ಕಂಜಕ್ಟಿವೈಟಿಸ್ ಅಥವಾ ಮದ್ರಾಸ್ ಐ (ಕುಶಲವೇ ಕ್ಷೇಮವೇ)

ಇತ್ತೀಚೆಗೆ ಮಳೆ ಬೀಳುವುದು ಹೆಚ್ಚಾಗಿರುವುದರಿಂದ ಕಂಜಕ್ಟಿವೈಟಿಸ್ ಅಥವಾ ಕಣ್ಣು ನೋವು ಇನ್ನೂ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಮದ್ರಾಸ್ ಐ ಸಮಸ್ಯೆ ಹೆಚ್ಚಾಗುತ್ತಿರುವುದು ಕಂಡುಬಂದಿದೆ.
ಮದ್ರಾಸ್ ಐ
ಮದ್ರಾಸ್ ಐ

ಇತ್ತೀಚೆಗೆ ಮಳೆ ಬೀಳುವುದು ಹೆಚ್ಚಾಗಿರುವುದರಿಂದ ಕಂಜಕ್ಟಿವೈಟಿಸ್ ಅಥವಾ ಕಣ್ಣು ನೋವು ಇನ್ನೂ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಮದ್ರಾಸ್ ಐ ಸಮಸ್ಯೆ ಹೆಚ್ಚಾಗುತ್ತಿರುವುದು ಕಂಡುಬಂದಿದೆ.

ಇದನ್ನು ಪಿಂಕ್ ಐ ಎಂದೂ ಕರೆಯುತ್ತಾರೆ. ನಿರಂತರ ಮಳೆ, ಪ್ರವಾಹ ಹಾಗೂ ನದಿಗಳಲ್ಲಿ ಪ್ರವಾಹದಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಮದ್ರಾಸ್ ಐ ಸಮಸ್ಯೆ ಹೆಚ್ಚುತ್ತಿದೆ. ಕಳೆದ ಮೂರು-ನಾಲ್ಕು ವಾರಗಳಲ್ಲಿ ನಮ್ಮ ರಾಜ್ಯದಲ್ಲಿ ನೂರಾರು ಕಂಜಕ್ಟಿವೈಟಿಸ್ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ ಕನಿಷ್ಠ 200 ಅಥವಾ 250 ಪ್ರಕರಣಗಳು ದಿನನಿತ್ಯ ವರದಿಯಾಗುತ್ತಿವೆ. ಮಕ್ಕಳು, ವಯಸ್ಕರು, ಮಹಿಳೆಯರು, ಪುರುಷರು ಮತ್ತು ವೃದ್ಧರೆನ್ನದೇ ಯಾರಿಗಾದರೂ ಈ ಸಮಸ್ಯೆಯು ಕಾಡಬಹುದು. 

ಈಗ ಮಳೆಗಾಲವಾಗಿರುವುದರಿಂದ ವಾತಾವರಣ ತಂಪಾಗಿದೆ. ಈ ಕಾಲದಲ್ಲಿ ವೈರಾಣುಗಳು ಹೆಚ್ಚು ಸಕ್ರಿಯವಾಗಿವೆ. ಗಾಳಿಯಲ್ಲಿ ವೇಗವಾಗಿ ಈ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹೀಗಾಗಿ ನಿರ್ಲಕ್ಷಿಸದೆ ವೈದ್ಯರಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು.

ಕಂಜಕ್ಟಿವೈಟಿಸ್ ಎಂದರೇನು?

ಕಂಜಕ್ಟಿವೈಟಿಸ್ ಕಣ್ಣಿನ ಒಂದು ಸಾಮಾನ್ಯ ಸೋಂಕು ಮತ್ತು ಉರಿಯೂತವನ್ನು ಉಂಟುಮಾಡುತ್ತದೆ. ಮುಖ್ಯವಾಗಿ ಮಕ್ಕಳು, ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸೋಂಕು ಬೇಗ ಹರಡುತ್ತದೆ. ಒಬ್ಬರಿಗೆ ಸೋಂಕು ಕಾಣಿಸಿಕೊಂಡರೆ ಅವರಿಂದ ಮನೆಯವರೆಲ್ಲ ಸೋಂಕಿಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಸೋಂಕನ್ನು ಇತರರಿಗೆ ಹರಡುವುದನ್ನು ತಪ್ಪಿಸಲು ಈ ಸಮಸ್ಯೆ ಇದ್ದವರು ಶಾಲೆ, ಕೆಲಸ ಅಥವಾ ಇತರ ಸಾರ್ವಜನಿಕ ಸ್ಥಳಗಳಿಂದ ದೂರವಿರಬೇಕು. ಮನೆಯಿಂದ ಹೊರಗಡೆ ಎಲ್ಲೇ ಹೋದರೂ ಕನ್ನಡಕ ಧರಿಸಿಯೇ ಹೋಗಬೇಕು. ಹೊರಗೆ ಬೇರೆಯವರೊಡನೆ ಹೆಚ್ಚು ಬೆರೆಯಬಾರದು. ಎಲ್ಲರೂ ಬಳಸುವ ಸಾಮಾನ್ಯ ವಸ್ತುಗಳನ್ನು ಬಳಸಬಾರದು. ಸೂರ್ಯನ ಬಿಸಿಲಿಗೆ ಹಾಗೂ ಪ್ರಖರ ಬೆಳಕಿಗೆ ಕಣ್ಣನ್ನು ಒಡ್ಡಬಾರದು. 

ಮದ್ರಾಸ್ ಐ ಲಕ್ಷಣಗಳು

ಕಂಜಕ್ಟಿವೈಟಿಸ್ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಅಲರ್ಜಿಗಳಿಂದ ಉಂಟಾಗುತ್ತದೆ. ಕಣ್ಣು ಕೆಂಪಾಗುವುದು, ಊತ, ತುರಿಕೆ ಅಥವಾ ಸ್ರವಿಸುವಿಕೆಯಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಕಣ್ಣಿನಲ್ಲಿ ಉರಿ, ನೋವು ಹಾಗೂ ಊತ; ಕಣ್ಣಿನ ಒಳಗಿರುವ ಬಿಳಿಯ ಭಾಗ ಗುಲಾಬಿ/ಕೆಂಪು ಬಣ್ಣಕ್ಕೆ ತಿರುಗುವುದು; ಕಣ್ಣಿನಲ್ಲಿ ಸದಾ ನೀರು ಸುರಿಯುವುದು; ಕಣ್ಣಿನಲ್ಲಿ ಅತಿಯಾದ ತುರಿಕೆ ಆಗುವುದು; ದೃಷ್ಟಿ ಮಂಜು ಮಂಜಾಗುವುದು; ಕಣ್ಣಿನಲ್ಲಿ ಕೀವು ರೀತಿಯಲ್ಲಿ ಅಂಟು ಬರುವುದು ಮತ್ತು ನಿದ್ರೆ ಮಾಡಿ ಎದ್ದಾಗ ಕಣ್ಣಿನ ರೆಪ್ಪೆಗಳು ಅಂಟಿಕೊಂಡಿರುವುದು ಈ ಸಮಸ್ಯೆಯ ಲಕ್ಷಣಗಳು. ಕೆಲವೊಮ್ಮೆ ಇದರ ಜೊತೆಗೆ ನೆಗಡಿ, ಉಸಿರಾಟದ ಸೋಂಕು ಅಥವಾ ಗಂಟಲು ಉರಿ ಸಹ ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳು ಮದ್ರಾಸ್ ಐ ಸಮಸ್ಯೆ ಹೆಚ್ಚಾಗಿದೆ ಎಂದು ತೋರಿಸುತ್ತವೆ ಎಂದು ನಾವು ಅರಿಯಬೇಕು. 

ಶುಚಿಯಾಗಿರದ ಕೈಗಳು, ವಸ್ತುಗಳು, ನೀರು ಹಾಗೂ ಗಾಳಿ ಸಂಪರ್ಕದಿಂದ ಈ ಅಪಾಯ ಹೆಚ್ಚಾಗುತ್ತದೆ. ಆಗ ಕಣ್ಣಿನಲ್ಲಿ ಕೀವು ಬರುತ್ತದೆ. ಇದಕ್ಕೆ ಕಾರಣ ಅಲರ್ಜಿ ಪ್ರಕ್ರಿಯೆ. ಸಾಮಾನ್ಯವಾಗಿ ಸಮಸ್ಯೆ 5-7 ದಿನಗಳವರೆಗೆ ಇರುತ್ತದೆ. ಕೆಲವೊಮ್ಮೆ 14 ದಿನಗಳವರೆಗೂ ಕಾಡುತ್ತದೆ. ಮೊದಲಿಗೆ ಒಂದು ಕಣ್ಣಿಗೆ ಬಂದು ನಂತರ ಇನ್ನೊಂದು ಕಣ್ಣಿಗೂ ಹರಡಬಹುದು. ಆದ್ದರಿಂದ ನಿರ್ಲಕ್ಷ್ಯ ಮಾಡದೆ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ. ವೈದ್ಯರು ಈ ರೋಗಲಕ್ಷಣಗಳನ್ನು ನಿವಾರಿಸಲು ಮತ್ತು ಗುಣಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡಲು ಸೂಕ್ತ ಐ ಡ್ರಾಪ್ಸ್ ಅಥವಾ ಮುಲಾಮುಗಳನ್ನು ಶಿಫಾರಸು ಮಾಡಬಹುದು.

ಮದ್ರಾಸ್ ಐ ಬಂದರೆ ಈ ಸಲಹೆಗಳನ್ನು ಪಾಲಿಸಿ...

ಈ ಸಮಯದಲ್ಲಿ ಕಣ್ಣುಗಳಿಗೆ ವಿಶ್ರಾಂತಿ ಮತ್ತು ಗುಣಪಡಿಸಲು ಅವಕಾಶವನ್ನು ನೀಡಲು ಪುಸ್ತಕಗಳನ್ನು ಓದುವುದು, ಟಿವಿ ನೋಡುವುದು ಅಥವಾ ಮೊಬೈಲ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು. ಕಣ್ಣು ನೋವಾದರೂ ಸ್ವಲ್ಪ ಸಹಿಸಿಕೊಳ್ಳಬೇಕು. ಪದೇ ಪದೇ ಕಣ್ಣನ್ನು ಮುಟ್ಟಿಕೊಳ್ಳಬಾರದು ಅಥವಾ ಉಜ್ಜಿಕೊಳ್ಳಬಾರದು. 

ಕಣ್ಣು ನೋವು ಬರದಂತೆ ತಡೆಯಲು ಎಲ್ಲಕ್ಕಿಂತ ಮೊದಲು ವೈಯಕ್ತಿಕ ಶುಚಿತ್ವವನ್ನು ಕಾಪಾಡಬೇಕು. ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ತೊಳೆಯಿರಿ. ವಿಶೇಷವಾಗಿ ನಿಮ್ಮ ಕಣ್ಣು ಅಥವಾ ಮುಖವನ್ನು ಸ್ಪರ್ಶಿಸುವ ಮೊದಲು ಕೈಗಳು ಶುಚಿಯಾಗಿರಬೇಕು. ಆದಷ್ಟೂ ಕಣ್ಣುಗಳನ್ನು ಮುಟ್ಟುವುದನ್ನು ತಪ್ಪಿಸಬೇಕು. ಟವೆಲ್‌ಗಳು, ಒಗೆಯುವ ಬಟ್ಟೆಗಳು ಅಥವಾ ಕಣ್ಣಿನ ಮೇಕಪ್‌ನಂತಹ ವೈಯಕ್ತಿಕ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಧೂಳು, ಗಾಳಿ ಒಡ್ಡಿಕೊಂಡಾಗ ಕಣ್ಣುಗಳ ಕಿರಿಕಿರಿಯನ್ನು ತಡೆಗಟ್ಟಲು ರಕ್ಷಣಾತ್ಮಕ ಕನ್ನಡಕಗಳನ್ನು ಬಳಸಿ. ಕಣ್ಣಿಗೆ ಬಟ್ಟೆಯನ್ನು ಸ್ವಲ್ಪ ಬೆಚ್ಚಗೆ ಮೃದುವಾಗಿ ಪ್ರೆಸ್ ಮಾಡುವುದರಿಂದ ನೋವಿನಿಂದ-ಕೆರೆತದಿಂದ ಉಪಶಮನವಾಗುತ್ತದೆಕಣ್ಣಿನಲ್ಲಿ ನೋವು ಅಥವಾ ತುರಿಕೆ ಇದ್ದರೆ ಪನ್ನೀರನ್ನು ರೆಪ್ಪೆಗಳ ಮೇಲೆ ಚಿಮುಕಿಸಿಕೊಳ್ಳಬೇಕು. ತಾಜಾ ಸೌತೇಕಾಯಿಯನ್ನು ಬಿಲ್ಲೆಯಂತೆ ಹಚ್ಚಿ ಕಣ್ಣನ್ನು ಮುಚ್ಚಿ ರೆಪ್ಪೆಗಳ ಮೇಲೆ ಐಸನ್ನು ಇಟ್ಟುಕೊಂಡರೆ ನೋವು ಶಮನವಾಗುತ್ತದೆ. ಆದಷ್ಟೂ ಎರಡು ಮೂರು ಲೀಟರ್ ನೀರನ್ನು ಕುಡಿಯಬೇಕು. ಜ್ವರ ಕಾಣಿಸಿಕೊಂಡರೆ ತಡಮಾಡದೇ ವೈದ್ಯರನ್ನು ಕಾಣಬೇಕು. 

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com