ಬಿಜೆಪಿ = ಬದಲಾವಣೆ ಜನತಾ ಪಾರ್ಟಿ: ಇದು ಕರ್ನಾಟಕ ಬಿಜೆಪಿ ಬಗೆಗಿನ ವ್ಯಾಖ್ಯಾನ! (ಅಂತಃಪುರದ ಸುದ್ದಿಗಳು)

ಸ್ವಾತಿ ಚಂದ್ರಶೇಖರ್ಸುದ್ದಿಗೆ ಹೆಚ್ಚು ಆಹಾರ ಯಾರು ಆಗುತ್ತಾರೆ ಎಂಬ ಸ್ಪರ್ಧೆ ಇಟ್ಟರೆ ಅದರಲ್ಲಿ ಬಿಜೆಪಿಯೇ ನಂ.1. ಅದು ಕೂಡ ಅವಿರೋಧ ಆಯ್ಕೆ!
ಮಾಜಿ ಸಿಎಂ ಯಡಿಯೂರಪ್ಪ ಜೊತೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (ಸಂಗ್ರಹ ಚಿತ್ರ)
ಮಾಜಿ ಸಿಎಂ ಯಡಿಯೂರಪ್ಪ ಜೊತೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (ಸಂಗ್ರಹ ಚಿತ್ರ)

ಬಿಜೆಪಿ= ಬದಲಾವಣೆ ಜನತಾ ಪಾರ್ಟಿ ಅಲಿಯಾಸ್ ಬ್ರೇಕಿಂಗ್ ನ್ಯೂಸ್ ಜನತಾ ಪಾರ್ಟಿ

ಸುದ್ದಿಗೆ ಹೆಚ್ಚು ಆಹಾರ ಯಾರು ಆಗುತ್ತಾರೆ ಎಂಬ ಸ್ಪರ್ಧೆ ಇಟ್ಟರೆ ಅದರಲ್ಲಿ ಬಿಜೆಪಿಯೇ ನಂ.1. ಅದು ಕೂಡ ಅವಿರೋಧ ಆಯ್ಕೆ!!. 

ಕಳೆದ 15 ವರ್ಷದಿಂದ ಕರ್ನಾಟಕ ಬಿಜೆಪಿಯಲ್ಲಿ ಬ್ರೆಕಿಂಗ್ ನ್ಯೂಸ್ ಗೆ ಯಾವುದೇ ಬರ ಇಲ್ಲ. ಒಮ್ಮೆ ಸಿ.ಡಿ ಬ್ರೇಕಿಂಗ್ ಆದರೆ, ಒಮ್ಮೆ ಕುರ್ಚಿ ಬ್ರೇಕಿಂಗ್. ಒಮ್ಮೆ ಮೈತ್ರಿ ಬ್ರೇಕಿಂಗ್ ನ್ಯೂಸ್ ಆದರೆ ಮತ್ತೊಮ್ಮೆ ಸರ್ಕಾರದ ಸುದ್ದಿಗಳು ಮಾಧ್ಯಮಗಳನ್ನು ಎದುರು ನೋಡುತ್ತಿರುತ್ತವೆ. ಇನ್ನು ಒಮ್ಮೆ ಲಿಂಗಾಯತರ ಬ್ರೇಕಿಂಗ್ ಸುದ್ದಿ ಇದ್ದರೆ ಆದ್ರೆ, ಒಮ್ಮೆ ರಾಜೀನಾಮೆಯ ಬ್ರೇಕಿಂಗ್ ನ್ಯೂಸ್ ಗಳ ಭರಾಟೆ! ಬಿಜೆಪಿಯಿಂದ ಬರೋ ಬ್ರೇಕಿಂಗ್ ನ್ಯೂಸ್ ಗೆ ಬ್ರೇಕ್ ಹಾಕಲು ಇನ್ನೂ ಆಗಿಲ್ಲ. 

ಸಿಎಂ ಬದಲಾಗಿ, ಸಂಪುಟ ರಚನೆಯಾಗಿ, ಇನ್ನಾದರೂ ಪಕ್ಷ, ಸರ್ಕಾರ ತಿಳಿ ಆಯಿತು ಅಂದುಕೊಂಡರೆ ಸದ್ಯಕ್ಕೆ ಮಹದೇವಪುರದಿಂದ ಬೆಳಗಾವಿಯವರೆಗೂ ಕೇಳಿ ಬರುತ್ತಿರುವುದು ಬದಲಾವಣೆ ವಿಚಾರ. ಈಗ ಇನ್ನಾವ ಬದಲಾವಣೆ ಅಂದುಕೊಂಡರಾ? 

ಬದಲಾವಣೆ!! ಸಾರಥಿಯ ಬದಲಾವಣೆ!! ಬಿಜೆಪಿ ಸಾರಥಿಯ ಬದಲಾವಣೆ!!

ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಕಳೆಯಿತು. ಮೂರು ವರ್ಷಕ್ಕೆ ಇರುವ ರಾಜ್ಯಾಧ್ಯಕ್ಷರ ಅವಧಿಯನ್ನು ಎರಡು ವರ್ಷಕ್ಕೆ ಮುಗಿಸಿ ಹೊಸ ಅಧ್ಯಕ್ಷರನ್ನು ಕರೆತರುತ್ತಾರೆ ಎಂಬುದು ಬಿಜೆಪಿ ಪಾಳಯದ ಸದ್ಯದ ಬ್ರೇಕಿಂಗ್ ಸುದ್ದಿ. 

ಇದಕ್ಕೆ ಇಂಬು ನೀಡುವ ಹಾಗೆ, ಲಿಂಗಾಯತರಿಂದ ಮಾಜಿ ಡಿಸಿಎಂ, ದಲಿತರಿಂದ ಮಾಜಿ ಸಚಿವರು ಇಬ್ಬರು ಪೈಪೋಟಿಯಲ್ಲಿ ಇದ್ದಾರೆ ಎಂಬುದು ಗುಮಾನಿ. ಏಕಾ-ಏಕಿ ಸವದಿಯನ್ನು ಡಿಸಿಎಂ ಸ್ಥಾನದಿಂದ, ಲಿಂಬಾವಳಿಯನ್ನು ಸಚಿವ ಸ್ಥಾನದಿಂದ ಕೈಬಿಡಲು ಕಾರಣ ಏನು ಎಂಬುದಕ್ಕೆ ಈಗ ಉತ್ತರ ಸಿಗುವಂತಿದೆ. ಆದರೆ ಈ ಇಬ್ಬರಲ್ಲಿ ಒಬ್ಬರು ಮಾತ್ರ ಅಧ್ಯಕ್ಷರಾಗಲು ಸಾಧ್ಯ, ಲಿಂಗಾಯತರಿಗೆ ಪ್ರಾಮುಖ್ಯತೆ ಕೊಟ್ಟರೆ ಬೇರೆ ಜಾತಿಯವರಿಗೆ ಅಸಮಾಧಾನ, ಬೇರೆಯವರಿಗೆ ನೀಡಿದರೆ ಉತ್ತರ ಕರ್ನಾಟಕವನ್ನು ಯಾರು ಸಂಭಾಳಿಸುವರು ಎಂಬ ಚಿಂತೆ, ಒಟ್ಟಿನಲ್ಲಿ ಅಧಿಕಾರ ಇರಲಿ ಇಲ್ಲದಿರಲಿ ಬಿಜಿಪಿಗೆ ಒಂದಲ್ಲ ಒಂದು ಚಿಂತೆ ತಪ್ಪಿದ್ದಲ್ಲ. 

"ಏನಾದರೂ ಆಗಲಿ ಗದ್ದುಗೆ ಹಿಡಿಯುವಲ್ಲಿ ನಮ್ಮ ಪ್ರಯತ್ನವೂ ಇರಲಿ" ಎಂದು ಈ ಇಬ್ಬರೂ ನಾಯಕರು ದಂಡಯಾತ್ರೆ ಮಾಡುತ್ತಿರುವುದು ಸುಳ್ಳಲ್ಲ.

ಕೇಸ್ ಏನೇ ಆಗಲಿ ಸಚಿವ ಸ್ಥಾನ ನನಗಿರಲಿ

ಇದೆ ಸೆ.3 ರಂದು ತನ್ನ ಸಿ.ಡಿ ಹಗರಣದ ಪ್ರಕರಣ ಒಂದು ಗಡಿ ತಲುಪಲಿದೆ ಎಂದು ನಂಬಿರುವ ರಮೇಶ್ ಜಾರಕಿಹೊಳಿ, ತಮ್ಮ 90 ದಿನದ ಅಜ್ಞಾತ ವಾಸ ಮುರಿದಿದ್ದಾರೆ. ಬೆಳಗಾವಿಯ ಖಾಸಗಿ ರೆಸಾರ್ಟ್ನಲ್ಲಿ ಫೋನ್ ನ್ನೂ ಬಳಸದೆ ಯಾರ ಕೈಗೂ ಸಿಗದೆ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದ ಜಾರಕಿಹೊಳಿ ಈಗ ಹೊರಗಡೆ ಜನರ ಮಧ್ಯೆ ಬರಲು ಆರಂಭಿಸಿದ್ದಾರೆ ಮತ್ತೆ ನಾನು ಸಚಿವನಗುತ್ತೇನೆ ಎಂಬ ಸಂದೇಶವನ್ನು ರವಾನಿಸುತ್ತಿದ್ದಾರೆ. 

ಸೆಪ್ಟೆಂಬರ್ 3 ಎಸ್.ಐ.ಟಿ ತನಿಖೆ ಮತ್ತು ಸಿ.ಡಿಯಲ್ಲಿ ಇರುವ ಯುವತಿಯ ವಿರುದ್ಧ ದಾಖಲಿಸಿರುವ ಕೇಸನ್ನು ಸಿಬಿಐ ಗೆ ನೀಡವುದರ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದ್ದು, ಪಿಐಎಲ್ ಗೆ ಅಂತಿಮ ತೀರ್ಪು ಬರುವ ಸಾಧ್ಯತೆಯೂ ಇದೆ. ಕೇಸ್ ಪರವಾದರೂ, ವಿರುದ್ಧವಾದರೂ ಈ ಬಾರಿ ಸಚಿವ ಸ್ಥಾನ ಅಲಂಕರಿಸುತ್ತೇನೆ ಎಂಬ ಹುಮ್ಮಸ್ಸಲ್ಲಿ ಓಡಾಡುತ್ತಿದ್ದಾರೆ. ಇನ್ನು ಈ ವಿಚಾರವನ್ನ ಕಳೆದ ವಾರ ದೆಹಲಿಗೆ ಭೇಟಿ ನೀಡಿದ ಸಿಎಂ ಕೂಡ ಹೈಕಮಾಂಡ್ ಜೊತೆ ಚರ್ಚಿಸಿದ್ದರು.

"ಜಡ್ಜ್ಮೆಂಟ್ ಆನೆದೋ..., ಬಾದ್ ಮೇ ದೇಖೇಂಗೇ ಅದರಂತೆ ವರಿಷ್ಠರು. ಒಟ್ಟಿನಲ್ಲಿ ಇನ್ನು ಕೆಲವೇ ವಾರಗಳಲ್ಲಿ ತಮಗೆ ಕವಿದಿದ್ದ ಗ್ರಹಣದ ಕಾಲ ಮುಗಿಯುತ್ತೆ ಎಂಬ ಮುನ್ಸೂಚನೆಯನ್ನು, ಎಲ್ಲ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡುವ ಮೂಲಕ ಜಾರಕಿಹೊಳಿ ಸ್ಪಷ್ಟಪಡಿಸುತ್ತಿದ್ದಾರೆ.

ಸಿಎಂ ಆಗಬೇಕೆ?, ಹೆಚ್ಚೇನು ಇಲ್ಲ, ಹೀಗೆ ಮಾಡಿದರೆ ಆಯಿತು...

ಕಳೆದ 3 ದಶಕಗಳ ಇತಿಹಾಸದಲ್ಲಿ ಪಾದ ಸವಿಸಿದವರೆಲ್ಲ ಸಿಎಂ ಆಗಿದ್ದಾರೆ, ಅಥವಾ ಆಗುತ್ತಾರೆ. ಇದು ನಿಜನಾ?! ತೆಲಗು ರಾಜ್ಯಗಳ ಪಾಲಿಗೆ ಅಂತೂ ಇದು ಸತ್ಯ. ಹಿಂದೆ ವೈ.ಎಸ್ ರಾಜಶೇಖರ ರೆಡ್ಡಿಯಿಂದ ಹಿಡಿದು, ಅವರ ಪುತ್ರ ಜಗನ್ ಮೋಹನ್ ರೆಡ್ಡಿವರೆಗೂ ಇದು ಸತ್ಯ. 

ಚಂದ್ರಬಾಬು ನಾಯ್ಡು ಕೂಡ ಪಾದಯಾತ್ರೆ ಮಾಡುವ ಅವಕಾಶ ಬಿಟ್ಟು ಕೊಡಲಿಲ್ಲ. ಈಗ ಮತ್ತೆ ಸಿಎಂ ಅಗುತ್ತೇನೆ ಬಿಜೆಪಿ ಅಧಿಕಾರಕ್ಕೆ ತರುತ್ತೇನೆ ಎಂದು ಪಾದಯಾತ್ರೆ ಮಾಡುತ್ತಿರುವುದು ತೆಲಂಗಾಣ ಬಿಜಿಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್. ಹೈದರಾಬಾದ್ ನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಶ್ಚರ್ಯದಾಯಕ ಜಯ ಸಾಧಿಸಿದ ನಂತರ ಬಿಜೆಪಿ ತನ್ನ ಸಾಮರ್ಥ್ಯವನ್ನು ರಾಜ್ಯದಲ್ಲಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇನ್ನು ಎರಡು ವರ್ಷದಲ್ಲಿ ಚುನಾವಣೆಗೆ ಹೋಗುವ ತೆಲಂಗಾಣದಲ್ಲಿ ಬಿಜೆಪಿ, ಕಾಂಗ್ರೆಸ್, ಟಿ.ಆರ್.ಎಸ್ ಗೆ ಉತ್ತಮ ಪೈಪೋಟಿ ನೀಡುಲು ಸಜ್ಜಾಗುತ್ತಿದೆ. ಆದರೆ ಬಿಜೆಪಿ ಗೆ ಹೊರ ಶತ್ರುಗಳಿಗಿಂತ ಒಳ ಶತ್ರುಗಳೇ ಜಾಸ್ತಿ ಆಗಿದ್ದಾರೆ. 

ಕಾರ್ಪೊರೇಟರ್ ಆಗಿ ಹಠಾತ್ತನೆ ಸಂಸದರಾಗಿ ಈಗ ರಾಜ್ಯಾಧ್ಯಕ್ಷರಾದ ಬಂಡಿ ಸಂಜಯ್ ಗೆ ಕರ್ನಾಟಕದ ಸಂಸದರು ಸಾಥ್ ನೀಡುತ್ತಿರುವಷ್ಟು ಕೂಡ ತೆಲಂಗಾಣದ ಸಂಸದರು, ನಾಯಕರು ನೀಡುತ್ತಿಲ್ಲ!!!. ಬಂಡಿ ಸಂಜಯ್ ಪಾದಯಾತ್ರೆಯಲ್ಲಿ ಕೋಲಾರದ ಸಂಸದ ಮುನ್ನಿಸ್ವಾಮಿ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೀಗೆ ರಾಜ್ಯದ ಕೆಲವು ನಾಯಕರು ಭಾಗಿಯಾಗುತ್ತಿದ್ದಾರೆ ಆದರೆ ಖುದ್ದು ಸಚಿವ ಕಿಶನ್ ರೆಡ್ಡಿ ತೆಲಂಗಾಣ ನಾಯಕರು ಕೇವಲ ತೋರ್ಪಡಿಕೆಗಾಗಿ ಆರಂಭದ ದಿನ ಆಗಮಿಸಿ ತೆರಳಿದ್ದಾರೆ. 

ಇನ್ನು ಬಿಜೆಪಿಯನ್ನು ಅತಿಯಾದ ಹಿಂದುತ್ವದ ಚಿಂತನೆಯಿಂದ ಕಟ್ಟಿ ಹಾಕುತ್ತಿರುವ ಬಂಡಿ ಸಂಜಯ್ ತಮ್ಮ ಅಪ್ರಭುದ್ದ ಮಾತುಗಳಿಂದ ತಾವೇ ಕಾಂಗ್ರೆಸ್ ಗೆ ಅವಕಾಶ ನೀಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಇಷ್ಟು ಬಲಿಷ್ಠವಾಗಿರುವ ಹೈ ಕಮಾಂಡ್ ಮಧ್ಯೆ ಸ್ವತಃ ಬಿಜೆಪಿ ನಾಯಕರು ಪಕ್ಷದ ಒಳ ಮತ್ಸರದಲ್ಲಿ ಕಾಂಗ್ರೆಸ್ ನೀತಿ ಅನುಸರಿಸುತ್ತಿದೆ.

ಮಗಳ ಮದುವೆಯ ಹರ್ಷ ಒಂದು ಕಡೆಯಾದರೆ, ದೊಡ್ಡವರನ್ನು ಉಪಚರಿಸುವ ಆತಂಕ ಮತ್ತೊಂದು ಕಡೆ

ಸಪ್ಟೆಂಬರ್ 2,5,7 ಹುಬ್ಬಳ್ಳಿ, ಬೆಂಗಳೂರು, ದೆಹಲಿಯಲ್ಲಿ ಪ್ರಹಲ್ಲಾದ್ ಜೋಶಿ ಅವರ ಮಗಳ ಮದುವೆ ಆರತಕ್ಷತೆ ನಡೆಯಲಿದೆ. ದೇಶದ ಎಲ್ಲಾ ಪಕ್ಷದ ನಾಯಕರೂ ಜೋಶಿ ಅವರ ಮಗಳ ಮದುವೆಯಲ್ಲಿ ಭಾಗಿ ಆಗಲಿದ್ದಾರೆ. ಈ ಹಿಂದೆ ಅನಂತ್ ಕುಮಾರ್ ಮಗಳ ಮದುವೆ ನಡೆದಾಗ, ಸಂಸತ್ ನಲ್ಲಿ ಅವರ ಪೂರ್ಣ ಹಾಜರಿ ಕಾಣಲು ಸಿಗುತ್ತಿರಲಿಲ್ಲ. But ಅನಂತ್ ಕುಮಾರ್ ಮಗಳ ಮದುವೆ ಸಂಭ್ರಮದಲ್ಲಿ ಎಲ್ಲ ನಾಯಕರೂ ಭಾಗಿಯಾಗಿದ್ದರು. ಹಾಗೆಯೇ ಈ ಬಾರಿಯೂ ರಾಷ್ಟ್ರಪತಿ ಯಿಂದ ರಾಜ್ಯದವರೆಗೂ ಎಲ್ಲ ನಾಯಕರು ಭಾಗಿಯಾಗುವರು ಎನ್ನಲಾಗಿದೆ. ಹಾಗಾಗಿ ಯಾವುದೇ ಲೋಪ ದೋಷವಿಲ್ಲದೆ 7 ದಿನ ಮದುವೆ ನಡೆಯಬೇಕು ಎಂದು ಸುಮಾರು ದಿನಗಳಿಂದ ತಯಾರಿ ನಡೆಸುತ್ತಿದ್ದಾರೆ. ಸಂಸತ್ತನ್ನೇ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೀರಿ ಇನ್ನು ಮಗಳ ಮದುವೆಯನ್ನು ಆರಾಮಾಗಿ ನೆರವೇರಿಸುವಿರಿ ಚಿಂತಿಸಬೇಡಿ ಎಂದು ಪಕ್ಷದ ಹಿರಿಯ ನಾಯಕರ ಕಿವಿ ಮಾತು ಸರಿಯಾಗೇ ಇದೆ. ಆದರೆ ಜೋಶಿ ಅವರು ಮೊದಲ ಬಾರಿ ಸಚಿವರಾಗಿ ಸಂಸದೀಯ ಖಾತೆ ನಿರ್ವಹಿಸುತ್ತಾ ಇಷ್ಟು ಸ್ನೇಹ ಗಳಿಸಿರುವುದು ಗಮನಾರ್ಹ.

ಸ್ವಾತಿ ಚಂದ್ರಶೇಖರ್

swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com