ನಿವೃತ್ತಿಗೆ ಮುನ್ನ ಕೇಳಿಕೊಳ್ಳಬೇಕಾದ ಪ್ರಶ್ನೆಗಳು...

ಹಣಕ್ಲಾಸು-270-ರಂಗಸ್ವಾಮಿ ಮೂಕನಹಳ್ಳಿ
ನಿವೃತ್ತಿಯ ಯೋಜನೆ (ಸಾಂಕೇತಿಕ ಚಿತ್ರ)
ನಿವೃತ್ತಿಯ ಯೋಜನೆ (ಸಾಂಕೇತಿಕ ಚಿತ್ರ)

ಕಳೆದ ವಾರ ಬೇಗ ನಿವೃತ್ತಿ ಹೊಂದಲು ಕಿಚ್ಚು ಬೇಕು ಎನ್ನುವುದರ ಬಗ್ಗೆ ತಿಳಿಸಲಾಗಿತ್ತು. ಅಲ್ಲಿ ಹೇಳಿದಂತೆ ನಿವೃತ್ತಿ ಅಥವಾ ರಿಟೈರ್ಮೆಂಟ್ ಎಂದರೆ ಬದುಕಿನಿಂದ ನಿವೃತ್ತಿ ಎಂದಲ್ಲ, ನಮ್ಮ ಸಮಯವನ್ನ ನಮ್ಮ ಇಚ್ಚೆಯಂತೆ ಕಳೆಯಲು ನಾವು ಕಂಡುಕೊಂಡ ಒಂದು ಮಾರ್ಗ. ಕೆಲಸ ಕೂಡ ಮಾಡಬಹುದು. ಹಣವನ್ನೂ ಗಳಿಸಬಹುದು ಆದರೆ ಅವೆಲ್ಲವೂ ನಮ್ಮ ಸಮಯದಲ್ಲಿ, ನಮಗೆ ಬೇಕಾದಾಗ ಮಾಡುವಂತಿರಬೇಕು ಎನ್ನುವುದು ಇಂದಿನ ನಿವೃತ್ತಿಯ ಡೆಫಿನಿಶನ್.

ಇವತ್ತಿನ ಬರಹದಲ್ಲಿ ಈ ರೀತಿಯ ನಿವೃತ್ತಿ ಹೊಂದುವ ಮುಂಚೆ ನಮ್ಮನ್ನ ನಾವು ಒಂದಷ್ಟು ಪ್ರಶ್ನೆಗಳನ್ನ ಕೇಳಿಕೊಳ್ಳಬೇಕಾಗುತ್ತದೆ, ಜೊತೆಗೆ ನಮ್ಮ ಆರ್ಥಿಕ ಸಲಹೆಗಾರರ (ಫೈನಾನ್ಸಿಯಲ್ ಅಡ್ವೈಸರ್) ಬಳಿ ಕೂಡ ಒಂದಷ್ಟು ಪ್ರಶ್ನೆಗಳನ್ನ ಕೇಳಬೇಕಾಗುತ್ತದೆ. ಅವೇನು ಮತ್ತು ಅವುಗಳೇಕೆ ಅಷ್ಟೊಂದು ಪ್ರಾಮುಖ್ಯತೆಯನ್ನ ಪಡೆಯುತ್ತದೆ ಎನ್ನುವುದರ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ನಿವೃತ್ತಿ ಹೊಂದಲು ಬಯಸುವರು ಅವರನ್ನೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಹೀಗಿವೆ:

  1. ಎಲ್ಲಕ್ಕೂ ಮೊದಲು ಯಾವ ಕೆಲಸ ನನಗೆ ಇಷ್ಟ ಎನ್ನುವುದನ್ನ ಕೇಳಿಕೊಳ್ಳಬೇಕು: ಎಲ್ಲಕ್ಕೂ ಮೊದಲು ಒಬ್ಬ ವ್ಯಕ್ತಿ ತಾನು ಮಾಡುತ್ತಿರುವ ಕೆಲಸದಲ್ಲಿ ಅತ್ಯಂತ ಖುಷಿಯಿಂದ ಇದ್ದಾನೆ ಎಂದರೆ ಆಗ ನಿವೃತ್ತಿಯ ಮಾತೆ ಬರುವುದಿಲ್ಲ. ವ್ಯಕ್ತಿ ನಿವೃತ್ತಿ ಬಯಸಿದ್ದಾನೆ ಎಂದರೆ ಆತ ಬದಲಾವಣೆ ಬಯಸಿದ್ದಾನೆ ಎಂದರ್ಥ. ಮುಕ್ಕಾಲು ಪಾಲು ಕೆಲಸ ಮಾಡುವವರಲ್ಲಿ ತಾವು ಮಾಡುತ್ತಿರುವ ಕೆಲಸದಲ್ಲಿ ತೃಪ್ತಿ ಅಥವಾ ಜಾಬ್ ಸ್ಯಾಟಿಸ್ಫ್ಯಾಕ್ಷನ್ ಇರುವುದಿಲ್ಲ. ಅವರು ಕೆಲಸದಿಂದ ನಿವೃತ್ತಿ ಹೊಂದುವುದಕ್ಕಿಂತ ಸದ್ಯದ ಕೆಲಸದಿಂದ ನಿವೃತ್ತಿ ಹೊಂದಲು ಬಯಸಿರುತ್ತಾರೆ. ಹೀಗಾಗಿ ಯಾವ ಕೆಲಸ ಖುಷಿಯನ್ನ ನೀಡುತ್ತದೆ ಎನ್ನುವುದನ್ನ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮೊದಲೇ ಹೇಳಿದಂತೆ ಮಾಡುವ ಕೆಲಸದಲ್ಲಿ ಖುಷಿಯಿದ್ದರೆ ಅದು ಕೆಲಸವೆಂದು ಅನ್ನಿಸುವದೇ ಇಲ್ಲ.
  2. ನಮ್ಮಿಷ್ಟದ ಕೆಲಸ ಮಾಡಲು ಬೇಕಾದ ಅರ್ಹತೆ ನಮಗಿದೆಯೇ?: ಈ ಪ್ರಶ್ನೆಯನ್ನ ಕೇಳಿಕೊಳ್ಳುವುದು ಕೂಡ ಬಹಳ ಮುಖ್ಯ. ಇವತ್ತಿಗೆ ನಾನೇನೂ ಹಣಕಾಸು ಸಲಹೆಗಾರನಾಗಿ ಬದುಕು ಕಂಡುಕೊಡಿದ್ದೇನೆ, ಬೇರೆಯಾರಾದರು ಈ ರೀತಿಯ ಬದುಕನ್ನ ಬಯಸಿದರೆ, ಆ ಕೆಲಸವನ್ನ ಮಾಡಲು ಬೇಕಾದ ಅರ್ಹತೆ ಅಂದರೆ ಕ್ವಾಲಿಫಿಕೇಷನ್ ನಮಗಿದೆಯೇ? ಎನ್ನುವ ಪ್ರಶ್ನೆಯನ್ನ ಕೇಳಿಕೊಳ್ಳಬೇಕು. ಕೆಲವೊಮ್ಮೆ ಆ ಅರ್ಹತೆಯನ್ನ ಪಡೆದುಕೊಳ್ಳಬಹುದು. ಅದಕ್ಕೆ ಬೇಕಾದ ಸಮಯವೆಷ್ಟು? ಬೇಕಾಗುವ ಹಣವೇಷ್ಟು? ಅಷ್ಟು ಸಮಯ ಮತ್ತು ವೇಳೆಯ ಜೊತೆಗೆ ಅದನ್ನ ಬಿಡದೆ ಸಾಧಿಸುವ ಮನಸ್ಥಿತಿ ನನಗಿದೆಯೇ? ಎನ್ನುವ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು. ಬಹುತೇಕೆ ಬಾರಿ ಸದ್ಯದ ಕೆಲಸದಿಂದ ಬಿಡುಗಡೆ ಹೊಂದಿದರೆ ಸಾಕು ಎನ್ನುವ ಮನೋಭಾವ ನಿವೃತ್ತಿಯ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ತಾತ್ಕಾಲಿಕ ನೋವಿಗೆ ಪರ್ಮನೆಂಟ್ ಶಮನವನ್ನ ಹುಡುಕುವುದು ಮೂರ್ಖತನವಾದೀತು. ಹೀಗಾಗಿ ಆತ್ಮಾವಲೋಕನ ಮಾಡಿಕೊಳ್ಳುವುದನ್ನ ನಿಲ್ಲಿಸಬಾರದು.
  3. ಅನಿಶ್ಚಿತ ಸನ್ನಿವೇಶದಲ್ಲಿ ಹೆಚ್ಚು ದೀರ್ಘಾವಧಿ ಯೋಚಿಸಬೇಕು: ಇಂದಿನ ದಿನಗಳಲ್ಲಿ ಅನಿಶ್ಚಿತತೆ ಬಹಳ ಹೆಚ್ಚಾಗಿದೆ ಇಂತಹ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಬೇಕಾಗುವ ಮೆಡಿಕಲ್ ಹೆಲ್ಪ್ ಮತ್ತು ಅದಕ್ಕೆ ಸಂಬಂಧಿಸಿದ ಹಣದ ಬಗ್ಗೆ ಪದೇ ಪದೇ ಹೊಸದಾಗಿ ಚಿಂತಿಸುತ್ತಿರಬೇಕು. ಹೊಸ ಹೂಡಿಕೆಗಳೇನು? ಅವುಗಳ ಸುರಕ್ಷತೆಯೇನು? ದೀರ್ಘಾವಧಿಯಲ್ಲಿ ಅವುಗಳು ನೀಡಬಹುದಾದ ಸಂಭಾವ್ಯ ಗಳಿಕೆಯೇನು? ಎನ್ನುವುದರ ಜೊತೆಗೆ ದಿನ ನಿತ್ಯದ ಖರ್ಚು ವೆಚ್ಚಗಳ ಸರಿದೂಗಿಸುವ ಕೆಲಸವನ್ನ ಕೂಡ ಮಾಡಬೇಕಾಗುತ್ತದೆ. ನಿವೃತ್ತಿ ನಂತರ ತೆರಿಗೆಯ ಪಾತ್ರವನ್ನ ಕೂಡ ಗಮನಿಸಬೇಕಾಗುತ್ತದೆ. ಇವತ್ತಿನ ತೆರಿಗೆ ನೀತಿ ಮುಂಬರುವ ದಿನಗಳಲ್ಲಿ ಬದಲಾಗಬಹುದು. ಬದಲಾದ ತೆರಿಗೆ ನೀತಿಯಿಂದ ಯಾವ ರೀತಿಯಲ್ಲಿ ಜೀವನದ ಮೇಲೆ ಪ್ರಭಾವ ಉಂಟಾಗುತ್ತದೆ? ಹೀಗೆ ಹಲವಾರು ಪ್ರಶ್ನೆಗಳನ್ನ ಕೇಳಿಕೊಂಡು ಅದಕ್ಕೆ ಪೂರಕವಾದ ಉತ್ತರಗಳನ್ನ ಕಂಡುಕೊಳ್ಳಬೇಕಾಗುತ್ತದೆ. ಜೊತೆಗೆ ನಮ್ಮ ಜೀವನಕ್ಕೆ ಅನುಕೊಲಕರವಾಗಿಲ್ಲದ ಸನ್ನಿವೇಶದಲ್ಲಿ ಬದುಕಲು ಮಾನಸಿಕ ಸಿದ್ಧತೆಯನ್ನ ಕೂಡ ಮಾಡಿಕೊಳ್ಳಬೇಕಾಗುತ್ತದೆ.
  4. ಬಯಸಿದ ಬದುಕಿನ ದಾರಿಯಲ್ಲಿ ತೊಂದರೆ ಉಂಟಾದರೇನು ಮಾಡುವುದು?: ಕೆಲವೊಮ್ಮೆ ನಿವೃತ್ತಿಗೆ ಬೇಕಾಗುವ ಹಣ, ಖರ್ಚು ವೆಚ್ಚ ಎಲ್ಲವನ್ನೂ ಅಳೆದು ತೂಗಿ ನಿರ್ಧಾರವನ್ನ ತೆಗೆದುಕೊಂಡಿದ್ದರೂ ಏರುಪೇರುಗಳಾಗುವುದು ಸಹಜ. ಇವತ್ತಿನ ಕೊರೋನವನ್ನ ಯಾರು ತಾನೇ ಯೋಚಿಸಿರಲು ಅಥವಾ ಊಹಿಸಿರಲು ಸಾಧ್ಯವಿತ್ತು? ಇಂತಹ ಸಮಯ ಮತ್ತೆ ಬರುವುದಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಬದುಕು ಎನ್ನುವುದು ಅನಿಶ್ಚಿತತೆ ಎನ್ನುವಂತಾಗಿದೆ. ಆಕಸ್ಮಿಕವಾಗಿ ಮತ್ತೆ ಇಂತಹ ಘಳಿಗೆ ಬಂದರೆ ಮುಂದಿನ ದಾರಿಯೇನು? ಎನ್ನುವುದರ ಬಗ್ಗೆ ಕೂಡ ಯೋಚಿಸಬೇಕಾಗುತ್ತದೆ. ಎಲ್ಲವೂ ಚೆನ್ನಾಗಿರುವಾಗ ನಿರ್ಧಾರಗಳನ್ನ ತೆಗೆದುಕೊಳ್ಳುವುದು ಸುಲಭ. ಚೂರು ಏರುಪೇರಾದರೆ ಆಗ ನಿರ್ಧಾರಗಳನ್ನ ತೆಗೆದುಕೊಳ್ಳುವುದು ಬಹಳ ಕಷ್ಟ, ಹೀಗಾಗಿ ಮುಂಚೆಯೇ, ಹೀಗಾದರೆ ಹೀಗೆ ಮಾಡಬೇಕು ಎನ್ನುವ ಒಂದಷ್ಟು ಸಿದ್ಧತೆ ಇಂದಿನ ದಿನದ ಅವಶ್ಯಕತೆಯಾಗಿದೆ.
  5. ಎಸ್ಟೇಟ್ ಪ್ಲಾನ್ ಬಗ್ಗೆಯೂ ಸಮಾಲೋಚನೆ ಅಗತ್ಯ: ನಾವು ನಮ್ಮ ನಿವೃತ್ತಿಯ ಬಗ್ಗೆ ಬೇಕಾದಷ್ಟು ಸಿದ್ಧತೆ ಮತ್ತು ಯೋಚನೆಯನ್ನ ಮಾಡಿಕೊಂಡಿರುತ್ತೇವೆ. ಆದರೆ ನಮ್ಮ ನಂತರ ನಮ್ಮ ಗಳಿಕೆಯಲ್ಲಿ ಸೃಷ್ಟಿಸಿದ ಚಿರಾಸ್ತಿಗಳ ಬಗ್ಗೆ ಕೂಡ ಚಿಂತಿಸಬೇಕಾಗುತ್ತದೆ. ನಮ್ಮ ಗಳಿಕೆಯ ಹಣವನ್ನ ನಾವೇ ಉಪಯೋಗಿಸಿ ಹೋಗಬೇಕೆ? ಅಥವಾ ಅದನ್ನ ಮುಂದಿನ ಪೀಳಿಗೆಗೆ ತಲುಪಿಸಬೇಕೇ? ಎನ್ನುವ ಪ್ರಶ್ನೆಯನ್ನ ಕೂಡ ಮಾಡಿಕೊಳ್ಳಬೇಕಾಗುತ್ತದೆ. ಮಕ್ಕಳಿಲ್ಲದ ಜನರಲ್ಲಿ ನಮ್ಮ ನಂತರ ಉಳಿಯುವ ಸಂಪತ್ತನ್ನ ಹೇಗೆ ಮತ್ತು ಯಾರು, ಯಾವ ಕಾರಣಕ್ಕೆ ಬಳಸಬೇಕು ಎನ್ನುವ ನಿಖರತೆ ಕೂಡ ಇರಬೇಕಾಗುತ್ತದೆ. ಬದಲಾದ ಸನ್ನಿವೇಶದಲ್ಲಿ ಹೆಚ್ಚೆಚ್ಚು ಜನರು ತಾವು ಸಂಪಾದಿಸಿದ ಹಣವನ್ನ ತಾವೇ ವ್ಯಯಿಸಿ ಹೋಗುವ ನಿಲುವಿಗೆ ಬರುತ್ತಿದ್ದಾರೆ.                                           

ನಿವೃತ್ತಿ ಹೊಂದಲು ಬಯಸುವವರು ಹಣಕಾಸು ಸಲಹೆಗಾರರನ್ನ ಕೇಳಬೇಕಾದ ಪ್ರಶ್ನೆಗಳು ಬಹಳಷ್ಟಿವೆ , ಅವುಗಳಲ್ಲಿ ಪ್ರಮುಖವಾಗಿ:

  1. ನಿವೃತ್ತಿ ನಂತರದ ಜೀವನದ ಕನಸುಗಳನ್ನ ಚರ್ಚಿಸಿ: ಗಮನಿಸಿ ಕೆಲವರಿಗೆ ನಗರ ಪ್ರದೇಶದಿಂದ ದೂರ ಹೋಗಿ, ಬೇರೆ ಸಣ್ಣ-ಪುಟ್ಟ ನಗರದಲ್ಲಿ ಅಥವಾ ಹಳ್ಳಿಯಲ್ಲಿ ನೆಲಸಬೇಕು ಎನ್ನುವ ಇಚ್ಛೆಯಿರುತ್ತದೆ. ಕೆಲವರಿಗೆ ಉಳಿದ ಜೀವನವನ್ನ ಪ್ರವಾಸದಲ್ಲಿ ದೇಶ ವಿದೇಶಗಳ ನೋಡುತ್ತಾ ಕಳೆಯಬೇಕು ಎನ್ನುವ ಆಸೆಯಿರುತ್ತದೆ. ಇನ್ನೂ ಕೆಲವರಿಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಹಂಬಲವಿರುತ್ತದೆ. ಹೀಗೆ ವ್ಯಕ್ತಿಯಿಂದ ವ್ಯಕ್ತಿಗೆ ಇದು ಬದಲಾಗುತ್ತದೆ. ಇದರಲ್ಲಿ ಸರಿ ತಪ್ಪು ಎನ್ನುವುದಿಲ್ಲ, ಬದುಕಿನ ತಮ್ಮ ದಿನಗಳನ್ನ ತಮ್ಮಿಚ್ಚೆಯಂತೆ ಕಳೆಯುವ ಹಕ್ಕು ಎಲ್ಲರಿಗೂ ಇದೆ. ಆದರೆ ಇದನ್ನ ನಿಮ್ಮ ಹಣಕಾಸು ಸಲಹೆಗಾರರೊಂದಿಗೆ ಚರ್ಚಿಸುವುದು ಒಳ್ಳೆಯದು. ಇದರಿಂದ ಮುಂಬರುವ ಹಲವಾರು ಸಣ್ಣ ಪುಟ್ಟ ಅಡೆತಡೆಗಳನ್ನ ಸುಲಭವಾಗಿ ನಿವಾರಿಸಿಕೊಳ್ಳಬಹುದು. ನನ್ನ ನಿವೃತ್ತಿ ಪ್ಲಾನ್ ಹೀಗಿದೆ? ಇದೆಷ್ಟು ಪ್ರಾಯೋಗಿಕ? ಇದರಲ್ಲಿ ನಿಮಗೇನಾದರೂ ತಪ್ಪುಗಳು ಕಾಣುತ್ತಿವೆಯೇ? ಎನ್ನುವುದನ್ನ ಕೇಳಬೇಕು.
  2. ನಿವೃತ್ತಿ ನಂತರದ ಜೀವನಶೈಲಿ ನಿಗದಿಯಾದ ಮೇಲೆ ಅದಕ್ಕೆ ಬೇಕಾಗುವ ನಿಧಿಯ ಮೊತ್ತದ ಬಗ್ಗೆ ಮಾತುಕತೆಯಾಗಬೇಕು: ಉಳಿದ ಜೀವನವನ್ನ ದೇಶ ವಿದೇಶಗಳಲ್ಲಿ ಪ್ರಯಾಣಿಸುತ್ತ ಕಳೆಯಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದರೆ, ಅದಕ್ಕೆ ಬೇಕಾಗುವ ಹಣವೆಷ್ಟು, ಯಾವ ಪ್ರದೇಶದಲ್ಲಿ ಎಷ್ಟು ದಿನವಿರಬೇಕು? ಇತ್ಯಾದಿಗಳಿಗೆ ಶೇಖರಿಸಿ ಇಟ್ಟಿರುವ ನಿಧಿ ಸಾಲುತ್ತದೆಯೇ? ಇಲ್ಲದಿದ್ದರೆ ಅದಕ್ಕೇನು ಮಾಡಬೇಕು? ಸಾಲುವಂತಿದ್ದರೆ, ಎಲ್ಲವನ್ನೂ ಹೊತ್ತೊಯ್ಯಲು ಸಾಧ್ಯವಿಲ್ಲ, ಹಣವನ್ನ ಬೇಕಾದಷ್ಟು, ಬೇಕಾದ ಸಮಯದಲ್ಲಿ ತೆಗೆದುಕೊಳ್ಳುವ ಬಗೆ ಹೇಗೆ? ಹಣದ ವಿನಿಮಯ ದರಗಳೇನು? ಯಾವ ಸಮಯದಲ್ಲಿ ಪ್ರಯಾಣಿಸುವುದರಿಂದ ಹೆಚ್ಚಿನ ಉಳಿತಾಯ ಮಾಡಬಹುದು? ಇಂತಹ ಪ್ರಶ್ನೆಗಳಿಗೆ ಸಾಧ್ಯವಾದಷ್ಟೂ ಉತ್ತರಗಳನ್ನ ಮುಂಗಡವಾಗಿ ಪಡೆದುಕೊಳ್ಳಬೇಕು. ಹಾಗೊಮ್ಮೆ ನಗರ ಪ್ರದೇಶದಿಂದ ದೂರವಾಗಿ ಹಳ್ಳಿಯಲ್ಲಿ ಉಳಿದುಕೊಳ್ಳುವ ನಿರ್ಧಾರ ಮಾಡಿದರೆ, ಆಗ ಪ್ರಶ್ನೆಗಳು ಬದಲಾಗುತ್ತವೆ. ನಮ್ಮ ಆರೋಗ್ಯದ ಸ್ಥಿತಿಯೇನು? ಹಳ್ಳಿಗೆ ಎಷ್ಟು ಸಮೀಪದಲ್ಲಿ ಆಸ್ಪತ್ರೆಯಿದೆ? ಅಲ್ಲಿನ ವಾತಾವರಣ ನಮಗೆ ಒಗ್ಗುತ್ತದೆಯೇ? ಪಟ್ಟಣ ಪ್ರದೇಶದಿಂದ ಎಷ್ಟು ದೂರದಲ್ಲಿದೆ? ಮನೋಲ್ಲಾಸಕ್ಕೆ ಬೇಕಾದ ಯಾವುದಾದರೂ ವ್ಯವಸ್ಥೆಯಿದೆಯೇ? ಅಂತೆಯೇ ನಾವು ಯಾವ ಜೀವನ ಶೈಲಿಯನ್ನ ಬಯಸುತ್ತೇವೆ ಅದರ ಆಧಾರದ ಮೇಲೆ ನಾವು ಸಂಗ್ರಹಿಸಿಟ್ಟ ಹಣ ಸಾಕೆ ಎನ್ನುವುದು ಮತ್ತಿರರ ಪ್ರಶ್ನೆಗಳು ಉದ್ಭವಾಗುತ್ತವೆ. ಎಲ್ಲವನ್ನೂ ವಿವರವಾಗಿ ನಿಮ್ಮ ಹಣಕಾಸು ಸಲಹೆಗಾರರೊಂದಿಗೆ ಚರ್ಚಿಸುವುದು ಒಳಿತು.
  3. ಜೀವಮಾನದ ಸಾಧನೆ ಮನೆ, ಅದನ್ನೇನು ಮಾಡಬೇಕು?: ಜಗತ್ತಿನ ಬಹುಪಾಲು ಜನರ ಬಹಳಷ್ಟು ಅಂದರೆ ಸಿಂಹಪಾಲು ಗಳಿಕೆ ಮನೆಯ ಮೇಲೆ ಹೂಡಿಕೆಯಾಗಿರುತ್ತದೆ. ನಿವೃತ್ತಿಯ ಸಮಯದಲ್ಲಿ, ಬದಲಾದ, ಅಥವಾ ಇಚ್ಛಿಸಿದ ಜೀವನ ಶೈಲಿಯನ್ನ ಹೊಂದುವಾಗ, ಇಂತಹ ಮನೆಯನ್ನ ಏನು ಮಾಡುವುದು? ಎನ್ನುವ ಪ್ರಶ್ನೆ ಉದ್ಭವವಾಗುವುದು ಸಹಜ. ಬಾಡಿಗೆ ಕೊಡುವುದು ಉತ್ತಮವೇ? ಅಥವಾ ಮಾರಾಟ ಮಾಡಿ ಹಣವನ್ನ ಪಡೆದುಕೊಳ್ಳುವುದು ಉತ್ತಮವೇ? ಎನ್ನುವ ಪ್ರಶ್ನೆ ಕೂಡ ಸಹಜವಾಗಿ ಬಂದು ನಿಲ್ಲುತ್ತದೆ. ಮಕ್ಕಳಿದ್ದವರಿಗೆ ಇದನ್ನ ಮಕ್ಕಳಿಗೆ ಉಳಿಸಬೇಕೇ? ಅಥವಾ ನಮ್ಮ ಗಳಿಕೆಯನ್ನ ನಾವು ಅನುಭವಿಸಬೇಕೇ? ಎನ್ನುವ ತುಮುಲಗಳು ಕೂಡ ಹೆಚ್ಚಾಗುತ್ತದೆ. ಭಾರತೀಯ ಸನ್ನಿವೇಶಗಳಲ್ಲಿ ಈ ರೀತಿಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸುಲಭದ ಮಾತಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಹಣಕಾಸು ಸಲಹೆಗಾರರೊಂದಿಗೆ ಅಷ್ಟೇ ಅಲ್ಲ, ಕುಟುಂಬದ ಸದಸ್ಯರ ಜೊತೆಗೆ ಕೂಡ ಪ್ರಶ್ನೋತ್ತರಗಳ ಅಗತ್ಯವಿರುತ್ತದೆ.
  4. ವೈಯಕ್ತಿಕ ನಿಲುವುಗಳು, ಗುರಿಗಳ ಬಗ್ಗೆಯೂ ಒಂದಷ್ಟು ಚರ್ಚೆ ಮಾಡುವುದು ಒಳಿತು: ನಾನು ಏನೂ ಮಾಡುವುದಿಲ್ಲ, ಸುಮ್ಮನೆ ಉಳಿದ ದಿನಗಳನ್ನ ಕಳೆಯುತ್ತೇನೆ ಎನ್ನುವುದು ಕೂಡ ಒಂದು ನಿರ್ಧಾರ. ಅಂದರೆ ಏನಾದರೂ ಮಾಡುತ್ತೇನೆ ಎನ್ನುವುದು ಮಾತ್ರ ನಿರ್ಧಾರವಲ್ಲ, ಏನೂ ಮಾಡುವುದಿಲ್ಲ ಎಂದು ನಿರ್ಧರಿಸುವುದು ಕೂಡ ದೊಡ್ಡ ನಿರ್ಧಾರ. ನಿವೃತ್ತಿಯ ನಂತರ ಒಟ್ಟಾಗಿ ಬಾಳುವುದು ಒಂದು ಕಥೆಯಾದರೆ, ವ್ಯಕ್ತಿಯಾಗಿ ನಮ್ಮ ಬೇಕು ಬೇಡಗಳನ್ನ ಕೂಡ ಚರ್ಚಿಸಬೇಕು. ಜೀವನದ ನಿತ್ಯ ಓಟದಲ್ಲಿ ಸರಿಯಾಗಿ ಕುಳಿತು ಮಾತನ್ನಾಡಲು ಆಗದೇ ಉಳಿಯುವ ವಿಷಯಗಳು ಹತ್ತು ಹಲವಾರು ಇರುತ್ತವೆ. ಕನಸುಗಳು ಒಂದೇ ಆಗಿದ್ದರೆ ಬದುಕು ಹಸನಾಗುತ್ತದೆ. ನೀವು ಏನೂ ಬೇಡ ಎಂದು ಮನೆಯಲ್ಲಿ ಹಾಯಾಗಿ ಕಾಲು ಚಾಚಿ ಕೂರುವ ಇಚ್ಛೆಯನ್ನ ವ್ಯಕ್ತಪಡಿಸಿ, ನಿಮ್ಮ ಜೀವನ ಸಂಗಾತಿ ಜಗತ್ತನ್ನ ಸುತ್ತುವ ಇಚ್ಛೆ ಉಳ್ಳವರಾಗಿದ್ದರೆ? ಹೀಗಾಗಿ ಸತಿಪತಿಗಳು ಒಟ್ಟಾಗಿ ನಿವೃತ್ತರಾಗುವ ಇರಾದೆ ಇದ್ದರೆ ವೈಯಕ್ತಿಕ ಬೇಕು ಬೇಡಗಳ ಮಾತುಕತೆಯನ್ನ ಕೂಡ ಚರ್ಚಿಸಿ ನಿರ್ಧರಿಸಬೇಕಾಗುತ್ತದೆ.
  5. ಇನ್ನೇನಾದರೂ ಗಮನಿಸಬೇಕಾದ ಅಂಶಗಳಿವೆಯೇ?: ನೀವು ನಂಬಿರುವ ನಿಮ್ಮ ವೈದ್ಯರು ಇಲ್ಲವಾದರೆ? ನೀವು ಅಂದುಕೊಂಡ ಪ್ಲಾನ್ ಅಥವಾ ನೀವು ಕೇಳಿದ ಪ್ರಶ್ನೆಗಳಲ್ಲಿ ಬೇಕಾದ ಪ್ರಶ್ನೆಯನ್ನ ನೀವು ಕೇಳದೆ ಹೋಗಿದ್ದರೆ? ಉದಾಹರಣೆಗೆ, ನಿಮ್ಮ ಹಣಕಾಸು ಸಲಹೆಗಾರ ಕೂಡ ನಿವೃತ್ತನಾಗಲು ಬಯಸಿದ್ದಾನೆ ಎಂದುಕೊಳ್ಳಿ ಆಗ? ನಂತರದ ನಡೆಯೇನು? ವರ್ಷಕೊಮ್ಮೆಯಾದರು ನಾವು ನಡೆಯುತ್ತಿರುವ ಹಾದಿ ಸರಿಯಿದೆಯೇ? ಎನ್ನುವುದನ್ನ ನೋಡುತ್ತಿರಬೇಕು, ನಿಮ್ಮ ಮತ್ತು ಸಲಹೆಗಾರನ ನಡುವಿನ ಸಂಬಂಧ ಒಂದು ದಿನದಲ್ಲಿ ಮುಗಿಯುವುದಲ್ಲ. ಹಾಗೊಮ್ಮೆ ಆತ ಇಲ್ಲದಿದ್ದರೆ ನಿಮ್ಮ ಮುಂದಿನ ಪ್ಲಾನ್ ಏನು? ಇದೆ ಪ್ರಶ್ನೆಯನ್ನ ಅವರ ಮುಂದಿಡಬೇಕು. ನಾನು ಎಲ್ಲಾ ಪ್ರಶ್ನೆಯನ್ನ ಕೇಳಿದ್ದೇನೆಯೇ? ಅಥವಾ ಇನ್ನೇನಾದರೂ ಗಮನಿಸಬೇಕಾದ ಅಂಶಗಳಿವೆ ಎಂದು ನಿಮಗೆ ಅನ್ನಿಸುತ್ತಿದೆಯೇ? ಎನ್ನುವ ಪ್ರಶ್ನೆಯನ್ನ ಕೂಡ ಕೇಳಬೇಕು, ಮತ್ತು ಸಮಾಧಾನಕರ ಉತ್ತರವನ್ನ ಪಡೆಯಬೇಕು. ಉತ್ತರ ಸಮಾಧಾನಕರ ಎನ್ನಿಸದಿದ್ದರೆ ಬೇರೆ ಪರ್ಯಾಯ ಹುಡುಕಿಕೊಳ್ಳಬೇಕು.

ಕೊನೆಮಾತು: ನಿವೃತ್ತಿ ಎನ್ನುವುದು ಜೀವನದಲ್ಲಿ ತೆಗೆದುಕೊಳ್ಳುವ ಅತಿ ದೊಡ್ಡ ನಿರ್ಧಾರಗಳಲ್ಲಿ ಒಂದು, ಎಷ್ಟೇ ಅಳೆದುತೂಗಿ ನಿರ್ಧರಿಸಿದರೂ, ನಡೆಯುವ ದಾರಿಯಲ್ಲಿ ಒಂದಷ್ಟು ಅಡೆತಡೆಗಳು ಬಂದಂತೆ ಇಲ್ಲೂ ಕೆಲವು ಏರಿಳಿತಗಳು ಸಹಜ. ಮೂಲ ನಿರ್ಧಾರಕ್ಕೆ ಬದ್ಧರಾಗಿ ನಿತ್ಯ ಜೀವನಕ್ಕೆ ಬೇಕಾಗುವ ಸಣ್ಣ ಪುಟ್ಟ ಹೊಂದಾವಣಿಕೆಯನ್ನ ಮಾಡಿಕೊಂಡು ಜೀವಿಸುವುದರಲ್ಲಿ ಗೆಲುವು , ಸಮಾಧಾನ ಅಡಗಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com