ಆಂತರಿಕವಾಗಿ ಸಂಭಾಳಿಸಿ ಸಿಎಂ ಪಟ್ಟ ಗಿಟ್ಟಿಸಬಹುದು, ಹೈಕಮಾಂಡ್ ನ ಮೆಚ್ಚಿಸಬಹುದು, ಆದರೆ ಮತಗಳನ್ನು ದಕ್ಕಿಸಿಕೊಳ್ಳಲಾಗದು!

ಅಂತಃಪುರದ ಸುದ್ದಿಗಳು- ಸ್ವಾತಿ ಚಂದ್ರಶೇಖರ್ಹಾನಗಲ್ ನಲ್ಲಿ ಕುರುಬ ಮತ್ತು ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಗೆ ಹಾನಗಲ್ ನಲ್ಲಿ ಪ್ರತಿ ಬೂತ್ ನಲ್ಲೂ 500-600 ಪಂಚಮಸಾಲಿ ಮತ್ತು ನಾಯಕ ಮತಗಳು ಸಿಕ್ಕಿರುವುದು ಆಶ್ಚರ್ಯವೇ ಸರಿ.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಕರ್ನಾಟಕದ ಬಿಜೆಪಿ ಇತಿಹಾಸದಲ್ಲಿ ಚುನಾವಣೆ ಸನಿಹದಲ್ಲಿ ಅಧಿಕಾರ ವಹಿಸಿಕೊಳ್ಳುವ ಹೊಸ ಮುಖ್ಯಮಂತ್ರಿಗಳು ತಮ್ಮ ಪರಂಪರೆಯನ್ನು ಬಿಟ್ಟು ನಡೆಯುವುದಿಲ್ಲ ಎಂದು ಶಪಥ ಗೈದಂತಿದೆ. ಅದರ ಒಂದು ಭಾಗವೇ ನಿನ್ನೆಯ ಹಾನಗಲ್ ಸೋಲು. 

ಉಪಚುನಾವಣೆಯ ಫಲಿತಾಂಶದ ಅಂದಾಜನ್ನು ಕಳೆದ ಅಂಕಣದಲ್ಲಿ ನಾವು ಪ್ರಕಟಿಸಿದ್ದೆವು. ಬಿಜೆಪಿ ಸಿಂದಗಿಯಲ್ಲಿ ಗೆದ್ದು ಹಾನಗಲ್ ಸೋಲುವುದೆಂಬುದು ಆ ವಿಶ್ಲೇಷಣೆಯ ಸಾರಾಂಶವಾಗಿತ್ತು. ಜನರ ನಾಡಿ ಮಿಡಿತದ ತುಡಿತವನ್ನು ಅರಿಯುವ ಮೂಲಕ ಈ ಬಾರಿ ಕಾಂಗ್ರೆಸ್ ಒಂದು ಕ್ಷೇತ್ರ ಬಿಜೆಪಿ ಒಂದು ಕ್ಷೇತ್ರದಲ್ಲಿ ಚುಕ್ಕಾಣಿ ಹಿಡಿಯುವುದೆಂದು ಆ ಅಂಕಣದಲ್ಲಿ ಹೇಳಿದ್ದೆವು. ಆದರೆ 7373 ಮತಗಳ ಅಂತರದಲ್ಲಿ ಬಿಜೆಪಿ ಸೋಲು ಕಂಡಿರುವುದೆಂದರೆ ಇದು ಕಾಂಗ್ರೆಸ್ ಗೆ ಸಿಕ್ಕ ಸ್ಪಷ್ಟ ಬಹುಮತ ಎಂದೇ ಪರಿಗಣಿಸಬೇಕು.

2011ರಲ್ಲಿ ಅಂದು ಹೊಸದಾಗಿ ಮುಖ್ಯಮಂತ್ರಿ ಗಾದಿಯೇರಿದ್ದ ಸದಾನಂದ ಗೌಡರೂ ಇದೇ ತಪ್ಪು ಮಾಡಿದ್ದರು. ತಮ್ಮ ಸಂಸದೀಯ ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ಅಲ್ಲಿ ಸುನಿಲ್ ಕುಮಾರ್ ಕಾರ್ಕಳ ರವರಿಗೆ ಟಿಕೆಟ್ ಕೊಡಿಸಿ, ಕರಾವಳಿಯಲ್ಲಿ ಬಿಜೆಪಿ ಸೋಲಲು ಸಾಧ್ಯವೇ? ಎಂದು ನಿರಾತಂಕವಾಗಿ ಬೆಂಗಳೂರಲ್ಲಿ ಸಿಎಂ ಗಿರಿ ನಿಭಾಯಿಸುತ್ತಿದ್ದರು. ಅಂದು ಬಿಜೆಪಿ ಸೋತಿತ್ತು. ಸದ್ಯಕ್ಕೆ ಇಲ್ಲಿ ಆದದ್ದು ಅದೇ..., ಕನಿಷ್ಠ ಪಕ್ಷ 2011 ರಲ್ಲಿ ಬಿಜೆಪಿಗೆ ಸರ್ವರಿಗೂ ಸಮ್ಮತವಾದ ಸುನಿಲ್ ಕುಮಾರ್ ಕಾರ್ಕಳ ಅಭ್ಯರ್ಥಿ ಆಗಿದ್ದರು, ಆದರೆ ಹಾನಗಲ್ ನಲ್ಲಿ ಪಕ್ಕದ ಕ್ಷೇತ್ರದ ಶಿವರಾಜ್ ಸಜ್ಜನ್ನವರ್ ಅಭ್ಯರ್ಥಿ. ಒಟ್ಟಿನಲ್ಲಿ ಅಂದಿನ ಮುಖ್ಯಮಂತ್ರಿ ಹುಟ್ಟು ಹಾಕಿದ ಪರಂಪರೆಯನ್ನು ಇಂದಿನ ಮುಖ್ಯಮಂತ್ರಿ ಮುಂದುವರೆಸಿದ್ದಾರೆ.

ಸಿಎಂ ಉವಾಚ: ನಾನು ಹಾನಗಲ್ ಗೆಲ್ಲಿಸಿಕೊಂಡು ಬರುವೆ ನೀನು ಸಿಂದಗಿ ಗೆಲ್ಲಿಸಿಕೊಂಡು ಬಾ.

ಹೀಗೆ ಮುಖ್ಯಮಂತ್ರಿಗಳು ಹೇಳಿದ್ದು ಮಾಜಿ ಉಪಮುಖ್ಯಮಂತ್ರಿಗಂತೆ. ಹಾನಗಲ್, ಸಿಎಂ ತವರು ಜಿಲ್ಲೆಯಲ್ಲಿ ಇರುವ ಕ್ಷೇತ್ರ. ಹಾನಗಲ್ ನಾನು ಗೆಲ್ಲಿಸಿಕೊಂಡು ಬರುವೆ, ಇದರ "ಕ್ರೆಡಿಟ್" ನನಗಿರಲಿ ಸಿಂದಗಿಯ "ಕ್ರೆಡಿಟ್", ಸವದಿ ನಿಮಗಿರಲಿ ಅಂತ ಹೇಳಿದ್ರಂತೆ. ಆದರೆ ಈಗ ಕ್ರೆಡಿಟ್ ಸಿಕ್ಕಿತು ಆದರೆ ಒಬ್ಬರಿಗೆ ಸೋಲಿನದ್ದು ಇನ್ನೊಬ್ಬರಿಗೆ ಗೆಲ್ಲಿಸಿದ್ದು. ಇದರ ಜೊತೆ ಕಳೆದ ಬಾರಿ ನಡೆದ ಮುಖ್ಯಮಂತ್ರಿಯ ಪೈಪೋಟಿಯಲ್ಲಿ ಇದ್ದ ಸವದಿಗೆ ಈ ಹಿಂದೆ ಬಸವಕಲ್ಯಾಣ ಈಗ ಸಿಂದಗಿ ಗೆಲ್ಲಿಸಿದ್ದ ಕೀರ್ತಿ ಸೇರುತ್ತದೆ. ಈ ಗೆಲುವು ಅವರಿಗೆ ಮತ್ತೆ ಮಂತ್ರಿಗಿರಿ ತಂದು ಕೊಡಬಹುದು ಎಂಬುದು ಬಿಜೆಪಿಯ ಕೆಲ ನಾಯಕರ ಅಭಿಪ್ರಾಯ.

ಬಿಜೆಪಿಯಲ್ಲಿ ಲಿಂಗಾಯತ ಜೋಡೆತ್ತುಗಳು:

ಸದ್ಯಕ್ಕೆ ಬಿಜೆಪಿಯಲ್ಲೂ ಜೋಡೆತ್ತುಗಳು ಇದ್ದಾರೆ ಅದು ಸಿಸಿ ಪಾಟೀಲ್ ಮತ್ತು ಸವದಿ ಎಂದು ಬಿಜೆಪಿಯ ಕೆಲ ವರಿಷ್ಠ ನಾಯಕರು ಮಂದಹಾಸದಿಂದ ಉಲ್ಲೇಖಿಸುತ್ತಿದ್ದರು. ಉತ್ತರ ಕರ್ನಾಟಕದಲ್ಲಿ ಪಂಚಮ ಸಾಲಿ ನಂತರ ಅತಿ ಹೆಚ್ಚು ಬರುವ ಲಿಂಗಾಯತ ಪಂಗಡವೆಂದರೆ ಅದು ಗಾಣಿಗ ಸಮುದಾಯ, ಪಂಚಮಸಾಲಿ ಸಮುದಾಯಕ್ಕೆ ಸೇರಿದ ಸಿಸಿ ಪಾಟೀಲ್, ಗಾಣಿಗ ಸಮುದಾಯಕ್ಕೆ ಸೇರಿದ ಸವದಿ ಇಬ್ಬರು ಕಳೆದ 15 ದಿನದಿಂದ ಸಿಂದಗಿಯಲ್ಲಿ ಉಳಿದು ಲಿಂಗಾಯತ ಮತಗಳು ಇಬ್ಭಾಗವಾಗದಂತೆ ನೋಡಿಕೊಂಡಿದ್ದಾರೆ ಎಂಬುದು ಸತ್ಯವೇ. ಇದರ ಜೊತೆ ಪೊಲಿಟಿಕಲ್ ಮ್ಯಾನೇಜಿಮೆಂಟ್ ತಿಳಿದಿರುವ ವಿ.ಸೊಮ್ಮಣ್ಣ ಚುನಾವಣಾ ಚತುರರೇ.., ಕೊನೆ ಕ್ಷಣದ ಒಂದಿಷ್ಟು ಚುನಾವಣೆ ಕಸರತ್ತು ಮನವೊಲಿಕೆ ಬಿಜೆಪಿಗೆ 31,185 ಅಂತರದ ಗೆಲುವು ತರಿಸಿತ್ತು. 

ಹಾನಗಲ್ ನಲ್ಲಿ ಬಾಂಬೆ ಗ್ಯಾಂಗ್-ಮುಖ್ಯಮಂತ್ರಿ ಸ್ನೇಹಿತರದ್ದೇ ಕಾರುಬರು

ಇಷ್ಟಕ್ಕೂ ಸಿಎಂ ಸೊತ್ತಿದ್ದು ಎಲ್ಲಿ? ಹಾನಗಲ್ ನಲ್ಲಿ ಚುನಾವಣೆ ಅಷ್ಟಾಗಿ ತಮ್ಮ ಪರವಾಗಿ ಇಲ್ಲ ಎಂದು ತಿಳಿದರೂ ಅಲ್ಲಿ ತಮ್ಮ ಆಪ್ತರಾದ ಸುಧಾಕರ್, ಭೈರತಿ ಬಸವರಾಜ್, ಎಸ್ ಟಿ ಸೋಮಶೇಖರ್ ರನ್ನು ಚುನಾವಣೆ ಕಣಕ್ಕೆ ಇಳಿಸಿದರು, ತಮ್ಮ ಕ್ಷೇತ್ರಗಳನ್ನು ಬಿಟ್ಟು ಪಕ್ಕದ ಕ್ಷೇತ್ರಗಳನ್ನು ಗೆಲ್ಲಿಸಲು ಸಾಧ್ಯ ಆಗದೆ ಇರುವ ನಾಯಕರನ್ನು, ಬಿಜೆಪಿಯಲ್ಲಿ ಕಾರ್ಯಕರ್ತರ ಮನ್ನಣೆ ಇಲ್ಲದ ಬಾಂಬೆ ಟೀಂ ನ್ನು ಹೇಗೆ ಚುನಾವಣೆ ನಡೆಸಲು ಮುಂದೆ ನಿಲ್ಲಿಸಿದರು ಎಂಬುದು ಬಿಜೆಪಿ ಕೆಲ ನಾಯಕರ ಪ್ರಶ್ನೆ.

ಗೆದ್ದರೆ ಅದರ ಕ್ರೆಡಿಟ್ ಸಂಪೂರ್ಣ ತನಗೆ ಬರುತ್ತೆ ಎಂದು ಓಪನಿಂಗ್ ಅಲ್ಲೇ ಡಕ್ ಔಟ್ ಅಗೋ Batsman ಗಳಿಗೆ ಆಡಲು ಬಿಟ್ಟಂತಾಯಿತು ಬೊಮ್ಮಾಯಿ ಅವರ ಕಥೆ.

ಮನಿ ಮ್ಯಾನೇಜಿಮೆಂಟ್ ಮಾಡಿದ ಸಿಎಂ, ದುಬೈ ಮ್ಯಾನೇಜಿಮೆಂಟ್ ಮಾಡಿದ ನಿರಾಣಿ. ಪೀಪಲ್ ಮ್ಯಾನೇಜಿಮೆಂಟ್ ಮರೆತ ನಾಯಕರು. 

40 ಸಾವಿರಕ್ಕೂ ಹೆಚ್ಚು ಇರುವ ಪಂಚಮಸಾಲಿ ಮತಗಳನ್ನು ಸೆಳೆಯಲು ನಿರಾಣಿಯವರಿಗೆ ಹಾನಗಲ್ ಉಸ್ತುವಾರಿ ನೀಡಿದ ನಂತರ 4 ದಿನ ಕ್ಷೇತ್ರದಲ್ಲಿ ಇದ್ದು ನಂತರ ದುಬೈನ ಏಕ್ಸ್ಪೋ ಗೆ ತೆರಳಿದರು ಎಂಬುದು ಕೆಲ ಬಿಜೆಪಿ ನಾಯಕರ ಗುಸು ಗುಸು. ಇನ್ನು ಹಾನಗಲ್ ಚುನಾವಣೆಯಲ್ಲಿ ಮನಿ ಮ್ಯಾನೇಜಿಮೆಂಟ್ ಆಯಿತು ಆದರೆ ಪೀಪಲ್ ಮ್ಯಾನೇಜಿಮೆಂಟ್ ಆಗಲೇ ಇಲ್ಲ. 

ಕರ್ನಾಟಕದ ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತ ಒಂದು ಉಪಚುನಾವಣೆಗೆ ಖರ್ಚು ಮಾಡಿ ಸೊತ್ತಿದ್ದು ಇದೆ ಮೊದಲು. ಸರಿ ಸುಮಾರು 40 ಕೋಟಿ ವೆಚ್ಚದಲ್ಲಿ ಬೃಹತ್ ಚುನಾವಣೆ ಮಾಡಿ ಬೃಹತ್ ಸೋಲು ಉಂಡಿತು ಬಿಜೆಪಿ. 

ಬೇರೆ ಅವಕಾಶ ಇಲ್ಲದೆ ಅಲ್ಲಿಯ ಸ್ಥಳೀಯ ಸಂಪರ್ಕ ಇಲ್ಲದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ ಬಿಜೆಪಿ. ಕಳೆದ 5 ದಶಕಗಳ ರಾಜಕಾರಣದಲ್ಲಿ ತಮ್ಮ ಪುತ್ರನನ್ನು ಬಿಟ್ಟು ಬೇರೆ ಯಾರನ್ನೂ ಬೆಳೆಸದೇ ಇದ್ದ ದಿ. ಸಿಎಂ ಉದಾಸಿಯ ರಾಜಕೀಯ ಉದ್ದೇಶ ಒಂದು ಕಡೆಯಾಗಿದ್ದರೆ, ಇನ್ನು ಸಂಸದರಾದ ನಂತರವೂ ಯುವನಾಯಕರಿಗೆ ಬೆಳೆಯಲು ಅವಕಾಶ ನೀಡದೇ ಇದ್ದದ್ದು ಉದಾಸಿಯ ಪುತ್ರರ ಮತ್ತೊಂದು ರಾಜಕೀಯ ವೈಫಲ್ಯ. ಇವೆಲ್ಲವನ್ನೂ ಕಳೆದ ದಶಕದಿಂದ ಮೂಕ ಪ್ರೇಕ್ಷಕರಂತೆ ಮೌನವಾಗಿ ನೋಡುತ್ತಿದ್ದ ಬಿಜೆಪಿ ಅಲ್ಲಿರುವ ಗೊಂದಲ ಪರಿಹರಿಸುವುದರಲ್ಲಿ ವಿಫಲವಾಯಿತು. ಸಣ್ಣ ಸಣ್ಣ ಚೌಕಟ್ಟಿನಲ್ಲಿ ಇರುವ ಇತರೆ ಪಂಗಡಗಳನ್ನು ಬಿಜೆಪಿ ಸ್ಪರ್ಶಿಸುವ ಪ್ರಯತ್ನವನ್ನೇ ಮಡಲಿಲ್ಲ. ಕೇವಲ ಲಿಂಗಾಯತ ಮತಗಳು ಮತ್ತು 25 ಸಾವಿರಕ್ಕೂ ಅಧಿಕ ಇರುವ ವಾಲ್ಮೀಕಿ ಮತಗಳನ್ನು ಬಿಜೆಪಿ ತೆಕ್ಕೆಗೆ ತೆಗೆದು ಕೊಂಡರೆ ಸಾಕು ಗೆಲುವು ನಮ್ಮದು ಎಂದು ಸುಮ್ಮನೆ ಕುಳಿತರು. ಇನ್ನು ಕೊನೆ ಹತ್ತು ದಿನ ಸಿಎಂ ಕ್ಷೇತ್ರದಲ್ಲಿ ನಿಂತರೂ ಮತ ಈ ಕಡೆ ತಿರುಗಲೇ ಇಲ್ಲ.

ಒಟ್ಟಿನಲ್ಲಿ ಎಲ್ಲ ಸಿಎಂ ಸ್ನೇಹಿತರು ಹುಬ್ಬಳ್ಳಿಯ ದೇನಿಸನ್ಸ್ ಹೋಟಲ್ ನಲ್ಲಿ ತಂಗಿ 25 ದಿನಗಳ ದೊಡ್ಡ ಮೊತ್ತದ ಬಿಲ್ ತುಂಬಿದ್ದೊಂದೇ ಬಿಜೆಪಿ ಪಾಲಿಗೆ ಉಳಿದಿದ್ದು. ಆಂತರಿಕವಾಗಿ ನಾಯಕರನ್ನು ಸಂಭಾಳಿಸಿ, ಹೈಕಮಾಂಡ್ ನ್ನು ಒಲಿಸಿ ಸಿಎಂ ಪಟ್ಟ ದಕ್ಕಿಸಿಕೊಳ್ಳಬಹುದು, ಆದರೆ ಜನರೆದುರು ಹೋಗುವಾಗ ಅದಕ್ಕೆ ಬೇರೆಯದ್ದೇ ಕಾರ್ಯತಂತ್ರದ ಅಗತ್ಯವಿರುತ್ತದೆ. ಜನತೆಯನ್ನು ಮೆಚ್ಚಿಸುವುದು ಅಷ್ಟು ಸುಲಭವಲ್ಲ....

ಕಾಂಗ್ರೆಸ್ಸ್ ಗೆ ಒಲಿದು ಬಂದ ಲಿಂಗಾಯತ ಮತಗಳು.

ಹಾನಗಲ್ ನಲ್ಲಿ 22,000 ಪಂಚಮಸಾಲಿ, 46,000 ಮುಸ್ಲಿಂ ಮತಗಳು, 9000 ಕುರುಬ ಮತಗಳಿವೆ. ಇದರಲ್ಲಿ ಕುರುಬ ಮತ್ತು ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಗೆ ಹಾನಗಲ್ ನಲ್ಲಿ ಪ್ರತಿ ಬೂತ್ ನಲ್ಲೂ 500-600 ಪಂಚಮಸಾಲಿ ಮತ್ತು ನಾಯಕ ಮತಗಳು ಸಿಕ್ಕಿರುವುದು ಆಶ್ಚರ್ಯವೇ ಸರಿ.

ಒಂದು ವೇಳೆ ಅಭ್ಯರ್ಥಿಗಳಿಗೆ ಸ್ಥಳೀಯ ಸಂಪರ್ಕ ಇಲ್ಲದೆ ಇದ್ದರೆ ಸಮುದಾಯ ಪಕ್ಷ ನಿಷ್ಠೆ ತೋರದು ಎಂಬ ಸಣ್ಣ ಸೂಕ್ಷ್ಮವನ್ನು ಈ ಚುನಾವಣೆ ತೋರಿಸಿಕೊಟ್ಟಂತಾಗಿದೆ. 

ಇನ್ನು ಮುಸ್ಲಿಂ ಅಭ್ಯರ್ಥಿ ಹಾಕುವ ಮೂಲಕ ಮುಸ್ಲಿಂ ಮತ ಸೆಳೆಯುವೆ ಎನ್ನುವ ಪರಿಕಲ್ಪನೆಯಲ್ಲಿ ಇದ್ದ ಜೆಡಿಎಸ್ ಹಾಗೂ ಇದರಲ್ಲಿ ಒಪ್ಪಂದ ಮಾಡಿಕೊಂಡ ಬಿಜೆಪಿ ಇಬ್ಬರಿಗೂ ಈ ಚುನಾವಣೆ ಅಹಿಂದ ಮತ್ತು ಅಲ್ಪ ಸಂಖ್ಯಾತ ಮತ ಒಂದಾದರೆ ಕಾಂಗ್ರೆಸ್ ಅಧಿಕಾರ ಹಿಡಿಯಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ.

ಅಂತೂ ಶೇ.82 ರಷ್ಟು ಪೊಲಿಂಗ್ ಆದ ಹಾನಗಲ್ ಸಮುದಾಯವನ್ನು ಒಟ್ಟುಗೂಡಿಸುವಂತೆ ಮಾಡಿತು. ಆದರೆ ಸಿದ್ದು ಡಿಕೆಶಿ ಯನ್ನ ಒಟ್ಟು ಗೂಡಿಸಿದಂತೆ ಕಾಣುತ್ತಿಲ್ಲ. ನಾನು ಗೆಲ್ಲಿಸಿದೆ ಎಂಬ ಡಿಕೆ ಶಿವಕುಮಾರ್, ನನ್ನ ಚುನಾವಣೆ ಪ್ರಚಾರ ಎಂಬ ಸಿದ್ದರಾಮಯ್ಯರ ಗೆಲುವಿನ ಕೀರ್ತಿಯ ಮೇಲಿನ ಪಟ್ಟು ಹೆಚ್ಚಾದಲ್ಲಿ ಕೇವಲ ಉಪಚುನಾವಣೆ ಗೆ ಮಾತ್ರ ತಮ್ಮ ಗೆಲುವನ್ನು ಸೀಮಿತಗೊಳಿಸಬೇಕಾಗುತ್ತೆ.

ಸ್ವಾತಿ ಚಂದ್ರಶೇಖರ್

swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com