ಮೂತ್ರನಾಳದ ಸೋಂಕು ಅಥವಾ Urinary Tract Infection ಗೆ ಕಾರಣಗಳೇನು? ಮನೆ ಮದ್ದುಗಳ ಬಗ್ಗೆ ಮಾಹಿತಿ.... (ಕುಶಲವೇ ಕ್ಷೇಮವೇ)

ಮೂತ್ರನಾಳದ ಸೋಂಕು ಎಂದರೆ ಮೂತ್ರ ವ್ಯವಸ್ಥೆಯಲ್ಲಿ ಉಂಟಾಗುವ ಸೋಂಕು. ಮೂತ್ರನಾಳದ ಸೋಂಕು ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಮೂತ್ರನಾಳವನ್ನು ಬಾಧಿಸುತ್ತದೆ.
ಮೂತ್ರನಾಳದ ಸೋಂಕು (ಸಾಂಕೇತಿಕ ಚಿತ್ರ)
ಮೂತ್ರನಾಳದ ಸೋಂಕು (ಸಾಂಕೇತಿಕ ಚಿತ್ರ)

ಮೂತ್ರನಾಳದ ಸೋಂಕು ಎಂದರೆ ಮೂತ್ರ ವ್ಯವಸ್ಥೆಯಲ್ಲಿ ಉಂಟಾಗುವ ಸೋಂಕು. ಮೂತ್ರನಾಳದ ಸೋಂಕು ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಮೂತ್ರನಾಳವನ್ನು ಬಾಧಿಸುತ್ತದೆ. ವಾತಾವರಣ ಮತ್ತು ಜೀವನಶೈಲಿ ಬದಲಾಗುತ್ತಿರುವ ಈ ದಿನಗಳಲ್ಲಿ ಇದೊಂದು ಸಾಮಾನ್ಯ ಸೋಂಕಾಗಿದ್ದು ಪುರುಷರು ಮತ್ತು ಮಹಿಳೆಯರನ್ನು ಕಾಡುತ್ತದೆ. ಅದರಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಮೂತ್ರನಾಳದ ಸೋಂಕಿಗೆ ಕಾರಣಗಳು

ಇ-ಕೊಲೈ ಬ್ಯಾಕ್ಟೀರಿಯಾ, ಕಡಿಮೆ ನೀರು ಕುಡಿಯುವುದು ಅಥವಾ ನೀರನ್ನೇ ಕುಡಿಯದೆ ಇರುವುದು, ಹುಳಿಯುಕ್ತ, ಮಸಾಲೆಯುಕ್ತ ಪದಾರ್ಥ ಅತಿ ಸೇವನೆ, ಹೆಚ್ಚು ಸಕ್ಕರೆ ಇರುವ ಆಹಾರ, ಕಾರ್ಬೊನೇಟೆಡ್ ಪಾನೀಯಗಳು, ಕಾಫಿ, ಚಾಕೊಲೇಟುಗಳನ್ನು ಅತಿಯಾಗಿ ತಿನ್ನುವುದು, ಅಸುರಕ್ಷಿತ ಲೈಂಗಿಕ ಕ್ರಿಯೆ, ಶುಚಿಯಿಲ್ಲದ ಶೌಚಾಲಯದ ಬಳಕೆ ಮತ್ತು ಲೈಂಗಿಕ ಕ್ರಿಯೆಯ ಸಮಯದಲ್ಲಿ ಕೀಟಾಣುಗಳು ಮೂತ್ರನಾಳಕ್ಕೆ ಹೋದಾಗ ಮೂತ್ರನಾಳದ ಸೋಂಕು ಉಂಟಾಗುತ್ತದೆ. ಇವುಗಳ ಹೊರತಾಗಿ ಹಾರ್ಮೋನ್ ಬದಲಾವಣೆಗಳು, ಮೂತ್ರಪಿಂಡದ ಕಲ್ಲುಗಳು ಮತ್ತು ಬೆನ್ನುಹುರಿಯ ಗಾಯದಂತಹ ಇತರ ಕಾರಣಗಳು ಸಹ ಮೂತ್ರನಾಳದ ಸೋಂಕಿಗೆ ಕಾರಣವಾಗುತ್ತವೆ. ಡಯಾಬಿಟಿಸ್‍ ಇರುವ ಮಹಿಳೆಯರು ಮತ್ತು ಪುರುಷರು ಮೂತ್ರನಾಳದ ಸೋಂಕಿಗೆ ಒಳಗಾಗಬಹುದು. ಏಕೆಂದರೆ ಅವರಲ್ಲಿ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. 

ಮೂತ್ರನಾಳದ ಸೋಂಕಿನ ಲಕ್ಷಣಗಳು

ಮೂತ್ರಕೋಶದ ಸೋಂಕು ಉಂಟಾದಾಗ ಪದೇ ಪದೇ ಮೂತ್ರಕ್ಕೆ ಹೋಗುವುದು, ಮೂತ್ರ ವಿಸರ್ಜನೆ ಮಾಡುವಾಗ ನೋವು, ಉರಿ, ಕಿರಿಕಿರಿ ಮತ್ತು ಕೆಲವೊಮ್ಮೆ ರಕ್ತ ಕಾಣಿಸಿಕೊಳ್ಳುವುದು, ದುರ್ವಾಸನೆ, ಪದೇಪದೇ ಜ್ವರ, ವಾಕರಿಕೆ, ಪೂರ್ಣವಾಗಿ ಮೂತ್ರ ವಿಸರ್ಜನೆ ಆಗದೆ ಹನಿ ಹನಿಯಾಗಿ ಆಗಾಗ ಹೋಗುವುದು ಮತ್ತು ಹೊಟ್ಟೆಯ ಕೆಳಭಾಗದಲ್ಲಿ ನೋವು ಇಂತಹ ಲಕ್ಷಣಗಳು ಕಂಡುಬರುತ್ತವೆ. ಸಮಸ್ಯೆ ಹೆಚ್ಚಾಗಿದ್ದಲ್ಲಿ ವೈದ್ಯರನ್ನು ತಕ್ಷಣ ಕಾಣಬೇಕು. ಮೂತ್ರನಾಳದ ಸೋಂಕನ್ನು ತಡೆಯಲು ಮೂತ್ರ ವಿಸರ್ಜನೆಯಂತಹ ನೈಸರ್ಗಿಕ ಕ್ರಿಯೆಗಳನ್ನು ಎಂದಿಗೂ ನಿಯಂತ್ರಿಸಬಾರದು. ಏಕೆಂದರೆ ಇದು ಮೂತ್ರದ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಸೋಂಕಿಗೆ ಕಾರಣವಾಗಬಹುದು. ಜನನಾಂಗದ ಪ್ರದೇಶದಲ್ಲಿ ಯಾವಾಗಲೂ ಹಗುರವಾದ ಬಟ್ಟೆಗಳನ್ನು ಧರಿಸಬೇಕು ಮತ್ತು ಅಲ್ಲಿ ಬೆವರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಏಕೆಂದರೆ ಬೆವರಿನಿಂದ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಅಪಾಯ ಉಂಟಾಗುವ ಸಾಧ್ಯತೆ ಇದೆ. ಪ್ರತಿ ದಿನ ಸ್ನಾನ ಮಾಡಿದ ನಂತರ ಬಟ್ಟೆ ಧರಿಸುವ ಮೊದಲು ಮೈಯ್ಯನ್ನು ಸರಿಯಾಗಿ ಟವಲ್ಲಿನಿಂದ ಒರೆಸಿಕೊಳ್ಳಬೇಕು. ಯಾವಾಗಲೂ ಸ್ವಚ್ಛ ಮತ್ತು ಆರಾಮದಾಯಕ ಒಳಉಡುಪುಗಳನ್ನು ಧರಿಸಬೇಕು.

ದೇಹದಲ್ಲಿ ನೀರಿನಂಶ ಹೆಚ್ಚಿಸಲು ಕೆಲವು ಮನೆಮದ್ದು

ದೇಹದಲ್ಲಿ ನೀರಿನ ಕೊರತೆಯು ಮೂತ್ರನಾಳದ ಸೋಂಕಿಗೆ ಕಾರಣವಾಗಬಹುದು. ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ದಿನಕ್ಕೆ ಕನಿಷ್ಠ 6 ರಿಂದ 8 ಗ್ಲಾಸ್ ನೀರನ್ನು ಕುಡಿಯಲೇಬೇಕು. ಪುಡಿ ಮಾಡಿದ ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿ ಮರುದಿನ ಬೆಳಿಗ್ಗೆ ಅದನ್ನು ಸೋಸಿ ಸ್ವಲ್ಪ ಬೆಲ್ಲ/ಸಕ್ಕರೆ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ತಾಜಾ ಹಣ್ಣುಗಳ ರಸದಂತಹ ದ್ರವ ಪದಾರ್ಥಗಳು ಮತ್ತು ಆರೋಗ್ಯಕರ ಪಾನೀಯಗಳಾದ ತೆಂಗಿನ ನೀರು, ನಿಂಬೆ ಪಾನಕ ಮತ್ತು ಕಬ್ಬಿನರಸ ಬೇಸಿಗೆಯಲ್ಲಿ ತುಂಬಾ ಪ್ರಯೋಜನಕಾರಿ. ಈ ಪಾನೀಯಗಳು ದೇಹದಿಂದ ಉಷ್ಣವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಬಾರ್ಲಿ ನೀರು ಮತ್ತು ಅಕ್ಕಿ ತೊಳೆದ ನೀರು ತೆಗೆದುಕೊಂಡರೆ ರೋಗಾಣುವಿನ ವಿರುದ್ಧ ಹೋರಾಡುವ ಶಕ್ತಿ ವೃದ್ದಿಸುತ್ತದೆ. ನೆಲ್ಲಿಕಾಯಿಯ ಶರಬತ್ತು, ಸೊಗದೆ ಬೇರಿನ ಶರಬತ್ತು ಇವು ಮೂತ್ರ ಸೋಂಕಿಗೆ ಬಹು ಉತ್ತಮ ಮನೆ ಮದ್ದಾಗಿದೆ. ಆಯುರ್ವೇದದಲ್ಲಿಯೂ ಮೂತ್ರನಾಳದ ಸೋಂಕಿಗೆ ಉತ್ತಮ ಔಷಧಿಗಳು ಮತ್ತು ಚಿಕಿತ್ಸೆಗಳಿವೆ. ನೀರಿಗೆ ತುಳಸಿ ಬೀಜಗಳು ಮತ್ತು ಲಾವಂಚವನ್ನು ಹಾಕಿ ಕುಡಿಯುವುದು ಒಳ್ಳೆಯದು. ಇತ್ತೀಚೆಗೆ ಹೆಚ್ಚಾಗಿ ಬಳಕೆಯಾಗುತ್ತಿರುವ ಚಿಯಾ ಬೀಜಗಳನ್ನು ನೀರಿಗೆ ಹಾಕಿ ಹಣ್ಣುಗಳ ಜೊತೆಗೆ ಹಾಕಿ ಸೇವಿಸಬಹುದು. ಇದನ್ನುಮಜ್ಜಿಗೆಗೆ ಹಾಕಿಯೂ ಬಳಸಬೇಕು. ಪಂಚಕರ್ಮದ ಚಿಕಿತ್ಸೆಯೂ ಬಹಳ ಸಹಾಯಕ. ಕರಿದ ಪದಾರ್ಥಗಳು, ಹೆಚ್ಚು ಮಸಾಲೆಯುಕ್ತ ಆಹಾರ ಸೇವನೆ ಮತ್ತು ಅತಿ ಎನಿಸುವ ಖಾರದ ತಿಂಡಿತಿನಿಸುಗಳನ್ನು ಸೇವಿಸುವುದನ್ನು ಬಿಡಬೇಕು. 

ಮೂತ್ರನಾಳದ ಸೋಂಕು ತಡೆಯಲು ಸ್ವಚ್ಛತೆ ಮುಖ್ಯ

ಮೂತ್ರನಾಳದ ಸೋಂಕು ಸಾಮಾನ್ಯವಾಗಿ ಸ್ವಚ್ಛತೆ ಇಲ್ಲದಿರುವುದರಿಂದಲೇ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ, ಅದರಲ್ಲೂ ಮುಖ್ಯವಾಗಿ ಮುಟ್ಟಿನ ಸಮಯದಲ್ಲಿ ಬಳಸುವ ಪ್ಯಾಡುಗಳು ಮತ್ತು ಒಳಉಡುಪುಗಳ ಸ್ವಚ್ಛತೆ ಬಹಳ ಮುಖ್ಯವಾಗುತ್ತದೆ. ಅವುಗಳನ್ನು ಚೆನ್ನಾಗಿ ಒಗೆದು ಒಣಗಿಸಿ ಉಪಯೋಗಿಸಬೇಕು. ಆ ಬಟ್ಟೆಗಳನ್ನು ಎಲ್ಲಾ ಬಟ್ಟೆಗಳ ಜೊತೆಗೆ ಇಡಬಾರದು. ಪ್ರತ್ಯೇಕವಾಗಿಯೇ ಇಟ್ಟು ಬಳಸಬೇಕು. ಜೊತೆಗೆ ಮಳೆಗಾಲದಲ್ಲಿ ಬಟ್ಟೆಗಳು ಒಣಗದೇ ಇದ್ದಾಗ ಅವುಗಳನ್ನು ಇಸ್ತ್ರಿ ಮಾಡಿ ಬಳಸಬೇಕು. ಹತ್ತಿಯಿಂದ ತಯಾರಿಸಿರುವ ಒಳ ಉಡುಪುಗಳನ್ನು ಬಳಸುವುದು ಉತ್ತಮ. ಸಾರ್ವಜನಿಕ ಶೌಚಾಲಯಗಳನ್ನು ಬಳಸುವಾಗಿ ಚೆನ್ನಾಗಿ ನೀರು ಹಾಕಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಬಳಸಬೇಕು. ಮಹಿಳೆಯರು ಮುಟ್ಟಿಗೆ ಮುಂಚೆ, ಮುಟ್ಟಿನ ವೇಳೆ ಮತ್ತು ನಂತರ ಸ್ವಚ್ಛತೆಗೆ ಬಹಳ ಒತ್ತು ನೀಡಬೇಕು. ಮಲಮೂತ್ರ ವಿಸರ್ಜನೆ ವೇಳೆ ಅಥವಾ ನಂತರ ಮೊದಲು ಜನನಾಂಗವನ್ನು ಸ್ವಚ್ಛಗೊಳಿಸಿ ನಂತರ ಗುದದ್ವಾರವನ್ನು ಸ್ವಚ್ಛಗೊಳಿಸಬೇಕು. ಇದರಿಂದ ಗುದದ ಸೋಂಕು ಜನನಾಂಗಕ್ಕೆ ಬರುವುದನ್ನು ತಡೆಯಬಹುದು. ಇದಲ್ಲದೇ ಲೈಂಗಿಕ ಕ್ರಿಯೆಯ ನಂತರ ಗುಪ್ತಾಂಗಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಪ್ರತಿ ಬಾರಿ ಮೂತ್ರ ಅಥವಾ ಮಲ ವಿಸರ್ಜನೆ ಬಳಿಕ ವಿಸರ್ಜನಾಂಗವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಒಟ್ಟಾರೆ ಹೇಳುವುದಾದರೆ ಎಲ್ಲಾ ಸಂದರ್ಭಗಳಲ್ಲಿಯೂ ಕೂಡ ಬಟ್ಟೆಗಳ ಮತ್ತು ವೈಯಕ್ತಿಕ ಸ್ವಚ್ಛತೆ ಬಹಳ ಮುಖ್ಯ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com