ಕುಸಿಯುತ್ತಿದೆ ಮೌಲ್ಯ, ಹೆಚ್ಚುತ್ತಿದೆ ಸಾಮಾಜಿಕ ಅಂತರ!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಕುಸಿಯುತ್ತಿದೆ ಮೌಲ್ಯ, ಹೆಚ್ಚುತ್ತಿದೆ ಸಾಮಾಜಿಕ ಅಂತರ!
ಕುಸಿಯುತ್ತಿದೆ ಮೌಲ್ಯ, ಹೆಚ್ಚುತ್ತಿದೆ ಸಾಮಾಜಿಕ ಅಂತರ!

ಜಗತ್ತು ಎಷ್ಟು ವೇಗವಾಗಿ ಸಾಗುತ್ತಿದೆ ಎಂದರೆ ನಮ್ಮ ಬಗ್ಗೆ ನಮಗೆ ತಿಳಿದುಕೊಳ್ಳಲು ಪುರುಸೊತ್ತಿಲ್ಲದಷ್ಟು! 

ಅದು ಸರಿ ಇಷ್ಟು ವೇಗವಾಗಿ ಹೋಗಿ ತಲುಪುವುದಾದರೂ ಎಲ್ಲಿಗೆ? ನಿಖರ ಉತ್ತರ ಗೊತ್ತಿಲ್ಲ. ನಿನ್ನೆಗಿಂತ ಇಂದಿನ ವೇಗ ಹೆಚ್ಚು. ಆ ವೇಗದಿಂದ ಗಳಿಸುವುದಾದರೂ ಏನು? ವೇಳೆ ಮತ್ತು ಹಣ ಒಂದಕ್ಕೊಂದು ಲಿಂಕ್ ಮಾಡಿದುದರ ಫಲವಿದು. ಹಣದ ಮೌಲ್ಯವನ್ನ ವೇಳೆಯ ಜೊತೆಗೆ ತಳುಕು ಹಾಕಲು ಶುರು ಮಾಡಿದ್ದು ಮನುಕುಲ ಇಂದು ಇಷ್ಟೊಂದು ಸಿರಿವಂತಿಕೆ ಕಾಣಲು ಸಾಧ್ಯವಾಯಿತು. ಸಿರಿವಂತಿಕೆಯೇನೋ ಬಂತು ಆದರೆ ಬದುಕಿನಲ್ಲಿ ಇದ್ದ ನೆಮ್ಮದಿ ಮತ್ತು ಶಾಂತಿಯ ಲೆಕ್ಕ ಅದಕ್ಕೆ ಕಟ್ಟಬೇಕಾದ ಮೌಲ್ಯ ಮಾತ್ರ ಮರೆತು ಬಿಟ್ಟೆವು!!.

ಇಂದು ಜಗತ್ತಿನೆಲ್ಲೆಡೆ ಮನುಷ್ಯ ಮನುಷ್ಯನ ನಡುವಿನ ಅಂತರ ಹೆಚ್ಚಾಗುತ್ತಿದೆ. ಭಾರತದ ನ್ಯಾಷನಲ್ ಫುಡ್ ಸೆಕ್ಯೂರಿಟಿ ಸಂಸ್ಥೆ ಹೇಳುವ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ ನಾವು ಹೊರಚೆಲ್ಲುವ ಆಹಾರ ಪದಾರ್ಥದ ಮೌಲ್ಯ 92 ಸಾವಿರ ಕೋಟಿ. ಈ ಸಂಖ್ಯೆಯನ್ನ ನಿಖರ ಎಂದು ಭಾವಿಸುವಂತಿಲ್ಲ ಇವೆಲ್ಲಾ ಅಂದಾಜು ಅಂಕಿ ಅಂಶಗಳು. ಅಂದರೆ ಇಷ್ಟು ಮಟ್ಟದ ಆಹಾರ ಬೀದಿಗೆ ಬಿಸಾಕುವ ಶ್ರೀಮಂತ ವರ್ಗ ಇಲ್ಲಿದೆ ಅಂತಾಯ್ತು. ಇದೆ ನೆಲದಲ್ಲಿ ಪ್ರತಿ ದಿನ ನಿಖರ ಲೆಕ್ಕವಿಲ್ಲದಷ್ಟು ಮಕ್ಕಳು ಹಸಿವು ಮತ್ತು ಪೌಷ್ಟಿಕತೆ ಇಲ್ಲದೆ ಸಾಯುತ್ತವೆ. ಅಂಕಿ-ಅಂಶದ ಪ್ರಕಾರ ಮೂರರಿಂದ ಐದು ಸಾವಿರ ಮಕ್ಕಳು ಪ್ರತಿದಿನ ಹಸಿವಿನಿಂದ ಸಾಯುತ್ತವೆ ಎನ್ನುವುದು ಕೂಡ ಅಂದಾಜು ಸಂಖ್ಯೆ ಅಲ್ಲದೆ ಇನ್ನೇನು ಆಗಿರಲು ಸಾಧ್ಯ? ನಮ್ಮ ನಡುವೇ ಈ ಮಟ್ಟದ ಅಂತಕಕಾರಿ ಅಂತರವೇಕೆ ಸೃಷ್ಟಿಯಾಗುತ್ತಿದೆ?

ಕೋವಿಡ್-19 ಜಗತ್ತಿನಲ್ಲಿ ಈ ಅಂತರ ಇನ್ನಷ್ಟು ಅಂತರ ಹೆಚ್ಚಾಗಲು ಕಾರಣವಾಗಿದೆ. ನಿಮಗೆ ತಿಳಿದಿರಲಿ ಜೂನ್ 2020 ರಿಂದ ನವೆಂಬರ್ 2020 ಅಂದರೆ ಆರು ತಿಂಗಳಲ್ಲಿ ಅಮೇರಿಕಾ ದೇಶ ಒಂದರಲ್ಲಿ 8 ಮಿಲಿಯನ್ ಅಂದರೆ ಬರೋಬ್ಬರಿ 80 ಲಕ್ಷ ಜನ ಹೊಸದಾಗಿ ಬಡವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ವಾರದಲ್ಲಿ ಒಂದಲ್ಲ ಒಂದು ದಿನ ಊಟಕ್ಕೂ, ತಿಂಡಿಗೂ ಕೊರತೆಯನ್ನ ಅನುಭವಿಸುವರ ಸಂಖ್ಯೆ ಕೂಡ ಕಡಿಮೆಯಿಲ್ಲ. ಅವರೂ ಕೂಡ ಬಡವರೇ, ಇಂತಹವರ ಸಂಖ್ಯೆ 27ಮಿಲಿಯನ್, ಎರಡು ಕೋಟಿ ಎಪ್ಪತ್ತು ಲಕ್ಷ! ಇದು ಅಮೆರಿಕಾದ ಕಥೆ!!. ಇನ್ನು ಜಗತ್ತನ್ನ ಪೂರ್ಣವಾಗಿ ನೋಡುವುದಾದರೆ 250 ಕೋಟಿ ಜನರಲ್ಲಿ 130 ಕೋಟಿ ಜನರನ್ನ ಬಡತನ ಅಥವಾ ಅದಕ್ಕಿಂತ ಕೆಳಗಿನ ರೇಖೆಯಲ್ಲಿದ್ದಾರೆ ಎಂದು ವರ್ಗಿಕರಿಸಬಹುದು.  ಈ ಸಂಖ್ಯೆಯಲ್ಲಿ ಹತ್ತಿರತ್ತಿರ 65ಕೋಟಿ ಜನರನ್ನ 18 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು ಎನ್ನುವ ವರ್ಗಿಕರಣ ಮಾಡಿದ ಅಂಕಿ-ಅಂಶ ಎಂತವರನ್ನೂ ಬೆಚ್ಚಿ ಬೀಳಿಸುತ್ತದೆ. ಹೊಟ್ಟೆಗೆ ತತ್ವಾರ ಎಂದ ಮೇಲೆ ಅವರ ಭವಿಷ್ಯದ ಮಾತೇನು??

ಕೊರೋನ ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರವನ್ನ ಬಹಳಷ್ಟು ಹೆಚ್ಚಿಸಿದೆ. 2021ನ್ನ ನಾವು ಖುಷಿಯಾಗಿ ಸ್ವಾಗತಿಸಲು ಸಾಧ್ಯವಿಲ್ಲ. ಏಕೆಂದರೆ ಬಡತನದ ರೇಖೆಗಿಂತ ಅತ್ಯಂತ ಹೀನಾಯ  ಸ್ಥಿತಿಯಲ್ಲಿರುವರ ಸಂಖ್ಯೆ 15 ಕೋಟಿ, ಇದು ಅಮೆರಿಕನ್ನರು ನಿರ್ಧರಿಸಿರುವ ಸಂಖ್ಯೆ. ಅವರ ಪ್ರಕಾರ ದಿನಕ್ಕೆ 2 ಡಾಲರ್ ಅಂದರೆ 150 ರೂಪಾಯಿಗಿಂತ ಕಡಿಮೆ ಆದಾಯ ಉಳ್ಳವರನ್ನ ಕಡು ಬಡವರು ಅಥವಾ ಬಡತನದ ರೇಖೆಗಿಂತ ಕೆಳಗಿರುವವರು ಎನ್ನಲಾಗಿದೆ. ಭಾರತದಲ್ಲಿ 35 ರೂಪಾಯಿಗಿಂತ ಕಡಿಮೆ ಆದಾಯ ಉಳ್ಳವರನ್ನ ನಾವು ಬಡತನತದ ರೇಖೆಗಿಂತ ಕೆಳಗಿರುವವರು ಎನ್ನುತ್ತೇವೆ. ಮೊದಲೇ ಹೇಳಿದಂತೆ ಈ ಅಂಕಿ ಸಂಖ್ಯೆಗಳು ವರ್ಲ್ಡ್ ಬ್ಯಾಂಕ್, ಯೂನಿಸೆಫ್ ಹೀಗೆ ಹಲವಾರು ಸಂಸ್ಥೆಗಳು ಹತ್ತಾರು ದೇಶದಲ್ಲಿ ಸರ್ವೇ ಮಾಡಿ ಹೇಳಿರುವ ಸಂಖ್ಯೆಗಳು. ದೇಶದಿಂದ ದೇಶಕ್ಕೆ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಬದಲಾಗುತ್ತಾ ಹೋಗುತ್ತದೆ. ಜಗತ್ತಿನ ಜನಸಂಖ್ಯೆಯ 25 ಪ್ರತಿಶತ ಅತ್ಯಂತ ಕಡಿಮೆ ಸಂಪನ್ಮೂಲದಲ್ಲಿ ಬದುಕುತ್ತಿದೆ ಎನ್ನುವ ಅಂದಾಜು ಲೆಕ್ಕಾಚಾರವನ್ನ ಕೊಡಬಹುದು.

ಈ ರೀತಿಯ ಅಂತರ ಇವತ್ತು ನಿನ್ನೆಯದಲ್ಲ. ರಾಜ ಮಹಾರಾಜರು ಜಗತ್ತಿನ ಹೆಚ್ಚಿನ ಸಂಪನ್ಮೂಲದ ಮೇಲೆ ಹಿಡಿತವನ್ನ ಹೊಂದಿದ್ದರು. ತಮ್ಮ ಆಸೆ, ಮಹತ್ವಾಕಾಂಕ್ಷೆಗೆ ಜನ ಸಾಮಾನ್ಯರನ್ನ ದಾಳವನ್ನಾಗಿ ಬಳಸಿಕೊಳ್ಳುವುದು ಕೂಡ ಹೊಸತೇನಲ್ಲ. ಹೆಚ್ಚು ಬೇಡ ಕಳೆದ 5೦೦ ವರ್ಷಗಳ ಚರಿತ್ರೆಯನ್ನ ನೋಡಿದಾಗ ಕೂಡ ನಮಗೆ ತಿಳಿಯುವುದು ಯಾವಾಗ ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚಾಗುತ್ತದೆ ಆಗೆಲ್ಲಾ ಮೌಲ್ಯಗಳು ಕುಸಿಯುತ್ತವೆ. ಮೌಲ್ಯ ಕುಸಿದಷ್ಟೂ ಸಾಮಾಜಿಕ ಅಂತರ ಇನ್ನಷ್ಟು ಹೆಚ್ಚಾಗುತ್ತದೆ. ಹಣವಿಲ್ಲದ ಮೇಲೆ ಜೀವನ ಶೈಲಿಯಲ್ಲಿ ಬಹಳಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾದಾಗ ಉತ್ತಮ ಶಿಕ್ಷಣ, ಸಂಸ್ಕಾರ ಸಿಗದೇ ಮತ್ತೆ ಅಂತರ ಹೆಚ್ಚುತ್ತಲೆ ಹೋಗುತ್ತದೆ.

ಅಮೇರಿಕಾ ಒಂದರಲ್ಲಿ ಕಳೆದ ವಾರದಲ್ಲಿ ಅಂದರೆ ಡಿಸೆಂಬರ್ 2020ರ ಪ್ರಾರಂಭದ ವಾರದಲ್ಲಿ 885,000 ಜನರು ಹೊಸದಾಗಿ ಪ್ರಥಮ ಬಾರಿಗೆ ಕೆಲಸವಿಲ್ಲ ಎಂದು ನೊಂದಾಯಿಸಿಕೊಂಡಿದ್ದಾರೆ. ಇದು ಜಗತ್ತಿನಾದ್ಯಂತ ಕೂಡ ದೊಡ್ಡ ಸಮಸ್ಯಯ ರೂಪವನ್ನ ಪಡೆಯುತ್ತಿದೆ. ಗಮನಿಸಿ ನೋಡಿ ಮಧ್ಯಮ-ಮಧ್ಯಮವರ್ಗ ಎನ್ನುವುದು ಕಾಣೆಯಾಗುತ್ತಿದೆ. ಬಡ ಮಧ್ಯಮವರ್ಗ ಎನ್ನುವುದು ಬಡತನದ ರೇಖೆಯನ್ನ ತಲುಪಿದೆ. ಈ ಭೂಮಿಯ ಮೇಲೆ ಉಳಿದಿರುವುದು ನಾಲ್ಕು ವರ್ಗ! ಅತ್ಯಂತ ಶ್ರೀಮಂತ, ಶ್ರೀಮಂತ, ಬಡವ, ಕಡುಬಡವ ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ.

ಯೂರೋಪು ಮತ್ತು ಅಮೇರಿಕಾ ದೇಶಗಳಲ್ಲಿ ಪರಿಸ್ಥಿತಿ ಹೀಗೆ ಮುಂದುವರಿದರೆ 2021ರ ಸಾಮಾಜಿಕ ಅಶಾಂತಿ, ಆಂತರಿಕ ಕಲಹಗಳು ಹೆಚ್ಚಾಗುತ್ತದೆ. ಅಲ್ಲಿನ ಜನರಲ್ಲಿ ತಮಗೆ ಆಗುತ್ತಿರುವ ಮೋಸದ ಬಗ್ಗೆ ಜ್ಞಾನವಿದೆ. ಕನಿಷ್ಠ ಪಕ್ಷ ಅಲ್ಲಿನ ಜನ ಸಂಘಟಿತರಾಗಿ ಬೀದಿಗಿಳಿದು ಹೋರಾಡುತ್ತಾರೆ. ನಮ್ಮಲ್ಲಿ? ಯಾವುದೇ ಒಂದು ವ್ಯವಸ್ಥೆಯ ವಿರುದ್ಧ ನಾಲ್ಕು ಜನ ಸಂಘಟಿರಾದರೆ ಸಾಕು ಮೂರು ದಿನದಲ್ಲಿ ಅವರಲ್ಲಿ ನಾಲ್ಕು ಪಾರ್ಟಿ ಉಂಟಾಗಿರುತ್ತದೆ. ನಮ್ಮನ್ನಾಳುವರಿಗೆ ನಮ್ಮನ್ನ ಒಡೆಯುವ ರೀತಿ ಗೊತ್ತಿದೆ. ಹೀಗಾಗಿ ನಮ್ಮ ಸಮಸ್ಯೆಗಳು ಎಂದಿಗೂ ಮುಗಿಯದ ಸಮಸ್ಯೆಗಳಾಗಿಯೇ ಉಳಿದಿವೆ.

ರೇ ದಾಲಿಯೋ ಜಗತ್ತಿನ ಅತಿ ದೊಡ್ಡ ಹೆಡ್ಜ್ ಫಂಡ್ ಸೃಷ್ಟಿಕರ್ತ. ಅಮೆರಿಕನ್ ಬಿಲಿಯನೇರ್. ಈತ ಹೇಳುತ್ತಾನೆ 'ವ್ಯವಸ್ಥೆ ಜಗತ್ತಿನ ಬಹುಸಂಖ್ಯಾತರನ್ನ, ಅಂದರೆ ಹೆಚ್ಚಿನ ಜನರನ್ನ ಜೊತೆಗೆ ಕರೆದುಕೊಂಡು ಹೋಗುವಂತಿರಬೇಕು. ವ್ಯವಸ್ಥೆ ಹೆಚ್ಚಿನ ಜನರಿಗೆ ಒಳಿತು ಮಾಡವಂತಿರಬೇಕು, ಯಾವಾಗ ಅದು ಕೆಲವೇ ಕೆಲವು ಜನರ ಹಿತಕ್ಕೆ ಕೆಲಸ ಮಾಡಲು ಶುರುವಾಗುತ್ತದೆ, ಆಗ ದಂಗೆಗಳಾಗುವುದು ಸಾಮಾನ್ಯ'. ಅಮೆರಿಕಾದ ಹೊಸ ಅಧ್ಯಕ್ಷ  ಜೋಸೆಫ್ ಬೈಡೆನ್ ಅವರ ಮುಂದೆ ಈ ಹೆಚ್ಚುತ್ತಿರುವ ಅಂತರವನ್ನ ಕಡಿಮೆ ಮಾಡುವ ಹರ್ಕ್ಯುಲಸ್ ಟಾಸ್ಕ್ ಇದೆ. ಅಲ್ಲದೆ ಅಮೇರಿಕಾ ಸಾಲದ ಮೇಲೆ ನಿಂತಿರುವ ಎಕಾನಮಿ. ಗುಡ್ಡದಷ್ಟಿದ್ದ ಸಾಲ ಬೆಟ್ಟವಾಗಿ ಕೂತಿದೆ. ಅದನ್ನ ಕರಗಿಸುವ ಭಾರ ಕೂಡ ಅವರ ಮೇಲಿದೆ.

ಜಗತ್ತು ಹೊಸ ನಾಯಕನ ಹುಡಕಾಟದಲ್ಲಿದೆ. ಚೀನಾ ದೇಶವನ್ನ ಎಲ್ಲರೂ ಮುಕ್ತವಾಗಿ ನಾಯಕನೆಂದು ಒಪ್ಪಿಕೊಳ್ಳುವ ಮನಸ್ಥಿತಿಯನ್ನ ತೋರಿಸುತ್ತಿಲ್ಲ. ಇನ್ನು ಬ್ರಿಟನ್ ಅನಾಥವಾಗಿದೆ. ಯೂರೋಪಿಯನ್ ಒಕ್ಕೂಟದಿಂದ ತಾನು ಬಯಸಿದ ಡೀಲ್ ಅದಕ್ಕೆ ಸಿಕ್ಕಿಲ್ಲ, ಆರ್ಥಿಕತೆ ಪಾತಾಳ ತಲುಪಿ ವರ್ಷಗಳಾದವು, ಗಾಯದ ಮೇಲೆ ಬರೆ ಎಳೆದಂತೆ ಕೊರೋನ ಇಲ್ಲಿನ ಆರ್ಥಿಕತೆಯನ್ನ ಮಕಾಡೆ ಮಲಗಿಸಿ ಬಿಟ್ಟಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಅಲ್ಲಿನ ಜನ ದಂಗೆ ಏಳುವುದನ್ನ ತಪ್ಪಿಸಲಾಗುವುದಿಲ್ಲ, ನೋ ಡೀಲ್ ಬ್ರೆಕ್ಸಿಟ್ ಬಹುತೇಕ ಖಚಿತವಾಗಿದೆ. ನಿಮಗೆ ಗೊತ್ತಿರಲಿ ಅವಶ್ಯಕ ವಸ್ತುಗಳನ್ನ ಸಂಗ್ರಹಿಸಿಡಲು ಬೇಕಾಗುವ ಉಗ್ರಾಣಗಳು ಇಂಗ್ಲೆಂಡ್ನಲಿಲ್ಲ. ನೋ ಡೀಲ್ ನಿಂದ ಫ್ರೀ ಟ್ರೇಡ್ ಬಂದಾಗುತ್ತದೆ. ಸಹಜವಾಗೇ ಯೂರೋಪಿನ ಇತರ ದೇಶಗಳಿಂದ ತರಿಸಿಕೊಳ್ಳುವ ವಸ್ತುಗಳ ಮೇಲೆ ಸುಂಕ ಕಟ್ಟಬೇಕಾಗುತ್ತದೆ. ಇದರಿಂದ ಇಂಗ್ಲೆಂಡ್ ನಲ್ಲಿ ಎಲ್ಲಾ ಪದಾರ್ಥಗಳ ಮೇಲಿನ ಬೆಲೆ ಹೆಚ್ಚಳವಾಗಲಿದೆ. ಆದಾಯ ಹೀನಾಯವಾಗಿ ಕುಸಿದಿದೆ. ಇಂತಹ ಸಂದರ್ಭದಲ್ಲಿ ಬದುಕುವುದು ಹೇಗೆ? ದಂಗೆ ಏಳದೆ ಜನರ ಬಳಿ ಯಾವ ದಾರಿ ಉಳಿದಿದೆ?

ಇವೆಲ್ಲುವುಗಳ ನಡುವೆ ಗ್ಲೋಬಲ್ ಲಾಬಿಯಿಸ್ಟ್ ಗಳಾದ ಬಿಲ್ ಗೇಟ್ಸ್ ತರಹದ ಊಸರವಳ್ಳಿ ಜನ ಕೋಟ್ಯಂತರ ಡಾಲರ್ ಹಣವನ್ನ ಸುರಿದು ಲಸಿಕೆಯನ್ನ ತಯಾರಿಸಿದ್ದಾರೆ, ಇದು ಜಗತ್ತಿನ 7.5 ಬಿಲಿಯನ್ ಜನರಲ್ಲಿ ಕನಿಷ್ಠ 5 ಬಿಲಿಯನ್ ಜನರಿಗೆ ತುರ್ತಾಗಿ ಚುಚ್ಚಬೇಕಿದೆ, ಭಾರತವೂ ಸೇರಿದಂತೆ ಈಜಿಪ್ಟ್ ಮತ್ತಿತರ ಆಫ್ರಿಕನ್ ದೇಶಗಳು ಕರೋನಗೆ ಈಗ ಕ್ಯಾರೆ ಎನ್ನುತ್ತಿಲ್ಲ. ಭಾರತದಲ್ಲಂತೂ ಜನರ ಹಿಂಡು ನೋಡಿ ಕೊರೋನ ಬೆಚ್ಚಿ ಬೀಳುತ್ತದೆ ಆ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ. ಇಂತಹ ಸನ್ನಿವೇಶದಲ್ಲಿ ಜಗತ್ತಿನ ಜನರ ಮನದಲ್ಲಿ ಇನ್ನೊಮ್ಮೆ ಪ್ಯಾನಿಕ್, ಭಯ ಸೃಷ್ಟಿಸುವ ಕೆಲಸಕ್ಕೆ ಇಂತಹ ಲಾಬಿಯಿಸ್ಟ್ ಗಳು ಮುಂದಾಗಿದ್ದಾರೆ. ಇವರ ಕೆಲಸ ನೋಡಿ ಒಂದು ಕೈಯಲ್ಲಿ ತೊಟ್ಟಿಲನ್ನ ತೂಗುತ್ತಾರೆ, ಇನ್ನೊಂದು ಕೈಯಲ್ಲಿ ಮಗುವನ್ನ ಕೂಡ ಚಿವುಟುತ್ತಾರೆ. ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರ ಕಡಿಮೆಯಾಗಿ ಬಿಟ್ಟರೆ ಇವರಿಗೆ ನೆಲೆಯಿರುವುದಿಲ್ಲ. ಜಗತ್ತು ಇವರ ಅಣತಿಯಂತೆ ನಡೆಯಲು ಬಡತನ ಇರಬೇಕು. ಹೀಗಾಗಿ ಅಸಮಾನತೆಯನ್ನ ಹೋಗಲಾಡಿಸುವುದು ಇವರಿಗೆ ಬೇಕಿಲ್ಲ.

ಆದರೆ ಇವರು ಸಂಖ್ಯೆಯಲ್ಲಿ ಬಹಳ ಕಡಿಮೆ. ನಮ್ಮ ಸಂಖ್ಯೆ ಬಹಳ ಹೆಚ್ಚು. ಇವರ ಹಣ ಸುತ್ತುತ್ತಿರಬೇಕು, ಇಲ್ಲದಿದ್ದರೆ ಅವರ ಸೌಧ ಕುಸಿಯಲು ಹೆಚ್ಚು ಸಮಯ ಬೇಡ. ಅವರ ಕನಸು, ಮಹತ್ವಾಕಾಂಕ್ಷೆಗೆ ನೀರೆರೆಯಲು ನಾವು ಬೇಕು. ಇದು ನಮ್ಮ ಬಲ. ನಾವು ಅಸಹಕಾರ ಚಳುವಳಿ ಪ್ರಾರಂಭಿಸಿದರೆ? ಸಾಮಾಜಿಕ ಅಂತರ ಕೋವಿಡ್ ವೈರಾಣುವನ್ನ ಹಿಮ್ಮೆಟ್ಟಿಸಲು ಮಾತ್ರ ಇರಲಿ. ಮನುಷ್ಯ-ಮನುಷ್ಯನ ನಡುವಿನ ಇತರ ಸಂಬಂಧಗಳಿಗೆ ಜಾತಿ, ಧರ್ಮ, ಹಣ ಇವಾವುವು ಕೂಡ ತಡೆಯಾಗಬಾರದು.

ಕೊನೆ ಮಾತು: ನಾವು-ನೀವು ಸರಿಯಾಗಿಬಿಟ್ಟರೆ ಸಮಾಜ ತಾನಾಗೇ ಸರಿಯಾಗುತ್ತದೆ. ಸಣ್ಣ ಉದಾಹರಣೆ ನೋಡಿ ಸಾವಿರಾರು ಸಂಖ್ಯೆಯ ಜಿಂಕೆಗಳ ಹಿಂಡನ್ನ ಕೇವಲ ಐದಾರು ಸಿಂಹ ಅಥವಾ ಹುಲಿಗಳು ಅಟ್ಟಾಡಿಸಿ ಬೇರ್ಪಡಿಸಿ ಕೊನೆಗೆ ತನ್ನ ಆಹಾರವನ್ನ  ಪಡೆದುಕೊಳ್ಳುತ್ತದೆ. ನಮ್ಮ ಸ್ಥಿತಿಯೂ ಇದಕ್ಕಿಂತ ಭಿನ್ನವೇನಲ್ಲ. ಜಿಂಕೆಗಳಿಗೆ ಸಿಂಹದ ವಿರುದ್ಧ ತಿರುಗಿ ಬೀಳುವ ಯೋಚನಾಶಕ್ತಿ ಸಂಘಟನಾಶಕ್ತಿ ಇಲ್ಲ. ನಾವು ಮನುಷ್ಯ ಪ್ರಾಣಿಗಳು ಚಿಂತಿಸುವ ಶಕ್ತಿ ನಮಗಿದೆ ಆದರೆ ಸಂಘಟನೆಗೆ ಯಾರ ಅಪ್ಪಣೆಗಾಗಿ ಕಾದು ಕುಳಿತ್ತಿದ್ದೇವೆ?

ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com