ತೆರಿಗೆ ಎನ್ನುವುದು ಕುಣಿಕೆಯಾಗದೆ ಹಾರವಾಗಬೇಕು!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ತೆರಿಗೆ ಎನ್ನುವುದು ಕುಣಿಕೆಯಾಗದೆ ಹಾರವಾಗಬೇಕು!
ತೆರಿಗೆ ಎನ್ನುವುದು ಕುಣಿಕೆಯಾಗದೆ ಹಾರವಾಗಬೇಕು!

ನರೇಂದ್ರ ಮೋದಿ ಅವರ ಸರಕಾರ ಪರೋಕ್ಷ ತೆರಿಗೆಯಲ್ಲಿ ಬಹಳಷ್ಟು ಬದಲಾವಣೆ ತರಲು ನಿರ್ಧರಿಸಿದೆ. ನಮ್ಮ ದೇಶದಲ್ಲಿ ಹೀಗೆ ನೇರವಾಗಿ ತೆರಿಗೆಯನ್ನ ಕಟ್ಟುವವರ ಸಂಖ್ಯೆ ಬಹಳ ಕಡಿಮೆ. ಡಾಕ್ಟರ್, ಇಂಜಿನಿಯರ್ ಗಳು ಇರಲಿ, ವಿತ್ತ ಜಗತ್ತಿನ ಚುಕ್ಕಾಣಿ ಹಿಡಿದು ಮುನ್ನಡೆಸಬೇಕಾದ ಲೆಕ್ಕ ಪರಿಶೋಧಕರಲ್ಲಿ 50 ಪ್ರತಿಶತ ತೆರಿಗೆಯನ್ನ ಕಟ್ಟುವುದಿಲ್ಲ. ಬಹಳ ನಿಯತ್ತಾಗಿ ತೆರಿಗೆಯನ್ನ ಕಟ್ಟುವರನ್ನ ಗುರುತಿಸಿ ಅವರನ್ನ  ವಿಶೇಷವಾಗಿ ನಡೆಸಿಕೊಳ್ಳಬೇಕು ಎನ್ನುವುದು ಮೋದಿ ಸರಕಾರದ ಇಚ್ಛೆ. ಹೀಗೆ ನೇರ ತೆರಿಗೆಯನ್ನ ನಿಷ್ಠೆಯಿಂದ ಕಟ್ಟಿದವರನ್ನ ಫೈನಾನ್ಸ್ ಮಿನಿಸ್ಟರ್ ಜೊತೆಗೆ ಊಟ ಅಥವಾ ಕಾಫಿಗೆ ಆಹ್ವಾನಿಸುವುದು ತನ್ಮೂಲಕ ನಿಷ್ಠಾವಂತ ತೆರಿಗೆದಾರರನ್ನ ಗೌರವಿಸುವುದು ಹಾಗೂ ಇನ್ನಷ್ಟು ಜನರನ್ನ ಈ ರೀತಿಯ ಉತ್ತಮ ಬದ್ಧತೆಯುಳ್ಳ ನಾಗರೀಕರಾಗಿ ಮಾಡುವುದು ಕೂಡ ಕೇಂದ್ರ ಸರಕಾರದ ಉದ್ದೇಶ. ಭಾರತದಲ್ಲಿ ಕಾರ್ಪೊರೇಟ್ ಟ್ಯಾಕ್ಸ್ 22 ಪ್ರತಿಶತವಿದೆ. ಇದರ ಜೊತೆಗೆ ಕಣ್ಣಿಗೆ ಕಾಣದ ಅಪರೋಕ್ಷ ತೆರಿಗೆಗಳು ಕೂಡ ಇವೆ. ಹೀಗಾಗಿ ಭಾರತದಲ್ಲಿ ವ್ಯಾಪಾರ ಮಾಡುವುದು ಸುಲಭದ ಕೆಲಸವಲ್ಲ. ಲಾಭ ಮಾಡಬೇಕಾದರೆ ತೆರಿಗೆಯನ್ನ ವಂಚಿಸಬೇಕು ಎನ್ನುವ ಮನೋಭಾವ ಎಲ್ಲರಲ್ಲೂ ಬೇರೂರಿಬಿಟ್ಟಿದೆ. ತೆರಿಗೆ ಹಣದಲ್ಲಿ ನಮ್ಮ ಸಮಾಜ ಕಾಣಬೇಕಾಗಿದ್ದ ಅಭಿವೃದ್ಧಿ ಕಾಣದೆ ಇರುವುದು ಕೂಡ ತೆರಿಗೆ ವಂಚನೆಗೆ ಮಹತ್ತರ ಕಾರಣ. ಈ ಎಲ್ಲಾ ನಿಟ್ಟಿನಲ್ಲಿ ಟ್ಯಾಕ್ಸ್ ರಿಫಾರ್ಮ್ಸ್ ಜಾರಿಗೆ ತರಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ.

ಟ್ಯಾಕ್ಸ್ ಹೆವನ್ ದೇಶಗಳೆಂದರೇನು?

ರಾಜಕೀಯವಾಗಿ ಮತ್ತು ಆರ್ಥಿಕ ಸ್ಥಿರತೆಯುಳ್ಳ ದೇಶಗಳು ತನ್ನ ದೇಶದ ಪ್ರಜೆಯಲ್ಲದವನಿಗೆ ಯಾವುದೇ ಪ್ರಶ್ನೆ ಕೇಳದೆ ಆತನ ಹಣವನ್ನ ತನ್ನ ದೇಶದಲ್ಲಿ ಇಡಲು ಅನುಮತಿ ನೀಡುತ್ತದೆ. ಆತನನ್ನು ತನ್ನ ದೇಶದಲ್ಲಿ ವಾಸಿಸಬೇಕು ಅಥವಾ ವ್ಯಾಪಾರ ಮಾಡಬೇಕು ಎಂದು ಕೂಡ ಒತ್ತಾಯಿಸುವುದಿಲ್ಲ . ಅಲ್ಲದೆ ಆತನ ಬಗ್ಗೆಯ ಮಾಹಿತಿಯನ್ನ ಗೌಪ್ಯವಾಗಿ ಇಡುವುದಾಗಿ ಭರವಸೆ ಕೂಡ ನೀಡುತ್ತದೆ. ಇವೆಲ್ಲಕ್ಕೆ ಬದಲಾಗಿ ಒಂದಷ್ಟು ಹಣವನ್ನ ಸೇವಾ ಶುಲ್ಕದ ಮೂಲಕ ಪಡೆಯುತ್ತದೆ. ಹೀಗೆ ಈ ರೀತಿಯ ಸೇವೆಯನ್ನ ನೀಡುವ ದೇಶಗಳನ್ನ ಟ್ಯಾಕ್ಸ್ ಹೆವನ್ ದೇಶಗಳು ಎಂದು ಕರೆಯುತ್ತಾರೆ.

ಇದರಿಂದ ಏನು ಪ್ರಯೋಜನ?

ಇಂತಹ ದೇಶದಲ್ಲಿ ತನ್ನ ಹಣವನ್ನ ಇಟ್ಟಿರುವ ವ್ಯಕ್ತಿ ಅಥವಾ ಸಂಸ್ಥೆ ತನ್ನ ದೇಶದಲ್ಲಿ ಕಟ್ಟಬೇಕಾದ ತೆರಿಗೆಯ ಅಲ್ಪಭಾಗವನ್ನ ಸೇವಾಶುಲ್ಕ ಕೊಟ್ಟು ಹೆಚ್ಚಿನ ತೆರಿಗೆಯಿಂದ ಮುಕ್ತನಾಗಬಹುದು. ಸರಳವಾಗಿ ಹೇಳಬೇಕೆಂದರೆ ಟ್ಯಾಕ್ಸ್ haven  ಅಂದರೆ ಟ್ಯಾಕ್ಸ್ evasion (ತೆರಿಗೆ ವಂಚನೆ). ಇದು ವ್ಯಕ್ತಿಗೆ ಅಥವಾ ಸಂಸ್ಥೆಗೆ ಆದ ಲಾಭ. ಇನ್ನು ಈ ರೀತಿಯ ವ್ಯಕ್ತಿಗಳಿಗೆ  ಅಥವಾ ಸಂಸ್ಥೆಗೆ ಇಂತಹ ಸೇವೆ ನೀಡಲು ಮುಂದಾಗುವ ದೇಶಗಳಿಗೆ ತಮ್ಮ ದೇಶದ ಅಭಿವೃದ್ಧಿಗೆ ಬೇಕಾದ ಬಂಡವಾಳ ದೊರಕುತ್ತದೆ.  ಜೊತೆಗೆ ಸೇವಾ ಶುಲ್ಕದ ಹೆಸರಲ್ಲೂ ಒಂದಷ್ಟು ಹಣ ಹರಿದು ಬರುತ್ತದೆ.

ಅಮೆರಿಕಾದಲ್ಲಿ ಕಾರ್ಪೊರೇಟ್ ಟ್ಯಾಕ್ಸ್ 35 ಪ್ರತಿಶತವಿದೆ. ಹೀಗಾಗಿ ಆಪಲ್. ಸಿಸ್ಕೋ, ಮೈಕ್ರೋಸಾಫ್ಟ್, ಒರಾಕಲ್, ಅಲ್ಫಬೆಟ್ ಹೀಗೆ ಅನೇಕ ಕಂಪನಿಗಳು ತಮ್ಮ ಹಣವನ್ನ ಅಮೇರಿಕಾದಲ್ಲಿ ಇಡದೆ ಟ್ಯಾಕ್ಸ್ ಹವೆನ್ ದೇಶಗಳಲ್ಲಿ ಇಟ್ಟಿದ್ದಾರೆ. ಇತ್ತೀಚಿಗೆ ಇಂತಹ ಸಂಸ್ಥೆಗಳನ್ನ ತಮ್ಮಲ್ಲಿಯೇ ಉಳಿಸಿಕೊಳ್ಳುವ ಸಲುವಾಗಿ ಅಮೇರಿಕಾ ಕೂಡ ಕಾರ್ಪೊರೇಟ್ ಟ್ಯಾಕ್ಸ್ ಅನ್ನು 21 ಪ್ರತಿಶತಕ್ಕೆ ಇಳಿಸಿದೆ. ಇದು ಫೆಡರಲ್ ಕಾರ್ಪೊರೇಟ್ ಟ್ಯಾಕ್ಸ್ ಕಥೆ. ಇದನ್ನ ಬಿಟ್ಟು ರಾಜ್ಯಗಳು ಕೂಡ ಕಾರ್ಪೊರೇಟ್ ಇನ್ಕಮ್ ಟ್ಯಾಕ್ಸ್ ಅನ್ನು ವಿಧಿಸುತ್ತವೆ. ಇದು ನಾಲ್ಕರಿಂದ 12 ಪ್ರತಿಶತದ ವರೆಗೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಇಲ್ಲಿ ಎಲ್ಲದಕ್ಕೂ ಲೆಕ್ಕ ಕೇಳುತ್ತಾರೆ. ಅದು ಆಡಿಟ್ ಆಗಿದೆಯೇ ಎನ್ನುವ ಮಾತು ಬೇರೆ ಕೇಳಬೇಕಾಗುತ್ತದೆ. ಹೀಗಾಗಿ ಯಾವ ಪ್ರಶ್ನೆಯನ್ನೂ ಕೇಳದ ಕೇವಲ ಒಂದಷ್ಟು ಹಣ ಪಡೆದು ಸರಿಯೆನ್ನುವ ಇಂತಹ ಟ್ಯಾಕ್ಸ್ ಹೆವನ್ ದೇಶಗಳೆಂದರೆ ಎಲ್ಲಾ ಹಣವಂತರಿಗೂ ಪ್ರೀತಿ.

ಅಂದೋರ, ಬಹಾಮಾಸ್, ಮಾರಿಷಸ್, isle of men, ಹಾಕಾಂಗ್, ಮೊನಾಕೊ, ಪನಾಮ, ಸೇಂಟ್ ಕಿಟ್ಸ್, ದುಬೈ, ಬಹರೈನ್, ಬರ್ಮುಡಾ, Luxembourg, ಸ್ವಿಸ್ಸೆರ್ಲ್ಯಾಂಡ್, Liechtenstein  ಜಗತ್ತಿನ ಕೆಲವು ಮುಖ್ಯ ಟ್ಯಾಕ್ಸ್ ಹೆವನ್ ದೇಶಗಳು.

ಜಗತ್ತಿನ ವಿವಿಧ ಭಾಗಗಳಲ್ಲಿ ಆಗುವ ವಿದೇಶಿ ನೇರ ಹೂಡಿಕೆಗಳು (FDI) ಹರಿದು ಬರುವುದು ಟ್ಯಾಕ್ಸ್ ಹೆವನ್ ದೇಶಗಳ ಮೂಲಕವೇ! ಈ ದಾರಿಯನ್ನ ಉಪಯೋಗಿಸಿ ಆದ ಕಾರ್ಪೊರೇಟ್ ತೆರಿಗೆ ವಂಚನೆ ಎಷ್ಟಿರಬಹುದು? ಎನ್ನುವ ಅಂದಾಜು ಲೆಕ್ಕ ಕೂಡ ಕೊಡಲು ಯಾರು ಇನ್ನೂ ಮನಸ್ಸು ಮಾಡಿಲ್ಲ!! ವೈಯಕ್ತಿಕ ತೆರಿಗೆ ವಂಚನೆಯ ಮೊತ್ತ ವರ್ಷ ಒಂದಕ್ಕೆ 8೦೦ ಬಿಲಿಯನ್ ಡಾಲರ್ ನಿಂದ 1 ಟ್ರಿಲಿಯನ್ ಡಾಲರ್ ಇರಬಹುದು ಎನ್ನುತ್ತದೆ ಒಂದು ಅಂದಾಜು.

ಇಂತಹ ಹಣಕಾಸು ವ್ಯವಸ್ಥೆ ಹುಟ್ಟಕೊಂಡಿದ್ದು ಹೇಗೆ?

ಟ್ಯಾಕ್ಸ್ ಅಥವಾ ತೆರಿಗೆ ಯಾವ ದಿನದಿಂದ ಶುರುವಾಯಿತು ಅಂದಿನಿಂದಲೇ ತೆರಿಗೆ ವಂಚನೆಯ ರೂಪುರೇಷೆ ಕೂಡ ಸಿದ್ಧವಾಯಿತು ಎಂದು ನಿರ್ಭಿಡೆಯಿಂದ ಹೇಳಬಹುದು. ಹಿಂದೆ ಹಣಕಾಸು ವ್ಯವಹಾರ ಕೆಲವೇ ಪ್ರಸಿದ್ಧ ಸಂಸ್ಥೆ ಮತ್ತು ವ್ಯಕ್ತಿಗಳ ಹಿಡಿತದಲ್ಲಿತ್ತು. ಒಂದು ಕೈಯಲ್ಲಿ ತೊಟ್ಟಿಲು ತೂಗುವುದು ಮತ್ತೊಂದು ಕೈಯಲ್ಲಿ ಮಗುವ ಜಿಗುಟುವ ಧನಿಕರ ಮನಸ್ಥಿತಿ ಇಂತಹ ಹಣಕಾಸು ವ್ಯವಸ್ಥೆ ಹುಟ್ಟಿಹಾಕಿತು. ಅಮೇರಿಕಾ ದೇಶದ ನ್ಯೂಜೆರ್ಸಿ ಮತ್ತು ಡೆಲಾವೇರ್  ರಾಜ್ಯಗಳನ್ನ ಇಂತದೊಂದು ವ್ಯವಸ್ಥೆಯ ಹುಟ್ಟಿಹಾಕಿದವರು ಎನ್ನಬಹುದು. ಹಾಗೆ ನೋಡಲು ಹೋದರೆ ಜಗತ್ತಿನ ಟ್ಯಾಕ್ಸ್ ಹೆವನ್ ದೇಶಗಳ ಪಟ್ಟಿಯಲ್ಲಿ ಇವೆರಡು ಬರುವುದೇ ಇಲ್ಲ!! ಹಾಗಾದರೆ ಇವು ಟ್ಯಾಕ್ಸ್ ಹೆವನ್ ದೇಶಗಳು ಹೇಗಾದವು? ನಿಜ ಇವು ಟ್ಯಾಕ್ಸ್ ಹೆವನ್ ರಾಜ್ಯಗಳಲ್ಲ.  ನ್ಯೂಯೋರ್ಕ್ ನ ಒಬ್ಬ ವಕೀಲ ಡೆಲ್ ಎನ್ನುವಾತ 'ಈಜಿ ಇನ್ಕಾರ್ಪೋರೇಶನ್' ಅಂದರೆ ಸುಲಭ ನೊಂದಾವಣಿ ಎನ್ನುವ ಒಂದು ಹೊಸ ಪರಿಕಲ್ಪನೆ ಯೊಂದಿಗೆ ನ್ಯೂಜೆರ್ಸಿಯ ಅಂದಿನ ಗವರ್ನರ್ ನನ್ನ ಭೇಟಿ ಮಾಡುತ್ತಾನೆ. ನ್ಯೂಜೆರ್ಸಿ ಅಂದಿನ ಸಮಯದಲ್ಲಿ ಅಂದರೆ 1880 ರಲ್ಲಿ ಹಣಕಾಸಿನ ಮುಗ್ಗಟ್ಟು ಎದುರಿಸುತಿತ್ತು. ಮಿಕ್ಕಿದ್ದು ಚರಿತ್ರೆ. ಟ್ಯಾಕ್ಸ್ ಹೆವನ್ ದೇಶಗಳು ಇಂದಿಗೂ ಪಾಲಿಸುತ್ತಿರುವುದು ಡೆಲ್ ನ ಸುಲಭ ನೋಂದಾವಣಿ ಪರಿಕಲ್ಪನೆಯನ್ನೇ. ರಗಳೆ, ಪ್ರಶ್ನಾವಳಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ, ಮೂಲ ಪ್ರದೇಶಕ್ಕಿಂತ ಅತಿ ಕಡಿಮೆ ತೆರಿಗೆ, ಗೌಪ್ಯತೆ ಇವು ಸುಲಭ ನೋಂದಾವಣಿಯ ವಿಶೇಷತೆಗಳು. ಇದನ್ನ ಇಂಗ್ಲೆಂಡ್ ಬಹು ಬೇಗ ತನ್ನದಾಗಿಸಿಕೊಂಡಿತು. 1929/30 ರಲ್ಲಿ ಆದ ಹಣಕಾಸು ಕುಸಿತದಿಂದ ಹೊರಬರುವ ದಾರಿ ಎಲ್ಲಾ ದೇಶಗಳು ಹುಡುಕುತ್ತಿದವು. ಸ್ವಿಸ್ 1934ರಲ್ಲಿ ತನ್ನ ಹೊಸ ಬ್ಯಾಂಕಿಂಗ್ ನೀತಿಯಲ್ಲಿ 'absolute silence in respect to a professional secret' ಎನ್ನುವ ಹೊಸ ಪರಿಚ್ಛೇದ ಮಂಡಿಸುತ್ತದೆ. ಅಂದರೆ ಅರ್ಥ ಇಷ್ಟೇ ಯಾರು ಎಲ್ಲಿಂದ ಹೇಗಾದರೂ ಹಣ ತರಲಿ ಎಷ್ಟಾದರೂ ತರಲಿ ಅದನ್ನ ನಮ್ಮಲ್ಲಿ ಇಡಲಿ ಅದರ ಪರಿಪೂರ್ಣ ಜವಾಬ್ದಾರಿ ನಮ್ಮದು. ಪರಿಪೂರ್ಣ ಗೌಪ್ಯತೆ ಕಾಯ್ದು ಕೊಳ್ಳಲಾಗುವುದು. ಎಷ್ಟರ ಮಟ್ಟಿಗೆ ಎಂದರೆ ಸ್ವಿಸ್ ದೇಶದ ಅಧಿಕಾರಸ್ಥ ರಾಜಕೀಯ ಪಕ್ಷಗಳಿಗೂ ತನ್ನ ಗ್ರಾಹಕನ ಪಟ್ಟಿ ನೀಡದಷ್ಟು! ಸ್ವಿಸ್ ಎಂದರೆ ಹಣಕಾಸು ಸಂಸ್ಥೆಗಳು.., ಬ್ಯಾಂಕ್ ಎನ್ನುವ ಮಟ್ಟಿಗೆ ಸ್ವಿಸ್ ಬೆಳದದ್ದು ತೆರಿಗೆ ವಂಚನೆಯಲ್ಲಿ ಸಹಾಯ ಮಾಡಿ.

ಪನಾಮ ಎನ್ನುವ ದೇಶದಲ್ಲಿ ನೀವು ಬಹಳ ಸುಲಭವಾಗಿ ಶಿಪ್ಪಿಂಗ್ ಸಂಸ್ಥೆಯನ್ನ ತೆರೆಯಬಹುದು. ನಿಮ್ಮ ಶಿಪ್ಗಳ ಸ್ಥಿತಿ ಹೇಗಿದೆ ಎಂದು ಪರಿಶೀಲಿಸುವ ಗೋಜಿಗೆ ಕೂಡ ಅವರು ಹೋಗುವುದಿಲ್ಲ. ನೀವು ಬಹಳಷ್ಟು ಬಾರಿ ತೈಲ ತುಂಬಿದ ಶಿಪ್ ಸಮುದ್ರದಲ್ಲಿ ಅಪಘಾತಕ್ಕೆ ತುತ್ತಾಗಿ ಸಾವಿರಾರು ಜಲಚರಗಳ ಮಾರಣ ಹೋಮವಾಗಿದ್ದು ನೀವು ಕೇಳಿರುತ್ತೀರಿ, ಕಂಡಿರುತ್ತೀರಿ ಆದರೆ ಇದಕ್ಕೆ ಸಂಬಂಧಿಸಿದಂತೆ ಯಾರಿಗಾದರೂ ಶಿಕ್ಷೆಯಾಗಿದ್ದು ಕೇಳಿದ್ದೀರಾ? ಇಲ್ಲವೇ ಇಲ್ಲ. ಏಕೆಂದರೆ ಇಂತಹ ಮುಕ್ಕಾಲು ಪಾಲು ಶಿಪ್ಪಿಂಗ್ ಸಂಸ್ಥೆಗಳು ನೊಂದಾವಣಿ ಆಗುವುದು ಪನಾಮ ಎನ್ನುವ ದೇಶದಲ್ಲಿ. ನಿಮ್ಮ ಮುಖವನ್ನ ಕೂಡ ನೋಡದೆ ನಿಮಗೆ ಶಿಪ್ಪಿಂಗ್ ಪರ್ಮಿಷನ್ ಪತ್ರವನ್ನ ಈ ದೇಶ ವಿತರಿಸುತ್ತದೆ. ಅಲ್ಲದೆ ಅಂತಾರಾಷ್ಟ್ರೀಯ ಕಾನೂನು ಲಾಗೂ ಆಗದ ಮತ್ತೊಂದು ದೇಶದಲ್ಲಿ ಇಂತಹ ಸಂಸ್ಥೆಗಳ ಮಾಲೀಕ ಕುಳಿತು ತಣ್ಣನೆಯ ಬಿಯರ್ ಕುಡಿಯುತ್ತ ಇರುತ್ತಾನೆ. ಪ್ರತಿ ದೇಶವೂ ತನ್ನ ತೆರಿಗೆ ನೀತಿಯಲ್ಲಿ ಸುಧಾರಣೆ ತಂದರೆ ಆಗ ಟ್ಯಾಕ್ಸ್ ಹೆವನ್ ದೇಶಗಳು ಕುಸಿಯುತ್ತವೆ.

ಕೊನೆ ಮಾತು: ಸದ್ಯದ ಮಟ್ಟಿಗೆ ಇಂದಿಗೂ ಇವೆಲ್ಲಾ  ಅಭಾದಿತವಾಗಿ ನಡೆಯುತ್ತಲೇ ಇದೆ. ಪನಾಮ ಲೀಕ್ಸ್ ನಲ್ಲಿ ಭಾರತದ ಒಂದಷ್ಟು ಜನರ ಹೆಸರು ಕೇಳಿಬಂದಷ್ಟೇ ವೇಗವಾಗಿ ಕರಗಿಯೂ ಹೋಯಿತು. ಜನ ಸಾಮಾನ್ಯ ಮಾತ್ರ ಇನ್ಕಮ್ ಟ್ಯಾಕ್ಸ್ ನೋಟೀಸ್ ಬಂದರೆ ಆಕಾಶವೇ ಕಳಚಿ ಬಿದ್ದಂತೆ ಒತ್ತಡಕ್ಕೆ ಒಳಗಾಗುವುದು ಕೂಡ ಗ್ಲೋಬಲ್.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com