ತಾತ್ಕಾಲಿಕ ಸಮರಕ್ಕೆ 'ತೆನೆ' ಆಸರೆ; ದುಃಖ ಶಮನಕ್ಕೆ 'ಶಶಿ' ಆಸರೆ; ಕಮಲಕ್ಕೆ 'ಕೈ' ಆಸರೆ (ಅಂತಃಪುರದ ಸುದ್ದಿಗಳು)

ಸ್ವಾತಿ ಚಂದ್ರಶೇಖರ್ಯುಪಿ ಗದ್ದುಗೆ ಹಿಡಿದ್ರೆ ದೇಶವನ್ನೇ ದಕ್ಕಿಸಿಕೊಳ್ಳಬಹುದು ಎಂಬ ರಾಜಕೀಯ ನುಡಿ ಇನ್ನೂ ಮಾಸಿಲ್ಲ. ಈಗಲೂ ರಾಜಕಾರಣಿಗಳು ಅದೇ ಸೂತ್ರದ ಆಧಾರದಲ್ಲೇ ರಾಜಕಾರಣ ನಡೆಸುವ ಹಾಗೆ ಅನಿಸುತ್ತೆ.
ಜೆಡಿಎಸ್- ಜಯಲಲಿತ ಆಪ್ತೆ ಶಶಿಕಲಾ, ಪ್ರಿಯಾಂಕ ಗಾಂಧಿ (ಸಾಂಕೇತಿಕ ಚಿತ್ರ)
ಜೆಡಿಎಸ್- ಜಯಲಲಿತ ಆಪ್ತೆ ಶಶಿಕಲಾ, ಪ್ರಿಯಾಂಕ ಗಾಂಧಿ (ಸಾಂಕೇತಿಕ ಚಿತ್ರ)

ಅಧಿಕಾರದಲ್ಲಿ ಇದ್ದಾಗ ಹೇಗಾದರೂ ಆಡಳಿತ ನಡೆಸಲಿ ಆದರೆ ಓರ್ವ ನಾಯಕನ ನಿಪುಣತೆಯನ್ನು ಅಳೆಯುವದು ಚುನಾವಣೆಯಲ್ಲೆ. ಯಾವುದೇ ಕದನ ಸಿದ್ಧಾಂತ ಹೋರಾಟ ಎಲ್ಲವೂ ವಿಲೀನಗೊಳ್ಳುವುದು ಚುನಾವಣೆ ಸಮರದಲ್ಲೇ. ಬಿಎಸ್ ವೈ ಸಿಎಂ ಖುರ್ಚಿಯಿಂದ ಕೆಳಗೆ ಇಳಿದ ನಂತರ ನಡೆಯುತ್ತಿರುವ ಮೊದಲ ಉಪಚುನಾವಣೆ ಇದು. 

ಕನಿಷ್ಠ ಈ ಚುನಾವಣೆಯಿಂದ ಅಂತೂ ಯುವರಾಜನನ್ನು ಪಕ್ಕಕ್ಕೆ ಇಟ್ಟು ಸಮರಕ್ಕೆ ಇಳಿಯುವುದಿಲ್ಲ ಎಂಬುದು ಪಕ್ಷದಲ್ಲಿ ಇದ್ದ ಅಭಿಪ್ರಾಯ. ಆದರೆ ಯಾವಾಗ ನಾಮಕಾವಸ್ಥೆ ಉಸ್ತುವಾರಿ ಮಾಡಿದ್ದಾರೆ ಎಂದು ಕಾರ್ಯಕರ್ತರು ವಿಜಯೇಂದ್ರ ಬಳಿ ದೂರು ನೀಡಿದರೋ, "ತಾಳಿದವನು ಬಾಳಿಯಾನು" ಅಂದರಂತೆ. 

ಇಷ್ಟಕ್ಕೂ ನಡೆಯುತ್ತಿರುವ ಉಪಚುನಾವಣೆಯಲ್ಲಿ ಇವರನ್ನು ಮೂಲೆ ಗುಂಪು ಮಾಡುವರು ಎಂದು ಮೊದಲೇ ತಿಳಿದಿತ್ತಂತೆ, ಎಲ್ಲರೂ ಕಬ್ಬಿಣ ಕಾದಗ ಬಗ್ಗಿಸಬೇಕು ಅನ್ನುತ್ತಾರೆ, ಆದರೆ ಇಲ್ಲಿ ಬಲಿಷ್ಠವಾಗಿದ್ದಾಗಲೇ ಕಬ್ಬಿಣ ತನಗೆ ಬೇಕಾದಾಗ ಹಾಗೆ ಬಾಗಿ ನಂತರ ಬೆಂಕಿಯಲ್ಲಿ ಬೆಂದಿರುವುದು "ಈಗ ಆ ಕಬ್ಬಿಣವನ್ನು ಎಷ್ಟು ಬಗ್ಗಿಸಿದರೂ ಅದು ಜಗ್ಗದು" ಅನ್ನುತ್ತಾರೆ ಯುವರಾಜನ ಬೆಂಬಲಿಗರು. ಇಷ್ಟಕ್ಕೂ ವಿಜಯೇಂದ್ರ ನಂಬಿರುವುದು ಅಲ್ಲೊಮ್ಮೆ ಇಲ್ಲೊಮ್ಮೆ ಬರೋ ಉಪಚುನಾವಣೆಯನ್ನಲ್ಲ, ಮುಂಬರುವ ಅಸಲಿ ಸಮರವನ್ನ.
 
ವರುಣ ಕ್ಷೇತ್ರದಿಂದ ಮೊದಲುಗೊಂಡು ಸುತ್ತ ಇರುವ 10-15 ಹಳೆ ಮೈಸೂರು ಮತ್ತು ಹಾಸನ ಭಾಗದಲ್ಲಿ ಕಮಲ ಅರಳಿಸಿ ಹಕ್ಕು ಸ್ಥಾಪಿಸುತ್ತೇನೆ ಎಂಬುದು ಅವರ ಚಿಂತನೆ ಅಂತೆ, ನಿಮ್ಮ ಚಿಂತನೆ ಹಾಗಿದ್ದಲ್ಲಿ ಮೊದಲೇ ತೆನೆ ಬಳ್ಳಿಗೆ ಕಮಲ ಕಟ್ಟುತ್ತೇವೆ ಎಂದು ಇವರ ವಿರೋಧಿಗಳ ಚಿಂತನೆ ಅಂತೆ. ಯಾರ ಚಿಂತನೆ ಏನೇ ಇರಲಿ ಬಿಜೆಪಿಯಲ್ಲಿ ಇರುವ ಬಣ ಸಲಾದೆಂದು ಮತ್ತೊಂದು ಬಲಿಷ್ಠ ಬಣ ಸೇರ್ಪಡೆಗೊಂಡಿತು.

ಸಿಎಂ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಿದ ನಂತರ ಎದುರುಸುತ್ತಿರುವ ಮೊದಲ ಚುನಾವಣೆ ಇದು. ಯಾವ ಲೋಪ-ದೋಷಗಳು ಬೇಡ ಎಂದು ಅಳೆದು ತೂಗಿ ಸಂಘ ಪಕ್ಷದ ಜೊತೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಆದರೆ ಸದ್ಯ ಆ ಅಭ್ಯರ್ಥಿಯ ಮೇಲೇ ಬಿಜೆಪಿ ಕೆಲ ನಾಯಕರ ಮುನಿಸು ಇದ್ದಂತಿದೆ. ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ ಬೊಮ್ಮಾಯಿ ಪಾಲಿಗೆ ತಿನ್ನಲೇ ಬೇಕಾದ ಕಬ್ಬಿಣದ ಕಡಲೆ, ಹಲ್ಲು ಮುರಿದರೂ ಚಿಂತೆ ಇಲ್ಲ ಕಡಲೆ ಅಂತೂ ಅರಗಲೇ ಬೇಕು. ಇನ್ನು ಮೊದಲ ಪ್ರಯತ್ನದಲ್ಲೇ ಅವರ ವರ್ಚಸ್ಸು ಸಾರುವ ಇರಾದೆ ಅವರದ್ದು, 

ಆದರೆ ಮೊದಲ ಚುನಾವಣೆಯಲ್ಲೆ ಮುಖಭಂಗವಾದರೆ ಮುಂದಿನಸಲ ತಾವುಗಳು ಗದ್ದುಗೆ ಹಿಡಿಯಲು ಸುಲಭವಾದೀತು ಎಂಬ ಚಿಂತನೆ ಪರರದ್ದು. ಇದನ್ನು ಅರಿತ ಬೊಮ್ಮಾಯಿ ಚಾಪೆ ಕೆಳಗೂ ಬೇಡ ರಂಗೋಲಿ ಕೇಳಗೂ ಬೇಡ ಅಂತ ತೆನೆಯ ಬಳ್ಳಿಗೆ ಕಮಲ ಕಟ್ಟುಲು ಮುಂದಾಗಿದ್ದಾರೆ.

ಕಾಂಗ್ರೆಸ್ ಆರೋಪಿಸುತ್ತಿರುವ ಹಾಗೆ ಅಲ್ಪಸಂಖ್ಯಾತರ ಮತ ವಿಭಜನೆ ಮಾಡಲು ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಇದು ಬೊಮ್ಮಾಯಿ ಮತ್ತು ಕುಮಾರಸ್ವಾಮಿ ಅವರ ಜಂಟಿ ಜಾಲ ಎಂಬುದು ಬಲ್ಲ ಮೂಲಗಳ ಮಾಹಿತಿಯೂ ಹೌದು.

ಏನೂ ಅನುಭವವಿಲ್ಲದ ಶಿವರಾಜ್ ಸಜ್ಜನರಿಗೆ ಟಿಕೆಟ್ ನೀಡದೇ ಬೊಮ್ಮಾಯಿ ಇಚ್ಛೆಯಂತೆ, ಹಾನಗಲ್ ನಲ್ಲಿ ರಾಜಕೀಯ ವರ್ಣಮಾಲೆ ಅರಿಯದ ಉದಾಸಿ ಪತ್ನಿಗೆ ಟಿಕೆಟ್ ನೀಡಿದ್ದರೆ ಬಿಜೆಪಿ ಗೆಲ್ಲುತ್ತಿತ್ತೇನೋ ಎಂಬುದು ಅವರ ಪಕ್ಷದವರದ್ದೇ ಮಾತು. ಉದಾಸಿಯಾದರೇನು, ಸಜ್ಜನರಾದರೇನು ಬಿಜೆಪಿಯ ಸಿದ್ಧಾಂತಗಳ ಆಧಾರದ ಮೇಲೆ ನಿಲ್ಲದೇ ಇದ್ದ ಈ ಕ್ಷೇತ್ರ ಬಿಜೆಪಿ ಪಾಲಾಗಿದ್ದು ಸಿಎಂ ಉದಾಸಿಯ ವರ್ಚಸ್ಸಿನಿಂದ ಮಾತ್ರ. ನಂತರ ಆ ವರ್ಚಸ್ಸನ್ನು ಅವರ ಪುತ್ರರು ಮುಂದುವರೆಸಲು ಸಾಧ್ಯವಾಗಲಿಲ್ಲ.  ಈಗ ಸಿಂದಗಿ ಬಿಜೆಪಿ ಪಾಲಾದರೂ ಸಿಎಂ ತಮ್ಮ ಜಿಲ್ಲೆಯಲ್ಲೇ ಸೋಲಬಹುದು ಎಂದು ಚುನಾವಣಾ ಅರ್ಚಕರ ಚರ್ಚೆ.

ದಕ್ಷಿಣ ಭಾರತದ ಪ್ರತೀ ರಾಜ್ಯದ ರಾಜಕಾರಣವೂ ಅದರ ಸಣ್ಣ ಆಯಾಮವು ರಾಜಕೀಯ ವಿಶ್ಲೇಷಕರಿಗೆ ಪಿಎಚ್ ಡಿ ಥಿಸಿಸ್. ಪ್ರತೀ ಹಂತದಲ್ಲೂ ರೋಚಕ ತಿರುವು, ಆ ತಿರುವಿಗೆ ತಿರುಚಲಾರದ ಅಘಾದ ಇತಿಹಾಸ. ಇನ್ನು ತಮಿಳುನಾಡಿನ ರಾಜಕಾರಣ ಸದ್ಯಕ್ಕೆ ಯಾವ ಥ್ರಿಲ್ಲರ್ ಸಿನೆಮಾಗೂ ಕಡಿಮೆ ಇಲ್ಲ. ಅಂದಹಾಗೆ ತಮಿಳು ಚಿತ್ರರಂಗಕ್ಕೂ ರಾಜಕೀಯಕ್ಕೂ ಆ ಪರಿಯ ವ್ಯತ್ಯಾಸ ಏನು ಇಲ್ಲ ಬಿಡಿ.

ಡಿಎಂಕೆ ಅಧಿಕಾರ ಹಿಡಿದಿದ್ದು ಆಯ್ತು ಕಮಲ ಹಾಸನ್ ರಾಜಕೀಯ ನಮಗಲ್ಲ ಎಂದು ಪಕಕ್ಕೆ ಸರಿದಿದ್ದು ಆಯ್ತು, ಎಐಎಡಿಎಂಕೆ ಇಬ್ಬಾಗವಾಗಿದ್ದು ಆಯ್ತು... ಇನ್ನೇನು ಬಾಕಿ ಇದೆ ಅಂದುಕೊಂಡರೆ, ತಮಿಳುನಾಡು ಮತ್ತೆ ಅಮ್ಮನನ್ನು ಕಾಣುತ್ತೆ ಎಂದು ಓರ್ವ ದೊಡ್ಡ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ ಅಂತೆ. ಅದು ಶಶಿಕಲಾ ರೂಪದಲ್ಲಿ ಎಂಬುದು ಸದ್ಯದ ಗುಸು ಗುಸು. ಅವರ ನಿರ್ದೇಶನದ ಮೇರೆಗೆ ಆಗ ರಾಜಕೀಯ ತೊರೆಯುವೆ ಎಂದು ಈಗ ಮತ್ತೆ ಬಂದಿರುವೆ ಎಂದು ತೋರಿದ್ದು ಎಂಬುದು ಶಶಿಕಲಾ ಆಪ್ತ ವಲಯದಲ್ಲಿ ನಡೆಯುತ್ತಿರುವ ಚರ್ಚೆ.
 
2017 ರಲ್ಲಿ ಪಕ್ಷದಿಂದ ಉಚ್ಚಾಟನೆಗೊಂಡ ನಂತರ ಮತ್ತೆ ಪಕ್ಷದ ಚಿಹ್ನೆ ಜೊತೆ ಗುರುತಿಸಿಕೊಂಡಿದ್ದು ಕಳೆದ ವಾರವೇ. ಪಕ್ಷದದಿಂದ ಉಚ್ಚಾಟನೆ ಆಗುವುದು ಶಶಿಕಲಾ ಅವರಿಗೆ ಹೊಸದೇನಲ್ಲ ಈ ಹಿಂದೆ 1996, 2011 ಎರಡು ಬಾರಿ ಕನಿಷ್ಠ 6-8 ತಿಂಗಳು ಪಕ್ಷದಿಂದ, ಜಯಲಲಿತಾ ಅವರ ವೇದ ನಿಲಯಮ್ ಯಿಂದ ಹೊರ ಬಂದಿದ್ದರು. ಆದರೆ ಈಗ ಜಯಲಲಿತಾ ಇಲ್ಲದೆ ಹೊರಬಂದಿದ್ದಾರೆ ಮತ್ತೆ ಬಾ ಎಂದು ಕರೆಯಲು ತನ್ನ ಆಪ್ತ ಗೆಳತಿ (ಅಕ್ಕ) ಇಲ್ಲ. ಈಗ ತಾವೇ ವಾಪಸ್ ಹೋಗಿ ಪಕ್ಷ ಕಟ್ಟುವ ಹೊಣೆ ಶಶಿಕಲಾ ಅವರದ್ದು. ಸಂಬಂಧಿ ಟಿಟಿವಿ ದಿನಕರನ್, ಹೊಸ ಪಕ್ಷ ಸ್ಥಾಪಿಸಿದ್ದಾರೆ. ಪನೀರ್ ಸೆಲ್ವಂ ಜಯಕುಮಾರ್ ಪಕ್ಷಕ್ಕೂ ಶಶಿಕಲಾ ಅವರಿಗೂ ಸಂಬಂಧ ಇಲ್ಲ ಎಂದು ದೂರ ತಳ್ಳಿದ್ದಾರೆ. ಆದರೆ ಈ ಹಿಂದೆ ಎಂಜಿಆರ್ ಸಾವಿನ ನಂತರ ಇಬ್ಭಾಗವಾಗಿದ್ದ ಪಕ್ಷವನ್ನು ಜಯಲಲಿತಾ ಒಂದು ಮಾಡಿದರು ಈಗ ಶಶಿಕಲಾ ಒಂದು ಮಾಡಬೇಕಿದೆ ಎಂಬುದು ಅವರ ಕಾರ್ಯಕರ್ತರ ಅಳಲು. 

ಜಯಲಲಿತಾರನ್ನು ತಮ್ಮ ಅನಿವಾರ್ಯತೆ ಪ್ರೀತಿಯಿಂದ ಕಟ್ಟುಹಾಕಿದ ಶಶಿಕಲಾ ಈಗ ಪಕ್ಷವನ್ನ ಜಾಣ್ಮೆ ಇಂದ ಕಟ್ಟಿ ನಿಲ್ಲಿಸುತ್ತಾರ? ಎಂಬ ಸಂದೇಹ ತಮಿಳುನಾಡು ಜನತೆಯಲ್ಲಿ ಇದೆ. ಒಂದು ವೇಳೆ ಪಕ್ಷ ಒಂದಾದರೂ ಡಿಎಂಕೆಯನ್ನು ಎದುರಿಸಿ ಅಧಿಕಾರ ಹಿಡಿಯುವ ಸಾಮರ್ಥ್ಯ ಸೃಷ್ಟಿ ಆಗಲಾರದು ಎಂಬುದು ಜನತೆಯ ಅಭಿಪ್ರಾಯ. ಇರಲಿ ಅಧಿಕಾರ ಹಿಡಿಯಲು ನಾಲ್ಕು ವರ್ಷವಿದೆ, ಆದರೆ ಪಕ್ಷ ಒಂದುಗೂಡಿಸಲು ತನ್ನ ಅಧಿಪತ್ಯ ಸಾಧಿಸಲು ಹೆಚ್ಚು ಸಮಯ ಇದ್ದಂತೆ ಕಾಣುತ್ತಿಲ್ಲ.

ಯುಪಿ ಗದ್ದುಗೆ ಹಿಡಿದ್ರೆ ದೇಶವನ್ನೇ ದಕ್ಕಿಸಿಕೊಳ್ಳಬಹುದು ಎಂಬ ರಾಜಕೀಯ ನುಡಿ ಇನ್ನೂ ಮಾಸಿಲ್ಲ

ಯುಪಿ ಗದ್ದುಗೆ ಹಿಡಿದ್ರೆ ದೇಶವನ್ನೇ ದಕ್ಕಿಸಿಕೊಳ್ಳಬಹುದು ಎಂಬ ರಾಜಕೀಯ ನುಡಿ ಇನ್ನೂ ಮಾಸಿಲ್ಲ. ಈಗಲೂ ರಾಜಕಾರಣಿಗಳು ಅದೇ ಸೂತ್ರದ ಆಧಾರದಲ್ಲೇ ರಾಜಕಾರಣ ನಡೆಸುವ ಹಾಗೆ ಅನಿಸುತ್ತೆ. ಇದಕ್ಕೆ ಸ್ಪಷ್ಟ ಉದಾಹರಣೆ ಕಾಂಗ್ರೆಸ್ ನ ಶತಾಯ ಗತಾಯ ಪ್ರಯತ್ನ. ಅಷ್ಟೇ ಅಲ್ಲ ಕಮಲದ "ಕೈ" ತಂತ್ರ.

ಮೊನ್ನೆಯ (ಲಖಿಂಪುರ) ಲಕ್ಷ್ಮಿಪುರದ ಕೇಸ್ ಅನ್ನು ಬಿಜೆಪಿ ಇಷ್ಟು ಘಾಸಿ ಗೊಳಿಸುವ ಅವಶ್ಯಕತೆ ಇರಲಿಲ್ಲ ಎಂಬುದು ಪಕ್ಷದಲ್ಲೆ ನಡೆಯುತ್ತಿರುವ ಚರ್ಚೆ.

ಆದರೆ ಆಶಿಶ್ ಮಿಶ್ರ ರನ್ನು ಬಚಾವ್ ಮಾಡಲು ಬಿಜೆಪಿಗೆ ಇದು ಬಲವಾದ ಕಾರಣವಂತೆ. ಉತ್ತರ ಪ್ರದೇಶದಲ್ಲಿ ಯೋಗಿ ಮುಖ್ಯಮಂತ್ರಿ ಆದ ನಂತರ ಠಾಕೂರ್ ಪ್ರಭಾವ ಹೆಚ್ಚಾಗಿದೆ, ಬಿಜೆಪಿ ಪಾಲಿಗೆ ಯುಪಿಯ ಅತಿ ದೊಡ್ಡ ವೋಟ್ ಬ್ಯಾಂಕ್ ಅಗಿರುವ ಬ್ರಾಹ್ಮಣ ಮತಗಳು ಒಂದಿಷ್ಟು ಕಾಂಗ್ರೆಸ್ ಮತ್ತೆ ಒಂದಷ್ಟು ಸಮಾಜವಾದಿ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ವಾಲುವ ಸಾಧ್ಯತೆಯೇ ಹೆಚ್ಚಿದೆ. ಹಾಗಾಗಿ ಬ್ರಾಹ್ಮಣ ಪಂಗಡಕ್ಕೆ ಸೇರಿರುವ ಮಂತ್ರಿಯನ್ನು ಸ್ಥಾನದಿಂದ ವಜಾ ಗೊಳಿಸುವುದು ಹೇಗೆ ಎಂಬ ಚಿಂತೆ ಬಿಜೆಪಿಯಲ್ಲಿ ಮನೆ ಮಾಡಿದಂತಿದೆ. 

ಇನ್ನು ಬಿಜೆಪಿಯ ಮಂತೊಂದು ತಂತ್ರ ಬಹಳ ಆಶ್ಚರ್ಯವಾಗಿ ಕಾಣುತ್ತಿದೆ. ಲಕ್ಷ್ಮೀಪುರದ ಸಂಚಿಕೆಯನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಸಮಾಜವಾದಿ ಪಕ್ಷ ಸೋತಿತು. ಆದರೆ ಈ ವಿಷಯ ಕಾಂಗ್ರೆಸ್ ಪಾಲಿಗೆ ವರವಾಗೋ ಹಾಗೆ ಬಿಜೆಪಿಯೇ ಹುನ್ನಾರ ನಡೆಸಿತು. 

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಸರ್ಕಾರ ಪ್ರಿಯಾಂಕ ಗಾಂಧಿ ಯನ್ನು ಇಷ್ಟು ಕಠಿಣವಾಗಿ ನಡೆಸಿಕೊಳ್ಳುವ ಅದರಿಂದ ಅನುಕಂಪದ ಅಲೆ ಸೃಷ್ಟಿ ಆಗುವಂತೆ ಮಾಡಬೇಕಿರಲಿಲ್ಲ. ಕೆಲವು ಬಾರಿ ನಾಯಕರು ಇಂತಹ ಪರಿಸ್ಥಿತಿಯಲ್ಲಿ ಸೃಷ್ಟಿ ಆಗುತ್ತಾರೆ, ಆದರೆ ಇಲ್ಲಿ ನಾಯಕಿಯನ್ನು ಷಡ್ಯಂತ್ರದಿಂದ ಮುಖ್ಯ ಭೂಮಿಕೆಗೆ ತಂದಿದ್ದು. 

"ಕೈ" ಆಸರೆ ಯಿಂದ "ಕೈ" ಯನ್ನೇ ಮಣಿಸುವ ಕಮಲದ ತಂತ್ರ ಸಾದ್ಯಕ್ಕೆ ರೋಚಕವೇ. ಕಾಂಗ್ರೆಸ್ ಬಲಿಷ್ಠವಾದಷ್ಟು ಸಧ್ಯಕ್ಕೆ ಯುಪಿಯಲ್ಲಿ ಬಿಜೆಪಿಗೆ ಲಾಭ. ಕಾಂಗ್ರೆಸ್ ನ ಅಲ್ಪಸಂಖ್ಯಾತ ಮತ್ತು ಹಿಂದುಳಿದವರ ಮತಗಳನ್ನು ಒಡೆದರೆ ಬಿಜೆಪಿ ಗೆದ್ದ ಹಾಗೆ.
 
ಯುಪಿಯಲ್ಲಿ ಆಸ್ತಿತ್ವವೇ ಇಲ್ಲದ ಕಾಂಗ್ರೆಸ್ ಅನ್ನು ಇಂತಹ ಸರ್ಕಾರದ ಅಮಾನವೀಯ ವರ್ತನೆಗಳು ಜೀವ ನೀಡಿದೆ. ಒಟ್ಟಿನಲ್ಲಿ. ಹೇಗಾದರೂ ಮಾಡಿ ಯುಪಿ ಗೆಲ್ಲಬೇಕು ಎಂಬ ಬಿಜೆಪಿ ಪ್ರಯತ್ನಕ್ಕೆ. ಕನಿಷ್ಠ 50 ಗಡಿ ತಲುಪಬೇಕು ಎಂಬ ಕಾಂಗ್ರೆಸ್ ಸಾಹಸಕ್ಕೆ ಇಂಬು ಸಿಕ್ಕಂತೆ ಆಗಿದೆ.

ಸ್ವಾತಿ ಚಂದ್ರಶೇಖರ್

swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com