ಹೈಕಮಾಂಡ್ ಮೌನ; ಅರಣ್ಯ ರೋಧನವಾದ ಯತ್ನಾಳ್ ಆರ್ಭಟ! (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಮತ್ತೆ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಿಡಿದು ನಿಂತಿದ್ದಾರೆ. 
ಬಸನಗೌಡಪಾಟೀಲ್ ಯತ್ನಾಳ್- ಬಿಜೆಪಿ ಹೈಕಮಾಂಡ್ ನಾಯಕರು
ಬಸನಗೌಡಪಾಟೀಲ್ ಯತ್ನಾಳ್- ಬಿಜೆಪಿ ಹೈಕಮಾಂಡ್ ನಾಯಕರು

ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಮತ್ತೆ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಿಡಿದು ನಿಂತಿದ್ದಾರೆ. 
ಅವರ ಆರ್ಭಟ ನೋಡಿದರೆ ಈ ಯುದ್ಧ ಸದ್ಯಕ್ಕೆ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ.

ಬರೀ ಯತ್ನಾಳ್ ಅಷ್ಟೇ ಅಲ್ಲ, ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾಗಿ ಆರ್.ಅಶೋಕ್ ವಿಧಾನಸಭೆಯ ಪ್ರತಿಪಕ್ಷದ ನಾಯಕನಾಗಿ ನೇಮಕಗೊಂಡ ನಂತರ ಬಿಜೆಪಿಯಲ್ಲಿ ಕುದಿಯುತ್ತಿದ್ದ ಅತೃಪ್ತಿ ಸ್ಫೋಟಗೊಳ್ಳುವ ಹಂತಕ್ಕೆ ಮುಟ್ಟಿದೆ. ಯತ್ನಾಳ್ ಬಹಿರಂಗ ಆಕ್ರೋಶ ಅದಕ್ಕೊಂದು ಔಪಚಾರಿಕ ಪ್ರಾರಂಭವಷ್ಟೆ ಎನ್ನಬಹುದು.

ಬೆಳಗಾವಿಯಲ್ಲೀಗ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ , ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವೈಫಲ್ಯಗಳ ಬಗ್ಗೆ ಗಂಭೀರ ಚರ್ಚೆ ಮೂಲಕ ಸರ್ಕಾರವನ್ನು ಸದನದಲ್ಲಿ ಇಕ್ಕಟ್ಟಿಗೆ ಸಿಕ್ಕಿಸುವ ತರಾಟೆಗೆ ತೆಗೆದುಕೊಳ್ಳುವ ಮೂಲಕ ಸಾರ್ವಜನಿಕರ ಗಮನ ಸೆಳೆಯಬೇಕಿದ್ದ ಪ್ರತಿಪಕ್ಷ ಬಿಜೆಪಿಯಲ್ಲಿ ಈಗ ಆಂತರಿಕ ಕಚ್ಚಾಟ ಬೀದಿಗೆ ಬಂದಿದೆ. ಸಹಜವಾಗೇ ಯತ್ನಾಳ್ ಅದರ ಕೇಂದ್ರ ಬಿಂದು ಆಗಿದ್ದಾರೆ.

ಮತ್ತೊಂದು ಕಡೆ ಅಧಿವೇಶನ ಆರಂಭದ ನಂತರವೂ ಹಿರಿಯರ ಸದನ ಎಂದೇ ಗುರುತಿಸಲಾಗುವ ವಿಧಾನ ಪರಿಷತ್ತಿನಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದೇ ನಗೆ ಪಾಟಲಿಗೆ ಗುರಿಯಾಗಿದೆ. ಮತ್ತೊಂದು ಕಡೆ ಆಂತರಿಕ ದಂಗೆ ವಿಕೋಪಕ್ಕೆ ಹೋಗುವುದು ಗೊತ್ತಿದ್ದರೂ ಆ ಪಕ್ಷದ ದಿಲ್ಲಿ ನಾಯಕರು ತಮಗೆ ಈ ವಿದ್ಯಮಾನ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಬಿಜೆಪಿಯಲ್ಲಿ ಶಾಶ್ವತ ಭಿನ್ನಮತೀಯ ನಾಯಕ ಎಂದು ವಿರೋಧಿಗಳಿಂದ ಗುರುತಿಸಲ್ಪಡುವ ವಿಜಯಾಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ಸೇರಿದಂತೆ ಪಕ್ಷದ ಹಲವು ನಾಯಕರುಗಳ ವಿರುದ್ಧ ಸಾರ್ವಜನಿಕವಾಗೇ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಇದು ಹೊಸದೇನಲ್ಲ. ಆದರೆ ಶಿಸ್ತು, ಸಂಯಮ, ಏಕತೆ ಕುರಿತು ಮಾತನಾಡುವ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಇದು ಸಂಘಟನಾತ್ಮಕವಾಗಿ ಪಕ್ಷದ ಏಕತೆಗೆ ಧಕ್ಕೆ ಬರುತ್ತದೆ ಎಂದು ಈವರೆವಿಗೆ ಅನಿಸಿಲ್ಲ. ಹೀಗಾಗಿ ಯಡಿಯೂರಪ್ಪ ಮತ್ತು ಕೆಲವು ಮುಖಂಡರ ವಿರುದ್ಧ ಯತ್ನಾಳ್ ಆಗಾಗ ನಡೆಸುವ ವಾಗ್ದಾಳಿಗೆ ಹೈಕಮಾಂಡ್ ಮಟ್ಟದಲ್ಲಿ ಸಂಪರ್ಕ ಇದ್ದು ಪ್ರಭಾವಿ ಆಗಿರುವ ಮುಖಂಡರೊಬ್ಬರ ಬೆಂಬಲ ಇದೆ ಮತ್ತು ಈ ನಾಯಕರ ಅಭಯದ ಬೆಂಬಲದಿಂದಲೇ ಅವರು ಬಹಿರಂಗ ಸಮರಕ್ಕೆ ಇಳಿದಿದ್ದಾರೆ ಎಂಬ ಮಾತುಗಳು ಬಿಜೆಪಿಯ ಅಂಗಳದಲ್ಲಿ ಕೇಳಿ ಬರುತ್ತಿದೆ. 

ಬಿಜೆಪಿಯ ರಾಷ್ಟ್ರೀಯ ಸಮಿತಿಯ ನಡವಳಿಕೆಗಳನ್ನು ನೋಡಿದರೆ ಈ ಅನುಮಾನಗಳು ನಿಜ ಎಂಬ ಭಾವನೆಯೂ ಬರದಿರದು. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಯತ್ನಾಳ್ ಅದು ತಮ್ಮ ರಾಜಕೀಯ ವಿರೋಧಿ ಯಡಿಯೂರಪ್ಪ ಅವರ ಪುತ್ರನ ಪಾಲಾದಾಗಿನಿಂದ ಅವರ ಆಕ್ರೋಶ ಭುಗಿಲೆದ್ದು ಸಂಯಮದ ಚೌಕಟ್ಟನ್ನೂ ಮೀರಿದೆ. ಬಹಿರಂಗವಾಗೇ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ವಾಗ್ದಾಳಿಗಳನ್ನು ನಡೆಸುತ್ತಿದ್ದರೆ ಇದಕ್ಕೆ ಪ್ರತಿಯಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಉಳಿದವರು ಅದನ್ನು ಗಂಭಿರವಾಗಿ ತೆಗೆದುಕೊಂಡಿಲ್ಲ. ಆರಂಭದಲ್ಲಿ ಮಾತುಕತೆಯ ಮೂಲಕ ವಿವಾದ ಬಗೆಹರಿಯುವ ಅವಕಾಶಗಳು ಇತ್ತಾದರೂ ಆ ಅವಕಾಶದ ಬಾಗಿಲನ್ನು ಯತ್ನಾಳ್ ಅವರೇ ಮುಚ್ಚಿದ್ದರಿಂದ ಯಡಿಯೂರಪ್ಪ ಹಾಗೂ ವಿಜಯೇಂದ್ರ ಮತ್ತೆ ಸಂಧಾನಕ್ಕಾಗಿ ಅವರ ಬಳಿ ಹೋಗುವ ಪ್ರಯತ್ನ ಕೈಬಿಟ್ಟಿದ್ದಾರೆ. ಇನ್ನುಳಿದ ಮುಖಂಡರು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಕುಳಿತುಬಿಟ್ಟಿದ್ದಾರೆ. ಬಿಜೆಪಿಯ ಮತ್ತೊಬ್ಬ ಸಂತ್ರಸ್ತ ಮಾಜಿ ಸಚಿವ ವಿ. ಸೋಮಣ್ಣ ಅವರೇನೋ ಔಪಚಾರಿಕವಾಗಿ ಅವರನ್ನು ಬೆಂಬಲಿಸಿದ್ದರೂ, ಸೋಮಣ್ಣ ಜತೆ ಗುರುತಿಸಿಕೊಳ್ಳಲೂ ಯತ್ನಾಳ್ ಇಷ್ಟಪಡುತ್ತಿಲ್ಲ.

ಒಂದು ಕಡೆ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎಂದು ಹೇಳುತ್ತಿರುವ ಯತ್ನಾಳ್ ಮತ್ತೊಂದು ಕಡೆ ತಮ್ಮದೇ ಪಕ್ಷದ ಮುಖಂಡರುಗಳ ವಿರುದ್ಧ ಬಹಿರಂಗವಾಗೇ ಕಿಡಿಕಾರುವ ಮೂಲಕ ವಿರೋಧಾಭಾಸದ ನಡೆ ಪ್ರದರ್ಶಿಸುತ್ತಿದ್ದಾರೆ. ಒಂದರ್ಥದಲ್ಲಿ ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿಗಳ ಚದುರಂಗದಾಟಕ್ಕೆ ಯತ್ನಾಳ್ ದಾಳವಾಗಿ ಬಳಕೆ ಆಗುತ್ತಿದ್ದಾರೆ ಎಂಬುದು ಆ ಪಕ್ಷದ ಆಂತರಿಕ ವಿದ್ಯಮಾನಗಳನ್ನು ಗಮನಿಸಿದರೆ ಗೊತ್ತಾಗುವ ಸಂಗತಿ. ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ತೋಡಿಕೊಳ್ಳುವುದಾಗಿ ಹೇಳುತ್ತಿರುವ ಅವರಿಗೆ ದಿಲ್ಲಿಯಿಂದ ಈವರೆಗೆ ಕರೆ ಬಂದಿಲ್ಲ. ಉತ್ತರದ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯ ಗೆಲುವಿನ ಸಂಭ್ರಮದಲ್ಲಿರುವ ದಿಲ್ಲಿ ಮುಖಂಡರು ಯತ್ನಾಳ್ ಬಂಡಾಯವನ್ನು ಗಂಭಿರವಾಗಿ ಪರಿಗಣಿಸಿಯೇ ಇಲ್ಲ.

ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ವೈ.ವಿಜಯೇಂದ್ರ ಅಧಿಕಾರದ ಅವಧಿ ಲೋಕಸಭಾ ಚುನಾವಣೆ ಮುಗಿಯುವವರೆಗೆ ಮಾತ್ರ ಎಂದು ಯತ್ನಾಳ್ ಹೇಳುತ್ತಿದ್ದಾರಾದರೂ ಅಂತಹ ಸನ್ನಿವೇಶಗಳು ರಾಜ್ಯದಲ್ಲಿ ಇಲ್ಲ. ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ವಿಜಯೇಂದ್ರ ಹಿರಿಯ ಮುಖಂಡರುಗಳ ಜತೆಗೇ ಬೂತ್ ಮಟ್ಟದಲ್ಲಿರುವ ಕಾರ್ಯಕರ್ತರನ್ನು ನೇರವಾಗಿ ಅವರ ಮನೆಗಳಿಗೇ ಹೋಗಿ ಭೇಟಿ ಮಾಡುವ ಸಂಪ್ರದಾಯವನ್ನು ಆರಂಭಿಸಿರುವುದು ಜತಗೇ ಯಡಿಯೂರಪ್ಪ ಕೂಡಾ ಪಕ್ಷದ ಚಟುವಟಿಕೆಗಳಲ್ಲಿ ಚುರುಕಾಗಿರುವುದು ಬಿಜೆಪಿಯಲ್ಲಿ ಹೊಸ ಆಶಾವಾದವನ್ನು ಹುಟ್ಟುಹಾಕಿದೆ. ಹೀಗಾಗಿ ಹೆಚ್ಚು ಮಂದಿ ಶಾಸಕರು, ಮುಖಂಡರ ಬೆಂಬಲ ಯತ್ನಾಳ್ ಅವರಿಗೆ ಸಿಗುತ್ತಿಲ್ಲ.

ದಿಲ್ಲಿ ನಾಯಕರ ಮೌನ: ಪ್ರಾಬಲ್ಯದ ದೃಷ್ಟಿಯಿಂದಲೂ ಯಡಿಯೂರಪ್ಪ ಪರವೇ ಪಕ್ಷದಲ್ಲಿ ಒಲವು ವ್ಯಕ್ತವಾಗುತ್ತಿದೆ. ಯಾವುದೇ ದೃಷ್ಟಿಯಿಂದ ನೋಡಿದರೂ ರಾಜ್ಯದಲ್ಲಿ ಪಕ್ಷದ ನೂತನ ಅಧ್ಯಕ್ಷರ ಬದಲಾವಣೆ ಸಾಧ್ಯತೆ ಇಲ್ಲವೇ ಇಲ್ಲ. ಇದು ಯತ್ನಾಳ್ ಅವರಿಗೂ ಗೊತ್ತು. ಆದರೂ ಬಹಿರಂಗ ಯುದ್ಧ ಘೋಷಿಸಿರುವುದರ ಹಿಂದೆ ಅವರದ್ಧೇ ಲೆಕ್ಕಾಚಾರಗಳಿವೆ. ಮುಂದಿನ ಜೂನ್ ವರೆಗೆ ಈ ವಿವಾದವನ್ನು ಜೀವಂತವಾಗಿರಿಸಿದರೆ ದಿಲ್ಲಿ ನಾಯಕರು ಕಣ್ತೆರೆದು ತಮ್ಮನ್ನು ರಾಜ್ಯಸಭೆಗೆ ಕಳಿಸಬಹುದು ಅಥವಾ ರಾಷ್ಟ್ರೀಯ ಮಂಡಳಿಯಲ್ಲಿ ಪ್ರಮುಖ ಹುದ್ದೆ ಕೊಡಬಹುದು ಎಂಬ ಲೆಕ್ಕಾಚಾರದಲ್ಲಿ ಅವರಿದ್ದಾರೆ. ಇದೇ ಕಾರಣಕ್ಕೆ ತನ್ನ ಹೋರಾಟ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧವೇ ಹೊರತೂ ಪಕ್ಷದ ನಾಯಕತ್ವದ ವಿರುದ್ಧ ಅಲ್ಲ ಎಂಬುದನ್ನು ಸಾಬೀತು ಪಡಿಸಲು ಅವರು ಕಸರತ್ತು ನಡೆಸಿದ್ದಾರೆ. ಆದರೆ ಲೋಕಸಭೆ ಚುನಾವಣೆಯ ಸಿದ್ಧತೆಯಲ್ಲಿರುವ ರಾಷ್ಟ್ರೀಯ ನಾಯಕತ್ವ ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಳ್ಳುವ ಮನೋಸ್ಥಿತಿಯಲ್ಲಿ ಇಲ್ಲ. 

ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ವಿಜಯೇಂದ್ರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಯತ್ನಾಳ್ ಅವರ ಚಟುಟಿಕೆಗಳ ಬಗ್ಗೆ ವಿವರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಷ್ಟ್ರೀಯ ಅಧ್ಯಕ್ಷರು ಅವರನ್ನು ಸಮಾಧಾನಪಡಿಸಿ ಅದನ್ನೆಲ್ಲ ನಾವು ನೋಡಿಕೊಳ್ಳುತ್ತೇವೆ ನಿಮ್ಮ ಕೆಲಸದಲ್ಲಿ ನೀವು ನಿರಾತಂಕವಾಗಿ ಮುಂದುವರಿಯಿರಿ ಎಂದು ಬೆನ್ನುತಟ್ಟಿ ಕಳಿಸಿದ್ದಾರೆ. ಈ ವಿದ್ಯಮಾನಗಳನ್ನು ಗಮನಿಸಿದರೆ ಯತ್ನಾಳ್ ಬೆಂಬಲಕ್ಕೆ ಕೇಂದ್ರ ಸಮಿತಿಯ ಪ್ರಮುಖ ಮುಖಂಡರೂ ನಿಲ್ಲುವುದು ಕಷ್ಟ ಎಂಬುದು ಗೋಚರವಾಗುತ್ತದೆ.

ಮೌಲ್ವಿ ವಿರುದ್ಧ ಸಮರ: ಈ ಎಲ್ಲದರ ನಡುವೆ ಇದೀಗ ಯತ್ನಾಳ್ ವಿಜಾಪುರದ ಮುಸ್ಲಿಂ ಮೌಲ್ವಿಯೊಬ್ಬರ ವಿರುದ್ಧ ಯುದ್ಧ ಸಾರಿದ್ದಾರೆ. ಇತ್ತಿಚೆಗೆ ನಡೆದ ಧಾರ್ಮಿಕ ಸಮಾವೇಶದಲ್ಲಿ ಈ ಮೌಲ್ವಿ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪಾಲ್ಗೊಂಡಿದ್ದನ್ನು ಆಕ್ಷೇಪಿಸಿರುವ ಯತ್ನಾಳ್ ಈ ಮುಸ್ಲಿಂ ಧರ್ಮ ಗುರುವಿಗೆ ಇಸ್ಲಾಮಿಕ್ ಉಗ್ರ ಸಂಘಟನೆಗಳ ಸಂಪರ್ಕ ಇದೆ ಎಂದೂ ಗಂಭೀರ ಆರೋಪ ಮಾಡಿ ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆಗೆ ಆಗ್ರಹಿಸಿದ್ದಾರೆ. ವಿಶೇಷ ಎಂದರೆ ಈ ಹಿಂದೆ ಯತ್ನಾಳೇ ಬಿಜೆಪಿ ತ್ಯಜಿಸಿ ಜೆಡಿಎಸ್ ಸೇರಿದ್ದ ಸಂದರ್ಭದಲ್ಲಿ ಇದೇ ವಿಜಾಪುರದ ಮೌಲ್ವಿಗೂ ಅವರಿಗೂ ಗೆಳೆತನವಿತ್ತು. ಈ ಮೌಲ್ವಿ ನಡೆಸುತ್ತಿರುವ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ವಿವರ ಯತ್ನಾಳ್ ಅವರಿಗೆ ದಶಕಗಳಿಂದಲೂ ಗೊತ್ತಿತ್ತು. ಈಗ ಅದನ್ನು ಬೇರೆಯದೇ ರೀತಿಯಲ್ಲಿ ಪ್ರಸ್ತಾಪಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಮುಖಂಡರ ಗಮನ ಸೆಳೆಯಲು ಹೊರಟಿದ್ದಾರೆ ಎಂಬ ಟೀಕೆಗಳು ಒಂದು ಕಾಲದಲ್ಲಿ ಅವರ ಜತೆಗಿದ್ದ ವಿಜಾಪುರದ ಮುಖಂಡರಿಂದಲೇ ವ್ಯಕ್ತವಾಗುತ್ತಿವೆ. ವಿಶೇಷ ಎಂದರೆ ಈ ವಿಚಾರಕ್ಕೆ ಸೀಮಿತವಾಗಿ ಅವರನ್ನ ಬೆಂಬಲಿಸಿರುವ ಯಡಿಯೂರಪ್ಪ ಕೂಡಾ ಎನ್.ಐ.ಏ ತನಿಖೆಗೆ ಆಗ್ರಹಿಸಿದ್ದಾರೆ. 

ಇನ್ನು ವಿಧಾನಸಭೆಯಲ್ಲೂ ಪ್ರತಿಪಕ್ಷವಾಗಿ ಬಿಜೆಪಿ ಫಜೀತಿಯ ಪ್ರಸಂಗಗಳನ್ನು ತನ್ನದೇ ಶಾಸಕರಿಂದ ಎದುರಿಸುವ ಮೂಲಕ ಮುಜುಗುರಕ್ಕೀಡಾಗಿದೆ. ಈಗಾಗಲೇ ಕಾಂಗ್ರೆಸ್ ಸೇರುತ್ತಾರೆಂದೇ ಹೇಳಲಾಗುತ್ತಿರುವ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರನ್ನು ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ನಡೆಸಿರುವ ಪ್ರಯತ್ನ ಇನ್ನೂ ಫಲ ನೀಡಿಲ್ಲ. ಸದನದೊಳಗೇ ಸೋಮಶೇಖರ್ ಪಕ್ಷದ ನಾಯಕತ್ವಕ್ಕೆ ಮುಜುಗುರವಾಗುವಂತೆ ನಡೆದುಕೊಂಡಿದ್ದಾರೆ. ಆರ್. ಅಶೋಕ್ ಮೊದಲ ಅಧಿವೇಶನದಲ್ಲೇ ವೈಯಕ್ತಿಕ ಗೊಂದಲಗಳ ಮೂಲಕ ಹಲವು ಶಾಸಕರ ಕೋಪಕ್ಕೆ ಗುರಿಯಾಗಿದ್ದಾರೆ. ಪ್ರತಿಪಕ್ಷದ ನಾಯಕನ ಪಾತ್ರಕ್ಕೆ ಇನ್ನೂ ಅವರು ಹೊಂದಿಕೊಂಡಿಲ್ಲ!.

ಡಿಕೆಶಿ ದಿಗ್ವಿಜಯ: ನೆರೆಯ ತೆಲಂಗಾಣ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ. ಚುನಾವಣೆಯ ಉಸ್ತುವಾರಿ ಹೊತ್ತಿದ್ದ ರಾಜ್ಯದ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗೆಲುವಿನ ಕಿರೀಟಕ್ಕೆ ಇದೂ ಮತ್ತೊಂದು ಯಶಸ್ಸಿನ ಗರಿ. ಸ್ಥಳೀಯವಾಗಿ ಅಲ್ಲಿದ್ದ ಸವಾಲುಗಳನ್ನು ನಿರ್ವಹಿಸಿ ತಮ್ಮ ಗೆಳೆಯ ರೇವಂತ ರೆಡ್ಡಿಯವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸುವ ಮೂಲಕ ಶಿವಕುಮಾರ್ ರಾಜಕೀಯ ಜಾಣ್ಮೆ ಮೆರೆದಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಆಂದ್ರ ಪ್ರದೇಶ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನೂ ಅವರಿಗೇ ವಹಿಸಲು ಕಾಂಗ್ರೆಸ್ ನಾಯಕತ್ವ ನಿರ್ಧರಿಸಿದೆ ಎಂಬ ಮಾಹಿತಿ ಇದೆ. 

ಹೈಕಮಾಂಡ್ ಭೇಟಿ ಸಂದರ್ಭದಲ್ಲಿ ಸರ್ಕಾರ ರಚನೆ ಸಂದರ್ಭದಲ್ಲಿ ತಮಗಾಗಿರುವ ಅನ್ಯಾಯವನ್ನು ಶಿವಕುಮಾರ್ ಹೇಳಿಕೊಂಡರೆಂದೂ ಅದನ್ನು ಲೋಕಸಭಾ ಚುನಾವಣೆಯ ನಂತರ ಸರಿಪಡಿಸಲಾಗುವುದೆಂಬ ಭರವಸೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಷ್ಟ್ರೀಯ ನಾಯಕರು ನೀಡಿದ್ದಾರೆಂದೂ ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆಗೆ ಮುನ್ನವೇ ರಾಜ್ಯ ರಾಜಕಾರಣ ಮಹತ್ವದ ತಿರುವು ಪಡೆಯುವ ನಿರೀಕ್ಷೆ ಇದ್ದು ಕಾದು ನೋಡಬೇಕಿದೆ.  

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com