ಜಾಗತಿಕ ಆರ್ಥಿಕ ಕುಸಿತಕ್ಕೆ ಮೊದಲ ಬಲಿ ಬ್ರಿಟನ್ ಪ್ರಧಾನಿ ಲಿಜ್‌ ಟ್ರಸ್‌! (ಹಣಕ್ಲಾಸು)

ಹಣಕ್ಲಾಸು-331-ರಂಗಸ್ವಾಮಿ ಮೂಕನಹಳ್ಳಿ
ಬ್ರಿಟನ್
ಬ್ರಿಟನ್

ಜಗತ್ತಿನಾದ್ಯಂತ ಹಣದುಬ್ಬರ ತಾಂಡವವಾಡುತ್ತಿದೆ. ಜಾಗತಿಕ ಹಣದುಬ್ಬರದ ಬಗ್ಗೆ ಈಗಾಗಲೆ ಹಣಕ್ಲಾಸು ಅಂಕಣದಲ್ಲಿ ಎರಡು ಬಾರಿ ಮಾಹಿತಿಯನ್ನ ನೀಡಲಾಗಿದೆ. ಒಂದು ಕಾಲದಲ್ಲಿ ಸೂರ್ಯ ಮುಳುಗದ ಸಾಮ್ರಾಜ್ಯದ ಒಡೆಯರು ನಾವು ಎಂದು ಮೆರೆದಿದ್ದ ಬ್ರಿಟನ್ ಇಂದು ಅಲ್ಲಿನ ಚಳಿಯಲ್ಲೂ ಬೆವರುವಂತಾಗಿದೆ. ಈ ರೀತಿಯ ಸ್ಥಿತಿಗೆ ಒಂದಲ್ಲ ಹಲವು ಕಾರಣಗಳಿವೆ. ಅವುಗಳಲ್ಲಿ ಬ್ರೆಕ್ಸಿಟ್ ನಂತಹ ಕಾರಣವನ್ನ ತಪ್ಪಿಸಬಹುದಾಗಿತ್ತು.

ಯೂರೋಝೋನ್ ನಲ್ಲಿದ್ದೂ ಕೂಡ ಇಂಗ್ಲೆಂಡ್ ತನ್ನ ಕರೆನ್ಸಿಯನ್ನ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿತ್ತು. ಹೀಗಿದ್ದೂ ಬೇಕಿಲ್ಲದ ಬ್ರೆಕ್ಸಿಟ್ ಮಾಡಿಕೊಂಡು ಜನತೆ ಪರೆದಾಡುವಂತೆ ಅಲ್ಲಿನ ರಾಜಕಾರಿಣಿಗಳು ಮಾಡಿದ್ದಾರೆ. ಸುಮ್ಮನಿದ್ದ ಜನತೆಯನ್ನ ಬೇರೆ ಬೇರೆ ಮಾರ್ಗಗಳ ಮೂಲಕ ಬ್ರೆಕ್ಸಿಟ್ ಗೆ ಉತ್ತೇಜಿಸಲಾಯಿತು. ಹೀಗೆ ಯುರೋ ವಲಯದಿಂದ ಹೊರಬರುವುದರಿಂದ ಆಗುವ ಲಾಭವೇನು? ಎನ್ನುವುದನ್ನ ಯಾರು ಪ್ರಶ್ನಿಸಲಿಲ್ಲ. ತಮ್ಮ ರಾಜಕೀಯ ಮಹತ್ವಕಾಂಕ್ಷೆಗಳನ್ನ ಈಡೇರಿಸಿಕೊಳ್ಳಲು ಬ್ರೆಕ್ಸಿಟ್ನನ್ನ ವೇದಿಕೆಯನ್ನಾಗಿ ಬಳಸಿಕೊಂಡರು. ಆದರೇನು ಆ ವೇದಿಕೆಯಲ್ಲಿ ಹೆಚ್ಚು ಕಾಲ ನಿಲ್ಲಲಾಗದೆ ನಿರ್ಗಮಿಸಿದ ನಾಯಕರ ಸಂಖ್ಯೆ ಬಹಳ. ಇಂದಿನ ಪ್ರಧಾನಿ ಲಿಸ್ ಟ್ರಸ್ ಬ್ರಿಟನ್ ದೇಶವನ್ನ ಇನ್ನೊಂದು ಹೆಜ್ಜೆ ಯಶಸ್ವಿಯಾಗಿ ಹಿನ್ನೆಡಿಸಿದ್ದಾರೆ. ಹೌದು ಹೆಚ್ಚಿನ ತೆರಿಗೆಯನ್ನ ಕಡಿತಗೊಳಿಸುತ್ತೇನೆ ಎನ್ನುವುದು, ಸ್ಲಾಬ್ ರೇಟ್ ಇಲ್ಲದೆ ಒಂದೇ ರೀತಿಯ ದರವನ್ನ ವಿದ್ಯುತ್ ಬಳಕೆಗೆ ವಿಧಿಸಿರುವುದು, ವಿದ್ಯುತ್ ಬಿಲ್ ನಲ್ಲಿ ಸೋಡಿ ನೀಡುವುದು, ಅದಕ್ಕಾಗಿ ಕೋಟ್ಯಂತರ ಪೌಂಡ್ ಹೊಸ ಸಾಲ ಮಾಡುವುದು, ಇದಕ್ಕೆಲ್ಲ ತನ್ನ ವಿತ್ತ ಮಂತ್ರಿಯ ಅದಕ್ಷತೆ ಕಾರಣ ಎಂದು ಹಳಿಯುವುದು, ಹೀಗೆ ಒಂದಲ್ಲ ಹಲವು ಕಾರಣಗಳಿಗೆ ಇತ್ತೀಚಿಗೆ ಆಯ್ಕೆಯಾದ ಲಿಸ್ ಅದಾಗಲೇ ಜನರ ಮನದಲ್ಲಿ ಸಾಕಪ್ಪ ಈಕೆಯ ಸಹವಾಸ ಎನ್ನುವ ಮಟ್ಟಕ್ಕೆ ತಲುಪಿದ್ದಾರೆ. ಬ್ರಿಟನ್ 2023ರಲ್ಲಿ ಹಣಕಾಸು ಬಿಕ್ಕಟ್ಟಿಗೆ ಸಿಲುಕಲಿದೆ. ಹಾಗೆ ನೋಡಲು ಹೋದರೆ 2008 ರಿಂದ ಬ್ರಿಟನ್ ಆರ್ಥಿಕತೆ ಹೇಳಿಕೊಳ್ಳುವ ಮಟ್ಟಕ್ಕೆ ತಲುಪಲೇ ಇಲ್ಲ. ಮಹಾನ್ ಆರ್ಥಿಕ ಹೊಡೆತದ ನಂತರ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಚೇತರಿಕೆ ಬಿಟ್ಟರೆ, ಬ್ರಿಟನ್ ಎಂದಿಗೂ ತನ್ನ ಹಳೆಯ ವೈಭವಕ್ಕೆ ಮರಳಲೇ ಇಲ್ಲ. ಗಾಯದ ಮೇಲೆ ಬರೆ ಎಳೆದಂತೆ ಕೋವಿಡ್ ಕಾರ್ಮೋಡ ಬ್ರಿಟನ್ ಆರ್ಥಿಕತೆಯನ್ನ ಮತ್ತಷ್ಟು ಹಳ್ಳ ಹಿಡಿಸಿತು.

ರಷ್ಯಾ ಉಕ್ರೈನ್ ಯುದ್ಧ, ಅಮೆರಿಕಾದಲ್ಲಿನ ಹಣದುಬ್ಬರ, ಚೀನಾದಲ್ಲಿನ ಹಣಕಾಸು ಬಿಕ್ಕಟ್ಟು ಮತ್ತು ಉತ್ಪಾದನೆಯಲ್ಲಿನ ಕುಸಿತ ಮತ್ತಿತರ ಜಾಗತಿಕ ಕಾರಣಗಳ ಜೊತೆಗೆ ಆಂತರಿಕ ಜಗಳ, ಹಣಕಾಸು ನಿರ್ವಹಣೆಯಲ್ಲಿನ ಏರುಪೇರುಗಳಿಂದ ಬ್ರಿಟನ್ನಲ್ಲಿ ಸದ್ಯಕ್ಕೆ ಹಣದುಬ್ಬರ ಎರಡಂಕಿ ದಾಟಿದೆ. ಹಣದುಬ್ಬರ ಹೆಚ್ಚಾದ ಕಾರಣಗಳಿಂದ ಜನತೆ ಕಂಗೆಟ್ಟಿದ್ದಾರೆ.

ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ, ಬ್ರಿಟನ್ ದೇಶದ ಪ್ರತಿ ಹತ್ತು ಪ್ರಜೆಗಳಲ್ಲಿ 9 ಜನ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಜೀವನ ನಿರ್ವಹಣೆಗೆ ಬೇಕಾದ ಹಣವನ್ನ ಹೊಂಚುವುದು ಕಷ್ಟವಾಗಿದೆ ಎನ್ನುವ ಮಾತುಗಳನ್ನ ಹೇಳುತ್ತಿದ್ದಾರೆ. ಗಮನಿಸಿ ನೋಡಿ, ಇದು ಬಹಳ ದೊಡ್ಡ ಸಂಖ್ಯೆ, 93 ಪ್ರತಿಶತ ಜನ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದರೆ ಆ ದೇಶದ ಆರ್ಥಿಕತೆ ಇನ್ನೆಷ್ಟು ಹದಗೆಟ್ಟಿರಬಹುದು ಅಲ್ಲವೇ?  ಈ ರೀತಿ ಆಗಲು ಬಹಳ ಮುಖ್ಯ ಕಾರಣ ಆಹಾರ ಪದಾರ್ಥಗಳಲ್ಲಿ ಇನ್ನಿಲದ ಬೆಲೆ ಏರಿಕೆಯಾಗಿರುವುದು, ಇದರ ಜೊತೆಗೆ ಎಲೆಕ್ಟ್ರಿಸಿಟಿ ಮತ್ತು ಗ್ಯಾಸ್ ನಲ್ಲಿನ ಬೆಲೆಯೇರಿಕೆ ಸಹ ಜನರನ್ನ ಹೈರಾಣಾಗಿಸಿದೆ. 90 ಕ್ಕೂ ಹೆಚ್ಚು ಪ್ರತಿಶತ ಜನ ಆಹಾರ ಪದಾರ್ಥಗಳ ಬೆಲೆ ಏರಿಕೆ ಬಗ್ಗೆ ಅಸಹನೆ ವ್ಯಕ್ತಪಡಿಸಿದರೆ, ಶೇಕಡಾ 75 ಪ್ರತಿಶತ ಜನ ಎಲೆಕ್ಟ್ರಿಸಿಟಿ ಬೆಲೆ ಏರಿಕೆ ಬಗ್ಗೆ ತಮ್ಮ ಅಸಹನೆಯನ್ನ ಹೊರಹಾಕಿದ್ದಾರೆ. ಇದರಲ್ಲಿ ಇನ್ನೊಂದು ಅಂಶವನ್ನ ಗಮನಿಸಬೇಕಾಗಿದೆ ಜನಸಂಖ್ಯೆಯಯ 43 ಪ್ರತಿಶತ ಎಲೆಕ್ಟ್ರಿಸಿಟಿ ಬಿಲ್ ಕಟ್ಟಲಾಗದ ಅಸಹಾಯಕತೆಯಲ್ಲಿದ್ದಾರೆ.

ಬ್ರಿಟನ್ ಹೇಳಿಕೇಳಿ ಚಳಿದೇಶ, ಗ್ಯಾಸ್ ಬೆಲೆ ಹೆಚ್ಚಾಗಿರುವ ಕಾರಣ ಮತ್ತು ಎಲೆಕ್ಟ್ರಿಸಿಟಿ ಬೆಲೆ ಹೆಚ್ಚಾಗಿರುವ ಕಾರಣ ಮನೆಯಲ್ಲಿ ಹೀಟರ್ ಹಾಕುವುದು ಇಂದು ಐಷಾರಾಮ ಎನ್ನುವ ಮಟ್ಟಕ್ಕೆ ಅಲ್ಲಿನ ಸಮಾಜ ತಲುಪಿದೆ. ಆದರೆ ಇಂತಹ ದೇಶದಲ್ಲಿ ಇದು ಅತಿ ಸಾಮಾನ್ಯವಾಗಿ ಸಿಗಬೇಕಾದ ಸವಲತ್ತು. ಆದರೆ ಇದು ಇಂದು ಕೈಗೆಟುಕದ ಕಾರಣ ಬಹಳಷ್ಟು ಜನ ಹಿರಿಯ ನಾಗರಿಕರು ಇದು ನನ್ನ ಕೊನೆಯ ವಿಂಟರ್ ಎನ್ನುವ ಕರುಣಾಜನಕ ಮಾತುಗಳನ್ನ ಮಾಧ್ಯಮದ ಮುಂದೆ ಹೇಳುತ್ತಿದ್ದಾರೆ. ಚಳಿಗಾಲದಲ್ಲಿ ಇಂತಹ ದೇಶಗಳಲ್ಲಿ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚಿರುತ್ತದೆ. ಚಳಿ ಇದಕ್ಕೆ ಮುಖ್ಯ ಕಾರಣ. ಹೀಟರ್ ಬಳಸಿ ಕೂಡ ಹೀಗಾಗುತ್ತಿತ್ತು . ಇದೀಗ ಪರಿಸ್ಥಿತಿ ಇನ್ನಷ್ಟು ವಿಷಮವಾಗಿದೆ.

ಇನ್ನು ಸಾಲ ಮಾಡಿ ಮನೆ ಕೊಂಡವರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ. ಹೀಗೆ ಸಾಲ ಮಾಡಿ ಮನೆಕೊಂಡವರಲ್ಲಿ 30 ಪ್ರತಿಶತ ಜನ ಮುಂದಿನ ಕಂತು ಕಟ್ಟಲಾಗದ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿದ್ದಾರೆ. ಮುಖ್ಯವಾಹಿನಿಯ ಕೆಲಸಗಳು ಕಡಿತವಾಗಿ, ಅರೆಕಾಲಿಕ ಅಥವಾ ಆನ್ಲೈನ್ ಮೂಲಕ ಮಾಡುವ ಕೆಲಸಗಳು ಹೆಚ್ಚಾಗಿವೆ. ಹೀಗಾಗಿ ಆದಾಯದಲ್ಲಿ ಕುಸಿತವಾಗಿದೆ. ಜನರ ಆದಾಯದಲ್ಲಿ ಕುಸಿತವಾಗಿ ಮೂಲಭೂತ ಸೌಕರ್ಯಗಳ ಬೆಲೆ ದುಪ್ಪಟಾಗಿರುವ ಕಾರಣ ಇಲ್ಲಿನ ಸಾಮಾನ್ಯ ಜನ ಆಹಾರ, ವಿದ್ಯುತ್ ಬಿಟ್ಟು ಬೇರೆ ಯಾವುದಕ್ಕೂ ಖರ್ಚು ಮಾಡಲಾಗದ ಸ್ಥಿತಿಯಲ್ಲಿ ಸಿಲುಕಿದ್ದಾನೆ.

ಇನ್ನು ಅಲ್ಲಿನ ರಾಜಕೀಯ ಪರಿಸ್ಥಿತಿ ಅಲ್ಲಿನ ಆರ್ಥಿಕ ಪರಿಸ್ಥಿತಿಗಿಂತ ಹೆಚ್ಚು ಹದಗೆಟ್ಟಿದೆ. ಇತ್ತೀಚಿಗೆ ಪ್ರಧಾನಿ ಪಟ್ಟಕ್ಕೆ ಏರಿದ, ಬ್ರಿಟನ್ ದೇಶದ ಎರಡನೇ ಮಹಿಳಾ ಪ್ರಧಾನಿ ಎನ್ನುವ ಹೆಗ್ಗಳಿಕೆ ಗಳಿಸಿಕೊಂಡ ಲಿಸ್ ಟ್ರಸ್ ಪಟ್ಟಕ್ಕೆ ಏರಿದ ವೇಗದಲ್ಲೇ ಕೆಳಗಿಳಿಯುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಈ ಎಲ್ಲಾ ಪ್ರಹಸನಗಳ ನಡುವೆ ಜನ ಸಾಮಾನ್ಯನ ಬದುಕು ಮಾತ್ರ ಮೂರಾಬಟ್ಟೆಯಾಗಿರುವುದು ನಗ್ನಸತ್ಯ. ಹಣದುಬ್ಬರ ಹೆಚ್ಚಾದರೂ, ಕುಸಿತವಾದರೂ ಅದಕ್ಕೆ ಮದ್ದುಂಟು, ಅಂದರೆ ಇನ್ಫ್ಲೇಶನ್ ಮತ್ತು ಡಿಫ್ಲೇಷನ್ ಎರಡನ್ನೂ ನಿಯಂತ್ರಣಕ್ಕೆ ತರಬಹುದು, ಆದರೆ ಜನತೆಯ ವಿಸ್ವಾಸದಲ್ಲಿ ಕುಸಿತವಾದರೆ ಅದನ್ನ ಮತ್ತೆ ಸರಿ ದಾರಿಗೆ ತರುವುದಕ್ಕೆ ಬಹಳ ಸಮಯ ಹಿಡಿಯುತ್ತದೆ. ಹಣದುಬ್ಬರ ಕೂಡ ಇದ್ದೂ ಬೇಡಿಕೆಯಲ್ಲಿ ಕೂಡ ಕುಸಿತವಾಗುವ ವಿಚಿತ್ರ ಪರಿಸ್ಥಿತಿ ಇಲ್ಲಿ ಮನೆಮಾಡಿದೆ. ಹಣದುಬ್ಬರ ಹೆಚ್ಚಾಗಿದ್ದು, ಯಾವುದೇ ಸರುಕು ಅಥವಾ ಸೇವೆಯ ಮೇಲಿನ ಬೇಡಿಕೆ ಇನ್ನಿಲ್ಲದೆ ಕುಸಿದಿದ್ದು, ನಿರುದ್ಯೋಗ ಹೆಚ್ಚಾಗಿರುವ ಆರ್ಥಿಕತೆಯನ್ನ ಸ್ಟಾಗ್ ಫ್ಲೇಶನ್ ಎನ್ನುತ್ತಾರೆ. ಇದನ್ನ ಸರಳವಾಗಿ ಹೇಳಬೇಕೆಂದರೆ ವಸ್ತು ಮತ್ತು ಸೇವೆಯ ಮೇಲಿನ ಬೇಡಿಕೆ ಕುಸಿತವಾಗಿದ್ದರೂ ಕೂಡ ಅವುಗಳ ಮೇಲಿನ ಬೆಲೆಯಲ್ಲಿ ಯಾವುದೇ ಕುಸಿತವಾಗುವುದಿಲ್ಲ, ಬದಲಿಗೆ ಅವುಗಳ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಇದರ ಜೊತೆಗೆ ಜನರ ಬಳಿ ಖರ್ಚಿಗೆ ಹಣ ಇರುವುದಿಲ್ಲ, ಹೀಗಾಗಿ ಸಹಜವಾಗಿ ಬೇಡಿಕೆಯಲ್ಲಿ ಕುಸಿತವಾಗುತ್ತದೆ. ಜನರ ಬಳಿ ಕೆಲಸವಿಲ್ಲದ ಕಾರಣ ಅವರ ಆದಾಯದಲ್ಲಿ ಕುಸಿತವಾಗುತ್ತದೆ. ಸಾಮಾನ್ಯವಾಗಿ ಜನರ ಬಳಿ ಹಣ ಇಲ್ಲದ ಸಮಯದಲ್ಲಿ ಬೇಡಿಕೆ ಕುಸಿತವಾಗದರೆ, ಬೆಲೆ ಕೂಡ ಕುಸಿಯಬೇಕು. ಆದರೆ ಬೆಲೆಯಲ್ಲಿ ಕುಸಿತವಾಗುವ ಬದಲು ಬೆಲೆ ಹೆಚ್ಚಳವಾಗುವ ಇಂತಹ ವಿಚಿತ್ರ ಆರ್ಥಿಕ ಘಟ್ಟವನ್ನ ಸ್ಟಾಗ್ ಫ್ಲೇಶನ್ ಎಂದು ಕರೆಯಲಾಗುತ್ತದೆ.

ರಷ್ಯಾ ದೇಶದ ಮೇಲೆ ಆರ್ಥಿಕ ದಿಗ್ಬಂಧನ ಇನ್ನೂ ಜಾರಿಯಲ್ಲಿದೆ, ಯೂರೋಪಿಯನ್ ಯೂನಿಯನ್ ಮತ್ತು ಅಮೇರಿಕಾ ದೇಶ ರಷ್ಯಾದ ಮೇಲೆ ಈ ನಿರ್ಬಂಧವನ್ನ ಇನ್ನೂ ಸಡಿಲ ಮಾಡಿಲ್ಲ. ಆದರೆ ಯೂರೋಪು ರಷ್ಯಾ ನೀಡುವ ನ್ಯಾಚುರಲ್ ಗ್ಯಾಸ್ ಮೇಲೆ ಅವಲಂಬಿತವಾಗಿದೆ. ರಷ್ಯಾದ ಎನರ್ಜಿ ಸಿಗದೆ ಇದ್ದರೆ ಯೂರೋಪಿನ ಅರ್ಧ ಜನಸಂಖ್ಯೆ ಅಲ್ಲಿನ ವಿಪರೀತ ಚಳಿಯಲ್ಲಿ ಎರಡು ತಿಂಗಳಲ್ಲಿ ಸಾವನ್ನ ಅಪ್ಪುತ್ತದೆ. ಮೇಲ್ನೋಟಕ್ಕೆ ಆರ್ಥಿಕ ದಿಗ್ಬಂಧನ ಜಾರಿಯಲ್ಲಿದೆ ಆದರೆ ರಷ್ಯಾದಿಂದ ಬರುತ್ತಿದ್ದ ಗ್ಯಾಸ್ ನಿಲ್ಲುವಂತಿಲ್ಲ , ಹಣವನ್ನ ನೇರವಾಗಿ ನೀಡುವಂತಿಲ್ಲ. ಇಷ್ಟೆಲ್ಲಾ ಯುದ್ಧದ ಮೇಲಿನ ಖರ್ಚು , ಆರ್ಥಿಕದ ನಿರ್ಬಂಧನೆಗಳ ನಡುವೆ ರಷ್ಯಾ ನೆಲಕಚ್ಚಬೇಕಾಗಿತ್ತು , ಆದರೆ ರಷ್ಯಾ ಬಸವಳಿದಂತೆ ಕಾಣುತ್ತಿಲ್ಲ , ಒಂದು ದೇಶದಲ್ಲಿ ಹಣದ ಹರಿವು ನಿಂತು ಹೋದರೆ ಅದು ಕುಸಿದು ಕುಳಿತುಕೊಳ್ಳಲು ಹೆಚ್ಚು ಸಮಯ ಬೇಕಾಗುವವುದಿಲ್ಲ. ಆದರೆ ರಷ್ಯಾ ಮಾತ್ರ ಇನ್ನೂ ಅದೇ ವೀರಾವೇಶದಿಂದ ವಿಶ್ವಸಮುದಾಯದ ವಿರುದ್ಧ ಸೆಟೆದು ನಿಂತಿದೆ. ಇದು ಹೇಗೆ ಸಾಧ್ಯ ? ಎನ್ನುವುದನ್ನ ಕೆದಕುತ್ತಾ ಹೋದರೆ ಅಲ್ಲಿ ಇನ್ನೊಂದು ಅಧ್ಯಾಯ ತೆಗೆದುಕೊಳ್ಳುತ್ತದೆ. ಕ್ರಿಪ್ಟೋ ರಷ್ಯಾವನ್ನ ಆರ್ಥಿಕವಾಗಿ ಕುಸಿಯದಂತೆ ಕಾಯುತ್ತಿರುವ ದೇವರು ಎನ್ನಬಹುದು. ಎಲ್ಲವೂ ಮೊದಲಿನಂತೆ ನಡೆಯುತ್ತಿದೆ , ಹಣ ಸಂದಾಯ ಮಾತ್ರ ಕ್ರಿಪ್ಟೋ ಮೂಲಕ ಆಗುತ್ತಿದೆ. ಕ್ರಿಪ್ಟೋ ಜಗತ್ತಿನಲ್ಲಿ ಯಾರೂ ದೊಡ್ಡಣ್ಣನ್ನಲ್ಲ ಎನ್ನುವುದನ್ನ ಸಾರುತ್ತಿದೆ. ಯಾರು ಟೆಕ್ನಾಲಾಜಿಯನ್ನ ಸರಿಯಾಗಿ ದುಡಿಸಿಕೊಳ್ಳುತ್ತಾರೆ , ಯಾರು ಅದರ ಮೇಲೆ ನಿಯಂತ್ರಣ ಸಾಧಿಸುತ್ತಾರೆ ಅವರೇ ದೊಡ್ಡಣ್ಣ , ಇವತ್ತಿನ ಸಮಯದಲ್ಲಿ ಒಂದು ದೇಶವನ್ನ ದೊಡ್ಡಣ್ಣ ಎನ್ನಲಾಗದು.

ಕೊನೆಮಾತು: ಭಾರತದಲ್ಲಿ ಕೂಡ ಆಹಾರ ಪದಾರ್ಥಗಳ ಮೇಲಿನ ಬೆಲೆಯಲ್ಲಿ ಬಹಳ ಏರಿಕೆಯಾಗಿದೆ. ಹಣದುಬ್ಬರ ನಿಯಂತ್ರಣ ದೊಡ್ಡ ಸಮಸ್ಯೆಯಾಗಿದೆ. ಜಗತ್ತಿನಾದ್ಯಂತ ಮೂಲಭೂತ ವಸ್ತುಗಳ ಮೇಲಿನ ಖರ್ಚು, ಆದಾಯದ  60 ರಿಂದ 70 ವರೆಗೆ ಮುಟ್ಟಿದೆ ಎಂದರೆ, ಉಳಿದ ವಲಯಗಳಲ್ಲಿ ಬೇಡಿಕೆ ಸೃಷ್ಟಿ ಹೇಗಾಗುತ್ತದೆ? ಸದ್ಯದ ಮಟ್ಟಿಗೆ ಈ ವಿಷಯದಲ್ಲಿ ಜಗತ್ತು ಒಂದಾಗಿದೆ ಎನ್ನಬಹುದು. ಎಲ್ಲೆಡೆ ಹಣದುಬ್ಬರದ್ದೆ ಮಾತು, ಇದರಲ್ಲಿ ಕುಸಿತವಾಗದ ಹೊರತು ಜಾಗತಿಕ ಆರ್ಥಿಕತೆಗೆ ಹಿಡಿದಿರುವ ಗ್ರಹಣ ಸದ್ಯಕ್ಕೆ ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಇಂಗ್ಲೆಂಡ್ ಜಾಗತಿಕ ಆರ್ಥಿಕ ಕುಸಿತದ ಮೊದಲ ತುತ್ತು , ಚೀನಾದ ರಹಸ್ಯ ಕುಸಿತದ ಕಥೆ ಹೊರ ಬಂದರೆ ಕಾದಿದೆ ಇನ್ನಷ್ಟು ಆಪತ್ತು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com