ಮಂಡೆ ನೋವು 'ಬಿಟ್'ರೂ, ಮಂಡಿ ನೋವು ಬಿಡುತ್ತಿಲ್ಲ; ಸಿಎಂ ಖುರ್ಚಿ ಮೇಲೆ ನೆಮ್ಮದಿಯಿಂದ ಕೂರಕ್ಕೆ ಆಗ್ತಿಲ್ಲ! (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ಬಿಟ್ ಕಾಯಿನ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಲೇ ಇದೆ. ಕಳೆದ ವಾರ ಬಿಜೆಪಿ ಸರದಿ ಆದರೆ ಈ ವಾರ ಕಾಂಗ್ರೆಸ್ ಸರದಿ. ಬಿಟ್ ಕಾಯಿನ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಲೇ ಇದೆ. 
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಬಿಟ್ ಕಾಯಿನ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಲೇ ಇದೆ. ಕಳೆದ ವಾರ ಬಿಜೆಪಿ ಸರದಿ ಆದರೆ ಈ ವಾರ ಕಾಂಗ್ರೆಸ್ ಸರದಿ. ಕಾಂಗ್ರೆಸ್ಸ್ ನಿಂದ ಬಿಜೆಪಿ ತೆಕ್ಕೆಗೆ, ಬಿಜೆಪಿ ಇಂದ ಕಾಂಗ್ರೆಸ್ಸ್ ತೆಕ್ಕೆಗೆ ಬೀಳುತ್ತಿರುವ ಈ ಬಿಟ್ ಕಾಯಿನ್ ಸ್ಕ್ಯಾಮ್ ನಲ್ಲಿ ಆಗಿದ್ದೇನು ಅಂತ ಕೇಳಿದರೆ ಉತ್ತರಿಸುವವರು ಯಾರು ಇಲ್ಲ.

ಬಿಟ್ ಕಾಯಿನ್, ಇದು ಕತ್ತಲ ಜಗತ್ತಿನ ವಹಿವಾಟು ಇಲ್ಲಿ ಹಣ ಗಳಿಸುವುದು ಸುಲಭ, ಕಳೆಯುವುದೂ ಸುಲಭ. ಬಿಟ್ ಕಾಯಿನ್ ಹೂಡಿಕೆ, ವಹಿವಾಟು ಆ ಮೂಲಕ ಹಣ ಗಳಿಕೆ ಅಕ್ರಮ ಅಲ್ಲ. ಆದರೆ ಅಕ್ರಮವಾಗಿ ಹಣ ಗಳಿಸಲು ಇಲ್ಲಿ ಬಹಳಷ್ಟು ಮಾರ್ಗಗಳಿವೆ. ಅದನ್ನು ಅರಿತವರು ಪ್ರಾಮಾಣಿಕ ಆಟವೆಂದೂ ಆಡರು. 

ಇನ್ನು ಕಳೆದ ಒಂದು ತಿಂಗಳಿಂದ ಇದಕ್ಕೆ ರಾಜಕೀಯ ಲೇಪನ ದೊರೆತಿರುವುದು ನಿಮ್ಮೆಲರಿಗೂ ತಿಳಿದೇ ಇದೆ. ಆದರೆ ಶಾಸಕ ಹ್ಯಾರಿಸ್ ಮಕ್ಕಳನ್ನು ಮಾತ್ರ ಈ ಬಿಟ್ ಕಾಯಿನ್ ಬಿಟ್ಟೂ ಬಿಟ್ಟೂ ಹಿಡಿತಿದೆ.

2016 ರಲ್ಲಿ ಬೆಂಗಳೂರು ಪಬ್ ಒಂದರಲ್ಲಿ ನಡೆದ ಗಲಾಟೆಯಲ್ಲಿ ಹ್ಯಾರಿಸ್ ಪುತ್ರ ನಲ್ಪಾಡ್ ಜೈಲುವಾಸ ಅನುಭವಿಸಿದ್ದನ್ನು ಕರ್ನಾಟಕ ನೋಡಿದೆ. ಆದರೆ ಅಂದು ಗಲಾಟೆಯಿಂದ ತಪ್ಪಿಸಿಕೊಂಡಿದ್ದ ಓರ್ವ ಆರೋಪಿ ಶ್ರೀಕೃಷ್ಣ ಉರ್ಫ್ ಶ್ರೀಕಿಯೇ ಈ ಬಿಟ್ ಕಾಯಿನ್ ಹಗರಣದ ರೂವಾರಿ. ಆಗೊಮ್ಮೆ ಈಗೊಮ್ಮೆ ಹಲವು ಪ್ರಕರಣದಲ್ಲಿ ಕಾಣಿಸಿಕೊಂಡರೂ ಸರಿಯಾಗಿ ಸಿಕ್ಕಿಹಾಕಿಕೊಂಡಿದ್ದು ಮಾತ್ರ ಡ್ರಗ್ಸ್ ಪ್ರಕರಣದಲ್ಲಿ. ಇದಕ್ಕೂ ನಲ್ಪಾಡ್ ಗೂ ಏನು ಸಂಬಂಧ ಅಂತೀರಾ? ಇಲ್ಲಿ ಇರುವ ವಿಷಯ ನಲ್ಪಾಡ್ ಹ್ಯಾರಿಸ್ ರದಲ್ಲ, ಹ್ಯಾರಿಸ್ ಎರಡನೇ ಪುತ್ರ ಒಮರ್ ಹ್ಯಾರಿಸ್ ರದ್ದು.

ತಮ್ಮೊಂದಿಗೆ 2016 ರಿಂದ ಸಂಪರ್ಕದಲ್ಲಿ ಇದ್ದಾರೆ ಎನ್ನುವ ಶ್ರೀಕಿ ಸ್ನೇಹಿತ, ಬಿಟ್ ಕಾಯಿನ್ ವಹಿವಾಟುಗಾರ ರಾಬಿನ್ ಮತ್ತು ಒಮರ್ ನಲ್ಪಾಡ್ ಬಹಳಷ್ಟು ಬಾರಿ ಭೇಟಿ ಆಗಿದ್ದಾರೆ ಊರುಗಳನ್ನು ತಿರುಗಿದ್ದಾರೆ ಎನ್ನಲಾಗುತ್ತಿದೆ. ಹಾಗಿದ್ದಲ್ಲಿ ಒಮರ್ ಗೆ ಈ ಪ್ರಕರಣಗಳ ಅರಿವಿತ್ತಾ? ಇದ್ದರೂ ಎಲ್ಲೂ ಹೊರ ತರಲಿಲ್ಲವ? ಎನ್ನುವುದು ಸದ್ಯಕ್ಕೆ ಇರುವ ಮಿಲಿಯನ್ ಡಾಲರ್ ಪ್ರಶ್ನೆ 

ಮುಂಬೈ, ದೆಹಲಿ ಈ ಜಾಗಗಳಲ್ಲಿ ಒಂದೇ ಸಮಯಕ್ಕೆ ಇವರು ಒಂದೇ ಹೋಟೆಲ್ ನಲ್ಲಿ ಇದ್ದರು ಎಂಬುದು ಪ್ರತಿ ಬಾರಿಯೂ ಕಾಕತಾಳೀಯ ಆಗಲು ಹೇಗೆ ಸಾಧ್ಯ?. ತನಗೆ ಯಾರೇ ಪರಿಚಯ ಆದರೂ ಬಿಟ್ ಕಾಯಿನ್ ಬಗ್ಗೆ ಹೇಳುತ್ತಿದ್ದ ಶ್ರೀಕಿ, ರಾಬಿನ್, ಒಮರ್ ಮತ್ತು ನಲ್ಪಾಡ್ ಬಳಿ ಹೇಳಿಲ್ಲ ಎನ್ನುವ ಸುದ್ದಿ ಆಶ್ಚರ್ಯವೇ ಸರಿ.

ಆ ಒಂದು ತಪ್ಪು ಈ ಎಲ್ಲ ಪ್ರಕರಣಗಳನ್ನು ಹೊರ ತಂದಿತು. 

ಶ್ರೀಕಿ, ರಾಬಿನ್, ಸುನೀಶ್ ಹೆಗ್ಡೆ ಈ ಮೂವರು ಒಂದೇ ವೀಣೆಯ ಭಿನ್ನ ತಂತಿಗಳು. ಎಲ್ಲ ತಂತಿಗಳು ಸರಿಯಾದ ಸಮಯಕ್ಕೆ ಮೀಟಿದರೆ ನಾದ ಹೊರಹೊಮ್ಮುವುದು. ಹಾಗೆ ಕಳೆದ 5-6 ವರ್ಷಗಳಿಂದ ಇವರು ಒಟ್ಟಿಗೆ ಇದ್ದೇ ಕಾರ್ಯ ಸಾಧಿಸಿರುವುದು. ಆದರೆ ಕಾಫೀ ಪೌಡರ್ ಚೀಲದಲ್ಲಿ ಡ್ರಗ್ಸ್ ಸಾಗಿಸಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇಲ್ಲದಿದ್ದರೆ ಈ ದೊಡ್ಡ ಸ್ಕ್ಯಾಮ್, ಇದಕ್ಕೆ ತಳುಕು ಹಾಕಿಕೊಂಡಿದ್ದ ಹಲವು ಪ್ರಕರಣ ಹೊರ ಬರುತ್ತಲೇ ಇರಲಿಲ್ಲ!!. 

ಪ್ರತಿ ಬಾರಿ ಐಷಾರಾಮಿ ಹೋಟೆಲ್ ನಲ್ಲಿ ಉಳಿಯುತ್ತಿದ್ದ ಶ್ರೀಕಿಗೆ ಸುನೀಶ್ ಹಣ ನೀಡುತ್ತಿದ್ದರು. ಕೇವಲ ಬಿಟ್ ಕಾಯಿನ್ ಇದ್ದರೆ ಹಣ ಬರಲ್ಲ ಅದನ್ನು ಹಣಕ್ಕೆ ಮಾರ್ಪಾಡು ಮಾಡಬೇಕು.

ಪೊಕರ್ ಬಾಜಿ, ಯುನೋ ಕಾಯಿನ್ ಹೀಗೆ ಹಲವು ಬಿಟ್ ಕಾಯಿನ್ ಅಂತರ್ಜಲವನ್ನು ಹ್ಯಾಕ್ ಮಾಡಿ ಅಲ್ಲಿದ್ದ ಕೆಲವು ಬಿಟ್ ಕಾಯಿನ್ ಅನ್ನು ಕದ್ದು ರಾಬಿನ್ ಗೆ ನೀಡುತ್ತಿದ್ದ ಶ್ರೀಕಿ.

ಕೋಲ್ಕತ್ತಾ ಮೂಲದ ರಾಬಿನ್, ತಂದೆಯ ರೈಸ್ ಮಿಲ್ ನೋಡಿಕೊಂಡು, ಸಿಎ ಪರೀಕ್ಷೆಗೆ ಓದುತ್ತಾ, ಬಿಟ್ ಕಾಯಿನ್ ಮಾರಾಟವನ್ನು ಮಾಡುತ್ತಿದ್ದ. ಬಿಟ್ ಕಾಯಿನ್ ಡಾಟ್ ಇನ್ ಎಂಬ ಅಂತರ್ಜಾಲದ ಮೂಲಕ ಪರಿಚಯ ವಾದ ಇಬ್ಬರೂ ಸಾಕಷ್ಟು ವಹಿವಾಟು ನಡೆಸಿ ಕೊನೆಗೆ ಬೆಂಗಳೂರಿನ ಐಟಿಸಿ ಗಾರ್ಡೆನಿಯ ಹೋಟೆಲ್ ನಲ್ಲಿ ಭೇಟಿ ಆಗಿ ಈ ಸ್ಕ್ಯಾಮ್ ನ್ನು ದೊಡ್ಡ ಮಟಕ್ಕೆ ಒಯ್ದರು, ಅಂದಹಾಗೆ ಆಗಲೇ ರಾಬಿನ್ ಹ್ಯಾರಿಸ್ ಪುತ್ರರನ್ನು ಶ್ರೀಕಿಗೆ ಪರಿಚಯಿಸಿದ್ದು.

'ಬಿಟ್' ಬಿಡಿ ಎಂದರು ಮೋದಿ

ಕಳೆದ ವಾರ ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿ ಆದ ಬೊಮ್ಮಾಯಿ, ಬಿಟ್ ಕಾಯಿನ್ ಬಗ್ಗೆ ಹೇಗೆ ವಿವರಿಸಬೇಕು ಎಂದು ತಿಳಿಯದೇ, ಕೊಂಚ ತಡವರಿಸಿದರು ಒಳ್ಳೆಯ ಆಡಳಿತ ನೀಡುವ ಬಗ್ಗೆ ಚಿಂತಿಸಿ, ಇದನ್ನು ಇಡಿ ಸಿಬಿಐ ಗೆ ಒಪ್ಪಿಸಿ ಆಗಿದ್ಯಲ್ಲ ಅಂದಾಗ ಸಿಎಂ ಬಿಟ್ ಕಾಯಿನ್ ಬಗ್ಗೆ ಬಿಟ್ಟು ಬೇರೆ ವಿಚಾರಗಳನ್ನು ಮಾತಾಡಿದರು. 

ಸಂಕ್ರಾಂತಿವರೆಗೂ ಇಲ್ಲ ಸಂಪುಟ ವಿಸ್ತರಣೆ

ಪ್ರತಿ ಸರ್ಕಾರ ನವೆಂಬರ್ ತಿಂಗಳಿಗೆಂದ ಕಾಯುತ್ತಿದ್ದಾರೆ ಅನ್ನಿಸುತ್ತೆ. ಸಂಪುಟ ವಿಸ್ತರಣೆ ಸಮಯದಲ್ಲಿ ಎಲ್ಲ ಸರ್ಕಾರ ನೀಡುವ ನೆಪ ಕಾರ್ತಿಕ ನಂತರ ಧನುರ್ಮಾಸ ನಂತರ ಸಂಕ್ರಾಂತಿ ನಂತರ ನೋಡೋಣ ಅಂತ. ಆಗ ಕನಿಷ್ಠ ಎರಡು ತಿಂಗಳ ಗಡಿವು ಸಿಗುತ್ತದೆ. ಇನ್ನು ಈ ಬಾರಿ ಬೊಮ್ಮಾಯಿಗೆ "ಎಂಎಲ್ ಸಿ ಚುನಾವಣೆ, ಅದಾಗುತ್ತಿದ್ದಂತೆಯೇ ಶೂನ್ಯ ಮಾಸ" ಅಂತ ಹೇಳಬಹುದು ಎಂದು ಹೈ ಕಮಾಂಡ್ ಸಲಹೆ ನೀಡಿ ಕಳುಹಿಸಿದೆ.

ದೆಹಲಿ ಭೇಟಿಯಲ್ಲಿ ತಡ ರಾತ್ರಿ ಅಮಿತ್ ಶಾ, ನಡ್ಡಾ, ಜೋಶಿ ಜೊತೆ ನಡೆದ ಸಭೆಯಲ್ಲಿ ಸಂಪುಟ ವಿಸ್ತರಣೆ ಮಾಡಬೇಕು ಎಂದಾಗ, ಹೀಗೆ ಹೇಳುವಂತೆ ಸೂಚಿಸಲಾಯಿತು ಎಂದು ಮೂಲಗಳು ತಿಳಿಸುತ್ತಿವೆ.
 
ಇನ್ನು ಸಂಪುಟದಲ್ಲಿ ನಾಳೆ ಬರುತ್ತೇನೆ ನಾಡಿದ್ದು ಸೇರುತ್ತೇನೆ ಎಂದು ದಿನ ಎಣಿಸುತ್ತಿರುವ ಇತ್ತ ಜಾರಕಿಹೊಳಿ ಅತ್ತ ಸವದಿ ಮತ್ತೊಂದು ಕಡೆ ಯೋಗೇಶ್ವರ್ ಎಲ್ಲರೂ ಇನ್ನು ಎರಡು ತಿಂಗಳು ಸುಮ್ಮನಿರಲೇಬೇಕು. ಸಿಎಂ ಖುರ್ಚಿ ಬೀಳದ ಹಾಗೆ ನೋಡ್ಕೋಬಹುದು ಆದ್ರೆ ಈ ಮಂಡಿ ನೋವು ಮುಗಿಯೋ ಹಾಗೆ ಕಾಣುತ್ತಿಲ್ಲ

ಹೀಗೆ ತಮ್ಮ ಆಪ್ತರ ಬಳಿ ನೋವು ಹೇಳಿಕೊಂಡಿದ್ದಾರೆ ಸಿಎಂ ಬೊಮ್ಮಾಯಿ. ಇವತ್ತು ನಾಳೆ ಸಿಎಂ ಖುರ್ಚಿ ಬೀಳುತ್ತೆ ಎಂದು ಪ್ರಭಾವಿ ಸಚಿವರೇ ಸಿಎಂ ವಿರುದ್ಧ ಮಧ್ಯಮಗಳಗೆ ಹಿಂಬಾಗಿಲಿನಿಂದ ಸುದ್ದಿ ನೀಡುತ್ತಿರುವ ವಿಚಾರವನ್ನು ಸಿಎಂ ದೆಹಲಿ ನಾಯಕರಿಗೆ ಹೇಳಿ ಸರಿ ಮಾಡಿಕೊಳ್ಳುವ ಪ್ರಯಾಸ ಮಾಡಿದ್ದಾರೆ. ಆದರೆ ಅವರ ಮಂಡಿ ನೋವನ್ನು ಬಗೆಹರಿಸಿಕೊಳ್ಳುವ ಮಾರ್ಗ ದೊರೆಯುತ್ತಿಲ್ಲಾ. 

ಮುಂಜಾನೆ 7 ಗಂಟಿಗೆ ದಿನ ಆರಂಭಿಸುವ ಸಿಎಂ ಮತ್ತೆ ಮನೆ ತಲುಪುದು ತಡ ರಾತ್ರಿ 1 ಗಂಟೆಗೆ ಸರಿಯಾಗಿ 4 ತಾಸು ನಿದ್ರಿಸದೆ ಈ ಪರಿಸ್ಥಿತಿ ತಂದುಕೊಂಡಿದ್ದಾರೆ.

ಪ್ರತಿ ದಿನ ಈಗಲೂ ಕೆಲಸ ಮೂಗಿಸಿ ಊಟಕ್ಕೆ ತಮ್ಮ ಆಪ್ತ ಸಚಿವರ ಮನೆಗೆ ಹೋಗಿ ಹರಟೆ ಹೊಡೆದು ಬರುತ್ತಾರೆ. ಮುಂಚೆ ಗೃಹ ಖಾತೆ ಇದ್ದಾಲೂ ಹೀಗೆಯೇ ಮಾಡುತ್ತಿದ್ದರು ಉತ್ತಮ ಸಂಪರ್ಕ ಬೆಳಸಿಕೊಂಡರು, ಸಿಎಂ ಆದರು, ಆಗ ಗೃಹ ಖಾತೆ ಇತ್ತು ತಡವಾಗಿ ಎದ್ದರೂ ಆದೀತು, ಆದರೆ ಈಗಲೂ ಹೀಗೆ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬುದು ಅವರ ಆಪ್ತರ ಚಿಂತೆ. ಏನೇ ಇರಲಿ ಆರೋಗ್ಯ ಮುಖ್ಯ, ಉತ್ತಮ ಆರೋಗ್ಯ ಉಳ್ಳವರು ಉತ್ತಮ ಆಡಳಿತ ನೀಡಲು ಸಾಧ್ಯ ಏನಂತೀರಿ!

ಸ್ವಾತಿ ಚಂದ್ರಶೇಖರ್

swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com