ನಡುಹರೆಯದಲ್ಲಿ ಹೃದಯಾಘಾತ: ಸದೃಢರೂ ಹೊರತಲ್ಲ ಏಕೆ? (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿಇಂದು ಬದುಕು ಹಿಂದಿನಂತಿಲ್ಲ ಮತ್ತು ಈಗಿನ ವಾತಾವರಣದಲ್ಲಿ ಯಾರಿಗೆ ಯಾವ ಕ್ಷಣದಲ್ಲಿ ಏನಾದರೂ ಆಗಬಹುದು. ದೈಹಿಕವಾಗಿ ಸದೃಢನಾದ ಮನುಷ್ಯ ಒಂದಲ್ಲಾ ಒಂದು ಒತ್ತಡಕ್ಕೆ ಸಿಲುಕುತ್ತಿದ್ದಾನೆ.
ಹೃದಯದ ಆರೋಗ್ಯ (ಸಾಂಕೇತಿಕ ಚಿತ್ರ)
ಹೃದಯದ ಆರೋಗ್ಯ (ಸಾಂಕೇತಿಕ ಚಿತ್ರ)

ಇತ್ತೀಚಿನ ದಿನಗಳಲ್ಲಿ ಯುವಜನರು ಮತ್ತು ನಡುಹರೆಯದವರು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ನಮ್ಮೆಲ್ಲರ ಗಮನಕ್ಕೆ ಬಂದಿದೆ. 

ಇದೇ ಎರಡು ದಿನಗಳ ಹಿಂದೆ, ಬಿಗ್ ಬಾಸ್ ಸೀಸನ್ 13ರ ವಿಜೇತ, ಹಿಂದಿ ಕಿರುತೆರೆಯ ಜನಪ್ರಿಯ ನಟ 40 ವರ್ಷದ ಸಿದ್ಧಾರ್ಥ್​ ಶುಕ್ಲಾ ಹೃದಯಾಘಾತದಿಂದ ನಿಧನರಾದರು. ಕಳೆದ ವರ್ಷ ಜನಪ್ರಿಯ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ 39 ವರ್ಷಕ್ಕೆ ಸಾವನ್ನಪ್ಪಿದ್ದು ದೊಡ್ಡ ಸುದ್ದಿಯಾಗಿತ್ತು. ನಟರಾದ್ದರಿಂದ ಅವರು ದೈಹಿಕವಾಗಿ ಸದೃಢರೇ ಆಗಿದ್ದು ಕಟ್ಟುಮಸ್ತಾಗಿದ್ದರು. ಆದರೂ ಹೃದಯಾಘಾತದಿಂದ ಸಾವನ್ನಪ್ಪಿದರು ಎಂಬುದನ್ನು ನಂಬುವುದು ಕಷ್ಟ ಎಂದು ಅವರ ಅಭಿಮಾನಿಗಳು, ಚಿತ್ರರಂಗದ ಸಹೋದ್ಯೋಗಿಗಳು ಮತ್ತು ಜನಸಾಮಾನ್ಯರು ಹೇಳಿದ್ದರು. 

ಆದರೆ ಒಂದು ವಿಷಯವನ್ನು ನಾವು ಇಲ್ಲಿ ಗಮನಿಸಬೇಕು. ಇಂದು ಬದುಕು ಹಿಂದಿನಂತಿಲ್ಲ ಮತ್ತು ಈಗಿನ ವಾತಾವರಣದಲ್ಲಿ ಯಾರಿಗೆ ಯಾವ ಕ್ಷಣದಲ್ಲಿ ಏನಾದರೂ ಆಗಬಹುದು. ದೈಹಿಕವಾಗಿ ಸದೃಢನಾದ ಮನುಷ್ಯ ಒಂದಲ್ಲಾ ಒಂದು ಒತ್ತಡಕ್ಕೆ ಸಿಲುಕುತ್ತಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಹಿನ್ನೆಲೆಯಲ್ಲಿ ನಾವು ಇತ್ತೀಚೆಗೆ ಉಂಟಾಗುತ್ತಿರುವ ಸಾವುನೋವುಗಳನ್ನು ಗಮನಿಸಬೇಕಾಗುತ್ತದೆ.

ನಿಮ್ಮ ಹೃದಯದ ಮಾತನ್ನೂ ಕೇಳಿ!
ನಮ್ಮ ಹಿಂದಿನ ತಲೆಮಾರಿನ ಜನರ ಜೀವನ ನಮ್ಮಷ್ಟು ಸುಖಕರವಾಗಿರಲಿಲ್ಲ. ಆಗೆಲ್ಲಾ ಬಡತನವಿತ್ತು. ಈಗಿನಂತೆಯೇ ಆಗಲೂ ಸಾಕಷ್ಟು ಕಷ್ಟಗಳು ಮತ್ತು ಸಮಸ್ಯೆಗಳು ಇದ್ದವು. ಆದರೂ ಅವರು ಆ ಕಷ್ಟಗಳು ಮತ್ತು ಸಮಸ್ಯೆಗಳನ್ನು ಎದುರಿಸಿ ನಿಲ್ಲುತ್ತಿದ್ದರು. ಆದರೆ ಇಂದು ನಾವು ಜೀವನದಲ್ಲಿ ಸ್ವಲ್ಪ ಬದಲಾವಣೆ ಆದರೂ ಸಹಿಸುವುದಿಲ್ಲ. ಪ್ರತಿನಿತ್ಯ ವಾಕಿಂಗ್ ಮತ್ತು ವ್ಯಾಯಾಮ ಮಾಡಿ ದೇಹವನ್ನು ಸದೃಢವನ್ನಾಗಿ ಇಟ್ಟುಕೊಂಡರೆ ಸಾಕು. ಯಾವುದೇ ಆಹಾರವನ್ನು ತಿಂದರೂ ನಾವು ಚೆನ್ನಾಗಿರುತ್ತೇವೆ ಎಂಬ ಭಾವನೆ ಜನರಲ್ಲಿ ಮನೆಮಾಡಿದೆ. ಅಲ್ಲದೇ ನೂರೆಂಟು ಬಗೆಬಗೆಯ ತಿಂಡಿತಿನಿಸುಗಳು ನಮ್ಮನ್ನು ಆಕರ್ಷಿಸುತ್ತಿವೆ. ಇಂತಹ ಆಹಾರಗಳ ಸೇವನೆ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಯಾರಿಗೂ ಒಳ್ಳೆಯದಲ್ಲ. ಇವುಗಳು ಅನೇಕ ರೋಗಗಳಿಗೆ ಆಹ್ವಾನ ನೀಡುತ್ತವೆ. ಈ ವಿಷಯ ಒಂದು ಕಡೆಯಾದರೆ ಇನ್ನೊಂದು ಕಡೆ ನಮ್ಮ ಜೀವನ ಇಂದು ಬಹಳ ವೇಗವಾಗಿದೆ. ನಾವಂದುಕೊಂಡ ಎಲ್ಲವೂ ಫಟಾಫಟ್ ಆಗಬೇಕು ಎಂದು ಬಯಸುತ್ತೇವೆ. 

ಈ ಧಾವಂತದಲ್ಲಿ ಪ್ರತಿದಿನ ನಾವು ನಮ್ಮ ದೇಹ ಮತ್ತು ಮನಸ್ಸನ್ನು ಎಷ್ಟು ಪ್ರಶಾಂತವಾಗಿ ಇಟ್ಟುಕೊಂಡಿದ್ದೇವೆ ಎಂಬುದನ್ನು ನಾವು ಅರಿವಿಗೆ ತಂದುಕೊಳ್ಳುವುದಿಲ್ಲ. ಜೊತೆಗೆ ಇಂದು ನಮ್ಮ ನಡುವೆ ನಡೆಯುತ್ತಿರುವ ಘಟನಾವಳಿಗಳು ನಮಗೆ ಶಾಂತಿ ಮತ್ತು ಸಂತೋಷಗಳನ್ನು ತಂದುಕೊಡುವುದರ ಬದಲು ದು:ಖ, ಭಯ ಮತ್ತು ಹತಾಶೆಯ ಮಡುವಿಗೆ ದೂಡುತ್ತಿವೆ. ನಮ್ಮ ಇಂದಿನ ಆಹಾರ ಪದ್ಧತಿ ಮತ್ತು ವಾತಾವರಣ ಎರಡೂ ರೋಗಕಾರಕಗಳೇ ಆಗಿವೆ. ಆಶ್ಚರ್ಯವೆಂದರೆ ಇಂದು ನಮಗೆ ಬೇಡದ ಎಲ್ಲಾ ವಿಷಯಗಳಿಗೂ ಸಮಯವಿದೆ. ಆದರೆ ನಮ್ಮ ಆರೋಗ್ಯ ಮತ್ತು ಆಹಾರಕ್ರಮದತ್ತ ಕಾಳಜಿ ವಹಿಸಲು ಸಮಯವಿಲ್ಲ. ಈ ಹಿನ್ನೆಲೆಯಲ್ಲಿ ಹೃದಯಾಘಾತದಂತಹ ಆಕಸ್ಮಿಕಗಳು ಉಂಟಾಗುವುದು ಸಾಮಾನ್ಯವೇ.

ಹೃದಯದ ಕೆಲಸ!
ಹೃದಯ ನಮ್ಮ ದೇಹದ ನರಗಳಿಗೆ ರಕ್ತವನ್ನು ಕಳುಹಿಸುವ ಕೆಲಸವನ್ನು ಮಾಡುತ್ತದೆ. ಅಂದರೆ ಹೃದಯ ರಕ್ತವನ್ನು ದೇಹಕ್ಕೆ ಪೂರೈಸುವ ಪಂಪ್ ಇದ್ದಂತೆ. ಹೃದಯ ಸರಬರಾಜು ಮಾಡುವ ರಕ್ತದ ಮೂಲಕವೇ ನಮ್ಮ ಜೀವನಕ್ಕೆ ಬಹುಮುಖ್ಯವಾಗಿ ಬೇಕಾದ ಆಮ್ಲಜನಕ ಮತ್ತು ಪೋಷಕಾಂಶಗಳು ದೇಹದ ಎಲ್ಲಾ ಜೀವಕೋಶಗಳಿಗೆ ತಲುಪಿ ಉಸಿರಾಟ, ಹೃದಯ ಬಡಿತ ಮತ್ತಿತರ ದೈಹಿಕ ಪ್ರಕ್ರಿಯೆಗಳು ಸುಗಮವಾಗಿ ನಡೆಯುತ್ತವೆ. ಹೃದಯಾಘಾತ ಎಂದರೆ ಹೃದಯವು ಇದ್ದಕ್ಕಿದ್ದಂತೆ ದೇಹಕ್ಕೆ ರಕ್ತ ಸಂಚಲನ ಮಾಡುವುದನ್ನು ನಿಲ್ಲಿಸುವುದು. ಹೃದಯದ ಒಂದು ಭಾಗದಲ್ಲಿ ಸುಗಮ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುವುದರಿಂದ ಹೀಗಾಗುತ್ತದೆ. ಇದರಿಂದ ರಕ್ತನಾಳಗಳು ಹಾಗೂ ಸ್ನಾಯುಗಳಿಗೆ ಹಾನಿಯುಂಟಾಗುತ್ತದೆ. ಹೃದಯ ತನ್ನ ಕಾರ್ಯವನ್ನು ನಿಲ್ಲಿಸಿದ ತಕ್ಷಣ ಉಸಿರಾಟ ನಿಂತುಹೋಗುತ್ತದೆ. ಇದರಿಂದಾಗಿ ಸಾವು ಸಂಭವಿಸಬಹುದು. ಇವೆಲ್ಲಾ ಕೆಲವೇ ಕ್ಷಣಗಳಲ್ಲಿ ನಡೆದುಹೋಗುತ್ತದೆ. ಆದರೆ ಹೃದಯಘಾತವಾದ ತಕ್ಷಣವೇ ಪ್ರಥಮ ಚಿಕಿತ್ಸೆ ದೊರೆತರೆ ಬದುಕುಳಿಯುವ ಸಾಧ್ಯತೆ ಇದೆ.

ಹೃದಯಾಘಾತದ ಮುನ್ಸೂಚನೆಗಳು

ಹೃದಯಾಘಾತ ದಿಢೀರೆಂದು ಆಗುವುದಿಲ್ಲ. ಹೃದಯಾಘಾತವಾಗುವ ಮೊದಲು ದೇಹದಲ್ಲಿ ಸಾಕಷ್ಟು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ಲಕ್ಷಣಗಳನ್ನು ಕಡೆಗಣಿಸಿದರೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಮೊದಲಿಗೆ ಏನೋ ಆಲಸ್ಯವಿರುತ್ತದೆ. ತುಂಬಾ ಸುಸ್ತಾಗುತ್ತದೆ. ಯಾವ ಕೆಲಸವನ್ನೂ ಮಾಡಲು ಆಗುವುದಿಲ್ಲ. ಸ್ವಲ್ಪ ದೂರ ನಡೆದರೆ ದಣಿವಾಗಿ ಸುಧಾರಿಸಿಕೊಳ್ಳಬೇಕು ಎನಿಸುತ್ತದೆ. ಆದರೆ ಜ್ವರ ಅಥವಾ ಇತರ ಕಾಯಿಲೆ ಯಾವುದು ಇರುವುದಿಲ್ಲ. ಒಟ್ಟಾರೆ ಹೇಳಬೇಕೆಂದರೆ ಸುಸ್ತಾಗಲು ಕಾರಣ ಏನು ಎಂಬುದೇ ಗೊತ್ತಾಗುವುದಿಲ್ಲ. ಇದಲ್ಲದೇ ಉಸಿರಾಟ ತೀವ್ರಗತಿಯಲ್ಲಿ ಕಂಡುಬರುತ್ತದೆ. ಇದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ಹೀಗೆ ಆಗುವುದರಿಂದ ಉಸಿರಾಡಲು ಕಷ್ಟವಾಗುತ್ತದೆ. ಜೊತೆಗೆ ಮೈ ಬೆವರುತ್ತದೆ ಮತ್ತು ತಲೆಸುತ್ತು ಉಂಟಾಗುತ್ತದೆ. ಹೃದಯಾಘಾತವಾಗುವ ಕೆಲವು ವಾರಗಳ ಮುಂಚೆಯೇ ಸ್ವಲ್ಪ ಎದೆ ನೋವು ಬಂದಿರುತ್ತದೆ. ಅದೇನು ಮೆಲ್ಲನೆಯ ನೋವಷ್ಟೇ ಎಂದು ಯಾರೂ ಗಮನಕ್ಕೆ ತಂದುಕೊಂಡಿರುವುದಿಲ್ಲ. ಅಲ್ಲದೇ ಭುಜ, ಕುತ್ತಿಗೆ ಮತ್ತು ಬೆನ್ನಿನಲ್ಲೂ ನೋವು ಉಂಟಾದ ಅನುಭವ ಆಗಿರುತ್ತದೆ. ಇವೆಲ್ಲಾ ಹೃದಯಾಘಾತ ಉಂಟಾಗುವ ಮುನ್ಸೂಚನೆಗಳು. ಇವುಗಳನ್ನು ಅಲಕ್ಷಿಸಬಾರದು. ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು.

ಹೃದಯಾಘಾತವಾಗುವ ಸಂಭವ ಯಾರಿಗೆ ಹೆಚ್ಚು?
ದೇಹದಲ್ಲಿ ಹೆಚ್ಚು ಕೊಲೆಸ್ಟೆರಾಲ್ (ಕೊಬ್ಬಿನಂಶ) ಇದ್ದವರಿಗೆ, ಯಾವುದೇ ದೈಹಿಕ ವ್ಯಾಯಾಮ ಮಾಡದವರಿಗೆ, ಹೆಚ್ಚು ಬಿಪಿ (ರಕ್ತದೊತ್ತಡ) ಇರುವವರಿಗೆ, ಡಯಾಬಿಟಿಸ್ ರೋಗಿಗಳಿಗೆ ಮತ್ತು ಹೆಚ್ಚು ತೂಕ (ಬೊಜ್ಜು) ಇರುವವರಿಗೆ ಹೃದಯಾಘಾತವಾಗುವ ಸಂಭವ ಇರುತ್ತದೆ. ಇನ್ನು ಹೃದಯಾಘಾತವಾದಾಗ ಎದೆಯ ಎಡ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವು ಜನರಿಗೆ ಕತ್ತು, ಗಂಟಲು, ಹೊಟ್ಟೆಯ ಮೇಲ್ಭಾಗ, ಬೆನ್ನು, ತೋಳು, ಸೊಂಟ, ದವಡೆ ಮತ್ತು ಭುಜಗಳಲ್ಲಿ ನೋವು ಕಾಣಿಸಿಕೊಳ್ಳಹುದು. ಎದೆ ಮತ್ತು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು. ತಂಪು ವಾತಾವರಣದಲ್ಲೂ ಸಹ ದೇಹ ಬೆವರಬಹುದು. ವಾಕರಿಕೆ, ಉಸಿರಾಡಲು ಕಷ್ಟವಾಗುವುದು, ತಲೆ ಸುತ್ತುವುದು, ವೇಗವಾದ ಎದೆ ಬಡಿತವೂ ಸಹ ಹೃದಯಾಘಾತದ ಲಕ್ಷಣಗಳೇ ಆಗಿವೆ. ಈ ರೀತಿ ಸಮಸ್ಯೆಗಳು ಕಾಣಿಸಿಕೊಂಡು ವ್ಯಕ್ತಿ ಕುಸಿದು ಬಿಡಬಹುದು. ಆದ್ದರಿಂದ ಹತ್ತು ನಿಮಿಷಗಳಿಗೂ ಹೆಚ್ಚು ಇಂತಹ ಲಕ್ಷಣಗಳು ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಕಾಣುವುದು ಸೂಕ್ತ.

ಹೃದಯಾಘಾತವಾದಾಗ ಏನು ಮಾಡಬೇಕು?
ಹೃದಯಾಘಾತವಾದವರು ಜೋರಾಗಿ ಕೆಮ್ಮಬೇಕು. ತಕ್ಷಣ ಆಂಬುಲೆನ್ಸಿಗೆ ಕರೆ ಮಾಡಬೇಕು. ಅದು ಬರುವ ತನಕ ಅವರ ಎದೆಯನ್ನು ಜೋರಾಗಿ ಅದುಮಬೇಕು. ಆಸ್ಪತ್ರೆಗೆ ಹೋಗುವವರೆಗೂ ಅವರು ಕೆಮ್ಮುವುದನ್ನು ನಿಲ್ಲಿಸಬಾರದು. ಸಾಧ್ಯವಾದರೆ ಅವರ ಬಾಯಿಗೆ ಬಾಯಿ ಇಟ್ಟು ಊದಿದರೆ ಬದುಕುಳಿಯುವ ಸಾಧ್ಯತೆ ಹೆಚ್ಚು. ಹೃದಯಾಘಾವಾದ ತಕ್ಷಣ ಒಂದು ಕ್ಷಣವನ್ನು ವ್ಯರ್ಥ ಮಾಡಬಾರದು. ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು.

ಹೃದಯಾಘಾತ ಸಂಭವಿಸಿದ ಮೊದಲ 3-6 ಗಂಟೆಗಳು ಅತೀ ಗಂಭೀರ. ಮೊದಲಿಗೆ ತೀವ್ರ ಹೃದಯಾಘಾತ ಸಂಭವಿಸುವ ಕೆಲವು ಗಂಟೆಗಳ ಮುಂಚೆ ಹೃದಯಬಡಿತದ ಏರುಪೇರು ಕಾಣಿಸಿಕೊಳ್ಳುತ್ತದೆ. ಹೃದಯಬಡಿತದ ಏರುಪೇರು ರೋಗಿಯು ವೈದ್ಯಕೀಯ ಆರೈಕೆಯಲ್ಲಿದ್ದಾಗ ಸಂಭವಿಸಿದರೆ ಸಕಾಲದಲ್ಲಿ ಅನಾಹುತ ತಪ್ಪಿಸಬಹುದು.

ಹೃದಯದ ಆರೋಗ್ಯಕ್ಕೆ ಪೂರಕ ಆಹಾರಗಳು

ನೀರಿನಲ್ಲಿ ನೆನೆಸಿದ ಬಾದಾಮಿ, ಬೆಣ್ಣೆ ಹಣ್ಣು (ಅವಕಾಡೋ), ಬ್ಲಾಕ್ ಚಾಕೋಲೇಟ್, ಬೆಳ್ಳುಳ್ಳಿ, ಕಿತ್ತಲೆ ಹಣ್ಣು, ಬೆರ್ರಿ ಹಣ್ಣುಗಳು ಮತ್ತು ಗ್ರೀನ್ ಟೀ ಸೇವನೆಯೂ ಒಳ್ಳೆಯದು. ಜೊತೆಗೆ ವಿಟಮಿನ್ ಭರಿತ ತರಕಾರಿಗಳು, ಧಾನ್ಯಗಳು, ಮೊಳಕೆ ಕಾಳುಗಳು, ಬಾರ್ಲಿ, ಓಟ್ಸ್, ಕುಚ್ಚಲಕ್ಕಿ, ರಾಗಿ, ಗೋಧಿ ಮತ್ತು ಒಮೆಗಾ 3 ಅಂಶವಿರುವ ಮೀನುಗಳ ಆಹಾರ ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತವೆ.

ಜೀವನಶೈಲಿ ಮತ್ತು ಆಹಾರ ಪದ್ಧತಿ 
ಹೃದಯಾಘಾತವಾಗಲು ಮುಖ್ಯ ಕಾರಣ ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿ. ಇಂದು ನಮ್ಮಲ್ಲಿ ಬಹುತೇಕ ಜನರು ಆಫೀಸಿನಲ್ಲಿ ಕುಳಿತೇ ಕೆಲಸ ಮಾಡುವವರು. ಅವರಿಗೆ ದೈಹಿಕ ವ್ಯಾಯಾಮದಲ್ಲಿ ಆಸಕ್ತಿ ಇಲ್ಲ. ಇದರ ಪರಿಣಾಮವಾಗಿ ಬೊಜ್ಜು ಸಾಮಾನ್ಯವಾಗಿ ಬರುತ್ತದೆ. ಬೊಜ್ಜು ಬಂದರೆ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ದೇಹದಲ್ಲಿ ಹೆಚ್ಚಾಗುವ ಸಂಗ್ರಹವಾದ ಕೊಬ್ಬು ಖರ್ಚಾಗದೇ ರಕ್ತನಾಳಗಳಲ್ಲಿ ಸೇರಿ ಸುಗಮ ರಕ್ತ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ಪ್ರತಿದಿನ ವ್ಯಾಯಾಮ ಮಾಡಲು ಆಗದಿದ್ದಲ್ಲಿ ಅರ್ಧ ಗಂಟೆ ಕಡ್ಡಾಯವಾಗಿ ವಾಕಿಂಗ್ ಮಾಡಲೇಬೇಕು. ಬೊಜ್ಜನ್ನು ಕರಗಿಸಿ ಆರೋಗ್ಯಕರ ತೂಕವನ್ನು ಹೊಂದಿರಬೇಕು. ಧೂಮಪಾನ ಚಟವಿರುವವರಿಗೆ ಹೃದಯಾಘಾತ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು, ಆದ್ದರಿಂದ ಈ ಅಪಾಯಕಾರಿ ಚಟದಿಂದ ದೂರವಿರಬೇಕು. ರುಚಿ ಚೆನ್ನಾಗಿದೆ ಎಂದು ಸಿಕ್ಕಿದ ಜಂಕ್‍ಫುಡ್‍ಗಳನ್ನು ತಿನ್ನುವುದರಿಂದ ದೇಹದ ಆರೋಗ್ಯ ಹಾಳಾಗುವುದು. ದೇಹದಲ್ಲಿ ಕೊಬ್ಬಿನಂಶ ಸಂಗ್ರಹವಾಗಿ ರಕ್ತಸಂಚಾರಕ್ಕೆ ಅಡಚಣೆ ಉಂಟಾಗಿ ಹೃದಯಾಘಾತ ಉಂಟಾಗುವುದು. ಕೆಲವರಿಗೆ ಅನುವಂಶೀಯವಾಗಿಯೂ ಹೃದಯಾಘಾತವಾಗುವ ಸಂಭವ ಇದೆ. ಇಂದು ಆರೋಗ್ಯಕ್ಕೆ ದೊಡ್ಡ ಶತ್ರುವಾಗಿರುವುದು ಮಾನಸಿಕ ಒತ್ತಡ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮಾನಸಿಕ ಒತ್ತಡವೂ ಹೆಚ್ಚಾಗಿದೆ. ಮನಸ್ಸಿನ ಒತ್ತಡದ ನೇರ ಪ್ರಭಾವ ಆರೋಗ್ಯದ ಮೇಲೆ ಉಂಟಾಗುತ್ತಿದೆ. ಒತ್ತಡವನ್ನು ಪರಿಹರಿಸಲು ನಿಯಮಿತ ವ್ಯಾಯಾಮ, ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಸಹಾಯಕ.

ಹೃದಯಾಘಾತ ಕುರಿತು ಅರಿವು
ಇಂದು ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರಲ್ಲಿ ತಿಳಿವಳಿಕೆ ಇಲ್ಲ. ಮುಕ್ಕಾಲು ಪಾಲು ಜನರು ಸಮಸ್ಯೆ ಕೊನೆ ಹಂತಕ್ಕೆ ಹೋಗಿ ಗಂಭೀರ ರೂಪ ತಾಳುವವರೆಗೆ ವೈದ್ಯರನ್ನು ಕಾಣುವುದಿಲ್ಲ. ಹೇಳಬೇಕೆಂದರೆ 20 ರಿಂದ 45 ವರ್ಷಗಳವರೆಗಿನ ಜನರಲ್ಲಿ ಈ ಬಗ್ಗೆ ಯಾವ ರೀತಿಯ ತಿಳಿವಳಿಕೆ ಇಲ್ಲ. ತಮಗೆ ಹೃದಯ ಸಂಬಂಧಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಅವರು ನಂಬಿರುತ್ತಾರೆ. ಇದು ತಪ್ಪು. ಚಿಕ್ಕ ವಯಸ್ಸಿಗೆ ಹೃದಯಾಘಾತ ಬರಲೇಬಾರದು ಎಂದೇನೂ ಇಲ್ಲ. ಜಾಗ್ರತೆಯಾಗಿರುವುದು ಮುಖ್ಯ. ಈ ಬಗ್ಗೆ ತುರ್ತಾಗಿ ಜನರಲ್ಲಿ ಅರಿವನ್ನು ಹೆಚ್ಚಿಸಬೇಕಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಸರಿಯಾದ ಹೊತ್ತಿಗೆ ಊಟ, ತಿಂಡಿ, ಕನಿಷ್ಟ ಎಂಟು ಗಂಟೆಗಳ ತನಕ ನಿರಾತಂಕ ನಿದ್ರೆ ಮತ್ತು ಮನಸ್ಸಿಗೆ ಖುಷಿ ನೀಡುವ ಆಟೋಟಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದಾರಿ ಎಂಬುದನ್ನು ನಾವು ಮರೆಯಬಾರದು.

ಡಾ. ವಸುಂಧರಾ ಭೂಪತಿ
ಇಮೇಲ್: bhupathivasundhara@gmail.com
ಫೋನ್ ನಂಬರ್: 9986840477

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com