FIRE; ಬೇಗ ನಿವೃತ್ತಿ ಹೊಂದಲು ಬೇಕು ಕಿಚ್ಚು!

ಹಣಕ್ಲಾಸು-269

-ರಂಗಸ್ವಾಮಿ ಮೂಕನಹಳ್ಳಿ

Published: 22nd July 2021 03:43 AM  |   Last Updated: 22nd July 2021 03:43 AM   |  A+A-


Image for representational purpose

ಸಾಂಕೇತಿಕ ಚಿತ್ರ

Posted By : Srinivas Rao BV
Source : Online Desk

ಇಂದಿನ ದಿನಗಳಲ್ಲಿ ನಿವೃತ್ತಿಯ ವಾಖ್ಯೆ ಬದಲಾಗಿದೆ. ಕೆಲವರು ಸ್ವಇಚ್ಛೆಯಿಂದ ನಿವೃತ್ತರಾಗುತ್ತಿದ್ದಾರೆ. ಇನ್ನೂ ಕೆಲವರಿಗೆ ಹತ್ತಾರು ವರ್ಷಗಳಿಂದ ಕೆಲಸ ನೀಡಿದ್ದ ಅವರ ಸಂಸ್ಥೆಯೇ ಗೇಟ್ ಪಾಸ್ ನೀಡಿದೆ. ಅಂದರೆ ಅವಧಿಗೂ ಮುನ್ನ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳದೆ ವಿಧಿಯಿಲ್ಲ ಎನ್ನುವಂತಾಗಿದೆ. 

ಎರಡನೇ ವರ್ಗದ ಜನ ತಮ್ಮ ಮುಂದಿನ ಜೀವನದ ರೂಪುರೇಷೆಗಳನ್ನ ಮರು ಪರಿಶೀಲಿಸಬೇಕಾದ ಅವಶ್ಯಕತೆ ಇರುತ್ತದೆ. ಉಳಿದಂತೆ ಸ್ವಇಚ್ಛೆಯಿಂದ ನಿವೃತ್ತಿ ಪಡೆಯಲು ಬಯಸಿದವರಲ್ಲಿ ಫೈರ್ ಬಗ್ಗೆ ಮಾಹಿತಿ ಇರಬೇಕು. ಅಲ್ಲಿನ ಒಂದಷ್ಟು ನಿಯಮಾವಳಿಗಳನ್ನ ಪೂರ್ಣಗೊಳಿಸುವ ತಾಕತ್ತು ಉಳ್ಳವರು ಬೇಗ ನಿವೃತ್ತಿಯನ್ನ ಪಡೆಯಬಹುದು. ಬೇಗ ಎಂದರೆ ಯಾವಾಗ? ಎನ್ನುವ ಪ್ರಶ್ನೆ ಎದುರಾಗುತ್ತದೆ. 

ಸಾಮಾನ್ಯವಾಗಿ ನಿವೃತ್ತಿ ಎಂದರೆ 60 ರಿಂದ 65 ವಯಸ್ಸು ಎಂದು ನಾವು ಪರಿಗಣಿಸಬಹುದು. ಸಾಮಾನ್ಯವಾಗಿ ಒಪ್ಪಿಕೊಂಡ ಈ ವಯಸ್ಸಿಗಿಂತ ಮುಂಚೆ ನಿವೃತ್ತಿ ಹೊಂದುವುದನ್ನ ಅರ್ಲಿ ರಿಟೈರ್ಮೆಂಟ್ ಎಂದು ಕರೆಯಬಹುದು. ಕೆಲವರು 40ಕ್ಕೆ ನಿವೃತ್ತಿ ಬಯಸಿದರೆ, ಕೆಲವರು 45, 50, 55 ಹೀಗೆ ತಮ್ಮ ಇಂದಿನ ಜೀವನ ಶೈಲಿ, ಮುಂದಿನ ಜೀವನ ಶೈಲಿ ಎರಡನ್ನೂ ಅಳೆದು ತೂಗಿ ನಿರ್ಧಾರಗಳನ್ನ ಮಾಡುತ್ತಾರೆ.

FIRE- ಫೈನಾಸಿಯಲ್ ಇಂಡಿಪೆಂಡೆನ್ಸ್, ರಿಟೈರ್ ಅರ್ಲಿ ಎಂದರೇನು?

ಸಾಂಪ್ರದಾಯಿಕ ನಿವೃತ್ತಿ ಪಡೆಯಲು ನಾವು ಅನುಸರಿಸುವ ಗಳಿಕೆ-ಉಳಿಕೆ-ಹೂಡಿಕೆಯ ಮಾರ್ಗ, ಅರ್ಲಿ ರಿಟೈರ್ಮೆಂಟ್ ಪಡೆಯಲು ಬಯಸಿದಾಗ ಕೆಲಸಕ್ಕೆ ಬರುವುದಿಲ್ಲ. ಹೀಗಾಗಿ ಹಣಕಾಸು ಸ್ವಾತಂತ್ರ್ಯ ಪಡೆದು ಬೇಗ ನಿವೃತ್ತಿ ಹೊಂದಲು ಬೇರೆಯ ರೀತಿಯಲ್ಲಿ ಉಳಿಕೆ ಮತ್ತು ಹೂಡಿಕೆ ಮಾಡಬೇಕಾಗುತ್ತದೆ. ಈ ಬೇರೆ ರೀತಿಯ ಪರಿಭಾಷೆಗೆ ಫೈರ್ ಎನ್ನುವ ಹೆಸರನ್ನ ನೀಡಲಾಗಿದೆ. ಅಂದರೆ ಒಂದು ಅರ್ಥದಲ್ಲಿ ನಿಮ್ಮಲ್ಲಿ ನಿಜವಾದ ಕಿಚ್ಚು, ಬೆಂಕಿಯಿದ್ದರೆ ಮಾತ್ರ ಈ ಗುರಿಯನ್ನ ಸಾಧಿಸಲು ಸಾಧ್ಯ. ಇದು ಎಲ್ಲರಿಂದ ಖಂಡಿತ ಸಾಧ್ಯವಿಲ್ಲ ಎನ್ನುವುದನ್ನ ಕೂಡ ಇದು ಸೂಕ್ಷ್ಮವಾಗಿ ಧ್ವನಿಸುತ್ತದೆ.

ಬೇಗ (ಅರ್ಲಿ) ನಿವೃತ್ತರಾಗಲು ಏನು ಮಾಡಬೇಕು?

ಸಾಂಪ್ರದಾಯಿಕ ನಿವೃತ್ತಿಗಿಂತ ಮುಂಚೆ ನಿವೃತ್ತರಾಗಲು ಬಯಸುವವರು ಅಸಂಪ್ರದಾಯಿಕ ನಡೆಗಳನ್ನ ತಮ್ಮದಾಗಿಸಿಕೊಳ್ಳಬೇಕು. ನಾವು ಬೇರೆಯವರಿಗಿಂತ ಭಿನ್ನರಾಗಬೇಕಾದರೆ, ನಮ್ಮ ನಡೆ-ನುಡಿ ಕೂಡ ಅವರಿಗಿಂತ ಭಿನ್ನವಾಗಿರಬೇಕು. ಹೀಗೆ ಗುಂಪಿನಿಂದ ಬೇರ್ಪಟ್ಟು ನಮ್ಮದೇ ಆದ ದಾರಿಯಲ್ಲಿ ನಡೆಯಬೇಕಾದರೆ ಕೆಲವೊಂದು ಅಂಶಗಳನ್ನ ಪಾಲಿಸಬೇಕಾಗುತ್ತದೆ. ಅಂತಹ ಅಂಶಗಳೇನು ಎನ್ನುವುದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ.

  1. ಎಲ್ಲಕ್ಕೂ ಮೊದಲು ಯಾವಾಗ ನಿವೃತ್ತಿ ಹೊಂದಬೇಕು ಎನ್ನುವ ನಿಖರತೆ ಬೇಕು: ನಾವು ಯಾವ ವಯಸ್ಸಿನಲ್ಲಿ ನಿವೃತ್ತಿ ಹೊಂದಬೇಕು ಎನ್ನುವುದನ್ನ ಎಲ್ಲಕ್ಕೂ ಪ್ರಥಮವಾಗಿ ನಿರ್ಧರಿಸಬೇಕು. ಏಕೆಂದರೆ ಈ ರೀತಿಯ ಅಸಾಂಪ್ರದಾಯಿಕ ನಿವೃತ್ತಿಯ ನಂತರ ಎಷ್ಟು ಸಮಯ ನಾವು ಬದುಕಬಹುದು? ಮುಂದಿನ ದಿನಗಳ ಖರ್ಚು ಎಷ್ಟಿರಬಹುದು? ಎನ್ನುವುದರ ಆಧಾರದ ಮೇಲೆ ನಮಗೆ ಬೇಕಾದ ಉಳಿಕೆಯ ಮೊತ್ತವನ್ನ ನಿರ್ಧರಿಸ ಬೇಕಾಗುತ್ತದೆ. ಉದಾಹರಣೆಗೆ ಸರಾಸರಿ ಆಯಸ್ಸು 70 ಎಂದುಕೊಂಡರೆ ಮತ್ತು 40ಕ್ಕೆ ನಿವೃತ್ತಿ ಹೊಂದಲು ಬಯಸಿದ್ದರೆ, ಮುಂದಿನ 30 ವರ್ಷಕ್ಕೆ ಬೇಕಾಗುವ ಹಣದ ವ್ಯವಸ್ಥೆಯನ್ನ ನಾವು ಮಾಡಿಕೊಳ್ಳಬೇಕಾಗುತ್ತದೆ. ಅದೇ 50ಕ್ಕೆ ನಿವೃತ್ತಿ ಹೊಂದಲು ಬಯಸಿದರೆ ಕೇವಲ 20 ವರ್ಷದ ಖರ್ಚನ್ನ ಗಳಿಸಿದ್ದರೆ ಸಾಕು, ಜೊತೆಗೆ ಇನ್ನು 10 ವರ್ಷ ಕೆಲಸದ ಆದಾಯ ಕೂಡ ಇರುತ್ತದೆ. ಹೀಗೆ ನಾವು ಯಾವಾಗ ನಿವೃತ್ತಿ ಪಡೆಯಬೇಕು ಎನ್ನುವ ನಿಖರತೆ ಇದ್ದರೆ ಅಲ್ಲಿಗೆ ಅರ್ಧ ಯುದ್ಧ ಗೆದ್ದಂತೆ.
  2. ಬೇಗ ಶುರು ಮಾಡಬೇಕು: ನಿವೃತ್ತಿ ಎನ್ನುವುದು ಕೆಲಸಕ್ಕೆ ಸೇರಿದ ಮರುದಿನವೇ ಪ್ಲಾನ್ ಮಾಡಬೇಕಾದ ವಿಷಯ. ಇದರ ಬಗ್ಗೆ ಚಿಂತಿಸದೆ ಕಳೆದ ಒಂದೊಂದು ದಿನಗಳೂ ನಷ್ಟವಾದಂತೆ, ಪ್ರತಿ ಕಳೆದ ದಿನಗಳು ಹೆಚ್ಚಿನ ಬೇಡಿಕೆಯನ್ನ ಮುಂದಿಡುತ್ತವೆ. ಹೀಗಾಗಿ ಯಾವಾಗ ನಿವೃತ್ತಿ ಹೊಂದಬೇಕು ಎನ್ನುವ ನಿರ್ಧಾರವನ್ನ ಬೇಗ ತೆಗೆದುಕೊಂಡು ತಕ್ಷಣ ಅದರ ಬಗ್ಗೆ ಕಾರ್ಯತತ್ಪರಾಗಬೇಕು. ಉಳಿಕೆಯಲ್ಲಿ ಚಕ್ರಬಡ್ಡಿಯ ಶಕ್ತಿಯ ಪೂರ್ಣ ಪ್ರಯೋಜನವನ್ನ ಪಡೆಯಲು ಬೇಗ, ಮತ್ತು ಚಿಕ್ಕ ವಯಸ್ಸಿನಲ್ಲಿ ಹೂಡಿಕೆ ಮಾಡುವುದು ಒಳಿತು.
  3. ವಿಪರೀತ ಉಳಿತಾಯ ಮಾಡುವ ಮನಸ್ಸು ಇರಬೇಕು: ಹೌದು ವಿಪರೀತ ಅಂದರೆ ಎಕ್ಸ್ಟ್ರಿಮ್ ಸೇವಿಂಗ್ ಮಾಡುವ ಮನಸ್ಥಿತಿ ಇದ್ದವರು ಮಾತ್ರ ಬೇಗ ನಿವೃತ್ತಿ ಹೊಂದಲು ಸಾಧ್ಯ. ಗಳಿಕೆಯ 70 ಪ್ರತಿಶತ ಹಣವನ್ನ ಉಳಿಸುತ್ತಾ ಹೋದರೆ ಮಾತ್ರ ಅಸಾಂಪ್ರದಾಯಿಕ ನಿವೃತ್ತಿ ಪಡೆಯಲು ಸಾಧ್ಯ. ಜಗತ್ತಿನ ಯಾವುದೇ ದೇಶದಲ್ಲಿ ಅಥವಾ ನಗರದಲ್ಲಿ ಜೀವಿಸುವ ಯಾವುದೇ ಪ್ರಜೆಗೆ ಆಗಲಿ 70 ಪ್ರತಿಶತ ಉಳಿತಾಯ ಎನ್ನುವುದು ಸುಲಭದ ಮಾತಲ್ಲ !! ಅದೊಂದು ತಪಸ್ಸು. ದಿನನಿತ್ಯ ತಪಸ್ಸನ್ನ ಭಂಗ ಮಾಡಲು ನೂರಾರು ಜಾಹೀರಾತುಗಳು, ಸಾಲದ ಸುಳಿಗೆ ಸಿಲುಕಿಸುವ ಆಮಿಷಗಳು ಎದುರಾಗುತ್ತವೆ. ಅವೆಲ್ಲವನ್ನ ಮೀರಿ 70 ಪ್ರತಿಶತ ಉಳಿಕೆ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ.
  4. ವಾರ್ಷಿಕ ಖರ್ಚಿನ 30 ಪಟ್ಟು ಹಣ ಸಂಗ್ರಹಣೆಯಾಗಿರಬೇಕು: ಕೆಲವೊಮ್ಮೆ ಆದಾಯದ 70 ಪ್ರತಿಶತ ಹಣವನ್ನ ಉಳಿಸುವುದು ಕಷ್ಟ ಎನ್ನಿಸುತ್ತದೆ. ಹೀಗಾಗಿ ಫೈರ್ ನಲ್ಲಿ ಇದಕ್ಕೆ ಇನ್ನೊಂದು ಪರ್ಯಾಯವನ್ನ ಕೂಡ ಸೂಚಿಸಿದ್ದಾರೆ. ಅಂದರೆ ನಿಮ್ಮ ವಾರ್ಷಿಕ ಖರ್ಚು ಎಷ್ಟಿದೆ ಅದರ 30 ಪಟ್ಟು ಹಣವನ್ನ ನಿಧಿಯ ರೂಪದಲ್ಲಿ ಸಂಗ್ರಹ ಮಾಡಿ ಹೂಡಿಕೆ ಮಾಡಬೇಕಾಗುತ್ತದೆ. ಒಂದು ಉದಾಹರಣೆಯನ್ನ ನೋಡೋಣ. ನಿಮ್ಮ ವಾರ್ಷಿಕ ಖರ್ಚು 6 ಲಕ್ಷ ರೂಪಾಯಿ ಎಂದುಕೊಂಡರೆ, ಈ ಖರ್ಚನ್ನ 30 ರಿಂದ ಗುಣಿಸಬೇಕಾಗುತ್ತದೆ, ಬರುವ ಫಲಿತಾಂಶ ಒಂದು ಕೋಟಿ 80 ಲಕ್ಷ ರೂಪಾಯಿ. ಇಷ್ಟು ಮೊತ್ತವನ್ನ 5 ರಿಂದ 6 ಪ್ರತಿಶತ ಆದಾಯ ನೀಡುವ ಕಡೆಯಲ್ಲಿ ಹೂಡಿಕೆ ಮಾಡಬೇಕು. ಇದು ಹಣದುಬ್ಬರದ ಕಥೆಯನ್ನ ನೋಡಿಕೊಳ್ಳಲು ಸಹಕಾರಿಯಾಗುತ್ತದೆ. ಅಲ್ಲದೆ 40 ರ ನಂತರ ನಿವೃತ್ತಿಯಾದರೂ ಸಹ ಇದು ಸಾಕಾಗುತ್ತದೆ.
  5. 4 ಪರ್ಸೆಂಟ್ ರೂಲ್: ಮೇಲೆ ನಾಲ್ಕನೇ ಅಂಶದಲ್ಲಿ ಹೇಳಿದ ಮೊತ್ತದ ನಾಲ್ಕು ಪ್ರತಿಶತ ಹಣವನ್ನ ಮಾತ್ರ ನಿತ್ಯ ಜೀವನಕ್ಕೆ ಬಳಸುವುದು, ಇದನ್ನ ಮೀರಿ ಹಣವನ್ನ ಖರ್ಚು ಮಾಡದೆ ಇರುವುದು ಕೂಡ ಅರ್ಲಿ ರಿಟೈರ್ಮೆಂಟ್ ಪಡೆಯುವಾಗ ಬದ್ಧರಾಗಿರಲು ತೀರ್ಮಾನಿಸಬೇಕಾಗುತ್ತದೆ.

ಮೇಲೆ ಹೇಳಿದ ರೂಲ್ಸ್ ಎಲ್ಲರಿಗೂ ಸರಿ ಹೊಂದುತ್ತದೆಯೆ?

ಗಮನಿಸಿ ನೋಡಿ, ನಾವೆಲ್ಲಾ ಒಬ್ಬರಂತೆ ಒಬ್ಬರಿಲ್ಲ, ನನ್ನ ಜೀವನಶೈಲಿ ನಿಮ್ಮದಲ್ಲ!, ನಿಮ್ಮ ಜೀವನ ಶೈಲಿ ನನಗೆ ಹೊಂದುವುದಿಲ್ಲ. ಅಂದರೆ ಕೆಲವರಿಗೆ ಖರ್ಚು ಮಾಡುವುದರಲ್ಲಿ ಖುಷಿ, ಕೆಲವರಿಗೆ ಉಳಿಸುವುದರಲ್ಲಿ ನೆಮ್ಮದಿ. ಇನ್ನು ಕೆಲವರಿಗೆ ಆಸ್ತಿ ಮಾಡುವುದರಲ್ಲಿ ಆಸಕ್ತಿ ಹೆಚ್ಚು. ನಮ್ಮಲಿ ಹಲವರದು ಹೆಚ್ಚು ಹಣವಿದ್ದೂ ಅತ್ಯಂತ ಸರಳವಾದ ಜೀವನ ನಡೆಸುವ ಬದುಕು, ಇನ್ನು ಕೆಲವರು ಸಾಲ ಮಾಡಿಯಾದರೂ ಸರಿಯೇ ಕಣ್ಣುಕುಕ್ಕುವ ಹಾಗೆ ಬದುಕಬೇಕು ಎನ್ನುವ ಹಂಬಲ. ಹೀಗಾಗಿ ಮೇಲೆ ಹೇಳಿದ ರೂಲ್ಸ್ ಎಲ್ಲರಿಗೂ ಸರಿ ಹೊಂದುತ್ತದೆ ಎಂದು ಹೇಳಲು ಬರುವುದಿಲ್ಲ. ಸಾಮಾನ್ಯವಾಗಿ ಇದು ಕೆಳಗೆ ನಮೂದಿಸಿರುವ ಗುಣಗಳನ್ನ ಹೊಂದಿರುವ ಜನರಿಗೆ ಹೆಚ್ಚು ಹೊಂದುತ್ತದೆ ಎಂದು ಹೇಳಬಹುದು.

  1. ತಮ್ಮ ಆದಾಯದ ಹೆಚ್ಚು ಹಣವನ್ನ ಸಾಮಾನ್ಯ ಜನರಿಗಿಂತ ಹೆಚ್ಚು ಉಳಿಸುವ ಮನಸ್ಥಿತಿ ಹೊಂದಿರುವ ಜನರಿಗೆ ಇದು ಹೆಚ್ಚು ಸೂಕ್ತ.
  2. ಎಷ್ಟು ಹಣ ಇದೆಯೋ ಅಥವಾ ಎಷ್ಟು ಹಣ ಬರುತ್ತದೆಯೋ ಅಷ್ಟರಲ್ಲಿ ಜೀವನ ನಡೆಸುತ್ತೇವೆ ಎನ್ನುವ ಮಿನಿಮಲಿಸ್ಟಿಕ್ ಅಂದರೆ ಕನಿಷ್ಠ ಆದಾಯದಲ್ಲಿ, ಕನಿಷ್ಠ ವಸ್ತುಗಳಲ್ಲಿ ಜೀವನ ನಡೆಸಲು ಸಿದ್ಧವಿರುವ ಜನತೆಗೆ ಕೂಡ ಇದು ಹೆಚ್ಚು ಒಪ್ಪುತ್ತದೆ.
  3. ಬೆಳಿಗ್ಗೆ 9ಕ್ಕೆ ಮನೆಬಿಟ್ಟು ಸಂಜೆ 5ಕ್ಕೆ ಮನೆ ಸೇರುವ ಕೆಲಸ ಇಷ್ಟವಿಲ್ಲದ, ಆದರೆ ಫೈರ್ ನಿಯಮಾವಳಿ ಹೇಳಿದಷ್ಟು ಹಣವನ್ನ ಸಂಗ್ರಹ ಮಾಡಲು ಆಗದ, ನಿತ್ಯ ಜೀವನದ ಖರ್ಚಿಗೆ ಒಂದಷ್ಟು ಹಣವನ್ನ ಪಾರ್ಟ್ ಟೈಮ್, ಅರೆಕಾಲಿಕ ಕೆಲಸಗಳಿಂದ ದುಡಿಯುವ ಮನಸುಳ್ಳವರಿಗೂ ಇದು ಹೇಳಿ ಮಾಡಿಸಿದಂತಿದೆ.
  4. ಮೇಲಿನ 3ನೇ ಅಂಶಕ್ಕಿಂತ ಕೇವಲ ಒಂದಷ್ಟು ಬದಲಾವಣೆ ಇರುವ ಜನರಿಗೂ ಇದು ಅನುಕೂಲಕರ, ಅಂದರೆ ದಿನನಿತ್ಯಕ್ಕೆ ಬೇಕಾಗುವ ಖರ್ಚಿಗೆ ಬೇಕಾಗುವ ನಿಧಿಯನ್ನ ಸಂಗ್ರಹಿಸಿಯಾಗಿದೆ, ಆದರೆ ವೇಳೆಯನ್ನ ಉತ್ತಮವಾಗಿ ಕಳೆಯಲು, ಸಮಾಜಕ್ಕೆ ಸಹಾಯ ಮಾಡಲು ತನ್ಮೂಲಕ ಒಂದಷ್ಟು ಹಣವನ್ನ ಕೂಡ ಗಳಿಸಲು ಸಾಧ್ಯವಿರುವ ಜನರಿಗೂ ಇದು ಬಹಳ ಇಷ್ಟವಾಗುತ್ತದೆ.

ಕೊನೆಮಾತು: ನಿವೃತ್ತಿ ಎನ್ನುವುದು ಅವರವರಿಗೆ ಬಿಟ್ಟ ವಿಚಾರ. ಕೆಲವರಿಗೆ ನಿವೃತ್ತಿ ವಯಸ್ಸಾದರೂ ಕೆಲಸಕ್ಕೆ ಹೋಗುವ ತವಕವಿರುತ್ತದೆ. ಇನ್ನು ಕೆಲವರಿಗೆ 40ಕ್ಕೆ ಸಾಕೆನಿಸುತ್ತದೆ. ನಿವೃತ್ತಿ ಎಂದ ತಕ್ಷಣ ಅದು ಬದುಕಿಂದ ನಿವೃತ್ತಿ ಎಂದಲ್ಲ. ನಮಗೆ ಬೇಕಾದ ಕೆಲಸವನ್ನ, ಇಷ್ಟವಾದ ಕೆಲಸವನ್ನ ನಮಗೆ ಬೇಕಾದ ಸಮಯದಲ್ಲಿ, ನಮ್ಮ ವೇಗಕ್ಕೆ ತಕ್ಕಂತೆ ಮಾಡುವುದು ಎಂದರ್ಥ! ಇದು ಇಂದು ಬದಲಾವಣೆ ಕಂಡಿರುವ ನಿವೃತ್ತಿ ವ್ಯಾಖ್ಯಾನ. ಹೀಗಾಗಿ ಬೇಗ ನಿವೃತ್ತಿ ಪಡೆಯಲು ಬಯಸಿರುವವರು ಮೇಲೆ ಹೇಳಿದ ರೀತಿಯಲ್ಲಿ ಗಳಿಸಿ, ಉಳಿಸಿ, ಹೂಡಿಕೆ ಮಾಡಿದ್ದರೂ ಕೂಡ, ಸಮಾಜದಲ್ಲಿ ಆಗುತ್ತಿರುವ ವೇಗದ ಬದಲಾವಣೆಯ ಬಗ್ಗೆ ಗಮನವನ್ನ ನೀಡಬೇಕಾಗುತ್ತದೆ. ಸದಾ ತಮ್ಮ ಕೌಶ್ಯಲ್ಯವನ್ನ ವೃದ್ಧಿಸಿಕೊಳ್ಳುತ್ತ ಇರಬೇಕಾಗುತ್ತದೆ. ಸಮಯ ಬಂದರೆ ತಮ್ಮ ಇಂದಿನ ಜೀವನ ಶೈಲಿ ಬದಲಾವಣೆಗೂ ಸಿದ್ಧರಿರಬೇಕಾಗುತ್ತದೆ. ಸಮಾಜದಲ್ಲಿ ಅನಿಶ್ಚಿತತೆ ಹೆಚ್ಚಿದಷ್ಟೂ ಇಂತಹ  ನಿವೃತ್ತರಲ್ಲೂ ಅನಿಶ್ಚಿತತೆ ಮನೆ ಮಾಡುತ್ತದೆ. ನಿವೃತ್ತಿಗಾಗಿ ತೆಗೆದಿಡುವ ಮೀಸಲು ನಿಧಿಯ ಮೊತ್ತವನ್ನ ಹೆಚ್ಚಿಸುವುದು, ಸಮಾಜದಲ್ಲಿ ಸದಾ ಪ್ರಸ್ತುತತೆಯನ್ನ ಉಳಿಸೊಳ್ಳುವುದು ಇಂತಹ ಅನಿಶ್ಚಿತತೆಗೆ ಇರುವ ಸರಳ ಮದ್ದುಗಳು.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp