ಡೆಂಗ್ಯೂ ಜ್ವರ (ಕುಶಲವೇ ಕ್ಷೇಮವೇ)

ಹಲವು ಬಗೆಯ ಜ್ವರಗಳು ಮಳೆಗಾಲದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಡೆಂಗ್ಯೂ ಜ್ವರವೂ ಒಂದು. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಸೊಳ್ಳೆಗಳಿಂದ ಬರುತ್ತದೆ ಮತ್ತು ಒಬ್ಬರಿಂದ ಒಬ್ಬರಿಗೆ ಸೊಳ್ಳೆಗಳ ಮೂಲಕವೇ ಹರಡುತ್ತದೆ.
ಡೆಂಗ್ಯೂ ಜ್ವರ
ಡೆಂಗ್ಯೂ ಜ್ವರ

ಮಳೆಗಾಲ ಬಂತೆಂದರೆ ಒಂದೆಡೆ ಹರುಷ. ಇನ್ನೊಂದೆಡೆ ಇದು ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಕಾಲ. ಹಲವು ಬಗೆಯ ಜ್ವರಗಳು ಮಳೆಗಾಲದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಡೆಂಗ್ಯೂ ಜ್ವರವೂ ಒಂದು. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಸೊಳ್ಳೆಗಳಿಂದ ಬರುತ್ತದೆ ಮತ್ತು ಒಬ್ಬರಿಂದ ಒಬ್ಬರಿಗೆ ಸೊಳ್ಳೆಗಳ ಮೂಲಕವೇ ಹರಡುತ್ತದೆ.

ಡೆಂಗ್ಯೂ ಎಂಬುದು ವಿಶೇಷವಾಗಿ ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು. ಇದು ಪ್ರಪಂಚದಾದ್ಯಂತ ಉಷ್ಣವಲಯದ ಮತ್ತು ಉಪ ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಮಲೇರಿಯಾದಂತೆ ಸೊಳ್ಳೆಗಳಿಂದ ಹರಡುವ ಮತ್ತು ಮನುಷ್ಯನ ಆರೋಗ್ಯ ಅತ್ಯಂತ ಮಾರಕವಾಗಿರುವುದು ಡೆಂಗ್ಯೂ ಜ್ವರ.

ಡೆಂಗ್ಯೂ ಜ್ವರದ ಲಕ್ಷಣಗಳು

ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಜ್ವರದ ಲಕ್ಷಣಗಳನ್ನು ತೋರಿಸುತ್ತದೆ, ಉದಾಹರಣೆಗೆ ಹೇಳುವುದಾದರೆ ಹೆಚ್ಚಿನ ಮೈ ಬಿಸಿ (ತಾಪಮಾನ) ಹೆಚ್ಚಾಗುವುದು, ತೀವ್ರ ತಲೆನೋವು, ಕೀಲು ಮತ್ತು ಸ್ನಾಯು ನೋವು, ದದ್ದು ಮತ್ತು ಸೌಮ್ಯ ರಕ್ತಸ್ರಾವ. ಕೆಲವು ಸಂದರ್ಭಗಳಲ್ಲಿ ಇದು ಡೆಂಗ್ಯೂ ಹೆಮರಾಜಿಕ್ ಜ್ವರ ಎಂಬ ತೀವ್ರವಾದ ರೂಪಕ್ಕೆ ತಿರುಗಿ ಜೀವಕ್ಕೆ ಅಪಾಯಕಾರಿಯಾಗಬಹುದು. ಡೆಂಗ್ಯೂಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ, ಆದರೆ ರೋಗಲಕ್ಷಣಗಳ ಬೆಂಬಲ ಮತ್ತು ನಿರ್ವಹಣೆ ಮುಖ್ಯವಾಗಿದೆ. ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳನ್ನು ಕಡಿಮೆ ಮಾಡುವುದು ಮತ್ತು ಸೊಳ್ಳೆ ಕಡಿತದಿಂದ ರಕ್ಷಣೆ ಮಾಡಿಕೊಳ್ಳುವುದು ಮಹತ್ವದ ವಿಷಯಗಳಾಗಿವೆ. ವಿಶ್ವದಾದ್ಯಂತ ಲಕ್ಷಾಂತರ ಮಂದಿ ಪ್ರತಿ ವರ್ಷ ಡೆಂಗ್ಯೂ ಜ್ವರದ ಸೋಂಕಿಗೆ ಗುರಿಯಾಗುತ್ತಿದ್ದಾರೆ.

ಡೆಂಗ್ಯೂ ಜ್ವರ ಬಂದ ತಕ್ಷಣ ಮಕ್ಕಳು ಅಥವಾ ದೊಡ್ಡವರು ಯಾವುದೇ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ವೈರಸ್ಸಿನ ಸೋಂಕು ಉಂಟಾದ ನಾಲ್ಕರಿಂದ ಏಳು ದಿನಗಳ ನಂತರ ಲಕ್ಷಣಗಳು ಪ್ರಾರಂಭವಾಗುತ್ತವೆ. ಡೆಂಗ್ಯೂ ಜ್ವರ ದೇಹದ ತಾಪಮಾನ 104 ಡಿಗ್ರಿ ಫ್ಯಾರನ್ ಹೀಟ್ ಇರುತ್ತದೆ. ಜೊತೆಗೆ ತಲೆ ನೋವು, ಹೊಟ್ಟೆ, ಮೈಕೈ ನೋವು, ವಾಕರಿಕೆ, ಕಣ್ಣುಗಳ ಹಿಂಭಾಗದಲ್ಲಿ ನೋವು, ವಾಂತಿ, ಗ್ರಂಥಿಗಳು ಊತ ಮತ್ತು ಮೈಮೇಲೆ ಕಲೆಗಳೂ ಕಾಣಿಸಿಕೊಳ್ಳಬಹುದು. ಯಾರಲ್ಲಿ ರೋಗ ನಿರೋಧಕ ವ್ಯವಸ್ಥೆ (ಅಂದರೆ ಇಮ್ಯುನಿಟಿ) ಬಲವಾಗಿರುವವರು ಕೇವಲ ಒಂದು ಅಥವಾ ಎರಡು ವಾರಗಳಲ್ಲಿ ಈ ಸಮಸ್ಯೆಯಿಂದ ಪಾರಾಗುತ್ತಾರೆ. ಕೆಲವರಿಗೆ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಮೂರು ದಿನಗಳ ಕಾಲ ನಿರಂತರವಾಗಿ ಜ್ವರ, ಮೈಕೈ ನೋವು ಕಾಡಿದರೆ ತಕ್ಷಣ ವೈದ್ಯರಿಗೆ ತೋರಿಸಬೇಕು. ಆಸ್ಪತ್ರೆಗೆ ದಾಖಲಾಗಬೇಕು ಎಂದು ವೈದ್ಯರು ಸಲಹೆ ನೀಡಿದರೆ ದಾಖಲಾಗಿ ಸೂಕ್ತ ಔಷಧಿ ಮತ್ತು ಚಿಕಿತ್ಸೆ ಪಡೆಯಬೇಕು.

ಡೆಂಗ್ಯೂ ಜ್ವರಕ್ಕೆ ಸೊಳ್ಳೆ ಕಡಿತ ಕಾರಣ

ಒಬ್ಬ ಡೆಂಗ್ಯೂ ಜ್ವರ ಸೋಂಕಿತ ವ್ಯಕ್ತಿಯನ್ನು ಒಂದು ಸೊಳ್ಳೆ ಕಚ್ಚಿದಾಗ, ಆ ಮನುಷ್ಯನಲ್ಲಿರುವ ವೈರಸ್ ಸೊಳ್ಳೆಯ ದೇಹದೊಳಗೆ ಸೇರಿ ಅದೇ ಸೊಳ್ಳೆ ಇನ್ನೊಬ್ಬ ಮನುಷ್ಯನನ್ನು ಕಚ್ಚಿದಾಗ, ಆ ವ್ಯಕ್ತಿಯ ರಕ್ತದ ಹರಿವಿನಲ್ಲಿ ಡೆಂಗ್ಯೂ ವೈರಸ್ ತನ್ನ ಸಂತತಿ ಹೆಚ್ಚಿಸಿಕೊಳ್ಳುತ್ತದೆ.

ಡೆಂಗ್ಯೂ ಜ್ವರ ತಡೆಗಟ್ಟಲು ಮೊತ್ತಮೊದಲು ಸೊಳ್ಳೆಗಳನ್ನು ನಿಯಂತ್ರಿಸಬೇಕು. ಮಳೆಗಾಲದಲ್ಲಿ ನೀರು ನಿಲ್ಲಲು ಬಿಡಬಾರದು. ನೀರಿನಲ್ಲಿ ಸೊಳ್ಳೆಗಳು ಬೆಳೆಯುತ್ತವೆ. ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿ ಇಡಬಾರದು. ಮನೆಯ ಸುತ್ತಲೂ ಹಾಗೂ ತಾರಸಿಯ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಿ. ತೆಂಗಿನ ಚಿಪ್ಪ ಮತ್ತು ಟೈರಿನಂತಹ ತ್ಯಾಜ್ಯವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ತೊಟ್ಟಿ, ಬಿಂದಿಗೆ ಮತ್ತು ಡ್ರಮ್‌ಗಳಲ್ಲಿ 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಬೇಕು. ಸೊಳ್ಳೆಗಳನ್ನು ತಡೆಯಲು ಕಿಟಕಿ ಮತ್ತು ಬಾಗಿಲುಗಳಿಗೆ ಮೆಶ್ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ. ಸೊಳ್ಳೆ ಪರದೆ ಹಾಕಿಕೊಂಡು ಮಲಗುವುದು ಒಳ್ಳೆಯದು. ಹಳ್ಳಿಗಳಲ್ಲಾದರೆ ಸೊಳ್ಳೆಗಳನ್ನು ಓಡಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳ್ಳೆಯದು. ನಗರಗಳಲ್ಲಿ ಸೊಳ್ಳೆ ನಿವಾರಕಗಳನ್ನು ಬಳಸಬೇಕು.

ಡೆಂಗ್ಯೂ ತಡೆಗೆ ಮುನ್ನೆಚ್ಚರಿಕೆ ಅಗತ್ಯ

ಸೊಳ್ಳೆ ಕಚ್ಚದಂತೆ ಸದಾ ಎಚ್ಚರವಹಿಸಬೇಕು. ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಬಹಳ ಉತ್ತಮ. ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಬೇಕು. ಸೊಳ್ಳೆಗಳು ಕಡಿಯದಂತೆ ನೋಡಿಕೊಳ್ಳಲು ಮೈ ತುಂಬಾ ಬಟ್ಟೆ ಧರಿಸಿ.

ಡೆಂಗ್ಯೂ ಸೋಂಕಿನಿಂದ ಪಾರಾಗಲು ಹೆಚ್ಚಾಗಿ ಗಾಳಿ ಮತ್ತು ಬೆಳಕಿನ ವಾತಾವರಣ ತುಂಬಿರುವ ಪ್ರದೇಶದಲ್ಲಿ ವಾಸ ಮಾಡಬೇಕಾದ ಅವಶ್ಯಕತೆ ಇರುತ್ತದೆ. ಇರುವ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳುವುದರ ಮುಖಾಂತರ ಡೆಂಗ್ಯೂ ಸೊಳ್ಳೆಗಳಿಗೆ ಕಡಿವಾಣ ಹಾಕಬಹುದು.

ಭಾರತದಲ್ಲಿ ಡೆಂಗ್ಯೂ ಜ್ವರದ ಬಗೆಗೆ ಗಮನಾರ್ಹ ಸಾರ್ವಜನಿಕ ಆರೋಗ್ಯ ಕಾಳಜಿ ಇದೆ. ಮಾನ್ಸೂನ್ ಕಾಲದಲ್ಲಿ (ಜೂನ್ ನಿಂದ ಸೆಪ್ಟೆಂಬರ್ ತನಕ) ಸೊಳ್ಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಎಚ್ಚರಿಕೆ ವಹಿಸಬೇಕು. ಈಗ ಬೆಂಗಳೂರು ಸೇರಿದಂತೆ ಕನಿಷ್ಠ 15 ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ.

ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ ನಮ್ಮ ರಾಜ್ಯದಲ್ಲಿ ಈ ವರ್ಷ ಜೂನ್ 17 ರವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 2,024. ಕಳೆದ ವರ್ಷ ಇದೇ ಅವಧಿಯಲ್ಲಿ 2,014 ಪ್ರಕರಣಗಳು ವರದಿಯಾಗಿದ್ದವು. ರಾಜ್ಯದಲ್ಲಿ 2022ರಲ್ಲಿ ಒಟ್ಟು 9,889 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದವು ಮತ್ತು ಒಂಬತ್ತು ಜನರು ಇದರಿಂದ ಸಾವನ್ನಪ್ಪಿದ್ದರು. ಈ ವರ್ಷ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಶೇಕಡಾ 36ಕ್ಕಿಂತ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿವೆ ಉಳಿದ ಜಿಲ್ಲೆಗಳ ಪೈಕಿ ಮೈಸೂರಿನಲ್ಲಿ ಇದುವರೆಗೆ 175 ಪ್ರಕರಣಗಳು ದಾಖಲಾಗಿವೆ. ಮೈಸೂರಿನ ನಂತರ ವಿಜಯಪುರ (113), ಚಿತ್ರದುರ್ಗ (91), ಮತ್ತು ಬೆಳಗಾವಿ (78) ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಕಂಡುಬಂದಿವೆ. ಆದ್ದರಿಂದ ಡೆಂಗ್ಯೂ ಬಗೆಗೆ ಎಚ್ಚರಿಕೆ ವಹಿಸಬೇಕಾದ ಅವಶ್ಯಕತೆ ಇದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com