ಭಾರತದ ಆರ್ಥಿಕತೆ ಕೂಡ ಕುಸಿತ ಕಾಣಲಿದೆಯೆ? (ಹಣಕ್ಲಾಸು)

ಹಣಕ್ಲಾಸು-319-ರಂಗಸ್ವಾಮಿ ಮೂಕನಹಳ್ಳಿ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಮೆರಿಕನ್ ಎಕಾನಮಿ ಮತ್ತೊಂದು ಕುಸಿತವನ್ನ ಕಾಣುತ್ತಿದೆ. ಹಣಕ್ಲಾಸು ಅಂಕಣದಲ್ಲಿ ಅಮೆರಿಕನ್ ಮತ್ತು ಚೀನಾ ಎಕಾನಾಮಿಯ ಬಗ್ಗೆ ಬರೆದಾಗೆಲ್ಲ ಅಲ್ಲಿಯವರ ಕಥೆಯನ್ನ ತೆಗೆದುಕೊಂಡು ನಮಗೇನಾಗಬೇಕು ? ಭಾರತದ ಕಥೆಯನ್ನ ಹೇಳಿ ಎನ್ನುವ ಮಾತುಗಳನ್ನ ಬಹಳಷ್ಟು ಬಾರಿ ಕೇಳಿದ್ದೇನೆ.

ಗಮನಿಸಿ, ಇಂದು ನಮ್ಮ ಸಮಾಜ ಬಹಳ ಅವಲಂಬಿತ ಸಮಾಜವಾಗಿದೆ. ನಾವು ಇಂದು ಅಮೇರಿಕಾ ಮತ್ತು ಚೀನಾ ದೇಶವನ್ನ ಬಿಟ್ಟು ನಮ್ಮ ಭವಿಷ್ಯವನ್ನ ಊಹಿಸಕೊಳ್ಳಲು ಕೂಡ ಸಾಧ್ಯವಿಲ್ಲದ ಹಂತವನ್ನ ತಲುಪಿದ್ದೇವೆ. ಆ ಮಟ್ಟಿನ ಅವಲಂಬನೆ ನಮ್ಮದು. ಹೀಗೆ ಹೇಳಲು ಪ್ರಮುಖ ಕಾರಣವನ್ನ ಉದಾಹರಣೆಯ ಮೂಲಕ ತಿಳಿದು ಕೊಳ್ಳುವ ಪ್ರಯತ್ನವನ್ನ ಮಾಡೋಣ.

ಈ ವರ್ಷ ಅಂದರೆ ೨೦೨೨ ರ ಅಂಕಿಅಂಶದ ಪ್ರಕಾರ ನಮ್ಮ ಜಾಗತಿಕ ಮಾರುಕಟ್ಟೆಯ ಮೌಲ್ಯ ೯೫ ಟ್ರಿಲಿಯನ್ ಡಾಲರ್. ಇದರಲ್ಲಿ ೨೩ ಟ್ರಿಲಿಯನ್ ಮೌಲ್ಯ ಕೇವಲ ಅಮೇರಿಕಾ ಒಂದು ದೇಶದಿಂದ ಬರುತ್ತದೆ, ಚೀನಾ  ೧೫, ಜಪಾನ್ ೫, ಜರ್ಮನಿ ೪, ಭಾರತ ಮತ್ತು ಬ್ರಿಟನ್ ತಲಾ ೩ ಟ್ರಿಲಿಯನ್ ಮೌಲ್ಯವನ್ನ ಹೊಂದಿವೆ. ಗಮನಿಸಿ ನೋಡಿ ಅಮೇರಿಕಾ ಮತ್ತು ಚೀನಾ ದೇಶದ ಒಟ್ಟು ಮೌಲ್ಯ ಜಗತ್ತಿನ ಒಟ್ಟು ಮೌಲ್ಯದ ೪೦ ಪ್ರತಿಶತವಾಗುತ್ತದೆ. ನಂತರದ ೮ ದೇಶಗಳ ಒಟ್ಟು ಮೌಲ್ಯ ೩೦ ಪ್ರತಿಶತವಾಗುತ್ತದೆ. ಅಂದರೆ ಪ್ರಥಮ ೧೦ ದೇಶಗಳ ಒಟ್ಟು ಮೌಲ್ಯ, ಜಾಗತಿಕ ಮೌಲ್ಯದ ೭೦ ಪ್ರತಿಶತವಾಗುತ್ತದೆ. ಉಳಿದ ೧೮೬ ದೇಶಗಳ ಮೌಲ್ಯ ೩೦ ಪ್ರತಿಶತವಾಗುತ್ತದೆ. ಬುದ್ದಿವಂತ ಓದುಗರಿಗೆ ಇದರ ಮಹತ್ವ ಅರ್ಥವಾಗಿರುತ್ತದೆ. ೨೦೨೨ ರ ಅಂತ್ಯದ ವೇಳೆಗೆ ಐಎಂಎಫ್ ಮಾಡಿದ್ದ ಲೆಕ್ಕಾಚಾರದ ಪ್ರಕಾರ ಜಾಗತಿಕ ಮಾರುಕಟ್ಟೆಯ ಮೌಲ್ಯ ೧೦೪ ಟ್ರಿಲಿಯನ್ ತಲುಪಬೇಕಾಗಿತ್ತು. ಆದರೆ ಅದು ೨೦೨೨ ಮತ್ತು ೨೦೨೩ ರಲ್ಲಿ ಕೂಡ ತಲುಪುವ ಸಾಧ್ಯತೆ ಇಂದಿನ ಮಟ್ಟಿಗೆ ಮಸುಕಾಗಿದೆ. ೨೦೩೦ ರ ವೇಳೆಗೆ ಚೀನಾ, ಅಮೇರಿಕಾ ದೇಶದ ಆರ್ಥಿಕತೆಯನ್ನ ಹಿಂದಿಕ್ಕಿ ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿಕೊಳ್ಳುತ್ತದೆ ಎನ್ನುವ ಲೆಕ್ಕಾಚಾರ ಕೂಡ ಇದರಿಂದ ಪೆಟ್ಟು ತಿನ್ನಲಿದೆ. ಈಗ ನಿಧಾನವಾಗಿ ಯೋಚಿಸಿ ನೋಡಿ , ಚೀನಾ ಮತ್ತು ಅಮೇರಿಕಾ ಆರ್ಥಿಕತೆ ಮಂದವಾದರೆ ಅದು ಭಾರತದ ಬೆಳವಣಿಗೆಗೂ ಬ್ರೇಕ್ ಹಾಕುತ್ತದೆಯೋ , ಇಲ್ಲವೋ ಎನ್ನುವ ಸರಳ ಸತ್ಯ ನಿಮಗೆ ತಿಳಿಯುತ್ತದೆ.

ಗಮನಿಸಿ ನೋಡಿ, ಜಗತ್ತು ಇನ್ನೊಂದು ಆರ್ಥಿಕ ಹಿಂಜರಿತವನ್ನ ತೆಗೆದು ಹಾಕಲು ಸಾಧ್ಯವಿಲ್ಲ ಎನ್ನುವ ಅಂಶ ನಮ್ಮ ಅರಿವಿಗೆ ಬರುತ್ತದೆ. ಈ ಮಧ್ಯೆ ವರ್ಲ್ಡ್ ಬ್ಯಾಂಕ್ ಮಾಡಿರುವ ಅಂದಾಜು ಅಭಿವೃದ್ಧಿ ಪ್ರಮಾಣ ಭಾರತದ ಮಟ್ಟಿಗೆ ಒಂದಷ್ಟು ಆಶಾಕಿರಣ ಎನ್ನುವುದು ತಿಳಿದು ಬರುತ್ತದೆ. ವರ್ಲ್ಡ್ ಬ್ಯಾಂಕ್ ಪ್ರಕಾರ ಈ ವರ್ಷ ಅಂದರೆ ೨೦೨೨ ರ ಅಂದಾಜು ಅಭಿವೃದ್ಧಿ ಪ್ರಮಾಣ ಈಸ್ಟ್ ಏಷ್ಯಾ ಪೆಸಿಫಿಕ್ ನಲ್ಲಿ ೪.೪ ಇರಲಿದೆ, ಯೂರೋಪು ಮತ್ತು ಸೆಂಟ್ರಲ್ ಏಷ್ಯಾ ದಲ್ಲಿ ಇದು ೨. ೯ ಪ್ರತಿಶತ ಇರಲಿದೆ, ಹಾಗೆಯೇ ಲ್ಯಾಟಿನ್ ಅಮೇರಿಕಾ ಮತ್ತು ಕೆರೆಬಿಯನ್ ದೇಶಗಳಲ್ಲಿ ಇದು ೨. ೫ ಪ್ರತಿಶತವಾಗಿರಲಿದೆ, ಮಿಡ್ಡೇಲ್ ಈಸ್ಟ್ ಮತ್ತು ನಾರ್ತ್ ಆಫ್ರಿಕಾ ದೇಶಗಳಲ್ಲಿ ಇದು ೫. ೩ ಇರಲಿದೆ, ಸಬ್ ಸಹಾರ ಆಫ್ರಿಕಾ ದೇಶಗಳಲ್ಲಿ 3.7 ಇರಲಿದೆ, ಇನ್ನು ಭಾರತವನ್ನ ಒಳಗೊಂಡ ಸೌತ್ ಏಷ್ಯಾ ದೇಶಗಳ ಅಭಿವೃದ್ಧಿ ಮಾಪಕ 6.8 ಎನ್ನಲಾಗಿದೆ. ಇವುಗಳನ್ನ ಆಧಾರವಾಗಿ ತೆಗೆದುಕೊಂಡರೆ ಜಗತ್ತಿನ ಯಾವ ದೇಶವೂ ಅಂದರೆ ಚೀನಾ ಮತ್ತು ಅಮೇರಿಕಾ ದೇಶಗಳನ್ನ ಸೇರಿಸಿಕೊಂಡು ಎಲ್ಲಾ ದೇಶಗಳಿಗಿಂತ ಹೆಚ್ಚಿನ ವೇಗದಲ್ಲಿ ಅಭಿವೃದ್ಧಿಯಾಗುತ್ತದೆ ಎನ್ನುವುದು ವೇದ್ಯ. ಆದರೆ ಈ ಸಂಖ್ಯೆ ಮತ್ತು ಜಗತ್ತಿನ ಇತರ ದೇಶಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಅಂಶ ನೆಮ್ಮದಿಯಾಗಿರಲು ಸಾಕೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಉತ್ತರ ಇಲ್ಲ ಎನ್ನುವುದು ಕೂಡ ಭಾರತೀಯ ಆರ್ಥಿಕತೆಯನ್ನ ಅಧ್ಯಯನ ಮಾಡುತ್ತಿರುವವರಿಗೆ ತಿಳಿದಿರುತ್ತದೆ.

ಭಾರತದ ಆರ್ಥಿಕತೆ ಕೂಡ ಕುಸಿತದ ಹಾದಿಯಲ್ಲಿದೆ, ಮುಂಬರುವ ೧೦/೧೨ ತಿಂಗಳಲ್ಲಿ ನಮ್ಮ ಆರ್ಥಿಕತೆ ಕೂಡ ಕುಸಿತ ಕಾಣುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ಇಂದಿನ ದಿನಗಳಲ್ಲಿ ನಡೆಯುತ್ತಿರುವ ಕೆಳಗಿನ ಅಂಶಗಳನ್ನ ಒಮ್ಮೆ ಗಮನಿಸೋಣ.

೧) ಭಾರತೀಯ ಟೆಕ್ ಕಂಪನಿಗಳು ಮುಂಬರುವ ತಿಂಗಳುಗಳಲ್ಲಿ ಕುಸಿತವನ್ನ ಮನಗಂಡು ಖರ್ಚನ್ನ ಕಡಿಮೆ ಮಾಡುವುದಾಗಿ ಹೇಳಿಕೊಂಡಿವೆ. ಅಮೇರಿಕಾ ಮತ್ತು ಯೂರೋಪು ಮೂಲದ ೧೪೨ ಟೆಕ್ ಕಂಪನಿಗಳು ಮುಂಬರುವ ೧೨/೧೮ ತಿಂಗಳಲ್ಲಿ ೩೫ ರಿಂದ ೩೮ ಪ್ರತಿಶತ ಕುಸಿತವನ್ನ ಅಂದಾಜಿಸುತ್ತಿವೆ.

೨) ಜೆಪಿ ಮಾರ್ಗನ್ ನೀಡಿರುವ ವರದಿಯ ಪ್ರಕಾರ ಐಟಿ ಕಂಪನಿಗಳಲ್ಲಿ ಹೊಸ ಖರೀದಿ ೪೦ ಪ್ರತಿಶತ ಕಡಿಮೆಯಾಗಲಿದೆ , ವಿಪ್ರೊ , ಇನ್ಫೋಸಿಸ್, ಮತ್ತು ಟಿಸಿಎಸ್ ಸಂಸ್ಥೆಗಳು ಖರ್ಚು ಕಡಿಮೆ ಮಾಡುವುದರ ಜೊತೆಗೆ ಹೊಸ ಉದ್ಯೋಗಿಗಳನ್ನ ಸೇರಿಸಿಕೊಳ್ಳುವ ತಮ್ಮ ವೇಗಕ್ಕೂ ಕಡಿವಾಣ ಹಾಕಲಿವೆ.

೩) ಭಾರತೀಯ ನವೋದ್ದಿಮೆಗಳು ಭಾರಿ ಹೊಡೆತವನ್ನ ಆಗಲೇ ತಿನ್ನುತ್ತಿವೆ. ಐಎನ್ಸಿ ೪೨ ಎನ್ನುವ ಒಂದು ವೆಬ್ಸೈಟ್ , ಮೂಲತಃ ಇದು ಸ್ಟಾರ್ಟ್ ಅಪ್ಗಳ ಎಲ್ಲಾ ವಿದ್ಯಮಾನವನ್ನ ಕೂಲಂಕುಷವಾಗಿ ಪರಿಶಿಸುತ್ತದೆ, ಈ ವೆಬ್ ಸೈಟ್ ವರದಿ ಪ್ರಕಾರ ಜುಲೈ ೧೪, ೨೦೨೨ ರ ಒಳಗೆ ಹತ್ತಿರತ್ತಿರ ೧೨ ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲಾಗಿದೆ.

೩) ಇಂಡಸ್ಟ್ರಿ ತಜ್ಞರ ಪ್ರಕಾರ ಈ ನೋವು ಇಲ್ಲಿಗೆ ನಿಲ್ಲುವುದಿಲ್ಲ, ಅವರು ಹೇಳುತ್ತಾರೆ ಮುಂಬರುವ ತಿಂಗಳುಗಳಲ್ಲಿ ಇನ್ನೂ ಅರವತ್ತು ಸಾವಿರ ಉದ್ಯೋಗಿಗಳು ಕೆಲಸವನ್ನ ಕಳೆದು ಕೊಳ್ಳಲಿದ್ದಾರೆ. ನಾವೀಗ ಜುಲೈ ಅಂತ್ಯದಲ್ಲಿದ್ದೇವೆ, ಇಲ್ಲಿಯವರೆಗೆ ೧೨ ಸಾವಿರ ಉದ್ಯೋಗ ಕಡಿತವಾಗಿದೆ, ೨೦೨೨ ರ ಡಿಸೆಂಬರ್ ವೇಳೆಗೆ ಇನ್ನೂ ೬೦ ಸಾವಿರ ಉದ್ಯೋಗ ಕಡಿತವಾಗಲಿದೆ. ಗಮನಿಸಿ ಇದು ಕೇವಲ ೨೦೨೨ ರ ಲೆಕ್ಕಾಚಾರ, ೨೦೨೩ ರ ಲೆಕ್ಕ ಬೇರೆಯಿದೆ.

೪) ನವೋದ್ದಿಮೆಗಳಲ್ಲಿ ಹೆಸರು ಮಾಡಿರುವ ಓಲಾ , ವೇದಂತು , ಆನ್ ಅಕಾಡೆಮಿ , ಕಾರ್ಸ್ ೨೪ , ಲಿಡೋ ಲರ್ನಿಂಗ್ ಇತ್ಯಾದಿ ಜನಪ್ರಿಯ ಮತ್ತು ಯಶಸ್ವಿ ನವೋದ್ಧಿಮೆ ಸಂಸ್ಥೆಗಳು  ಈಗಾಗಲೇ ತಮ್ಮ ಕೆಲಸಗಾರರಿಗೆ ಬಾಗಿಲು ತೋರಿಸುವ ಕೆಲಸವನ್ನ ಮಾಡುತ್ತಿವೆ.

೫) ಜಾಗತಿಕ ಮಟ್ಟದ ಹಣದುಬ್ಬರದ ಖೆಡ್ಡಾಗೆ ಭಾರತ ಕೂಡ ಬಿದ್ದಿರುವುದು ಏರುತ್ತಿರುವ ಬೆಲೆಗಳಿಂದ ವೇದ್ಯವಾಗಿದೆ. ಸರಕಾರ ಮತ್ತು ಆರ್ಬಿಐ ಮಾಡುತ್ತಿರುವ ಎಲ್ಲಾ ಕಸರತ್ತುಗಳನ್ನ ಮೀರಿ ಏರುತ್ತಿರುವ ಹಣದುಬ್ಬರ, ಆರ್ಥಿಕತೆ ಕುಸಿತದ ಮುನ್ಸೂಚನೆಯಾಗಿದೆ.

೬) ಡಾಲರ್ನೊಂದಿಗಿನ ವಿನಿಮಯ ಲೆಕ್ಕಾಚಾರದಲ್ಲಿ ಕುಸಿತ ಕಾಣುತ್ತಿರುವ ರೂಪಾಯಿ ಮತ್ತು ಜಾಗತಿಕ ಮಟ್ಟದಲ್ಲಿ ಏರುಪೇರಾಗುತ್ತಿರುವ ಕಚ್ಚಾ ತೈಲಬೆಲೆ ಇವೆರೆಡೂ ಭಾರತವನ್ನ ಮುಂಬರುವ ತಿಂಗಳುಗಳು ಇನ್ನಷ್ಟು ಭಾದಿಸಲಿವೆ. ಹಣದುಬ್ಬರ ಕಡಿಮೆಯಾಗುವ ಸಾಧ್ಯತೆಯನ್ನ ಇದು ಕಡಿಮೆ ಮಾಡುತ್ತದೆ. ಇದು ಭಾರತೀಯ ಆರ್ಥಿಕತೆಗೆ ಒಳ್ಳೆಯದಲ್ಲ.

ಹಣದುಬ್ಬರ ಹೆಚ್ಚಾಗಿದ್ದು, ಯಾವುದೇ ಸರುಕು ಅಥವಾ ಸೇವೆಯ ಮೇಲಿನ ಬೇಡಿಕೆ ಇನ್ನಿಲ್ಲದೆ ಕುಸಿದಿದ್ದು ,ನಿರುದ್ಯೋಗ ಹೆಚ್ಚಾಗಿರುವ ಆರ್ಥಿಕತೆಯನ್ನ ಸ್ಟಾಗ್ ಫ್ಲೇಶನ್ ಎನ್ನುತ್ತಾರೆ. ಇದನ್ನ ಸರಳವಾಗಿ ಹೇಳಬೇಕೆಂದರೆ ವಸ್ತು ಮತ್ತು ಸೇವೆಯ ಮೇಲಿನ ಬೇಡಿಕೆ ಕುಸಿತವಾಗಿದ್ದರೂ ಕೂಡ ಅವುಗಳ ಮೇಲಿನ ಬೆಲೆಯಲ್ಲಿ ಯಾವುದೇ ಕುಸಿತವಾಗುವುದಿಲ್ಲ, ಬದಲಿಗೆ ಅವುಗಳ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಇದರ ಜೊತೆಗೆ ಜನರ ಬಳಿ ಖರ್ಚಿಗೆ ಹಣ ಇರುವುದಿಲ್ಲ, ಹೀಗಾಗಿ ಸಹಜವಾಗಿ ಬೇಡಿಕೆಯಲ್ಲಿ ಕುಸಿತವಾಗುತ್ತದೆ. ಜನರ ಬಳಿ ಕೆಲಸವಿಲ್ಲದ ಕಾರಣ ಅವರ ಆದಾಯದಲ್ಲಿ ಕುಸಿತವಾಗುತ್ತದೆ. ಸಾಮಾನ್ಯವಾಗಿ ಜನರ ಬಳಿ ಹಣ ಇಲ್ಲದ ಸಮಯದಲ್ಲಿ ಬೇಡಿಕೆ ಕುಸಿತವಾಗದರೆ, ಬೆಲೆ ಕೂಡ ಕುಸಿಯಬೇಕು. ಆದರೆ ಬೆಲೆಯಲ್ಲಿ ಕುಸಿತವಾಗುವ ಬದಲು ಬೆಲೆ ಹೆಚ್ಚಳವಾಗುವ ಇಂತಹ ವಿಚಿತ್ರ ಆರ್ಥಿಕ ಘಟ್ಟವನ್ನ ಸ್ಟಾಗ್ ಫ್ಲೇಶನ್ ಎಂದು ಕರೆಯಲಾಗುತ್ತದೆ. ಭಾರತ ಈ ಘಟ್ಟವನ್ನ ಮುಂದಿನ ೧೨/೧೮ ತಿಂಗಳಲ್ಲಿ ತಲುಪಲಿದೆ.

ಕೊನೆಮಾತು: ಇಂತಹ ಸಮಯದಲ್ಲಿ ನಾವೇನು ಮಾಡುವುದು ಎನ್ನುವ ಮಾತು ಸಹಜವಾಗೇ ಕೇಳಿ ಬರುತ್ತದೆ. ಇಂತಹ ಸಮಯದಲ್ಲಿ ಜನ ಸಾಮಾನ್ಯರು ತಾಳ್ಮೆಯಿಂದ ಕಾಯುವುದು ಅತ್ಯುತ್ತಮ ಕೆಲಸ. ಅವರ ಪರಿಧಿಯನ್ನ ಮೀರಿದ ಹೂಡಿಕೆ, ಹೊಸ ವೆಂಚರ್ಗಳ ಸ್ಥಾಪಿಸುವ ಮುನ್ನ ಒಂದಷ್ಟು ಎಚ್ಚರಿಕೆವಹಿಸುವುದು ಒಳ್ಳೆಯದು. ಕರೋನ ನಂತರದ ಆರ್ಥಿಕತೆ ಕರೋನ ಸಮಯದ ಆರ್ಥಿಕತೆಗಿಂತ ಕಷ್ಟವಾಗಿರುತ್ತದೆ ಎನ್ನುವ ಅಂದಾಜು ನಿಜವಾಗುತ್ತಿದೆ. ೨೦೨೨/೨೩ ಇದೆ ರೀತಿ ಇರಲಿದ್ದು, ಆ ನಂತರ ಚೇತರಿಕೆಯ ಹಾದಿಯನ್ನ ತುಳಿಯಲಿದೆ. ಕತ್ತಲ ನಂತರ ಬೆಳಕು ಬರಲೇ ಬೇಕಲ್ಲವೇ? ಪ್ರತಿ ಕುಸಿತವೂ, ಮುಂದಿನ ಏರಿಕೆಗೆ ಏಣಿ ಎನ್ನುವುದನ್ನ ಮರೆಯಬಾರದು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com