ಹೃದಯ ಸ್ತಂಭನದಿಂದ ಹಠಾತ್ ಸಾವು: ಏಕೆ, ಹೇಗೆ? (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿಹೃದಯಾಘಾತ ಮತ್ತು ಹೃದಯ ಸ್ತಂಭನ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಹೃದಯಾಘಾತದ ಬಗ್ಗೆ ವೈದ್ಯರು ಸಾಕಷ್ಟು ವಿಶ್ಲೇಷಣೆ ಮಾಡುತ್ತಿದ್ದಾರೆ.
ಹೃದಯಾಘಾತ(ಸಾಂಕೇತಿಕ ಚಿತ್ರ)
ಹೃದಯಾಘಾತ(ಸಾಂಕೇತಿಕ ಚಿತ್ರ)

ಇತ್ತೀಚೆಗೆ ಜನಪ್ರಿಯ ನಟ ಪುನೀತ್‍ ರಾಜ್‍ಕುಮಾರ್ ಹೃದಯಕ್ಕೆ ಸಂಬಂಧಿಸಿದ ತೀವ್ರ ತೊಂದರೆಯಿಂದ 46ನೇ ವರ್ಷಕ್ಕೆ ಸಾವನ್ನಪ್ಪಿದ್ದು ಬಹುದೊಡ್ಡ ಸುದ್ದಿಯಾಯಿತು. 

ನಟರಾದ್ದರಿಂದ ಅವರು ಕಟ್ಟುಮಸ್ತಾಗಿದ್ದರು. ದೈಹಿಕವಾಗಿ ಕಸರತ್ತು ಮಾಡಿ ಫಿಟ್‍ಆಗಿದ್ದರು. ಆದರೂ ಹೃದಯಾಘಾತ/ ಹೃದಯ ಸ್ತಂಭನದಿಂದ ಸಾವನ್ನಪ್ಪಿದರು ಎಂಬುದನ್ನು ನಂಬುವುದು ಕಷ್ಟ. ಈ ಹಿನ್ನೆಲೆಯಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಹೃದಯಾಘಾತದ ಬಗ್ಗೆ ವೈದ್ಯರು ಸಾಕಷ್ಟು ವಿಶ್ಲೇಷಣೆ ಮಾಡುತ್ತಿದ್ದಾರೆ. ಅವರ ಕುಟುಂಬದಲ್ಲಿ ಎಲ್ಲರಿಗೂ ಹೃದಯ ತೊಂದರೆ ಇದೆ. ಸಹಜವಾಗಿಯೇ ಅದು ಪುನೀತ್‍ ರಾಜ್‍ಕುಮಾರ್ ಅವರಿಗೂ ಬಂದಿದೆ ಎಂಬ ಮಾತನ್ನು ನಾವು ಕೇಳುತ್ತಿದ್ದೇವೆ. ವೈದ್ಯಕೀಯವಾಗಿ ಹೇಳುವುದಾದರೆ ಹೃದಯದ ತೊಂದರೆಗಳು ಗುಣಾಣುಗಳಲ್ಲಿಯೇ (ಜೀನ್ಸ್) ಇರುತ್ತವೆ. ಅದು ಒಂದು ಕುಟುಂಬದಲ್ಲಿ ಒಬ್ಬರಾದ ಮೇಲೆ ಒಬ್ಬರಿಗೆ ಹರಿದು ಬರುತ್ತವೆ.

ಹೃದಯಾಘಾತ

ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಅವರ ಪ್ರಕಾರ ದೇಶದಲ್ಲಿ ಸಾವಿರಾರು ಜನರಿಗೆ ಹೃದಯಾಘಾತವಾಗುತ್ತದೆ ಮತ್ತು ಅವರಲ್ಲಿ ಶೇಕಡಾ 90 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಗುತ್ತಾರೆ. ಆದರೆ ಪುನೀತ್‍ಅವರಿಗೆ ಆ ಅವಕಾಶ ಸಿಗಲಿಲ್ಲ. ಅದು ಬಹಳ ನೋವಿನ ಸಂಗತಿ ಎಂದು ಅವರು ಹೇಳುತ್ತಾರೆ.

ಕೆಲವರಿಗೆ ಹೃದಯಾಘಾತ ಆದ ಸಂದರ್ಭದಲ್ಲಿ ಕೆಲವೇ ನಿಮಿಷಗಳಲ್ಲಿ ಹೃದಯದ ಬಡಿತ ನಿಂತು ಹೋಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಒಂದು ನಿಮಿಷದಲ್ಲಿ 70-80 ಬಾರಿ ಹೃದಯ ಬಡಿದುಕೊಳ್ಳುತ್ತದೆ. ಸ್ವಲ್ಪ ಗಾಬರಿಯಾದರೆ 90-95 ಬಾರಿ ಬಡಿದುಕೊಳ್ಳಬಹುದು. ಹಠಾತ್ ಹೃದಯಾಘಾತ ಆದಾಗ ಕೆಲವರಿಗೆ 300, 400, 500 ಬಾರಿ ಹೃದಯ ಬಡಿದುಕೊಳ್ಳುತ್ತದೆ. ಆಗ ಹೃದಯ ಅಲುಗಾಡುತ್ತದೆ. ಹೃದಯದಿಂದ ಹೊರಗಡೆ ರಕ್ತವೇ ಬರುವುದಿಲ್ಲ. ಅದನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ವೆಂಟ್ರಿಕ್ಯುಲರ್ ಫ್ರಿಬ್ರಿಲೇಷನ್’ ಎಂದು ಕರೆಯುತ್ತಾರೆ. ಆಗ ಹೃದಯದ ಬಡಿತ ನಿಂತು ಹೋದಾಗ ‘ಡಿಸಿ ಶಾಕ್’ ಎಂಬ ಉಪಕರಣವನ್ನು (ಡಿಫ್ರಿಬ್ರಿಲೇಟರ್) ಎದೆಯ ಮೇಲಿಟ್ಟು ಶಾಕ್‍ಕೊಟ್ಟರೆ, ಹೃದಯ ಮತ್ತೆ ಚಲನೆ ಆರಂಭಿಸುತ್ತದೆ (ಶಾಕ್‍ಥೆರಪಿ). ಅದಕ್ಕಾಗಿ ರೋಗಿ ತುರ್ತು ನಿಗಾ ಘಟಕದಲ್ಲೇ ಇರಬೇಕು ಎಂದು ಡಾ.ಮಂಜುನಾಥ್ ಹೇಳುತ್ತಾರೆ.

ಪುನೀತ್‍ ರಾಜ್‍ಕುಮಾರ್ ಅವರ ಹಠಾತ್ ನಿಧನದ ಹಿನ್ನೆಲೆಯಲ್ಲಿ ಇಂತಹ ಡಿಫ್ರೈಬ್ರಿಲೇಟರ್ ಉಪಕರಣವನ್ನು ಜಿಮ್ಮುಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಇಟ್ಟಿರಬೇಕು. ಅದನ್ನು ಉಪಯೋಗಿಸುವುದು ಹೇಗೆ ಎಂಬುದನ್ನು ಅಲ್ಲಿನ ಸಿಬ್ಬಂದಿಗಳಿಗೆ ತಿಳಿಸಿರಬೇಕು ಎಂಬ ಬೇಡಿಕೆ ಹಲವಾರು ಜನರಿಂದ ವ್ಯಕ್ತವಾಗಿದೆ.

ದಿಢೀರ್ ಹೃದಯ ಸ್ತಂಭನ / ಸಡನ್‍ ಕಾರ್ಡಿಯಾಕ್‍ ಅರೆಸ್ಟ್

ಕೆಲವರಿಗೆ ಹಠಾತ್ ಹೃದಯಾಘಾತವಾದಾಗ ಆಸ್ಪತ್ರೆಗೆ ಹೋಗುವಷ್ಟು ಸಮಯ ಕೂಡ ಇರುವುದಿಲ್ಲ. ಶೇಕಡಾ 5ರಷ್ಟು ಮಂದಿಗೆ ಹೃದಯಾಘಾತವಾದ ಕೆಲವೇ ನಿಮಿಷಗಳಲ್ಲಿ (5-10 ನಿಮಿಷ) ಹೃದಯದ ಬಡಿತವೇ ನಿಂತು ಹೋಗುತ್ತದೆ. ಹೃದಯದೊಳಗಡೆಯೂ ವಿದ್ಯುತ್‍ಕರೆಂಟ್‍ಇದೆ. ಅದು ಆಫ್‍ಆಗಿ ಬಿಡುತ್ತೆ. ಇದನ್ನೇ ದಿಢೀರ್ ಹೃದಯ ಸ್ತಂಭನ (ಸಡನ್‍ಕಾರ್ಡಿಯಾಕ್‍ಅರೆಸ್ಟ್) ಎಂದು ಕರೆಯತ್ತಾರೆ.

ಹೃದಯದ ಕೆಲಸ!

ಇನ್ನು ಹೃದಯದ ಕಾರ್ಯದ ಬಗೆಗೆ ಹೇಳುವುದಾದರೆ ಹೃದಯ ನಮ್ಮ ದೇಹದ ನರಗಳಿಗೆ ರಕ್ತವನ್ನು ಕಳುಹಿಸುವ ಕೆಲಸವನ್ನು ಮಾಡುತ್ತದೆ. ಅಂದರೆ ಹೃದಯ ರಕ್ತವನ್ನು ದೇಹಕ್ಕೆ ಪೂರೈಸುವ ಪಂಪ್‍ಇದ್ದಂತೆ. ಹೃದಯ ಸರಬರಾಜು ಮಾಡುವ ರಕ್ತದ ಮೂಲಕವೇ ನಮ್ಮ ಜೀವನಕ್ಕೆ ಬಹುಮುಖ್ಯವಾಗಿ ಬೇಕಾದ ಆಮ್ಲಜನಕ ಮತ್ತು ಪೋಷಕಾಂಶಗಳು ದೇಹದ ಎಲ್ಲಾ ಜೀವಕೋಶಗಳಿಗೆ ತಲುಪಿ ಉಸಿರಾಟ, ಹೃದಯ ಬಡಿತ ಮತ್ತಿತರ ದೈಹಿಕ ಪ್ರಕ್ರಿಯೆಗಳು ಸುಗಮವಾಗಿ ನಡೆಯುತ್ತವೆ. ಹೃದಯಾಘಾತ ಎಂದರೆ ಹೃದಯವು ಇದ್ದಕ್ಕಿದ್ದಂತೆ ದೇಹಕ್ಕೆ ರಕ್ತ ಸಂಚಲನ ಮಾಡುವುದನ್ನು ನಿಲ್ಲಿಸುವುದು. ಹೃದಯದ ಒಂದು ಭಾಗದಲ್ಲಿ ಸುಗಮ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುವುದರಿಂದ ಹೀಗಾಗುತ್ತದೆ. ಇದರಿಂದ ರಕ್ತನಾಳಗಳು ಹಾಗೂ ಸ್ನಾಯುಗಳಿಗೆ ಹಾನಿಯುಂಟಾಗುತ್ತದೆ. ಹೃದಯ ತನ್ನ ಕಾರ್ಯವನ್ನು ನಿಲ್ಲಿಸಿದ ತಕ್ಷಣ ಉಸಿರಾಟ ನಿಂತುಹೋಗುತ್ತದೆ. ಇದರಿಂದಾಗಿ ಸಾವು ಸಂಭವಿಸಬಹುದು. ಇವೆಲ್ಲಾ ಕೆಲವೇ ಕ್ಷಣಗಳಲ್ಲಿ ನಡೆದುಹೋಗುತ್ತದೆ. ಆದರೆ ಹೃದಯಘಾತವಾದ ತಕ್ಷಣವೇ ಪ್ರಥಮ ಚಿಕಿತ್ಸೆ ದೊರೆತರೆ ಬದುಕುಳಿಯುವ ಸಾಧ್ಯತೆ ಇದೆ.

ಹೃದಯಾಘಾತದ ಮುನ್ಸೂಚನೆಗಳು

ರಕ್ತನಾಳಗಳಿಂದ ಹೃದಯಕ್ಕೆ ಸದಾ ಕಾಲ ರಕ್ತ ಸರಬರಾಜಾಗುತ್ತಿರುತ್ತದೆ. ಹೃದಯಾಘಾತವಾದಾಗ ರಕ್ತನಾಳಗಳು ಶೇಕಡಾ 100ರಷ್ಟು ಬ್ಲಾಕ್‍ಆಗಿರಬೇಕು. ಶೇಕಡಾ 60-70ರಷ್ಟು ಬ್ಲಾಕ್‍ಆದಾಗ ಹೃದಯಾಘಾತವಾಗುವುದಿಲ್ಲ. ಆದರೆ ನಡೆಯುವಾಗ, ಊಟ ಮಾಡಿ ಎತ್ತರ ಪ್ರದೇಶದಲ್ಲಿ ಓಡಾಡುವಾಗ ಎದೆಯುರಿ, ಎದೆ ನೋವು ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಗಂಟಲು, ದವಡೆಯಲ್ಲಿ ನೋವು ಬರಬಹುದು. ಅದು ಹೃದಯಾಘಾತದ ಮುನ್ಸೂಚನೆ. ಆದರೆ ಎಲ್ಲರಿಗೂ ಈ ಮುನ್ಸೂಚನೆ ಸಿಗುವುದಿಲ್ಲ. ಶೇಕಡಾ 10, 30, 50 ಹೀಗೆ. ಕ್ರಮೇಣ ರಕ್ತನಾಳಗಳು ಬ್ಲಾಕ್‍ಆಗುತ್ತಾ ಹೋದಾಗ ಹೃದಯಾಘಾತಕ್ಕೂ ಮುನ್ನ 3 ವಾರ ಅಥವಾ 3, 6 ತಿಂಗಳ ಅವಧಿಯಲ್ಲಿ ಈ ಮೇಲಿನ ಲಕ್ಷಣಗಳು ಕಾಣಿಸಿಕೊಂಡು ಮುನ್ಸೂಚನೆ ಸಿಗುತ್ತದೆ.

ಹೃದಯಾಘಾತ ದಿಢೀರೆಂದು ಆಗುವುದಿಲ್ಲ. ಹೃದಯಾಘಾತವಾಗುವ ಮೊದಲು ದೇಹದಲ್ಲಿ ಸಾಕಷ್ಟು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ಲಕ್ಷಣಗಳನ್ನು ಕಡೆಗಣಿಸಿದರೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಮೊದಲಿಗೆ ಏನೋ ಆಲಸ್ಯವಿರುತ್ತದೆ. ತುಂಬಾ ಸುಸ್ತಾಗುತ್ತದೆ. ಯಾವ ಕೆಲಸವನ್ನೂ ಮಾಡಲು ಆಗುವುದಿಲ್ಲ. ಸ್ವಲ್ಪದೂರ ನಡೆದರೆ ದಣಿವಾಗಿ ಸುಧಾರಿಸಿಕೊಳ್ಳಬೇಕು ಎನಿಸುತ್ತದೆ. ಆದರೆ ಜ್ವರ ಅಥವಾ ಇತರ ಕಾಯಿಲೆ ಯಾವುದು ಇರುವುದಿಲ್ಲ. ಒಟ್ಟಾರೆ ಹೇಳಬೇಕೆಂದರೆ ಸುಸ್ತಾಗಲು ಕಾರಣ ಏನು ಎಂಬುದೇ ಗೊತ್ತಾಗುವುದಿಲ್ಲ. ಇದಲ್ಲದೇ ಉಸಿರಾಟ ತೀವ್ರಗತಿಯಲ್ಲಿ ಕಂಡುಬರುತ್ತದೆ. ಇದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ಹೀಗೆ ಆಗುವುದರಿಂದ ಉಸಿರಾಡಲು ಕಷ್ಟವಾಗುತ್ತದೆ. ಜೊತೆಗೆ ಮೈ ಬೆವರುತ್ತದೆ ಮತ್ತು ತಲೆಸುತ್ತು ಉಂಟಾಗುತ್ತದೆ. ಹೃದಯಾಘಾತವಾಗುವ ಕೆಲವು ವಾರಗಳ ಮುಂಚೆಯೇ ಸ್ವಲ್ಪ ಎದೆ ನೋವು ಬಂದಿರುತ್ತದೆ. ಅದೇನು ಮೆಲ್ಲನೆಯ ನೋವಷ್ಟೇ ಎಂದು ಯಾರೂ ಗಮನಕ್ಕೆ ತಂದುಕೊಂಡಿರುವುದಿಲ್ಲ. ಅಲ್ಲದೇ ಭುಜ, ಕುತ್ತಿಗೆ ಮತ್ತು ಬೆನ್ನಿನಲ್ಲೂ ನೋವು ಉಂಟಾದ ಅನುಭವ ಆಗಿರುತ್ತದೆ. ಇವೆಲ್ಲಾ ಹೃದಯಾಘಾತ ಉಂಟಾಗುವ ಮುನ್ಸೂಚನೆಗಳು. ಇವುಗಳನ್ನು ಅಲಕ್ಷಿಸಬಾರದು. ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು.

ಹೃದಯಾಘಾತವಾಗುವ ಸಂಭವ ಯಾರಿಗೆ ಹೆಚ್ಚು?

ದೇಹದಲ್ಲಿ ಹೆಚ್ಚು ಕೊಲೆಸ್ಟೆರಾಲ್ (ಕೊಬ್ಬಿನಂಶ) ಇದ್ದವರಿಗೆ, ಯಾವುದೇ ದೈಹಿಕ ವ್ಯಾಯಾಮ ಮಾಡದವರಿಗೆ, ಹೆಚ್ಚು ಬಿಪಿ (ರಕ್ತದೊತ್ತಡ) ಇರುವವರಿಗೆ, ಡಯಾಬಿಟಿಸ್ ರೋಗಿಗಳಿಗೆ ಮತ್ತು ಹೆಚ್ಚು ತೂಕ (ಬೊಜ್ಜು) ಇರುವವರಿಗೆ ಹೃದಯಾಘಾತವಾಗುವ ಸಂಭವ ಇರುತ್ತದೆ. ಇನ್ನು ಹೃದಯಾಘಾತವಾದಾಗ ಎದೆಯ ಎಡ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವು ಜನರಿಗೆಕತ್ತು, ಗಂಟಲು, ಹೊಟ್ಟೆಯ ಮೇಲ್ಭಾಗ, ಬೆನ್ನು, ತೋಳು, ಸೊಂಟ, ದವಡೆ ಮತ್ತು ಭುಜಗಳಲ್ಲಿ ನೋವು ಕಾಣಿಸಿಕೊಳ್ಳಹುದು. ಎದೆ ಮತ್ತು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು. ತಂಪು ವಾತಾವರಣದಲ್ಲೂ ಸಹ ದೇಹ ಬೆವರಬಹುದು. ವಾಕರಿಕೆ, ಉಸಿರಾಡಲು ಕಷ್ಟವಾಗುವುದು, ತಲೆ ಸುತ್ತುವುದು, ವೇಗವಾದ ಎದೆ ಬಡಿತವೂ ಸಹ ಹೃದಯಾಘಾತದ ಲಕ್ಷಣಗಳೇ ಆಗಿವೆ. ಈ ರೀತಿ ಸಮಸ್ಯೆಗಳು ಕಾಣಿಸಿಕೊಂಡು ವ್ಯಕ್ತಿ ಕುಸಿದು ಬಿಡಬಹುದು. ಆದ್ದರಿಂದ ಹತ್ತು ನಿಮಿಷಗಳಿಗೂ ಹೆಚ್ಚು ಇಂತಹ ಲಕ್ಷಣಗಳು ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಕಾಣುವುದು ಸೂಕ್ತ.

ಹೃದಯಾಘಾತವಾದಾಗ ಏನು ಮಾಡಬೇಕು?

ಹೃದಯಾಘಾತವಾದವರು ಜೋರಾಗಿ ಕೆಮ್ಮಬೇಕು. ತಕ್ಷಣ ಆಂಬುಲೆನ್ಸಿಗೆ ಕರೆ ಮಾಡಬೇಕು. ಅದು ಬರುವತನಕ ಅವರ ಎದೆಯನ್ನು ಜೋರಾಗಿ ಅದುಮಬೇಕು. ಆಸ್ಪತ್ರೆಗೆ ಹೋಗುವವರೆಗೂ ಅವರು ಕೆಮ್ಮುವುದನ್ನು ನಿಲ್ಲಿಸಬಾರದು. ಸಾಧ್ಯವಾದರೆ ಅವರ ಬಾಯಿಗೆ ಬಾಯಿ ಇಟ್ಟು ಊದಿದರೆ ಬದುಕುಳಿಯುವ ಸಾಧ್ಯತೆ ಹೆಚ್ಚು. ಹೃದಯಾಘಾತವಾದ ತಕ್ಷಣ ಒಂದು ಕ್ಷಣವನ್ನು ವ್ಯರ್ಥ ಮಾಡಬಾರದು. ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು.

ಹೃದಯಾಘಾತ ಸಂಭವಿಸಿದ ಮೊದಲ 3-6 ಗಂಟೆಗಳು ಅತೀಗಂಭೀರ. ಮೊದಲಿಗೆ ತೀವ್ರ ಹೃದಯಾಘಾತ ಸಂಭವಿಸುವ ಕೆಲವು ಗಂಟೆಗಳ ಮುಂಚೆ ಹೃದಯ ಬಡಿತದ ಏರುಪೇರು ಕಾಣಿಸಿಕೊಳ್ಳುತ್ತದೆ. ಹೃದಯ ಬಡಿತದ ಏರುಪೇರು ರೋಗಿಯು ವೈದ್ಯಕೀಯ ಆರೈಕೆಯಲ್ಲಿದ್ದಾಗ ಸಂಭವಿಸಿದರೆ ಸಕಾಲದಲ್ಲಿ ಅನಾಹುತ ತಪ್ಪಿಸಬಹುದು.

ಡಾ. ವಸುಂಧರಾ ಭೂಪತಿ
ಇಮೇಲ್: bhupathivasundhara@gmail.com
ಫೋನ್ ನಂಬರ್: 9986840477

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com