ಸದ್ಯದ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು? (ಹಣಕ್ಲಾಸು)

ಹಣಕ್ಲಾಸು-314-ರಂಗಸ್ವಾಮಿ ಮೂಕನಹಳ್ಳಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಷೇರು ಮಾರುಕಟ್ಟೆ ಬೇರೆಲ್ಲಾ ಮಾರುಕಟ್ಟೆಗಿಂತ ಸ್ವಲ್ಪ ಹೆಚ್ಚು ಸೂಕ್ಷ್ಮವಾಗಿ ನಡೆದುಕೊಳ್ಳುತ್ತದೆ. ಬದುಕಿನ, ಮಾರುಕಟ್ಟೆಯ ಎಲ್ಲಾ ಮಜಲುಗಳನ್ನ ನೀವು ಗಮನಿಸಿ ನೋಡಿ ಅಲ್ಲೆಲ್ಲಾ ಏರಿಳಿತಗಳು ಸಾಮಾನ್ಯ. ಒಮ್ಮೆ ಇಳಿತದ ಹಾದಿ, ಇನ್ನೊಮ್ಮೆ ಏರಿಕೆಯ ಕಡೆಗೆ ಪಯಣ. ಅಕ್ಟೋಬರ್ ೨೦೨೧ ರ ವೇಳೆಗೆ ಭಾರತೀಯ ಷೇರು ಮಾರುಕಟ್ಟೆ ತನ್ನ ಉತ್ತುಂಗವನ್ನ ತಲುಪಿತ್ತು. ನಿಫ್ಟಿ ೧೮೫೦೦ ಮುಟ್ಟಿತ್ತು. ಎಲ್ಲಾ ಅಂಕಿಅಂಶಗಳು , ಪ್ರೆಡಿಕ್ಷನ್ ಗಳು ನಿಫ್ಟಿ ಕಣ್ಣುಮುಚ್ಚಿ ತೆಗೆಯುವುದರಲ್ಲಿ ೨೦ ಸಾವಿರದ ಗಡಿಯನ್ನ ದಾಟಿ ಬಿಡುತ್ತದೆ ಎನ್ನುವ ಮಾತುಗಳನ್ನ ಹೇಳುತ್ತಿದ್ದರು. ಆದರೆ ಅದಾಗಲಿಲ್ಲ ಬದಲಿಗೆ ಮಾರುಕಟ್ಟೆ ಕುಸಿತವನ್ನ ಕಾಣುತ್ತಾ ಹೋಯಿತು. ಭಾರತದಲ್ಲಿ ಬಡ್ಡಿ ದರ ಒಂದಷ್ಟು ಹೆಚ್ಚಾದರೂ ಅದರ ಲಾಭವನ್ನ ಠೇವಣಿದಾರರಿಗೆ ನೀಡಿಲ್ಲ. ಮಾರುಕಟ್ಟೆಯಲ್ಲಿನ ಕುಸಿತ ಇವೆರೆಡೂ ಇಂದಿಗೆ ಹೂಡಿಕೆದಾರನ ಮನದಲ್ಲಿ 'ಎಲ್ಲಿ ಹೂಡಿಕೆ ಮಾಡೋಣ?' ಎನ್ನುವ ಪ್ರಶ್ನೆಯನ್ನ ಸೃಷ್ಟಿಮಾಡಿವೆ. ಬಹು ನಿರೀಕ್ಷಿತ ಎಲೈಸಿ ಐಪಿಒ ಮೇಲಿನ ಹೂಡಿಕೆ ೨೦ ಪ್ರತಿಶತದಷ್ಟು ಕುಸಿತ ಕಂಡಿದೆ. ಇತ್ತೀಚಿನ ಬಹುತೇಕ ಹೂಡಿಕೆಗಳ ಕಥೆ ಇದೆ ಆಗಿದೆ. ಹೀಗಾಗಿ ಎಲ್ಲಿ ಹೂಡಿಕೆ ಮಾಡಲಿ ಅಥವಾ ಏಕೆ ಹೂಡಿಕೆ ಮಾಡಲಿ ಎನ್ನುವ ಪ್ರಶ್ನೆ ಸಾಮಾನ್ಯ ಹೂಡಿಕೆದಾರನಲ್ಲಿ ಮೂಡಿದೆ.

ಮಾರುಕಟ್ಟೆಯಿರಲಿ ಅಥವಾ ಬದುಕು, ಗ್ರಾಫ್ ಸದಾ ಚಲನೆಯಲ್ಲಿರಬೇಕು, ಸದಾ ಏರಿಕೆ, ಸದಾ ಇಳಿಕೆ ಎರಡೂ ಹೆಚ್ಚು ಕಾಲ ಸ್ಥಿರವಾಗಿರುವುದಿಲ್ಲ . ಹೀಗಾಗಿ ಈ ಸಮಯ ಕೂಡ ಕಳೆದು ಹೋಗುತ್ತದೆ ಎನ್ನುವ ಗೋಲ್ಡನ್ ರೂಲ್ ನೆನಪಿನಲ್ಲಿ ಇಟ್ಟುಕೊಳ್ಳುವುದು ಉತ್ತಮ. ಇತ್ತೀಚಿನ ದಿನಗಳ ಮಾರುಕಟ್ಟೆ ಕುಸಿತ ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ , ಜಗತ್ತಿನಾದ್ಯಂತ ಇದು ಸಾಮಾನ್ಯ ಎನ್ನುವಂತಾಗಿದೆ. ಇದಕ್ಕೆ ಕಾರಣಗಳೇನು? ಎನ್ನುವುದನ್ನ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ.

  1. ಲ್ಲಕ್ಕೂ ಮೊದಲಿಗೆ ಜಾಗತಿಕ ರಾಜಕೀಯ ಅಸ್ಥಿರತೆ ಮಾರುಕಟ್ಟೆ ಕುಸಿತಕ್ಕೆ ಬಹುದೊಡ್ಡ ದೇಣಿಗೆ ನೀಡಿದೆ: ಗಮನಿಸಿ ನೋಡಿ ರಷ್ಯಾ ಮತ್ತು ಉಕ್ರೈನ್ ನಡುವಿನ ಯುದ್ಧಕ್ಕೆ ನೂರು ದಿನಕ್ಕೂ ಹೆಚ್ಚಿನ ಸಮಯವಾಯ್ತು. ಆದರೂ ಯುದ್ಧ ಪೂರ್ಣವಾಗಿ ನಿಲ್ಲುವ ಯಾವ ಸೂಚನೆಯು ಇಲ್ಲ ಎನ್ನುವಂತಾಗಿದೆ. ಜನ ಸಾಮಾನ್ಯನಿಗೆ ಅಲ್ಲೇನಾಗುತ್ತಿದೆ ಎನ್ನುವುದು ತಿಳಿಯದಷ್ಟು ಅದು ಸಾಮಾನ್ಯ ಎನ್ನುವಂತಾಗಿದೆ. ಆದರೆ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಅಸ್ಥಿರ ಮನೋಭಾವ ಮಾರಿಕಟ್ಟೆಗೆ ಒಳ್ಳೆಯದಲ್ಲ. ಹೂಡಿಕೆದಾರರು ಬಹಳ ಸೂಕ್ಷ್ಮ ಜೀವಿಗಳು.
  2. ಅಮೇರಿಕಾವು ಸೇರಿ ಜಾಗತಿಕವಾಗಿ ಬಡ್ಡಿ ದರ ಏರಿಕೆ ಮಾರುಕಟ್ಟೆ ಪ್ರಗತಿಗೆ ಹಾಕಿದೆ ಒಂದಷ್ಟು ಬರೆ: ನಿಮಗೆಲ್ಲಾ ಆಶ್ಚರ್ಯ ಎನ್ನಿಸಬಹುದು ಬಡ್ಡಿ ದರ ಏರಿದರೆ ಮಾರುಕಟ್ಟೆ ಏಕೆ ಕುಸಿಯಬೇಕು ಎಂದು, ಆದರೆ ಗಮನಿಸಿ ಸಾಮಾನ್ಯ ಹೂಡಿಕೆದಾರನಿಗೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಚಾಯ್ಸ್ ಅಲ್ಲ, ಆತನದು ಬೈ ಫೋರ್ಸ್ ಹೂಡಿಕೆ. ಅಂದರೆ ಹೆಚ್ಚಿನ ರಿಸ್ಕ್ ಇಲ್ಲದೆ ಪರವಾಗಿಲ್ಲ ಎನ್ನುವ ಬಡ್ಡಿ ಸಿಕ್ಕರೆ ಆತ ಸೇಫ್ ಆಗಿರುವ ಬ್ಯಾಂಕಿನಲ್ಲಿ ಹಣವನ್ನ ಇಡಲು ಬಯಸುತ್ತಾನೆ. ಹೀಗಾಗಿ ಬಡ್ಡಿ ದರ ಹೆಚ್ಚಾದರೆ ಮಾರುಕಟ್ಟೆಯಿಂದ ಒಂದಷ್ಟು ಹಣವನ್ನ ತೆಗೆದು ನಿರ್ಧಾರಿತ ಫಲಿತಾಂಶ, ದೀರ್ಘ ಕಾಲದ ವರೆಗೆ ನೀಡುವ ಬ್ಯಾಂಕಿನಲ್ಲಿ ಹಣವನ್ನ ತೊಡಗಿಸುತ್ತಾನೆ. ಅಮೇರಿಕಾದಲ್ಲಿ ಏರಿದ ಫೆಡರಲ್ ಬಡ್ಡಿ ದರ, ಭಾರತದಲ್ಲಿ ಹೂಡಿಕೆ ಮಾಡಿದ್ದ ಅನೇಕರನ್ನ ಮತ್ತೆ ಅಮೆರಿಕಾದ ಡೆಟ್ ಬಾಂಡ್ ಗಳಲ್ಲಿ ಹೂಡಿಕೆಯನ್ನ ಮಾಡುವಂತೆ ಮಾಡಿದೆ. ಹೀಗೆ ಪ್ರತಿಯೊಬ್ಬರೂ ಅಷ್ಟಿಷ್ಟು ತೆಗೆದರೂ ಸಾಕು ಅದು ಮಾರುಕಟ್ಟೆ ಕುಸಿತಕ್ಕೆ ನಾಂದಿ ಹಾಡುತ್ತದೆ.
  3. ಸಪ್ಲೈ ಚೈನ್ ಕುಸಿತ: ಆಹಾರ ಪದಾರ್ಥಗಳು, ಅಡುಗೆ ತೈಲ, ಕಚ್ಚಾ ತೈಲ, ಸೆಮಿ ಕಂಡಕ್ಟರ್ಸ್ ಹೀಗೆ ಹಲವಾರು ಪದಾರ್ಥಗಳ ಬೆಲೆ ಇನ್ನಿಲ್ಲದೆ ಏರಿಕೆ ಕಂಡಿದೆ. ನಿತ್ಯ ಜೀವನಕ್ಕೆ ಬೇಕಾದ ಇಂತಹ ಪದಾರ್ಥಗಳ ಏರಿಕೆ ಹಲವಾರು ಇನ್ನಿತರ ಪದಾರ್ಥಗಳ ಬೆಲೆ ಏರಿಕೆಗೂ ಕಾರಣವಾಗಿವೆ. ಈ ಸಮಸ್ಯೆ ಇನ್ನೂ ಒಂದೆರೆಡು ವರ್ಷ ಮುಂದುವರೆಯುವ ಸಾಧ್ಯತೆ ಕೂಡ ಇದೆ. ಇದು ಹಲವಾರು ಕಾರ್ಯ ಕ್ಷೇತ್ರದ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಆಯಾ ವಲಯದ ಷೇರುಗಳು ಕುಸಿತ ಕಂಡಿದೆ. ವಲಯವಾರು ಕುಸಿತ, ಒಟ್ಟಾರೆ ಕುಸಿತಕ್ಕೆ ತನ್ನದೇ ಆದ ಕಾಣಿಕೆಯನ್ನ ನೀಡಿದೆ.
  4. ಹಣದುಬ್ಬರ ಮತ್ತು ಹೆಚ್ಚಿದ ಬಡ್ಡಿ ದರ ರೂಪಾಯಿ ಕುಸಿತಕ್ಕೆ ಕಾಣವಾಗಿದೆ: ಹಣದುಬ್ಬರ ಹೆಚ್ಚಾದಂತೆ , ಇದನ್ನ ನಿಯಂತ್ರಿಸಲು ಬಡ್ಡಿ ದರವನ್ನ ಹೆಚ್ಚು ಮಾಡಲಾಗುತ್ತದೆ. ಬಡ್ಡಿ ದರ ಹೆಚ್ಚಾಯಿತು ನಿಜ , ಆದರೆ ಹಣಕ್ಕಿದ್ದ ಕೊಳ್ಳುವ ಶಕ್ತಿಯನ್ನ ಹಣದುಬ್ಬರ ಕಡಿಮೆ ಮಾಡುತ್ತದೆ. ಡೊಮೆಸ್ಟಿಕ್ ಮಾರ್ಕೆಟ್ ನಲ್ಲಿ ಇದನ್ನ ಹೇಗೋ ಸಂಭಾಳಿಸಿ ಬಿಡಬಹುದು , ಆದರೆ ಬಡ್ಡಿ ದರ ಹೆಚ್ಚು ಕಡಿಮೆ ಆಗುವುದರಿಂದ ಎಕ್ಸ್ಪೋರ್ಟ್ ಮೇಲೆ ಆಗುವ ಪರಿಣಾಮ ತಡೆಯಲು ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯವನ್ನ ಬೇರೆ ದಾರಿಯಿಲ್ಲದೆ ಕಡಿಮೆ ಮಾಡಬೇಕಾಗುತ್ತದೆ. ಗಮನಿಸಿ ರೂಪಾಯಿ ಮೌಲ್ಯ ಕುಸಿದರೆ ಇಲ್ಲಿ ಹೆಚ್ಚಿನ ಲಾಭ ಪಡೆದೂ ಕೂಡ ಪ್ರಯೋಜನವಿಲ್ಲ ಎನ್ನುವ ಸ್ಥಿತಿಯನ್ನ ನಮ್ಮ ಎಫ್ಐಐ ಗಳು ಅಂದರೆ ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಗಳು ತಲುಪುತ್ತಾರೆ. ಹೀಗಾಗಿ ಅವರು ಭಾರತದ ಮಾರುಕಟ್ಟೆಯಿಂದ ಹಣವನ್ನ ತೆಗೆದು ಅಮೆರಿಕಾದಲ್ಲಿ ಹೂಡಿಕೆ ಮಾಡಲು ಶುರು ಮಾಡಿದ್ದಾರೆ . ಅಕ್ಟೋಬರ್ ೨೦೨೧ ರಿಂದ ಮಾರ್ಚ್ ೨೦೨೨ ರ ಸಮಯದಲ್ಲಿ ಹತ್ತಿರತ್ತಿರ ೨೦ ಬಿಲಿಯನ್ ಡಾಲರ್ ಹಣವನ್ನ ಭಾರತೀಯ ಮಾರುಕಟ್ಟೆಯಿಂದ ಹೊರ ತೆಗೆಯಲಾಗಿದೆ. ೨೦೨೨ ರ ಪ್ರಥಮ ಐದು ತಿಂಗಳಲ್ಲಿ ಹೀಗೆ ಹೊರ ತೆಗೆದ ಹಣ, ೨೦೨೧ ರಲ್ಲಿ ಹೂಡಿಕೆ ಮಾಡಿದ್ದ ಹಣಕ್ಕಿಂತ ಹೆಚ್ಚು ಎಂದರೆ ಪರಿಸ್ಥಿತಿ ಅದೆಷ್ಟು ಗಂಭೀರವಾಗಿರಬಹುದು ಎನ್ನುವುದನ್ನ ನೀವು ಊಹಿಸಬಹುದು.
  5. ಅಮೇರಿಕಾದಲ್ಲಿ ಮತ್ತೆ ಶುರುವಾಗಿದೆ ರಿಸೆಶನ್: ಅಮೆರಿಕಾದ ರಿಯಲ್ ಎಸ್ಟೇಟ್ ಅಥವಾ ಹೌಸಿಂಗ್ ಮಾರ್ಕೆಟ್ ಇನ್ನಿಲ್ಲದ ಕುಸಿತ ಕಂಡಿದೆ. ವೇಗವಾಗಿ ಏರುತ್ತಿರುವ ಇನ್ಫ್ಲೇಶನ್ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. ೨೦೦೭ ರಲ್ಲಿ ಅಮೇರಿಕಾದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಕುಸಿತ ಕಾಣಲು ಕಾರಣವಾಗಿದ್ದು ಇದೆ ಹೌಸಿಂಗ್ ಮಾರ್ಕೆಟ್. ಇದೀಗ ಮತ್ತೆ ಅಮೇರಿಕಾ ಅದೇ ಪರಿಸ್ಥಿತಿಯನ್ನ ಮತ್ತೆ ಕಾಣುತ್ತಿದೆ. ಅಮೆರಿಕಾದ ಮೂಗಿಗೆ ನೆಗಡಿಯಾದರೆ ಜಗತ್ತಿಗೆ ಜಗತ್ತೇ ಸೀನುತ್ತದೆ ಎನ್ನುವ ಮಾತಿದೆ. ಇಂದಿಗೂ ಈ ಮಾತನ್ನ ಇಲ್ಲವೆಂದು ಅಲ್ಲಗಳೆಯಲು ಬಾರದು. ಅಮೇರಿಕಾ ಕುಸಿತ ಜಗತ್ತಿನಾದ್ಯಂತ ಒಂದು ರೀತಿಯ ನೆಗಟಿವ್ ವೕವ್ ಸೃಷ್ಟಿ ಮಾಡಿದೆ. ಭಾರತ ಕೂಡ ಇದಕ್ಕೆ ಹೊರತಲ್ಲ.
  6. ಆಂತರಿಕ ಸಮಸ್ಯೆಗಳಿಂದ ಬಳಲುತ್ತಿದೆ ಚೀನಾ: ಚೀನಾ, ಅಮೇರಿಕಾ, ಜರ್ಮನ್, ರಷ್ಯಾ, ಇಂಗ್ಲೆಂಡ್ ಮತ್ತು ಭಾರತವನ್ನ ಜಗತ್ತನ್ನ ನಡೆಸುವ ಇಂಜಿನ್ ಎನ್ನಬಹುದು. ಇವುಗಳಲ್ಲಿ ಭಾರತವೇ ಪರವಾಗಿಲ್ಲ ಎನ್ನುವ ಮಟ್ಟದಲ್ಲಿದೆ, ಉಳಿದಂತೆ ಎಲ್ಲಾ ದೇಶಗಳೂ ಭಾರತಕ್ಕಿಂತ ದೊಡ್ಡ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸ್ಥಿತಿಯಲ್ಲಿವೆ. ಹೀಗಾಗಿ ಸಹಜವಾಗೇ ಇಂಜಿನ್ ನಲ್ಲಿನ ಕ್ಷಮತೆಯಲ್ಲಿ ಕುಸಿತವಾಗಿದೆ. ಜಾಗತಿಕ ಸ್ಲೋ ಡೌನ್ ಗೆ ಇದು ಕಾರಣವಾಗಿದೆ.
  7. FUD ಅಂದರೆ ಫಿಯರ್, ಅನ್ಸರ್ಟನಿಟಿ ಅಂಡ್ ಡ್ರೇಡ್ ಎಲ್ಲೆಡೆ ಮನೆ ಮಾಡಿದೆ: ಮೇಲಿನ ಎಲ್ಲಾ ಕಾರಣಗಳು ಮತ್ತು ಇನ್ನು ಹತ್ತಾರು ಆಯಾ ದೇಶಕ್ಕೆ ಸಂಬಂದಿಸಿದ ಡೊಮೆಸ್ಟಿಕ್ ಕಾರಣಗಳು ಸೇರಿಕೊಂಡು ಸಮಾಜದಲ್ಲಿ ಫಿಯರ್ -ಭಯ, ಅನ್ಸರ್ಟನಿಟಿ- ಅನಿಶ್ಚಿತತೆ ಮತ್ತು ಡ್ರೇಡ್ - ಮತ್ತೆಲ್ಲಿ ಎಡುವುತ್ತೇವೋ ಎಂದು ಊಹಿಸಿಕೊಂಡು ಭಯ ಪಡುವುದನ್ನ ಸೃಷ್ಟಿ ಮಾಡಿದೆ. ಎಲ್ಲಿಯವರೆಗೆ ಸಮಾಜದಲ್ಲಿ ಇಂತಹ ಆತಂಕವಿರುತ್ತದೆ ಅಲ್ಲಿಯ ತನಕ, ಸಾಮಾನ್ಯ ಹೂಡಿಕೆದಾರರು ಕೈ ಬಿಚ್ಚಿ ಹೂಡಿಕೆ ಮಾಡುವುದಿಲ್ಲ. ಸೇಫ್ ಜೋನ್ ನಿಂದ ಹೊರಬಂದು ಹೂಡಿಕೆ ಮಾಡುವುದಕ್ಕೆ ಮೀನಮೇಷ ಎಣಿಸುತ್ತಾರೆ. ಹೀಗಾಗಿ ಮಾರುಕಟ್ಟೆ ತನ್ನ ಇಂದಿನ ಓಘದಿಂದ ವಿಮುಖವಾಗುವುದು ಸಹಜ.

ಹೂಡಿಕೆದಾರರು ಇಂತಹ ಸಮಯದಲ್ಲಿ ಏನು ಮಾಡಬೇಕು?

ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಹೂಡಿಕೆದಾರರ ಮುಂದೆ ಎರಡು ಆಯ್ಕೆಗಳಿರುತ್ತವೆ. ೧) ಕೊಂಡ ಷೇರನ್ನ ಹಾಗೆ ಉಳಿಸಿಕೊಳ್ಳುವುದು ೨) ಮಾರಾಟ ಮಾಡಿ ನಷ್ಟವನ್ನ ಭರಿಸುವುದು .

ನೀವು ಕೊಂಡಿರುವ ಷೇರು ಯಾವ ಸಂಸ್ಥೆಯದ್ದು ಎಂದು ಪರಿಶೀಲನೆ ಮಾಡಿ ನೋಡಿ. ಆ ಸಂಸ್ಥೆಯ ಮೂಲಭೂತ ಸಂಖ್ಯೆಗಳು ಗಟ್ಟಿಯಾಗಿದ್ದರೆ ಹೆಚ್ಚು ಯೋಚಿಸುವ ಅವಶ್ಯಕತೆ ಇಲ್ಲ. ಅದನ್ನ ಮಾರದೆ ಉಳಿಸ್ಕೊಳ್ಳುವುದು ಒಳ್ಳೆಯದು. ಹಾಗೊಮ್ಮೆ ನೀವು ಕೊಂಡ ಷೇರು ಮಾರುಕಟ್ಟೆಯ ಉತ್ತಮ ಅಲೆಯಲ್ಲಿ ತೇಲಿಕೊಂಡು ಬಂದಿದ್ದು, ಮೂಲಭೂತ ಸಂಖ್ಯೆಗಳು ಸಂಸ್ಥೆಯ ಹೆಸರಿಗೆ ತಕ್ಕಂತೆ ಇಲ್ಲವೆಂದರೆ ಅದನ್ನ ಮಾರಿ ನಷ್ಟವನ್ನ ಭರಿಸುವುದು ಒಳಿತು. ಹೆಚ್ಚಿನ ನಷ್ಟವನ್ನ ತಡೆಯಲು ಇರುವುದು ಇದೊಂದೇ ಮಾರ್ಗ.

ಕೊನೆಮಾತು: ಬಹಳಷ್ಟು ಜನ ಮಾರುಕಟ್ಟೆ ಕುಸಿತ ಪ್ರಾರಂಭವಾದ ದಿನದಿಂದ ಒಂದು ಪ್ರಶ್ನೆಯನ್ನ ಕೇಳುತ್ತಿದ್ದಾರೆ , ಎಲೈಸಿ ಷೇರುಗಳನ್ನ ಕೊಂಡಿದ್ದೇವೆ, ಇದನ್ನ ಈಗ ಮಾರುವುದು ಒಳ್ಳೆಯದೇ? ಒಂದೇ ಸಮನೆ ಕುಸಿತವನ್ನ ಕಾಣುತ್ತಿದೆ ಎನ್ನುವುದು ಆ ಪ್ರಶ್ನೆ. ಮೇಲಿನ ಎಲ್ಲಾ ಅಂಶಗಳನ್ನ ನಿಧಾನವಾಗಿ ಮತ್ತೊಮ್ಮೆ ಗಮನಿಸಿ ನೋಡಿ, ಎಲೈಸಿ ಐಪಿಒ ಟೈಮಿಂಗ್ ಸರಿಯಾಗಿಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಜಾಗತಿಕವಾಗಿ ಇದು ಯಾವುದೇ ಹೊಸ ಐಪಿಒ ಹೊರತರಲು ಉತ್ತಮ ಸಮಯವಲ್ಲ. ಆದರೆ ಇನ್ಶೂರೆನ್ಸ್ ಬಿಸಿನೆಸ್ ಗೆ ಭಾರತದಲ್ಲಿ ಬಹಳಷ್ಟು ಭವಿಷ್ಯವಿದೆ. ಎಲೈಸಿ ಹೇಳಿಕೇಳಿ ಭದ್ರವಾದ ಅಂಕಿಅಂಶಗಳನ್ನ ಹೊಂದಿದೆ. ಅಂದರೆ ಮೂಲಭೂತ ಸಂಖ್ಯೆಗಳು ಸಂಸ್ಥೆಯ ಹೆಸರಿಗೆ ತಕ್ಕಾಹಾಗೆ ಗಟ್ಟಿಯಾಗಿವೆ. ಇನ್ನಷ್ಟು ಪರಿಶೀಲನೆ, ಅವಲೋಕನ ಮಾಡಿ ಜಾಣ ನಿರ್ಧಾರ ತೆಗೆದುಕೊಳ್ಳುವುದು ಹೂಡಿಕೆದಾರನಿಗೆ ಬಿಟ್ಟದ್ದು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com