ಬೀದಿಗೆ ಬಂದ ಬಿಜೆಪಿ ಜಗಳ; ಕಾಂಗ್ರೆಸ್ ನತ್ತ ಅತೃಪ್ತರ ಹೆಜ್ಜೆ (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆಪರೇಷನ್ ಹಸ್ತ ಕಾರ್ಯಾಚರಣೆಗೆ ಇದು ಮುನ್ನುಡಿ. ಬೆಳಗಾವಿಯಲ್ಲಿ ನಡೆದ ವಿಧಾನಸಭೆಯ ಅಧಿವೇಶನ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ನೋಡಿದರೆ ಲೋಕಸಭೆ ಚುನಾವಣೆಗೆ ಮೊದಲೇ ಬಿಜೆಪಿ- ಜೆಡಿಎಸ್ ಪಕ್ಷಗಳ ಕೆಲವು ಶಾಸಕರು ಕಾಂಗ್ರೆಸ್ ಸೇರುವ ಸಾಧ್ಯತೆಗಳು ಕಂಡು ಬಂದಿವೆ. ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರಿಗಾಗಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಬಿಜೆಪಿಯ ಶಾಸಕರಾದ ಎಸ್.ಟಿ. ಸೋಮಶೇಖರ್, ಹಾಗೂ ಶಿವರಾಮ ಹೆಬ್ಬಾರ್ ಪಾಲ್ಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುವುದು ಖಚಿತ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇಲ್ಲಿಯವರೆಗೆ ರಹಸ್ಯವಾಗಿ ನಡೆಯುತ್ತಿದ್ದ ಈ ಚಟುವಟಿಕೆಗೆ ಇದೀಗ ಬಹಿರಂಗಗೊಳ್ಳುವ ಮೂಲಕ ಬಿಜೆಪಿಯನ್ನು ಪೇಚಿಗೆ ಸಿಕ್ಕಿಸಿದೆ.

ಔತಣ ಕೂಟದಲ್ಲಿ ಬಿಜೆಪಿಯ ಇಬ್ಬರು ಶಾಸಕರಷ್ಟೇ ಅಲ್ಲ. ಅನ್ಯ ಪಕ್ಷದ  ಎಂಟು ಮಂದಿ ಶಾಸಕರೂ ಪಾಲ್ಗೊಂಡಿದ್ದರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟ ಪಡಿಸುವ ಮೂಲಕ ವಿಪಕ್ಷಗಳಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣರಾಗಿದ್ದಾರೆ. ವಿಧಾನ ಸಭೆಯಲ್ಲಿ ಬಿಜೆಪಿ ನಂತರ 19 ಸದಸ್ಯರನ್ನು ಹೊಂದಿರುವ ಜೆಡಿಎಸ್ ಮತ್ತೊಂದು ಪ್ರತಿಪಕ್ಷವಾಗಿದ್ದು ಶಿವಕುಮಾರ್ ಆ ಪಕ್ಷದ ಹೆಸರು ಹೇಳಿಲ್ಲ. ಆದರೆ ಆ ಪಕ್ಷದ ಕೆಲವು ಶಾಸಕರೂ ಕಾಂಗ್ರೆಸ್ ಸೇರ್ಪಡೆಗೆ ಒಲವು ಹೊಂದಿದ್ದಾರೆ ಎಂಬ ಸಂದೇಶವನ್ನು ಬಹಿರಂಗವಾಗಿ ರವಾನಿಸಿದ್ದಾರೆ. ಇನ್ನುಳಿದಿರುವುದು ಒಂದೇ ಪ್ರಶ್ನೆ. ಲೋಕಸಭೆ ಚುನಾವಣೆಗೆ ಮೊದಲೇ ಈ ಪಕ್ಷಾಂತರ ಪ್ರಕ್ರಿಯೆ ನಡೆಯುತ್ತದೆಯ? ಅಥವಾ ಚುನಾವಣೆ ನಂತರವಾ? ಎಂಬುದು. ಒಂದಂತೂ ಸ್ಪಷ್ಟ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರು ಹಾಗೂ ವಿಧಾನಸಭೆಯ ವಿಪಕ್ಷ ನಾಯಕರ ನೇಮಕದ ನಂತರ ಅಸಮಾಧಾನದ ಬೆಂಕಿ ಭುಗಿಲೆದ್ದಿದೆ. ಅದು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದೇ ವೇಳೆ  ಈ ಭಿನ್ನಮತವನ್ನು ಶಮನ ಮಾಡುವ ಪ್ರಯತ್ನಗಳೂ ಯಶಸ್ವಿಯಾಗಿಲ್ಲ. 

ಪಕ್ಷಾಂತರ ಕಾಯ್ದೆ ಅನ್ವಯ ಅನರ್ಹತೆಯ ಭೀತಿ ಅವರನ್ನು ಕಾಡುತ್ತಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದರೆ ಹಿತ ಕಾಯಲಾಗುವುದು ಎಂಬ ಭರವಸೆಯೇನೋ ಕೆಪಿಸಿ ಅಧ್ಯಕ್ಷರಿಂದ ಸಿಕ್ಕಿದೆ. ಆದರೆ ಅಷ್ಟನ್ನೇ ನಂಬಿಕೊಂಡು ಹೋಗುವ ಸ್ಥಿತಿಯಲ್ಲಿ ಅತೃಪ್ತರೂ ಇಲ್ಲ. ಶಾಸಕ ಸ್ಥಾನವನ್ನೂ ಉಳಿಸಿಕೊಂಡು ಕಾಂಗ್ರೆಸ್ ನ್ನೂ ಬೆಂಬಲಿಸುವ ಕಾನೂನು ಮಾರ್ಗಗಳ ಬಗ್ಗೆ ಸದ್ಯಕ್ಕೆ ಚರ್ಚೆ ನಡೆದಿದೆ. ಇನ್ನುಳಿದಂತೆ ಜೆಡಿಎಸ್ ಶಾಸಕರಲ್ಲಿ ಹೆಚ್ಚಿನವರಿಗೆ ಪಕ್ಷದ ಕುರಿತಾಗಿ ಯಾವುದೇ ಆಶಾವಾದ ಉಳಿದಿಲ್ಲ. ರಾಷ್ಟ್ರ ಮಟ್ಟದಲ್ಲಿ ಜೆಡಿಎಸ್ ಇಬ್ಭಾಗ ಆಗಿದೆ. ಒಂದು ಗುಂಪು ಪಕ್ಷದ ರಾಷ್ಟ್ರೀಯ ಅಧ್ಯಕ್ಷ , ಮಾಜಿ ಪ್ರಧಾನಿ ದೇವೇಗೌಡರನ್ನೇ ಪಕ್ಷದಿಂದ ಉಚ್ಛಾಟಿಸಿದ್ದು ತಮ್ಮದೇ ನಿಜವಾದ ಜೆಡಿಎಸ್ ಎಂದು ಘೋಷಿಸಿಕೊಂಡಿದೆ. ಈ ವಿವಾದ ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗ ಹಾಗೂ ನ್ಯಾಯಾಲಯಗಳ ಕಟಕಟೆಯನ್ನೂ ಏರಲಿದೆ. ಚುನಾವಣಾ ಆಯೋಗವೇನಾದರೂ ವಿವಾದ ಇತ್ಯರ್ಥ ಆಗುವ ತನಕ ತೆನೆ ಹೊತ್ತ ಮಹಿಳೆ ಚಿಹ್ನೆಯನ್ನು ಬಳಸಬಾರದೆಂದು ಉಭಯ ಬಣಗಳಿಗೆ ನಿರ್ಬಂಧ ವಿಧಿಸಿದರೆ ಅದರ ಪರಿಣಾಮ ಸಂಘಟನೆ ಮೇಲೆಯೂ ಆಗಲಿದೆ. ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಇರುವ ಈ ಹಂತದಲ್ಲಿ ಈ ಗೊಂದಲ ಮುಂದುವರಿದರೆ ಒಂದಷ್ಟು ಶಾಸಕರು ಪಕ್ಷ ತ್ಯಜಿಸುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಿನ ಮಾಹಿತಿ ಪ್ರಕಾರ ಜೆಡಿಎಸ್ ನ ಹತ್ತು ಶಾಸಕರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಾಳ ಹಾಕಿದ್ದಾರೆ. ಇದರ ಫಲಿತಾಂಶ ಕಾದು ನೋಡಬೇಕು.

ಬಿಜೆಪಿ ಒಡೆದ ಮನೆ:      
ಇನ್ನು ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರು ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕರ ನೇಮಕದ ನಂತರವೂ ಕಚ್ಚಾಟ ನಿಂತಿಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನಡುವೆ ಸಮನ್ವಯತೆಯೇ ಇಲ್ಲದ ಕಾರಣ ಅಧಿವೇಶನದಲ್ಲೇ ಒಡಕು ಬಹಿರಂಗವಾಗಿ ಪಕ್ಷ ನಗೆಪಾಟಿಲಿಗೀಡಾಗಿದೆ. ಪ್ರತಿಪಕ್ಷದ ನಾಯಕರಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಬೇಕಿದ್ದ, ಆಡಳಿತಾತ್ಮಕ ವೈಫಲ್ಯಗಳ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಪರಿಣಾಮಕಾರಿ ಪ್ರತಿಭಟನೆ ಮಾಡಬೇಕಿದ್ದ ಅಶೋಕ್ ತಮ್ಮದೇ ಪಕ್ಷದ ಶಾಸಕರನ್ನು ಸಂಬಾಳಿಸುವಲ್ಲಿ ವಿಫಲರಾಗಿದ್ದಾರೆ. 

ಪ್ರತಿಪಕ್ಷವಾಗಿ ಸದನದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ಯೋಜನೆ ಇಲ್ಲದೇ ಅರೆ ಬರೆ ತಯಾರಿ ಮೂಲಕ ಸರ್ಕಾರವನ್ನು ಎದುರಿಸಲು ಬೆಂಬಲವೂ ಇಲ್ಲದೇ ಅಸಹಾಯಕರಾಗಿ ಏಕಾಂಗಿಯಾಗಿದ್ದಾರೆ. ಇದೀಗ ಅವರ ಕಾರ್ಯ ನಿರ್ವಹಣಾ ಶೈಲಿ ವಿರುದ್ಧ ಸ್ವಯಂ ಅಧ್ಯಕ್ಷ ವಿಜಯೇಂದ್ರ ಅವರೇ ಅಸಮಾಧಾನಗೊಂಡಿದ್ದಾರೆ. ಮತ್ತೊಂದು ಕಡೆ ಸರ್ಕಾರವನ್ನು ಸಮರ್ಥವಾಗಿ ಎದುರಿಸಲು ವಿಫಲರಾಗಿರುವ ಪ್ರತಿಪಕ್ಷದ ನಾಯಕರನ್ನು ಬದಲಿಸಿ ಬೇರೆ ಸಮರ್ಥರನ್ನು ಆ ಸ್ಥಾನಕ್ಕೆ ನೇಮಿಸಬೇಕೆಂಬ ಕೂಗು ಬಿಜೆಪಿಯಲ್ಲಿ ಎದ್ದಿದೆ. 

ಬಿಜೆಪಿಯ ಇಬ್ಬರು ಶಾಸಕರು ಕಾಂಗ್ರೆಸ್ ಪಕ್ಷದ ಔತಣಕೂಟದಲ್ಲಿ ಪಾಲ್ಗೊಂಡಿದ್ದ ವಿಚಾರದ ಕುರಿತೂ ಅಶೋಕ್ ಹಾಗೂ ವಿಜಯೇಂದ್ರ ನೀಡಿರುವ ಪ್ರತಿಕ್ರಿಯೆಗಳು ಸಂಪೂರ್ಣ ತದ್ವಿರುದ್ಧ ವಾಗಿವೆ. ಇದೊಂದು ಸಹಜ ಘಟನೆ ಎಂಬಂತೆ ಅಶೋಕ್ ಪ್ರತಿಕ್ರಿಯಿಸಿದ್ದರೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ವಿಜಯೇಂದ್ರ ಹೇಳಿದ್ದಾರೆ. ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಮತ್ತು ಸಂದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಆಡಳಿತ ಪಕ್ಷದ ಘಟಾನುಘಟಿ ನಾಯಕರನ್ನು ಎದುರಿಸಲಾಗದೇ ಪ್ರತಿಪಕ್ಷದ ನಾಯಕರು ಪೇಲವವಾಗಿ ವರ್ತಿಸುವ ಮೂಲಕ ಪಕ್ಷದ ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ. ಪ್ರತಿಪಕ್ಷ ಬಿಜೆಪಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದ್ದ ಸರ್ಕಾರ ಆ ರೀತಿ ಮಾಡದೇ ಹತ್ತರಲ್ಲಿ ಹನ್ನೊಂದು ಎಂಬಂತೆ ಪರಿಗಣಿಸದ್ದಕ್ಕೆ ಅಶೋಕ್ ವೈಫಲ್ಯವೇ ಕಾರಣ ಎಂಬ ಆರೋಪಗಳು ಈಗ ದಟ್ಟವಾಗುತ್ತಿವೆ. ಬಿಜೆಪಿ ಮೂಲಗಳ ಪ್ರಕಾರ ಪಕ್ಷಕ್ಕೊಬ್ಬ ಸಮರ್ಥ ವಿಪಕ್ಷ ನಾಯಕನ ಅವಶ್ಯಕತೆ ಇದೆ. ಈಗ ಆ ಸ್ಥಾನದಲ್ಲಿರುವ ಅಶೋಕ್ ಮುಂದುವರಿದರೆ ಭವಿಷ್ಯದಲ್ಲಿ ಪಕ್ಷದ ಸ್ಥಿತಿ ಇನ್ನೂ ಹೀನಾಯವಾಗಬಹುದು ಎನ್ನುತ್ತಾರೆ. 

ಕೈಕೊಟ್ಟ ಲೆಕ್ಕಾಚಾರ? 
ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ನೇಮಕಾತಿಯ ಪ್ರಸ್ತಾಪ ಬಂದಾಗ ಆರಂಭದಲ್ಲಿ ಹಿರಿಯ ನಾಯಕ ಯಡಿಯೂರಪ್ಪ ಅವರು ಅಶೋಕ್ ಹೆಸರಿಗೆ ಒತ್ತು ನೀಡಲು ಕಾರಣವೂ ಇತ್ತು. ರಾಜ್ಯಾಧ್ಯಕ್ಷರಾಗಿ ತಮ್ಮ ಪುತ್ರ ನೇಮಕಗೊಂಡಿರುವುದರಿಂದ ಅವರ ಜತೆ ಸಮನ್ವಯದಿಂದ ಕೆಲಸ ಮಾಡುವ ಹಾಗೆಯೇ ಯಾವುದೇ ರೀತಿಯಿಂದಲೂ ಪ್ರಭಾವಿ ಅಲ್ಲದ, ಹೇಳಿದ್ದನ್ನಷ್ಟೇ ವಿನಮ್ರವಾಗಿ ಪಾಲಿಸುವ ವ್ಯಕ್ತಿ ಬೇಕಾಗಿತ್ತು. ಅಶೋಕ್ ಅವರಲ್ಲಿ ಆ ಎಲ್ಲ ಅರ್ಹತೆಗಳನ್ನು ಗಮನಿಸಿದ್ದ ಯಡಿಯೂರಪ್ಪ ಅವರನ್ನೇ ವಿಪಕ್ಷ ನಾಯಕನ ಸ್ಥಾನಕ್ಕೆ ಸೂಚಿಸಿದರು. ಆದರೆ ಈ ಲೆಕ್ಕಾಚಾರ ಮೊದಲ ಅಧಿವೇಶನದಲ್ಲೇ ಹುಸಿಯಾಯಿತು.

ಅಶೋಕ್ ಎಡಬಿಡಂಗಿತನ
ಅಶೋಕ್ ಸದನದ ಒಳಗೆ ಸರ್ಕಾರದ ವಿರುದ್ಧದ ಪ್ರತಿಭಟನೆ ವಿಚಾರದಲ್ಲಿ ತಮಗೆ ಸರಿ ಅನ್ನಿಸಿದಂತೆ ನಡೆದುಕೊಂಡರಲ್ಲದೇ ಇತರ ಶಾಸಕರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಜತೆಗೇ ಸರ್ಕಾರದ ವಿರುದ್ಧ ಪಕ್ಷದ ಹೋರಾಟವನ್ನುನಿರ್ಣಾಯಕ ಘಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ವಿಫಲರಾಗುವ ಮೂಲಕ ಸಾರ್ವತ್ರಿಕವಾಗಿ ಪಕ್ಷವನ್ನು ಅವಹೇಳನಕಾರಿ ಸ್ಥಿತಿಗೆ ತಲುಪಿಸಿದರು. ಪಕ್ಷದ ಅಧ್ಯಕ್ಷರ ಜತೆಗೂ ಸಮಾಲೋಚನೆ ನಡೆಸಲಿಲ್ಲ. ಹೀಗಾಗಿ ಸದನದೊಳಗೆ ಬಿಜೆಪಿಗೆ ತಬ್ಬಿಬ್ಬಾಗುವ ಪರಿಸ್ಥಿತಿ ಬಂದೊದಗಿತು. ಕೆಲವು ಶಾಸಕರು ನೇರವಾಗೇ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ ಇನ್ನುಳಿದವರುಏನು ಮಾಡಬೇಕೆಂದು ತೋಚದೇ ಕಕ್ಕಾಬಿಕ್ಕಿಯಾಗಿ ವಿಜಯೇಂದ್ರ ಸುತ್ತ ನಿಂತುಕೊಂಡರು. ಇದು ಸದನದೊಳಗೆ ಆಡಳಿತ ಪಕ್ಷಕ್ಕೆ ಬಿಜೆಪಿ ವಿರುದ್ಧ ಟೀಕೆಗೆ ಇನ್ನೊಂದು ಅಸ್ತ್ರ ಸಿಕ್ಕಂತಾಯಿತು. ಹಾಗೆ ನೋಡಿದರೆ ಈ ಹಿಂದೆ ಯಡಿಯೂರಪ್ಪ ಅವರು ವಿಪಕ್ಷ ನಾಯಕರಾಗಿದ್ದಾಗಲೂ ಇಂಥದೇ ಪರಿಸ್ಥಿತಿ ಇತ್ತು. ಆಗ ಬಿಜೆಪಿ ಶಾಸಕರಾಗಿದ್ದ ಎಚ್.ಎನ್.ನಂಜೇಗೌಡ, ಡಾ. ಜೀವರಾಜ ಆಳ್ವ ಸೇರಿದಂತೆ ಕೆಲವರ ಚಿಂತನೆಗಳು ವಿಪಕ್ಷ ನಾಯಕರ ನಿಲುವಿಗೆ ವಿರುದ್ಧ ಇತ್ತಾದರೂ ಪಕ್ಷದೊಳಗಿನ ಶಿಸ್ತಿನ ಪರಿಧಿ ದಾಟದಂತೆ ಯಡಿಯೂರಪ್ಪ ನೋಡಿಕೊಂಡಿದ್ದರು.

ಹಾಗೆಯೇ ಸದನದಲ್ಲಿ ಪ್ರಸ್ತಾಪಿಸುವ ವಿಚಾರಗಳು, ಕೈಗೊಳ್ಳಬೇಕಾದ ಹೋರಾಟಗಳ ಕುರಿತು ಅನುಭವಿ ನಾಯಕರ ಜತೆಗೆ ಸಮಾಲೋಚನೆ ನಡೆಸಿ ಪಕ್ಷದ ನಿಲುವು ಸರ್ವ ಸಮ್ಮತವಾಗುವಂತೆ ಜಾಣ್ಮೆ ವಹಿಸುತ್ತಿದ್ದರು. ಇದಿರಿಂದಾಗಿ ಆಂತರಿಕ ಭಿನ್ನಮತ ಇದ್ದರೂ ಸದನದೊಳಗೆ ಅದು ಬಹಿರಂಗವಾಗಿರಲಿಲ್ಲ. ಯಡಿಯೂರಪ್ಪನವರ, ವ್ಯಕ್ತಿತ್ವದ ಕುರಿತಾಗಿ ಬಿಜೆಪಿಯ ಶಾಸಕರಿಗೆ ಭಯ ಮಿಶ್ರಿತ ಗೌರವ ಇತ್ತು. ಇದಕ್ಕೆ ಅವರ ಹೋರಾಟದ ಹಿನ್ನಲೆಯೂ ಕಾರಣ. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಅಶೋಕ್ ಅವರಲ್ಲಿ ಅಂತಹ ವ್ಯಕ್ತಿತ್ವ ನಿರೀಕ್ಷಿಸುವುದು ಕಷ್ಟ ಅವರನ್ನು ಯಾವುದೇ ಶಾಸಕರು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದೂ ಶಾಸಕರು ಹೇಳುತ್ತಾರೆ. ಬಿಜೆಪಿಯ ಮತ್ತೊಬ್ಬ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ, ವಿಜಯೇಂದ್ರ ಮತ್ತು ಅಶೋಕ್ ವಿರುದ್ಧ ತಮ್ಮ ಬಹಿರಂಗ ಸಮರ ಮುಂದುವರಿಸಿದ್ದಾರೆ. ಇದು ಮತ್ತಷ್ಟು ಅತಿರೇಕದ ಹಂತಕ್ಕೆ ತಲುಪಿದೆ ವಿದ್ಯಮಾನಗಳನ್ನು ಗಮನಿಸುತ್ತಿರುವ ಹೈಕಮಾಂಡ್, ಅವರನ್ನು ಸುಮ್ಮನಿರಿಸುವ ಕೆಲಸ ಮಾಡುತ್ತಿಲ್ಲ. ದಿಲ್ಲಿಯಲ್ಲಿ ಪ್ರಭಾವಿ ಆಗಿರುವ ಬಿಜೆಪಿಯ ಪದಾಧಿಕಾರಿಯೊಬ್ಬರ ಚಿತಾವಣೆಯೇ ಯತ್ನಾಳ್ ವರ್ತನೆಗೆ ಕಾರಣ ಎಂಬ ಪಕ್ಷದ ಮೂಲಗಳ ಮಾತಿನಲ್ಲಿ ಹುರುಳಿಲ್ಲದೇ ಇಲ್ಲ. 

ಸದ್ಯಕ್ಕಂತೂ ಬಿಜೆಪಿ ಒಡೆದ ಮನೆ. ಮುಂದಿನ ದಿನಗಳಲ್ಲಿ ಸಂಘಟನೆಗಿಂತ ಅತೃಪ್ತರನ್ನು ಸಂಬಾಳಿಸುವುದೇ ಅಧ್ಯಕ್ಷ ವಿಜಯೇಂದ್ರ ಅವರಿಗೆ ದೊಡ್ಡ ಕೆಲಸ ಆಗಬಹುದು.

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com