ಜಾತಿ ಗಣತಿ ವಿವಾದ: ಸಿದ್ದರಾಮಯ್ಯ ಲೆಕ್ಕಾಚಾರ ನಿಗೂಢ (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ಅದೊಂದು ವಿವಾದ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಕುರ್ಚಿಗೇ ಸಂಚಕಾರ ತರಲಿದೆಯ? ಈ ಇಕ್ಕಟ್ಟಿನಿಂದ ಅವರು ಹೇಗೆ ಪಾರಾಗುತ್ತಾರೆ?
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಅದೊಂದು ವಿವಾದ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಕುರ್ಚಿಗೇ ಸಂಚಕಾರ ತರಲಿದೆಯ? ಈ ಇಕ್ಕಟ್ಟಿನಿಂದ ಅವರು ಹೇಗೆ ಪಾರಾಗುತ್ತಾರೆ? ಸಾಮಾಜಿಕ,ಆರ್ಥಿಕ, ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ(ಜಾತಿ ಗಣತಿ ವರದಿ ಎಂದೂ ಅರ್ಥೈಸಲಾಗುತ್ತಿದೆ) ಕುರಿತಂತೆ ರಾಜ್ಯದ ಎರಡು ಪ್ರಬಲ ಸಮುದಾಯಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಆ ವರದಿಯನ್ನು ಅಂಗೀಕರಿಸಬಾರದೆಂದು ಪಟ್ಟು ಹಿಡಿದಿವೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿಯನ್ನು ಸ್ವೀಕರಿಸಿ ಜಾರಿಗೊಳಿಸಲು ಬದ್ದವಾಗಿರುವುದಾಗಿ ಘೋಷಿಸಿದ್ದಾರೆ. ಈ ಹಿನ್ನಲೆಯಲ್ಲಿ ತಲೆ ಎತ್ತಿರುವ ಪ್ರಶ್ನೆ ಎಂದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇದೇ ಒಂದು ದೊಡ್ಡ ವಿವಾದವಾಗಿ ಸರ್ಕಾರದ ಅಸ್ತಿತ್ವಕ್ಕೆ ಸಂಚಕಾರ ತಂದೊಡ್ಡಲಿದೆಯಾ? ಎಂಬುದು.

ಹಿರಿಯ ವಕೀಲ ಎಚ್. ಕಾಂತರಾಜು ಅವರು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ರಾಜ್ಯದಾದ್ಯಂತ ಆಯೋಗ ನಡೆಸಿತ್ತಲ್ಲದೇ ಆ ಕುರಿತಂತೆ ಒಂದು ಸುದೀರ್ಘ ವರದಿಯನ್ನು ಸಿದ್ಧಪಡಿಸಿದೆ. ಅದಿನ್ನೂ ಸರ್ಕಾರಕ್ಕೆ ಸಲ್ಲಿಕೆ ಆಗುವ ಮೊದಲೇ ವಿವಾದಗಳು ಎದ್ದಿವೆ. ವರದಿಗೆ ಆಯೋಗದ ಅಂದಿನ ಕಾರ್ಯದರ್ಶಿ ಸಹಿಯೇ ಹಾಕಿಲ್ಲವಾದ್ದರಿಂದ ಸರ್ಕಾರಕ್ಕೆ ಆಯೋಗ ವರದಿ ಸಲ್ಲಿಸಲು ತೊಡಕಾಗಿದೆ ಎಂಬ ವಿವಾದ ಒಂದು ಕಡೆಯಾದರೆ, ಆ ಕುರಿತು ಸ್ಪಷ್ಟನೆ ನೀಡಿರುವ ಹಿಂದಿನ ಅಧ್ಯಕ್ಷರು, ವರದಿಯ ಒಂದು ಸಂಫುಟಕ್ಕೆ ಮಾತ್ರ ಕಾರ್ಯದರ್ಶಿಯವರು ಸಹಿ ಮಾಡಿಲ್ಲ, ಹಾಗೆಯೇ  ಅದು ಜಾತಿ ಗಣತಿ ಎಂಬ ವಾದಗಳನ್ನು ತಳ್ಳಿ ಹಾಕಿದ್ದಾರೆ. ಈಗ ಅದರ ಜತೆಗೇ ವರದಿಯ ಮೂಲ ಪ್ರತಿಯೇ ನಾಪತ್ತೆಯಾಗಿದೆ ಎಂಬ ಸುದ್ದಿಗಳು ವ್ಯವಸ್ಥೆಯ ಕುರಿತಂತೇ ಅನೇಕ ಸಂಶಯಗಳನ್ನು ಹುಟ್ಟು ಹಾಕಿದೆ. ಹಿಂದುಳಿದ ವರ್ಗಗಳ ಆಯೋಗದ ಈಗಿನ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ವರದಿಯ ಮೂಲ ಪ್ರತಿ ಇಲ್ಲ, ಆದರೆ ದತ್ತಾಂಶಗಳು ಇರುವುದರಿಂದ ಅದನ್ನು ಆಧರಿಸಿ ಸರ್ಕಾರಕ್ಕೆ ಸಲ್ಲಿಸಲಿರುವ ವರದಿಯಲ್ಲಿ ಅಳವಡಿಸಲಾಗುವುದು ಎಂದೂ ಸ್ಪಷ್ಪಡಿಸಿದ್ದಾರೆ. ಹಿಂದೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಕಾಂತರಾಜು ಅವರನ್ನು ಆಯೋಗಕ್ಕೆ ಅಧ್ಯಕ್ಷರಾಗಿ ನೇಮಿಸಿ ಈ ಸಮೀಕ್ಷೆಗೆ ಸೂಚಿಸಲಾಗಿತ್ತು. ವರದಿ ಪೂರ್ಣವಾಗಿ ಸರ್ಕಾರಕ್ಕೆ ಸಲ್ಲಿಸುವ ಹಂತದಲ್ಲೇ ನಡೆದ ವಿದ್ಯಮಾನಗಳಿಂದ ಅಧ್ಯಕ್ಷರು ಬದಲಾದರು. ಈಗ ಈ ಸಮೀಕ್ಷೆಯ ಜತೆಗೇ ಆಯೋಗ ಸಮಗ್ರ ವರದಿಯನ್ನು ಸಲ್ಲಿಸಬೇಕಿದೆ. ಆಯೋಗದ ಅಧ್ಯಕ್ಷರ ಅಧಿಕಾರದ ಅವಧಿಯನ್ನೂ ವಿಸ್ತರಿಸಲಾಗಿದೆ. 

ಆದರೆ ಸಮೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಕೆ ಆಗುವ ಮೊದಲೇ ಅದರಲ್ಲಿ ಇದೆ ಎಂದು ಹೇಳಲಾಗುತ್ತಿರುವ ಅಂಶಗಳು ಈಗ ಬಹಿರಂಗವಾಗಿರುವುದರ ಜತೆಗೇ ವಿವಾದ ಹುಟ್ಟಿಸಿದೆ. ಈ ವರದಿಗೆ ರಾಜ್ಯದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯಿತರು ತೀವ್ರ ವಿರೋಧ ವ್ಯಕ್ತಪಡಿಸಿರುವುದೇ ಈಗ ಸರ್ಕಾರಕ್ಕೆ ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆ ನೋವು ತಂದಿದೆ. ಆದಿ ಚುಂಚನಗಿರಿ ಸಂಸ್ಥಾನದ ಶ್ರೀಗಳ ನೇತೃತ್ವದಲ್ಲಿ ನಡೆದ ಒಕ್ಕಲಿಗ ಸಮುದಾಯದ ಸಭೆಯಲ್ಲಿ ವರದಿಯನ್ನು ಅಂಗೀಕರಿಸದಂತೆ ಸರ್ಕಾರಕ್ಕೆ ಆಗ್ರಹ ಮಾಡಲಾಗಿದೆ. ಈ ಕುರಿತು ಕೈಗೊಂಡಿರುವ ನಿರ್ಣಯಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿ ಹಾಕಿರುವುದು ವಿವಾದಕ್ಕೆ ಇನ್ನೊಂದು ಹೊಸ ತಿರುವು ಸಿಕ್ಕಿದೆ. ಸರ್ಕಾರದ ಭಾಗವಾಗಿದ್ದುಕೊಂಡೇ ಅವರು ಸಹಿ ಹಾಕಿದ್ದರ ಬಗ್ಗೆ ಆಳುವ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಆದರೆ ವರದಿಯ ಕುರಿತಂತೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಅದರ ಜಾರಿಗೆ ಬದ್ಧ ಎಂದೂ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದು ಕಡೆ ಲಿಂಗಾಯಿತ ಸಮುದಾಯ ಕೂಡಾ ವರದಿಗೆ ವಿರೋಧ ವ್ಯಕ್ತಪಡಿಸಿದ್ದು ಜಾರಿಗೊಳಿಸದಂತೆ ಸರ್ಕಾರದ ಮೇಲೆ ಒತ್ತಡ ಹೇರಿದೆ. ಈ ಕುರಿತಂತೆ ನಡೆದ ಸಭೆಯಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷರೂ ಆದ ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪನವರೇ ಸರ್ಕಾರಕ್ಕೆ ಆಗ್ರಹ ಪಡಿಸಿರುವುದು ಮತ್ತೊಂದು ಮುಖ್ಯ ಸಂಗತಿ.

ವರದಿಯನ್ನು ವಿರೋಧಿಸಿರುವವರ ಪೈಕಿ ಮುಂಚೂಣೀಯಲ್ಲಿರುವ ಇಬ್ಬರೂ ಕಾಂಗ್ರೆಸ್ ಪಕ್ಷದ ನಾಯಕರೇ ಎಂಬುದು ಇಲ್ಲಿ ಮೇಲ್ನೋಟಕ್ಕೆ ಗೋಚರವಾಗುವ ಅಂಶ. ಮುಖ್ಯಮಂತ್ರಿಯವರೇ ಹೇಳುವಂತೆ ಇದು ಜಾತಿ ಗಣತಿ ಅಲ್ಲ, ಸಾಮಾಜಿಕ, ಆರ್ಥಿಕ, ಮತ್ತು ಶೈಕ್ಷಣಿಕ ಗಣತಿ ಎಂಬುದೇ ಆದರೂ  ಅದರಲ್ಲಿ ವಿವಿಧ ಸಮುದಾಯಗಳ ಜನ ಸಂಖ್ಯೆಯನ್ನೂ ನಮೂದಿಸಿರುವ ಸಾಧ್ಯತೆಗಳು ಇವೆ. ವಾಸ್ತವಾಗಿ ಇದೇ ಈ ಎರಡೂ ಪ್ರಬಲ ಸಮುದಾಯಗಳ ವಿರೋಧಕ್ಕೆ ಕಾರಣ. ಒಮ್ಮೆ ವರದಿಯ ಪ್ರಕಾರ ಪರಿಶಿಷ್ಟರೂ ಸೇರಿದಂತೆ ಇತರೆ ಕೆಲವು ಸಮುದಾಯಗಳ ಜನಸಂಖ್ಯೆ ಹೆಚ್ಚೆಂದು ವರದಿಯಲ್ಲಿ ತೋರಿಸಿದ್ದೇ ಆದಲ್ಲಿ ಅದರಿಂದ ಭವಿಷ್ಯದಲ್ಲಿ ರಾಜಕೀಯ ಪರಿಣಾಮಗಳು ಆಗಲಿದ್ದು ರಾಜಕೀಯವಾಗಿ ತಮ್ಮ ಪ್ರಾಬಲ್ಯಕ್ಕೆ ಧಕ್ಕೆ ಬಂದೊದಗಲಿದೆ ಎಂಬ ಆತಂಕವೂ ಇದಕ್ಕೆ ಕಾರಣ. ರಾಜ್ಯ ರಾಜಕಾರಣದಲ್ಲಿ ಈವರೆವಿಗೆ ತಮ್ಮ ಪ್ರಾಬಲ್ಯ ಮೆರೆಯುತ್ತಾ ಬಂದಿರುವ ಈ ಎರಡೂ ಸಮುದಾಯಗಳು  ವರದಿ ಜಾರಿಯಿಂದ ತಮ್ಮ ರಾಜಕೀಯ ಅಸ್ತಿತ್ವಕ್ಕೇ ತೊಂದರೆ ಬಂದೊದಗಲಿದೆ ಎಂಬ ದುರಾಲೋಚನೆಯಿಂದ ವರದಿಯ ಸ್ವೀಕಾರವನ್ನು ವಿರೋಧಿಸುತ್ತಿವೆ.

ಆದರೆ ಈ ವಿಚಾರದಲ್ಲಿ ರಾಜಕೀಯ ದೂರದೃಷ್ಟಿಯನ್ನಿಟ್ಟುಕೊಂಡೇ ಹೆಜ್ಜೆ ಇಟ್ಟಿರುವ ಸಿದ್ದರಾಮಯ್ಯ ವರದಿಯನ್ನು ಜಾರಿಗೊಳಿಸುವ ಕುರಿತು ಖಡಾ ಖಂಡಿತವಾಗಿ ತಮ್ಮ ನಿಲುವನ್ನು ಬಿಗಿಗೊಳಿಸಿದ್ದಾರೆ. ತಮ್ಮ ರಾಜಕೀಯ ಜೀವನದುದ್ದಕ್ಕೂ ಅಹಿಂದ ತತ್ವವನ್ನೇ ಪಾಲನೆ ಮಾಡುತ್ತಿರುವ ಅವರಿಗೆ ಆ ಸಮುದಾಯಗಳ ಹಿತರಕ್ಷಣೆಗೆ ಈ ವರದಿ ಒಂದು ಅಸ್ತ್ರವಾಗಿ ಪರಿಣಮಿಸಿದೆ.  ಹೀಗಾಗಿ ಸಾಮಾಜಿಕ ನ್ಯಾಯದ ಹೆಸರಲ್ಲಿ ವರದಿ ಅಂಗೀಕಾರಕ್ಕೆ ಆಸ್ಕತಿ ತೋರಿದ್ದಾರೆ. ಆದರೆ ಇಂಥದೇ ಹಲವು ಪ್ರಸಂಗಗಳಲ್ಲಿ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದಿರುವ ವಿದ್ಯಮಾನಗಳನ್ನು ಗಮನಿಸಿದರೆ ಇದರಿಂದ ಆಗುವ ರಾಜಕೀಯ ಪರಿಣಾಮಗಳನ್ನು ಕಾದು ನೋಡಬೇಕಿದೆ. ಹಿಂದೆ ವೆಂಕಟಸ್ವಾಮಿ ಆಯೋಗದ ವರದಿ ವಿಚಾರ ಚರ್ಚೆಗೆ ಬಂದಾಗಲೂ ಇವೇ ಪ್ರಬಲ ಸಮುದಾಯಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.ಆಗಿನ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚುಮಾಡಿ ಸಿದ್ಧಪಡಿಸಿದ ವರದಿಯನ್ನು ಜಾರಿಗೊಳಿಸದೇ ಇವೇ ಪ್ರಬಲ ಸಮುದಾಯಗಳ ಆಗ್ರಹಕ್ಕೆ ಮಣಿದಿತ್ತು. 

ಬಹು ಮುಖ್ಯ ಸಂಗತಿ ಎಂದರೆ ಆಡಳಿತ ಪಕ್ಷದ ಇತರ ಹಿಂದುಳಿದ ಸಮುದಾಯಗಳ ಶಾಸಕರು ಸಚಿವರಿಂದಲೆ ವರದಿ ಜಾರಿಗೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲಾಗುತ್ತಿದೆ. ಹೀಗಾಗಿ ವರದಿ ಜಾರಿ ಆಗಲಿ ಅಥವಾ ಆಗದಿರಲಿ ರಾಜಕೀಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಸಮಸ್ಯೆಯನ್ನು ಎದುರಿಸಲೇಬೇಕಾಗುತ್ತದೆ. ಮತ್ತು ಇದೇ ಸನ್ನಿವೇಶವನ್ನು ಬಳಸಿಕೊಂಡು ಕಾಂಗ್ರೆಸ್ ನಲ್ಲೇ ಇರುವ ಅವರ ವಿರೋಧಿಗಳು ಅವರನ್ನು ಅಧಿಕಾರದಿಂದ ಇಳಿಸುವ ಮಟ್ಟಕ್ಕೂ ಹೋಗುವ ಸಾಧ್ಯತೆಗಳನ್ನು ನಿರಾಕರಿಸುವಂತಿಲ್ಲ. ತಮ್ಮ ಸಾಮಾಜಿಕ ಮತ್ತು ರಾಜಕೀಯ ಪ್ರಾಬಲ್ಯಕ್ಕೆ ಧಕ್ಕೆ ಎದುರಾದಾಗಲೆಲ್ಲ ಈ ಪ್ರಬಲ ಸಮುದಾಯಗಳು ಪಕ್ಷಾತೀತವಾಗಿ ತಮ್ಮ ಹಿತ ಕಾಯಲು ಬದ್ಧವಾಗಿದ್ದು ಹಿಂದಿನ ಉದಾಹರಣೆಗಳನ್ನು ಗಮನಿಸಿದರೆ ತಿಳಿಯುವ ಅಂಶ. 

ಈ ಕಾರಣದಿಂದಲೇ ಬಿಜೆಪಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಈ ಸಮೀಕ್ಷಾ ವರದಿಯನ್ನು ಸರ್ಕಾರ ಅಂಗೀಕರಿಸಿರೆ ಅದನ್ನೇ ಹೋರಾಟದ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಬಹು ಮುಖ್ಯವಾಗಿ ವರದಿಯನ್ನು ವಿರೋಧಿಸುತ್ತಿರುವ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳ ಬೆಂಬಲ ಸಾರಾಸಗಟಾಗಿ ತನಗೆ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ. 

ಸಿದ್ದರಾಮಯ್ಯ ಆಪ್ತ ವಲಯಗಳು ಹೇಳುವ ಪ್ರಕಾರ ,ವರದಿ ಕುರಿತಾದ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ಅವರು ಮುಂದಾಗಿ ಅಂದಾಜಿಸಿದ್ದಾರೆ. ವರದಿ ಸ್ವೀಕರಿಸಿದಂತೆಯೂ ಆಗಬೇಕು ಅಧಿಕಾರಕ್ಕೂ ಧಕ್ಕೆ ಆಗಬಾರದು, ಪ್ರತಿಪಕ್ಷ ಬಿಜೆಪಿಯ ಹೋರಾಟ ಆ ಪಕ್ಷಕ್ಕೆ ತಿರುಮಂತ್ರ ಆಗಬೇಕು ಎಂಬ ಸೂತ್ರವೊಂದನ್ನು ರೂಪಿಸಿದ್ದಾರೆ. ಅದರ ಪ್ರಕಾರ ವರದಿ ಸ್ವೀಕರಿಸುವುದು, ನಂತರ ಅದರಲ್ಲಿ ವಿವಾದಾತ್ಮಕ ಅಂಶಗಳಿದ್ದರೆ ಅದರ ಅಧ್ಯಯನಕ್ಕೆ ಸಚಿವ ಸಂಪುಟದ ಅಥವಾ ತಜ್ಞರ ಉನ್ನತಾದಿಕಾರದ ಸಮಿತಿ ರಚಿಸಿ ಲೋಕಸಭಾ ಚುನಾವಣೆ ಮುಗಿಯುವವರೆಗೆ ಪ್ರಕ್ರಿಯೆಯನ್ನು ಜೀವಂತವಾಗಿಡುವುದು ಚುನಾವಣೆ ಮುಗಿದ ನಂತರ ಸಮಿತಿ ಶಿಪಾರಸು ಆಧರಿಸಿ ವರದಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ತಿರ್ಮಾನ ಕೈಗೊಳ್ಳುವುದು ಈಗಿನ ಲೆಕ್ಕಾಚಾರ.
ಜತೆಗೇ ವರದಿಯಲ್ಲಿನ ಅಂಶಗಳ ಜಾರಿ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಕ್ಕಿಸಲೂ ಸಿದ್ದರಾಮಯ್ಯ ಆಲೋಚನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಇಂಥದೇ ಜಾತಿಗಣತಿ ವರದಿಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಿರುವುದರಿಂದ ಕರ್ನಾಟಕದಲ್ಲೂ ಅದೇ ಮಾದರಿ ಅನುಸರಿಸುವುದು ಸಿದ್ದರಾಮಯ್ಯ ಚಿಂತನೆ ಎಂಬುದನ್ನು ಕಾಂಗ್ರೆಸ್ ಮೂಲಗಳೇ ಹೇಳುತ್ತವೆ. ಈ ಮೂಲಕ ಒಂದೇ ಏಟಿಗೆ ಪಕ್ಷದಲ್ಲಿನ ತಮ್ಮ ವಿರೋಧಿಗಳು ಮತ್ತು ಬಿಜೆಪಿಯನ್ನು ದುರ್ಬಲಗೊಳಿಸುವುದು ಅವರ ಲೆಕ್ಕಾಚಾರ ಎನ್ನಲಾಗುತ್ತಿದೆ.

ಈಗ ಹಿಂದುಳಿದ ವರ್ಗಗಳ ಆಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ನಡೆಯುವ ವಿದ್ಯಮಾನಗಳತ್ತ ಎಲ್ಲರ ಚಿತ್ತ ನೆಟ್ಟಿದೆ.ಈಗಿನ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಳ್ಳುವ ಹಂತಕ್ಕೆ ಸಿದ್ದರಾಮಯ್ಯ ಹೋಗಲಾರರು.

ಮುಗಿಯುದ ಗ್ಯಾರಂಟಿ ಗೊಂದಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ.ಈ ಅವಧಿಯಲ್ಲಿ ಸರ್ಕಾರದ ಆಡಳಿತ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ. ಗ್ಯಾರಂಟಿ ಯೊಜನೆಗಳ ಗೊಂದಲವೇ ಇನ್ನೂ ಬಗೆಹರಿದಿಲ್ಲ. ಇದ್ದುದರಲ್ಲಿ ಮಹಿಳೆಯರಿಗೆ ಜಾರಿಗೆ ತಂದ ಉಚಿತ ಬಸ್ ಪ್ರಯಾಣ ಯೋಜನೆ ಯಶ ಕಂಡಿದೆಯಾದರೂ ಅದರಿಂದ ಸಾರಿಗೆ ಸಂಸ್ಥೆಗಳಿಗೆ ಆಗುತ್ತಿರುವ ಕೋಟ್ಯಂತರ ರೂ.ಗಳ ನಷ್ಟವನ್ನು ಸರ್ಕಾರ ತುಂಬಿಕೊಡುವಲ್ಲಿ ವಿಫಲವಾಗಿದೆ. ಇನ್ನುಳಿದ ಕೆಲವು ಭರವಸೆಗಳು ಇನ್ನೂ ಜಾರಿ ಹಂತದಲ್ಲೇ ಇವೆ. ಆಢಳಿತಾತ್ಮಕವಾಗಿ ನೋಡಿದರೆ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಿಂತಿಲ್ಲ. ಈ ವೇಳೆಗೆ ಆಡಳಿತ ಯಂತ್ರ ಚುರುಕುಗೊಳ್ಳಬೇಕಿತ್ತು. ಆದು ಆಗಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರವಾರು ಅನುದಾನ ಬಿಡುಗಡೆ ಆಗುತ್ತಿಲ್ಲ ಇದು ಆಡಳಿತ ಪಕ್ಷದ ಶಾಸಕರನ್ನೇ ಸಿಟ್ಟಿಗೆಬ್ಬಿಸಿದೆ. ಬಹಳಷ್ಟು ಸಚಿವರು ಏನು ಕೆಲಸ ಮಾಡುತ್ತಿದ್ದಾರೆ ಎಂಬುದೇ ಗೊತ್ತಿಲ್ಲ.

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com