ಜಗತ್ತಿನ ಹೊಸ ಶಕ್ತಿ ಕೇಂದ್ರ ಯುರೇಷಿಯಾ!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಜಗತ್ತಿನ ಹೊಸ ಶಕ್ತಿ ಕೇಂದ್ರ ಯುರೇಷಿಯಾ!
ಜಗತ್ತಿನ ಹೊಸ ಶಕ್ತಿ ಕೇಂದ್ರ ಯುರೇಷಿಯಾ!

ಈ ಲೇಖನವನ್ನ ಬರೆಯುತ್ತಿರುವ ಸಮಯದಲ್ಲಿ ಅಮೆರಿಕಾದ ಚುನಾವಣೆ ಫಲಿತಾಂಶ ಬಹಳ ಕಾವು ಪಡೆದುಕೊಂಡಿದೆ. ಜೋ ಬಿಡೆನ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಪ್ರತಿ 4 ವರ್ಷಕೊಮ್ಮೆ ಅಮೆರಿಕಾದಲ್ಲಿ ಹೀಗೆ ಮತ್ತೆ ಜನಪ್ರತಿನಿಧಿಯನ್ನ ಆರಿಸುವ ಕ್ರಿಯೆ ನಡೆಯುತ್ತದೆ. ಯೂರೋಪಿನ ದೇಶಗಳಲ್ಲೂ 4 ವರ್ಷಕೊಮ್ಮೆ ಇಂತಹ ಚುನಾವಣೆಗಳು ನಡೆಯುತ್ತವೆ. ಭಾರತದಲ್ಲಿ ಇದು 5 ವರ್ಷಕೊಮ್ಮೆ ನಡೆಯುವ ಕ್ರಿಯೆಯಾಗಿದೆ.

ಜಗತ್ತಿನ ಬಹುತೇಕ ದೇಶಗಳನ್ನ ನೋಡಿ, ಎಲ್ಲಾ ದೇಶಗಳೂ 4 ಅಥವಾ 5 ವರ್ಷಕ್ಕೆ ಹೊಸ ನಾಯಕನನ್ನ ಆರಿಸಬೇಕು. ಇಲ್ಲವೇ ಹಳೆಯ ನಾಯಕನಲ್ಲಿ ಮತ್ತೆ ವಿಶ್ವಾಸ ವ್ಯಕ್ತಪಡಿಸಬೇಕು. ಆದರೆ ಜಗತ್ತಿನಲ್ಲಿ ಎರಡು ದೇಶಗಳಿವೆ, ಅವುಗಳಿಗೆ ಇಂತಹ ಚಿಂತೆ ಇಲ್ಲ. ಒಂದು ಚೀನಾ, ಜಿ-ಪಿಂಗ್ ಬದುಕಿರುವವರೆಗೆ ಅವರೇ ಅಧ್ಯಕ್ಷ. ಎರಡು ರಷ್ಯಾ, ಇಲ್ಲಿ 2036ರ ವರೆಗೆ ಪುಟಿನ್ ಅವರನ್ನ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಜಗತ್ತು ಪೂರ್ತಿ ಮುಂದಿನ 4 ಅಥವಾ 5 ವರ್ಷದ ನಂತರವೇನು? ಎನ್ನುವುದು ತಿಳಿಯದೆ ಇರುತ್ತದೆ. ಆದರೆ ಇವೆರೆಡು ದೇಶಗಳಲ್ಲಿ ಮಾತ್ರ ಅಷ್ಟರಮಟ್ಟಿನ ಸ್ಥಿರತೆಯಿದೆ. ಇದರರ್ಥ ಬಹಳ ಸರಳ. ಜಗತ್ತಿನಲ್ಲಿ ಚೀನಾ ಮತ್ತು ರಷ್ಯಾ ದೇಶಗಳು ಮಾತ್ರ ದೂರಗಾಮಿ ಚಿಂತನೆ ಅಥವಾ ಪ್ಲಾನ್ ಮಾಡಬಲ್ಲವು ಉಳಿದಂತೆ ಬೇರೆ ದೇಶಗಳು ಶಾರ್ಟ್ ಟರ್ಮ್ ಪ್ಲಾನ್ ಮಾತ್ರ ಮಾಡಬಲ್ಲವು. ಹೀಗಾಗಿ ಚೀನಾ ಮತ್ತು ರಷ್ಯಾ ಮುಂದಿನ 20/3೦/4೦ ವರ್ಷಗಳಿಗೆ ಪ್ಲಾನ್ ಮಾಡುತ್ತಿವೆ. ಇದು ಹೀಗೆ ಆಗಬೇಕು ಎನ್ನುವ ನೀಲನಕ್ಷೆ ಅವರ ಬಳಿಯಿದೆ. ಅಮೇರಿಕಾ ಮತ್ತು ಯೂರೋಪು ಹಳೆಯ ಆಟಗಾರರು ಅವರನ್ನ ಚೀನಾ ಮತ್ತು ರಷ್ಯಾ ಯಾವಾಗಲೋ ಪರದೆಯ ಆಚೆಗೆ ಸರಿಸಿಯಾಗಿದೆ. ಈ ಎರಡು ದೇಶಗಳು ಪ್ರಮುಖವಾಗಿ ಮೂರು ಹಂತದಲ್ಲಿ ಜಗತ್ತನ್ನ ಒಡೆಯುತ್ತವೆ.

  1. ಡಿಸೆಪ್ಷನ್ ಅಂದರೆ ವಂಚನೆಯಿಂದ ಇತರ ದೇಶಗಳನ್ನ ಮಣಿಸುತ್ತವೆ.
  2. ಡಿಸ್ಟೆಬಿಲೈಸಷನ್ ಅಂದರೆ ಅಸ್ಥಿರತೆ ಸೃಷ್ಟಿಸಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿವುದರ ಮೂಲಕ ಜಗತ್ತಿನ ದೇಶಗಳ ಮೇಲೆ ಹಿಡಿತವನ್ನ ಪಡೆದುಕೊಳ್ಳುವುದು.
  3. ಡಿಸ್ಇನ್ಫಾರ್ಮಶನ್, ತಪ್ಪು ಮಾಹಿತಿ ಅಥವಾ ಸುಳ್ಳು ಮಾಹಿತಿಗಳನ್ನ ಟೆಕ್ನಾಲಜಿ ಬಳಸಿ ಹರಿಯಬಿಡಿವುದು. ಆ ಮೂಲಕ ಜನತೆಯಲ್ಲಿ ಸಂಶಯ ಬಿತ್ತುವುದು ಮತ್ತು ತಮಗೆ ಬೇಕಾದ ರೀತಿ ಆ ದೇಶವನ್ನ ಬಳಸಿಕೊಳ್ಳುವುದು.

ಚೀನಾ ದೇಶಕ್ಕೆ ಕಮ್ಯುನಿಸಂ ಬಂದದ್ದು ರಷ್ಯಾದಿಂದ, ಮಾವೋ ರಷ್ಯಾದ ಕಮ್ಯುನಿಸ್ಟ್ ಲೀಡರ್ ಗಳಿಂದ ಸಾಕಷ್ಟು ಪ್ರಭಾವ ಹೊಂದಿದ್ದರು. ಅತಿ ಕಡಿಮೆ ಸಮಯದಲ್ಲಿ ರಷ್ಯಾದಿಂದ ಬರುತ್ತಿದ್ದ ಆಜ್ಞೆಗಳನ್ನ ತಿರಸ್ಕರಿಸಿ ತನ್ನದೇ ಸಿದ್ದಾಂತ, ಮಾವೋವಾದ, ಮಾವೋ ಸಿದ್ಧಾಂತ ಸೃಷ್ಟಿಸಿದ ಭೂಪನೀತ. ಇವರ ಮೂಲ ಉದ್ದೇಶ ಪೂರ್ಣ ಜಗತ್ತನ್ನ ತಮ್ಮ ಅಂಕೆಯಲ್ಲಿಟ್ಟುಕೊಂಡು ರಾಜ್ಯಭಾರ ಮಾಡುವುದು. ಮೇಲೆ ಹೇಳಿದ ಮೂರು ವಿಧಾನಗಳ ಮೂಲಕ ಜಗತ್ತಿನಲ್ಲಿ ಅರಾಜಕತೆ ಸೃಷ್ಟಿಸುವುದು ಆ ಮೂಲಕ ಎಲ್ಲೆಡೆ ಅಸ್ಥಿರತೆ ಸೃಷ್ಟಿಯಾಗುವಂತೆ ನೋಡಿಕೊಳ್ಳುವುದು ಇವರ ಉದ್ದೇಶ. ಒಮ್ಮೆ ಅಸ್ಥಿರತೆ ಹೆಚ್ಚಾದರೆ ಯಾವ ದೇಶವೂ ವರ್ಷಕ್ಕಿಂತ ಹೆಚ್ಚಿನ ಸಮಯದ ಬಗ್ಗೆ ಯೋಚಿಸಲಾರವು, ಅಲ್ಲಿನ ನಾಯಕರಿಗೂ 4 ಅಥವಾ 5 ವರ್ಷದ ನಂತರ ಮತ್ತೆ ಗೆದ್ದು ಬರಬೇಕೆಂಬ ಹಂಬಲವಿರುತ್ತದೆ. ಆಗ ಆ ದೇಶದ ನಾಯಕರೊಡನೆ ಒಪ್ಪಂದ ಮಾಡಿಕೊಳ್ಳುವುದು ಈ ದೇಶಗಳಿಗೆ ಬಹಳ ಸುಲಭ. ರಷ್ಯಾ ಟ್ರಂಪ್ ಜೊತೆಗೆ ನಿಂತರೆ, ಚೀನಾ ಜೋ ಬಿಡೆನ್ ಪರವಾಗಿದೆ ಎನ್ನುತ್ತದೆ ಜಾಗತಿಕ ರಾಜಕೀಯ.

ಇದೇನೂ ಕಥೆ ಎಂದುಕೊಳ್ಳುವ ಮುನ್ನ ರಷ್ಯಾ ಎರಡು ದಶಕಗಳ ಹಿಂದೆಯೇ ಜಾಗತಿಕ ರಾಜಕೀಯದಲ್ಲಿ ತನ್ನ ಹಿಡಿತ ಸಾಧಿಸಲು ನಲವತ್ತು ವರ್ಷದ ಒಂದು ಮೆಗಾ ಪ್ಲಾನ್ ಹೆಣೆದಿತ್ತು. ಆ ನೀತಿಯ ಪ್ರಕಾರ ಜಗತ್ತನ್ನ ನಿಯಂತ್ರಿಸಲು ಐದು ಹಂತಗಳನ್ನ ಅದು ಕಾರ್ಯರೂಪಕ್ಕೆ ತರಬೇಕಿತ್ತು . ಅದೇನು ಎನ್ನುವುದನ್ನ ಸ್ವಲ್ಪ ನೋಡೋಣ .

ಹಂತ 1. ಜಾರ್ಜಿಯಾ ದೇಶದ ಮೇಲೆ ಆಕ್ರಮಣ ಮಾಡಿ ಅಲ್ಲಿನ ಬ್ಲಾಕ್ ಸೀ ತಟದಲ್ಲಿ ರಷ್ಯಾದ ನೌಕಾಪಡೆಗೆ ಜಾಗ ಮಾಡಿಕೊಡುವುದು - ಇದನ್ನ ಆಗಲೇ ಸಾಧಿಸಿಯಾಗಿದೆ .

ಹಂತ 2. ಕ್ರಿಮಿಯಾ ಎನ್ನುವ ನಗರವನ್ನ ವಶಪಡಿಸಕೊಳ್ಳುವುದು, ಆ ಮೂಲಕ ಉಕ್ರೈನ್ ದೇಶವನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದು. ಇದರಲ್ಲಿ ಎರಡು ಕಾರ್ಯ ಸಾಧನೆಯಾಯ್ತು. ಒಂದು ಉಕ್ರೈನ್ ರಷ್ಯಾದ ಹಿಡಿತಕ್ಕೆ ಸಿಕ್ಕಿತು, ಎರಡು ಯೂರೋಪಿನ ಮುಖ್ಯವಾಹಿನಿಗೆ ಒಂದು ನೇರವಾದ ರಸ್ತೆ ಸಿಕ್ಕಹಾಗಾಯ್ತು. ಇದನ್ನ ಕೂಡ ಸಾಧಿಸಿಯಾಗಿದೆ.

ಹಂತ 3.: ಬ್ರೆಕ್ಸಿಟ್: ಬ್ರಿಟನ್ ದೇಶವನ್ನ ಯೂರೋಪಿಯನ್ ಒಕ್ಕೂಟದಿಂದ ಹೊರಬರುವಂತೆ ಮಾಡುವುದು. ಬಲಿಷ್ಠ ಯೂರೋಪಿಯನ್ ಒಕ್ಕೂಟ ಜಗತ್ತನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ರಷ್ಯಾದ ಆಸೆಗೆ ದೊಡ್ಡ ಅಡಚಣೆ. ಇದನ್ನ ಕೂಡ 99 ಭಾಗ ಸಾಧಿಸಿಯಾಗಿದೆ.

ಹಂತ 4 , ಬ್ರಿಟನ್ ಮತ್ತು ಅಮೆರಿಕಾದಲ್ಲಿ ಗಲಭೆ ಉಂಟು ಮಾಡುವುದು. ಅಮೇರಿಕಾ ಅಧ್ಯಕ್ಷ ಚುನಾವಣೆಗೆ ಸ್ವಲ್ಪ ಮುಂಚೆ ಬ್ಲಾಕ್ ಲೈವ್ಸ್ ಮ್ಯಾಟರ್ ಎನ್ನುವ ಹಂಗಾಮ ಶುರುವಾಗಿತ್ತು. ಚುನಾವಣೆ ನಂತರ ಅಲ್ಲಿ ಮತ್ತಷ್ಟು ಗಲಭೆಗಳನ್ನ ನಡೆಸುತ್ತಾರೆ. ಬ್ರಿಟನ್ ನಲ್ಲಿ ಜನಾಂಗೀಯ ಕಲಹವನ್ನ ಕೆಲವು ತಾಸುಗಳಲ್ಲಿ ಹುಟ್ಟಿಹಾಕುವ ತಾಕತ್ತು ರಷ್ಯಾ ದೇಶಕ್ಕಿದೆ. ಇದಿನ್ನೂ ಪೂರ್ಣವಾಗಿ ಮುಗಿದಿಲ್ಲ, ಮುಂಬರುವ ದಿನಗಳಲ್ಲಿ ಇರಾನ್ , ಈಜಿಪ್ಟ್ ಗಳಲ್ಲಿ ಕೂಡ ಗಲಭೆಯನ್ನ ಕಾಣ ಬಹುದು.

ಹಂತ 5, ಯುರೇಷಿಯ  ಎನ್ನುವ ಹೊಸ ಶಕ್ತಿಯನ್ನ ಸೃಷ್ಟಿಸುವುದು. ಮಾಸ್ಕೋ ನಾಯಕನಾಗಿ, ಬರ್ಲಿನ್ ಗೆ ಉಪನಾಯಕನ ಪಟ್ಟ ನೀಡಿ ಟೋಕಿಯೋ ಮತ್ತು ತೆಹ್ರಾನ್ ಗಳನ್ನ ಅಂಕೆಯಲ್ಲಿಟ್ಟುಕೊಂಡರೆ ಜಗತ್ತನ್ನ ಆಳುವುದು ಕಷ್ಟವೇನಲ್ಲ.

ಮೇಲಿನ ಐದು ಹಂತದ ನಲ್ವತ್ತು ವರ್ಷದ ಮಾಸ್ಟರ್ ಪ್ಲಾನ್ ನಲ್ಲಿ ಮೂರು ಹಂತವನ್ನ ರಷ್ಯಾ ಆಗಲೇ ಸಾಧಿಸಿಯಾಗಿದೆ. ನಾಲ್ಕನೇ ಹಂತಕ್ಕೆ ನೀವೆಲ್ಲರೂ ಸಾಕ್ಷಿಯಾಗಲಿದ್ದೀರಿ. ಜಗತ್ತಿನಲ್ಲಿ ಮತ್ತಷ್ಟು ಅಸ್ಥಿರತೆ, ಅರಾಜಕತೆ ಸೃಷ್ಟಿ ಮಾಡುತ್ತಾರೆ. ಐದನೇ ಹಂತವನ್ನ ಕೂಡ ಜಾರಿಗೆ ತರುವ ಕೆಲಸ ಅವರ ಮುಂದಿದೆ. ಶೀತಲ ಸಮರದಲ್ಲಿ ರಷ್ಯವನ್ನ ಅಮೇರಿಕಾ ಹೇಗೆ ಛಿದ್ರ ಮಾಡಿತು ಅದೇ ರೀತಿಯಲ್ಲಿ ರಷ್ಯಾ ಅಮೆರಿಕಾದ ಸಮಾಜವನ್ನ ಒಡೆಯಲು ಹವಣಿಸಿದೆ. ನಲವತ್ತು ವರ್ಷದ ಪ್ಲಾನ್ ಅನ್ನು ಕೇವಲ 23 ವರ್ಷದಲ್ಲಿ 80 ಪ್ರತಿಶತ ಮುಗಿಸಿಬಿಟ್ಟಿದೆ. ಉಳಿದ ಇಪ್ಪತ್ತು ಭಾಗವನ್ನ ಕೂಡ ಸಮಯಕ್ಕಿಂತ ಮುಂಚೆ ಮಾಡಿ ಮುಗಿಸುವ ಉತ್ಸಾಹ ರಷ್ಯಾ ದೇಶದ್ದು .

ಇಷ್ಟೆಲ್ಲಾ ಒಬ್ಬ ಕನ್ನಡದ ಜಾಗತಿಕ ರಾಜಕೀಯ ಇಷ್ಟಪಡುವ ನನಗೆ ಗೊತ್ತಾಗುತ್ತದೆ ಅಂದಮೇಲೆ ಅದು ಯುರೋಪಿಯನ್ನರಿಗೆ ಮತ್ತು ಅಮೆರಿಕನ್ನನಿಗೆ ತಿಳಿಯುವುದಿಲ್ಲವೇ? ಅವರೇಕೆ ಏನೂ ಮಾಡುವುದಿಲ್ಲ?

ಇದಕ್ಕೆ ಪ್ರಮುಖ ಕಾರಣ

  1. ಈ ಯಾವ ದೇಶಗಳಲ್ಲೂ ರಾಜಕೀಯ ಸ್ಥಿರತೆ ಇಲ್ಲದಿರುವುದು. ಮುಂದಿನ ಚುನಾವಣೆಯಲ್ಲಿ ಯಾರಿರುತ್ತಾರೆ ಎನ್ನುವುದೇ ಸಂಶಯ.
  2. ಅಧಿಕಾರದ ಲಾಲಸೆ-ಮುಂದಿನ ಚುನಾವಣೆಯಲ್ಲಿ ಮತ್ತೆ ಮರು ಆಯ್ಕೆ ಬಯಸುವವರು ವಿಧಿಯಿಲ್ಲದೇ ಇವರು ಹೇಳಿದ್ದಕ್ಕೆ ತಲೆ ಅಲ್ಲಾಡಿಸುತ್ತಾರೆ.
  3. ಮೊದಲೇ ಹೇಳಿದಂತೆ ಮೂರು ಡಿ, ಡಿಸೆಪ್ಷನ್, ಡಿಸ್ಟೆಬಿಲೈಸಷನ್ ಮತ್ತು ಡಿಸ್ಇನ್ಫಾರ್ಮಶನ್ ಗಳಲ್ಲಿ ರಷ್ಯಾ ಪ್ರಾವೀಣ್ಯತೆ ಹೊಂದಿದೆ. ಇದರ ಮೂಲಕ ಯೂರೋಪು ಮತ್ತು ಅಮೇರಿಕಾದಲ್ಲಿ ಜನರ ಮನದಲ್ಲಿ ವಿಷ ಬಿತ್ತುವುದು ಇದಕ್ಕೆ ಬಹಳ ಸುಲಭ ಕೆಲಸ. ರಾಜಕೀಯ ನಾಯಕರು ಸಹಜವಾಗೇ ಇವರು ಹೇಳಿದಂತೆ ಕೇಳುತ್ತಾರೆ .
  4. ತಮ್ಮ ಅಣತಿಯನ್ನ ಪಾಲಿಸದವರ ವಿರುದ್ಧ ಕಾಂಟ್ರವರ್ಸಿ ಸೃಷ್ಟಿ ಮಾಡುವುದು ಅಥವಾ ಅವರನ್ನ ಆಟದಿಂದ ಔಟ್ ಮಾಡುವುದು ಕೂಡ ಇವರಿಗೆ ಸಾಧ್ಯ .

ಹೀಗೆ ಇನ್ನೂ ಸಾಕಷ್ಟು ಕಾರಣಗಳಿಂದ ಇವರ ಪ್ಲಾನ್ ಗೊತ್ತಿದ್ದರೂ ಏನೂ ಮಾಡದ ಸ್ಥಿತಿಯಲ್ಲಿ ಜಗತ್ತಿನ ದೇಶಗಳಿವೆ. ಚೀನಾ ಕೂಡ ಹೀಗೆ ತನ್ನ ಮೆಗಾ ಪ್ಲಾನ್ ಅನ್ನು ಜಾರಿಗೆ ತರುತ್ತಿದೆ. ಚೀನಾ ದೇಶದ ಮೇಲಿನ ಅವಲಂಬನೆ ಜಗತ್ತಿನ ಇತರ ದೇಶಗಳನ್ನು ಕಟ್ಟಿ ಹಾಕಿದೆ. ಟರ್ಕಿ ಮತ್ತು ಭಾರತವನ್ನ ಸ್ನೇಹಿತರ ಪಟ್ಟಿಗೆ ಸೇರಿಸಿಕೊಂಡು ಸಾಕಷ್ಟು ಅವರ ಪಾಡಿಗೆ ಅವರನ್ನ ಬೆಳೆಯಲು ಬಿಡುವುದು ರಷ್ಯಾದ ಮೆಗಾ ಪ್ಲಾನ್ನ ಒಂದು ಭಾಗ. ಅಮೆರಿಕವನ್ನ ಇನ್ನೊಂದು ದಶಕದಲ್ಲಿ ಹಲ್ಲು ಕಿತ್ತ ಹಾವನಾಗಿಸುವುದು ಪ್ರಮುಖ ಉದ್ದೇಶ.

ದೊಡ್ಡ ದೇಶಗಳೇ ಏನೂ ಮಾಡಲು ಆಗುತ್ತಿಲ್ಲ , ಮತ್ತೆ ಜನಸಾಮಾನ್ಯರು ನಾವು ಏನು ಮಾಡಬಹದು ?

ಜನ ಸಾಮಾನ್ಯನ ಪಾತ್ರ ಅತಿ ದೊಡ್ಡದು. ರಾಜ ಮಹಾರಾಜರು ಮಾಡಲಾಗದ ಕೆಲಸವನ್ನ ಒಬ್ಬ ಪ್ರಜೆ ಮಾಡಬಹುದು. ಹೀಗೆ ಒಬ್ಬರಿಂದ ಒಬ್ಬರಿಗೆ ವಿಷಯ ತಲುಪಿ ಒಗ್ಗಟ್ಟು ಮೂಡಿದರೆ ಯಾರ ಪ್ಲಾನ್ ಕೂಡ ಕೆಲಸ ಮಾಡುವುದಿಲ್ಲ. ಎಲ್ಲಕಿಂತ ಪ್ರಮುಖವಾಗಿ ಜನ ಸಾಮಾನ್ಯ ನನಗೇನು? ಎನ್ನುವ ಮನೋಭಾವದಿಂದ ಹೊರಬರಬೇಕು. ಆತನಿಗೆ ಸರಿಯಾದ ಮಾಹಿತಿ ತಲುಪಬೇಕು. ಸರಿಯಾದ ಮಾಹಿತಿ ಪಡೆದುಕೊಳ್ಳುವುದು ನಮ್ಮ ಕೈಲಿದೆ. ಇದರ ಜೊತೆಗೆ ನಾನು ನನ್ನ ಹತ್ತಾರು ಲೇಖನದಲ್ಲಿ ಉಲ್ಲೇಖಿಸಿರುವಂತೆ ಸಣ್ಣ ಪುಟ್ಟ ಗುಂಪುಗಳನ್ನ ಕಟ್ಟಿಕೊಂಡು ಅವುಗಳ ನಡುವೆ ವ್ಯವಹರಿಸಲು ಶುರು ಮಾಡುವುದು. ನೆನಪಿರಲಿ ಇಷ್ಟಲ್ಲ ಗದ್ದಲ ನಡೆಯುತ್ತಿರುವುದು ' ಹಣ ಮತ್ತು ಅಧಿಕಾರಕ್ಕಾಗಿ ' ಅವರ ಬೆನ್ನು ಮೂಳೆ ಮುರಿಯಲು ನಮ್ಮಿಂದ ಅಂದರೆ ಕೇವಲ ಜನ ಸಾಮಾನ್ಯರಿಂದ ಮಾತ್ರ ಸಾಧ್ಯ .

ಕೊನೆಮಾತು : ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಮುಂದಿನ ನಲವತ್ತು ವರ್ಷದಲ್ಲಿ ಹೇಗಿರಬೇಕು, ಏನು ಮಾಡಬೇಕು ಎಂದು ಯೋಚಿಸುವ ತಾಕತ್ತು ಹೊಂದಿವೆ. ಉಳಿದ ದೇಶಗಳು ಕೇವಲ ಶಾರ್ಟ್ ಟರ್ಮ್ ಪ್ಲಾನ್ ಗಳಲ್ಲಿ ಮುಳುಗಿವೆ. ಏಕೆಂದರೆ ಈ ದೇಶಗಳು ಪ್ರಜಾಪ್ರಭುತ್ವವನ್ನ ಪಾಲಿಸುತ್ತಿವೆ. ರಷ್ಯಾ ಅಥವಾ ಚೀನಾ ದೇಶಗಳ ಮಹತ್ವಾಕಾಂಕ್ಷೆಗೆ ಅಡ್ಡಿ ಪಡಿಸುವ ಶಕ್ತಿ ಇರುವುದು ಕೇವಲ ಸಾಮಾನ್ಯ ಜನರಿಗೆ ಮಾತ್ರ. ವಿಪರ್ಯಾಸವೆಂದರೆ ಸಾಮಾನ್ಯ ಮನುಷ್ಯನಿಗೆ ಅವನಿಗಿರುವ ಶಕ್ತಿಯ ಅರಿವಿಲ್ಲ. ಅವನಿಗೆ ಆ ಕೆಲಸವನ್ನ ಮಾಡಲು ಕೂಡ ಯಾರೂ ಮುಂದೆ ಬರುವುದಿಲ್ಲ.

ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com