ಬೊಮ್ಮಾಯಿಗೆ ಪಕ್ಷದ ವಿದ್ಯಮಾನಗಳೇ ಸವಾಲು! (ನೇರ ನೋಟ)

- ಕೂಡ್ಲಿ ಗುರುರಾಜಕರ್ನಾಟಕದ ಬಿಜೆಪಿಯಲ್ಲಿ ಕಳೆದ ವಾರ ನಡೆದ ಮೂರು ಪ್ರಸಂಗಗಳು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿವೆ.
ಹೆಚ್ ಡಿ ದೇವೇಗೌಡ- ಸಿಎಂ ಬಸವರಾಜ ಬೊಮ್ಮಾಯಿ ಭೇಟಿ (ಸಂಗ್ರಹ ಚಿತ್ರ)
ಹೆಚ್ ಡಿ ದೇವೇಗೌಡ- ಸಿಎಂ ಬಸವರಾಜ ಬೊಮ್ಮಾಯಿ ಭೇಟಿ (ಸಂಗ್ರಹ ಚಿತ್ರ)

ಕರ್ನಾಟಕದ ಬಿಜೆಪಿಯಲ್ಲಿ ಕಳೆದ ವಾರ ನಡೆದ ಮೂರು ಪ್ರಸಂಗಗಳು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿವೆ.

ಸಚಿವ ಆನಂದ್ ಸಿಂಗ್ ಖಾತೆ ಬಗ್ಗೆ ಹೊರಹಾಕಿದ ಬೇಸರ, ನೂತನ ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿದ್ದಕ್ಕೆ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡರ ಬಲವಾದ ಆಕ್ಷೇಪ, ಮೂಡಿಗೆರೆಯ ಶಾಸಕ ಎಂ.ಪಿ.ಕುಮಾರಸ್ವಾಮಿ ತಮ್ಮ ಕ್ಷೇತ್ರಕ್ಕೆ ನೆರೆ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ಏಕಾಂಗಿಯಾಗಿ ಧರಣಿ ಕುಳಿತಿದ್ದು ಬಿಜೆಪಿಯಲ್ಲಿ ಮುಜುಗರ ಸೃಷ್ಟಿಸಿರುವುದು ನಿಜ. ಇವು ಸಣ್ಣ ಸಂಗತಿಗಳೇನಲ್ಲ.

ಸಚಿವ ಆನಂದ್ ಸಿಂಗ್ ತಮಗೆ ನೀಡಿದ ಪ್ರವಾಸೋದ್ಯಮ, ಪರಿಸರ, ಜೀವಶಾಸ್ತ್ರ  ಖಾತೆಯನ್ನು ತಿರಸ್ಕರಿಸಿರುವುದು ಟೀಕೆಗೆ ಗುರಿಯಾಗಿದೆ. ತಮಗೆ ಸಚಿವ ಸ್ಥಾನಕ್ಕಿಂತ ವಿಜಯನಗರ ಜಿಲ್ಲೆ ರಚನೆಯೇ ಮುಖ್ಯ ಎಂದಿದ್ದರು. ಆದರೆ, ಈಗ ಪ್ರಬಲ ಖಾತೆಗೆ ಪಟ್ಟು ಹಿಡಿದು ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ತಂದಿದ್ದಾರೆ. ಆನಂದ್ ಸಿಂಗ್ ಅವರ ನಡೆ ಪಕ್ಷ ವಿರೋಧಿ ಚಟುವಟಿಕೆಯಲ್ಲವೇ? ಹಾಗಿದ್ದರೆ, ಪಕ್ಷ ಅವರ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮವಾದರೂ ಏನು?

ಚುನಾವಣೆಯಲ್ಲಿ ಟಿಕೆಟ್ ಕೊಡುವಾಗ ಗೆಲ್ಲುವ ಸಾಮರ್ಥ್ಯವೇ ಮಾನದಂಡ ಎನ್ನುತ್ತವೆ ರಾಜಕೀಯ ಪಕ್ಷಗಳು. ಆಗ ಪಕ್ಷ ನಿಷ್ಠೆ, ಪಕ್ಷದಲ್ಲಿ ಹಿರಿತನ, ಪ್ರಾಮಾಣಿಕತೆ, ಸೇವಾ ಮನೋಭಾವ ಇವುಗಳು ಯಾವುದೇ ರಾಜಕೀಯಪಕ್ಷಕ್ಕೂ ಮುಖ್ಯವೇ ಆಗುವುದಿಲ್ಲ.

ಗೆಲ್ಲುವ ಸಾಮರ್ಥ್ಯ ಎಂದರೆ, ಜಾತಿ, ಹಣಬಲ, ತೋಳ್ಬಲವೇ ಆಗಿವೆ. ಹೀಗಾಗಿ, ಗೆಲ್ಲುವ ಸಾಮರ್ಥ್ಯದ ಈ ಮಾನದಂಡಗಳ ಮೇಲೆ ಟಿಕೆಟ್ ಪಡೆದು ಗೆದ್ದವರಿಂದ ಸೇವಾ ಮನೋಭಾವನೆ ನಿರೀಕ್ಷಿಸುವುದಾದರೂ ಹೇಗೆ? ಚುನಾವಣೆಯಲ್ಲಿ ಹಣ ಹೂಡಿ ಅವರು ಗೆದ್ದ ಮೇಲೆ ಸಂಪತ್ ಭರಿತ ಖಾತೆಗಾಗಿ ಅವರು ಕ್ಯಾತೆ ತೆಗೆಯದೇ ಸುಮ್ಮನಿರಬೇಕೆಂದು ಪಕ್ಷ  ಹೇಗೆ ನಿರೀಕ್ಷಿಸುತ್ತದೆ? ಸಮಸ್ಯೆಯ ಮೂಲ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲೇ ಇದೆ.

ಇನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಪ್ರತಿಭಟನೆ ವಿಚಾರ. ಕುಮಾರಸ್ವಾಮಿ ಆಡಳಿತ ಪಕ್ಷದ ಹಿರಿಯ ಶಾಸಕರು. ಸಚಿವ ಸ್ಥಾನಕ್ಕೂ ಆಕಾಂಕ್ಷಿ. ಕ್ಷೇತ್ರದಲ್ಲಿ ನೆರೆ ಪರಿಹಾರದ ಮನವಿಗೆ ಸರಕಾರದಲ್ಲಿ ಕಿಮ್ಮತ್ತಿಲ್ಲ ಎಂಬುದೇ ಅವರ ಸಾತ್ವಿಕ ಆಕ್ರೋಶಕ್ಕೆ ಕಾರಣ. ಆಡಳಿತ ಪಕ್ಷದ ಶಾಸಕರ ಸ್ಥಿತಿಯೇ ಹೀಗಾದರೆ ಇನ್ನು ಪ್ರತಿಪಕ್ಷದ ಶಾಸಕರ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸರಕಾರದ ಧೋರಣೆ ಹೇಗಿರಬಹುದು? ತಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಸರಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಅಸಮಾಧಾನ ಎಲ್ಲ ಪಕ್ಷಗಳ ಶಾಸಕರಲ್ಲೂ ಇದೆ. ಮುಂಬರುವ ದಿನಗಳಲ್ಲಿ ಇದು ಹೆಚ್ಚು ಸದ್ದು ಮಾಡುವ ಸಾಧ್ಯತೆಗಳು ದಟ್ಟವಾಗಿವೆ.

ಇನ್ನು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿರುವುದನ್ನು ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 

ಪ್ರೀತಂಗೌಡರಿಗೆ ಮಂತ್ರಿ ಸ್ಥಾನ ತಪ್ಪಿದ್ದಕ್ಕಿಂತ ಬೊಮ್ಮಾಯಿ-ದೇವೇಗೌಡರ ಭೇಟಿಯೇ ಹೆಚ್ಚು ಅಸಮಾಧಾನಕ್ಕೆ ಕಾರಣವಾಗಿದೆ. ಪ್ರೀತಂಗೌಡ ಹಾಸನದಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಭೇದಿಸಿ  ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಹಾಸನದಲ್ಲಿ ಜೆಡಿಎಸ್ ವಿರುದ್ಧತೊಡೆತಟ್ಟಿ ಬಿಜೆಪಿಯನ್ನು ತಳಮಟ್ಟದಲ್ಲಿ ಕಟ್ಟುವ ಪ್ರಯತ್ನ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕ ಬೊಮ್ಮಾಯಿ ಭೇಟಿ ಮಾಡಿದರೆ ಹಾಸನದಲ್ಲಿ ತಮ್ಮ ರಾಜಕೀಯ ಅಸ್ತಿತ್ವ ಏನಾಗಬೇಕು? ಎಂಬುದು ಪ್ರೀತಂಗೌಡರ ಪ್ರಶ್ನೆ.

ಆದರೆ, ಬಸವರಾಜ ಬೊಮ್ಮಾಯಿ ಅವರು "ಹೈಕಮಾಂಡ್ ಸೂಚನೆ ಮೇರೆಗೆ ದೇವೇಗೌಡರನ್ನು ಭೇಟಿ ಮಾಡಿದೆ. ಪ್ರೀತಂ ಗೌಡರಿಗೆ ತಿಳಿವಳಿಕೆ ಕಡಿಮೆ" ಎಂದಿರುವುದು ಮುಂದಿನ ರಾಜಕೀಯ ಬೆಳವಣಿಗೆಗೆ ದಿಕ್ಸೂಚಿಯೇ ಎಂಬ ಪ್ರಶ್ನೆ ಕಾಡುತ್ತದೆ. ರಾಜಕೀಯ ಪಕ್ಷಗಳಲ್ಲಿ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ಅಥವಾ ಸಮ್ಮಿಶ್ರ ಸರಕಾರದ ರಚನೆಯಾದಾಗ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆ ಪಕ್ಷಗಳ ಕಾರ್ಯಕರ್ತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಈ ಸಂಕಷ್ಟವನ್ನು ಉಭಯ ಪಕ್ಷಗಳ ಕಾರ್ಯಕರ್ತರು ಅನುಭವಿಸಿ ರೋಸಿ ಹೋಗಿದ್ದಾರೆ. ದೆಹಲಿಯಲ್ಲಿ ಕುಳಿತ ನಾಯಕರಿಗೆ ಸರಕಾರ ಉಳಿಸಿಕೊಳ್ಳುವ ಇಲ್ಲವೇ ಸರಕಾರ ರಚಿಸುವುದು ಮುಖ್ಯವಾಗುತ್ತದೆ ವಿನಾ ತಳಮಟ್ಟದ ಕಾರ್ಯಕರ್ತರ ಪರಿಸ್ಥಿತಿ ಅರ್ಥವಾದರೂ ಅವರಿಗೆ ಆ ಸಂದರ್ಭ ಗೌಣವಾಗಿರುತ್ತದೆ.

ಬೊಮ್ಮಾಯಿ ಸರಕಾರದ ಅಸ್ತಿತ್ವಕ್ಕೆ ಅಪಾಯ ಒದಗಿದರೆ ದೇವೇಗೌಡರ ಸಹಕಾರವಿರಲಿ ಎಂಬುದು ಬಿಜೆಪಿಯ ಒಂದು ವರ್ಗದಲ್ಲಿ ಚಿಂತನೆ ಇದೆ. ಈ ಹಿನ್ನೆಲೆಯಲ್ಲಿಯೇ ಬಸವರಾಜ ಬೊಮ್ಮಾಯಿ- ದೇವೇಗೌಡರ ಭೇಟಿಗೆ ಮಹತ್ವವಿದೆ. ಇದು ಪ್ರೀತಂಗೌಡರಿಗೆ ಅರ್ಥವಾಗಿಲ್ಲ ಎಂದೇನಿಲ್ಲ. ಆದರೆ, ಅಡ್ಜೆಸ್ಟ್ಮೆಂಟ್ ರಾಜಕಾರಣದಲ್ಲಿ ತಳಮಟ್ಟದ ಕಾರ್ಯಕರ್ತರ ಒಡಲಾಳದ ನೋವನ್ನು ಪ್ರೀತಂಗೌಡ ತೋಡಿಕೊಂಡಿದ್ದಾರೆ.

ಬೊಮ್ಮಾಯಿ ಮುಖ್ಯಮಂತ್ರಿ ಗಾದಿ ಏರುತ್ತಿದ್ದಂತೆ ಅವರ ಎದುರು ಸವಾಲುಗಳ ಸಾಲು ಬೆಳೆಯುತ್ತಿವೆ. ಆಡಳಿತದ ಸವಾಲು ಒಂದೆಡೆಯಾದರೆ, ಶಾಸಕಾಂಗ ಪಕ್ಷದಲ್ಲಿ ಉದ್ಭವಿಸಿರುವ ಅಸಮಾಧಾನವನ್ನು ಶಮನ ಮಾಡುವುದು ಮತ್ತೊಂದು ಸವಾಲು. ಬೊಮ್ಮಾಯಿ ರಾಜಕೀಯವಾಗಿ ಅನುಭವಿಗಳು. ಆಡಳಿತದ ಅನುಭವವೂ ಅಪಾರವಾಗಿದೆ. ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಿದರೆ ಆಡಳಿತದಲ್ಲಿ ಚುರುಕು, ಸುಧಾರಣೆಯನ್ನು ತರಬಲ್ಲ ಶಕ್ತಿ ಇದೆ. ಆಡಳಿತದಲ್ಲಿ ದೂರದೃಷ್ಟಿಯೂ ಅವರಲ್ಲಿದೆ.

ಶಾಸಕಾಂಗ ಪಕ್ಷದಲ್ಲಿ ಏಳುವ ಅತೃಪ್ತಿ, ಕೆಲವುಹಿರಿಯ ಸಚಿವರ ವಿವಾದಾತ್ಮಕ ಹೇಳಿಕೆಗಳು ಬೊಮ್ಮಾಯಿ ಅವರನ್ನು ಆಡಳಿತದ ಮೇಲೆ  ಕೇಂದ್ರೀಕರಿಸುವುದರಿಂದ ವಿಚಲಿತರನ್ನಾಗಿಸುತ್ತಿದೆ. ಶಾಸಕಾಂಗ ಪಕ್ಷದಲ್ಲಿ ಉದ್ಭವಿಸುವ ಬಿಕ್ಕಟ್ಟಾಗಲಿ, ಅತೃಪ್ತಿಯನ್ನಾಗಲಿ ಶಮನಗೊಳಿಸುವಷ್ಟು ಗಟ್ಟಿ ನಾಯಕತ್ವ ಬೊಮ್ಮಾಯಿ ಅವರಿಗೆ ಇನ್ನೂ ದಕ್ಕಿಲ್ಲ. ಆಗೆಲ್ಲಾ ಅವರು ಹೈಕಮಾಂಡ್ ಕಡೆ ನೋಡಲೇಬೇಕು. ಏಕೆಂದರೆ, ಅಂತಿಮವಾಗಿ ಬೊಮ್ಮಾಯಿ ಸರಕಾರ ಹೈಕಮಾಂಡ್ ಕೂಸೇ ಅಲ್ಲವೇ?

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com