ಸಪ್ಲೈ ಚೈನ್ ನಲ್ಲಿ ಕುಸಿತ; ಜಗತ್ತಿನ ಆರ್ಥಿಕ ಚೇತರಿಕೆ ವೇಗ ಇಳಿತ! (ಹಣಕ್ಲಾಸು)

ಹಣಕ್ಲಾಸು-279-ರಂಗಸ್ವಾಮಿ ಮೂಕನಹಳ್ಳಿ
ಸಪ್ಲೈ ಚೈನ್ (ಸಾಂಕೇತಿಕ ಚಿತ್ರ)
ಸಪ್ಲೈ ಚೈನ್ (ಸಾಂಕೇತಿಕ ಚಿತ್ರ)

ಅಂತರರಾಷ್ಟ್ರೀಯ ಹಣಕಾಸು ನಿಧಿ 2021 ರ ಜಾಗತಿಕ ಆರ್ಥಿಕ ಮುನ್ನೋಟ ಪ್ರಕಟಿಸಿದ್ದು ಜಗತ್ತಿನ ಆರ್ಥಿಕತೆಯಲ್ಲಿ ಶೇ.5.9 ರಷ್ಟು ಬೆಳವಣಿಗೆಯನ್ನು ಅಂದಾಜಿಸಿದೆ.

ಕೊರೋನೋತ್ತರ ಕಾಲದಲ್ಲಿ ವೇಗ ಪಡೆದುಕೊಳ್ಳುತ್ತಿದ್ದ ಜಾಗತಿಕ ಆರ್ಥಿಕತೆಗೆ ಸಪ್ಲೈ ಚೈನ್ ಕುಸಿತ ಈಗ ಹೊಸ ಸವಾಲಾಗಿ ಪರಿಣಮಿಸಿದ್ದು, ದುರ್ಭಿಕ್ಷ ಕಾಲದಲ್ಲಿ ಅಧಿಕ ಮಾಸ ಎಂಬಂತೆ ಕೊರೋನಾದ ಪರಿಣಾಮಗಳಿಂದ ಬಳಲಿರುವ ಜನತೆಗೆ ಇದು ಬೆಲೆ ಏರಿಕೆಗೆ ಮತ್ತಷ್ಟು ದಾರಿ ಮಾಡಿಕೊಡಲಿದೆ. 

ಕಳೆದ ವಾರದ ಅಂಕಣದಲ್ಲಿ ಇಂಗ್ಲೆಂಡ್ ನಲ್ಲಿ ವಿವೇಚನೆ ಇಲ್ಲದ ಬ್ರೆಕ್ಸಿಟ್ ಪರಿಣಾಮವಾಗಿ ಸ್ಟಾಗ್ ಫ್ಲೇಶನ್ ಬಗ್ಗೆ ತಿಳಿದುಕೊಂಡಿದ್ದೆವು. ಸಪ್ಲೈ ಚೈನ್ ಕುಸಿತ ಕೇವಲ ಇಂಗ್ಲೆಂಡ್ ಅಷ್ಟೇ ಅಲ್ಲದೇ ಜಾಗತಿಕವಾಗಿ ಏನೆಲ್ಲಾ ಬೆಳವಣಿಗೆಗಳಿಗೆ ಕಾರಣವಾಗುತ್ತಿದೆ, ಈ ಸಪ್ಲೈ ಚೈನ್ ಅರ್ಥಿಕತೆ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಜಾಗತಿಕವಾಗಿ ಆಟೋಮೊಬೈಲ್ ಇಂಡಸ್ಟ್ರಿಯಿಂದ ಹಿಡಿದು ಅದಕ್ಕೆ ಪೂರೈಕೆಯಾಗುವ ಇಂಧನದವರೆಗೂ ಸಪ್ಲೈ ಚೈನ್ ನಲ್ಲಿ ವ್ಯತ್ಯಯವಾಗುತ್ತಿದೆ. ಸಪ್ಲೈ ಚೈನ್ ಕುಸಿತದಿಂದಾಗಿ ಬಳಕೆ ಕುಸಿತವಾಗುತ್ತದೆ. ತತ್ಪರಿಣಾಮ ಆರ್ಥಿಕತೆಯೂ ಕುಸಿತ ಕಾಣುತ್ತದೆ. ಗಮನಿಸಿ ಇದೊಂದು ರೀತಿಯ ಚೈನ್ ರಿಯಾಕ್ಷನ್ ಇದ್ದಂತೆ. ಒಂದೆಡೆ ಕುಸಿತ ಕಂಡದರೆ ಅದರ ಪರಿಣಾಮ ಹತ್ತಾರು ದಿಕ್ಕುಗಳಲ್ಲಿ ವ್ಯಾಪಿಸುತ್ತದೆ. 

ಕಂಪ್ಯೂಟರ್ ಚಿಪ್ ಗಳ ಕೊರತೆ, ಬಂದರುಗಳಲ್ಲಿ ದಟ್ಟಣೆ, ಟ್ರಕ್ ಚಾಲಕರ ಕೊರತೆಗಳು ಸೇರಿದಂತೆ ಜಗತ್ತಿನ ಸೂಕ್ಷ್ಮ ಸಪ್ಲೈ ಚೈನ್ ಗಳು ತೀರಾ ಒತ್ತಡದಲ್ಲಿವೆ. ಈ ಹಿಂದೆ ಇಂಗ್ಲೆಂಡ್ ನಲ್ಲಿ ಉಂಟಾಗಿದ್ದ ಪೂರೈಕೆ ಸರಪಳಿಯ ಪರಿಣಾಮಗಳು ಈಗ ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಳ್ಳತೊಡಗಿವೆ. ಜಾಗತಿಕ ಆರ್ಥಿಕ ಪರಿಸ್ಥಿತಿ ಚೇತರಿಕೆಯಾಗುತ್ತಿರುವುದರ ನಡುವೆ ಇದು ಹೊಸ ಸವಾಲಾಗಿ ಪರಿಣಮಿಸಿದ್ದು ಉತ್ತಮಗೊಳ್ಳುವುದಕ್ಕೂ ಮುನ್ನ ತೀರಾ ಹದಗೆಡುವ ಪರಿಸ್ಥಿತಿ ತಲುಪಲಿದೆ ಎನ್ನುವುದು ಐಎಂಎಫ್ ಎಚ್ಚರಿಕೆಯಾಗಿದ್ದು, ಬರಲಿರುವ ದಿನಗಳಲ್ಲಿ ಈ ಸಪ್ಲೈ ಚೈನ್ ನೊಂದಿಗೆ ಬೆಸೆದುಕೊಂಡಿರುವ ಸರಕುಗಳ ಬೆಲೆ ಏರಿಕೆಯ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. 

ಜಿಡಿಪಿ, ಎಕಾನಮಿ ಮೇಲಿನ ಪರಿಣಾಮ: 

ಸಪ್ಲೈ ಚೈನ್ ಕುಸಿಯುವುದಕ್ಕೆ ಕಾರಣಗಳು ಹಲವಾರಿವೆ. ಇಂಗ್ಲೆಂಡ್ ನಲ್ಲಿ ಟ್ರಕ್ ಡ್ರೈವರ್ ಗಳ ಸಮಸ್ಯೆಯಾದರೆ ಇನ್ನೂ ಹಲವೆಡೆ, ಗಡಿ ನಿಯಂತ್ರಣ (ಬಾರ್ಡರ್ ಕಂಟ್ರೋಲ್ ಗಳು) ಮತ್ತು ಮೊಬಿಲಿಟಿ ನಿರ್ಬಂಧಗಳು, ಜಾಗತಿಕ ಮಟ್ಟದಲ್ಲಿ ಲಸಿಕೆ ಪಾಸ್ ನ ಅಲಭ್ಯತೆ ಹಾಗೂ ಇಷ್ಟು ಕಾಲ ಮನೆಯಲ್ಲಿಯೇ ಇದ್ದು ಈಗ ಎಂದಿನಂತೆ, ಅಂದರೆ ಕೊರೋನಾಪೂರ್ವದಲ್ಲಿದ್ದಂತೆ ಖರೀದಿಸಲು ಮುಂದಾಗುತ್ತಿರುವುದರಿಂದ, ಕೊಳ್ಳುವುದಕ್ಕೆ ದಿಢೀರ್ ಉಂಟಾಗಿರುವ ಬೇಡಿಕೆಯ ಹೆಚ್ಚಳ ಇವೆಲ್ಲದರ ಒಟ್ಟು ಪರಿಣಾಮ ಪೂರೈಕೆ ನಿಗದಿತ ಸಮಯಕ್ಕೆ ಸಾಧ್ಯವಾಗದೇ ಜಾಗತಿಕ ಮಟ್ಟದ ಉತ್ಪಾದನೆಗೆ ಅಡ್ಡಿಯಾಗಿ, ಅದರ ಮುಂದಿನ ಪರಿಣಾಮದಲ್ಲಿ ಬೆಲೆ ಏರಿಕೆಯಾಗಲಿದೆ ಹಾಗೂ ಜಿಡಿಪಿ ಬೆಳವಣಿಗೆ ದೃಢವಾಗಿರುವುದಿಲ್ಲ. 

ಕೋವಿಡ್-19 ನಂತರದ ಪರಿಸ್ಥಿತಿ ನಿಭಾಯಿಸುವುದರಲ್ಲಿ ಅಡಗಿದೆ ಸಪ್ಲೈ ಚೈನ್ ಸಮಸ್ಯೆಯ ಪರಿಹಾರ:

ಮೇಲ್ನೋಟಕ್ಕೆ ಇಂಗ್ಲೆಂಡ್ ನಲ್ಲಿ ಬಂದರುಗಳಲ್ಲಿನ ದಟ್ಟಣೆ ಹಾಗೂ ಗ್ಯಾಸ್ ಸ್ಟೇಷನ್ ಗಳು ಖಾಲಿಯಾಗಿರುವುದಕ್ಕೆ ಟ್ರಕ್ ಡ್ರೈವರ್ ಗಳ ಕೊರತೆಯ ಸಮಸ್ಯೆ ಕಡಿಮೆ ಪ್ರಮಾಣದಲ್ಲಿ ಪರಿಣಮ ಬೀರುತ್ತಿರುವ ಅಂಶವೆಂದು ಕಾಣಿಸಬಹುದು. ಆದರೆ ಸಪ್ಲೈ ಚೈನ್ ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಯನ್ನು ಮೀರುವುದಕ್ಕೆ ಹಲವಾರು ಅಂಶಗಳು ಸವಾಲಾಗಿ ಪರಿಣಮಿಸಿದೆ. 

ಮೊದಲನೆಯದ್ದು ಕೋವಿಡ್-19 ನ್ನು ಯಾವ್ಯಾವ ದೇಶಗಳು ಹೇಗೆ ನಿಭಾಯಿಸುತ್ತಿವೆ ಎಂಬುದು ಮುಖ್ಯವಾಗುತ್ತದೆ. ಹೌದು, ಕೋವಿಡ್-19 ನ್ನು ಯಾವ ದೇಶ ಹೇಗೆ ನಿಭಾಯಿಸುತ್ತದೆ ಎಂಬುದಕ್ಕೂ ಸಪ್ಲೈ ಚೈನ್ ಗೂ ಎತ್ತಣ ಸಂಬಂಧ ಎಂದು ನೀವು ಕೇಳಬಹುದು. ಖಂಡಿತವಾಗಿಯೂ ನಂಟಿದೆ. 

ಜಗತ್ತಿನ ಬಲಿಷ್ಠ ದೇಶಗಳು ಕೋವಿಡ್-19 ನಿರ್ವಹಣೆಯನ್ನು ಯಾವ ರೀತಿ ನೋಡುತ್ತಿವೆ ಎಂಬುದು ಮುಖ್ಯವಾಗುತ್ತದೆ. ಉದಾಹರಣೆಗೆ ಚೀನಾ ಶತಾಯಗತಾಯ ಕೋವಿಡ್-19 ಸೋಂಕಿನ ಶೂನ್ಯ ಪ್ರಕರಣಗಳಿಗೆ ತಲುಪಬೇಕೆಂಬ ಪಣ ತೊಟ್ಟಿದೆ. ಆದರೆ ಅಮೆರಿಕ ಕೋವಿಡ್-19 ನ ಜೊತೆಗೇ ಜೀವಿಸುವುದು ಹೇಗೆ ಎಂಬ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದೆ. ಸಾಂಕ್ರಾಮಿಕ ನಿರ್ವಹಣೆಯಲ್ಲಿ ಈ ರೀತಿಯ ಭಿನ್ನ approach ಗಳು ನೀತಿ, ನಿಯಮಗಳನ್ನು ರೂಪಿಸುವುದರ ಮೇಲೆಯೂ ಪರಿಣಾಮ ಹೊಂದಿರುತ್ತದೆ.  ಇದು ಜಾಗತಿಕ ಮಟ್ಟದಲ್ಲಿ ಬಂದರು, ಹಬ್ ಗಳಾದ್ಯಂತ ಸರಕು ಸಾಗಣೆಯಲ್ಲಿ ತೊಡಗಿರುವ ಸಾರಿಗೆ ನೌಕರರಿಗೆ ಸಂಬಂಧಿಸಿದ ನಿಯಮಗಳನ್ನು ಸಮನ್ವಯಗೊಳಿಸುವುದು ಕಷ್ಟ ಸಾಧ್ಯವಾಗುತ್ತದೆ. ಅಂದರೆ ಕೊರೋನಾಗಿಂತಲೂ ಹಿಂದೆ ಸುಗಮವಾಗಿ ಸಾಧ್ಯವಾಗುತ್ತಿದ್ದ ಸಂಗತಿಗಳು ಕೊರೋನೋತ್ತರದಲ್ಲಿ ಎಂದಿನಂತೆ ಹಳಿಯಲ್ಲಿರುವುದು ಕಷ್ಟ ಸಾಧ್ಯವಾಗಿದೆ.

ಎರಡನೆಯ ಪ್ರಮುಖ ಸವಾಲೆಂದರೆ ಅದು, ವಿಶ್ವಾದ್ಯಂತ ಲಾಜಿಸ್ಟಿಕ್ಸ್ ಹಾಗೂ ಸಾಗಾಣಿಕೆಯ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸಂಘಟಿತ ಜಾಗತಿಕ ಪ್ರಯತ್ನದ ಕೊರತೆಯಾಗಿದೆ. ಆದರೂ ಶೀಘ್ರವೇ ಸಪ್ಲೈ ಚೈನ್ ನ ಸಮಸ್ಯೆ ಬಗೆಹರಿಯುವ ಆಶಾದಾಯಕ ನಿರೀಕ್ಷೆ ಇದೆ. 

ಅಮೆರಿಕಾದಲ್ಲಿ ಉದ್ಯೋಗ ಬದಲಾವಣೆ, ನೌಕರಿಗೆ ರಾಜೀನಾಮೆ ಪರ್ವ ಏನಿದರ ಹಿಂದಿನ ಮರ್ಮ?

ಕೊರೋನೋತ್ತರ ದಿನಗಳಲ್ಲಿ ಇರುವ ಉದ್ಯೋಗ ಉಳಿಸಿಕೊಂಡರೆ ಸಾಕು, ಬದಲಾವಣೆಯ ರಿಸ್ಕ್ ಬೇಡ ಎನ್ನುವ ಮನಸ್ಥಿತಿ ಭಾರತದ ಮಟ್ಟಿಗೆ ಮಧ್ಯಮ ವರ್ಗಗಳಲ್ಲಿ ಕಂಡುಬರುತ್ತಿದೆ. ಆದರೆ ಅಮೆರಿಕದಲ್ಲಿ ಆಗಸ್ಟ್ ತಿಂಗಳಲ್ಲಿ ದಾಖಲೆಯ 4.3 ಮಿಲಿಯನ್ ಮಂದಿ ತಮ್ಮ ಕೆಲಸಗಳಿಗೆ ರಾಜೀನಾಮೆ ನೀಡಿದ್ದಾರೆ. ಇದು ಇಂದಿನ ಆರ್ಥಿಕತೆಯಲ್ಲಿ ಕಾರ್ಮಿಕರು ಸಾಧಿಸಿರುವ ಹಿಡಿತವನ್ನು ತೋರುತ್ತಿದೆ.

ಜುಲೈ ತಿಂಗಳ ಶೇ.2.7 ರಷ್ಟಿದ್ದ ರಾಜೀನಾಮೆ ಅಥವಾ ಉದ್ಯೋಗ ಬದಲಾವಣೆಯ ದರ ಆಗಸ್ಟ್ ತಿಂಗಳಲ್ಲಿ ಶೇ.2.9 ರಷ್ಟಾಗಿದೆ ಎನ್ನುತ್ತಿದೆ ಮಂಗಳವಾರ ಬಿಡುಗಡೆಯಾದ ಉದ್ಯೋಗಾವಕಾಶಗಳು ಮತ್ತು ಕಾರ್ಮಿಕ ವಹಿವಾಟು ಸಮೀಕ್ಷೆ (JOLTS) ವರದಿ.

2000 ನೇ ಇಸವಿಯಿಂದ ಈ ವರದಿ ಪ್ರಕಟಗೊಳ್ಳುತ್ತಿದ್ದು, ಆಗಿನಿಂದ ಇತಿಹಾಸದ ಪುಟಗಳನ್ನು ತಿರುವಿದರೆ ಅಮೆರಿಕದಲ್ಲಿ ಈ ಪರಿಪ್ರಮಾಣದಲ್ಲಿ ಉದ್ಯೋಗಗಳಿಗೆ ರಾಜೀನಾಮೆ ನೀಡುತ್ತಿರುವ ಸಂಖ್ಯೆ ಗರಿಷ್ಠ ಮಟ್ಟದ್ದಾಗಿದೆ. ಜುಲೈ ತಿಂಗಳಿನಿಂದ ಉದ್ಯೋಗ ಬದಲಾವಣೆ ಮಾಡಿದವರ ಸಂಖ್ಯೆ 242,000 ಕ್ಕೆ ಏರಿಕೆಯಾಗಿದ್ದು, ಈ ರೀತಿ ರಾಜೀನಾಮೆ ನೀಡಿ ಹೊಸತನ್ನು ಹುಡುಕಿ ಹೊರಟವರ ಬಳಿ ಇರುವ ಕಾರಣ ಸಿಂಪಲ್,  ಉದ್ಯೋಗದಲ್ಲಿ ಉತ್ತಮ ವಾತಾವರಣ, ಹೊಂದಿಕೊಳ್ಳುವ ವ್ಯವಸ್ಥೆ ಹಾಗೂ ಹೆಚ್ಚಿನ ವೇತನ.

ಈ ರೀತಿ ಉದ್ಯೋಗ ಬದಲಾವಣೆ ಬಯಸಿದವರಲ್ಲಿ ವಸತಿ ಮತ್ತು ಆಹಾರ ಸೇವೆಗಳು, ಸಗಟು ವ್ಯಾಪಾರ ಮತ್ತು ರಾಜ್ಯ ಮತ್ತು ಸ್ಥಳೀಯ ಸರ್ಕಾರದ ಶಿಕ್ಷಣ ಕ್ಷೇತ್ರದಲ್ಲಿರುವವರೇ ಹೆಚ್ಚು. ಇದರ ಪರಿಣಾಮವಾಗಿ ಸಂಸ್ಥೆಗಳು ನೌಕರರ ಕೊರತೆ ಎದುರಿಸುತ್ತಿದ್ದು ಉದ್ಯೋಗ ಖಾಲಿ ಇರುವ ಬೋರ್ಡ್ ಗಳು ಹೆಚ್ಚಾಗಿ ಕಂಡುಬರುತ್ತಿದ್ದು ಆಗಸ್ಟ್ ತಿಂಗಳಾಂತ್ಯಕ್ಕೆ ಬರೊಬ್ಬರಿ 10.4 ಮಿಲಿಯನ್ ಉದ್ಯೋಗಗಳು ಖಾಲಿ ಇವೆ!

ಈ ಸನ್ನಿವೇಶ ಕಾರ್ಮಿಕರಿಗೆ ಸುಗ್ಗಿಯನ್ನುಂಟುಮಾಡಿದ್ದು, ಕಾರ್ಮಿಕ, ನೌಕರರ ಕಾಲ ಇದಾಗಿದೆ. ವಿಶ್ಲೇಷಕರು ಇದನ್ನು ಅಮೆರಿಕನ್ ಉದ್ಯೋಗಿಗಳ ಗೋಲ್ಡನ್ ಏಜ್ ಎಂದು ಹೇಳಲಾರಂಭಿಸಿದ್ದಾರೆ.

ಕಂಪನಿಗಳಿಗೆ ನೇಮಕಾತಿ ಅನಿವಾರ್ಯವಾಗಿರುವಾಗ ಉದ್ಯೋಗಗಳಲ್ಲಿ ಚೌಕಾಶಿ ಮಾಡಿದರೆ ಉತ್ತಮ ವೇತನ, ಉತ್ತಮ ಕೆಲಸದ ವಾತಾವರಣಗಳನ್ನು ಪಡೆಯಬಹುದು ಎಂಬುದು ನೌಕರರ ಉದ್ದೇಶ. ಬೃಹತ್ ಪ್ರಮಾಣದಲ್ಲಿ ಅಸ್ತವ್ಯಸ್ತಗೊಂಡ ಬಳಿಕ ಹೊಸ ನೀರು ಹರಿಯುವಂತೆ ಯುದ್ಧ ಅಥವಾ ಡಿಪ್ರೆಷನ್ ನಂತರದಲ್ಲಿ ಈ ರೀತಿಯ ಬೆಳವಣಿಗೆಗಳು ಕಾಣಸಿಗುತ್ತವೆ.

ಕಾರ್ಯಪಡೆಯ ಪರಿವರ್ತನೆ (ಉದ್ಯೋಗಿಗಳ ಪರಿವರ್ತನೆ) ದೀರ್ಘಾವಧಿಯಲ್ಲಿ ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಅವರಿಗೆ ಸಮಾಧಾನವಾಗುವ ರೀತಿಯಲ್ಲಿ ನೌಕರಿ ಹುಡುಕಿಕೊಳ್ಳುವುದಕ್ಕೆ ಈ ಪರಿಸ್ಥಿತಿ ಸಾಧ್ಯವಾಗಿಸಿದರೆ, ಸಂಸ್ಥೆಗಳಿಗೆ ಸಂತಸದಿಂದ ಕೆಲಸ ಮಾಡುವ ಉದ್ಯೋಗಿಗಳು ಸಿಗುತ್ತಾರೆ.  ಇದೇ ಮುಂದೆ ಆರ್ಥಿಕತ ಬೆಳವಣಿಗೆ ಏರಿಕೆಯಾಗುವುದಕ್ಕೆ ಸಹಕಾರಿಯಾಗಬಹುದಾಗಿದ್ದು ಶ್ರೀಮಂತ-ಬಡವರ ನಡುವಿನ ಅಂತರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಅವಕಾಶಗಳೂ ಇದೆ. ಆದರೆ ತಕ್ಷಣಕ್ಕೆ ನೌಕರರ ಕೊರತೆ ಉಂಟುಮಾಡುವ ಪರಿಣಾಮ ಬೆಲೆ ಏರಿಕೆ ಹಾಗೂ ಸಪ್ಲೈ ಚೈನ್ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವುದರಿಂದ ಇದು ಕೊರೋನಾದಿಂದ ಈಗಷ್ಟೇ ಚೇತರಿಕೆ ಕಾಣುತ್ತಿರುವ ಜಾಗತಿಕ ಆರ್ಥಿಕತೆ ಮೇಲೆ ಒತ್ತಡ ಮೂಡಿಸುವ ಸಮಸ್ಯೆ ಇದೆ.

ಕೊನೆಯ ಮಾತು: ಒಂದು ಇಡಿಯ ವ್ಯವಸ್ಥೆ ಅಸ್ತವ್ಯಸ್ತಗೊಂಡ ಬಳಿಕ ಅದು ಮರಳಿ ಹೊಸ ರೂಪ ಪಡೆದು ಚೇತರಿಸಿಕೊಂಡು ಹಳಿಗೆ ಮರಳುವುದಕ್ಕೆ ಕೆಲ ಸಮಯ ಬೇಕಾಗುತ್ತದೆ. ಸಪ್ಲೈ ಚೈನ್ ಹಾಗೂ ಜಗತ್ತಿನ ಬಲಿಷ್ಠ ರಾಷ್ಟ್ರದಲ್ಲಿನ ಉದ್ಯೋಗ ಬದಲಾವಣೆಯ ಪರ್ವ ಹಾಗೂ ಕೊರೋನಾದಿಂದ ಉಂಟಾಗಿರುವ ಜರ್ಕ್ ನಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಜಾಗತಿಕ ಆರ್ಥಿಕತೆ ಈಗ ಅಂತಹದ್ದೇ Transformation ಸ್ಥಿತಿಯಲ್ಲಿದೆ.
 

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com