ಆರ್ಥಿಕತೆಯಲ್ಲಿ ಬ್ರಿಟನ್ ಹಿಂದಿಕ್ಕಿದ ಭಾರತ: ನಿಜಕ್ಕೂ ಜಿಡಿಪಿ ನಮ್ಮ ಅಭಿವೃದ್ಧಿಯ ಮಾನದಂಡವೇ? (ಹಣಕ್ಲಾಸು)

ಹಣಕ್ಲಾಸು-325-ರಂಗಸ್ವಾಮಿ ಮೂಕನಹಳ್ಳಿ
ಜಿಡಿಪಿ (ಸಂಗ್ರಹ ಚಿತ್ರ)
ಜಿಡಿಪಿ (ಸಂಗ್ರಹ ಚಿತ್ರ)

ನಾವು ಭಾರತೀಯರು ಅತಿ ಭಾವುಕರು. ಈ ಮಾತು ಹೇಳಲು ಕಾರಣ ಹಲವಾರು ಪತ್ರಿಕೆಗಳು ಭಾರತ, ಇಂಗ್ಲೆಂಡ್ ದೇಶವನ್ನ ಜಿಡಿಪಿಯಲ್ಲಿ ಹಿಂದಿಕ್ಕಿ ಜಗತ್ತಿನ 5 ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎನ್ನುವುದನ್ನ ಅತಿ ರಂಜಿತವಾಗಿ ಬರೆದಿದ್ದಾರೆ. ದೇಶದ ಅಗ್ರಮಾನ್ಯ ಬ್ಯಾಂಕ್ ಎಸ್ ಬಿಐ ಮಾಡಿರುವ ಅಂದಾಜಿನ ಪ್ರಕಾರ ಭಾರತ 2027ರ ವೇಳೆಗೆ ಜರ್ಮನಿಯನ್ನ ಕೂಡ ಹಿಂದಕ್ಕೆ ಹಾಕುವ ಸಾಧ್ಯತೆಯಿದೆ, ಜಪಾನ್ ದೇಶವನ್ನ 2029ರ ವೇಳೆಗೆ ಹಿಂದಿಕ್ಕಿ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನವನ್ನ ಏರುವ ಸಾಧ್ಯತೆಯಿದೆ. 2022ನೇ ಇಸವಿಯ ಮೊದಲ ತ್ರೈಮಾಸಿಕ ಜಿಡಿಪಿ  ಭಾರತದಲ್ಲಿ 13.5 ಎನ್ನುತ್ತದೆ ಅಂಕಿ-ಅಂಶ. ಇದೆ ವೇಗದಲ್ಲಿ ಭಾರತ ಮುಂದುವರೆದರೆ ನಿಗದಿತ ಸಮಯಕ್ಕಿಂತ ಮುಂಚೆಯೇ ಜರ್ಮನಿ ಮತ್ತು ಜಪಾನ್ ದೇಶಗಳನ್ನ ಹಿಂದಿಕ್ಕುವ ಸಾಧ್ಯತೆಯಿದೆ. ಅಲ್ಲಿಗೆ ನಮಗಿಂತ ಮುಂದೆ ಚೀನಾ ಮತ್ತು ಅಮೇರಿಕಾ ದೇಶಗಳು ನಿಂತಿರುತ್ತವೆ.

ಹಾಗೊಮ್ಮೆ ಮತ್ತೆ ಜಿಡಿಪಿ ಕುಸಿತ ಉಂಟಾದರೂ ಅಂದರೆ ಆರೂವರೆಯಿಂದ ಏಳೂವರೆಯ ಗ್ರೋಥ್ ರೇಟ್ ಇದ್ದರೂ ಜರ್ಮನಿ ಮತ್ತು ಜಪಾನ್ ದೇಶವನ್ನ ಹಿಂದಿಕ್ಕಿ ಮುಂದೋಗುವುದು ಕಷ್ಟವೇನಲ್ಲ. ಇದೆಲ್ಲ ಸತ್ಯ ಮತ್ತು ಸಾಧ್ಯ ಎನ್ನುವುದಾದರೆ ಇದರಲ್ಲಿ ಅತಿ ರಂಜಿತವಾಗಿ ಹೇಳಿರುವುದಾದರೂ ಏನನ್ನ? ಎನ್ನುವ ಪ್ರಶ್ನೆ ಉದ್ಭವಾಗುತ್ತದೆ. ಗಮನಿಸಿ ನೋಡಿ ಅಮೇರಿಕಾ ದೇಶದ ಜನಸಂಖ್ಯೆ 33ಕೋಟಿ , ಜರ್ಮನಿಯ ಜನಸಂಖ್ಯೆ 8.4 ಕೋಟಿ, ಜಪಾನ್ ದೇಶದ ಜನಸಂಖ್ಯೆ 12.56 ಕೋಟಿ , ಇಂಗ್ಲೆಂಡ್ (ಯುನೈಟೆಡ್ ಕಿಂಗ್ಡಮ್ )ಜನಸಂಖ್ಯೆ 6.86 ಕೋಟಿ. ಈ ಜನಸಂಖ್ಯೆ 6 ನೇ ಸೆಪ್ಟೆಂಬರ್ 2022ನೇ ಇಸವಿಯದ್ದು, ಅಂದರೆ ಇಂದಿಗೆ ಕೇವಲ ಒಂದು ದಿನ ಹಿಂದಿನ ಜನಸಂಖ್ಯೆ. ಭಾರತದ ನಿಖರ ಜನಸಂಖ್ಯೆ ಯಾರಿಗೂ ಗೊತ್ತಿಲ್ಲ. ಅಂದಾಜಿನ ಪ್ರಕಾರ ಇದು 140 ಕೋಟಿ ಮೀರಿದೆ.

ಆರೂವರೆ ಕೋಟಿ ಜನಸಂಖ್ಯೆಯ ಪುಟಾಣಿ ದೇಶದ ಜಿಡಿಪಿಯನ್ನ ಹಿಂದಿಕ್ಕಿದೆವು ಎಂದು ಹಿಗ್ಗುವಂತಿಲ್ಲ. ನೆನಪಿರಲಿ ನಾವು ಸೇಬು ಹಣ್ಣನ್ನ ಕಲ್ಲಗಂಡಿ ಹಣ್ಣಿಗೆ ಎಂದೂ ಹೋಲಿಸಬಾರದು. ಗಾತ್ರದಲ್ಲಿ, ಜನಸಂಖ್ಯೆಯಲ್ಲಿ ನಮಗೆ ಸರಿಸಮನಾಗಿ ನಿಲ್ಲುವ ಚೀನಾದ ಆರ್ಥಿಕತೆ ನಮಗಿಂತ ಹತ್ತಿರತ್ತಿರ ಆರು ಪಟ್ಟು ದೊಡ್ಡದು. ಭಾರತದ ಆರ್ಥಿಕತೆ 3 ಟ್ರಿಲಿಯನ್ ಮೀರಿದೆ, ಚೀನಾ 18 ಟ್ರಿಲಿಯನ್ ಆಜುಬಾಜಿನಲ್ಲಿದೆ. ಅಮೇರಿಕಾ 24 ಟ್ರಿಲಿಯನ್ ಆರ್ಥಿಕತೆಯೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಈಗ ಹೇಳಿ ನಮ್ಮ ಮುಂದಿರುವ ಸವಾಲು ಎಷ್ಟು ದೊಡ್ಡದು? ನಾವು ಚೀನಾ ಮತ್ತು ಅಮೆರಿಕವನ್ನ ಮೀರಿ ಬೆಳೆಯುವುದು ಒಂದೆಡೆಯಿರಲಿ ಅವರ ಸನಿಹಕ್ಕೆ ಬರಲು ಕೂಡ ನಾವು ಪಡಬೇಕಿರುವ ಕಷ್ಟದ ಅರಿವು ಬಹುತೇಕರಿಗೆ ಇದ್ದಂತಿಲ್ಲ. ಇದು ಹೇಳಿಕೇಳಿ ಕ್ರಿಕೆಟ್ ಸೀಸನ್ ಹೀಗಾಗಿ ಕ್ರಿಕೆಟ್ ಉದಾಹರಣೆಯನ್ನ ನೀಡುತ್ತೇನೆ. ಅಶಕ್ತ ಬಾಂಗ್ಲಾ, ಅಫ್ಘಾನ್ ತಂಡಗಳ ಮೇಲೆ ಆಟದಲ್ಲಿ ವಿಜಯ ಸಾಧಿಸಿ ಅದನ್ನ ಮಹತ್ ಸಾಧನೆ ಎಂದುಕೊಂಡಂತೆ ಇಂಗ್ಲೆಂಡ್ ಜಿಡಿಪಿಗಿಂತ ನಮ್ಮದು ಹೆಚ್ಚು ಎಂದು ಬೀಗುವುದು. ಹಾಗೆಂದು ಈ ವಿಜಯವನ್ನ ಸಂಭ್ರಮಿಸಬಾರದೇ? ಖಂಡಿತ ಸಂಭ್ರಮಿಸುವುದು ತಪ್ಪಲ್ಲ. ಆದರೆ ಅದು ಮಹತ್ಸಾಧನೆ ಎನ್ನುವಂತೆ ಬಿಂಬಿಸುವುದು ಸಮಾಜಕ್ಕೆ ನೀಡುವ ತಪ್ಪು ಸಂದೇಶ.

ಜಿಡಿಪಿ ಎಂದರೇನು ಎನ್ನುವುದನ್ನ ನಾವು ತಿಳಿದುಕೊಳ್ಳೋಣ, ಜೊತೆಗೆ ಅದೇಕೆ ಜಿಡಿಪಿ ನಮ್ಮ ದೇಶದ ಅಭಿವೃದ್ಧಿಯ ಸರಿಯಾದ ಮಾನದಂಡವಲ್ಲ ಎನ್ನುವುದನ್ನ ಕೂಡ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಇವೆಲ್ಲವುಗಳನ್ನ ತಿಳಿದುಕೊಳ್ಳುವುದು ಜ್ಞಾನದ ದೃಷ್ಟಿಯಿಂದ ಮಾತ್ರ, ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಪೂರ್ಣವಾಗಿ ಜಿಡಿಪಿ ಮೌಲ್ಯವನ್ನ ಹೇಳಲು ಆಗುವುದೇ ಇಲ್ಲ ಥೇಟ್ ನಮ್ಮ ಜನಸಂಖ್ಯೆಯಂತೆ! ಇರಲಿ

ಜಿಡಿಪಿ ಎಂದರೇನು?

ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ ಎನ್ನುವುದರ ಪ್ರಥಮ ಅಕ್ಷರಗಳನ್ನ ಜೋಡಿಸಿ ಜಿಡಿಪಿ ಎಂದಿದ್ದಾರೆ. ನಿಗದಿತ ಸಮಯದಲ್ಲಿ , ನಿಗದಿತ ಪ್ರದೇಶದಲ್ಲಿ ಆದ ಎಲ್ಲಾ ವಹಿವಾಟು ಅಂದರೆ ಸೇವೆ ಮತ್ತು ಸರುಕಿನ ಒಟ್ಟು ಮೌಲ್ಯವನ್ನ ಜಿಡಿಪಿ ಎನ್ನಲಾಗುತ್ತದೆ. ಸಾಮಾನ್ಯವಾಗಿ ನಿಗದಿತ ಸಮಯ ಎಂದರೆ 12 ತಿಂಗಳು ಅಥವಾ ಒಂದು ವರ್ಷ, ನಿಗದಿತ ಪ್ರದೇಶ ಎಂದರೆ ಆಯಾ ದೇಶಗಳು ಎಂದರ್ಥ. ಹೀಗೆ ಒಂದು ವರ್ಷದಲ್ಲಿ ಭಾರತದ ಉದ್ದಗಲಕ್ಕೂ ಆದ ಎಲ್ಲಾ ವ್ಯಾಪಾರದ ಅಂದರೆ ಸೇವೆ ನೀಡುವುದು ಮತ್ತು ಸರಕು ಮಾರಾಟ ಇವುಗಳ ಒಟ್ಟು ಮೌಲ್ಯವನ್ನ ಜಿಡಿಪಿ ಎನ್ನುತ್ತಾರೆ. ಇದರಿಂದ ಆ ಸಮಾಜ ಅಥವಾ ದೇಶ ಎಷ್ಟು ದೊಡ್ಡದು ಎನ್ನುವುದನ್ನ ಲೆಕ್ಕಾಚಾರ ಮಾಡುತ್ತಾರೆ.

ಜಿಡಿಪಿ ಏಕೆ ಸರಿಯಾದ ಮಾನದಂಡವಲ್ಲ ಎನ್ನುವುದನ್ನ ವಿವರವಾಗಿ ನೋಡೋಣ 'ಗ್ರಾಸ್' ಎಂದರೆ ಒಮ್ಮೆ ಒಂದು ವಸ್ತುವಿನ ಮಾರಾಟದ ಬಿಲ್ ಆದರೆ ಅದನ್ನ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಉಳಿದಂತೆ ಆ ವಸ್ತುವನ್ನ ನೀವು ಬಳಸಿದಿರೋ ಅಥವಾ ಇಲ್ಲವೋ ಎನ್ನುವುದನ್ನ ಗಣನೆಗೆ ತೆಗೆದುಕೊಳ್ಳುವುದಿಲ್ಲ. 'ಡೊಮೆಸ್ಟಿಕ್'  ಎಂದರೆ ಭಾರತೀಯ ನೆಲದಲ್ಲಿ ಆದ ವಹಿವಾಟು ಎಂದರ್ಥ. ಅಂದರೆ ಗಮನಿಸಿ ಜರ್ಮನಿಯ ಅಥವಾ ಜಪಾನಿನ ಸಂಸ್ಥೆಯೊಂದು ಭಾರತದಲ್ಲಿ ತನ್ನ ವಸ್ತುವನ್ನ ತಯಾರಿಸಿ ಮಾರಿದರೆ ಅದನ್ನ ಭಾರತದ ಜಿಡಿಪಿಗೆ ಸೇರಿಸಲಾಗುತ್ತದೆ. ಅದರ ಲಾಭ ಯಾವ ದೇಶಕ್ಕಾಯ್ತು ಎನ್ನುವುದನ್ನ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇದು ಹೇಗಾಯ್ತು ಎಂದರೆ ಕರ್ನಾಟಕದಲ್ಲಿ ಹುಟ್ಟಿದ ಮಕ್ಕಳ್ಳೆಲ್ಲ ಕನ್ನಡಿಗರು ಎಂದಹಾಗೆ , ನೀವೇನೋ ಹೇಳಿದಿರಿ , ಹಾಗೆ ಲೆಕ್ಕವನ್ನ ಬರೆದುಕೊಂಡಿರಿ ಸರಿ ಆದರೆ ಮಕ್ಕಳ ಹೆತ್ತವರು ಏನು ಅಂದುಕೊಂಡಿದ್ದಾರೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಹೀಗಾಗಿ ಮೂಲ ಲೆಕ್ಕಾಚಾರದಲ್ಲೇ ತಪ್ಪಿದೆ.

ಇನ್ನೊಂದು ಮುಖ್ಯ ವಿಚಾರವನ್ನ ನೀವೆಲ್ಲ ನೋಡಿರುತ್ತೀರಿ , ಅದಕ್ಕೆ ಖಂಡಿತ ಸಾಕ್ಷಿಯಾಗಿರುತ್ತೀರಿ. ಯಾವೆಲ್ಲ ವ್ಯವಹಾರಗಳು ಬ್ಯಾಂಕಿನ ಮೂಲಕ ಆಗಿರುತ್ತದೆ ಅದನ್ನ ಮಾತ್ರ ಜಿಡಿಪಿ ಲೆಕ್ಕಕ್ಕೆ ಬರೆಯಲಾಗುತ್ತದೆ. ನಗದು ರೂಪದಲ್ಲಿ ಆದ ವಹಿವಾಟು ಜಿಡಿಪಿಯ ಲೆಕ್ಕಕ್ಕೆ ಬರುವುದಿಲ್ಲ. ಭಾರತದ ಪ್ರತಿಯೊಂದು ನೋಂದಾವಣಿ ಕಛೇರಿಯಲ್ಲಿ ಪ್ರತಿನಿತ್ಯ ಲಕ್ಷಾಂತರ ಆಸ್ತಿ ನೋಂದಾವಣಿಯಾಗುತ್ತದೆ. ಸರಕಾರ ನಿಗದಿ ಪಡಿಸಿರುವ ಮೌಲ್ಯಕ್ಕೆ ಅವು ನೋಂದಾವಣಿ ಆಗುತ್ತದೆ. ಆದರೆ ಮಾರುಕಟ್ಟೆ ಮೌಲ್ಯ ಬೇರೆಯದೇ ಇರುತ್ತದೆ. ಉದಾಹರಣೆ ನೋಡಿ ಒಂದು ಮನೆಯನ್ನ ಐವತ್ತು ಲಕ್ಷಕ್ಕೆ ನೊಂದಾವಣಿ ಮಾಡಿಸಿಕೊಳ್ಳುತ್ತಾರೆ. ಉಳಿದ ೪೦ ಅಥವಾ ೫೦ ಲಕ್ಷವನ್ನ ನಗದು ರೂಪದಲ್ಲಿ ನೀಡುತ್ತಾರೆ. ಹೀಗಾಗಿ ಜಿಡಿಪಿ ಲೆಕ್ಕದಲ್ಲಿ ನೋಂದಣಿಯಾದ ಹಣ ಜಮೆಯಾಗುತ್ತದೆ. ಉಳಿದದ್ದು ಹಿಡನ್ . ನಮ್ಮ ಸಮಾಜದಲ್ಲಿ ದೊಡ್ಡ ಹಿಡನ್ ಆರ್ಥಿಕತೆಯಿದೆ. ಆಸ್ತಿ ನೋಂದಾವಣಿ ಕೇವಲ ಒಂದು ಉದಾಹರಣೆ ಮಾತ್ರ ಹೀಗೆ ನೀವು ಎಲ್ಲಾ ವ್ಯಾಪಾರ ವಹಿವಾಟಿನಲ್ಲೂ ನಗದು ವ್ಯಾಪಾರವನ್ನ ಕಾಣಬಹುದು. ಎಲ್ಲವೂ ನೋಂದಾಯಿತವಾದರೆ ಭಾರತ ವರ್ಷದಲ್ಲಿ 12/15 ಟ್ರಿಲಿಯನ್ ಆರ್ಥಿಕತೆಯಾಗಿ ಹೊರಹೊಮ್ಮುತ್ತದೆ. ಇದು ಎಲ್ಲರಿಗೂ ಗೊತ್ತಿರುವುದು ಆದರೆ ಎಲ್ಲರಿಗೂ ಜಾಣ ಕಿವುಡು , ಕುರುಡು.

ಕೇವಲ ಜನಸಂಖ್ಯೆಯಂತ ವಿಷಯದಲ್ಲಿ ನಮಗೆ ನಿಖರತೆಯಿಲ್ಲ , ಇನ್ನು ಈ ಮಟ್ಟದಲ್ಲಿ ಸಮಾಜದಲ್ಲಿ ಬೇರು ಬಿಟ್ಟಿರುವ ಹಿಡನ್ ಆರ್ಥಿಕತೆಯನ್ನ ಮುಖ್ಯವಾಹಿನಿ ಆರ್ಥಿಕತೆಯನ್ನಾಗಿ ಬದಲಿಸುವುದು ಕಷ್ಟಸಾಧ್ಯ. ಈ ಎಲ್ಲಾ ಕಾರಣದಿಂದ ಜಿಡಿಪಿ ನಮ್ಮ ದೇಶದ ಅಭಿವೃದ್ಧಿ ಅಳೆಯುವ ಮಾನದಂಡವಾಗಲು ಸಾಧ್ಯವಿಲ್ಲ. ಈಗ ನೀವೇ ಗಮನಿಸಿ ನೋಡಿ ಹೇಳಿ ಅದೇಕೆ ಜರ್ಮನಿ , ಜಪಾನ್ , ಇಗ್ಲೆಂಡ್ , ಸ್ಪೇನ್ , ಫ್ರಾನ್ಸ್ ನಂತಹ ಕೆಲವು ಕೋಟಿ ಜನಸಂಖ್ಯೆ ಹೊಂದಿದ ದೇಶಗಳು ಅಷ್ಟು ದೊಡ್ಡ ಜಿಡಿಪಿ ಹೊಂದಿವೆ ? ಅಲ್ಲಿ ಎಲ್ಲವೂ ನೋಂದಾಯಿತವಾಗುತ್ತದೆ , ಎಲ್ಲವೂ ಮುಖ್ಯವಾಹಿನಿ ಆರ್ಥಿಕತೆಯ ಲೆಕ್ಕದಲ್ಲಿ ಬರುತ್ತದೆ . ಅದಕ್ಕೆ ಆ ದೇಶಗಳು ಜಿಡಿಪಿ ಲೆಕ್ಕಾಚಾರದಲ್ಲಿ ನಮಗಿಂತ ಬಲಿಷ್ಠವಾಗಿವೆ. ಭಾರತದಲ್ಲಿ ಕಟ್ಟಡ ಕೂಲಿ ಕಾರ್ಮಿಕರಿಗೆ , ಹೋಟೆಲ್ ಕಾರ್ಮಿಕರಿಗೆ ವೇತನ ಸಾಮಾನ್ಯವಾಗಿ ನಗದಿನಲ್ಲಿ ನೀಡಲಾಗುತ್ತದೆ. ಈ ವಲಯಗಳಲ್ಲಿ ಕೆಲಸ ಮಾಡುವ ಕೋಟ್ಯಂತರ ಮಂದಿಯ ವೇತನ ಮುಖ್ಯವಾಹಿನಿ ಆರ್ಥಿಕತೆಯ ಲೆಕ್ಕದಲ್ಲಿ ಬರುವುದೇ ಇಲ್ಲ !! ಆ ಅರ್ಥದಲ್ಲಿ ಒಂದು ಇಂಗ್ಲೆಂಡ್ ದೇಶದ ಒಟ್ಟು ಜನಸಂಖ್ಯೆಗಿಂತ ಹೆಚ್ಚಿನ ಜನರ ಮಾಸಿಕ ಆದಾಯವನ್ನ ನಾವು ಲೆಕ್ಕಕ್ಕೆ ಇಲ್ಲಿ ತೆಗೆದುಕೊಳ್ಳುವುದಿಲ್ಲ.

ಹೀಗಾಗಿ ಇಂಗ್ಲೆಂಡ್ ದೇಶವನ್ನ ಜಿಡಿಪಿಯಲ್ಲಿ ಹಿಂದಿಕ್ಕಿದೆವು  ಇನ್ನು ನಾಲ್ಕೈದು ವರ್ಷದಲ್ಲಿ ಜರ್ಮನಿ ಮತ್ತು ಜಪಾನ್ ದೇಶವನ್ನ ಕೂಡ ಮೀರಿಸುತ್ತೇವೆ ಎನ್ನುವುದು ಅಂಕಿಸಂಖ್ಯೆಯ ಹೋಲಿಕೆಯಲ್ಲಿ ಬೀಗಬಹುದಾದ ಅಂಶವೇ ಹೊರತು ನಿಜ ಅರ್ಥದಲ್ಲಿ ಬೀಗುವಂತದ್ದು ಏನೂ ಇಲ್ಲ. ಏಕೆಂದರೆ ಮತ್ತೊಮ್ಮೆ ಅದನ್ನೇ ಉಚ್ಛರಿಸುವೆ ಜಿಡಿಪಿ ಭಾರತದ ಆರ್ಥಿಕತೆಯನ್ನ ಅಳೆಯಲು ಬಳಸುವ ಸರಿಯಾದ ಮಾನದಂಡವಲ್ಲ.

ಕೊನೆ ಮಾತು: ಹಾಗಾದರೆ ಭಾರತದ ಅಭಿವೃದ್ದಿಯನ್ನ ಅಳೆಯಲು ಸರಿಯಾದ ಮಾನದಂಡ ಯಾವುದು ಎನ್ನುವ ಪ್ರಶ್ನೆ ಓದುಗರಲ್ಲಿ ಉದ್ಭವಾಗಿರುತ್ತದೆ. ಗಮನಿಸಿ ಒಂದು ದೇಶದಂತೆ ಒಂದು ದೇಶವಿಲ್ಲ , ಪ್ರತಿ ದೇಶದ ಮುಂದಿನ ಸವಾಲು ಮತ್ತು ಅವಕಾಶ ಎರಡೂ ಬೇರೆ ಬೇರೆ ಹೀಗಾಗಿ ಒಂದರ ಜೊತೆಗೆ ಇನ್ನೊಂದರ ಹೋಲಿಕೆಯೇ ತಪ್ಪು. ಎಲ್ಲಿಯವರೆಗೆ ನಮ್ಮ ಹಣದ ಆಂತರಿಕ ಕೊಳ್ಳುವ ಶಕ್ತಿ ಹೆಚ್ಚಾಗಿರುತ್ತದೆ ಅಲ್ಲಿಯವರೆಗೆ ಆ ದೇಶ ಸಮೃದ್ಧವಾಗಿದೆ ಎಂದರ್ಥ, ಉದಾಹರಣೆ ನೋಡೋಣ . ಒಂದು ಡಾಲರ್ ಗೆ ಭಾರತೀಯ ೮೦ ರೂಪಾಯಿ ನೀಡಬೇಕು. ಒಂದು ಡಾಲರ್ನಲ್ಲಿ ಅಮೇರಿಕಾದಲ್ಲಿ ಒಂದು ಕಾಫಿ ಕೂಡ ಕೊಳ್ಳಲು ಸಾಧ್ಯವಿಲ್ಲ , ಯೂರೋಪಿನ ಕಥೆ ಕೂಡ ಸೇಮ್ . ಅದೇ ೮೦ ರೂಪಾಯಿಯಲ್ಲಿ ಭಾರತದ ಬಹುತೇಕ ನಗರದಲ್ಲಿ ಪರವಾಗಿಲ್ಲ ಎನ್ನುವ ಮಧ್ಯಮ ಮಟ್ಟದ ಹೋಟೆಲ್ನಲ್ಲಿ ಊಟ ಖಂಡಿತ ಸಿಗುತ್ತದೆ. ಇದು ನಮ್ಮ ಆಂತರಿಕ ಕೊಳ್ಳುವ ಶಕ್ತಿಯನ್ನ ಸೂಚಿಸುತ್ತದೆ. ಆಂತರಿಕ ಖರೀದಿ ಶಕ್ತಿಯ ಲೆಕ್ಕಾಚಾರದಲ್ಲಿ ನಾವು ಯೂರೋಪು ಮತ್ತು ಅಮೆರಿಕೆಗಳಿಗಿಂತ ಹೆಚ್ಚು ಶಕ್ತಿಶಾಲಿ ದೇಶ ಎಂದು ಹೇಳಬಹುದು. ಆದರೆ ಈ ಲೆಕ್ಕಾಚಾರ ಬೇಕಿಲ್ಲ , ಅವರಿಗೇನಿದ್ದರೂ ಅವರು ಯಾವ ಆಟದಲ್ಲಿ ಗೆಲ್ಲುತ್ತಿದ್ದಾರೆ ಆ ಆಟವನ್ನ ಮುಂದುವರಿಸಲು ಇಚ್ಛಿಸುತ್ತಾರೆ. ನಾವೇಕೆ ಅವರ ತಾಳಕ್ಕೆ ಕುಣಿಯಬೇಕು ? ನಮಗೇಕೆ ಜಿಡಿಪಿಯ ಹಂಗು ? ಈಗ ಹೇಳಿ ಇಂಗ್ಲೆಂಡ್ ದೇಶ ಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆವು ಎಂದು ನಾವು ಬೀಗಬೇಕೇ ?

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com