ಕ್ಯಾಸಿನೊ ಹುಟ್ಟು, ಬೆಳವಣಿಗೆಯ ಗುಟ್ಟು ಇಲ್ಲಾಗಿದೆ ರಟ್ಟು!

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 17th September 2020 02:23 AM  |   Last Updated: 17th September 2020 02:23 AM   |  A+A-


Casinos

ಕ್ಯಾಸಿನೊ ಹುಟ್ಟು, ಬೆಳವಣಿಗೆಯ ಗುಟ್ಟು ಇಲ್ಲಾಗಿದೆ ರಟ್ಟು!

Posted By : Srinivas Rao BV
Source : Online Desk

ಕ್ಯಾಸಿನೊ ಎಂದ ತಕ್ಷಣ ನಮ್ಮ ನೆನಪಿಗೆ ಬರುವುದು ಲಾಸ್ ವೇಗಾಸ್ ಮತ್ತು ಜೇಮ್ಸ್ ಬಾಂಡ್ ಮತ್ತು ಅವನ ರಾಯಲ್ ಕ್ಯಾಸಿನೊ ಚಿತ್ರದ ಸಾಹಸಗಳು. ಜಗತ್ತಿನೆಲ್ಲೆಡೆ ಹಲವಾರು ಪ್ರಸಿದ್ಧ ಕ್ಯಾಸಿನೊಗಳಿವೆ ಆದರೆ ನಮ್ಮ ನೆನಪಿಗೆ ತಕ್ಷಣ ನೆನಪಿಗೆ ಬರುವುದು ಮಾತ್ರ ಇವೆರೆಡು. ಇದಕ್ಕೆ ಕಾರಣ ಲಾಸ್ ವೇಗಸ್ ಇಂತಹ ಜೂಜಾಟಕ್ಕೆ ಬಹಳ ಪ್ರಸಿದ್ಧಿ ಪಡೆದಿದೆ. ಜೇಮ್ಸ್ ಬಾಂಡ್ ಚಿತ್ರಗಳು ವಿಶ್ವದಾದ್ಯಂತ ವೀಕ್ಷಕರನ್ನ ಪಡೆದಿದೆ. ಹೀಗಾಗಿ ಕ್ಯಾಸಿನೊ ಎಂದ ತಕ್ಷಣ ನಮಗೆ ಸಹಜವಾಗಿ ನೆನಪಿಗೆ ಬರುವ ವಿಷಯಗಳು ಇವಾಗಿವೆ.

ಆದರೆ ನಿಮಗೆ ಗೊತ್ತೇ? ಕ್ಯಾಸಿನೊ ಎನ್ನುವ ಜೂಜಾಟ ಹುಟ್ಟಿದ್ದು ಲಾಸ್ ವೇಗಾಸ್ ನಲ್ಲಿ ಅಲ್ಲ. ಈ ಆಟದ ಹುಟ್ಟೂರು ಇಟಲಿಯ ವೆನಿಸ್ ಎನ್ನುವ ನಗರ. 1638ರ ವೇಳೆಯಲ್ಲಿ ಇದರ ಉಗಮವಾಯಿತು ಎನ್ನಲಾಗಿದೆ. ಹುಟ್ಟೂರಾದ ಇಟಲಿಯಲ್ಲಿ ಇದು ಪ್ರಸಿದ್ಧಿ ಪಡೆಯಿತು ಆದರೆ ಅದಕ್ಕಿಂತ ಹೆಚ್ಚಾಗಿ ಜಗತ್ತಿನ ಇತರ ದೇಶಗಳು ಈ ಆಟವನ್ನ ತಮ್ಮದೇನೋ ಎನ್ನುವ ಮಟ್ಟಿಗೆ ಅಪ್ಪಿಕೊಂಡು ಬಿಟ್ಟಿವೆ.

ಕ್ಯಾಸಿನೊ ಎನ್ನುವ ಹೆಸರು ಹೇಗೆ ಬಂತು ಗೊತ್ತೇ?

ಲ್ಯಾಟಿನ್ ಅಮೆರಿಕನ್ ಭಾಷೆಗಳಾದ ಇಟಾಲಿಯನ್, ಸ್ಪ್ಯಾನಿಷ್, ಪೋರ್ಚುಗೀಸ್ ಮುಂತಾದ ಭಾಷೆಗಳಲ್ಲಿ ಕಾಸ ಅಂದರೆ ಮನೆ ಎಂದರ್ಥ. ಯಾವುದೇ ಸೋಶಿಯಲ್ ಸಂಸ್ಥೆಗಳ ಹೆಸರಿನ ಹಿಂದೆ ಅಥವಾ ಮುಂದೆ  'ಕಾಸ' ಎಂದು ಸೇರಿಸಿವುದು ವಾಡಿಕೆ. ಹೀಗಾಗಿ ಇದಕ್ಕೆ ಕ್ಯಾಸಿನೊ ಎನ್ನುವ ಹೆಸರು ಬಂದಿದೆ. ನಂತರದ ದಿನಗಳಲ್ಲಿ ಜಗತ್ತಿನ ಬೇರೆ ದೇಶಗಳು ಇದನ್ನ ಹೆಸರು ಕೂಡ ಬದಲಾಯಿಸದೆ ಸ್ವೀಕರಿಸಲು ಕಾರಣ 'ಕ್ಯಾಸಿನೊ' ಎನ್ನುವ ಪದದಲ್ಲಿರುವ ರಿದಮ್ ಕಾರಣವಿರಬೇಕು. ಹೀಗೆ ಇದರ ಉಗಮಸ್ಥಾನ ಯಾವುದು ಎಂದು ಮರೆಸುವಷ್ಟು ಪ್ರಸಿದ್ಧಿಗೆ ಬಂದ ಈ ಆಟದ  ಮೂಲ ಇಟಲಿಯಲ್ಲಿದೆ ಎನ್ನುವುದನ್ನ ಮರೆಯುವಂತಿಲ್ಲ.

ಲಂಡನ್ ನಗರಕ್ಕೆ ಹಬ್ಬಿದ ಕ್ಯಾಸಿನೊ.

ಲಂಡನ್ ನಗರದಲ್ಲಿ ಬ್ರಿಟಿಷ್ ಕ್ಯಾಸಿನೊ ಗಳು ಇದನ್ನ ಜೆಂಟಲ್ ಮ್ಯಾನ್ ಗೇಮ್ ಎನ್ನುವಂತೆ ಬಿಂಬಿಸಿದ್ದವು. ಹೀಗಾಗಿ ಲಂಡನ್ ನಗರದಲ್ಲಿ ಇವುಗಳ ಸಂಖ್ಯೆ ಬಹಳವೇ ಹೆಚ್ಚಾಗಿತ್ತು. ಬ್ರಿಟಿಷರು ಯಾವುದೇ ಆಟವಿರಲಿ ಅದಕ್ಕೊಂದು ವೃತ್ತಿಪರತೆಯನ್ನ ನೀಡುತ್ತಾರೆ. ಕ್ಯಾಸಿನೊ ಕೂಡ ಒಂದು ಲಾಭದಾಯಕ ವ್ಯವಹಾರವಾಗಿ ಮಾಡಿದ ಕೀರ್ತಿ ಬ್ರಿಟಿಷರಿಗೆ ಸಲ್ಲಬೇಕು. ಹಾಂಗ್ ಕಾಂಗ್ ಇತ್ತೀಚಿಗೆ ಚೀನಿಯರ ಅಧೀನಕ್ಕೆ ಒಳಪಟ್ಟಿದೆ. ಇದಕ್ಕೂ ಮುಂಚೆ ಇದು ಬ್ರಿಟಿಷರ ಆಡಳಿತದಲ್ಲಿತ್ತು. ಹೀಗಾಗಿ ಹಾಂಗ್-ಕಾಂಗ್ ನ ಮಕಾವು ಎನ್ನುವ ದ್ವೀಪದಲ್ಲಿ ಇಂದು ನಾವು ಜಗತ್ತಿನ ದೊಡ್ಡ ದೊಡ್ಡ ಕ್ಯಾಸಿನೊ ಗಳನ್ನ ಕಾಣಬಹುದಾಗಿದೆ. ನಂತರದ ದಿನಗಳಲ್ಲಿ ಬ್ರಿಟಿಷರ ವಾಸಹಾತುಗಳಾಗಿದ್ದ ದೇಶಗಳಿಗೆಲ್ಲಾ ಈ ವ್ಯಸನವನ್ನ ಬ್ರಿಟಿಷರು ವ್ಯವಸ್ಥಿತವಾಗಿ ಹಂಚುತ್ತಾರೆ. ಜನತೆ ಇಂತಹ ಹಲವು ಹತ್ತು ವ್ಯಸನಗಳ ದಾಸರಾದರೆ ಅದು ಅವರಿಗೆ ಹೆಚ್ಚಿನ ಲಾಭದಾಯಕ ಎನ್ನುವುದನ್ನ ಕೂಡ ಅವರು ಬಹುಬೇಗ ಅರಿತುಕೊಳ್ಳುತ್ತಾರೆ. ಹೀಗಾಗಿ ಈ ಆಟ ಜಗತ್ತನ್ನ ವೇಗವಾಗಿ ಪಸರಿಸುತ್ತದೆ.

ಆಟದಲ್ಲಿ ಅಡಗಿದೆ ಸೋತರೂ ಸೋತೆ ಎನಿಸದ ತತ್ವ!

ಕ್ಯಾಸಿನೊ ಜಾಕ್ ಪಾಟ್ ಗಳು ಜೀವನವನ್ನ ಬದಲಾಯಿಸುವಷ್ಟು ಹಣವನ್ನ ನೀಡುತ್ತವೆ. ಈ ಆಟದಲ್ಲಿ ಸೋತರು ಮುಂದಿನ ಬಾರಿ ಖಂಡಿತ ಗೆಲುವು ನನ್ನದೇ ಎನ್ನುವ ಮಟ್ಟದಲ್ಲಿ ಅಂದರೆ ಅಷ್ಟು ಸಣ್ಣ ಅಂತರದಲ್ಲಿ ಆಟಗಾರರನ್ನ ಸೋಲಿಸಲಾಗುತ್ತದೆ.  ಹೀಗಾಗಿ ಆಟಗಾರ ಬೇಸರ ಮಾಡಿಕೊಳ್ಳುವ ಬದಲಾಗಿ 'ಈ ಬಾರಿ ಸಣ್ಣ ಅಂತರದಿಂದ ಸೋತೆ, ಮುಂದಿನ ಬಾರಿ ಈ ತಪ್ಪು ಮಾಡದಿದ್ದರೆ ಗೆಲುವು ನನ್ನದೇ' ಎನ್ನುವ ಭಾವನೆಯನ್ನ ಬೆಳೆಸಿಕೊಳ್ಳುತ್ತಾನೆ. ಪ್ರತಿ ಬಾರಿ ಸೋತಾಗಲು ಇದೆ ಭಾವನೆ ಮುಂದುವರೆಯುತ್ತದೆ ಎಂದರೆ ಈ ಆಟವನ್ನ ಇನ್ನೆಷ್ಟು ವ್ಯವಸ್ಥಿತವಾಗಿ ಮನಃಶಾಸ್ತ್ರಜ್ಞರ ಸಹಾಯದಿಂದ ನಿರ್ಮಿಸಿರಬಹುದು ಅಲ್ಲವೇ? ಹೌದು ಈ ಆಟದ ಉಗಮದ ದಿನಗಳಲ್ಲಿ ಚಳಿ ದೇಶಗಳಲ್ಲಿ ಸಮಯ ಕಳೆಯಲು ಆಡುವ ಆಟವಾಗಿತ್ತು. ಯಾವಾಗ ಇದನ್ನ ಆಡುವವರು ಇದನ್ನ ಬಿಟ್ಟು ಬದುಕಲಾರದ ಮಟ್ಟಕ್ಕೆ ಇದರ ವ್ಯಸನಿಗಳಾದರು ಆಗ ಆಡಳಿತದಲ್ಲಿದ್ದ ವ್ಯಕ್ತಿಗಳ ತಲೆಯಲ್ಲಿ ಇದನ್ನ ಹೇಗೆ ಲಾಭದಾಯಕ ಮಾಡಿಕೊಳ್ಳುವುದು ಎನ್ನುವ ಚಿಂತನೆ ಶುರುವಾಗುತ್ತದೆ. ಮನುಷ್ಯ ತನ್ನ ಕಾರ್ಯಸಾಧನೆಗೆ ಯಾವ ಮಟ್ಟಕ್ಕೂ ಇಳಿಯಬಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ಹಲವಾರು ವಿಷಯಗಳಿವೆ. ಕ್ಯಾಸಿನೊ ಅದರಲ್ಲಿ ಒಂದು.

ಆನ್ಲೈನ್ ಆಟದಲ್ಲಿ 70:30ರ ನೀತಿಯನ್ನ ಅಳವಡಿಸಲಾಗಿದೆ.

ಆನ್ಲೈನ್ ನಲ್ಲಿ ಆಡುವ ಕ್ಯಾಸಿನೊ ಗಳಲ್ಲಿ 70 ಪ್ರತಿಶತ ವಾಪಸ್ಸು ಆಟಗಾರನಿಗೆ ನೀಡಬೇಕು ಎನ್ನುವ ರೀತಿಯಲ್ಲಿ ಆಟವನ್ನ ನಿರ್ಮಿಸಲಾಗಿದೆ. ಅಂದರೆ ಆಟಗಾರ 100 ರೂಪಾಯಿಯನ್ನ ಆಟದಲ್ಲಿ  ತೊಡಗಿಸಿದರೆ 70 ರೂಪಾಯಿ ಆತನಿಗೆ ವಾಪಸ್ಸು ಹೋಗಬೇಕು ಎನ್ನುವ ರೀತಿಯಲ್ಲಿ ಆಟವನ್ನ ನಿರ್ಮಿಸಲಾಗಿದೆ. ಅಂದರೆ ಆತ ಪೂರ್ಣ ಹಣವನ್ನ ಕಳೆದುಕೊಂಡರೆ ಆತನಿಗೆ ಮತ್ತೆ ಆಟದಲ್ಲಿ ಸ್ಫೂರ್ತಿ ಹುಟ್ಟುವುದಿಲ್ಲ ಹೀಗಾಗಿ ಒಂದಷ್ಟು ವಾಪಸು ಕೊಡಬೇಕು ಆತನನ್ನ ಮತ್ತೆ ಮತ್ತೆ ಆಡುವಂತೆ ಪ್ರೇರೇಪಿಸಬೇಕು. ಇದರ ಜೊತೆಗೆ ಲೈವ್ ಕ್ಯಾಸಿನೊದಲ್ಲಿ  ಮುಂದಿನ ಬಾರಿ ಗೆಲುವು ನನ್ನದೇ ಎನ್ನುವ ಭಾವವನ್ನು ಇಲ್ಲೂ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಸೋಲು ಸೋಲಲ್ಲ ಎನ್ನುವ ಭಾವನೆ ಆಟಗಾರನಲ್ಲಿ ಉಂಟಾಗುತ್ತದೆ. ಮುಂದಿನ ಆಟದಲ್ಲಿ ಗೆಲ್ಲುವ ಉಮೇದಿನಲ್ಲಿ ಸಾಲ ಮಾಡಿಯಾದರೂ ಸರಿಯೇ ಅವರು ಆಟವನ್ನ ಆಡಲು ಮತ್ತೆ ಬರುತ್ತಾರೆ. ಇದು ಸಾಮಾಜಿಕ ಪಿಡುಗಾಗಿ ಮಾರ್ಪಾಡಾಗಲು ಇದು ಬಹುಮುಖ್ಯ ಕಾರಣ. ಅಂದರೆ ಇಲ್ಲಿ ಒಮ್ಮೆಲೇ ನಿಮ್ಮನ್ನ ಸೋಲಿನ ಭ್ರಮನಿರಸನ ಆವರಿಸಕೊಳ್ಳಲು ಬಿಡುವುದಿಲ್ಲ. ನಿಧಾನವಾಗಿ ವ್ಯಸನಕ್ಕೆ ದೂಡಿ ಅವರಲ್ಲಿದ್ದ ಸರ್ವಸ್ವವನ್ನ ಇದು ಕಸಿದುಕೊಳ್ಳುತ್ತದೆ.
 
ಇಂದು ನಾವು ನೋಡುತ್ತಿರುವ ಕ್ಯಾಸಿನೊ ಶುರುವಾದದ್ದು ಯಾವಾಗ ಗೊತ್ತೇ?

ಇಂದು ನಾವು ನೋಡುತ್ತಿರುವ ಟೇಬಲ್ ಸುತ್ತ ಆಟಗಾರರು ಕುಳಿತು ಮಧ್ಯದಲ್ಲಿ ಸುತ್ತುವ ಒಂದು ಮಷೀನ್ ಮತ್ತು ಅದನ್ನ ಆಪರೇಟ್ ಮಾಡಲು ವ್ಯಕ್ತಿ ಇಂತಹ ಪರಿಕಲ್ಪನೆ ಶುರುವಾದದ್ದು 1887ರಲ್ಲಿ ಇದನ್ನ ಲಿಬರ್ಟಿ ಬೆಲ್ ಎಂದು ಕರೆದರು. ಚಾರ್ಲ್ ಫೆಲ್ ಎನ್ನುವ ವ್ಯಕ್ತಿ ಇದರ ಪರಿಕಲ್ಪನೆಯ ಸರದಾರ. ಪೂರ್ಣ ಪ್ರಮಾಣದ ಇಂತಹ ಮಷೀನ್ ಜಗತ್ತಿಗೆ ಸಿಕ್ಕದ್ದು 1891ರಲ್ಲಿ.  ಇಂದಿನ ಆನ್ಲೈನ್ ಆಟಗಳನ್ನ ಜಿಬ್ರಾಲ್ಟಾರ್ ಎನ್ನುವ ಪ್ರದೇಶದಿಂದ ನಿಯಂತ್ರಿಸಲಾಗುತ್ತಿದೆ.

ಈ ಆಟಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಈ ಆಟದಲ್ಲಿ ಒಂದಷ್ಟು ಬುದ್ಧಿಶಕ್ತಿ ಒಂದಷ್ಟು ಅದೃಷ್ಟ ಎರಡು ಇರಬೇಕು. ಇಂದಿನ ದಿನಗಳಲ್ಲಿ ಈ ಆಟ ನಾಲ್ಕು ತಾಸು, ಆರು ತಾಸುಗಳಲ್ಲಿ ಮುಗಿದು ಹೋಗುತ್ತದೆ. ಕೆಲವೊಮ್ಮೆ ಆಟಗಾರರು ಬಹಳಷ್ಟು ಸ್ಟ್ರಾಂಗ್ ಇದ್ದಾಗ ಇದು ವಾರ ಮತ್ತು ತಿಂಗಳುಗಳು ನಡೆದದ್ದು ಕೂಡ ಇದೆ. ಆದರೆ 1881 ರಲ್ಲಿ ಅಮೆರಿಕಾದ ಅರಿಜೋನಾ ಎನ್ನುವ ನಗರದಲ್ಲಿ ಈ ಆಟ ಶುರುವಾಗುತ್ತದೆ ಮತ್ತು ಆಟ ಮುಗಿಯಲು 8 ವರ್ಷ 5 ತಿಂಗಳು ಮತ್ತು 3 ದಿನ ತೆಗೆದುಕೊಳ್ಳುತ್ತದೆ. ಇದು ಇತಿಹಾಸದಲ್ಲಿ ಅತಿ ಹೆಚ್ಚು ಸಮಯ ತೆಗೆದುಕೊಂಡ ಆಟವಾಗಿದೆ.

ದೇಶದ ಐದನೇ ಒಂದು ಭಾಗ ಇಲ್ಲಿ ವ್ಯಸನಿಗಳು!

ಜಾರ್ಜಿಯಾ ಎನ್ನುವ ದೇಶದಲ್ಲಿ ನಲವತ್ತು ಲಕ್ಷಕ್ಕೂ ಕಡಿಮೆ ಜನಸಂಖ್ಯೆ. ಸುಖವಾಗೇ ಇತ್ತು. ಎಲ್ಲಿಯವರೆಗೆ ಆನ್ಲೈನ್ ಜೂಜಾಟ ಅಥವಾ ಗ್ಯಾಂಬಲಿಂಗ್ ಇರಲಿಲ್ಲವೂ ಅಲ್ಲಿಯವರೆಗೆ. ಇದೀಗ ಇಲ್ಲಿನ 7 ಲಕ್ಷ ಜನಸಂಖ್ಯೆ ಈ ಜೂಜಾಟದ ದಾಸರಾಗಿದ್ದಾರೆ. ಅಂದರೆ ಜನಸಂಖ್ಯೆಯ 18 ಪ್ರತಿಶತ ಇಂತಹ ಒಂದು ಅಡ್ಡಿಕ್ಷನ್ ಗೆ ತುತ್ತಾಗಿದ್ದಾರೆ. ಇಂತಹ ಆಟವನ್ನ ಆಡಲು 18 ವರ್ಷ ತುಂಬಿರಬೇಕು. ಇದು ಯೂರೋಪಿನ ದೇಶಗಳಲ್ಲಿ 21 ಅಥವಾ 23 ಇದೆ. ಆದರೆ ಜಾರ್ಜಿಯಾದ ಯುವಜನತೆಗೆ ಇದೊಂದು ತರಹ ಹುಚ್ಚು ಹಿಡಿದಿದೆ. ಬಹಳಷ್ಟು ಯುವ ಜನತೆ ತಮ್ಮ ಪೋಷಕರ ಅಥವಾ ಸಂಬಂಧಿಗಳ ಗುರುತನ್ನ ಬಳಸಿ ಇಂತಹ ಆನ್ಲೈನ್ ಅಡ್ಡಗಳಲ್ಲಿ ಆಟ ಆಡಲು ಬರುತ್ತಾರೆ.

ತೂಬಿಲಿಸಿ ನಗರದಲ್ಲಿ ಹೆಜ್ಜೆ ಹೆಜ್ಜೆಗೆ ಸ್ವರ್ಗವನ್ನ ನಾಚಿಸುವ, ಪ್ರಜ್ವಲಿಸುವ ಕ್ಯಾಸಿನೋಗಳು ಕಾಣಸಿಗುತ್ತವೆ. ಇಲ್ಲಿ ಆಡಲು ಬಂದವರು ನಶೆಗೆ ಒಳಗಾದವರಂತೆ ಮತ್ತೆ ಮತ್ತೆ ಇಲ್ಲಿಗೆ ಬರುತ್ತಾರೆ. ಸೋಲು ಅವರನ್ನ ಸಾಲದ ಸುಳಿಗೆ ತಳ್ಳುತ್ತದೆ.

 ಜಗತ್ತಿನ ದೊಡ್ಡ ಕ್ಯಾಸಿನೋಗಳು ಎಲ್ಲಿವೆ?

ಕ್ಯಾಸಿನೊ ಎಂದ ತಕ್ಷಣ ಲಾಸ್ ವೇಗಾಸ್ ಎನ್ನುತ್ತೇವೆ. ಆದರೆ ಜಗತ್ತಿನ ಅತಿ ದೊಡ್ಡ ಕ್ಯಾಸಿನೊ ಇರುವುದು ಓಕ್ಲಹಾಮಾ ಅಮೇರಿಕಾದಲ್ಲಿ. ಈ ಕ್ಯಾಸಿನೊ ವಿನ್ ಸ್ಟಾರ್ ಎನ್ನುವ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಎರಡನೇ ಅತಿ ದೊಡ್ಡ ಕ್ಯಾಸಿನೊ ಇರುವುದು ಮಕಾವುನಲ್ಲಿ ವೆನಿಟಿಯನ್ ಮಕಾವು ಎನ್ನುವ ಹೆಸರಿನಿಂದ ಇದು ಪ್ರಸಿದ್ಧಿ ಪಡೆದಿದೆ. ನಂತರದ ಸ್ಥಾನಗಳು ಮಕಾವು ದ್ವೀಪದಲ್ಲಿ ಇರುವ ಕ್ಯಾಸಿನೋಗಳ ಪಾಲಾಗಿದೆ. ಗಮನಿಸಿ ಇದು ಗಾತ್ರದಲ್ಲಿ ದೊಡ್ಡವು ಆದರೆ ಲಾಸ್ ವೇಗಸ್ ನಲ್ಲಿ ಲಾಸ್ ವೇಗಾಸ್ ಸ್ಯಾಂಡ್ಸ್ ಕಾರ್ಪೋರೇಶನ್ ಎನ್ನುವ ಒಂದು ಸಂಸ್ಥೆಯಿದೆ ಇದು ವಾರ್ಷಿಕ 14 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಗಳಿಸುತ್ತದೆ. ಹೀಗಾಗಿ ಹಣದ ವಹಿವಾಟಿನ ದೃಷ್ಟಿಯಿಂದ ಲಾಸ್ ವೇಗಾಸ್ ಇಂದಿಗೂ ಪ್ರಥಮ ಸ್ಥಾನದಲ್ಲಿ ಭದ್ರವಾಗಿದೆ.
 
ಮುಸ್ಲಿಂ ರಾಷ್ಟ್ರಗಳ ಕಥೆಯೇನು?

ಮುಸ್ಲಿಂ ರಾಷ್ಟ್ರಗಳಲ್ಲಿ ಜೂಜಾಟವನ್ನ ನಿಷೇಧಿಸಲಾಗಿದೆ. ಇದು ಉತ್ತಮ ನಿರ್ಧಾರ. ಮನುಷ್ಯನ ಬದುಕನ್ನ ಮೂರಾಬಟ್ಟೆ ಮಾಡುವ ಇಂತಹ ಆಟಗಳನ್ನ ನಿಷೇಧಿಸುವುದು ಎಲ್ಲಾ ತರಹದಲ್ಲೂ ಸ್ವಾಗತಾರ್ಹ ವಿಷಯ. ಆದರೆ ಇಂದು ಏನಾಗಿದೆ? ಹಲವಾರು ಮುಸ್ಲಿಂ ರಾಷ್ಟ್ರಗಲ್ಲಿ ಈ ಕ್ಯಾಸಿನೊ ಅವ್ಯಾಹತವಾಗಿ ನಡೆಯುತ್ತಿದೆ. ಈಜಿಪ್ಟ್, ಮಲೇಶಿಯಾ,  ಮಿಡ್ಲ್ ಈಸ್ಟ್ ದೇಶಗಳಲ್ಲಿ ಕ್ಯಾಸಿನೊಗಳನ್ನ ಕಾಣಬಹದಾಗಿದೆ. ಮೊದಲಿಗೆ ಇದು ಸ್ಥಳೀಯರ ಆಟ ಆಡದಂತೆ ನಿಷೇಧವಿತ್ತು. ಬೇರೆಯ ದೇಶದಿಂದ ಪ್ರವಾಸಿಗರಾಗಿ ಬರುವರಿಗೆ ಮತ್ತು ಇತರೆ ಧರ್ಮಿಯರಿಗೆ ಆಡಲು ಯಾವುದೇ ಅಡೆತಡೆಗಳಿರಲಿಲ್ಲ. ಸಮಯ ಕಳೆದಂತೆ ಯಾರು ಬೇಕಾದರೂ ಆಡಬಹುದು ಎನ್ನುವ ಮಟ್ಟಕ್ಕೆ ಬಂದು ನಿಲ್ಲುತ್ತಿರುವುದು ಮಾತ್ರ ವಿಷಾದ.

ಕೊನೆಮಾತು: ಇದು ಒಂದು ಅಡ್ಡಿಕ್ಷನ್.  ಸಮಯ ಕಳೆಯಲು ಎಂದು ಶುರುವಾದ ಒಂದು ಆಟ, ಜೂಜಾಟವಾಗಿ ನಂತರ ಲಕ್ಷಾಂತರ ಕೋಟಿ ರೂಪಾಯಿಗಳನ್ನ ಸೃಷ್ಟಿಸುವ ಆಟವಾಗಿ ಮಾರ್ಪಾಟಾಗಿದೆ. ಒಮ್ಮೆ ಇದರ ಸುಳಿಯಲ್ಲಿ ಸಿಲುಕಿದವರು ಹೊರಬರುವುದು ಕಷ್ಟಸಾಧ್ಯ. ಗಮನಿಸಿ ಇಂತಹ ಒಂದು ಪಿಡುಗಿನಿಂದ ಜಾರ್ಜಿಯಾ ಎನ್ನುವ ಇಡೀ ದೇಶ ಬಹಳ ದುಸ್ಥಿತಿಗೆ ಬಂದು ನಿಂತಿದೆ. ಇದೊಂದು ಸಾಮಾಜಿಕ ಪಿಡುಗು. ಇದರಿಂದ ನಮ್ಮ ಮುಂದಿನ ಜನತೆಯನ್ನ ರಕ್ಷಿಸುವುದು ನಮ್ಮ ಕೈಲಿದೆ. ಜೊತೆಗೆ ಸರಕಾರಗಳೂ ಕೂಡ ತಮ್ಮ ಆದಾಯದ ಮೂಲವಿದು ಎನ್ನುವ ಮನಸ್ಥಿತಿಯಿಂದ ಹೊರಬಂದು ಇಂತಹ ಆಟಗಳನ್ನ ನಿಷೇಧ ಮಾಡಬೇಕಿದೆ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp