ಅನಿಯಂತ್ರಿತ ಮೂತ್ರದ ಸಮಸ್ಯೆ ಮತ್ತು ಪರಿಹಾರ... (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿಪ್ರತಿದಿನ ನಾವು ನಮ್ಮ ದೇಹದಿಂದ ಕಲ್ಮಶಗಳನ್ನು ಮಲಮೂತ್ರಗಳ ಮೂಲಕ ಹೊರಹಾಕುತ್ತೇವೆ. ಮಲಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತಿರುವುದು ನಾವು ಆರೋಗ್ಯವಾಗಿರುವುದರ ಸಂಕೇತವೂ ಹೌದು.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಪ್ರತಿದಿನ ನಾವು ನಮ್ಮ ದೇಹದಿಂದ ಕಲ್ಮಶಗಳನ್ನು ಮಲಮೂತ್ರಗಳ ಮೂಲಕ ಹೊರಹಾಕುತ್ತೇವೆ. ಮಲಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತಿರುವುದು ನಾವು ಆರೋಗ್ಯವಾಗಿರುವುದರ ಸಂಕೇತವೂ ಹೌದು.

ಅನಿಯಂತ್ರಿತ ಮೂತ್ರಶಂಕೆ

ಕೆಲವೊಮ್ಮೆ ಮೂತ್ರ ವಿಸರ್ಜನೆಗೆ ಅರ್ಜೆಂಟಾಗಿ ಬಿಡುತ್ತದೆ ಮತ್ತು ನಾವು ಏನೇ ಮಾಡುತ್ತಿದ್ದರೂ ಅದನ್ನು ಬಿಟ್ಟುಬಿಟ್ಟು ಶೌಚಾಲಯಕ್ಕೆ ಧಾವಿಸಲೇಬೇಕಾಗುತ್ತದೆ; ಹಾಗೆ ಮಾಡದೆ ಇದ್ದರೆ ಮೂತ್ರ ಸೋರಿ ಒಳಉಡುಪು ಒದ್ದೆಯಾಗಿಬಿಡುತ್ತದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ತಡೆಯಲಾಗದ ಮೂತ್ರಶಂಕೆ ಅಥವಾ ಅನಿಯಂತ್ರಿತ ಮೂತ್ರಶಂಕೆ (ಅರ್ಜ್ಇನ್ಕನ್ಸಿಸ್ಟೆನ್ಸ್ - Urge incontinence) ಎನ್ನಲಾಗುತ್ತದೆ. ಇದೊಂದು ಸಮಸ್ಯೆ. ಇಲ್ಲಿ ನಮಗೆ ಮೂತ್ರ ವಿಸರ್ಜನೆಯ ಒತ್ತಡ ಅತ್ಯಂತ ಬಲವಾಗಿರುತ್ತದೆ. ಇದರ ಪರಿಣಾಮ ಮೂತ್ರಕ್ಕೆ ಹೋಗಲು ಅವಸರವಾಗಿಬಿಡುತ್ತದೆ. ಹಾಗಯೇ ಇದ್ದಕ್ಕಿದ್ದಂತೆ ಮೂತ್ರಕೋಶ ತಕ್ಷಣ ಸಂಕುಚಿತವಾಗುತ್ತದೆ. ಅದರಲ್ಲಿ ಸಂಗ್ರಹವಾಗಿದ್ದ ಮೂತ್ರ ಹೊರಬರುತ್ತದೆ. ಮೂತ್ರದ ಪ್ರಮಾಣ ಸ್ವಲ್ಪ ಅಥವಾ ಹೆಚ್ಚು ಇರಬಹುದು. ಕೆಲವರಿಗೆ ಮೂತ್ರವನ್ನು ತಡೆದಿಟ್ಟುಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಈ ಒತ್ತಡ, ಅವಸರದ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಅಂತಿಮವಾಗಿ ಅದು ಮೂತ್ರ ಸೋರಿಹೋಗಬಹುದು. ಇದರಿಂದ ಬೇಸರ ಮತ್ತು ಏನಾಯಿತೋ ಎಂಬ ಶಂಕೆಯು ಉಂಟಾಗಿ ಸಮಸ್ಯೆ ಆಗುತ್ತದೆ. ಜೊತೆಗೆ ವೈಯಕ್ತಿಕ ಶುಚಿತ್ವ ಮತ್ತು ಜನರ ನಡುವೆ ಇದ್ದಾಗ ಸಾಮಾಜಿಕವಾಗಿ ಮುಜುಗರ ಉಂಟಾಗುತ್ತದೆ. ಕೆಲವೊಮ್ಮೆ ವಾಸನೆ ಬಂದರೆ ಕಿರಿಕಿರಿಯೂ ಆಗುತ್ತದೆ.

ದೇಹದಲ್ಲಿ ಮೂತ್ರ ವಿಸರ್ಜನೆಯ ಪ್ರಕ್ರಿಯೆ
ಸಾಮಾನ್ಯವಾಗಿ ಎರಡು ಮೂತ್ರ ಜನಕಾಂಗಗಳಿಂದ ಉತ್ಪಾದನೆಯಾಗುವ ಮೂತ್ರವು ಮೂತ್ರಕೋಶದಲ್ಲಿ (ಯೂರಿನರಿ ಬ್ಲಾಡರ್ – Urinary bladder) ಸಂಗ್ರಹವಾಗುತ್ತದೆ. ಮೂತ್ರಕೋಶ 750 ಮಿಲಿಲೀಟರ್ ಮೂತ್ರವನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಅದರಲ್ಲಿ ಮೂತ್ರದ ಸಂಗ್ರಹ ಹೆಚ್ಚಿದಷ್ಟು ಹೊಟ್ಟೆಯ ಭಾಗದಲ್ಲಿ ಅದರ ಗಾತ್ರ ಹೆಚ್ಚುತ್ತದೆ. ಸಾಮಾನ್ಯವಾಗಿ ಅದು ಅರ್ಧತುಂಬಿದಾಗ ಮೃದು ಸ್ನಾಯುಗಳಿರುವ ಒಳಪದರ ಅನೈಚ್ಛಿಕವಾಗಿ ತೆರೆದುಕೊಳ್ಳುತ್ತದೆ. ಮೂತ್ರ ಹೊರಹೋಗಲು ಇರುವನಾಳ ಮೂತ್ರನಾಳ (ಯುರೆತ್ರಾ - Uretra). ಇದರಲ್ಲಿಯೂ ಮೃದುಸ್ನಾಯುಗಳಿವೆ. ಮೂತ್ರಕೋಶ ತುಂಬಿ ಮೂತ್ರ ಹೊರಹೋಗುವ ಅನುಭವವಾದಾಗ ನಾವು ಐಚ್ಛಿಕವಾಗಿ ಮೂತ್ರನಾಳದ ಮೂಲಕ ಮೂತ್ರವನ್ನು ವಿಸರ್ಜಿಸುತ್ತೇವೆ. ಹೆಂಗಸರಲ್ಲಿ ಮೂತ್ರ ನೇರವಾಗಿ ವಿಸರ್ಜನೆಯಾದರೆ ಗಂಡಸರಲ್ಲಿ ಶಿಶ್ನದ ರಂಧ್ರದ ಮೂಲಕ ವಿಸರ್ಜನೆಯಾಗುತ್ತದೆ. ಮೂತ್ರದ ಸಂಗ್ರಹ ಮೂತ್ರಕೋಶದಲ್ಲಿ ಹೆಚ್ಚಾಗಿದ್ದು ನಾವು ನಕ್ಕಾಗ, ಸೀನಿದಾಗ, ಬಿಕ್ಕಳಿಸಿದಾಗ ಅಥವಾ ಕೆಮ್ಮಿದಾಗ ಅದು ಸೋರಬಹುದು. ಗರ್ಭಿಣಿಯರಲ್ಲಿ ಮಗು ಹೊಟ್ಟೆಯಲ್ಲಿರುವುದರಿಂದ ಮೂತ್ರಜನಕಾಂಗದ ಮೇಲೆ ಸ್ವಲ್ಪ ಒತ್ತಡ ಬೀರುತ್ತದೆ. ಆಗ ಮೂತ್ರಕೋಶ ಸ್ವಲ್ಪವೇ ತುಂಬಿದ್ದರೂ ಮೂತ್ರವಿಸರ್ಜನೆ ಪದೇಪದೇ ಮಾಡಬೇಕು ಎನಿಸುತ್ತದೆ. ಆದರೆ ಇದೇನೂ ಸಮಸ್ಯೆಯಲ್ಲ. ಮೇಲೆ ಹೇಳಿದ ಹಾಗೇನಾದರೂ ಆದರೂ ಸ್ವಲ್ಪ ಗಮನ ಕೊಡಬೇಕಾಗುತ್ತದೆ. 

ಮೂತ್ರಕೋಶ
ಮೂತ್ರಕೋಶದಲ್ಲಿ ಮೂತ್ರಶಂಕೆಯ ಅವಸರವು ಶೌಚಾಲಯ ಮುಟ್ಟುವುದಕ್ಕೂ ಮುನ್ನವೇ ಮೂತ್ರ ಸೋರಿಹೋಗುವಷ್ಟು ತುರ್ತಾಗಿದ್ದರೆ ಅದನ್ನು ಆರ್ದ್ರ-ಅತಿಕ್ರಿಯಾಶೀಲ ಮೂತ್ರಕೋಶ ಎನ್ನುತ್ತಾರೆ. ಮೂತ್ರ ವಿಸರ್ಜಿಸಬೇಕು ಎಂಬ ಒತ್ತಡ ಮಾತ್ರವೇ ಇದ್ದು, ಆತ ಅಥವಾ ಆಕೆ ಮೂತ್ರ ವಿಸರ್ಜಿಸಲು ಸೂಕ್ತ ಸ್ಥಳ ಹುಡುಕಿ ವಿಸರ್ಜಿಸುವಷ್ಟು ಕಾಲ ನಿಯಂತ್ರಿಸಲು ಶಕ್ತನಾ/ಳಾಗಿದ್ದರೆ ಮತ್ತು ಮೂತ್ರ ಸೋರಿಕೆ ಇಲ್ಲದೆ ಇದ್ದರೆ ಅದನ್ನು ಶುಷ್ಕ- ಅತಿಕ್ರಿಯಾಶೀಲ ಮೂತ್ರಕೋಶ ಎನ್ನುತ್ತಾರೆ. ಸ್ಥಿತಿಯು ಮೂತ್ರಕೋಶದ ಸ್ನಾಯುಗಳ ಅನಿರೀಕ್ಷಿತ ಸಂಕುಚನದಿಂದ ಉಂಟಾಗುವ ಕಾರಣ ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಅತಿ ಕ್ರಿಯಾಶೀಲ ಮೂತ್ರಕೋಶ (ಓವರ್ಆ್ಯಕ್ಟಿವ್ಬ್ಲಾಡರ್ - Overactive bladder) ಎಂದೂ ಗುರುತಿಸುತ್ತಾರೆ‘.
ಮೂತ್ರಕೋಶದಲ್ಲಿ ಮೂತ್ರ ತುಂಬಿದ ನಂತರ ಸಂದೇಶ ಮೆದುಳಿಗೆ ಹೋಗುತ್ತದೆ. ವಿಸರ್ಜನೆಗೆ ತೆರಳಿದಾಗ, ಸ್ನಾಯುಗಳು ಸಡಿಲಗೊಂಡು, ಮೂತ್ರ ಹೊರ ಹೋಗಲು ಅನುವು ಮಾಡಿಕೊಡುತ್ತದೆ.  ಆದರೆ, ಯಾವಾಗ ಈ ಪ್ರಕ್ರಿಯೆಯಲ್ಲಿ ಸಮಸ್ಯೆ ಸೃಷ್ಟಿಯಾಗುತ್ತದೋ, ಆಗ ಮೂತ್ರ ತೊಟ್ಟಿಕ್ಕಲು ಆರಂಭವಾಗುತ್ತದೆ. ಸ್ನಾಯುಗಳು ಸಡಿಲಗೊಂಡಾಗ ಎಲ್ಲೆಂದರಲ್ಲಿ ಮೂತ್ರ ವಿಸರ್ಜಿಸುವಂತಾಗುತ್ತದೆ. 

ಗಂಡಸರಲ್ಲಿ ಹಿಗ್ಗಿರುವಂತಹ ಪ್ರಾಸ್ಟೇಟ್ ಮೂತ್ರನಾಳದ ಮೇಲೆ ಒತ್ತಡ ಹಾಕಬಹುದು ಮತ್ತು ಮೂತ್ರ ವಿಸರ್ಜನೆಗೆ ತಡೆ ಹಾಕಬಹುದು. ಇದರಿಂದ ಮೂತ್ರನಾಳದ ಗೋಡೆಗೆ ಕಿರಿಕಿರಿ ಉಂಟಾಗಬಹುದು. ಮೂತ್ರ ನಾಳದಲ್ಲಿ ಸಣ್ಣ ಪ್ರಮಾಣದಲ್ಲಿ ಮೂತ್ರವಿದ್ದರೆ ಆಗ ಅದು ಹಿಗ್ಗುವುದು. ಇದರಿಂದಾಗಿ ಪದೇ ಪದೇ ಮೂತ್ರ ವಿಸರ್ಜನೆ ಆಗಬಹುದು. 

ಮೂತ್ರಕೋಶದ ನಿಯಂತ್ರಣ
ಇಂತಹ ಸಮಸ್ಯೆಗಳನ್ನು ಪರಿಹರಿಸಲು ಮೂತ್ರಕೋಶದಿಂದ ಹೊರಹೋಗುವ ಮೂತ್ರನಾಳವನ್ನು ಬಲಗೊಳಿಸಬೇಕಾಗುತ್ತದೆ. ಇದಕ್ಕೆ ಕೆಗೆಲ್ ಎಕ್ಸರ್ಸೈಸ್ ಎಂಬ ವ್ಯಾಯಾಮವಿದೆ. ಇದರಲ್ಲಿ ಮೂತ್ರನಾಳದ ಮೃದುಸ್ನಾಯುಗಳ ಮೇಲೆ ಹತೋಟಿ ಸಾಧಿಸುವುದನ್ನು ನಿಧಾನವಾಗಿ ಹೇಳಿಕೊಡಲಾಗುತ್ತದೆ. ಈ ವ್ಯಾಯಾಮದಿಂದಾಗಿ ಮೂತ್ರಕೋಶ ಮತ್ತು ಗರ್ಭಕೋಶದ ಸುತ್ತಲಿನ ಸ್ನಾಯುಗಳು ಹೆಚ್ಚು ಬಲಿಷ್ಠವಾಗಲು ನೆರವಾಗುವುದು ಮತ್ತು ಮೂತ್ರಕೋಶವು ತನ್ನ ತಡೆದಿಟ್ಟುಕೊಳ್ಳುವ ಶಕ್ತಿ ಹೆಚ್ಚಿಸುವುದು ಮತ್ತು ಪದೇ ಪದೇ ಮೂತ್ರ ವಿಸರ್ಜನೆಯನ್ನು ತಡೆಯುವುದು. ಶ್ರೋಣಿಯ (ಪೆಲ್ವಿಕ್) ಸ್ನಾಯುಗಳ ವ್ಯಾಯಾಮವನ್ನು ದಿನದಲ್ಲಿ ಮೂರು ಸಲ ಐದು ನಿಮಿಷ ಕಾಲ ಮಾಡಿ. ಇದರಿಂದ ಮೂತ್ರಕೋಶದ ನಿಯಂತ್ರಣವು ಉತ್ತಮವಾಗುವುದು. 

ಮೂತ್ರಕೋಶ ಸಮಸ್ಯೆಗಳು ಮತ್ತು ಜೀನವಶೈಲಿ

ಮಾನಸಿಕ ಸ್ಥೈರ್ಯ ಮತ್ತು ಧೈರ್ಯಗಳಿಂದ ಈ ಸಮಸ್ಯೆಯ ಪರಿಹಾರ ಸಾಧ್ಯ. ಕೆಲವು ವ್ಯಾಯಾಮಗಳು ಮತ್ತು ದಿನನಿತ್ಯದ ಕ್ರಮ ಹಾಗೂ ಜೀವನ ಶೈಲಿಯನ್ನು ಬದಲಾಯಿಸಿಕೊಂಡರೆ ಈ ಸಮಸ್ಯೆಯಿಂದ ಮುಕ್ತರಾಗಬಹುದು. ಒತ್ತಡದ ಅನಿಯಂತ್ರತೆ ಇರುವವರಿಗೆ ಸ್ನಾಯುಗಳ ಬಲ ಹೆಚ್ಚಿಸುವ ಯೋಗಾಭ್ಯಾಸ ಮಾಡಬಹುದು. ನಡಿಗೆ, ಓಡುವುದು, ಈಜುವುದು, ಸೈಕ್ಲಿಂಗ್, ಯೋಗ ಇತ್ಯಾದಿಗಳಿಂದ ಉದರ ಮತ್ತು ಸ್ನಾಯುಗಳು ಬಲಯುತವಾಗುವಂಥ ವ್ಯಾಯಾಮ ಒಳ್ಳೆಯದು. ಇದರ ಜೊತೆಗೆ ಕಾಫಿ, ಟೀ ಮತ್ತು ಮದ್ಯಸೇವನೆ ಹಿಡಿತದಲ್ಲಿರಬೇಕು. ಹೀಗೆ ಪಾನೀಯಗಳನ್ನು ಕುಡಿಯುತ್ತಿದ್ದರೆ ಆಗಾಗ ಮೂತ್ರ ವಿಸರ್ಜನೆಗೆ ಅವಸರವಾಗುತ್ತದೆ. ಕೃತಕ ಸಿಹಿ ಅಂಶ ಇರುವ ಆಹಾರಗಳನ್ನು ದೂರವಿಡಬೇಕು. ಬೊಜ್ಜು ಇದ್ದರೆ ಕಡಿಮೆ ಮಾಡಿಕೊಳ್ಳಬೇಕು. ಏಕೆಂದರೆ ಹೊಟ್ಟೆ ಸುತ್ತ ಇರುವ ಮೇದಸ್ಸು ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ವಿಪರೀತ ನೀರು/ ಸೋಡಾ/ ದ್ರವ ಪದಾರ್ಥಗಳನ್ನು ಸೇವಿಸಬಾರದು. ರಾತ್ರಿ ಹೊತ್ತು ಪದೇಪದೇ ಮೂತ್ರಕ್ಕೆ ಏಳುವುದನ್ನು ತಪ್ಪಿಸಲು ಏಳು ಗಂಟೆಯ ನಂತರ ಹೆಚ್ಚು ದ್ರವಾಹಾರ ಸೇವಿಸಬಾರದು. ಪ್ರಯಾಣದ ವೇಳೆ ಮೂತ್ರ ವಿಸರ್ಜನೆ ಸಮಸ್ಯೆಯನ್ನು ನೀಗಲು ಕಲ್ಲುಸಕ್ಕರೆ ಅಥವಾ ಪೆಪ್ಪರ್ಮೆಂಟ್ ತಿನ್ನಬಹುದು. ಹೀಗೆ ಈ ಸಮಸ್ಯೆಗಳನ್ನು ಕಡಿಮೆಮಾಡಿಕೊಳ್ಳಬಹುದು. ಸಮಸ್ಯೆ ಗಂಭೀರವಾಗಿದ್ದಲ್ಲಿ ಮೂತ್ರರೋಗ ವೈದ್ಯರನ್ನು ಕಂಡು ಪರಿಹರಿಸಿಕೊಳ್ಳಬೇಕು. 

ಡಾ. ವಸುಂಧರಾ ಭೂಪತಿ 
ಇ-ಮೇಲ್: bhupathivasundhara@gmail.com
9986840477 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com