ಹರಾಜು ಹಾಕುತ್ತಿದ್ದೇವೆ, ನಮ್ಮ ಹಕ್ಕನ್ನು, 50 ಸಾವಿರ ಒಂದು ಸಾರಿ, 1 ಲಕ್ಷ ಎರಡು ಸಾರಿ 1.5 ಲಕ್ಷ ಮೂರು ಸಾರಿ.. Sold! (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ಈ ಚುನಾವಣೆ ಬರುವುದು 6 ವರ್ಷಕ್ಕೆ ಒಮ್ಮೆ, ಈ ಸುಸಂದರ್ಭವನ್ನು ಕಳೆದುಕೊಳ್ಳಲು ಬಯಸದ ಗ್ರಾಮ ಪಂಚಾಯ್ತಿ ಸದಸ್ಯರು ಗೆಲ್ಲಿಸುವುದು ಯಾರು ಹೆಚ್ಚು ಹಣ ನೀಡುತ್ತಾರೋ ಅವರನ್ನು. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಮತ ಬೇಕು ಮತ, 
50 ಕೊಟ್ಟರೆ 
ನೂರು ಕೊಡುವೆ, 
ನೂರು ಕೊಟ್ಟರೆ, 
ನೂರೈವತ್ತು ಕೊಡುವೆ, 
ಹೇಗೆ ಬೇಕಾದರೂ ಸರಿ ವ್ಯಾಪಾರಕ್ಕೆ ಇಳಿಯುವೆ.

ಬನ್ನಿ!!! ಹರಾಜು ಹಾಕುತ್ತಿದ್ದೇವೆ ನಮ್ಮ ಹಕ್ಕನ್ನು, ನಮ್ಮ ಪ್ರಜಾ ಪ್ರಭುತ್ವದ ಮೌಲ್ಯಗಳನ್ನು. ಒಂದು ಕ್ಷೇತ್ರದಲ್ಲಿ ಸರಿ ಸುಮಾರು ಇರುವುದು 2 ರಿಂದ 5 ಸಾವಿರ ಮತಸಂಖ್ಯೆ ಅಷ್ಟೇ. ಆದರೆ  ಒಬ್ಬೊಬ್ಬರಿಂದಲೂ ಕಕ್ಕಿಸುವುದು ಬರೋಬ್ಬರಿ 30 ರಿಂದ 40 ಕೋಟಿ!! ಹರಾಜು ಹಾಕುತ್ತಿದ್ದೇವೆ ನಮ್ಮ ಹಕ್ಕನ್ನು, ಸಂವಿಧಾನ ನಮಗೆ ನೀಡಿರುವ ಗೌರವವನ್ನು. 

ಹೀಗೆ ಬೋರ್ಡ್ ಹಾಕದೆ ವ್ಯಾಪಾರಕ್ಕೆ ಇಳಿದಿರುವುದು ವಿಧಾನ ಪರಿಷತ್ ಚುನಾವಣೆಯಲ್ಲಿ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ಬರುವ 25 ವಿಧಾನ ಪರಿಷತ್ ಕ್ಷೇತ್ರಗಳಿಗೆ ಇದೆ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ.

ಒಟ್ಟು 75 ಸೀಟ್ ಇರುವ ಕರ್ನಾಟಕದ ಮೇಲ್ಮನೆಯಲ್ಲಿ ಇದೆ ಜನವರಿ 5ಕ್ಕೆ 20 ಕ್ಷೇತ್ರಗಳು ತೆರವುಗೊಳ್ಳುತ್ತವೆ ಕೆಲವು ಜಿಲ್ಲೆಯಲ್ಲಿ ಎರಡು ಕ್ಷೇತ್ರ ಇರುವುದರಿಂದ ಸಂಖ್ಯೆ 25 ಆಗಿದೆ. ಈಗ ಜನವರಿ 5ರ ಮುಂಚೆ ಚುನಾವಣೆ ನಡೆದು ಫಲಿತಾಂಶ ಘೋಷಣೆ ಆಗಬೇಕು ಹಾಗಾಗಿ ಈ ಚುನಾವಣೆ ಪ್ರಕ್ರಿಯೆ. ಗ್ರಾಮ ಪಂಚಾಯ್ತಿ ಸದಸ್ಯರು ಮತ ನೀಡಿ ಗೆಲ್ಲಿಸುವ ಚುನಾವಣೆ ಇದು.

ಒಂದು ಕ್ಷೇತ್ರದಲ್ಲಿ ಮೂರು ಸಾವಿರದಿಂದ ಇದು ಸಾವಿರ ಗ್ರಾಮ ಪಂಚಾಯ್ತಿ ಸದಸ್ಯರು ಜಿಲ್ಲಾ ಅನುಸಾರ ಇರುವರು. ಡಿಸೆಂಬರ್ 10 ರಂದು ಇವರು ನೀಡುವ ಅಮೂಲ್ಯ ಮತಗಳು ಯಾರು ಮೇಲ್ಮನೆಗೆ ಹೋಗುವರು ಎಂದು ನಿರ್ಧರಿಸುತ್ತವೆ. 

ಈ ಚುನಾವಣೆ ಬರುವುದು 6 ವರ್ಷಕ್ಕೆ ಒಮ್ಮೆ. ಈ ಸುಸಂದರ್ಭವನ್ನು ಕಳೆದುಕೊಳ್ಳಲು ಬಯಸದ ಗ್ರಾಮ ಪಂಚಾಯ್ತಿ ಸದಸ್ಯರು ಗೆಲ್ಲಿಸುವುದು ಯಾರು ಹೆಚ್ಚು ಹಣ ನೀಡುತ್ತಾರೋ ಅವರನ್ನು. 

ಕೆಲವು ಕ್ಷೇತ್ರಗಳಲ್ಲಿ ಒಂದು ಮತಕ್ಕೆ ಐವತ್ತು ಸಾವಿರವಾದರೆ, ಇನ್ನು ಕೆಲವು ಕಡೆ ಒಂದು ಲಕ್ಷ. ಜೆಡಿಎಸ್ 50 ಸಾವಿರ ನೀಡಿದರೆ, ಕಾಂಗ್ರೆಸ್ 1 ಲಕ್ಷ, ಇನ್ನು ಬಿಜೆಪಿ ಒಂದು ಕಾಲಿಂದ ಒಂದುವರೆ ಇರಬಹುದು, ಅದು ಕ್ಷೇತ್ರಾನುಸರ ನಿರ್ಧಾರವಾಗುವುದು. ಒಟ್ಟಿನಲ್ಲಿ ಮೂರೂ ಪಕ್ಷಗಳು ಒಗ್ಗೂಡಿ ಒಂದು ಕ್ಷೇತ್ರದ ಗ್ರಾಮ ಪಂಚಾಯ್ತಿ ಸದಸ್ಯರಿಗೆ ನೀಡಲು ಖರ್ಚು ಮಾಡುವ ಹಣ 120 ಕೋಟಿ ರೂಪಾಯಿ. 

ಒಂದು ರಸ್ತೆ ನಿರ್ಮಾಣವಾಗಲಿಲ್ಲ, ಯಾರ ಮನೆಯು ಬೆಳಗಲಿಲ್ಲ, ಒಂದು ಆಸ್ಪತ್ರೆ ಬರಲಿಲ್ಲ, ಒಬ್ಬ ರೈತನಿಗೆ ಪರಿಹಾರ ಸಿಗಲಿಲ್ಲ, ಒಂದು ಶಾಲೆ ಕಟ್ಟಲಿಲ್ಲ, ಓರ್ವ ಬಡ ವಿದ್ಯಾರ್ಥಿಗೆ ಸ್ಕಾಲರ್ಶಿಪ್ ಸಿಗಲಿಲ್ಲ, ಓರ್ವ ಅರ್ಹನಿಗೆ ಉದ್ಯೋಗ ಸಿಗಲಿಲ್ಲ, ಒಂದು ಫ್ಯಾಕ್ಟರಿಯು ನಿರ್ಮಾಣವಾಗಲಿಲ್ಲ. ಇಷ್ಟೆಲ್ಲ ಈ ಹಣದಲ್ಲಿ ಮಾಡಬಹುದಿತ್ತು, ಆದರೆ ಅದು ಸೇರುತ್ತಿರುವುದು ಮಾತ್ರ ಗ್ರಾಮ ಪಂಚಾಯ್ತಿ ಸದಸ್ಯರಿಗೆ.

ಜಾಗ ಅಡವಿಟ್ಟು ಚುನಾವಣೆ ಮಾಡುತ್ತಿರುವ ಸದಸ್ಯರು

ಕೆಲ ಅಭ್ಯರ್ಥಿಗಳು ಸಾಲ ಮಾಡಿದರೆ ಇನ್ನು ಕೆಲವರು, ಜಾಗವನ್ನು ಅಡವಿಡುತ್ತಿದ್ದಾರೆ, ಇನ್ನು ಕೆಲವರು ಜಾಗ ಮಾರಿ ಚುನಾವಣೆ ಮಾಡಿದರೆ, ಮತ್ತೆ ಕೆಲವರು 5-10 ಎಂದು ಟೋಕನ್ ಪಡೆಯುತ್ತಿದ್ದಾರೆ.

30 ರಿಂದ 50 ಕೋಟಿ ಖರ್ಚು ಮಾಡಿ ಗೆದ್ದು ಮೇಲ್ಮನೆಗೆ ಹೋಗುವ ಸದಸ್ಯರು ಈ ಹಣವನ್ನು ಮರು ಪಾವತಿ ಮಾಡಿಕೊಳ್ಳುವುದಾದರು ಹೇಗೆ ಎಂಬುದೇ ಕಾಡುವ ಯಕ್ಷ ಪ್ರಶ್ನೆ.

ಕ್ಷೇತ್ರಕ್ಕೆ ವಿನಿಯೋಗಿಸಲು ವರ್ಷಕ್ಕೆ 50 ಲಕ್ಷದಂತೆ ಸರ್ಕಾರ ನೀಡುವ ಅನುದಾನ, ಇನ್ನು ತಿಂಗಳಿಗೆ 1 ಲಕ್ಷದಷ್ಟು ಸಂಬಳ, ಒಟ್ಟುಗೂಡಿಸಿದರು 11 ಕೋಟಿ ದಾಟುವುದಿಲ್ಲ. ಇನ್ನು ಬರುವ ಆದಯಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಖರ್ಚು ಮಾಡಿ ಹೇಗೆ ತಮ್ಮ ಹೂಡಿಕೆಯನ್ನು ವಾಪಸ್ ಪಡೆಯುವರೋ, ಅದೇನು ಕೊಡುಗೆ ನೀಡುವರೋ ಎನ್ನುವುದು ಕಾದು ನೋಡಬೇಕಿದೆ. 

ಜ್ಞಾನವೆಂಬ ಯಜ್ಞದಲ್ಲಿ ಸಮಿಧೇಯಂತೆ ಉರಿಯುವ

ಮೇಲ್ಮನೆ ಅಂದರೆ ಬಲಿಷ್ಠರ ಮನೆ ಎಂದೇ ಖ್ಯಾತಿ, ಜನರಿಂದ ನೇರವಾಗಿ ಆಯ್ಕೆಯಾಗಿ ಬರುವ ಸಾಮರ್ಥ್ಯ ಇಲ್ಲದೆ ಇರುವ 
ಆದರೆ ಪರಿಷತ್ತಿಗೆ ಬೌದ್ಧಿಕವಾಗಿ ಅಗತ್ಯ ಇರುವ ಸದಸ್ಯರು ಸೇರಲಿ ಎಂದೇ ಸೃಷ್ಟಿಯಾದ ವ್ಯವಸ್ಥೆ ಇದು. ಈಗ ಬುದ್ಧಿ ಶಕ್ತಿ ಇರುವವರು ಇಲ್ಲಿಗೆ ಬೇಡ, ಕಾಂಚಾಣ ಶಕ್ತಿ ಇದ್ದರೆ ಸಾಕು. 

ಇಂಥಹ ಘನ ವ್ಯವಸ್ಥೆಯನ್ನು ಕೇವಲ ಧನಕ್ಕಾಗಿ ಬಳಸುವ ಪ್ರಕ್ರಿಯೆಯನ್ನು ನೋಡಿದರೆ, ಕೆಲವು ರಾಜ್ಯಗಳಲ್ಲಿ ಮೇಲ್ಮನೆ ವ್ಯವಸ್ಥೆಯೇ ಇಲ್ಲದಿರುವುದನ್ನು ಕಂಡಾಗ, ಅದೇ ಲೇಸು ಎನಿಸುತ್ತದೆ.    

ಸಿದ್ದು ನೀರಿಗಿಳಿದರೆ ಡಿಕೆ ಏರಿ ಏರುತ್ತಾರೆ!!

ಮುಂದಿನ ವಿಧಾನಸಭೆ ಚುನಾವಣೆಯನ್ನು ಕಾಂಗ್ರೆಸ್ ಹೇಗೆ ನಡೆಸುವುದು ಎಂಬ ನಕ್ಷೆಯಂತೆ ಇದೆ ಈ ಸ್ಥಳೀಯ ಚುನಾವಣೆ.

ಪ್ರತಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನೀರಿಗೆ ಇಳಿದರೆ, ಡಿಕೆ ಏರಿ ಹತ್ತುತ್ತಿದ್ದಾರೆ. ನಾಯಕರು ಮಾತ್ರ ಎಲ್ಲಿ ಇಳಿಯಬೇಕು ಎಂದು ತಿಳಿಯದೆ ಕಂಗಾಲಾಗಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ತನ್ನದೇ ಪರ್ಯಾಯ ನಾಯಕರನ್ನು ಸೃಷ್ಟಿಸುತ್ತಾ, ಕಾಂಗ್ರೆಸ್ ಸೋತಿರುವ ಕಡೆ ಮಾಜಿ ಶಾಸಕರು ಸಕ್ರಿಯರಾಗಿದ್ದರೂ ಬೇರೆ ನಾಯಕರನ್ನು ಉತ್ತೇಜಿಸುವುದು ಡಿಕೆ ಶಿವಕುಮಾರ್ ತಂತ್ರವಾದರೆ, ಅಲ್ಲಿನ ಪ್ರಸಕ್ತ ನಾಯಕರನ್ನು ಡಿಕೆ ಶಿವಕುಮಾರ್ ವಿರುದ್ಧ ಬಡಿದೆಬ್ಬಿಸುವುದು ಸಿದ್ದು ಪ್ರತಿತಂತ್ರವಾಗಿದೆ. ಹೀಗೆ ಜಟಾಪಟಿ ನಡೆಸುತ್ತಾ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಾಸಿಗೆ ಹಾಸಿ ಕೊಡುತ್ತಿರುವ ನಾಯಕರ ರಣನೀತಿಯನ್ನು ಕಾಂಗ್ರೆಸ್ ಪಾರ್ಟಿಯೇ ಮೆಚ್ಚಬೇಕು

ಕಾಂಗ್ರೆಸ್ ಬಿಜೆಪಿ ಮಾತ್ರ ಮೈತ್ರಿ ಆಗುತ್ತಿದೆ ಎಂದುಕೊಂಡರೆ, ನಾನು ಯಾರಿಗೂ ಕಡಿಮೆ ಇಲ್ಲ ಎಂದು ಜೆಡಿಎಸ್ ಕೂಡ ಮೂಗು ತೂರಿಸಿದೆ. 

ಸದ್ಯ ಮೇಲ್ಮನೆಯಲ್ಲಿ ಅಧಿಪತ್ಯ ಸಾಧಿಸಬೇಕಾದರೆ ಬಿಜೆಪಿ ಈ ಬಾರಿ 25 ರಲ್ಲಿ 13 ಕ್ಷೇತ್ರದಲ್ಲಿ ಜಯಗಳಿಸಲೇಬೇಕು. ಸದ್ಯಕ್ಕೆ ಎರಡು ಕ್ಷೇತ್ರಗಳಿರುವ ಜಿಲ್ಲೆಗಳಲ್ಲಿ, ಬಿಜೆಪಿ-ಕಾಂಗ್ರೆಸ್ ಒಪ್ಪಂದ ಮಾಡಿಕೊಂಡು ಐದು ಬಿಜೆಪಿಗೆ ಐದು ಕಾಂಗ್ರೆಸ್ಗೆ ಎಂದು ಈಗಾಗಲೇ ನಿರ್ಧರಿಸಿದೆ. ತಾಂತ್ರಿಕವಾಗಿ ಪೈಪೋಟಿ ಏನಿದ್ದರೂ ಉಳಿದ 15 ಕ್ಷೇತ್ರಕ್ಕೆ ಮಾತ್ರ. ಅದರಲ್ಲಿ 6 ರಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಿದ್ದು ಈಗ ಹೊಸ ತಂತ್ರ ರೂಪಿಸಿದೆ. ಇನ್ನು ಮೊನ್ನೆಯಷ್ಟೇ ಜೆಡಿಎಸ್ ನಮಗೆ ಬೆಂಬಲ ನೀಡಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿದ ಯಡಿಯೂರಪ್ಪನವರು ಹೆಚ್ ಡಿ ಕುಮಾರಸ್ವಾಮಿ ಅವರೊಡನೆ ಈಗಾಗಲೇ ಮೈತ್ರಿಯ ಬಗ್ಗೆ ಒಂದೆರಡು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು 6 ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೆ ಜಟಾಪಟಿ ಇರುವ ಕೋಲಾರ ಮತ್ತು ಮೈಸೂರು ಕ್ಷೇತ್ರಗಳಲ್ಲಿ ನವೆಂಬರ್ 26 ರ ಮುಂಜಾನೆಯಂದು ಅಭ್ಯರ್ಥಿಯಿಂದ ನಾಮಪತ್ರ ಹಿಂಪಡೆಯುವಂತೆ ಬಿಎಸ್ ವೈ ಒತ್ತಡ ಹಾಕಿದ್ದರು. ಆದರೆ ಅಲ್ಲಿನ ಸಂಸದರ ಹಠದಿಂದ ಅದು ಸಫಲವಾಗಲಿಲ್ಲ.

ದೆಹಲಿಯಲ್ಲಿ ಹಾಲಿ ಮಾಜಿ ಪ್ರಧಾನಿ ಭೇಟಿ, ಇಲ್ಲಿ ಬಿಜೆಪಿ ನಾಯಕರಿಗೆ ಹೈ ಕಮಾಂಡ್ ನಿಂದ ಕರೆಯ ಭೀತಿ.

ಇನ್ನೇನು 10 ದಿನ ಬಾಕಿ ಇರುವ ಎಂಎಲ್ ಸಿ ಚುನಾವಣೆ ಮಧ್ಯೆ ಮೋದಿ ಮತ್ತು ದೇವೇಗೌಡರ ಭೇಟಿ ಬಿಜೆಪಿ ನಾಯಕರಲ್ಲಿ ಕುತೂಹಲ ಮೂಡಿಸಿದೆ. ಇನ್ನು ಖಾಸಗಿ ವಾಹಿನಿಗಳು ಕರ್ನಾಟಕದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಯುಕ್ತವೇ ಇವರು ಭೇಟಿ ಮಾಡಿದ್ದಾರೆ, ಮೋದಿ ಮತ್ತು ದೇವೇಗೌಡರಿಗೆ ಎಂಎಲ್ಸಿ ಚುನಾವಣೆಯನ್ನ ದೆಹಲಿಯಲ್ಲಿ ನಿರ್ಧರಿಸುವಷ್ಟು ಪುರ್ಸೊತ್ತು ಇದೆ ಅನ್ನುವ ಸುದ್ದಿ, ಸದ್ಯಕ್ಕೆ ಬಿಜೆಪಿ ನಾಯಕರಿಗೆ ಶಸ್ತ್ರ ಕೆಳಗಿಳಿಸುವಂತೆ ಮಾಡಿದೆ. 

ಮಂಡ್ಯ, ಕೋಲಾರ, ಮೈಸೂರು, ಹಾಸನ, ಬೆಂಗಳೂರು ಗ್ರಾಮಾಂತರ, ತುಮಕೂರು, ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುವುದಾ? ಎಂಬ ಪ್ರಶ್ನೆ ಈ ಭೇಟಿ ಸೃಷ್ಟಿಸಿದೆ. ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಮಂಡ್ಯದಲ್ಲಿ ಬಿಜೆಪಿಯ ಪ್ರಾಬಲ್ಯ ಇಲ್ಲದೇ ಇದ್ದರೂ ಉಳಿದ ಕ್ಷೇತ್ರಗಳಾದ ಕೋಲಾರ, ಮೈಸೂರು, ತುಮಕೂರು ಇಲ್ಲಿ ಏನಾದೀತು ಎನ್ನುವ ಭೀತಿ ಬಿಜೆಪಿಗರದ್ದು

ದೆಹಲಿ ನಾಯಕರು ಬೇಕಾಗಿದ್ದಾರೆ, "ವಾಂಟೆಡ್ ಕಲಾಂ".

ದೆಹಲಿಯಿಂದ ಕರೆ ಬಂದರೆ ಏನು ಮಾಡುವುದು?, ಸದ್ಯ ಚುನಾವಣೆ ಕೆಲಸವನ್ನು ಎರಡು ದಿನ ನಿಲ್ಲಿಸೋಣ ಎಂದು ಬಿಜೆಪಿ ಸಚಿವರು ಕಾದು ಕುಳಿತಿರುವುದು ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಕೋಲಾರ, ತುಮಕೂರು, ಮೈಸೂರಲ್ಲಿ ಕ್ಷೇತ್ರಗಳಲ್ಲಿ ನಾಲ್ಕೈದು ಕೋಟಿ ಖರ್ಚು ಮಾಡಿ ಮುಂದೇನು ಗತಿ ಎಂದು ಸೂರ್ಯನನ್ನು ನೋಡುತ್ತಾ ಕೂತಿರುವ ಅಭ್ಯರ್ಥಿಗಳಿಗೆ, ಇಲ್ಲಿ ಒಪ್ಪಂದ ರಾಜಕಾರಣ ಇದೆಯೋ ಇಲ್ಲವೋ ಎಂದು ಸ್ಪಸ್ಪೀಕರಣ ನೀಡುವ ದೆಹಲಿ ನಾಯಕರ ಅಗತ್ಯವಿದೆ. 

ನಾಮಿನೇಷನ್ ಹಿಂಪಡೆಯುವ ಕೊನೆ ದಿನಾಂಕದ ಮುಂಚೆ ಆದರೂ ದೆಹಲಿಯಿಂದ ಹೇಳಿದ್ದರೆ ಒಳಿತಿತ್ತು. ಈಗ ಒಂದು ವೇಳೆ ಜೆಡಿಎಸ್ಗೆ ಬೆಂಬಲ ನೀಡಿ ಎಂದರೆ ಏನು ಮಾಡುವುದು ಎಂದು ಬಿಜೆಪಿ ನಾಯಕರು ಒಂದೇ ಕಣ್ಣಲ್ಲಿ ಅಳುತ್ತಿದ್ದಾರೆ.

ಸಹೋದರರ ಸವಾಲ್!!!

ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ್ ಹಟ್ಟಿಹೋಳಿ, ಪಕ್ಷೇತರ ಅಭ್ಯರ್ಥಿಯಾಗಿ ರಮೇಶ್ ಜಾರಕಿಹೊಳಿ ಅವರ ಸಹೋದರ ಲಕ್ಕನ್ ಜಾರಕಿಹೊಳಿ ಕಣಕ್ಕೆ ಇಳಿದಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಸಮರ ಸಾರಲು ಜಾರಕಿಹೊಳಿ ಪರಿವಾರ ಕಾಲಿಟ್ಟಿರುವುದು ಒಂದು ಕಡೆ, ಇನ್ನು ಯಾವ ಕಾಂಗ್ರೆಸ್ಸ್ ನಾಯಕನ ಒಪ್ಪಿಗೆ ಇಲ್ಲದಿದ್ದರೂ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನಿಗೆ ಟಿಕೆಟ್ ನೀಡಿರುವ ಡಿಕೆ ಶಿವಕುಮಾರ್ ನಡೆ ಮತ್ತೊಂದು ಕಡೆ, ಈ ಧೋರಣೆ ವಿರೋಧಿಸಿ ಲಕ್ಕನ್ ಜಾರಕಿಹೊಳಿಗೆ ಹಿತ್ತಲಿಂದ ಬೆಂಬಲ ನೀಡುತ್ತಿರುವ ಬೆಳಗಾವಿ ಕಾಂಗ್ರೆಸ್ಸ್ ನಾಯಕರು ಮಗದೊಂದು ಕಡೆ. 

ಇಷ್ಟೆಲ್ಲ ಗೊಂದಲಗಳ ನಡುವೆ ಎಲ್ಲಾ ಪಕ್ಷಗಳು ಚುನಾವಣೆ ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಮಾಣ ಮಾಡುವ ಪರಿ ನೋಡುವುದೇ ಒಂದು ಸೋಜಿಗ! 

ಸ್ವಾತಿ ಚಂದ್ರಶೇಖರ್

swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com