ಜಾಗತಿಕ ಮಟ್ಟದಲ್ಲಿ ಶುರುವಾಗಿದೆ ಬಲವಂತ ನಿವೃತ್ತಿ!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಜಾಗತಿಕ ಮಟ್ಟದಲ್ಲಿ ಶುರುವಾಗಿದೆ ಬಲವಂತ ನಿವೃತ್ತಿ!
ಜಾಗತಿಕ ಮಟ್ಟದಲ್ಲಿ ಶುರುವಾಗಿದೆ ಬಲವಂತ ನಿವೃತ್ತಿ!

ಜಗತ್ತು ಹಿಂದೆಂದಿಗಿಂತ ಇಂದು ಹೆಚ್ಚು ಸಂಕೀರ್ಣ. ಕಾರಣವಿಷ್ಟೇ ಹಿಂದೆ 10 ವರ್ಷದಲ್ಲಿ ಆಗುತಿದ್ದ ಬದಲಾವಣೆ ಇಂದು ವರ್ಷದಲ್ಲಿ ಆಗುತ್ತಿದೆ. 

ಇವುಗಳ ನೇರ ಪ್ರಭಾವ ಮನುಷ್ಯನ ಮೇಲೆ ಆಗುವುದು ಕೂಡ ಸಹಜ ತಾನೆ? ಅರವತ್ತು ವಯಸ್ಸನ್ನ ನಿವೃತ್ತಿ ವಯಸ್ಸು ಎಂದು ನಿಗದಿಪಡಿಸಲಾಗಿದೆ. ಭಾರತದಂತಹ ದೇಶದಲ್ಲಿ 60 ನಿವೃತ್ತಿ ವಯಸ್ಸು ಸರಿ ಆದರೆ ಅಲ್ಲಿಯವರೆಗೆ ನಮ್ಮ 'ಕೆಲಸ' ಇರುತ್ತದೆಯೇ? ಎನ್ನುವುದು ಬಹು ದೊಡ್ಡ ಪ್ರಶ್ನೆ. ಇದು ಹೇಳಿಕೇಳಿ ಕೊರೋನ ಕಾಲಘಟ್ಟ, ಭಾರತ ಅಂತಲ್ಲ ವಿಶ್ವದಾದಂತ್ಯ ಅನಿಶ್ಚಿತತೆ ಕೆಲಸ ಮತ್ತು ಬದುಕಿನ ಒಂದು ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ವಸ್ತುಸ್ಥಿತಿ ಹೀಗಿರುವಾಗ ಜಗತ್ತಿನ ಒಂದು ವರ್ಗ 40ಕ್ಕೋ ಅಥವಾ 50ಕ್ಕೋ ಸ್ವಯಂ ನಿವೃತ್ತಿ ಪಡೆಯಲು ಬಯಸುತ್ತಿದೆ. ಇನ್ನೊಂದು ವರ್ಗ ವಿಧಿಯಿಲ್ಲದೇ ನಲವತ್ತು ಅಥವಾ ಐವತ್ತಕ್ಕೆ ಕೆಲಸಕ್ಕೆ ಬೈ ಹೇಳಬೇಕಿದೆ. ನಾವು ನಲವತ್ತು ಅಥವಾ ಐವತ್ತು ತಲುಪುವ ವೇಳೆಗೆ ಹೊಸದಾಗಿ ಕೆಲಸಕ್ಕೆ ಸಿದ್ಧಗೊಂಡ ಯುವ ಪೀಳಿಗೆಯ ಪಡೆ ಕಾಯುತ್ತಿರುತ್ತದೆ.

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಐವತ್ತರ ಆಸುಪಾಸಿನಲ್ಲಿ ಇರುವ ಬಹುತೇಕ ಜನರಿಗೆ ಮತ್ತೆ ಕೆಲಸ ಸಿಗುವುದು ಕಷ್ಟಸಾಧ್ಯ. ಅಂದರೆ ಈ ವರ್ಗದಡಿಯಲ್ಲಿ ಕೋಟ್ಯಂತರ ಜನರು ಬರುತ್ತಾರೆ. ಸರಕಾರಿ ಕೆಲಸದಲ್ಲಿರುವವರನ್ನ ಮತ್ತು ಕೌಶಲ್ಯತೆ ಹೊಂದಿರುವ ಈ ವಯೋಮಾನದ ವ್ಯಕ್ತಿಗಳಿಗೆ ಈ ಚಿಂತೆ ಕಾಡುವುದಿಲ್ಲ. ಇದರ ಜೊತೆಗೆ ಪಿರಮಿಡ್ ನ ತೀರಾ ಕೆಳಗಿನ ಹಂತದಲ್ಲಿ ಕೆಲಸ ಮಾಡುತ್ತಿರುವ ಇದೆ ವಯೋಮಾನದ ವ್ಯಕ್ತಿಗಳಿಗೂ ಇದು ಕಾಟ ಕೊಡುವ ಸಾಧ್ಯತೆ ಕಡಿಮೆ. ಈ ಹಂತದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಬಹಳ ಬೇಗ ಬದಲಾವಣೆಗೆ ಹೊಂದಿಕೊಳ್ಳುತ್ತಾರೆ, ಹೀಗಾಗಿ ಇವರಿಗೆ ತೊಂದರೆ ಕಡಿಮೆ.

ಹಾಗಾದರೆ ಇದರಿಂದ ಯಾರಿಗೆ ತೊಂದರೆ ಹೆಚ್ಚು?

ಗಮನಿಸಿ ನೋಡಿ ಮಧ್ಯಮ ಆಡಳಿತ ವರ್ಗದಲ್ಲಿ ಹತ್ತಾರು ವರ್ಷದಿಂದ ಕೆಲಸಮಾಡುತ್ತ ಇರುವರಿಗೆ ಮತ್ತು ಯಾವುದೇ ಹೊಸ ಕೌಶಲ್ಯ ವೃದ್ಧಿಮಾಡಿಕೊಳ್ಳದೆ ಇರುವರಿಗೆ ಇದು ಹೆಚ್ಚು ಅನ್ವಯವಾಗುತ್ತದೆ. ಒಂದೇ ಸಂಸ್ಥೆಯಲ್ಲಿ ಒಂದು ನಿಗದಿತ ವ್ಯವಸ್ಥೆಗೆ ಹೊಂದಿಕೊಂಡು ಕೆಲಸ ಮಾಡಿ ಅಭ್ಯಾಸವಾಗಿದ್ದ ಇಂತಹ ಜನರಿಗೆ ಮತ್ತೆ ಹೊಸ ಬದಲಾವಣೆಗೆ ಹೊಂದಿಕೊಳ್ಳುವುದು ಬಹಳ ಕಷ್ಟ. ಹೋಗಲಿ ಕಷ್ಟವೋ, ನಷ್ಟವೋ ಹೊಂದಿಕೊಳ್ಳುತ್ತೇವೆ, ಕಲಿಯುತ್ತೇವೆ ಎನ್ನುವ ಒಂದಷ್ಟು ಜನರು ಇದ್ದೇ ಇರುತ್ತಾರೆ, ಆದರೆ ಅಂತಹವರಿಗೆ ಕೆಲಸ ಸಿಗುತ್ತದೆಯೇ? ಎನ್ನುವುದು ಪ್ರಶ್ನೆ. ಹೀಗಾಗಿ ಮೇಲೆ ಹೇಳಿದ ಲಕ್ಷಣಗಳನ್ನ ಹೊಂದಿರುವ 50 ಅದಕ್ಕಿಂತ ಮೇಲ್ಪಟ್ಟ ವಯೋಮಾನದ ಎಲ್ಲರೂ ಇದರಿಂದ ಹೆಚ್ಚು ತೊಂದರೆಯನ್ನ ಅನುಭವಿಸುತ್ತಾರೆ. ಭಾರತದಂತಹ ಬಹುದೊಡ್ಡ ದೇಶದಲ್ಲಿ ಎಂತಹುದೇ ಸಮಸ್ಯೆ ಇರಲಿ ಅದರಿಂದ ತೊಂದರೆಗೀಡಾಗುವರ ಸಂಖ್ಯೆ ಮಾತ್ರ ಕೋಟಿಗಳಲ್ಲಿ ಇರುತ್ತದೆ. ಹೀಗಾಗಿ ಈ ವಿಷಯದಲ್ಲೂ ಈ ಸಂಖ್ಯೆ ಕೋಟಿಗಳಲ್ಲಿ ಖಂಡಿತ ಇರಲಿದೆ.

ಇಂತಹ ವರ್ಗಕ್ಕೆ ಸೇರಿದ ಜನ ಏನು ಮಾಡಬೇಕು?
 
ಎಲ್ಲದಕ್ಕೂ ಮೊದಲು ಕೆಲವು ಮೂಲಭೂತ ಲೆಕ್ಕಾಚಾರ ಮಾಡಬೇಕು. ಅಂದರೆ ಗಮನಿಸಿ ಇಂದಿನ ದಿನಗಳಲ್ಲಿ ಮನುಷ್ಯನ ಆಯಸ್ಸು ಹೆಚ್ಚಾಗಿದೆ. ಭಾರತದಲ್ಲಿ 2019 ರ ಅಂಕಿ-ಅಂಶಗಳ ಪ್ರಕಾರ ಸರಾಸರಿ ಆಯಸ್ಸು 69.5 ವರ್ಷ. ಲೆಕ್ಕಾಚಾರ ಸರಳವಾಗಿಸಲು ಇದನ್ನ 70 ವರ್ಷ ಎಂದು ಪರಿಗಣಿಸೋಣ. ಕೊರೋನ ಕಾರಣ ನಿವೃತ್ತಿಗೆ ದೂಡಲ್ಪಟ್ಟ ವ್ಯಕ್ತಿಯ ವಯಸ್ಸು ಐವತ್ತು ಎಂದುಕೊಳ್ಳೋಣ. ಅಂದರೆ ಇವರ ಮುಂದೆ ಎಲ್ಲವೂ ಸರಿಯಾಗಿದ್ದರೆ 20 ವರ್ಷದ ಜೀವನವಿದೆ. ಮುಂದಿನ ಈ ಇಪ್ಪತ್ತು ವರ್ಷವನ್ನ ಸವೆಸಲು ಆಗುವ ಖರ್ಚೆಷ್ಟು? ಎನ್ನುವ ಲೆಕ್ಕಾಚಾರವನ್ನ ಮಾಡಿಕೊಳ್ಳುವ ಅವಶ್ಯಕತೆ ಬಹಳವಿದೆ. ಇಂತಹ ಒಂದು ಲೆಕ್ಕಾಚಾರವನ್ನ ನೋಡೋಣ. ಗಮನಿಸಿ ಈ ಲೆಕ್ಕಾಚಾರವನ್ನ ಉದಾಹರಣೆಗೆ ಮಾತ್ರ ನೀಡಲಾಗಿದೆ. ಇದು ಸಾಮಾನ್ಯ ಭಾರತೀಯ ಪ್ರಜೆಯ ಜೀವನಕ್ಕೆ ಬಹಳ ಹತ್ತಿರವೂ ಆಗಿರುವಂತೆ ಸಂಖ್ಯೆಗಳನ್ನ ಬಳಸಲಾಗಿದೆ. ಹೀಗಿದ್ದೂ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಇಲ್ಲಿನ  ಲೆಕ್ಕಾಚಾರ ಇಬ್ಬರಿಗೆ (ಪತಿ-ಪತ್ನಿ) ಮಾಡಲಾಗಿದೆ. ಖರ್ಚು ತಿಂಗಳ ಲೆಕ್ಕಾಚಾರದಲ್ಲಿ ನೀಡಲಾಗಿದೆ.

ಆಹಾರ-50*3*3*3೦=9,೦೦೦ ರೂಪಾಯಿ. ಅಂದರೆ 5೦ ರೂಪಾಯಿ ಒಪ್ಪೊತ್ತಿಗೆ, ದಿನದಲ್ಲಿ ಮೂರು ಊಟ, ಇಬ್ಬರಿಗೆ, ಮೂವತ್ತು ದಿನಕ್ಕೆ ಒಂಬತ್ತು ಸಾವಿರ ರೂಪಾಯಿ ವಸತಿ-9೦೦೦ ರೂಪಾಯಿ. ಆರೋಗ್ಯ ವಿಮೆ  1೦೦೦ ರೂಪಾಯಿ, ಬಟ್ಟೆ-ಉಡುಪು-1೦೦೦, ಎಂಟರ್ಟೈನ್ಮೆಂಟ್ -1೦೦೦, ಇತರೆ (ನೀರು, ವಿದ್ಯುತ್ ಇತ್ಯಾದಿ)2,೦೦೦. ಒಟ್ಟು 9+9+1+1+1=22 ಸಾವಿರ ರೂಪಾಯಿ. ಪ್ರವಾಸ ಇತ್ಯಾದಿ ಯಾವುದೇ ರೀತಿಯ ಖರ್ಚುಗಳನ್ನ ಇಲ್ಲಿ ಲೆಕ್ಕ ಹಾಕಿಲ್ಲ. ಕೇವಲ ಬದುಕಲು ಅವಶ್ಯಕವಾಗಿ ಬೇಕಾದ ಖರ್ಚನ್ನ ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ. ಹೀಗಿದ್ದೂ ಕೂಡ ಮಾಸಿಕ 22 ಸಾವಿರ ರೂಪಾಯಿ ಖರ್ಚಿದೆ. ಕೆಲಸವಿರಲಿ ಅಥವಾ ಬಿಡಲಿ ಬದುಕಲು ಇಷ್ಟು ಹಣ ಇಬ್ಬರಿಗೆ ಬೇಕೇಬೇಕು. ಮಾಸಿಕ ಇಷ್ಟು ಹಣ ಬರಲು 6 ಪ್ರತಿಶತ ಬಡ್ಡಿ ದರದಲ್ಲಿ ಲೆಕ್ಕ ಹಾಕಿದರೆ ಬ್ಯಾಂಕಿನಲ್ಲಿ 44 ಲಕ್ಷ ರೂಪಾಯಿ ಹಣವನ್ನ ಠೇವಣಿ ಇಡಬೇಕಾಗುತ್ತದೆ.

ಈ ಲೆಕ್ಕಾಚಾರದ ಉದ್ದೇಶ ಇಷ್ಟು ಹಣ ಹೀಗೆ ಕೆಲಸ ಕಳೆದುಕೊಂಡು ನಿವೃತ್ತಿಗೆ ದೂಡಿದವರ ಬಳಿ ಇದೆಯೇ? ಎನ್ನುವುದನ್ನ ತಿಳಿದುಕೊಳ್ಳುವುದು. ಹೀಗೆ ತನ್ನ ಹಣಕಾಸಿನ ಲೆಕ್ಕಾಚಾರದಲ್ಲಿ ಎಲ್ಲಿದ್ದೇನೆ? ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಹೀಗೆ ಮಾಡಿದ ಲೆಕ್ಕದಲ್ಲಿ ಹಣದ ಮೊತ್ತ ಬೇಕಾದ ಮೊತ್ತಕ್ಕಿಂತ ಹೆಚ್ಚಾಗಿದ್ದರೆ ಅಂದರೆ ದುಪ್ಪಟ್ಟು ಇದ್ದರೆ ಹೆಚ್ಚಿನ ತಲೆನೋವು ಇಲ್ಲ. ಏಕೆಂದರೆ ಇದು ಇಂದಿಗೆ ಬೇಕಾಗುವ ಹಣ. ಮುಂದಿನ 20 ವರ್ಷದಲ್ಲಿ ಹಣದುಬ್ಬರ ಲೆಕ್ಕಕ್ಕೆ ತೆಗೆದುಕೊಂಡರೆ ಆಗ ಸರಿಹೋಗುತ್ತದೆ. ಹೀಗಾಗಿ ಇಂದಿನ ಲೆಕ್ಕಾಚಾರದ ಪ್ರಕಾರ ಬೇಕಾಗುವ 44 ಲಕ್ಷ ಮುಂದಿನ ದಿನಗಳಲ್ಲಿ ಸಾಲುವುದಿಲ್ಲ. ಜೊತೆಗೆ ಬಡ್ಡಿ ದರ ಕೂಡ ಕಡಿಮೆಯಾಗದೇ ಇಷ್ಟೇ ಇರುತ್ತದೆ ಎಂದು ಹೇಳಲು ಕೂಡ ಬಾರದು. ಈ ಎಲ್ಲಾ ಲೆಕ್ಕಾಚಾರದ ಪ್ರಕಾರ ಒಂದರಿಂದ ಒಂದೂವರೆ ಕೋಟಿ ರೂಪಾಯಿ ನಿವೃತ್ತಿ ನಿಧಿಯನ್ನ ಸ್ಥಾಪಿಸಿಕೊಂಡವರಿಗೆ ಅಷ್ಟು ಚಿಂತೆ ಕಾಡುವುದಿಲ್ಲ ಉಳಿದ ಜನ ಏನು ಮಾಡಬೇಕು? ಇಂತಹ ಪ್ರಶ್ನೆಗಳು ಬದುಕಿನಲ್ಲಿ ಧುತ್ತೆಂದು ಎದುರಿಗೆ ಬಂದು ಕೂತಾಗ ಇವಕ್ಕೆ ಉತ್ತರ ಹುಡಕುವುದು ಕಷ್ಟದ ಕೆಲಸವೇ ಸರಿ.

ಮೇಲಿನ ಲೆಕ್ಕಾಚಾರದಲ್ಲಿ ನೀವು ಪಾಸಾಗಿರಿ ಅಥವಾ ನಪಾಸು, ಕೆಳಗಿನ ಕೆಲವು ಅಂಶಗಳನ್ನ ಮಾತ್ರ ತಕ್ಷಣ ಪಾಲಿಸಲು ಶುರು ಮಾಡಬೇಕು.

  1. ಇವತ್ತು ಬದುಕು ಎಂದರೆ ಅತಂತ್ರ ಅಥವಾ ಅಸ್ಥಿರತೆ ಎನ್ನುವ ಮಟ್ಟಕ್ಕೆ ಹೋಗಿದೆ. ಹೀಗಾಗಿ ನಿಮ್ಮ ಆಸ್ತಿ ಎಷ್ಟೇ ಇರಲಿ ಅದಕ್ಕೆ ಒಬ್ಬರು ನಾಮಿನಿಯನ್ನ ಗೊತ್ತು ಮಾಡಿ. ಸಾಧ್ಯವಾದರೆ ವಿಲ್ ಬರೆದಿಡುವುದು ಮತ್ತು ಅದನ್ನ ನೊಂದಾಯಿಸಿ ಇಡುವುದು ಬಹಳ ಉತ್ತಮ.
  2. ನನ್ನ ಹಿಂದಿನ ಕೆಲಸದಲ್ಲಿ ನಾನು ಮ್ಯಾನೇಜರ್ ಆಗಿದ್ದೆ ಅಥವಾ ಸದ್ಯಕ್ಕೆ ಸಿಗಲಿರುವ ಕೆಲಸಕ್ಕಿಂತ ಉನ್ನತ ಮಟ್ಟದಲ್ಲಿದ್ದೆ ಎನ್ನುವ ಮನೋಭಾವವನ್ನ ಬಿಟ್ಟು ಬಿಡಬೇಕು. ಪಾಲಿಗೆ ಬಂದದ್ದು ಪಂಚಾಮೃತ ಎನ್ನುವ ಮನೋಭಾವ ಮಾತ್ರ ನಮ್ಮನ್ನ ಇಂದಿನ ಸ್ಥಿತಿಯಿಂದ ಪಾರು ಮಾಡಬಲ್ಲದು.
  3. ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಯನ್ನ ಗಮನಿಸುತ್ತಿರಬೇಕು. ಯಾವುದಕ್ಕೆ ಹೆಚ್ಚಿನ ಬೇಡಿಕೆಯಿದೆ, ಯಾವುದು ಮಾಡಿದರೆ ಉತ್ತಮ? ಎನ್ನುವ ವಿವೇಚನೆ ನಮ್ಮದಾಗಿರಬೇಕು. ಅದಕ್ಕೆ ತಕ್ಕಂತೆ ನಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು.
  4. ಹೊಸ ಕೌಶಲ್ಯ ವೃದ್ಧಿಯ ಕಡೆಗೆ ಗಮನ ಕೊಡಬೇಕು. ಯಾರು ಹೊಸದಕ್ಕೆ ಹೊಂದಿಕೊಳ್ಳುವುದಿಲ್ಲ ಅಂತಹವರನ್ನ ಸಮಾಜ ಅತ್ಯಂತ ಬೇಗ ಮರೆತು ಬಿಡುತ್ತದೆ. ಸಮಾಜದ ವೇಗಕ್ಕೆ ಇರಬೇಕೆಂದರೆ ನಾವು ಅಪ್ಡೇಟ್ ಆಗುತ್ತಿರಬೇಕು.
  5. ಎಲ್ಲಿಯೂ ಕೆಲಸ ಸಿಗದಿದ್ದರೆ ಸಮಾನ ಮನಸ್ಕರ ಒಂದು ಪುಟ್ಟ ಸಂಘವನ್ನ ಕಟ್ಟಿಕೊಳ್ಳಬೇಕು. ಸಮುದಾಯಕ್ಕೆ ಬೇಕಾದ ಸರುಕು ಅಥವಾ ಸೇವೆಯನ್ನ ನೀಡುವುದನ್ನ ಪ್ರಾರಂಭಿಸಬಹುದು. ನೆನಪಿರಲಿ ಇದ್ಯಾವುದು ಅಷ್ಟು ಸುಲಭವಾಗಿ ಆಗುವುದಿಲ್ಲ. ಆದರೆ ಮಾಡಬೇಕೆಂಬ ಪ್ರಬಲ ಇಚ್ಛೆಯಿದ್ದರೆ ಅಸಾಧ್ಯವೂ ಅಲ್ಲ.

ಗಮನಿಸಿ ಇದು ಕೇವಲ ಭಾರತದ ಸಮಸ್ಯೆಯಲ್ಲ ಇದು ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಅಲ್ಲಿ ಸೋಶಿಯಲ್ ಸೆಕ್ಯುರಿಟಿಯಿದೆ ಎನ್ನುವ ಮಾತನ್ನ ನಾವು ಆಡುತ್ತೇವೆ. ಹೌದು ಇದೆ. ಆದರೆ ಅದನ್ನ ನೀಡಲು ಸರಕಾರದ ಬಳಿ ಹಣ ಇರಬೇಕಲ್ಲ? ವ್ಯವಸ್ಥೆಯ ಒಂದು ಸಣ್ಣ ಇಟ್ಟಿಗೆಯನ್ನ ನಾವು ಅಲುಗಾಡಿಸಿದರೆ ಸಾಕು ವ್ಯವಸ್ಥೆ ಎನ್ನುವ ಗೋಡೆ ಬಿದ್ದು ಹೋಗುತ್ತದೆ. ಇಂದಿನ ಸಮಾಜ ಒಂದರ ಮೇಲೆ ಇನ್ನೊಂದು ಪೂರ್ಣವಾಗಿ ಅವಲಂಬಿತವಾಗಿದೆ. ಹೀಗಾಗಿ ವ್ಯವಸ್ಥೆಯ ಒಂದು ಕೊಂಡಿ ತುಂಡಾದರೂ ಇಡೀ ವ್ಯವಸ್ಥೆಯ ಸರಪಳಿ ತುಂಡಾಗುತ್ತದೆ. ಈ ಮಾತು ಪಾಶ್ಚಾತ್ಯ ದೇಶಗಳಿಗೆ ಬಹಳ ಅನ್ವಯ.

ನಾವು ಮೇಲೆ ನೋಡಿದ ಫೊರ್ಸ್ಡ್ ರಿಟೈರಿಸ್ ಗೆ ಅಮೇರಿಕಾ ಮತ್ತು ಯೂರೋಪಿನಲ್ಲಿ ರೂಲ್ ಆಫ್ 219 ಅನ್ವಯ ಮಾಡುತ್ತಾರೆ. ಇಲ್ಲಿ ಮುಂಬರುವ ದಿನಗಳ ಇನ್ಫ್ಲೇಶನ್ ಲೆಕ್ಕ ಹಾಕಿಲ್ಲ. 20 ವರ್ಷ ಇಬ್ಬರು ವ್ಯಕ್ತಿಗಳು ಮೂರು ವೇಳೆ ಊಟಕ್ಕೆ 2 ಲಕ್ಷ 19 ಸಾವಿರ ಡಾಲರ್ ಖರ್ಚಾಗುತ್ತದೆ ಎನ್ನುತ್ತದೆ  ರೂಲ್ ಆಫ್ 219. ಇದರ ಪ್ರಕಾರ ಕೇವಲ ಊಟದ ಖರ್ಚು ಇಷ್ಟಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಜಗತ್ತಿನ ಎಲ್ಲಾ ಕೆಲಸ ಕಳೆದುಕೊಂಡ ಮಧ್ಯ ವಯಸ್ಕರ ಜೀವನ ಬಹಳ ಕಷ್ಟವಾಗಲಿದೆ.

ಕೊನೆಮಾತು: ಕೊರೋನ ನಂತರ ಜಗತ್ತು ಸ್ವಿಚ್ ಹಾಕಿದ ತಕ್ಷಣ ಉರಿಯುವ ಬಲ್ಬ್ ನಂತೆ ತಕ್ಷಣ ಬೆಳಕನ್ನ ಖಂಡಿತ ನೀಡುವುದಿಲ್ಲ. ಇಂದಿಗೆ ಇಂದೇ ಜಗತ್ತು ಕೊರೋನ ಮುಕ್ತವಾದರೂ ಮತ್ತೆ ಮರಳಿ ಮೊದಲಿನ ಸ್ಥಿತಿಗೆ ಹೊರಳಲು ಸಮಯ ಹಿಡಿಯುತ್ತದೆ. ಅಲ್ಲದೆ ಮುಂದೆ ಈ ರೀತಿಯ ಅವಘಡಗಳು ಸಂಭವಿಸುವುದಿಲ್ಲ ಎಂದು ನಿಖರವಾಗಿ ಹೇಳಲು ಕೂಡ ಬರುವುದಿಲ್ಲ. ಇಂತಹ ಸಮಯದಲ್ಲಿ ಜಗತ್ತಿನ ಮೇಲೆ ಹೆಚ್ಚು ಅವಲಂಬಿತರಾಗದೆ ಬದುಕಲು ಕಲಿಯುವುದು ಅತ್ಯಂತ ಉತ್ತಮ ಮಾರ್ಗ. ನಮ್ಮ ಪೂರ್ವಜರು ನಡೆಸಿದ್ದು ಇಂತಹ ಸರಳ ಜೀವನವನ್ನೇ, ಅದಕ್ಕೆ ಇಂದಿನ ಸಮಾಜ ಮಿನಿಮಲಿಸ್ಟಿಕ್ ಜೀವನ ಎನ್ನುತ್ತದೆ. ಹೆಸರು ಯಾವುದೇ ಇರಲಿ, ಸರಳ ಬದುಕು ನಮ್ಮದಾಗಿರಲಿ.

ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com