ಮಾನಸಿಕ ಆರೋಗ್ಯ ವರ್ಧನೆಗೆ ಏನು ಮಾಡಬೇಕು? ಈ 15 ಸೂತ್ರಗಳನ್ನು ಪಾಲಿಸಿದರೆ ಸಾಕು! (ಚಿತ್ತ ಮಂದಿರ)
ಡಾ. ಸಿ. ಆರ್. ಚಂದ್ರಶೇಖರ್, ಮನೋವೈದ್ಯ
ಯಾವುದೇ ವ್ಯಕ್ತಿಯ ಪೂರ್ಣ ಆರೋಗ್ಯಕ್ಕೆ, ಕೌಶಲ ಸಾಮರ್ಥ್ಯ ಸಾಧನೆಗಳಿಗೆ ಮನಸ್ಸೇ ತಾಯಿ. ಮನಸು ನೆಮ್ಮದಿಯಿಂದ ಇದ್ದು, ಅದರ ಆರೋಗ್ಯ ಚೆನ್ನಾಗಿದ್ದಾರೆ ಆತ/ ಆಕೆ ಚೆನ್ನಾಗಿ ಆಲೋಚಿಸಬಲ್ಲ. ಚಿಂತನ-ಮಂಥನ ಮಾಡಬಲ್ಲ.
Published: 13th August 2021 08:00 AM | Last Updated: 14th August 2021 01:12 PM | A+A A-

ಮಾನಸಿಕ ಆರೋಗ್ಯ (ಸಾಂಕೇತಿಕ ಚಿತ್ರ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್)
ಯಾವುದೇ ವ್ಯಕ್ತಿಯ ಪೂರ್ಣ ಆರೋಗ್ಯಕ್ಕೆ, ಕೌಶಲ ಸಾಮರ್ಥ್ಯ ಸಾಧನೆಗಳಿಗೆ ಮನಸ್ಸೇ ತಾಯಿ.
ಮನಸು ನೆಮ್ಮದಿಯಿಂದ ಇದ್ದು, ಅದರ ಆರೋಗ್ಯ ಚೆನ್ನಾಗಿದ್ದಾರೆ ಆತ/ ಆಕೆ ಚೆನ್ನಾಗಿ ಆಲೋಚಿಸಬಲ್ಲ. ಚಿಂತನ-ಮಂಥನ ಮಾಡಬಲ್ಲ. ವಸ್ತು, ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲ. ಸಮಸ್ಯೆ ಸನ್ನಿವೇಶವನ್ನು ಸರಿಯಾಗಿ ವಿಶ್ಲೇಷಿಸಬಲ್ಲ. ಸೂಕ್ತ ಪರಿಹಾರ-ನಿರ್ಧಾರಗಳನ್ನು ಕೈಗೊಳ್ಳಬಲ್ಲ. ಏಕಾಗ್ರತೆಯಿಂದ ಚೆನ್ನಾಗಿ ಕೆಲಸ-ಕರ್ತವ್ಯಗಳನ್ನು ನಿರ್ವಹಿಸಬಲ್ಲ. ಸನ್ನಿವೇಶ-ಸಂದರ್ಭಕ್ಕೆ ತಕ್ಕಂತೆ ಭಾವನೆಗಳನ್ನು ಹಿತ-ಮಿತವಾಗಿ ಪ್ರಕಟಿಸಬಲ್ಲ. ತನ್ನ ಮತ್ತು ತನ್ನವರ ಬೇಕು ಬೇಡಗಳನ್ನು ಪೂರೈಸಬಲ್ಲ. ಕುಟುಂಬದವರೊಂದಿಗೆ-ಇತರರೊಂದಿಗೆ ಒಳ್ಳೆಯ ಸ್ನೇಹ ಸಂಬಂಧವನ್ನು ಇಟ್ಟುಕೊಳ್ಳಬಲ್ಲ. ಅಪಾಯ ಕಷ್ಟ ನಷ್ಟ ಸೋಲು ನಿರಾಶೆಗಳನ್ನು ಧೈರ್ಯವಾಗಿ ಎದುರಿಸಬಲ್ಲ. ಸೂಕ್ತಗುರಿಗಳನ್ನು-ಮಾರ್ಗಗಳನ್ನು ಆಯ್ಕೆ ಮಾಡಿಕೊಂಡು ಪ್ರಗತಿಯತ್ತ ನಡೆಯಬಲ್ಲ. ತನ್ನ ಕ್ಷೇಮಕ್ಕೆ ಅಷ್ಟೇ ಅಲ್ಲದೆ, ಸಮಾಜದ ಕ್ಷೇಮಕ್ಕೂ ಗಮನ ಕೊಡಬಲ್ಲ.
ಪ್ರಕ್ಷುಬ್ಧ ಮನಸ್ಸು
ಪ್ರಸಕ್ತ ಕಾಲದಲ್ಲಿ ಹಲವು-ಹನ್ನೊಂದು ಕಾರಣಗಳಿಂದ ಬಹುತೇಕ ಜನರ ಮನಸ್ಸು ಪ್ರಸನ್ನತೆಯನ್ನು ಕಳೆದುಕೊಂಡು ಪ್ರಕ್ಷುಬ್ಧವಾಗುತ್ತಿದೆ. ಅಸಮಾಧಾನ, ಅತೃಪ್ತಿ, ನಿರಾಶೆ-ಹತಾಶೆಗಳು ಹೆಚ್ಚುತ್ತಿವೆ. ಮನಶಾಂತಿ-ನೆಮ್ಮದಿ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣಗಳೆಂದರೆ:
- ಆರ್ಥಿಕ ಸಮಸ್ಯೆಗಳು: ವರ್ಗದವರು ತಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಸಾಲ ಮಾಡಿ ತುಪ್ಪ ತಿನ್ನುತ್ತಾರೆ. ಅಗತ್ಯವಿದ್ದಾಗ ಹಣವಿಲ್ಲದೆ ಪರದಾಡುತ್ತಾರೆ. ಭೋಗಭಾಗ್ಯಗಳಿಗಾಗಿ ಹಾತೊರೆಯುತ್ತಾರೆ. ಕೊಳ್ಳುಬಾಕರಾಗುತ್ತಿದ್ದಾರೆ. ಆವಾಗ ಎಷ್ಟಿದ್ದರೂ ಸಾಲದು. ಇತರರೊಡನೆ ಹೋಲಿಕೆ ಮಾಡಿಕೊಂಡು, ಹಿಂಸೆ ಪಡುತ್ತಾರೆ, ಚಿಂತೆ ಮಾಡುತ್ತಾರೆ. ಸಂತೋಷ ವಂಚಿತರಾಗುತ್ತಾರೆ.
- ಕೌಟುಂಬಿಕ ಸಮಸ್ಯೆಗಳು: ದೊಡ್ಡ ಕುಟುಂಬಗಳು ಹೋಗಿ ಸಣ್ಣ ಅತಿಸಣ್ಣ ಕುಟುಂಬಗಳು ಹೆಚ್ಚುತ್ತಿವೆ. ಪ್ರೀತಿ ವಿಶ್ವಾಸದ ಬದುಕು, ಸ್ವಾರ್ಥ ಅಪನಂಬಿಕೆ, ಅಹಂ ಎಲ್ಲರಲ್ಲೂ ಹೆಚ್ಚುತ್ತಿದೆ. ಪರಸ್ಪರ ಸಹಕಾರ-ಪ್ರೀತಿ ಸೌಜನ್ಯತೆ ಕಡಿಮೆಯಾಗುತ್ತಿದೆ. ಸಂಬಂಧಗಳು ಶಿಥಿಲವಾಗುತ್ತಿವೆ. ದಾಂಪತ್ಯ ವಿರಸ, ಅತ್ತೆ-ಸೊಸೆ ಜಗಳ, ತಂದೆ ತಾಯಿ ಮಕ್ಕಳ ನಡುವೆ ಘರ್ಷಣೆ ಹೆಚ್ಚುತ್ತಿದೆ. ದಾಂಪತ್ಯ ವಿಚ್ಛೇದನಗಳು ಹೆಚ್ಚುತ್ತಿವೆ. ಕುಟುಂಬದ ಪಾತ್ರಗಳ ನಿರ್ವಹಣೆ-ಜವಾಬ್ದಾರಿಗಳಲ್ಲಿ ಒಮ್ಮತವಿಲ್ಲ.
- ಮಕ್ಕಳ ವಿದ್ಯಾಭ್ಯಾಸ: ಪರೀಕ್ಷೆಗಳಲ್ಲಿ ಮಕ್ಕಳ ಸಾಧನೆ (ಮುಖ್ಯವಾಗಿ ಅವರು ಪಡೆಯಬೇಕಾದ ಅಂಕಗಳು, ಅವರು ಆಯ್ಕೆ ಮಾಡಿಕೊಳ್ಳಬೇಕಾದ ಕೋರ್ಸಗಳ) ಬಗ್ಗೆ ತಂದೆ-ತಾಯಿಗಳ ಮೇಲೆ, ವಿದ್ಯಾರ್ಥಿಗಳ ಮೇಲೆ ಅತಿಯಾದ ಒತ್ತಡ ಬೀಳುತ್ತಿದೆ. ಮಕ್ಕಳ ಅದರಲ್ಲೂ ಹರೆಯದವರ ಮಾತು, ವರ್ತನೆ ಅವರ ಬೇಜವಾಬ್ದಾರಿತನ ತಂದೆ-ತಾಯಿಗಳ ಪಾಲಿಗೆ ನುಂಗಲಾರದ ತುತ್ತಾಗುತ್ತಿದೆ. ಮೊಬೈಲ್ ಚಟ ಇಂಟರ್ನೆಟ್ ದುರ್ಬಳಕೆ ಹೆಚ್ಚುತ್ತಿದೆ.
- ಉದ್ಯೋಗ ಸಮಸ್ಯೆಗಳು: ನಿರುದ್ಯೋಗ ,ಕಡಿಮೆ ಆದಾಯ ಹೆಚ್ಚು ಕೆಲಸ, ಉದ್ಯೋಗ ಸ್ಥಳದಲ್ಲಿ ನಡೆಯುವ ಪಕ್ಷಪಾತ-ಅಕ್ರಮಗಳು, ಸಹೋದ್ಯೋಗಿಗಳ-ಮೇಲಧಿಕಾರಿಗಳ ಕಿರಿಕಿರಿ-ಬಡ್ತಿ/ ವರ್ಗಾವಣೆಯ ತೊಂದರೆಗಳು, ವೃತ್ತಿ-ತೃಪ್ತಿ ಇಲ್ಲದಿರುವುದು.
- ಕೀಳರಿಮೆ-ಒಂಟಿತನಗಳು: ಇತರರೊಡನೆ ಹೋಲಿಸಿಕೊಳ್ಳುವುದು, ತಮ್ಮ ದೌರ್ಬಲ್ಯ, ನ್ಯೂನತೆಗಳ ಬಗ್ಗೆ ಅತಿಯಾದ ಚಿಂತೆ, ಒಂಟಿತನದ ಭಾವನೆಗಳು ಮಾತಾಡಲು-ಅನುಭವ ಹಂಚಿಕೊಳ್ಳಲು ಜನರಿಲ್ಲದಿರುವುದು ಮನಸ್ಸಿಗೆ ಬಹಳ ಹಿಂಸೆಯನ್ನುಂಟು ಮಾಡುತ್ತದೆ.
- ದುಷ್ಚಟ ದುರಭ್ಯಾಸಗಳು: ಆರೋಗ್ಯಕ್ಕೆ ಮಾರಕ ಎಂದು ಗೊತ್ತಿದ್ದರೂ ಧೂಮಪಾನ, ಮದ್ಯಪಾನ, ಮಾದಕ ವಸ್ತುಗಳ ಸೇವನೆ, ವಿವಾಹೇತರ ಲೈಂಗಿಕ ಸಂಬಂಧಗಳು, ಬೆಟ್ಟಿಂಗ್-ಜೂಜಾಟದಂತಹ ದುಷ್ಚಟ ಒಬ್ಬರಲ್ಲಿದ್ದರೆ ಸಾಕು, ಅದರ ದುಷ್ಪರಿಣಾಮ ಮನೆಯವರ ಮೇಲೆ ಆಗುವುದು. ಇಡೀ ಕುಟುಂಬ ಸಂಕಷ್ಟಕ್ಕೆ ಒಳಗಾಗುತ್ತದೆ. ಹಣದ ಅಪವ್ಯಯವಾಗುತ್ತದೆ.
- ಜೀವನಶೈಲಿ ಒತ್ತಡ ಸಂಬಂಧಿ ರೋಗಗಳು ಮತ್ತು ಅವುಗಳ ಚಿಕಿತ್ಸೆ: ಶೇ.50ರಿಂದ 60ರಷ್ಟು ಜನ ಡಯಾಬಿಟಿಸ್, ಬಿಪಿ ಕಾಯಿಲೆ, ಥೈರಾಯಿಡ್ ಸಮಸ್ಯೆ, ಮೂಳೆ ಕೀಲುಗಳ ಬೇನೆ, ಅಸಿಡಿಟಿ, ಅಲ್ಸರ್, ಕ್ಯಾನ್ಸರ್, ಖಿನ್ನತೆ-ಆತಂಕದಂತಹ ಕಾಯಿಲೆಗಳಿಗೆ ಒಳಗಾಗಿದ್ದಾರೆ. 70% ವೈದ್ಯಸೇವೆಗಳು ಖಾಸಗಿ ಕ್ಷೇತ್ರದ ವಶದಲ್ಲಿರುವುದರಿಂದ ಚಿಕಿತ್ಸೆ ದುಬಾರಿಯಾಗುತ್ತಿದೆ. ಸೂಕ್ತ ಸಮಯಕ್ಕೆ, ಸೂಕ್ತ ಚಿಕಿತ್ಸೆ ದೊರೆಯುವ ಖಾತ್ರಿ ಇಲ್ಲವಾಗಿದೆ. ಕೋವಿಡ್ ಸೋಂಕು ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ನಮ್ಮ ಆರೋಗ್ಯ ವ್ಯವಸ್ಥೆ ಕುಸಿಯುತ್ತಿದೆ.
ಮಾನಸಿಕ ಆರೋಗ್ಯ ವರ್ಧನೆಗೆ 15 ಸೂತ್ರಗಳು
- ಹಿತ-ಮಿತ-ಶಿಸ್ತಿನ ಆಹಾರ ಸೇವನೆ: ಬೆಳಗಿನ ಉಪಹಾರ ಮಧ್ಯಾಹ್ನ ರಾತ್ರಿಯ ಊಟದ ಸಮಯವನ್ನು ನಿಗದಿ ಮಾಡಿಕೊಳ್ಳಿ. ಹಣ್ಣು /ತರಕಾರಿ/ ಬೇಳೆ ಕಾಳುಗಳು/ ರಾಗಿ/ ಗೋಧಿ ಪದಾರ್ಥಗಳನ್ನು ಹೆಚ್ಚು ಸೇವಿಸಿ ಮಾಂಸಾಹಾರಿಗಳು ಮೀನು ಮೊಟ್ಟೆ ಕೋಳಿಮಾಂಸ ಸೇವಿಸಲಿ, ಕೆಂಪು ಮಾಂಸ ಕಡಿಮೆ ತಿನ್ನಲಿ ಜಂಕ್-ಫುಡ್ಸ್ ಬೇಡ. ಹೊರಗಡೆ ಆಹಾರ ಸೇವನೆ ತಗ್ಗಿಸಿ. ಮನೆ ಊಟಕ್ಕೆ ಬಲವಿರಲಿ. ಬಾಯಿರುಚಿಗಿಂತ, ಪೌಷ್ಟಿಕಾಂಶಗಳಿಗೆ ಗಮನಕೊಡಿ.
- ನಿದ್ರೆ: ಬೇಗ ಮಲಗಿ ಬೇಗ ಏಳಿ. ಆರೇಳು ಗಂಟೆಗಳ ಭಂಗವಿಲ್ಲದ ನಿದ್ರೆಮಾಡಿ. ಮಲಗುವ ಸ್ಥಳ ಸ್ವಚ್ಛ ವಾಗಿರಲಿ ಒಳ್ಳೆಯ ಗಾಳ್ಳಿ ಸಂಚಾರ ವಿರಲಿ.
- ಮೈಥುನ: ಒಬ್ಬ ಸಂಗಾತಿಯೊಂದಿಗೆ ಮಾತ್ರ ಲೈಂಗಿಕ ಸಂಬಂಧ ವಿರಲಿ. ವಿವಾಹೇತರ ಸಂಬಂಧ ಬೇಡ. ಅಸಹಜ ಲೈಂಗಿಕ ಕ್ರಿಯೆಯೂ ಬೇಡ. ಲೈಂಗಿಕ ಸಂಯಮ ಸ್ತ್ರೀ ಪುರುಷರಿಬ್ಬರಿಗೂ ಬೇಕು.
- ಷರತಿಲ್ಲದ ಪ್ರೀತಿ-ಸ್ನೇಹ-ವಿಶ್ವಾಸ: ಮನೆಯವರೊಡನೆ, ನೆರೆಹೊರೆ, ಬಂಧು-ಮಿತ್ರರು, ಸಹಪಾಠಿ- ಸಹೋದ್ಯೋಗಿಗಳೊಡನೆ ಪ್ರೀತಿ-ಸ್ನೇಹ ವಿಶ್ವಾಸದಿಂದಿರಿ. ಜೊತೆಯಾಗಿ ಮಾಡಿ ಸಂತೋಷಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ. ಹಬ್ಬ-ಹರಿದಿನಗಳನ್ನು ಒಟ್ಟಾಗಿ ಆಚರಿಸಿ. ಇತರರ ಒಳ್ಳೆಯ ನಡೆ-ನುಡಿಗಳನ್ನು ಮೆಚ್ಚಿ ಶ್ಲಾಘಿಸಿ. ಅನಗತ್ಯವಾಗಿ, ಬಹಿರಂಗವಾಗಿ ಟೀಕಿಸಬೇಡಿ. ನಿಮ್ಮ ಅನುಭವ-ಅನಿಸಿಕೆ ಭಾವನೆಗಳನ್ನು ಆತ್ಮೀಯರಲ್ಲಿ ಹಂಚಿಕೊಳ್ಳಿ.
- ಆಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕಿ: ನಿಮ್ಮ ಇತಿ ಮಿತಿಯಲ್ಲಿ ಆಸೆಗಳಿರಲಿ. ಲಭ್ಯವಿರುವುದರಲ್ಲಿ ತೃಪ್ತಿ ಇರಲಿ ಸರಳ ಜೀವನದಿಂದ ನೆಮ್ಮದಿ. ಅತಿಯಾದ ಭೋಗ-ಭಾಗ್ಯ ಆಡಂಬರ-ಪ್ರತಿಷ್ಠೆಗಳು ಸುಖಕ್ಕಿಂತ ದುಃಖವನ್ನು ತರುತ್ತವೆ.
- ಉದ್ಯೋಗ ತೃಪ್ತಿ ಇರಲಿ: ಆಯ್ದುಕೊಂಡ ಉದ್ಯೋಗವನ್ನು ಪ್ರೀತಿಯಿಂದ ಮಾಡಿ. ಉದ್ಯೋಗ ಸ್ಥಳದಲ್ಲಿ ಎಲ್ಲರೊಡನೆ ಹೊಂದಿಕೊಳ್ಳಿ. ಕಿರಿಕಿರಿ ಮಾಡುವವರಿಂದ ದೂರವಿರಿ. ಯಾವುದೇ ಉದ್ಯೋಗ ನಾವು ಸಮಾಜಕ್ಕೆ ಮಾಡುವ ಸೇವೆ ಎಂದು ಭಾವಿಸಿ.
- ವಾಸ್ತವಿಕ ಪ್ರಜ್ಞೆ ಇರಲಿ: ನಿಮ್ಮ ಬಲಾಬಲಗಳ ಅರಿವಿರಲಿ. ಕಲ್ಪನಾ ಲೋಕದಲ್ಲಿಯೇ ವಿಹರಿಸಬೇಡಿ, ಸಂಪನ್ಮೂಲಗಳ ಇತಿಮಿತಿಯ ಅರಿವಿರಲಿ.
- ಸ್ವಾಭಿಮಾನ-ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ: ಯಾವುದೇ ನೆಪ ಕಾರಣವನ್ನು ಒಡ್ಡಿ ಕೀಳರಿಮೆ ಬೇಡ. ಆದಷ್ಟೂ ಸ್ವಾವಲಂಬಿಯಾಗಿರಿ. ಪರಾವಲಂಬನೆ ಸ್ವಾಭಿಮಾನವನ್ನು ತಗ್ಗಿಸುತ್ತದೆ.
- ನಿತ್ಯಜೀವನದಲ್ಲಿ ಶಿಸ್ತು-ಅಚ್ಚುಕಟ್ಟುತನವನ್ನು ರೂಢಿಸಿಕೊಳ್ಳಿ: ಪ್ರತಿಯೊಂದು ಕೆಲಸ, ಚಟುವಟಿಕೆಯನ್ನು ಯೋಜನೆ ಮಾಡಿ. ಪ್ರತಿ ವಸ್ತುವನ್ನು ಆಯಾ ಸ್ಥಳದಲ್ಲಿಡಿ. ಎಲ್ಲೆಂದರೆ ಅಲ್ಲಿ ಎಸೆಯಬೇಡಿ. ಓರಣ ಮತ್ತು ಸ್ವಚ್ಛತೆ ಮನಸ್ಸಿಗೆ ಮುದ ಕೊಡುತ್ತದೆ. ಸಮಯದ ಸದ್ಬಳಕೆಯಾಗುತ್ತದೆ.
- ನಿತ್ಯ ಆರೋಗ್ಯಕರ ಹವ್ಯಾಸ-ಮನರಂಜನೆಗೆ: ಒಂದು ಗಂಟೆ ಮೀಸಲಿಡಿ. ಸಾಹಿತ್ಯ ಲಲಿತ ಕಲೆಗಳು, ಸೃಜನಶೀಲ ಚಟುವಟಿಕೆಗಳು ಮನಸ್ಸಿಗೆ ಸಂತೋಷವನ್ನು ಕೊಡುತ್ತವೆ.
- ನಿತ್ಯ ವ್ಯಾಯಾಮ-ವಾಕಿಂಗ್-ಜಾಗಿಂಗ್-ಹೊರಾಂಗಣ ಕ್ರೀಡೆ, ಸೈಕ್ಲಿಂಗ್, ಈಜು ಇತ್ಯಾದಿ ಶರೀರಕ್ಕೆ ಚಲನೆ ನೀಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
- ನಕಾರಾತ್ಮಕ ಘಟನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ: ಸೋಲು, ಕಷ್ಟ, ನಷ್ಟಗಳು, ಅಗಲಿಕೆ, ಸಾವು, ಅವಮಾನ, ಅಪಘಾತ, ಕೊರತೆ, ಅನಾರೋಗ್ಯಗಳುಂಟಾದಾಗ ಭಯಬೇಡ, ದುಃಖವು ಬೇಡ. ಬಂದು ಹೋಗುವ ಈ ಘಟನೆ ಅನುಭವಗಳಿಂದ ಪಾಠ ಕಲಿಯಿರಿ. ಚಿಂತೆ ಬೇಡ. ಜನಬಲ ಮತ್ತು ಆತ್ಮಬಲವನ್ನು ಹೆಚ್ಚಿಸಿಕೊಳ್ಳಿ.
- ಹಣಕಾಸಿನ ನಿರ್ವಹಣೆ: ಅನಗತ್ಯ ಖರ್ಚುಗಳನ್ನು ಮಾಡಬೇಡಿ. ಆದಾಯ ಖರ್ಚನ್ನು ಬ್ಯಾಲೆನ್ಸ್ ಮಾಡಿ. ಅನಿವಾರ್ಯವಾದಾಗ ಮಾತ್ರಸಾಲ ಮಾಡಿ. ಅದನ್ನು ತೀರಿಸುವ ವಿಧಾನವನ್ನು ಯೋಚಿಸಿ.
- ಅನಿವಾರ್ಯವಾದಾಗ ಮಾತ್ರ ಸ್ಪರ್ಧೆ ಮಾಡಿ: ಅನಗತ್ಯ ಸ್ಪರ್ಧೆ ಬೇಡ, ಎಲ್ಲರಿಗಿಂತ ಮೇಲು, ಎಲ್ಲರಿಗಿಂತ ಮುಂದಿರುವ ಅಗತ್ಯವಿಲ್ಲ. ಎಲ್ಲರ ಪ್ರಗತಿಗಾಗಿ ಶ್ರಮಿಸಿ.
- ದೇವರು-ಧರ್ಮದಲ್ಲಿ ನಂಬಿಕೆ ಇದ್ದರೆ, ನಿಮ್ಮ ಧಾರ್ಮಿಕ ಆಚರಣೆಗಳು ಸರಳವಾಗಿರಲಿ ಸತ್ಯ ಪ್ರಾಮಾಣಿಕತೆ ಸೇವೆಯಲ್ಲಿ ದೇವರನ್ನು ಕಾಣಿ.
ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ
drcrchandrashekhar@gmail.com