ಚೀನಾ ಬಗ್ಗೆ ಹೆಚ್ಚಿದ ತಾತ್ಸಾರ, ಕೊರೋನಾಗೆ ಸಿಗದ ಉತ್ತರ, ಆರ್ಥಿಕತೆ ತತ್ತರ!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಚೀನಾ ದೇಶದ ಬಗ್ಗೆ ಜಗತ್ತಿನ ದೇಶಗಳಲ್ಲಿ ಜಿಗುಪ್ಸೆ, ದ್ವೇಷ ಹೆಚ್ಚಾಗುತ್ತಿದೆ ಎನ್ನುತ್ತದೆ ಸಮೀಕ್ಷೆ. ಕೋವಿಡ್ ಗೆ ಮುಂಚೆಯೇ ಚೀನಿಯರು ಎಂದರೆ ಪಾಶ್ಚಾತ್ಯ ದೇಶಗಳಲ್ಲಿ ಒಂದು ರೀತಿಯ ಅಸಹನೆ ಶುರುವಾಗಿತ್ತು. ಕೋವಿಡ್ ನಂತರ ಚೀನಿಯರ ಬಗ್ಗೆ ಮತ್ತು ಚೀನಾ ದೇಶದ ಬಗ್ಗೆ ಅಸಹನೆ, ದ್ವೇಷ ಹೆಚ್ಚಾಗುತ್ತಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಚೀನಾ ಈ ಕೊರೊನ ವೈರಸ್ ಗೆ ಕಾರಣ, ಹೀಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದರ ಬಗ್ಗೆ ವಿಚಾರಣೆ ನಡೆಯಲಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಆಸ್ಟ್ರೇಲಿಯಾ ಚೀನಾದ ಕಣ್ಣಲ್ಲಿ ಬೆಂಕಿಯನ್ನ ತುಂಬಿತು. ಆಸ್ಟ್ರೇಲಿಯಾ ನಮ್ಮ ಚಪ್ಪಲಿಯ ಕೆಳಗೆ ಇರುವ ಚೂಯಿಂಗ್ ಗಮ್ ಎನ್ನುವ ಹೇಳಿಕೆಯನ್ನ ಕೂಡ ಚೀನಾ ನೀಡಿದ್ದು ಇಂದಿಗೆ ಇತಿಹಾಸ.

ಆಸ್ಟ್ರೇಲಿಯಾ ನಂತರದ ಸ್ಥಾನ ಅಮೇರಿಕಕ್ಕೆ ಸಲ್ಲಬೇಕು. ಅಮೇರಿಕಾ ಅಧ್ಯಕ್ಷರೇ ಚೀನಾದಿಂದ ಜಗತ್ತಿಗೆ ಇಂದು ಇಂತಹ ದುಸ್ಥಿತಿ ಬಂದಿದೆ ಎಂದು ಹಲವು ಬಾರಿ ಉಚ್ಛರಿಸಿದ್ದಾರೆ.

ಚೀನಾ ಎಂದರೆ ಅಪನಂಬಿಕೆ:

ಇದೆ ಮಂಗಳವಾರ ಅಂದರೆ ೦6/10/2020 ರಂದು ಪೀವ್ ರಿಸರ್ಚ್ ಸೆಂಟರ್ 14 ದೇಶಗಳಲ್ಲಿ ಸಾವಿರಾರು ಜನರನ್ನ ಸಂದರ್ಶಿಸಿ ಮಾಡಿದ ಒಂದು ಸಮೀಕ್ಷೆಯನ್ನ ಬಿಡುಗಡೆ ಮಾಡಿದ. ಅದರ ಪ್ರಕಾರ 81 ಪ್ರತಿಶತ ಆಸ್ಟ್ರೇಲಿಯನ್ನರು ಚೀನಾವನ್ನ ಇಷ್ಟ ಪಡುವುದಿಲ್ಲ ಅಥವಾ ಚೀನಾ ಸರಕಾರ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ನಂಬಿಕೆಯನ್ನ ಹೊಂದಿಲ್ಲ. ಕೋವಿಡ್ ಗೆ ಮುಂಚೆ ಇದು 57 ಪ್ರತಿಶತವಿತ್ತು. ಕೋವಿಡ್ ಘಟನೆಯಿಂದ ಆಸ್ಟ್ರೇಲಿಯಾದಲ್ಲಿ ಚೀನಾ ವಿರೋಧಿಸುವರ ಸಂಖ್ಯೆ 24 ಪ್ರತಿಶತ ಏರಿಕೆ ಕಂಡು 81 ಪ್ರತಿಶತವಾಗಿದೆ. ಜಗತ್ತಿನಲ್ಲಿ ಚೀನಾ ದೇಶವನ್ನ ಹೀಗೆ ವಿರೋಧಿಸುವ ಸಂ    ಖ್ಯೆ ಶೇಕಡಾವಾರುವಿನ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು.

ಗ್ರೇಟ್ ಬ್ರಿಟನ್ ನಲ್ಲಿ ಚೀನಾ ವಿರೋಧಿಸುವರ ಸಂಖ್ಯೆ 74 ಪ್ರತಿಶತ, ಕೋವಿಡ್ ಗೆ ಮುಂಚೆ ಇದು 19 ಪ್ರತಿಶತ ಕಡಿಮೆಯಿತ್ತು. ಹೀಗೆ ಜರ್ಮನಿಯಲ್ಲಿ ಈ ಸಂಖ್ಯೆ 71 ಪ್ರತಿಶತವಿದೆ. ಕೋವಿಡ್ ನಂತರ ಇಲ್ಲಿಯೂ ಚೀನಾ ವಿರೋಧಿಸುವರ ಸಂಖ್ಯೆ 15 ಪ್ರತಿಶತ ಏರಿಕೆ ಕಂಡಿದೆ. ಅಮೇರಿಕಾದಲ್ಲಿ ಕೋವಿಡ್ ಗೆ ಮುಂಚೆ 60 ಪ್ರತಿಶತ ಇದ್ದ ಚೀನಿ ವಿರೋಧಿ ಧೋರಣೆ 13 ಪ್ರತಿಶತ ಹೆಚ್ಚಾಗಿ ಇಂದಿಗೆ 73 ಪ್ರತಿಶತಕ್ಕೆ ಏರಿಕೆ ಕಂಡಿದೆ.

ಕೆನಡಾ, ಬೆಲ್ಜಿಯಂ, ಸ್ಪೇನ್, ಇಟಲಿ, ಫ್ರಾನ್ಸ್ ನೆದರ್ಲ್ಯಾಂಡ್, ಜಪಾನ್, ಸೌತ್ ಕೊರಿಯಾ, ಸ್ವೀಡೆನ್ ಮುಂತಾದ ದೇಶಗಳಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಫಲಿತಾಂಶ ಮಾತ್ರ ಸೇಮ್! ಕೆಲವು ದೇಶದಲ್ಲಿ ಸ್ವಲ್ಪ ಕಡಿಮೆ ಎನ್ನುವುದನ್ನ ಬಿಟ್ಟರೆ 14 ದೇಶಗಳಲ್ಲೂ ಕೋವಿಡ್ ನಂತರ ಚೀನಾದ ವಿರುದ್ಧ ಮುನಿಸು ಹೆಚ್ಚಾಗಿದೆ. ಕೋವಿಡ್ ಗೆ ಮುನ್ನ ಜಗತ್ತಿನ ಬಹುತೇಕ ದೇಶಗಳು ಚೀನಾ ಪ್ಲಸ್ ಒನ್ ಎನ್ನುವ ನೀತಿಯನ್ನ ಅನುಸರಿಸಲು ನಿರ್ಧರಿಸಿದ್ದವು. ಹೀಗಾಗಿ ಮುಂಬರುವ ದಿನಗಳಲ್ಲಿ ಭಾರತ ಶರವೇಗದಲ್ಲಿ ಓಡುವ ಸಾಧ್ಯತೆಗಳಿವೆ. ಭಾರತಕ್ಕೆ ಪೈಪೋಟಿ ನೀಡಬಲ್ಲ, ವಿಯೆಟ್ನಾಮ್ ಮತ್ತು ಫಿಲಿಪೈನ್ಸ್ ಎರಡೂ ಕೋವಿಡ್ ಆರ್ಥಿಕತೆಯಲ್ಲಿ ಸೊರಗಿ ಹೋಗಿವೆ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದ ಹೂಡಿಕೆದಾರರು ಮೊದಲು ಭಾರತವನ್ನ ಬಯಸುತ್ತಾರೆ ವಿನಃ ವಿಯೆಟ್ನಾಮ್ ಅಥವಾ ಫಿಲಿಪೈನ್ಸ್ ದೇಶವನ್ನಲ್ಲ. ಅದರಲ್ಲೂ ಫಿಲಿಪೈನ್ಸ್ ದೇಶ ಆರ್ಥಿಕವಾಗಿ ಬಹಳ ಕಂಗೆಟ್ಟಿದೆ. ಲಕ್ಷಾಂತರ ಜನರು ಊಟಕ್ಕೂ ಇಲ್ಲದ ಸ್ಥಿತಿಯನ್ನ ತಲುಪಿದ್ದಾರೆ. ಇನ್ನೊಂದು ಆರು ತಿಂಗಳು ಸ್ಥಿತಿ ಹೀಗೆ ಮುಂದುವರಿದರೆ ಅಲ್ಲಿ ಸಾಮಾಜಿಕ ಏರುಪೇರುಗಳು ಉಂಟಾಗಿ ಆಂತರಿಕ ದಂಗೆಗಳು ಶುರುವಾಗಬಹುದು.

ಇಂತಹ ಸಮೀಕ್ಷೆಯಲ್ಲಿ ಕಡಿಮೆ ಆದಾಯದವರು, ಹೆಚ್ಚಿನ ಆದಾಯದವರು ಮತ್ತು ಮಧ್ಯಮ ವರ್ಗದವರು ಎಲ್ಲರೂ ಇದ್ದರು. ಸಾಮಾನ್ಯವಾಗಿ ಸಮೀಕ್ಷೆಗಳಲ್ಲಿ ಒಮ್ಮುಖದ ಫಲಿತಾಂಶಗಳು ಸಿಗುವುದು ಕಡಿಮೆ. ಆಶ್ಚರ್ಯ ಎನ್ನಿಸುವಂತೆ 14 ದೇಶದ ಎಲ್ಲಾ ವರ್ಗದ ಜನರೂ ಒಕ್ಕೊರಲಿನಿಂದ ಚೀನಾದ ವಿರುದ್ಧದ ಹೇಳಿಕೆಯನ್ನ ನೀಡಿದ್ದಾರೆ. ಇವರಲ್ಲಿ 78 ಪ್ರತಿಶತ ಜನ ಚೀನಾದ ಅಧ್ಯಕ್ಷ ಜಿನ್ಪಿಂಗ್ ಅವರನ್ನ ನಂಬುವುದಿಲ್ಲ ಎನ್ನುವ ಹೇಳಿಕೆಯನ್ನ ನೀಡಿದ್ದಾರೆ. ಇದಕ್ಕಿಂತ ಆಘಾತಕಾರಿ ಅಂಶವೆಂದರೆ 83 ಪ್ರತಿಶತ ಜನರು ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರನ್ನ ಕೂಡ ನಂಬುವುದಿಲ್ಲ ಎನ್ನುವ ಮಾತನ್ನ ಆಡಿದ್ದಾರೆ!!

ಅಲ್ಲಿಗೆ ಜಗತ್ತಿನ ಎರಡು ಅತಿ ದೊಡ್ಡ ಶಕ್ತಿಶಾಲಿ ದೇಶಗಳ ನಾಯಕರನ್ನ ಜಗತ್ತಿನ ಜನರು ನಂಬುವುದಿಲ್ಲ ಎಂದಾಯ್ತು. ಇದಕ್ಕೆ ಕಾರಣಗಳನ್ನ ವಿವರಿಸುವ ಅವಶ್ಯಕತೆ ಇಲ್ಲ ಎಂದುಕೊಳ್ಳುವೆ. ಕೋವಿಡ್ ಜಗತ್ತಿಗೆ ಅಪ್ಪಳಿಸದಿದ್ದರೆ ಚೀನಾ ಇಷ್ಟೊಂದು ಕೆಟ್ಟ ಹೆಸರನ್ನ ಪಡೆದುಕೊಳ್ಳುತ್ತಿರಲಿಲ್ಲ.

ತನ್ನ ಜನರ ಸ್ವಾತಂತ್ರ್ಯ ಕಸಿಯುವ ಚೀನಾ:

ಹಾಂಗ್ ಕಾಂಗ್ ಚೀನಾಕ್ಕೆ 1997 ರಲ್ಲಿ ಬ್ರಿಟಿಷರಿಂದ ಹಸ್ತಾಂತರವಾಗಿದೆ. ಅಂದು ಚೀನಾಕ್ಕೆ ಹಾಂಗ್ ಕಾಂಗ್ ದೊಡ್ಡ ಆದಾಯ ತಂದುಕೊಡುವ ಪ್ರಾಂತ್ಯವಾಗಿತ್ತು. ಅಂದರೆ ಗಮನಿಸಿ 1997-99ರ ಸಮಯದಲ್ಲಿ ಚೀನಾದ ಒಟ್ಟು ಆದಾಯ 100 ರೂಪಾಯಿ ಎಂದುಕೊಂಡರೆ 26 ರಿಂದ 28 ರೂಪಾಯಿ ಹಾಂಗ್ ಕಾಂಗ್ ಉತ್ಪಾದಿಸುತ್ತಿತ್ತು.

ಹೀಗಾಗಿ ಹಾಂಗ್ ಕಾಂಗ್ ಸ್ವಾಯತ್ತತೆ ಬೇಕೆಂದು ಕೇಳಿದಾಗ ಚೀನಾ ಇಲ್ಲವೆನ್ನದೆ ಒಪ್ಪಿಗೆ ಕೊಡುತ್ತದೆ. ಮುಂದಿನ 49 ವರ್ಷ ಚೀನಾದ ಅಧೀನದಲಿದ್ದರೂ ನೀವು ರಾಜ್ಯಭಾರ ಮಾಡಲು ಸ್ವತಂತ್ರರು ಎಂದು ಹೇಳುತ್ತದೆ. ಇದಾಗಿ ಎರಡು ದಶಕದಲ್ಲಿ ಅಂದರೆ 2019 ರಲ್ಲಿ ಹಾಂಗ್ ಕಾಂಗ್ ಗೆ ಕೊಟ್ಟ ಮಾತು ಮುರಿದು ಆಡಳಿತದಲ್ಲಿ, ಶಿಕ್ಷಣದಲ್ಲಿ ಮೂಗು ತೂರಿಸುತ್ತದೆ. ಏಕೆ ಗೊತ್ತೇ? ಇವತ್ತಿಗೆ ಚೀನಾದ ಆದಾಯ 100 ಎಂದುಕೊಂಡರೆ ಹಾಂಗ್ ಕಾಂಗ್ ನೀಡುವ ಆದಾಯ ಕೆಲವ ಮೂರು ರೂಪಾಯಿ!! ಅಂದ ಮಾತ್ರಕ್ಕೆ ಹಾಂಗ್ ಕಾಂಗ್ ಕುಸಿಯಿತು ಎನ್ನುವ ನಿರ್ಧಾರಕ್ಕೆ ಬರಬೇಡಿ! ಅದು ಹಿಂದಿಗಿಂತ ಚೆನ್ನಾಗಿಯೇ ದುಡಿಯುತ್ತಿದೆ. ಆದರೆ ಚೀನಾ ಗೆರೆಯ ಮುಂದೆ ಇನ್ನೊಂದಷ್ಟು ದೊಡ್ಡ ಗೆರೆಗಳ ಎಳೆದಿದೆ. ಹೀಗಾಗಿ ಹಾಂಗ್ ಕಾಂಗ್ ಸಣ್ಣದಾಗಿ ಕಾಣತೊಡಗಿದೆ. ಇಂದಿಗೂ ಹಾಂಗ್ ಕಾಂಗ್ ಮತ್ತು ಚೀನಾದ ಮಧ್ಯೆ ಗೋಡೆಯಿದೆ. ಅದು ಸರಹದ್ದು. ಬೇರೆ ಚಿಕ್ಕ ಪುಟ್ಟ ದೇಶಗಳನ್ನ ಆಪೋಷನ ತೆಗೆದುಕೊಂಡಿರುವ ಚೀನಾ ತನ್ನದೇ ತಟ್ಟೆಯ ತುತ್ತನ್ನ ತಿನ್ನಲು ತಡವೇಕೆ ಮಾಡೀತು? ಅಲ್ಲಿ ಮೆಲ್ಲನೆ ಹಾಂಗ್ ಕಾಂಗ್ ಆಡಳಿತ ಶೈಲಿ ಮರೆಯಾಗಿ ಚೀನಿ ಅಧಿಕಾರ ಶೈಲಿ ತಲೆಯೆತ್ತಲಿದೆ. ತನ್ನದೇ ಆದ ಜನರನ್ನ ಚೀನಾ ನಡೆಸಿಕೊಳ್ಳುತ್ತಿರುವ ರೀತಿ ಕೂಡ ಜಾಗತಿಕ ಮಟ್ಟದಲ್ಲಿ ಚೀನಾದ ವಿರುದ್ಧ ಧೋರಣೆ ಹೆಪ್ಪುಗಟ್ಟಲು ಮತ್ತೊಂದು ಮುಖ್ಯವಾದ ಕಾರಣವಾಗಿದೆ.

ಸಾಮೂಹಿಕ ನಾಯಕತ್ವ ಬೇಡುವ ಹೊಸ ವಿಶ್ವ ವ್ಯವಸ್ಥೆ !

ತಿಂಗಳು ಕಳೆದರೆ ಅಮೇರಿಕಾದಲ್ಲಿ ಚುನಾವಣೆ ಫಲಿತಾಂಶ ಬಂದಿರುತ್ತದೆ. ವಿಶ್ವದ ದೊಡ್ಡಣ್ಣನಂತೆ ಮೆರೆದ ಅಮೆರಿಕಾದ ಅಧ್ಯಕ್ಷ ಯಾರೇ ಆಗಲಿ, ಅವರಿಗೆ ತಮ್ಮ ದೇಶದಲ್ಲಿ ಆಗಿರುವ ತಪ್ಪುಗಳ ಸುಧಾರಣೆಗೆ ಸಮಯ ಬೇಕಾಗುತ್ತದೆ. ತಕ್ಷಣಕ್ಕೆ ಅವರು ಜಗತ್ತಿನ ಆರ್ಥಿಕತೆ ಅಥವಾ ರಾಜಕೀಯದ ದಿಕ್ಕನ್ನ ಬದಲಿಸಲು ಶಕ್ತರಾಗಿರುವುದಿಲ್ಲ. ಹೊಸ ವಿಶ್ವವ್ಯವಸ್ಥೆಯನ್ನ ಒಂದು ದೇಶ ಮುನ್ನಡೆಸಲು ಸಾಧ್ಯವಿಲ್ಲ. ಅಮೇರಿಕಾ ಅಷ್ಟು ಶಕ್ತವಾಗಿಲ್ಲ, ಚೀನಾದ ಮೇಲೆ ಜಗತ್ತಿನ ಇತರ ದೇಶಗಳ ನಂಬಿಕೆ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಹೀಗಾಗಿ ಹೊಸ ವಿಶ್ವವ್ಯವಸ್ಥೆಯನ್ನ ಮುನ್ನಡೆಸಲು ಯೂರೋಪಿಯನ್ ಒಕ್ಕೂಟ, ರಷ್ಯಾ, ಬ್ರೆಝಿಲ್, ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕೈ ಜೋಡಿಸಬೇಕಾಗುತ್ತದೆ. ಭಾರತ ಈ ದೇಶಗಳನ್ನ ಕೂಡ ಒಟ್ಟಾಗಿ ಮುನ್ನಡೆಸಿಕೊಂಡು ಹೋಗುವ ಪ್ರಮುಖ ದೇಶವಾಗಿ ಬದಲಾದರೆ ಅದು ಅಚ್ಚರಿಯೇನಿಲ್ಲ.

ಕೊರೊನಗೆ ಸಿಗದ ಉತ್ತರ, ಬದುಕು ಆರ್ಥಿಕತೆ ತತ್ತರ:

ಜಾಗತಿಕ ಮಟ್ಟದಲ್ಲಿ ಶಕ್ತಿ ವಿತರಣೆಗಾಗಿ ಇಂತಹ ದಾಳಗಳು ಉರುಳುತ್ತಿರುವ ಈ ಸಮಯದಲ್ಲಿ ಜಗತ್ತಿನ ಹಲವಾರು ದೇಶಗಳಲ್ಲಿ 30 ರಿಂದ 45 ಅಥವಾ 50ರ ಆಸುಪಾಸಿನ ಬಹಳಷ್ಟು ಜನರ ತಲೆ ಉರುಳುತ್ತಿದೆ. ಕೊರೊನದ ಕಾರಣದಿಂದ ಹೃದಯಾಘಾತವಾಗಿ ಸಾಯುವ ಯುವ ಜನತೆಯ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಸಮಾಜದಲ್ಲಿ ಒಂದು ರೀತಿಯ ಭಯವನ್ನ ಹುಟ್ಟಿಹಾಕಿದೆ. ಫ್ರಾನ್ಸ್ ನಲ್ಲಿ ನಡೆದ ರಿಸರ್ಚ್ ಪ್ರಕಾರ ಒಮ್ಮೆ ಕೊರೊನ ವೈರಸ್ ಗೆ ತುತ್ತಾಗಿ ಗುಣಮುಖರಾದವರಿಗೂ ಉಸಿರಾಟದ ತೊಂದರೆ, ಮೈ-ಕೈ ನೋವು ಇತ್ಯಾದಿ ಇದರ ಸಂಬಂಧಿ ನೋವುಗಳು ಹಲವಾರು ತಿಂಗಳುಗಳು ಇರುವ ಸಾಧ್ಯತೆ ಹೆಚ್ಚಾಗಿದೆ. ಕೆಲವೊಮ್ಮೆ ಇದು ತಿಂಗಳು ಇದ್ದರೆ ಕೆಲವೊಮ್ಮೆ ಇದು ಮೂರ ರಿಂದ ಐದಾರು ತಿಂಗಳ ತನಕ ಎಳೆಯಬಹುದು ಎನ್ನುತ್ತದೆ ಫ್ರಾನ್ಸ್ ನ ಪ್ರಯೋಗಗಳು. ಹೀಗಾಗಿ ಕೊರೋನ ಗುಣಪಡಿಸುವಿಕೆಗೆ ಎಷ್ಟು ಮಹತ್ವ ನೀಡುತ್ತಿದ್ದೇವೆ ಅದಕ್ಕಿಂತ ಹೆಚ್ಚಿನ ಮಹತ್ವವನ್ನ ನಂತರದ ದಿನಗಳಲ್ಲಿ ರೋಗಿಗೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕೊರೊನದಿಂದ ಚೇತರಿಕೆ ಕಂಡವರಿಗಾಗಿ ಎಂದು ಹೊಸ ಆಸ್ಪತ್ರೆಯನ್ನ ತೆರೆಯಬೇಕಾಗುತ್ತದೆ ಎನ್ನುವುದು ಫ್ರಾನ್ಸ್ ಪ್ರಯೋಗದ ಸಾರಾಂಶ. ಇದು ನಿಜವಾಗಿದ್ದರೆ ಅದಕ್ಕಾಗಿ ಇನ್ನಷ್ಟು ಹಣವನ್ನ ಸರಕಾರ ವೆಚ್ಚ ಮಾಡಬೇಕಾಗುತ್ತದೆ. ಗಮನಿಸಿ ಈಗಾಗಲೇ ಜಗತ್ತಿನ ಬಹುತೇಕ ರಾಷ್ಟ್ರಗಳು ಸದ್ದಿಲ್ಲದೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿವೆ. ವಸ್ತು ಸ್ಥಿತಿ ಹೀಗೆ ಮುಂದುವರಿದರೆ ಚಿಕ್ಕ ಪುಟ್ಟ ದೇಶಗಳಲ್ಲಿ ಆಂತರಿಕ ಗಲಭೆ ಶುರುವಾಗುತ್ತದೆ.

ಈಗಾಗಲೇ ದಕ್ಷಿಣ ಆಫ್ರಿಕಾ, ಬ್ರಿಟನ್, ಸ್ಪೇನ್, ಇಂಡೋನೇಷಿಯಾ, ಫಿಲಿಪೈನ್ಸ್, ಪೋರ್ಚುಗಲ್, ಗ್ರೀಸ್ ಹೀಗೆ ಬಹಳಷ್ಟು ದೇಶಗಳು ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿವೆ. ಪರವಾಗಿಲ್ಲ ಎನ್ನುವ ದೇಶಗಳ ಎಕಾನಮಿ ಕುಸಿಯಲು ಕೂಡ ಹೆಚ್ಚು ಸಮಯದ ಅವಶ್ಯಕತೆಯಿಲ್ಲ. ಈ ನಿಟ್ಟಿನಲ್ಲಿ ಅತ್ಯಂತ ವೇಗದಲ್ಲಿ ಆಗಬೇಕಾದ ಕೆಲಸ ಕೊರೊನ ಎನ್ನುವ ಕಣ್ಣಿಗೆ ಕಾಣದ ವೈರಸ್ಸಿನ್ಗೆ ಒಂದು ತಾತ್ವಿಕ ಅಂತ್ಯವನ್ನ ಘೋಷಿಸುವುದು. ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತಾ ಹೋದಂತೆ ಜಗತ್ತು ಕೂಡ ಮರಳಿ ತಿದ್ದಲಾಗದ ಆರ್ಥಿಕತೆಯತ್ತ ಹೊರಳಿಕೊಳ್ಳುತ್ತದೆ .

ಕೊನೆ ಮಾತು: ಮನುಕುಲ ಉಳಿದರೆ ಮಾತ್ರ ಎಕಾನಮಿ, ಮನು ಕುಲ ಉಳಿದರೆ ಮಾತ್ರ ರಾಜಕೀಯ, ಅಧಿಕಾರ, ಹಣ. ಜನತೆಯ ಬಳಿ ವಿಶ್ವಾಸವಿಲ್ಲದಿದ್ದರೆ ಅವರು ಖರ್ಚು ಮಾಡುವುದಿಲ್ಲ. ಅವರು ಖರ್ಚು ಮಾಡದಿದ್ದರೆ ಇಡೀ ವಿಶ್ವವೇ ತಣ್ಣಗಾಗಿಬಿಡುತ್ತದೆ. ಹಣವೆನ್ನುವುದು ಸದಾ ಬಳಕೆಯಲ್ಲಿರಬೇಕು. ಅದು ಎಂದೂ ಒಂದು ಕಡೆ ನಿಲ್ಲಬಾರದು. ಹಣದ ಹರಿವು ನಿಂತರೆ ಅದು ಎಲ್ಲಾ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಜಗತ್ತಿನ ನಾಯಕರು ರಾಜಕೀಯ ಮಾಡದೆ ಒಂದಾಗಿ ಕೊರೊನಗೆ ಒಂದು ಅಂತ್ಯವನ್ನ ಕಾಣಿಸಬೇಕಿದೆ. 2021ರ ಮಾರ್ಚ್ ನಂತರವೂ ಇದು ಮುಂದುವರಿದರೆ ಜಗತ್ತಿನ ಬಹುತೇಕ ದೇಶಗಳಲ್ಲಿ ಉಂಟಾಗುವ ಆಥಿಕ ಅರಾಜಕತೆ ಆಂತರಿಕ ಕಲಹಕ್ಕೆ ದಾರಿ ಮಾಡಿಕೊಡುತ್ತದೆ. ಈ ಒಂದು ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳದಿದ್ದರೆ ಎಷ್ಟೇ ಹಣವಂತರಾದರೂ ಬವಣೆ ತಪ್ಪಿದ್ದಲ್ಲ. 2020 ಎಲ್ಲ ತರಹದಲ್ಲೂ ನೋವಿನ ವರ್ಷವಾಗಿ ಚರಿತ್ರೆಯಲ್ಲಿ ದಾಖಲಾಗಲಿದೆ.

ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com