ವೃದ್ಧಾಪ್ಯ ಅಸಹನೀಯ: ಹದಗೆಡುತ್ತಿರುವ ವೃದ್ಧರ ಮನಸ್ಸು (ಚಿತ್ತ ಮಂದಿರ)

-ಡಾ. ಸಿ.ಆರ್. ಚಂದ್ರಶೇಖರ್ದೀರ್ಘಾಯಸ್ಸು ಒಂದು ವರವಲ್ಲ ಶಾಪ ಎಂದಿದ್ದಾನೆ ಕುರುಕುಲ ಪಿತಾಮಹ ಭೀಷ್ಮ. ನಾವು ಇಳಿವಯಸ್ಸಿಗೆ ಕಾಲಿಡುತ್ತಿದ್ದಂತೆ ಆಗುವ ವಯೋಸಹಜ ಬದಲಾವಣೆಗಳು ಮತ್ತು ಅನಾರೋಗ್ಯ ನಮ್ಮನ್ನು ಕಂಗೆಡಿಸುತ್ತವೆ.
ವೃದ್ಧಾಪ್ಯ (ಸಾಂಕೇತಿಕ ಚಿತ್ರ)
ವೃದ್ಧಾಪ್ಯ (ಸಾಂಕೇತಿಕ ಚಿತ್ರ)
Updated on

ಭಾರತೀಯರ ಸರಾಸರಿ ಆಯಸ್ಸು ಈಗ 74 ವರ್ಷ. ಅಂದರೆ ದೇಶದಲ್ಲಿ 60 ಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಇದು ಸ್ವಾಗತಾರ್ಹವಾದರೂ ವೃದ್ಧರ ಬದುಕು ಸಮಾಧಾನಕರವಾಗಿದೆಯೇ? ಅವರು ಸಂತೋಷವಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ 'ಇಲ್ಲ'. 

ದೀರ್ಘಾಯಸ್ಸು ಒಂದು ವರವಲ್ಲ ಶಾಪ ಎಂದಿದ್ದಾನೆ ಕುರುಕುಲ ಪಿತಾಮಹ ಭೀಷ್ಮ. ನಾವು ಇಳಿವಯಸ್ಸಿಗೆ ಕಾಲಿಡುತ್ತಿದ್ದಂತೆ ಆಗುವ ವಯೋಸಹಜ ಬದಲಾವಣೆಗಳು ಮತ್ತು ಅನಾರೋಗ್ಯ ನಮ್ಮನ್ನು ಕಂಗೆಡಿಸುತ್ತವೆ. ದೈಹಿಕ ಮತ್ತು ಮಾನಸಿಕ ಶಕ್ತಿ ಸಾಮರ್ಥ್ಯಗಳು ಕಡಿಮೆಯಾಗುವುದರ ಜೊತೆಗೆ ಭಾವನಾತ್ಮಕ ಮತ್ತು ಸಾಮಾಜಿಕ ಆಸರೆ ಕೂಡ ಕಡಿಮೆಯಾಗುತ್ತಿರುವುದರಿಂದ ವೃದ್ಧಾಪ್ಯ ಅಸಹನೀಯವಾಗುತ್ತಿದೆ. 

ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಗಳು
ಏಕಪ್ಪಾ ಆಯಸ್ಸು ಕೊಟ್ಟೆ ಬೇಗ ಕರೆದುಕೊಳ್ಳಬಾರದೇ ಎಂದು ಸಾಕಷ್ಟು ಹಿರಿಯರು ದೇವರನ್ನು ನಿತ್ಯ ಬೇಡುತ್ತಾರೆ! ದೇಹದ ಪ್ರತಿಯೊಂದು ಅಂಗಾಂಗವ್ಯವಸ್ಥೆಯೂ ದುರ್ಬಲವಾಗುತ್ತದೆ. ಜೀರ್ಣಾಂಗಗಳು ದುರ್ಬಲಗೊಂಡು ಆಹಾರ ಜೀರ್ಣವಾಗುವುದು ಕಷ್ಟ. ಅಪೌಷ್ಟಿಕತೆ ಉಂಟಾಗುತ್ತದೆ. ಮಲಬದ್ದತೆ ಬರುತ್ತದೆ. ಹೃದಯ-ರಕ್ತ ಚಲನಾವ್ಯವಸ್ಥೆಯಲ್ಲಿ ಕೊರತೆ, ಹೃದಯಾಘಾತ, ಲಕ್ವಾ ಹೊಡೆಯಬಹುದು. ಉಸಿರಾಟದ ವ್ಯವಸ್ಥೆ ಶಿಥಿಲವಾಗಿ ಉಸಿರಾಟ ಏರುಪೇರಾಗುತ್ತದೆ. ಮೂಳೆ-ಕೀಲು-ಚಾಲನೆ ಕಷ್ಟವಾಗುತ್ತದೆ. ಮಿದುಳಿನ ನರಮಂಡಲ ಬಲಹೀನವಾಗಿ ಮರೆವು, ಬುದ್ಧಿಶಕ್ತಿ ಕುಗ್ಗುತ್ತದೆ, ಸಮತೋಲನವಿಲ್ಲದೆ ಬಿದ್ದು ಮೂಳೆ-ಮುರಿಯಬಹುದು. ಪಾರ್ಕಿನ್ಸನ್ ಕಾಯಿಲೆ. ಆಲ್‌ಝೈಮರ್‌‌ಕಾಯಿಲೆ ಬರಬಹುದು. 

ವೃದ್ಧಾಪ್ಯದಲ್ಲಿ ಆತಂಕ
ಮನಸ್ಸು ಭಯ ಆತಂಕ, ದುಃಖ, ಕೋಪ, ಹತಾಶೆ, ನಿರಾಶೆಗಳಿಂದ ಆವೃತವಾಗುತ್ತದೆ. ಅಭದ್ರತೆ, ಅನಿಶ್ಚಯತೆ, ಮಕ್ಕಳು ಬಂಧುಮಿತ್ರರ ನಿರ್ಲಕ್ಷ್ಯ, ಆರ್ಥಿಕ ಅವಲಂಬನೆ, ಸಾವಿನ ಭಯವು ಮನಸ್ಸು ಪ್ರಕ್ಷುಬ್ಧಗೊಳ್ಳುವಂತೆ ಮಾಡುತ್ತದೆ. ಎಲ್ಲದಕ್ಕಿಂತ, ಒಂಟಿತನ, ಹಿಂದೆ ಮಾಡಿದ ತಪ್ಪುಗಳು, ತೆಗೆದುಕೊಂಡ ತಪ್ಪು ನಿರ್ಧಾರಗಳು, ಪಾಪಪ್ರಜ್ಞೆ ನಕ್ಷತ್ರಿಕನಂತೆ ಕಾಡತೊಡಗುತ್ತದೆ. ಹೀಗಾಗಿ ಶೇಕಡಾ 30 ರಿಂದ 50 ರಷ್ಟು ವೃದ್ಧರು ಖಿನ್ನತೆ ಮತ್ತು ಆತಂಕದ ಮನೋಬೇನೆಯಿಂದ ಬಳಲುತ್ತಾರೆ. ಜೊತೆಗೆ ವೃದ್ಧರಿಗೆ ಸೂಕ್ತ ಸಮಯಕ್ಕೆ ಸೂಕ್ತ ಚಿಕಿತ್ಸೆಯೂ ದೊರೆಯದಿರಬಹುದು. ವೈದ್ಯರಲ್ಲಿಗೆ-ಆಸ್ಪತ್ರೆಗೆ ಕರೆದೊಯ್ಯುವವರಿಲ್ಲ. ವೈದ್ಯ ಖರ್ಚನ್ನು ಭರಿಸುವವರಿಲ್ಲ. ಅಸಹಾಯಕತೆ ಆವರಿಸಿಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಆರೋಗ್ಯ ಚೆನ್ನಾಗಿದ್ದರೆ ಪ್ರೀತಿಯಿಂದ ಆರೈಕೆ ಮಾಡುವವರಿರುತ್ತಾರೆ. ಆರ್ಥಿಕ ನೆರವು ಇದ್ದರೆ, ವೃದ್ಧಾಪ್ಯ ದೀರ್ಘವಾದರೂ ಹಿತ. ಇಲ್ಲದಿದ್ದರೆ ಅಹಿತವಾಗುತ್ತದೆ.

ವೃದ್ಧಾಪ್ಯ ಚೆನ್ನಾಗಿರಬೇಕೆಂದರೆ ಅದಕ್ಕೆ ಸಿದ್ಧತೆಯು ನಾವು 40 ರ ಆಸುಪಾಸಿನಲ್ಲಿಯೇ ಪ್ರಾರಂಭವಾಗಬೇಕು.

  • ಆಹಾರ ಸೇವನೆಯಲ್ಲಿ ಶಿಸ್ತು: ಕೊಬ್ಬು, ಸಿಹಿ, ಕರಿದ ಪದಾರ್ಥಗಳ ಅತಿ ಸೇವನೆಯಿಂದ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿ, ಶರೀರದ ತೂಕ ವೃದ್ಧಿಯಾಗುತ್ತದೆ. ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಸಸ್ಯಾಹಾರ- ಸಾತ್ವಿಕ ಆಹಾರ ಸೇವನೆ- ಹಿತಮಿತ ಆಹಾರ ಸೇವನೆಯಿಂದ ವೃದ್ಧಾಪ್ಯದ ಲಕ್ಷಣಗಳು ಬೇಗ ಬರುವುದಿಲ್ಲ. ಹಿತಮಿತ ಆಹಾರ ಸೇವನೆಗೆ ಆದ್ಯತೆ ನೀಡಿ.
  • ವ್ಯಾಯಾಮ– ದೈಹಿಕ ಚಟುವಟಿಕೆಗಳು: ದೇಹದಲ್ಲಿ 1 ಲಕ್ಷ ಕಿ.ಮೀ. ಉದ್ದದ ರಕ್ತ ನಾಳಗಳಿವೆ. ಅವುಗಳಲ್ಲಿ ನಿರಂತರವಾಗಿ ರಕ್ತ ಸಂಚರಿಸುತ್ತಿರಬೇಕು. ಶೇಕಡಾ 20 ರಷ್ಟು ರಕ್ತ ಆದ್ಯತೆ ಮೇರೆಗೆ, ಮಿದುಳಿಗೆ ಪೂರೈಕೆಯಾಗಬೇಕು. ಇದು ಸಾಧ್ಯವಾಗುವುದು ನಾವು ನಿತ್ಯ ವ್ಯಾಯಾಮ-ಚಟುವಟಿಕೆಯಲ್ಲಿ ತೊಡಗಿರಬೇಕು, ವಾಕಿಂಗ್, ಬಯಲಲ್ಲಿ ಆಡುವ ಆಟಗಳು ಈಜುವುದು ಸೈಕಲ್ ತುಳಿಯುವುದೇ, ಕೈಕಾಲುಗಳನ್ನು ಚಲಿಸುವುದು ನಿತ್ಯ ಮಾಡಬೇಕು.
  • ಭಂಗವಿಲ್ಲದ ಸುಖ ನಿದ್ರೆ: ಮೈ ಮನಸ್ಸು ವಿರಮಿಸಲು ದೇಹದ ಶಕ್ತಿ ಉಳಿತಾಯವಾಗಲು, 6 ಅಥವಾ 7 ಗಂಟೆಗಳ ಭಂಗವಿಲ್ಲದ ನಿದ್ರೆಯ ಅಗತ್ಯವಿದೆ. ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡಿ. ಮಲಗುವ ವೇಳೆ ಚಿಂತೆ-ಕ್ಲೇಶಗಳನ್ನು ನಿವಾರಿಸಿಕೊಳ್ಳಿ. ವೃದ್ಧಾಪ್ಯದಲ್ಲಿ ಆರ್ಥಿಕ ಸ್ವಾವಲಂಬನೆ ಮುಖ್ಯ. ನಿತ್ಯ ಅಗತ್ಯಗಳ ಪೂರೈಕೆಗೆ ಹಣಕ್ಕಾಗಿ ನಾವು ಪರದಾಡುವಂತಾಗಬಾರದು. ವೃದ್ಧಾಪ್ಯಕ್ಕೆ ನಾವು ಹಣವನ್ನು ಉಳಿತಾಯ ಮಾಡಬೇಕು. ಎಲ್ಲವನ್ನು ಮಕ್ಕಳಿಗೆ ಕೊಟ್ಟು ಬರಿಗೈ ಆಗಬಾರದು. ಆಸ್ತಿ, ಚಿನ್ನ ಬೆಳ್ಳಿಯನ್ನು ಆಪತ್ ಧನವಾಗಿಟ್ಟುಕೊಳ್ಳಬೇಕು.
  • ಮಕ್ಕಳಿಂದ ನಿರೀಕ್ಷೆ ಕಡಿಮೆ ಮಾಡಿಕೊಳ್ಳಿ: ನೀವು ಅತಿಪ್ರೀತಿಯಿಂದ ಮಕ್ಕಳನ್ನು ಸಾಕಿರಬಹುದು. ಹೊಟ್ಟೆ ಬಟ್ಟೆ ಕಟ್ಟಿ ಸಾಲ ಮಾಡಿ ಅವರ ವಿದ್ಯಾಭ್ಯಾಸ, ಸುಖಕ್ಕೆ ದುಡಿದಿರಬಹುದು. ಆಡಂಬರದಿಂದ ಅವರ ಮದುವೆ ಮಾಡಿರಬಹುದು. ಆದರೆ ಅವರಿಂದ ಏನನ್ನೂ ನಿರೀಕ್ಷೆ ಮಾಡಬೇಡಿ. ಅವರಾಗಿ ಮುಂದೆ ಬಂದು ನಿಮ್ಮನ್ನು ನೋಡಿಕೊಂಡರೆ ಸಂತೋಷ. ನೋಡಿಕೊಳ್ಳದಿದ್ದರೆ ದುಃಖ ಬೇಡ.
  • ತೃಪ್ತಿ - ಸಮಾಧಾನದಿಂದ ಬದುಕಿ: ವೃದ್ಧಾಪ್ಯದಲ್ಲಿ ಸರಳವಾಗಿ ಸಂತೃಪ್ತಿಯಿಂದ ಬದುಕಿರಲು ವ್ಯವಸ್ಥೆ ಮಾಡಿಕೊಳ್ಳಿ. ಧಾವಂತದ ಜೀವನ ಬೇಡ. ಸಂಗೀತ ಶ್ರವಣ, ಪುಸ್ತಕ ಓದು, ಧಾರ್ಮಿಕ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಆಸೆ- ಆಕಾಂಕ್ಷೆಗಳಿಗೆ ಲಗಾಮು ಹಾಕಿ. ಮಕ್ಕಳು ನಿರ್ಲಕ್ಷಿಸಿದರೆ, ಒಳ್ಳೆಯ ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯಿರಿ. ಒಬ್ಬ ವೈದ್ಯರ ಮಾರ್ಗದರ್ಶನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಒಳ್ಳೆಯ ಪ್ರಾಥಮಿಕ ಮತ್ತು ಅರೋಗ್ಯ ಸೌಲಭ್ಯಗಳುಳ್ಳ ವೃಧಾಶ್ರಮಗಳನ್ನು ಪ್ರತಿ ಊರಿನಲ್ಲಿ ಸ್ಥಾಪಿಸಬೇಕು. ಅಗತ್ಯವಿರುವವರಿಗೆ ಆರ್ಥಿಕ ನೆರವನ್ನು ನೀಡಲು ಸಂಘ ಸಂಸ್ಥೆಗಳು ಮುಂದೆ ಬರಬೇಕು.

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ

drcrchandrashekhar@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com