ನೇತ್ರ ದಾನ, ನೇತ್ರ ಭಂಡಾರ (ಐ ಬ್ಯಾಂಕ್) ಬಗ್ಗೆ ತಿಳಿದುಕೊಳ್ಳಿ (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ

ಪ್ರಪಂಚದ ಮೊಟ್ಟಮೊದಲ ನೇತ್ರ ಭಂಡಾರ ಇಂಗ್ಲೆಂಡಿನಲ್ಲಿ 1945ರಲ್ಲಿ ಆರಂಭವಾಯಿತು. ಶ್ರೀಲಂಕಾದ ಅಂತರ ರಾಷ್ಟ್ರೀಯ ನೇತ್ರಭಂಡಾರ ಪ್ರಪಂಚದಲ್ಲಿಯೇ ಬೃಹತ್ ನೇತ್ರ ಭಂಡಾರ ಹೊಂದಿದ್ದು, ವಿವಿಧ ದೇಶಗಳಿಗೆ ದಾನಿ ನೇತ್ರಗಳನ್ನು ಕಳುಹಿಸಿಕೊಡುತ್ತದೆ.

Published: 25th September 2021 07:00 AM  |   Last Updated: 24th September 2021 10:33 PM   |  A+A-


Eye donation

ನೇತ್ರದಾನ (ಸಾಂಕೇತಿಕ ಚಿತ್ರ

ಕಣ್ಣು ನಮ್ಮ ದೇಹದ ಪುಟ್ಟ ಅಂಗವಾದರೂ ಬಹು ಮಹತ್ವದ ಅಂಗ. ನಮಗೆ ದೃಷ್ಟಿ ನೀಡುವುದರೊಂದಿಗೆ ಜಗತ್ತಿನ ಸಂಪರ್ಕಕ್ಕೆ ಬಹು ಮುಖ್ಯ ಸೇತುವೆಯಾಗಿದೆ ಈ ಕಣ್ಣು. ಇಂತಹ ಅಮೂಲ್ಯ ಕಣ್ಣುಗಳನ್ನು ಸಂಗ್ರಹಿಸಿಡುವ ಭಂಡಾರವೇ ನೇತ್ರ ಭಂಡಾರ (ಐ ಬ್ಯಾಂಕ್).

ಮೃತ ವ್ಯಕ್ತಿಗಳ ಆರೋಗ್ಯಕರ ನೇತ್ರಗಳನ್ನು ಸಂಗ್ರಹಿಸಿ ಅವುಗಳಿಂದ ಬೇರ್ಪಡಿಸಿದ ಪಾರದರ್ಶಕ ಕಾರ್ನಿಯಾ ಅಂಗಾಂಶಗಳನ್ನು, ಅಂಧ ರೋಗಿಗಳ ದೋಷಯುಕ್ತ ಕಾರ್ನಿಯಾದ ಜಾಗದಲ್ಲಿ ಅಳವಡಿಸಿದಾಗ ಅಂಧರಿಗೆ ದೃಷ್ಟಿ ಮರುಕಳಿಸುವುದು ವೈದ್ಯ ವಿಜ್ಞಾನದ ಪ್ರಗತಿಯ ಸಾಧನೆ. ಈ ಅತಿ ಸೂಕ್ಷ್ಮ ವಿಧಾನಕ್ಕೆ ಕಾರ್ನಿಯಾ ನಾಟಿ ಶಸ್ತ್ರ ಚಿಕಿತ್ಸೆ (ಕೆರಟೊ ಪ್ಲಾಸ್ಟಿ) ಎನ್ನುತ್ತಾರೆ.

ಇಂದು ಭಾರತದಲ್ಲಿ 25-30 ಲಕ್ಷ ಕಾರ್ನಿಯಾ ಅಂಧರು (ಮಕ್ಕಳು ವೃದ್ಧರಾದಿ) ಮರುದೃಷ್ಟಿ ಹೊಂದಲು ಸಾಕಷ್ಟು ದಾನಿ ನೇತ್ರಗಳಿಲ್ಲದೇ ಹತಾಶರಾಗುತ್ತಿದ್ದಾರೆ. ವರ್ಷಕ್ಕೆ ಒಂದು ಲಕ್ಷದಷ್ಟು ನೇತ್ರದಾನಿಗಳ ಬೇಡಿಕೆಗೆ ಪ್ರತಿಯಾಗಿ ಕೇವಲ ಶೇ.5 ರಷ್ಟು ಪೂರೈಕೆಯಾಗುತ್ತಿದೆ. ಅಲ್ಲದೇ 20,000 ಅಧಿಕ ಹೊಸ ಅಂಧರು ಈ ಗುಂಪಿಗೆ ಸೇರುತ್ತಿದ್ದಾರೆ. ನಮ್ಮ ದೇಶದಲ್ಲಿ ನೇತ್ರದಾನದ ವಿರಳತೆಗೆ ಮುಖ್ಯ ಕಾರಣ ಜನಜಾಗೃತಿಯ ಅಭಾವ. ಇದಕ್ಕೆ ಪೂರಕವಾಗಿ ಅಜ್ಞಾನ, ಮೂಢನಂಬಿಕೆ, ಅಲಕ್ಷ್ಯ ಮತ್ತು ನೇತ್ರ ಸಂಗ್ರಹಣೆಗೆ ಸೌಲಭ್ಯ ಕೆಲವೇ ನಗರಗಳಿಗೆ ಸೀಮಿತವಾಗಿರುವುದು.

ಯಾರು ನೇತ್ರ ದಾನ ಮಾಡಬಹುದು?

ನೇತ್ರದಾನ ಮಾಡುವುದು ಮರಣಾನಂತರ ಮತ್ತು ಬಂಧುಗಳ ಅನುಮತಿ ಇದ್ದಾಗ ಮಾತ್ರ. ಜಾತಿಧರ್ಮದ ಕಟ್ಟುಪಾಡುಗಳಿಲ್ಲ. ಸ್ತ್ರೀ ಪುರುಷರೆನ್ನದೇ ಮೃತ ವ್ಯಕ್ತಿ ದಾನದ ಬಗ್ಗೆ ಅನುಮತಿ ನೀಡಿರಲಿ, ಇಲ್ಲದಿರಲಿ ದಾನಕ್ಕೆ ಅರ್ಹ. ದಾನ ನೀಡುವವರು ಕನ್ನಡದ ಧರಿಸುತ್ತಿರಲಿ, ದೃಷ್ಟಿದೋಷ ಹೊಂದಿರಲಿ, ಸಕ್ಕರೆ ಕಾಯಿಲೆ, ರಕ್ತದ ಏರೋತ್ತಡ, ಅಸ್ತಮಾ, ಕ್ಷಯದಂತಹ ಕಾಯಿಲೆಗಳಿಂದ ನರುಳುತ್ತಿರಲಿ ಅಥವಾ ಮೋತಿಬಿಂದು ತೆಗೆಸಿಕೊಳ್ಳುವ ಶಸ್ತ್ರಕ್ರಿಯೆಗೆ ಒಳಗಾಗಿರಲಿ, ನೇತ್ರ ದಾನ ಮಾಡಬಹುದಾಗಿದೆ. 

ದಾನಿಗಳ ನೇತ್ರ ತೆಗೆಯುವ ಪ್ರಕ್ರಿಯೆ:
ದಾನಿಗಳ ಆಶಯವನ್ನು ಅವರ ಮರಣಾನಂತರ ಅವರು ಕುಟುಂಬವರ್ಗದವರು ಕಾರ್ಯಗತ ಮಾಡಬೇಕು. ಮೃತರ ದೇಹದಿಂದ ಕಣ್ಣು ಗುಡ್ಡೆಯನ್ನು ಇಡಿಯಾಗಿ ತೆಗೆದರೂ, ನಾಟಿ ಮಾಡಲು ಕೇವಲ ಕಾರ್ನಿಯಾವನ್ನು ಬಳಸಲಾಗುತ್ತದೆ. ಇಡೀ ಗುಡ್ಡೆಯ ಬದಲು ಕೇವಲ ಕೋಡ್ಪರೆಯನ್ನು ಬಳಸಬಹುದು. ಕಣ್ಣುಗುಡ್ಡೆ ತೆಗೆದ ಮೇಲೆ ಅದರ ಗೂಡಿನಲ್ಲಿ ಗಾಜಿನ ಇಲ್ಲವೇ ಕೃತಕ ಕಣ್ಣುಗಳನ್ನು ಇರಿಸಿ ರೆಪ್ಪೆಗಳನ್ನು ಜೋಡಿಸಿ ಹೊಲಿಯಲಾಗುತ್ತದೆ. ಮುಖದ ಸಹಜ ಚಹರೆಯಲ್ಲಿ ಯಾವುದೇ ಬದಲಾವಣೆ ಕಾಣಲಾರದು.

ನೇತ್ರ ದಾನ ಮಾಡ ಬಯಸುವವರು ಏನು ಮಾಡಬೇಕು?
ನೇತ್ರಗಳನ್ನು ಮೃತರು ಮರಣಹೊಂದಿದ ಆರು ಗಂಟೆಗಳೊಳಗೆ ತೆಗೆಯಬೇಕು. ಅದನ್ನು ಹತ್ತಿರದ ನೇತ್ರ ಭಂಡಾರಕ್ಕೆ ತಿಳಿಸುವುದಕ್ಕೆ ತಡಮಾಡಬಾರದು. ನಿಮ್ಮ ಕುಟುಂಬದಲ್ಲಿ ಇಲ್ಲವೇ ಸ್ನೇಹಿತರ ವಲಯದಲ್ಲಿ ಯಾರಾದರೂ ಮೃತರಾದ ತಕ್ಷಣ ಕೂಡಲೇ ಈ ಕಾರ್ಯ ನಡೆಯಬೇಕು. ನೇತ್ರದಾನ ಮಾಡುವುದಾಗಿ ಒಪ್ಪಿಕೊಂಡಿರುವ ವ್ಯಕ್ತಿ ಮರಣ ಹೊಂದಿದ ನಂತರ ಅನುಸರಿಸಬೇಕಾದ ಕ್ರಮಗಳು.-

1. ಮರಣೋತ್ತರವಾಗಿ ಕೇವಲ ಆರು ಗಂಟೆಗಳ ಮಿತಿಯಲ್ಲಿ ನೇತ್ರ ಸಂಗ್ರಹ ಆಗಬೇಕು.
2. ಮರಣದ ಸಮಯವನ್ನು ದಾಖಲಿಸಬೇಕು.
3. ಮೃತರ ಕಣ್ಣುರೆಪ್ಪೆ ಮುಚ್ಚಬೇಕು.
4. ಹಣೆಯ ಮೇಲೆ ಐಸ್‍ಪಟ್ಟಿ ಹಾಕಬೇಕು. ಐಸ್‍ನಿಂದ ತೇವ ಮಾಡಿದ ಹತ್ತಿಯನ್ನು ಕಣ್ಣುಗಳ ಮೇಲಿರಿಸಿ ಅಲ್ಲಿರುವ ಊತಕ ತೇವದಿಂದ ಇರುವಂತೆ ನೋಡಿಕೊಳ್ಳಬೇಕು.
5. ಮೃತರನ್ನಿರಿಸಿದ ಸ್ಥಳದಲ್ಲಿ ಫ್ಯಾನ್ ಆರಿಸಬೇಕು. ಏರೂಕೂಲರ್ ಅಥವಾ ಏರ್‍ಕಂಡೀಶನರ್ ಕಾರ್ಯನಿರ್ವಹಿಸಬಹುದು.
6. ಮೃತರ ಮೈದ್ಯಕೀಯ ದಾಖಲೆ ತೆಗೆದಿಡಬೇಕು.
7. ತಲೆಯ ಕೆಳಗೆ ಎತ್ತರದ (6 ಅಂಗುಲ) ದಿಂಬನ್ನಿರಿಸಬೇಕು.

ತಡಮಾಡದೇ ಹತ್ತಿರದ ನೇತ್ರ ಭಂಡಾರಕ್ಕೆ ಸುದ್ದಿ ನೀಡಬೇಕು. ಎಲ್ಲ ನೇತ್ರಭಂಡಾರಗಳು 24 ಗಂಟೆಗಳೂ ದಾನಿ ನೇತ್ರ ಸಂಗ್ರಹಣಾ ಕಾರ್ಯವನ್ನು ಉಚಿತವಾಗಿ ಮೃತರಿರುವ ಸ್ಥಳಕ್ಕೆ ಧಾವಿಸಿ ಮಾಡುತ್ತವೆ. ದಾನ ಮಾಡುವ ಮತ್ತು ಪಡೆಯುವ ವ್ಯಕ್ತಿಯ ವಿವರಗಳನ್ನು ಗುಪ್ತವಾಗಿ ಇರಿಸಲಾಗುತ್ತದೆ. ನೇತ್ರದಾನದಿಂದ ಅಂಧರಾದ ಇಬ್ಬರು ವ್ಯಕ್ತಿಗಳಿಗೆ ದೃಷ್ಟಿ ಲಭಿಸುತ್ತದೆ. ಈ ದಾನಕ್ಕಾಗಿ ಯಾವುದೇ ಹಣವನ್ನು ದಾನಿಯ ಕುಟುಂಬಕ್ಕೆ ನೀಡುವುದಿಲ್ಲ. ಅಥವಾ ಇದಕ್ಕಾಗಿ ದಾನಿ ಯಾವುದೇ ಹಣ ವೆಚ್ಚ ಮಾಡುವಂತಿಲ್ಲ. ದಾನವಾಗಿ ಬರುವ ನೇತ್ರಗಳು ಮಾರಾಟದ ವಸ್ತುವಲ್ಲ. ಮೃತರ ನೇತ್ರಗಳನ್ನು ಸಂಗ್ರಹಿಸಿದ ನಂತರ ನೇತ್ರಭಂಡಾರಕ್ಕೆ ತೆಗೆದುಕೊಂಡು ಹೋಗಿ ಪರೀಕ್ಷಿಸಿ, ಸಂಸ್ಕರಿಸಿ ನಾಟಿಗೆ ಅಣಿ ಮಾಡಿಕೊಳ್ಳುತ್ತಾರೆ. ಅದಾಗಲೇ ನೇತ್ರ ಭಂಡಾರದಲ್ಲಿ ನೋಂದಣೆ ಮಾಡಿಸಿ ಸಿದ್ಧಪಡಿಸಿದ ಅಂಧರ ಪಟ್ಟಿಯಲ್ಲಿನ ರೋಗಿಗಳನ್ನು ಕೂಡಲೇ ಸಂಪರ್ಕಿಸಿ ಅವರು ಭಂಡಾರಕ್ಕೆ ಬರುವಂತೆ ವ್ಯವಸ್ಥೆ ಮಾಡಲಾಗುತ್ತದೆ ನಂತರ ಅವರಿಗೆ ಶಸ್ತ್ರಚಿಕಿತ್ಸೆಯ ಮೂಲಕ ಕಾರ್ನಿಯ ಜೋಡಿಸಲಾಗುತ್ತದೆ. ದಾನ ನೀಡಿದ ಮತ್ತು ದಾನ ಪಡೆದ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಕೆಲವು ವರ್ಷಗಳ ಹಿಂದೆ ಮರಣ ಹೊಂದಿದ ವರನಟ, ಕನ್ನಡದ ಮೇರುನಟ ಡಾ|| ರಾಜ್‍ಕುಮಾರ್‍ಅವರು ತಮ್ಮ ನೇತ್ರದಾನ ಮಾಡಿದ್ದು ಅದರಿಂದ ಇಬ್ಬರು ಅಂಧರಿಗೆ ದೃಷ್ಟಿ ಲಭಿಸಿದ್ದು ಇಲ್ಲಿ ಸ್ಮರಿಸಿಕೊಳ್ಳಬಹುದು.

ನಮ್ಮೆಲ್ಲರಿಗೂ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುವ ಅವಕಾಶವಿದೆ. 18 ವರ್ಷಕ್ಕೆ ಮೇಲ್ಪಟ್ಟ ಯಾವುದೇ ವ್ಯಕ್ತಿ ಯಾವುದೇ ನೇತ್ರಭಂಡಾರದಲ್ಲಿ ತಮ್ಮ ಮರಣೋತ್ತರ ನೇತ್ರದಾನದ ಅಭಿಲಾಷೆಯನ್ನು ಲಿಖಿತ ರೂಪದಲ್ಲಿ ನೋಂದಾಯಿಸಬಹುದು. ಈ ವ್ಯಕ್ತಿಗೆ ಗುರುತಿನ ಕಾರ್ಡ್‍ಗಳನ್ನು ಉಚಿತವಾಗಿ ನೀಡಲಾಗುವುದು ಭಾರತದಲ್ಲಿ ಇಂದು ಈ ಮಾನವ ಕಲ್ಯಾಣ ಕಾರ್ಯಕ್ಕೆ ಸ್ಪಂದಿಸಿ ಲಕ್ಷಾಂತರ ಜನರು ನೋಂದಾಯಿತರಾಗಿದ್ದಾರೆಂಬುದು ಸಂತಸದ ಸಂಗತಿ. ನಂತರ ಈ ಬಗ್ಗೆ ಆ ವ್ಯಕ್ತಿ ತನ್ನ ಕುಟುಂಬ ವರ್ಗಕ್ಕೆ ಬಂಧುಬಳಗಕ್ಕೆ ಹತ್ತಿರದ ನೇತ್ರಭಂಡಾರಕ್ಕೆ ಮತ್ತು ತಮ್ಮ ಆರೋಗ್ಯ ನೋಡಿಕೊಳ್ಳುವ ಕುಟುಂಬ ವೈದ್ಯರಿಗೆ ತಿಳಿಸಬೇಕು.

ನೇತ್ರ ಭಂಡಾರ (ಐ ಬ್ಯಾಂಕ್) ಇತಿಹಾಸ:
ಪ್ರಪಂಚದ ಮೊಟ್ಟಮೊದಲ ನೇತ್ರ ಭಂಡಾರ ಇಂಗ್ಲೆಂಡಿನಲ್ಲಿ 1945ರಲ್ಲಿ ಆರಂಭವಾಯಿತು. ಶ್ರೀಲಂಕಾದ ಅಂತರ ರಾಷ್ಟ್ರೀಯ ನೇತ್ರಭಂಡಾರ ಪ್ರಪಂಚದಲ್ಲಿಯೇ ಬೃಹತ್ ನೇತ್ರ ಭಂಡಾರ ಹೊಂದಿದ್ದು, ವಿವಿಧ ದೇಶಗಳಿಗೆ ದಾನಿ ನೇತ್ರಗಳನ್ನು ಕಳುಹಿಸಿಕೊಡುತ್ತದೆ.

ಕರ್ನಾಟದಲ್ಲಿ 1969 ರಲ್ಲಿ ಪ್ರಪ್ರಥಮ ಬಾರಿಗೆ ಮಿಂಟೋ ಕಣ್ಣಾಸ್ಪತ್ರೆಯ ಮುಖ್ಯಸ್ಥರಾಗಿದ್ದ ನೇತ್ರತಜ್ಞ ಡಾ|| ಚಾಮರಾಜ್‍ರವರು ಮೈಸೂರು ಕಾರ್ನಿಯಲ್ ಗ್ರಾಫ್ಟಿಂಗ್ ಆಕ್ಟ್ ರೂಲ್ಸ್ ನ ಕರಡು ಪತ್ರ ಸಿದ್ಧಗೊಳಿಸಿದರು. ನಂತರ ಏಪ್ರಿಲ್ 1, 1970ರಲ್ಲಿ ಬೆಂಗಳೂರು ಮಿಂಟೋ ಕಣ್ಣಾಸ್ಪತ್ರೆ ಮತ್ತು ಹುಬ್ಬಳ್ಳಿಯ ಕೆ.ಎಂ.ಸಿ. ಆಸ್ಪತ್ರೆಗಳಿಗೆ ನೇತ್ರ ಭಂಡಾರ ಆರಂಭಿಸಲು ಸರ್ಕಾರ ಅನುಮತಿ ನೀಡಿತು. ಆ ಸಂದರ್ಭದಲ್ಲಿ ಮೊಟ್ಟಮೊದಲು ತಮ್ಮ ಮರಣಾನಂತರ ನೇತ್ರದಾನ ಒಪ್ಪಿಗೆಯಿದೆ ಎಂಬ ಪತ್ರ ಫಾರ್ಮ್ ನಂ.1 ಗೆ ಸಹಿ ಮಾಡಿದವರು ಡಾ|| ಚಾಮರಾಜ್ ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗ. ನೇತ್ರ ಭಂಡಾರದ ಕಟ್ಟಡಕ್ಕೆ 1 ಲಕ್ಷ ರೂ. ವೆಚ್ಚವಾದರೆ ಆಧುನಿಕ ಸಲಕರಣೆಗಳಿಗಾಗಿ 1,75,000/- ರೂ. ಆಗಬಹುದೆಂದೂ, ಅದಕ್ಕಾಗಿ ದಾನಿಗಳನ್ನು ಹುಡುಕಲಾಯಿತು. ಶ್ರೀ ಮುರಳಿ ಚೆಲ್ಲರಾಂ ಮತ್ತು ಮ್ಯಾಚನಿ ಗ್ರಾಂಟ್‍ನ್ನು ಸರ್ಕಾರದಿಂದ ಪಡೆದು ಕಿಶನ್‍ಚಂದ್ ಚೆಲ್ಲಾರಾಂ ನೇತ್ರ ಭಂಡಾರ ಕಟ್ಟಲಾಯಿತು. ಈ ನೇತ್ರ ಭಂಡಾರಕ್ಕೆ 6.11.1971ರಲ್ಲಿ ಶಂಕುಸ್ಥಾಪನೆ ಮಾಡಿದ್ದು 24.12.1975ರಲ್ಲಿ ಉದ್ಘಾಟನೆಯಾಯಿತು. ಇದು ನಂತರ ಕಿಶನ್‍ಚಂದ್ ಚೆಲ್ಲಾರಾಂ ನೇತ್ರ ಭಂಡಾರ ಎಂದೇ ಹೆಸರಾಯಿತು. ಇಲ್ಲಿ ವರ್ಷಪೂರ್ತಿ ಕಾರ್ನಿಯಾ ನಾಟಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಬಡವರಿಗೆ ಇಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇವುಗಳಲ್ಲದೇ ನಾರಾಯಣ ನೇತ್ರಾಲಯದ ನೇತ್ರ ಭಂಡಾರ, ಲಯನ್ಸ್ ಕಣ್ಣಿನ ಆಸ್ಪತ್ರೆ ನೇತ್ರನಿಧಿ, ನೇತ್ರದಾನಿ ಡಾ|| ಎಂ.ಸಿ. ಮೋದಿ ಕಣ್ಣಿನ ಆಸ್ಪತ್ರೆಯ ನೇತ್ರನಿಧಿಗಳು ಬೆಂಗಳೂರಿನ ಪ್ರಮುಖ ನೇತ್ರ ಭಂಡಾರಗಳು. ಇವುಗಳಲ್ಲದೇ ಡಾ|| ಅಗರವಾಲ್ ಕಣ್ಣಿನ ಆಸ್ಪತ್ರೆ, ಪ್ರಭಾ ಕಣ್ಣಿನ ಆಸ್ಪತ್ರೆ, ಶೇಖರ್ ನೇತ್ರಾಲಯ ಇತ್ಯಾದಿ ಸಂಸ್ಥೆಗಳು ನೇತ್ರ ಭಂಡಾರ ಹೊಂದಿರುತ್ತವೆ.


ಡಾ. ವಸುಂಧರಾ ಭೂಪತಿ
ಇಮೇಲ್: bhupathivasundhara@gmail.com
ಫೋನ್ ನಂಬರ್: 9986840477


Stay up to date on all the latest ಅಂಕಣಗಳು news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp