ ಕಡಿವಾಣ ಹಾಕುವುದು.
  5. ಇನ್ನೊಬ್ಬರ ಬದುಕಿನೊಂದಿಗೆ ಹೋಲಿಕೆ ಮಾಡಿಕೊಳ್ಳದೆ ಇರುವುದು.

ಇವು ಬಹಳ ಸರಳ ಎನಿಸುವ ಸೂತ್ರಗಳು ಇವನ್ನ ಎಲ್ಲರೂ ಪಾಲಿಸಿದ್ದೆ ಆದಲ್ಲಿ ಆರ್ಥಿಕತೆಯ ರೋಗ ತಾನಾಗೇ ಗುಣವಾಗುತ್ತದೆ. ಎಲ್ಲಕ್ಕೂ ಮುಂಚೆ ಯಾರೋ ಹೇಳಿದರು ಅಲ್ಲಿ ಬೆಲೆ ಹೆಚ್ಚಾಗುತ್ತದೆ ಎನ್ನುವ ಅವೈಜ್ಞಾನಿಕ ಹೂಡಿಕೆಯನ್ನ ಕೂಡ ಮಾಡುವುದು ಬಿಟ್ಟರೆ ಕೇವಲ ಕೆಲವೇ ಕೆಲವು ಜನರ ಬಳಿ ಹಣ ಸಂಗ್ರಹವಾಗುವುದು ಕೂಡ ನಿಲ್ಲುತ್ತದೆ.

ಕೊನೆ ಮಾತು: ವಿಶ್ವದ ಆರ್ಥಿಕ ವ್ಯವಸ್ಥೆ ಕುಸಿದು ಹನ್ನೆರೆಡು ವರ್ಷವಾಯ್ತು. ಇಷ್ಟು ವರ್ಷ ಕಳೆದರೂ ಅದರ ಪರಿಣಾಮಗಳು ಮಾತ್ರ ಇನ್ನೂ ಪೂರ್ಣವಾಗಿ ಮಾಸಿಲ್ಲ. ಆದರೇನು ಭಾರತದಂತ ದೊಡ್ಡ ದೇಶದಲ್ಲಿ ಇಂತಹ ಆರ್ಥಿಕ ಕುಸಿತ ಆಗಿತ್ತು ಎನ್ನುವ ಅರಿವಿಲ್ಲದ ವಿದ್ಯಾವಂತರ ದೊಡ್ಡ ದಂಡೆ ಇದೆ. ಭಾರತದಂತಹ ಅತ್ಯಂತ ದೊಡ್ಡ ಮತ್ತು ಜನಭರಿತ ದೇಶದಲ್ಲಿ ಏನೇ ಮಾಡಿದರೂ ಅದರಿಂದ ಲಾಭ ಪಡೆಯುವರ ಸಂಖ್ಯೆ ಮತ್ತು ನಷ್ಟ ಹೊಂದುವರ ಸಂಖ್ಯೆ ಕೂಡ ದೊಡ್ಡದಾಗೇ ಇರುತ್ತದೆ. ಸಮಾಜದ ಒಂದು ವರ್ಗ ಸರಕಾರದ ನಿರ್ಧಾರ ಯಾವುದೇ ಇರಲಿ ಅದರಿಂದ ತೊಂದರೆಗೆ ಒಳಾಗುತ್ತದೆ. ಇನ್ನೊಂದು ವರ್ಗ ಅದೇ ನಿರ್ಧಾರದಿಂದ ಖುಷಿ ಪಡುತ್ತದೆ. ದೇಶದ ಎಲ್ಲಾ ಜನತೆಗೂ ಏಕ ಕಾಲದಲ್ಲಿ ಒಳಿತಾಗುವ ನಿರ್ಧಾರ ಮಾಡುವುದು ಸರಕಾರ ಯಾವುದೇ ಇರಲಿ ಭಾರತದಂತಹ ದೇಶದಲ್ಲಿ ಕಷ್ಟ ಸಾಧ್ಯ. ಭಾರತೀಯ ಮತ್ತು ಜಾಗತಿಕ ಮಟ್ಟದಲ್ಲಿ ವಿತ್ತ ಜಗತ್ತು ಹೊಸ ನೋಟಕ್ಕೆ ಕಾಯುತ್ತಿದೆ. ಆ ನೋಟ ಸಿಗುವುದೆಂದು? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರ ಹುಡುಕುವುದರಲ್ಲಿ ಎಲ್ಲರೂ ಮಗ್ನರು. 

ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com