ಪದಾರ್ಥ, ಪ್ರಚಾರ ಮತ್ತು ಪ್ರಸ್ತುತತೆ= ಪತಂಜಲಿ!

ಹಣಕ್ಲಾಸು-268-ರಂಗಸ್ವಾಮಿ ಮೂಕನಹಳ್ಳಿ
ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್

ದಶಕಗಳಿಂದ ಅನೇಕ ಟಿವಿ ಶೋ ಗಳಲ್ಲಿ ಜನರಿಗೆ ಯೋಗ ಕಲಿಸುತ್ತಾ, ಸಹಜವಾಗಿ ಉಸಿರಾಡುವುದು ಹೇಗೆ ಎಂದು ತಿಳಿಹೇಳುತ್ತಾ ಭಾರತ ಪೂರ್ತಿ ಹೆಸರುವಾಸಿಯಾದವರು ರಾಮದೇವ್. ಬರೀ ಯೋಗ ಹೇಳಿಕೊಂಡು, ಉಸಿರಾಡುವ ಕ್ರಿಯೆ ಕಲಿಸಿಕೊಂಡು ಇದ್ದಿದ್ದರೆ ಇಂದು ಅವರು ಈ ಮಟ್ಟಿಗೆ ಹೆಸರು ಮಾಡುತ್ತಿದ್ದರೆ? ಹೆಸರು ಎನ್ನುವುದಕ್ಕಿಂತ ಈ ಮಟ್ಟಿನ ಪ್ರಸ್ತುತತೆ ಅವರಿಗೆ ಸಿಗುತ್ತಿತ್ತೇ? ಎನ್ನುವುದು ಹೆಚ್ಚು ಸಮಂಜಸ ಪ್ರಶ್ನೆ. ಇಲ್ಲ ಎನ್ನುವುದು ಸಹಜ ಉತ್ತರ ಎನ್ನುವುದಕ್ಕೂ ಸದ್ಗುರು ಅಡ್ಡಿ ಬರುತ್ತಾರೆ.

ಆದರೆ ರಾಮದೇವ್ ವಿಭಿನ್ನರಾಗಿ ನಿಲ್ಲುವುದು ಇಲ್ಲೇ, ತನ್ನ ಸಮಕಾಲೀನ ಗುರು/ ಪ್ರವಚನಕಾರರಂತೆ ಕೇವಲ ಬೋಧನೆಯಲ್ಲಿ ತೊಡಗಿಸಿಕೊಳ್ಳದೆ ಭಾರತೀಯ ಪರಂಪರೆಯನ್ನ ಅಚ್ಚುಕಟ್ಟಾಗಿ ಪ್ಯಾಕೆಟ್ ಮಾಡಿದ್ದು ಅಲ್ಲದೆ ಮಾರ್ಕೆಟ್ ಕೂಡ ಮಾಡಿದರು. 2016-17ರ ಹಣಕಾಸು ವರ್ಷದಲ್ಲಿ   ರಾಮದೇವ್ ಅವರ ‘ಪತಂಜಲಿ’ ಕಂಪನಿ ಟೆಲಿವಿಷನ್ ನಲ್ಲಿ ಅತ್ಯಂತ ದೊಡ್ಡ ಜಾಹೀರಾತುದಾರ ಆಗಿ ಹೊರ ಹೊಮ್ಮಿದೆ. ಗ್ಲೋಬಲ್ ಬ್ರಾಂಡ್ ಗಳ ಅಬ್ಬರ ಅಡಗಿ ಅವರು ಎರಡನೇ ಸ್ಥಾನ ಪಡೆಯುವಲ್ಲಿ ಪ್ರಾಡಕ್ಟ್ ಮಾರ್ಕೆಟ್ ಮಾಡುವ ಕಲೆ ಗೆದ್ದಿದೆ. ಹೀಗೆ ಜಾಹಿರಾತಿಗೆ ಅದು ಖರ್ಚು ಮಾಡಿದ ಹಣ 570 ಕೋಟಿ.

ಅಂತಾರಾಷ್ಟ್ರೀಯ ಖ್ಯಾತಿಯ ಬ್ರಾಂಡ್ ಗಳು ನಿತ್ಯ ಜೀವನದಲ್ಲಿ ಉಪಯೋಗಿಸುವ ಸೋಪು, ಶಾಂಪೂ, ಟೂತ್ ಪೇಸ್ಟ್ ಗಳಲ್ಲಿ ಕೆಮಿಕಲ್ ಬೆರೆಸುತ್ತಿವೆ, ಅವು ಜೀವಕ್ಕೆ ಮಾರಕ ಅವುಗಳಿಗೆ ದೇಶಿ ಉತ್ತರವಿದೆ ಎಂದು ಹೇಳಿಕೊಂಡು ಶುರುವಾದ ಪತಂಜಲಿ ಇಂದು ಮೂವತ್ತು ಸಾವಿರ ಕೋಟಿ ರೂಪಾಯಿ ಸಂಸ್ಥೆಯಾಗಿ ಬೆಳೆದಿದೆ.

ಕಳೆದ ವರ್ಷ ಫಾಸ್ಟ್ ಮೂವಿಂಗ್ ಕನ್ಸೂಮರ್ ಪ್ರಾಡಕ್ಟ್(FMCG ) ಉತ್ಪಾದಿಸುವ ಭಾರತದ ಕಂಪನಿಯಾಗಿ ಹೊರಹೊಮ್ಮಿರುವುದು ನಿಜಕ್ಕೂ ದೊಡ್ಡ ಸಾಧನೆ. ಯುನಿಲಿವರ್ ನ ಭಾರತದ ಸಬ್ಸಿಡರೀ ಕಂಪನಿ ಹಿಂದೂಸ್ಥಾನ್ ಲಿವರ್ ಸಣ್ಣ ಪುಟ್ಟ ಕಂಪೆನಿಗಳನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವತ್ತ ಹೆಚ್ಚು ಗಮನ ಹರಿಸಿದೆ. ಪರ್ಯಾಯ ಶಕ್ತಿಯಾಗಿ ಬೆಳೆದಿರುವ ‘ಪತಂಜಲಿ’ ಎದುರಿಸಲು ಹೆಚ್ಚಿನ ಶಕ್ತಿಯ ಅವಶ್ಯಕತೆ ಇದೆ ಎನ್ನುವುದು ಅದಕ್ಕೆ ಗೊತ್ತಿದೆ. ಇದರ ನಡುವೆ ಕಳೆದ ವರ್ಷ ಅಂದರೆ 2020 ರಲ್ಲಿ ಪತಂಜಲಿ ಸಂಸ್ಥೆ ರುಚಿ ಸೋಯಾ ಇಂಡಸ್ಟ್ರೀಸ್ ಎನ್ನುವ ಸಂಸ್ಥೆಯನ್ನ  ಇನ್ಸಾಲ್ವೇನ್ಸಿ ನಿಯಮಗಳ ಅಡಿಯಲ್ಲಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಪತಂಜಲಿ ಸಂಸ್ಥೆಯ ವಹಿವಾಟು 30 ಸಾವಿರ ಕೋಟಿ ಮುಟ್ಟಲು ಇದು ಕೂಡ ಸಾಕಷ್ಟು ದೇಣಿಗೆ ನೀಡಿದೆ.

ರಾಮದೇವ್ ಗೆ ಮಾರುಕಟ್ಟೆಯಲ್ಲಿ ಸಿಕ್ಕ ಅಮೋಘ ಜಯ ಕಂಡು ಆರ್ಟ್ ಆಫ್ ಲಿವಿಂಗ್ ನ ರವಿಶಂಕರ ಗುರುಜೀ, ಪಂಜಾಬ್ ನ ‘ಮೆಸ್ಸಂಜೆರ್ ಆಫ್ ಗಾಡ್’ ಖ್ಯಾತಿಯ ಗುರ್ಮೀತ್ ಬಾಬಾ ಕೂಡ ತಮ್ಮದೇ ಆದ ಸಾವಯವ ಉತ್ಪನ್ನ, ಹರ್ಬಲ್ ಪ್ರಾಡಕ್ಟ್ ಗಳನ್ನು ಮಾರುಕಟ್ಟೆಗೆ ತಂದಿದ್ದಾರೆ. ರಾಮದೇವ್ ಅವರ ಮಾರುಕಟ್ಟೆ ಅಧಿಪತ್ಯವನ್ನ ಮುರಿಯಲು ಇವರಿಗೆ ಸಾಧ್ಯವಾಗಿಲ್ಲ.

ಐಐಎಫ್ಎಲ್ ಎನ್ನುವ ಬ್ರೋಕರೇಜ್ ಸಂಸ್ಥೆಯ ಅಂದಾಜಿನ ಪ್ರಕಾರ 2020ರ ವೇಳೆಗೆ ಪತಂಜಲಿ  3 ಬಿಲಿಯನ್ ಡಾಲರ್ ಕಂಪನಿ ಆಗಿರುತ್ತದೆ. ಸದ್ಯ ಪತಂಜಲಿ 200 ಮಿಲಿಯನ್ ಅಂದರೆ ೦.6 ಬಿಲಿಯನ್ ಕಂಪನಿ ಆಗಿದೆ ಅಂದರೆ ಇನ್ನು ನಾಲ್ಕು ವರ್ಷದಲ್ಲಿ ಪತಂಜಲಿ ವ್ಯಾಪಾರ ವೃದ್ಧಿ ಪ್ರಮಾಣ ಊಹಿಸಲು ಸಾಧ್ಯವಿಲ್ಲದ ವೇಗದಲ್ಲಿ ಬೆಳವಣಿಗೆಯಾಗಲಿದೆ ಎನ್ನುವ ಮಾತನ್ನ 2017 ರಲ್ಲಿ ಹೇಳಿತ್ತು. ಅದು ಸತ್ಯವಾಗಿದೆ. ಬಹು ರಾಷ್ಟೀಯ ಸಂಸ್ಥೆಗಳಿಗೆ ಸೆಡ್ಡು ಹೊಡೆದು ಅಂದಾಜಿನ ಪ್ರಕಾರ 30 ಸಾವಿರ ಕೋಟಿ ರೂಪಾಯಿ ಸಂಸ್ಥೆಯಾಗಿ ಬೆಳೆದು ನಿಂತಿದೆ. ಮುಂದಿನ ವರ್ಷಗಳಲ್ಲಿ 5 ರಿಂದ 10 ಸಾವಿರ ಕೋಟಿ ಹೂಡಿಕೆಯನ್ನ ಪತಂಜಲಿ ಎದಿರು ನೋಡುತ್ತಿದೆ.

ಈ ರೀತಿಯ ಬೆಳವಣಿಗೆಗೆ ಮುಖ್ಯ ಕಾರಣಗಳನ್ನ ಹೀಗೆ ಪಟ್ಟಿ ಮಾಡಬಹುದು:

  1. ನೆಸ್ಲೆ ಕಂಪನಿಯ ‘ಮ್ಯಾಗಿ’ ವಿಷಪೂರಿತ ಎಂದು ವಿವಾದವಾದ ಕೆಲವೇ ವಾರಗಳಲ್ಲಿ ಪತಂಜಲಿ ತನ್ನ ಗೋಧಿ ಹಿಟ್ಟಿನ ನೂಡಲ್ಸ್ ಮಾರುಕಟ್ಟೆಗೆ ತಂದಿತ್ತು. ಸಮಯಪ್ರಜ್ಞೆ ಜೊತೆಗೆ ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗೆ ತಮ್ಮನ್ನ ತಾವೇ ಹೊಂದಿಸಿಕೊಳ್ಳುವ ಚತುರತೆ ‘ಪತಂಜಲಿ’ ಬ್ರಾಂಡ್ ನ ಯಶಸ್ಸಿನ ಗುಟ್ಟು. ಆದರೆ ರಾಮದೇವ್  ಹೇಳುವುದೇ ಬೇರೆ ‘ಇಲ್ಲ… ಬ್ರಾಂಡ್ ಕಟ್ಟುವುದು ನಮ್ಮ ಮುಖ್ಯ ಉದ್ದೇಶ ಅಲ್ಲವೇ ಅಲ್ಲ… ಅದೇನಿದ್ದರೂ ಬೈ ಪ್ರಾಡಕ್ಟ್ ಅಷ್ಟೇ. ನಮ್ಮ ಮುಖ್ಯ ಉದ್ದೇಶ ಭಾರತದ ಹಣ ಭಾರತದಲ್ಲೇ ಉಳಿಯಬೇಕು ಎನ್ನುವುದು’ ಎನ್ನುತ್ತಾರೆ.
  2. ‘ಹೊರ ದೇಶದ ವಸ್ತುಗಳನ್ನು ಹೆಚ್ಚು ಬೆಲೆ ತೆತ್ತು ಕೊಂಡರೆ ಹೆಚ್ಚು ಗುಣಮಟ್ಟವಿರುತ್ತೆ ಎನ್ನುವ ಭಾರತೀಯರ ಮನಸ್ಥಿತಿ ಬದಲು ಮಾಡಿ, ನಮ್ಮಲೇ ತಯಾರಾದ ವಸ್ತುಗಳು ಉತ್ತಮ ಗುಣಮಟ್ಟ ಹೊಂದಿವೆ ಎನ್ನುವುದನ್ನೇ ತಿಳಿಸಿರುವುದೇ ನಮ್ಮ ಇಂದಿನ ಯಶಸ್ಸಿಗೆ ಕಾರಣ’ ಎನ್ನುತ್ತಾರೆ ಪತಂಜಲಿಯ ಮ್ಯಾನೇಜಿಂಗ್ ಡೈರೆಕ್ಟರ್ ಬಾಲಕೃಷ್ಣ ಆಚಾರ್ಯ.
  3. ಕೊರೋನ ಕಾಲದಲ್ಲಿ ಸಪ್ಪ್ಲೈ ಚೈನ್ ಕುಸಿದದ್ದು ಎಲ್ಲರಿಗೂ ತಿಳಿದಿರುವ ವಿಷಯ. ಇಂತಹ ಸಮಯದಲ್ಲೂ ಪತಂಜಲಿಯ ಓಟಕ್ಕೆ ಬ್ರೇಕ್ ಬೀಳಲಿಲ್ಲ. ಇದಕ್ಕೆ ಕಾರಣ ಇವರು ತಮ್ಮದೇ ಅದ ಟ್ರಾನ್ಸ್ಪೋರ್ಟ್ ಸಿಸ್ಟಮ್ ಕಟ್ಟಿಕೊಂಡಿರುವುದು. ಪತಂಜಲಿ ಪರಿವಾಹಾನ್ ಎನ್ನುವ ತಮ್ಮ ಪದಾರ್ಥಗಳ ವಿತರಣೆಗೆ ಎಂದು ಅಂಗ ಸಂಸ್ಥೆಯನ್ನ ತೆರೆದದ್ದು, ಈಗಿನ ಕಾಲಘಟ್ಟದಲ್ಲಿ ವರದಾನವಾಗಿ ಪರಿವರ್ತನೆಯಾಗಿದೆ. ಈ ಘಟಕ ಒಂದೇ 548 ಕೋಟಿ ರೂಪಾಯಿ ವಹಿವಾಟು ದಾಖಲಿಸಿದೆ ಎಂದರೆ ನೀವು ಅಂದಾಜು ಮಾಡಿಕೊಳ್ಳಬಹುದು.
  4. ಹೀಗೆ ಬಹುರಾಷ್ಟೀಯ ಕಂಪನಿಗಳಿಗೆ ಚಳಿ ಜ್ವರ ಬರಿಸಿರುವ ಪತಂಜಲಿ ಪೂಜಾ ಸಾಮಗ್ರಿಗಳ ವ್ಯಾಪಾರಕ್ಕೂ ಕೈ ಹಾಕಿದ್ದು ಇಂದಿಗೆ ಇತಿಹಾಸ.  ಅಗರಬತ್ತಿ, ಸಾಮ್ರಾಣಿ, ಧೂಪ, ಹತ್ತಿಯಿಂದ ತಯಾರಾದ ಎಣ್ಣೆ ಬತ್ತಿಗಳು ಹೀಗೆ ಇವುಗಳ ಮಾರುಕಟ್ಟೆಯೇ ಇಂದಿನ ಲೆಕ್ಕಕ್ಕೆ ಸಿಕ್ಕ ಪ್ರಕಾರ 8 ಸಾವಿರ ಕೋಟಿ ಮೀರಿದೆ. ಇಲ್ಲಿಯವರೆಗೆ ಅಸಂಘಟಿತ ರೂಪದಲ್ಲಿ ಇದ್ದ ಈ ಉದ್ದಿಮೆ ಶೀಘ್ರದಲ್ಲೇ ಪತಂಜಲಿಯಿಂದ ಕಾರ್ಪೊರೇಟ್ ರೂಪ ಪಡೆದುಕೊಳ್ಳಲಿದೆ. ಪತಂಜಲಿ ವಹಿವಾಟು ವೃದ್ಧಿಸುವುದರ ಜೊತೆ ಜೊತೆಗೆ ಸಹಸ್ರಾರು ಅಸಂಘಟಿತ ನೌಕರರ ಜೀವನ ಹಸನಾದರೆ, ನಿತ್ಯ ರೇಡಿಯೋದಲ್ಲಿ ‘ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶದ ಹಣವನ್ನ ತೆಗೆದುಕೊಂಡುಹೋಗುತ್ತವೆ, ಮತ್ತು ದೊಡ್ಡ ಪ್ರಮಾಣ ಯಾವುದೇ ಚಾರಿಟಿ ಕೆಲಸ ಮಾಡುವುದಿಲ್ಲ, ಪತಂಜಲಿ ಪ್ರಾಡಕ್ಟ್ ಕೊಳ್ಳುವುದು ದೇಶಿಯತೆ, ರಾಷ್ಟ್ರೀಯತೆಗೆ ಪೂರಕ’ ಎನ್ನುವ ಪತಂಜಲಿ ಜಾಹಿರಾತು ಸಾರ್ಥಕವಾಗುತ್ತದೆ.
  5. ಲೆವಿಸ್ ಮತ್ತಿತರ ಬ್ರ್ಯಾಂಡ್ಗಳು ಜೀನ್ಸ್ ಬಟ್ಟೆಯನ್ನ ಭಾರತದಲ್ಲಿ ಮಾರಿ ಹೆಚ್ಚಿನ ಲಾಭ ಗಳಿಸುತ್ತಿದ್ದಾಗ ಪತಂಜಲಿ ಕೂಡ ದೇಸಿ ಜೀನ್ಸ್ ಮಾರುಕಟ್ಟೆಗೆ ತಂದು ಅದಕ್ಕೂ ಸೆಡ್ಡು ಹೊಡೆದಿದೆ. ಗಮನಿಸಿ ನಾವು ನಮ್ಮತನವನ್ನ ಬಿಡಬಾರದು ಎಂದು ಪತಂಜಲಿ ಕುಳಿತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಯುವ ಜನತೆಯ ಮೂಡ್ ಹೇಗಿದೆ, ಸಮಾಜ ಎತ್ತ ಸಾಗುತ್ತಿದೆ ಎನ್ನವುದನ್ನ ಅರಿತು ಅದಕ್ಕೆ ತಕ್ಕಂತೆ ಬದಲಾಗುವುದು ಮತ್ತು ಮಾರುಕಟ್ಟೆಯ ಸೆಂಟಿಮೆಂಟ್ಗೆ ಬಹುಬೇಗ ಒಗ್ಗಿಕೊಳ್ಳುವುದು ಕೂಡ ಪತಂಜಲಿ ಗೆಲುವಿಗೆ ಒಂದು ಕಾರಣ.

ರಾಮದೇವರ ಪತಂಜಲಿಯ ಯಶಸ್ಸಿನ ಓಟ ಇಷ್ಟಕ್ಕೆ ನಿಲ್ಲುವುದಿಲ್ಲ ಭಾರತ ಸರ್ಕಾರದ ಆ್ಯಕ್ಟ್ ಈಸ್ಟ್ ನೀತಿಯನ್ನು ಅನುಸರಿಸುತ್ತಾ ಪೂರ್ವ ಭಾಗದ ರಾಷ್ಟ್ರಗಳ ಮಾರುಕಟ್ಟೆಗೆ ಪತಂಜಲಿ ತನ್ನ ಉತ್ಪನ್ನವನ್ನು ರವಾನಿಸಲು ಮುಂದಾಗಿದೆ. ಅಂದಹಾಗೆ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಕನಸನ್ನು ಬಹು ದೊಡ್ಡ ಪ್ರಮಾಣದಲ್ಲಿ ಸಾಕಾರ ಮಾಡುತ್ತಿರುವುದು ‘ಪತಂಜಲಿ’ . ಮೋದಿಯವರ ಮತ್ತೊಂದು ಮಹಾ ಕನಸು 'ಲುಕ್ ಈಸ್ಟ್ -ಆಕ್ಟ್ ಈಸ್ಟ್' ನ್ನು ನನಸು ಮಾಡುವತ್ತ ಒಂದು ದೊಡ್ಡ ಹೆಜ್ಜೆಯನ್ನ ಸದ್ದಿಲ್ಲದೆ ಇಡುತ್ತಿದೆ. ಇದು ಯಶಸ್ಸು ಪಡೆದರೆ ಭಾರತದ ಆಯುರ್ವೇದ ಜಗತ್ತಿನಲ್ಲಿ ಮತ್ತೆ ಮನೆ ಮಾತಾಗುತ್ತದೆ.

ಲುಕ್ ಈಸ್ಟ್-ಆಕ್ಟ್ ಈಸ್ಟ್ ಎನ್ನುವುದು ಮೋದಿ ಸರಕಾರ ಚೀನಾದ ಅಧಿಪತ್ಯಕ್ಕೆ ಸೆಡ್ಡು ಹೊಡೆಯಲು ಮಾಡಿರುವ ಮಾಸ್ಟರ್ ಪ್ಲಾನ್. ಇದನ್ನ 2015 ರಲ್ಲಿ ಸಿದ್ಧಪಡಿಸಲಾಯಿತು. ಇದರ ಪ್ರಕಾರ ಸೌತ್ ಈಸ್ಟ್ ಏಷ್ಯಾ ರಾಷ್ಟ್ರಗಳೊಂದಿಗೆ ಅತ್ಯತ್ತಮ ವಾಣಿಜ್ಯ ಸಂಬಂಧ ಹೊಂದುವುದು ಆ ಮೂಲಕ ಚೀನಾದ ವೇಗಕ್ಕೆ ತಡೆಯೊಡ್ಡುವುದು. ಇದರ ಸಲುವಾಗಿ ಆಯಾ ದೇಶಗಳಿಗೆ ಸಾಕಷ್ಟು ಬಾರಿ ಭೇಟಿ ಕೊಡುವುದು ವಾಣಿಜ್ಯದ ಜೊತೆ ಜೊತೆಗೆ ಭಾವನಾತ್ಮಕ ಸಂಬಂಧ ಕೂಡ ಬೆಸೆಯುವುದು ಕಾರ್ಯ ನಕಾಶೆಯಾಗಿದೆ. ಇದನ್ನ ಸಾಕಾರ ಗೊಳಿಸುವಲ್ಲಿ ಬಾಬಾ ರಾಮದೇವರ ಪಂತಜಲಿ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿದೆ.

ಪತಂಜಲಿ ಸಂಸ್ಥೆಯನ್ನ, ಅದರಲ್ಲೂ ಪಂತಜಲಿ ಆಯುರ್ವೇದವನ್ನ ಮುಂಬರುವ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ನೊಂದಾವಣಿ ಮಾಡಿಸುವುದು ಗುರಿಯನ್ನಾಗಿರಿಸಿಕೊಂಡಿರುವ ಬಾಬಾ ರಾಮದೇವ್, ಎಷ್ಟು ಸಮಯದಲ್ಲಿ ಇದನ್ನ ಮಾಡಲಿದ್ದೇನೆ ಎನ್ನುವುದನ್ನ ಮಾತ್ರ ಹೇಳಲು ಇಚ್ಛೆ ಪಡಲಿಲ್ಲ. ಜೊತೆಗೆ ಹೊಸದಾಗಿ ತೆಕ್ಕೆಗೆ ತೆಗೆದುಕೊಂಡ ರುಚಿ ಸೋಯಾ ಸಂಸ್ಥೆಯ ಜೊತೆಗೆ ಬಂದಿರುವ 3300 ಕೋಟಿ ರೂಪಾಯಿ ಸಾಲವನ್ನ ಮುಂದಿನ ಮೂರರಿಂದ ನಾಲ್ಕು ವರ್ಷದಲ್ಲಿ ತೀರಿಸುವ ಕಾರ್ಯಸೂಚಿಯನ್ನ ಹಾಕಿಕೊಂಡಿರುವುದಾಗಿ ಕೂಡ ಹೇಳಿಕೆ ನೀಡಿದ್ದಾರೆ.

ಕೊನೆಮಾತು: ಜಾಗತಿಕವಾಗಿ ಎಲ್ಲಾ ದೇಶಗಳೂ ಅತಿ ವೇಗವಾಗಿ ಬದಲಾವಣೆಯನ್ನ ಕಾಣುತ್ತಿವೆ. ಕೊರೋನ ಎನ್ನುವ ಸಾಂಕ್ರಾಮಿಕ ಪಿಡುಗು ದೇಶೀಯತೆಗೆ ಹೆಚ್ಚಿನ ಒತ್ತನ್ನ ಖಂಡಿತ ನೀಡಲಿದೆ. ಹಾಗೆಂದು ನಾಳೆಯೇ ನಾವು ಆತ್ಮನಿರ್ಭರರಾಗುತ್ತೇವೆ ಎನ್ನುವುದು ಶುದ್ಧ ಸುಳ್ಳು. ನಿಧಾನವಾಗಿ ನಾವು ಅದರತ್ತ ಹೆಜ್ಜೆಯನ್ನ ಇಡಬೇಕಿದೆ. ಇದರ ಜೊತೆಗೆ ನಾವು ರಾಮದೇವರು ಕೂಡ ಬೇರೆ ಬಹುರಾಷ್ಟ್ರೀಯ ಸಂಸ್ಥೆಯಂತೆಯೇ ಕೆಲಸ ಮಾಡುತ್ತಿದ್ದಾರೆ, ನ್ಯಾಚುರಲ್ ಎನ್ನುವುದು ಅದೆಷ್ಟು ನ್ಯಾಚುರಲ್ ಆಗಿರಲು ಸಾಧ್ಯ? ಇಷ್ಟೊಂದು ಜನರಿಗೆ ಪದಾರ್ಥ ತಲುಪಿಸಲು ಮಾಸ್ ಪ್ರೊಡಕ್ಷನ್ ಗೆ ಹೋಗಲೇ ಬೇಕು, ಆಗ ಅವರು ಹೇಳುವ ಸಹಜತೆ ಪದಾರ್ಥಗಳಲ್ಲಿ ಹೇಗೆ ಉಳಿದಿಕೊಂಡೀತು? ಎನ್ನುವ ಪ್ರಶ್ನೆಗಳನ್ನ ಕೇಳಬಾರದು ಎಂದಲ್ಲ, ಆದರೆ ನಾವು ಇಂದಿನ ಸನ್ನಿವೇಶ, ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡು ಪ್ರಶ್ನಿಸುವುದು ಉತ್ತಮ. ಇವೆಲ್ಲ ಏನೇ ಇರಲಿ, ಯೋಗ ಗುರುವೊಬ್ಬ ಬೇರೆ ದೇಶಗಳೂ ತಿರುಗಿ ನೋಡುವಂತೆ ಸಂಸ್ಥೆ ಕಟ್ಟಿರುವುದು ಸಣ್ಣ ವಿಷಯವಲ್ಲ. ಪತಂಜಲಿ ಪದಾರ್ಥಗಳ ವಿತರಣೆಯಲ್ಲಿ ಆದ ವ್ಯತ್ಯಯವನ್ನ ಗುರುತಿಸಿ ಅದನ್ನ ಸರಿಪಡಿಸಿಕೊಂಡು, ಜಾಗತಿಕ ಮಟ್ಟದಲ್ಲಿ ಪತಂಜಲಿಯ ಮಕಾಡೆ ಮಲಗಿಸಲು ನಡೆಯುವ ಹುನ್ನಾರಗಳನ್ನ ಮೆಟ್ಟಿ ನಿಂತು ಬೆಳೆಯುವುದಿದೆಯಲ್ಲ ಅದು ಸುಲಭವಲ್ಲ. ಎಲ್ಲವನ್ನೂ ಬದಿಗಿಟ್ಟು ಕೇವಲ ಉದ್ಯಮವನ್ನಾಗಿ ನೋಡಿದರೂ ಇದು ಕಡಿಮೆ ಸಾಧನೆಯಲ್ಲ. ಆ ಮಟ್ಟಿಗೆ ಪತಂಜಲಿ ಇಂದಿನ ದಿನದಲ್ಲಿ ಗೆದ್ದಿದೆ ಎನ್ನಬಹುದು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com