ಕೀಳರಿಮೆಯಿಂದ ಹೊರಬರುವುದು ಹೇಗೆ? (ಚಿತ್ತ ಮಂದಿರ)

ಅನೇಕರಿಗೆ ತಮ್ಮ ಬಗ್ಗೆ ಗೌರವ, ಅಭಿಮಾನವಿರುವುದಿಲ್ಲ. ಇತರರೊಡನೆ ತಮ್ಮನ್ನು ಹೋಲಿಸಿಕೊಂಡು, ಕೀಳರಿಮೆಯನ್ನಿಟ್ಟು ಕೊಂಡಿರುತ್ತಾರೆ. ಮುಖೇಡಿಗಳಾಗುತ್ತಾರೆ. ತಲೆ ತಗ್ಗಿಸಿಕೊಂಡಿರುತ್ತಾರೆ. ಸ್ಪರ್ಧಿಸಲು ಹಿಂಜರಿಯುತ್ತಾರೆ. ಕಾರಣಗಳು ಹಲವಾರು.
ಕೀಳರಿಮೆ( ಸಾಂಕೇತಿಕ ಚಿತ್ರ)
ಕೀಳರಿಮೆ( ಸಾಂಕೇತಿಕ ಚಿತ್ರ)

ಅನೇಕರಿಗೆ ತಮ್ಮ ಬಗ್ಗೆ ಗೌರವ, ಅಭಿಮಾನವಿರುವುದಿಲ್ಲ. ಇತರರೊಡನೆ ತಮ್ಮನ್ನು ಹೋಲಿಸಿಕೊಂಡು, ಕೀಳರಿಮೆಯನ್ನಿಟ್ಟು ಕೊಂಡಿರುತ್ತಾರೆ. ಮುಖೇಡಿಗಳಾಗುತ್ತಾರೆ. ತಲೆ ತಗ್ಗಿಸಿಕೊಂಡಿರುತ್ತಾರೆ. ಸ್ಪರ್ಧಿಸಲು ಹಿಂಜರಿಯುತ್ತಾರೆ. ಕಾರಣಗಳು ಹಲವಾರು.

  • ನನ್ನ ಮೈಬಣ್ಣ ಕಪ್ಪು ನೋಡಲು ನಾನು ಅಂದವಾಗಿಲ್ಲ.
  • ನಾನು ಸಣ್ಣಗಿದ್ದೇನೆ. ನರಪೇತಲ. ನಾನು ದಪ್ಪಗಿದ್ದೇನೆ.
  • ನನ್ನ ದೈಹಿಕಶಕ್ತಿ- ಸ್ನಾಯುಗಳು ಬಲುಕಡಿಮೆ.
  • ನಾನು ಕೆಳವರ್ಗ – ಜಾತಿಗೆ ಸೇರಿದವನು.
  • ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದವನು.
  • ನನ್ನ ತಂದೆತಾಯಿಗಳು ಬಡವರು. ನನ್ನ ಕುಟುಂಬಕ್ಕೆ ಸ್ಥಾನಮಾನವಿಲ್ಲ.
  • ನಾನು ಹೆಚ್ಚು ಓದಿಲ್ಲ. ಬುದ್ಧಿವಂತನಲ್ಲ
  • ನಾನು ಒಳ್ಳೆಯ ಉದ್ಯೋಗದಲ್ಲಿಲ್ಲ.
  • ನನಗೆ ಎಲ್ಲರೂ ಮೆಚ್ಚುವ ಹಾಗೆ ಅಲಂಕಾರ ಮಾಡಿಕೊಳ್ಳಲು ಬರುವುದಿಲ್ಲ .
  • ನನ್ನ ಧ್ವನಿ, ಮಾತಾಡುವ ರೀತಿ ಚೆನ್ನಾಗಿಲ್ಲ.
  • ನನಗೆ ಇಂಗ್ಲೀಷಿನಲ್ಲಿ ಮಾತನಾಡಲು ಬರುವುದಿಲ್ಲ. 
  • ನನ್ನಲ್ಲಿ ಯಾವ ಪ್ರತಿಭೆಯೂ ಇಲ್ಲ .
  • ನನಗೆ ವಿಷಯಗಳು ಬೇಗ ಅರ್ಥವಾಗುವುದಿಲ್ಲ. ನೆನಪಿನ ಶಕ್ತಿ ಕಮ್ಮಿ. 
  • ನನಗೆ ವ್ಯವಹಾರ ಜ್ಞಾನ ಕಡಿಮೆ. ಬೇರೆಯವರಿಂದ ಸುಲಭವಾಗಿ ಮೋಸ ಹೋಗುತ್ತೇನೆ. 
  • ಧೈರ್ಯವಿಲ್ಲ. ನಾನೊಬ್ಬ ಅಂಜುಬುರುಕ. ಒಬ್ಬನೇ ಪ್ರಯಾಣ ಮಾಡಲಾರೆ, ದೂರದ ಊರಿಗೆ ಹೋಗಿ ಬರಲಾರೆ.
  • ಯಾವ ಸಂದರ್ಭದಲ್ಲಿ, ಯಾರೊಡನೆ ಹೇಗೆ ನಡೆದುಕೊಳ್ಳಬೇಕೆಂದು ತಿಳಿಯುವುದಿಲ್ಲ, ಇತ್ಯಾದಿ ಇತ್ಯಾದಿ.

 ನಮ್ಮ ಬಗ್ಗೆ ನಾವೇ ಗೌರವ ಇಟ್ಟುಕೊಳ್ಳದಿದ್ದರೆ ಹೇಗೆ? 

ಸ್ವಾಭಿಮಾನ ನಮ್ಮ ಹಕ್ಕು ಹಾಗೂ ಧರ್ಮ

ನಾವೆಲ್ಲ ಪ್ರಕೃತಿಯ ಸೃಷ್ಟಿ. ಯಾವ ತಂದೆ ತಾಯಿ ನಮ್ಮ ಜನ್ಮಕ್ಕೆ ಕಾರಣರಾಗುತ್ತಾರೆ, ನಾವು ಎಲ್ಲಿ ಯಾವ ಕುಲದಲ್ಲಿ ಹುಟ್ಟುತ್ತೇವೆ, ನಮ್ಮ ಬಣ್ಣ ಹೇಗಿರುತ್ತದೆ, ನಮ್ಮ ಶರೀರದ ರೂಪುರೇಖೆ ಹೇಗಿರುತ್ತದೆ ಎಂಬುದರ ಮೇಲೆ ನಮ್ಮ ಹತೋಟಿ ಇಲ್ಲ. ಪ್ರಕೃತಿ ಇತ್ತ ನಮ್ಮ ಶರೀರ, ಹಿನ್ನೆಲೆಯನ್ನು ಗೌರವದಿಂದ ಒಪ್ಪಿಕೊಳ್ಳೋಣ. ನಮ್ಮ ಪ್ರತಿ ಜೀವಕೋಶದಲ್ಲಿರುವ 23 ವರ್ಣತಂತುಗಳ ಮೇಲಿರುವ 20000 ವಂಶವಾಹಿನಿಗಳು ನಮ್ಮ ದೈಹಿಕ – ಮಾನಸಿಕ ಗುಣಲಕ್ಷಣಗಳಿಗೆ ಕಾರಣವಾಗುತ್ತವೆ. ನಾವು ಬೆಳೆದ ಪರಿಸರ ಪ್ರಭಾವ ಬೀರುತ್ತದೆ. ಅಂದರೆ ನಮ್ಮ ಮೈಬಣ್ಣವನ್ನು ಬದಲಿಸಲು ಸಾಧ್ಯವಿಲ್ಲ, ನಮ್ಮ ತಂದೆತಾಯಿ, ನಾವು ಹುಟ್ಟಿದ ಪರಿಸರವನ್ನು ದೂರ ಮಾಡಲಾಗುವುದಿಲ್ಲ, ಇತರರೊಡನೆ ಹೋಲಿಸಿಕೊಳ್ಳಲೇಬಾರದು, ನಾವು ನಾವೇ. ಇತರರು ಇತರರೇ. ಅವರಂತೆ ನಾವಾಗಬೇಕಿಲ್ಲ, ನಮ್ಮಂತೆ ಅವರಾಗಬೇಕಿಲ್ಲ, ನಮ್ಮನ್ನು ನಾವು ಸುಧಾರಿಸಿಕೊಳ್ಳಬಹುದು, ನಮ್ಮ ತಿಳುವಳಿಕೆಯನ್ನು, ಕೌಶಲಗಳನ್ನು , ಉತ್ತಮಪಡಿಸಿಕೊಳ್ಳಬಹುದು, ನಮ್ಮನಡೆ-ನುಡಿಗಳನ್ನು ಬದಲಿಸಬಹುದು, ಯಾವುದಾದರೂಂದು ವಿಷಯದಲ್ಲಿ ನಾವು ಸಾಧಕರಾಗಬಹುದು.

ನಮ್ಮ ವೇಷಭೂಷಣ ಅಲಂಕಾರವನ್ನು ಉತ್ತಮಪಡಿಸಿಕೊಳ್ಳಬಹುದು. ನಾವು ಮಾಡುವ ಕೆಲಸ, ಉದ್ಯೋಗವನ್ನು ಅಚ್ಚುಕಟ್ಟಾಗಿ , ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಮಾಡಿದರೆ ಇತರರು ಖಂಡಿತ ಮೆಚ್ಚುತ್ತಾರೆ, ಗೌರವಿಸುತ್ತಾರೆ. ನಮ್ಮಆಲೋಚನೆ – ಚಿಂತನೆ ಪಾಸಿಟಿವ್  ಆಗಿರಬೇಕು. ನಮ್ಮಲ್ಲಿರುವ, ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಕಂಡು ಹೆಮ್ಮೆಪಡಬೇಕು, ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ಉತ್ತಮವಾಗಬಲ್ಲೆ, ಸುಧಾರಿಸಬಲ್ಲೆ, ಎಂಬ ಭರವಸೆ ನಮ್ಮಲ್ಲಿರಬೇಕು, ಸರಳವಾಗಿ, ಸ್ಪಷ್ಟವಾಗಿ ಕೇಳುವವರಿಗೆ ಹಿತವಾಗುವಂತೆ ಮಾತನಾಡಲು ಪ್ರ್ಯಾಕ್ಟೀಸ್ ಮಾಡೋಣ, ಪ್ರೀತಿಯಿಂದ, ವಿನಯದಿಂದ ಮಾತನಾಡುವವರನ್ನು ಜನಮೆಚ್ಚುತ್ತಾರೆ. ಯಾವುದಾದರೂ ವಿಷಯ ಸಂಗತಿ ನಮಗೆ ಗೊತ್ತಿಲ್ಲದಿದ್ದರೆ ಗೊತ್ತಿಲ್ಲ ಎನ್ನಲು ಸಂಕೋಚ ಪಡುವುದು ಬೇಡ. ಯಾರೂ ಸರ್ವಜ್ಞರಲ್ಲ. ಅನುಭವಸ್ಥರ ಮಾತುಗಳನ್ನು ಕೇಳಿಸಿಕೊಳ್ಳೋಣ. ಪುಸ್ತಕ ಇಂಟರ್ನೆಟ್ನಲ್ಲಿ ಈಗ ವಿಪುಲ ಮಾಹಿತಿಗಳು ಸಿಗುತ್ತವೆ. ಉಪಯುಕ್ತ ಮಾಹಿತಿಗಳನ್ನು ಒಂದು ಪುಸ್ತಕದಲ್ಲಿ ಬರೆದಿಡೋಣ, ಅಗತ್ಯಬಿದ್ದಾಗ ಉಪಯೋಗಿಸೋಣ.

ಜಾತಿ /ವರ್ಗ / ಸ್ಥಾನ/  ಅಂತಸ್ತು ವಿಚಾರಗಳಿಗೆ ಹೆಚ್ಚು ಮಹತ್ವ ಕೊಡುವ ಕೆಲವು ಜನ ಇದ್ದೇ ಇರುತ್ತಾರೆ. ಅಂಥವರ ಟೀಕೆಗಳನ್ನು, ತಿರಸ್ಕಾರವನ್ನು, ನಿರ್ಲಕ್ಷಿಸೋಣ. ಜಾತಿ -ವರ್ಗಮುಖ್ಯವಲ್ಲ, ವಾಲ್ಮೀಕಿ –ವ್ಯಾಸರು ಕೆಳವರ್ಗದಲ್ಲಿ ಹುಟ್ಟಿ ಲೋಕಮಾನ್ಯರಾದವರು. ರಾಮಾಯಣ – ಮಹಾಭಾರತ ಕಾವ್ಯಗಳನ್ನು ರಚಿಸಿ ಜಗತ್ತಿಗೇ ಆಚಾರ್ಯರಾದರು ಎಂಬುದನ್ನು ಮರೆಯದಿರೋಣ.

ಪಾಸಿಟಿವ್ ಭಾವನೆಗಳು ನಮಗೂ ಹಿತ, ಇತರರಿಗೂ ಹಿತ ಕೊಡುತ್ತವೆ, ಹಾಗೂ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಪ್ರೀತಿ - ಸ್ನೇಹ - ದಯೆ - ಸಹಾನುಭೂತಿ, ಸಂತೋಷ, ಧೈರ್ಯ, ತಾಳ್ಮೆ ಇವುಗಳನ್ನು ಧಾರಾಳವಾಗಿ ಪ್ರಕಟಿಸಿ. ಪಾಸಿಟಿವ್ ಭಾವನೆಗಳು ವ್ಯಕ್ತಿತ್ವಕ್ಕೆ ಮೆರುಗನ್ನು ನೀಡುತ್ತವೆ.

ಎಲ್ಲರಲ್ಲೂ ಏನಾದರೊಂದು ಪ್ರತಿಭೆ ಇರುತ್ತದೆ . ಹಾಡುವುದು, ಚಿತ್ರಬಿಡಿಸುವುದು, ರಂಗೋಲಿ ಹಾಕುವುದು ಹೊ ಬಗೆಯಲ್ಲಿ ಅಡುಗೆ ಮಾಡುವುದು, ತ್ಯಾಜ್ಯವೆಂದು ಬಿಸಾಡ ಬಯಸಿದ ವಸ್ತುಗಳಿಂದ ಉಪಯೋಗವಾಗುವ ಏನಾದರೂ ವಸ್ತುವನ್ನು ತಯಾರಿಸುವುದು, ವಸ್ತುಗಳನ್ನು ಅಂದವಾಗಿ ಜೋಡಿಸುವುದು ಇತ್ಯಾದಿ. ನಮ್ಮಲ್ಲಿ ಏನು ಪ್ರತಿಭೆ ಇದೆ ಎಂದು ಗುರುತಿಸಿ ಬೆಳೆಸಿಕೊಳ್ಳೋಣ , ಸಮಯ ಸಂದರ್ಭ ಸಿಕ್ಕಾಗ ಪ್ರದರ್ಶಿಸೋಣ. ಅದರಿಂದ ನಮ್ಮ ಸ್ವಾಭಿಮಾನ ವೃದ್ಧಿಸುತ್ತದೆ.

ದುರಭಿಮಾನ - ಮೇಲರಿಮೆ 

ಕೆಲವರು ತಮ್ಮ ಬಗ್ಗೆ ದುರಭಿಮಾನ – ಮೇಲರಿಮೆ ಬೆಳೆಸಿಕೊಳ್ಳುತ್ತಾರೆ, ಮದವೇರಿದ ಆನೆಗಳಂತಾಗುತ್ತಾರೆ, ನಾನೇ ಶ್ರೇಷ್ಠ, ನಾನು ಮಾತಾಡಿದ್ದೆಲ್ಲ, ಮಾಡಿದ ಕೆಲಸವೆಲ್ಲ ಶ್ರೇಷ್ಠ, ನನ್ನ ಬಿಟ್ಟರೆ ಇನ್ಯಾರಿದ್ದಾರೆಂದು ಬೀಗುತ್ತಾರೆ. ಮೇಲರಿಮೆ ಮದವನ್ನುಂಟು ಮಾಡುವ ಸಾಮಾನ್ಯ ಅಂಶಗಳಿವು.

ರೂಪ ಮದ: ಸುಂದರವಾಗಿರುವ ಸ್ತ್ರೀ-ಪುರುಷರು ತಮ್ಮ ಸೌಂದರ್ಯದ ಬಗ್ಗೆ ಅಹಂಕಾರ ಪಡಬಹುದು.

ಐಶ್ವರ್ಯ ಮದ: ಹಣ, ಆಸ್ತಿ, ಸಂಪತ್ತು, ಅಧಿಕಸವಲತ್ತುಗಳು ಬಹುತೇಕ ಶ್ರೀಮಂತರು  ಮೇಲರಿಮೆಗೆ ಒಳಗಾಗುತ್ತಾರೆ.

ಅಧಿಕಾರ ಮದ: ಉನ್ನತ ಅಧಿಕಾರ ಸಿಕ್ಕಿದ ಅಧಿಕಾರಿಗಳು, ಸಚಿವರಿಗೆ ಈ ರೋಗ ತಗಲುತ್ತದೆ.

ಪ್ರತಿಭಾ ಮದ: ಗಾಯನ, ನೃತ್ಯ, ಚಿತ್ರಕಲೆ, ಶಿಲ್ಪ ಸೃಜನಶೀಲತೆಯನ್ನು ಸಾಧನೆ ಮಾಡಿದ ಕೆಲವರು ಅಹಂಕಾರಿಗಳಾಗುತ್ತಾರೆ.

ಜಾತಿ/ವರ್ಗ ಮದ: ಮೇಲ್ಜಾತಿ, ಮೇಲ್ವರ್ಗ,  ಆಳುವ ವರ್ಗದವರುತಮ್ಮ,  ತಮ್ಮ ಕುಟುಂಬಗಳ ಬಗ್ಗೆ ದುರಭಿಮಾನ ಹೊಂದಿರುತ್ತಾರೆ .

ಸಾಧನೆಯ ಮದ: ತಮ್ಮಕ್ಷೇತ್ರದಲ್ಲಿ ಸಂಶೋಧನೆ, ಅವಿಷ್ಕಾರ, ಸಾಧನೆ ಮಾಡಿದ ಸಾಧಕರಲ್ಲಿ ಕೆಲವರು ಮದೋನ್ಮತ್ತರಾಗುತ್ತಾರೆ.
 
ಕೀಳರಿಮೆ ವ್ಯಕ್ತಿಯನ್ನು ಮಾತ್ರ ಬಾಧಿಸಿದರೆ ಮೇಲರಿಮೆ ವ್ಯಕ್ತಿ ಆ ಕುಟುಂಬದವರಲ್ಲದೆ , ಇತರರೂ ನೋವು, ಅವಮಾನ ಹೀನಾಯಕ್ಕೆ ಬಲಿಪಶುಗಳಾಗುತ್ತಾರೆ. ವ್ಯಕ್ತಿ ವ್ಯಕ್ತಿ ಸಂಬಂಧ ಹಳಸಿಕೊಳ್ಳುತ್ತದೆ. ಸಮಾಜದ ಹಿತ, ಸಮತೋಲನಕ್ಕೆ ಅಡ್ಡಿಯಾಗುತ್ತದೆ.

ಆದ್ದರಿಂದ ನಮ್ಮಲ್ಲಿ ಮೇಲರಿಮೆ / ಮದ ಕಾಣಿಸಿಕೊಳ್ಳದಂತೆ ಎಚ್ಚರವಹಿಸಬೇಕು. ಎಷ್ಟೇ ಪ್ರಶಂಸೆ / ಪುರಸ್ಕಾರ / ಪ್ರಶಸ್ತಿಗಳು ಬರಲಿ, ವಿನಯವಂತರಾಗಿಯೇ ಉಳಿಯಬೇಕು. ವಿನಯವೇ ವ್ಯಕ್ತಿಗೆ ಭೂಷಣ

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ 

drcrchandrashekhar@gmail.com
+919845605615

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com