
ರಿಷಿ ಸುನಕ್
ನಾವು ಭಾರತೀಯರು ಬಹಳ ಭಾವುಕ ಜೀವಿಗಳು , ಭಾರತೀಯ ಮೂಲದ ರಿಷಿ ಸುನುಕ್ ಬ್ರಿಟನ್ ದೇಶದ ಪ್ರಧಾನಿ ಹುದ್ದೆಗೇರುತ್ತಿದ್ದಾರೆ ಎಂದು ಸಂಭ್ರಮಿಸುತ್ತಿದ್ದೇವೆ . ಸಮಾಜದ ಇನ್ನೊಂದು ವರ್ಗ ಹಿಂದೂವೊಬ್ಬ ಆ ದೇಶದ ಪ್ರಧಾನಿಯಾಗುತ್ತಿದ್ದಾನೆ ಎಂದು ಬೀಗುತ್ತಿದೆ. ಇನ್ನು ಕನ್ನಡಿಗರಂತೂ ಕರ್ನಾಟಕದ ಅಳಿಯ ಎಂದು ಭಾವನೆಯನ್ನ ಇನ್ನೊಂದು ಮಟ್ಟಕ್ಕೆ ಒಯ್ದಿದ್ದಾರೆ . ಭಾವನೆ ತಪ್ಪಲ್ಲ . ಆತ ನಮ್ಮವೆನೆಂದು ಬೀಗುವುದು ಕೂಡ ತಪ್ಪಲ್ಲ , ಆದರೆ ಅಂದು ಅವರು ನಮ್ಮನ್ನ ಆಳಿದ್ದರು ಇಂದು ನಮ್ಮ ವೇಳೆ ಎನ್ನುವಂತೆ , ಇನ್ನೇನು ವಿಶ್ವವೇ ಭಾರತದ ಅಡಿಯಾಳಾಗುತ್ತದೆ ಎನ್ನುವಂತೆ ಕೂಗಾಡುವುದು ತಪ್ಪು . ಅತಿ ಭಾವುಕತೆ ಖಂಡಿತ ಒಳ್ಳೆಯದಲ್ಲ , ಇರಲಿ
ಮೇಲಿನ ಮಾತುಗಳನ್ನ ಬರೆಯಲು ಕಾರಣವಿದೆ , ನಾವು ಹೀಗೆ ಭಾವುಕತೆಯಿಂದ ಬೀಗುವುದರಲ್ಲಿ ಮಗ್ನರಾಗಿದ್ದೇವೆ , ಆದರೆ 28, ಅಕ್ಟೋಬರ್ 2022 ರಂದು ಪ್ರಧಾನಿ ಪಟ್ಟಕ್ಕೆ ಏರಲಿರುವ ರಿಷಿ ಸುನುಕ್ ಅವರಿಗೆ ಖುಷಿಪಡಲು , ಸಿಕ್ಕ ಪಟ್ಟಕ್ಕೆ ಸಂಭ್ರಮಿಸಲು ಕೂಡ ಪೂರೋಸೋತ್ತಿಲ್ಲ , ಏಕೆಂದರೆ ನೆನಪಿಡಿ ಒಬ್ಬ ಮಹಿಳಾ ಪ್ರಧಾನಿ ಕೇವಲ 45 ದಿನದಲ್ಲಿ ಇನ್ನು ನನ್ನಿಂದ ಸಾಧ್ಯವಿಲ್ಲ ಎಂದು ಕೈ ಚಲ್ಲಿ ಸರಕಾರವನ್ನ , ಹುದ್ದೆಯನ್ನ ಅರ್ಧದಲ್ಲಿ ಬಿಟ್ಟು ಹೊರನೆಡೆಯುತ್ತಾರೆ ಎಂದರೆ ಪರಿಸ್ಥಿತಿಯಂತೂ ಸುಲಭವಿರಲು ಸಾಧ್ಯವಿಲ್ಲ ಅಂತಾಯ್ತು. ಹೌದು ರಿಷಿಯವರ ಮುಂದೆ ಅನೇಕ ಸಾವಾಲುಗಳಿವೆ , ಅವುಗಳ ಪಟ್ಟಿ ದೊಡ್ಡದು. ಹೀಗಾಗಿ ಸದ್ಯದ , ತಕ್ಷಣದ ಸವಾಲುಗಳನ್ನ ನೋಡೋಣ.
ಇದನ್ನೂ ಓದಿ: ಜಾಗತಿಕ ಆರ್ಥಿಕ ಕುಸಿತಕ್ಕೆ ಮೊದಲ ಬಲಿ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್!
- ಕುಸಿದಿರುವ ಎಕಾನಮಿ , ಏರುತ್ತಿರುವ ಹಣದುಬ್ಬರ ಕೈ ಖಾಲಿಯಾಗಿರುವ ಜನತೆಯಲ್ಲಿ ಆತ್ಮವಿಶ್ವಾಸ ತುಂಬುವುದು: ನಿಮಗೆಲ್ಲಾ ಗೊತ್ತಿರಲಿ ಬ್ರಿಟನ್ ಕಳೆದ 45 ವರ್ಷದಲ್ಲಿ ಕಾಣದ ಒಂದು ಹಣದುಬ್ಬರವನ್ನ ಇಂದು ಎದುರಿಸುತ್ತಿದೆ. ಕಳೆದ ತಿಂಗಳ ಕೊನೆಯಲ್ಲಿ ದಾಖಲಾದ ಅಂಕಿಅಂಶದ ಪ್ರಕಾರ ಹಣದುಬ್ಬರ 10.1 ಪ್ರತಿಶತವಿತ್ತು. ಮುಂಬರುವ ದಿನಗಳಲ್ಲಿ ಸರಿಯಾದ ನಿರ್ವಹಣೆ ಮಾಡದಿದ್ದರೆ ಖಂಡಿತ ಇದು ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ . ಯೂರೋಪಿಯನ್ ಒಕ್ಕೊಟದಿಂದ ಹೊರಬಂದ ದಿನದಿಂದ ಬ್ರಿಟನ್ ಎಕಾನಮಿ ಡೋಲಾಯಮಾನ ಸ್ಥಿತಿಯಲ್ಲಿದೆ . ಹಾಗೆ ನೋಡಲು ಹೋದರೆ ಕಳೆದ 15 ವರ್ಷಗಳಿಂದ ಬ್ರಿಟನ್ ಹೇಳಿಕೊಳ್ಳುವ ಆರ್ಥಿಕ ಸ್ಥಿರತೆ ಕಾಣಲೇ ಇಲ್ಲ . ಕೋವಿಡ್ ಕಾರಣದಿಂದ ಆರ್ಥಿಕತೆ ಇನ್ನಷ್ಟು ಕುಸಿತ ಕಂಡಿದೆ . ಹಣದುಬ್ಬರ , ಆರ್ಥಿಕ ಕುಸಿತ ಜನರ ಕೈಯಲ್ಲಿ ಹಣವನ್ನ ಬರಿದಾಗಿಸಿದೆ. ಸಮಾಜದ ಒಂದು ವರ್ಗಕ್ಕೆ ಆದಾಯದ ಮೂಲವೇ ಇಲ್ಲವಾಗಿದೆ . ಹೀಗಾಗಿ ಖರ್ಚು ಮಾಡಲು ಹಣವಿಲ್ಲ , ಸರುಕು ಮತ್ತು ಸೇವೆಗೆ ಡಿಮ್ಯಾಂಡ್ ಕೂಡ ಇಲ್ಲ , ಆದರೂ ಹಣದುಬ್ಬರ ಕಡಿಮೆಯಾಗುವ ಮಾತಿಲ್ಲದ ವಿಚಿತ್ರ ಸನ್ನಿವೇಶದಲ್ಲಿ ಬ್ರಿಟನ್ ಸಿಕ್ಕಿಹಾಕಿಕೊಂಡಿದೆ. ಇದರಿಂದ ದೇಶವನ್ನ ಹೊರತರುವುದು ಮತ್ತು ಜನತೆಯಲ್ಲಿ ಮತ್ತೆ ವಿಶ್ವಾಸ ಮೂಡಿಸುವ ಗುರುತರ ಸವಾಲು ರಿಷಿಯವರ ಮುಂದಿದೆ .
- ಎನರ್ಜಿ ಕ್ರೈಸಿಸ್ : ರಷ್ಯಾ ದೇಶ ಉಕ್ರೈನ್ ದೇಶದೊಂದಿಗೆ ಯುದ್ಧದಲ್ಲಿರುವುದು , ಜಗತ್ತಿನ ಬಹುತೇಕ ದೇಶಗಳು ರಷ್ಯಾಗೆ ಬಹಿಷ್ಕಾರ ಹಾಕಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ರಷ್ಯಾದಿಂದ ಇಷ್ಟು ದಿನ ಬರುತ್ತಿದ್ದ ಗ್ಯಾಸ್ ಗೆ ಕತ್ತರಿ ಬಿದ್ದಿದೆ. ಇಷ್ಟು ದಿನ ಚಳಿ ಕಡಿಮೆ ಇದ್ದ ಕಾರಣಕ್ಕೆ ಇದು ಅಷ್ಟೊಂದು ದೊಡ್ಡ ಸದ್ದು ಮಾಡಲಿಲ್ಲ , ಅಲ್ಲಿ ಇದು ಸಮಸ್ಯೆ ಎನ್ನುವುದು ಗೊತ್ತಾಗಿತ್ತು ಆದರೆ ಅದು ಜಾಗತಿಕ ಮಟ್ಟದಲ್ಲಿ ಮನೆಮಾತಾಗಲು ಕಾರಣ ಚಳಿಗಾಲ ಹತ್ತಿರ ಬರುತ್ತಿರುವುದು , ಹೀಗಾಗಿ ಡಿಮ್ಯಾಂಡ್ ಹೆಚ್ಚಾಗುತ್ತಿದೆ ಮತ್ತು ವಿತರಣೆ ಕಡಿಮೆಯಿದೆ ಹೀಗಾಗಿ 120/150 ಪೌಂಡ್ ಮಾಸಿಕ ಬರುತ್ತಿದ್ದ ಎನರ್ಜಿ ಬಿಲ್ 400/450 ತಲುಪಿದೆ. ಜನಸಾಮಾನ್ಯ ಈ ಬಿಲ್ ಕಟ್ಟಲು ಸಾಧ್ಯವಿಲ್ಲ ಎಂದು ಕೈಚಲ್ಲಿ ಕುಳಿತ್ತಿದ್ದಾನೆ . ಮೇ ತಿಂಗಳಿಂದಲೇ ಎನರ್ಜಿ ಕಂಪನಿಗಳ ಲಾಭದ ಮೇಲೆ ತಾತ್ಕಾಲಿಕ ಹೊಸ 25 ಪ್ರತಿಶತ ತೆರಿಗೆಯನ್ನ ವಿಧಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಚಳಿ ಹೆಚ್ಚಾಗಲಿದೆ , ತನ್ಮೂಲಕ ಎನರ್ಜಿ ಡಿಮ್ಯಾಂಡ್ ಕೂಡ ಹೆಚ್ಚಾಗುತ್ತದೆ. ರಿಷಿಯವರ ಮುಂದೆ ಜನರ ಬಿಲ್ ಮೊತ್ತ ಕಡಿಮೆ ಮಾಡುವ ದೊಡ್ಡ ಸವಾಲು ನಿಂತಿದೆ. ಡಿಮ್ಯಾಂಡ್ ಗೆ ತಕ್ಕ ವಿತರಣೆ ಮಾರ್ಗ ಕೂಡ ಕಂಡುಕೊಳ್ಳಬೇಕಿದೆ.
- ಪಾರ್ಟಿಯಲ್ಲಿ ಒಮ್ಮತ ಮೂಡಿಸುವುದು: ನೋಡಿ ನಾವೆಲ್ಲಾ ಇಲ್ಲಿ ರಿಷಿ ನಮ್ಮವರು ಎಂದು ಬೀಗುತ್ತಿದ್ದರೆ , ಅಲ್ಲಿ ಈತ ಹೊರಗಿನವನು ಎನ್ನುವ ಕೂಗು ಎದ್ದಿದೆ. ಬೇರೆ ಪಾರ್ಟಿಗಳ ವಿಷಯ ಒಂದೆಡೆ ಇರಲಿ , ತನ್ನ ಪಾರ್ಟಿಯಲ್ಲಿನ ವಿರೋಧಿಗಳನ್ನ ರಿಷಿ ಗೆಲ್ಲಬೇಕಿದೆ , ಮೊದಲು ಪಾರ್ಟಿಯಲ್ಲಿ ಒಮ್ಮತ ಮೂಡಿಸುವ ಹರ್ಕ್ಯುಲಸ್ ಟಾಸ್ಕ್ ಇವರ ಮುಂದಿದೆ. ದಶಕಗಳ ಕಾಲ ಇಂಗ್ಲೆಂಡ್ ದೇಶದಲ್ಲಿನ ಆಗು ಹೋಗುಗಳನ್ನ ಹತ್ತಿರದಿಂದ ಕಂಡ ಅನುಭವದಿಂದ ಈ ಮಾತುಗಳನ್ನ ಬರೆಯುತ್ತಿದ್ದೇನೆ ,ಬ್ರಿಟನ್ ಜನ ಅಷ್ಟು ಸುಲಭವಾಗಿ ಬೇರೆಯವರನ್ನ ತಮ್ಮವನೆಂದು ಒಪ್ಪಿಕೊಳ್ಳುವುದಿಲ್ಲ. ಹೊರ ನೋಟಕ್ಕೆ ತೀರಾ ಮಾಡ್ರನ್ ಎನ್ನುವಂತೆ ಕಾಣುವ ಜನತೆಯ ಮನಸ್ಥಿತಿ , ನಿಜರೂಪ ಬೇರೆಯದಿದೆ , ಲಿಜ್ ಟ್ರಸ್ ಅಧಿಕಾರ ಪಡೆದ ಒಂದು ದಿನದ ನಂತರ ಬ್ರಿಟನ್ ಮಹಾರಾಣಿ ದೇಹ ತ್ಯಜಿಸಿದರು. ಇಂಗ್ಲೆಂಡ್ ಜನತೆ ಲಿಜ್ ದೇಶಕ್ಕೆ ಬ್ಯಾಡ ಲಕ್ ತಂದಳು ಎನ್ನುವ ಮಾತನ್ನ ಆಡುತ್ತಾರೆ ಎಂದರೆ ಊಹಿಸಿಕೊಳ್ಳಿ. ಭಾರತೀಯ ಮೂಲದವನು , ಬ್ರೌನ್ ಸ್ಕಿನ್ ಎನ್ನುವುದು ಅವರಿಗೆ ಮುಳುವಾಗುತ್ತದೆ. ಎಲ್ಲಕ್ಕೂ ಮುಖ್ಯವಾಗಿ ಮುಂದಿನ ಎಲೆಕ್ಷನ್ ತನಕ ಪಾರ್ಟಿಯಲ್ಲಿ ಒಮ್ಮತ ಕಾಪಿಡುವ ಸವಾಲು ಮತ್ತು ಜವಾಬ್ದಾರಿ ರಿಷಿಯವರ ಮೇಲಿದೆ .
- ಜಾಗತಿಕ ಮಟ್ಟದಲ್ಲಿ ಕುಸಿದಿರುವ ಬ್ರಿಟನ್ ಘನತೆಯನ್ನ ಎತ್ತಿ ಹಿಡಿಯುವುದು : ಬ್ರಿಟಿಷ್ ಪೌಂಡ್ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಘನತೆಯನ್ನ ಕಳೆದುಕೊಂಡಿದೆ , ಮೂರು ತಿಂಗಳ ಅವಧಿಯಲ್ಲಿ ಮೂರನೇ ಪ್ರೈಮ್ ಮಿನಿಸ್ಟರ್ ಅಧಿಕಾರಕ್ಕೆ ಏರುತ್ತಾರೆ ಎಂದರೆ ಅದು ಇಂಗ್ಲೆಂಡ್ ಅಂತಲ್ಲ ಯಾವುದೇ ದೇಶವಾದರೂ ತಲೆ ತಗ್ಗಿಸುವ ವಿಷಯವಾಗಿದೆ. ರಾಜಕೀಯ ಅಸ್ಥಿರತೆ ಯಾವ ಮಟ್ಟದಲ್ಲಿದೆ ಎಂದರೆ ಅಲ್ಲಿನ ಸೋಶಿಯಲ್ ಮೀಡಿಯಾದಲ್ಲಿ ರಿಷಿಯವರಿಗೆ 42 ವರ್ಷ ವಯಸ್ಸು , ಹೋಪ್ ಅಷ್ಟು ದಿನವಾದರೂ ಅವರು ಪ್ರೈಮ್ ಮಿನಿಸ್ಟರ್ ಆಗಿ ಮುಂದುವರಿಯುತ್ತಾರೆ ಎನ್ನುವ ಮೀಮ್ ಗಳು ಹರಿದಾಡುತ್ತಿವೆ. ಸೂರ್ಯ ಮುಳುಗದ ಸಾಮ್ರಾಜ್ಯದ ಅಧಿಪತಿಗಳು ಎಂದು ಬಿಗಿದ್ದ ಬ್ರಿಟನ್ ಇಂದು ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗಿದೆ. ಅಲ್ಲಿನ ಜನ ಸಾಮಾನ್ಯನ ಜೀವನ ಶೈಲಿ ಭಾರಿ ಕುಸಿತವನ್ನ ಕಂಡಿದೆ. ಇದನ್ನ ಮತ್ತೆ ಮರಳಿ ಸ್ವಸ್ಥಾನಕ್ಕೆ ತರುವ ಸವಾಲು ಹೊಸ ಪ್ರಧಾನಿ ರಿಷಿಯವರ ಮೇಲಿದೆ .
- ಬಂದ್ ಗಳಿಗೆ ಸಿದ್ಧವಾಗುತ್ತಿರುವ ಸಂಘ ,ಸಂಸ್ಥೆಗಳನ್ನ ವಿಸ್ವಾಸಕ್ಕೆ ತೆಗೆದುಕೊಳ್ಳುವುದು : ಇಂಗ್ಲೆಂಡ್ ನ ರೈಲ್ವೆ ಯೂನಿಯನ್ ವೇತನಕ್ಕೆ ಸಂಬಂಧಿಸಿದ ಮಾತುಕತೆ ಫಲಿತಾಂಶ ನೀಡದೆ ಇರುವ ಕಾರಣ ನವೆಂಬರ್ 2022 ರಲ್ಲಿ ಬಂದ್ ಕೆ ಕರೆಕೊಟ್ಟಿದೆ. ಇನ್ನು ದೇಶದ 150 ಯೂನಿವೆರ್ಸಿಟಿಯಲ್ಲಿ ದುಡಿಯುವ 70 ಸಾವಿರಕ್ಕೂ ಹೆಚ್ಚು ಜನ ಕ್ರಿಸ್ಮಸ್ ಹಬ್ಬಕ್ಕೆ ಮುಂಚೆ ಸ್ಟ್ರೈಕ್ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಹೀಗೆ ಹಲವು ಸಂಘ ಸಂಸ್ಥೆಗಳು ತನ್ನ ಉದ್ದೇಶ ಸಾಧನೆಗಾಗಿ ಬಂದ್ , ಸ್ಟ್ರೈಕ್ ಅಥವಾ ವಾರಗಳ ಕಾಲ ಕೆಲಸ ಮಾಡದೆ ಮುಷ್ಕರ ಹೂಡುವ ಸುಳಿವನ್ನ ನೀಡುತ್ತಿದ್ದಾರೆ . ಇವರುಗಳನ್ನ ಸಂಧಾನದ ಮೂಲಕ ಸರಿದಾರಿಗೆ ತರುವ ಕಠಿಣ ಕೆಲಸ , ಸವಾಲು ರಿಷಿಯವರು ಎದುರಿಸಬೇಕಾಗಿದೆ.
- ಹೆಚ್ಚಾಗಿರುವ ಸಹಾಯಧನ , ಡಿಫೆನ್ಸ್ ಖರ್ಚಿಗೆ ಲಗಾಮು ಹಾಕುವುದು: ಆದಾಯ ಹೆಚ್ಚು ಮತ್ತು ಖರ್ಚು ಹೆಚ್ಚಾದಾಗ ಮೊದಲು ಕಾಣುವುದು ಶಿಕ್ಷಣ , ಆದರೆ ಈ ಬಾರಿ ಅಲ್ಲಿಗೆ ಕೈ ಹಾಕುತ್ತಿಲ್ಲ , ಏಕೆಂದರೆ ಈಗಾಗಲೇ ಸಾಕಷ್ಟು ಕಡಿತವನ್ನ ಶಿಕ್ಷಣ ಕ್ಷೇತ್ರ ಕಂಡಿದೆ. ಡಿಫೆನ್ಸ್ ಬಜೆಟ್ ಗೆ ಕೈ ಹಾಕುವ ಸವಾಲು ರಿಷಿಯವರ ಮುಂದೆ ನಿಂತಿದೆ. ಅಲ್ಲದೆ ಬ್ರಿಟನ್ ಆರ್ಥಿಕವಾಗಿ ಜರ್ಜರಿತವಾಗಿರುವಾಗ ಉಕ್ರೈನ್ ದೇಶಕ್ಕೆ ಈ ವರ್ಷ ೨. ೬ ಬಿಲಿಯನ್ ಅಮೆರಿಕನ್ ಡಾಲರ್ ಸಹಾಯ ನೀಡುವುದಾಗಿ ಹೇಳಿದೆ. ರಿಷಿಯವರು ಕೂಡ ತಾನು ಪ್ರಧಾನಿಯಾದರೆ ಉಕ್ರೈನ್ ದೇಶಕ್ಕೆ ನೀಡುವ ಬೆಂಬಲವನ್ನ ದುಪಟ್ಟು ಮಾಡುತ್ತೇನೆ ಎಂದು ವಿಶ್ವಾಸದಿಂದ ನುಡಿದಿದ್ದರು , ಇದೀಗ ಅವರು ಪ್ರಧಾನಿ ಪಟ್ಟದಲ್ಲಿ ಕುಳಿತು ತನ್ನ ಜನತೆ ಕಷ್ಟದಲ್ಲಿರುವಾಗ ಏಕೆ ಮತ್ತು ಹೇಗೆ ಅಷ್ಟೊಂದು ಹಣವನ್ನ ಉಕ್ರೈನ್ ಗೆ ಕೊಡಲು ಸಾಧ್ಯ ಎನ್ನುವುದನ್ನ ತಿಳಿ ಹೇಳಬೇಕಾದ ಸೂಕ್ಷ್ಮ ಸವಾಲನ್ನ ಹೇಗೆ ನಿಭಾಯಿಸುತ್ತಾರೆ ಎನ್ನವುದು ಯಕ್ಷ ಪ್ರಶ್ನೆ .
- ಇರುವ ಕಡಿಮೆ ಸಮಯದಲ್ಲಿ ಧನಾತ್ಮಕ ಬದಲಾವಣೆ ತರಬೇಕಾಗಿದೆ : ಸಮಸ್ಯೆಗಳು ಬೆಟ್ಟದಷ್ಟಿವೆ , ಆದರೆ ಸಮಯ ? ಮುಂದಿನ ಜನರಲ್ ಎಲೆಕ್ಷನ್ ಜನವರಿ 2025ರ ವೇಳೆಗೆ ನಡೆಯಲಿದೆ. 25/26 ತಿಂಗಳ ಸಮಯ ಮಾತ್ರ ಸಿಕ್ಕಿದೆ , ಅಷ್ಟರಲ್ಲಿ ಮೇಲಿನ ತಕ್ಷಣದ ಸವಾಲುಗಳನ್ನ ಮೆಟ್ಟಿ ನಿಲ್ಲಬೇಕಾಗಿದೆ . ಹೀಗಾಗಿ ನಿಗದಿತ ಸಮಯದಲ್ಲಿ ಇದನ್ನ ಮಾಡಬೇಕಾದ ಹೊಸ ಸವಾಲು ಕೂಡ ಎದುರಾಗಿದೆ.
ಕೊನೆಮಾತು: ನಮ್ಮಲ್ಲಿ ನಡೆಯುವ ಕಾಲೇ ಎಡವುವುದು ಎನ್ನುವ ಮಾತಿದೆ. ಹಾಗೊಮ್ಮೆ ರಿಷಿ ಸುನುಕ್ ಮೇಲಿನ ಎಲ್ಲಾ ಸವಾಲುಗಳನ್ನ ತಕ್ಕ ಮಟ್ಟಿಗೆ ಮೆಟ್ಟಿ ನಿಂತರೂ ಜನ ಮಾತನಾಡುವುದು ಬಿಡುವುದಿಲ್ಲ. ಇಂಗ್ಲೆಂಡ್ ಇಂದು ಒಡೆದ ಮನೆ. ಅಲ್ಲಿ ಎಲ್ಲರನ್ನ, ಎಲ್ಲವನ್ನ ಒಮ್ಮತಕ್ಕೆ, ಸಹಮತಕ್ಕೆ ತರುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ. ಯಾವ ನಿರ್ಧಾರ ತೆಗೆದುಕೊಂಡರೂ ಅದು ತಪ್ಪಾಗುವ ಪರಿಸ್ಥಿತಿ ಇರುವಾಗ ಯಾರನ್ನೂ ದೂಷಿಸಿ ಪ್ರಯೋಜನವೇನು? ಸಮಯಕ್ಕೆ ಎಲ್ಲವನ್ನ ಮರೆಸುವ ಶಕ್ತಿಯಿದೆ ಎನ್ನುತ್ತಾರೆ. ಇಂಗ್ಲೆಂಡ್ ಪಾಲಿಗೆ ಸಮಯ ಬೇಕು, ಸಾಕಷ್ಟು ಸಮಯ ಬೇಕು, ಮರೆಯಲು ಮತ್ತೆ ಮೆರೆಯಲು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com