
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಹೈಕಮಾಂಡ್ ವಿರುದ್ಧ ಸಿಡಿದು ನಿಂತು ಶಕ್ತಿ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧವಾಗುತ್ತಿದ್ದಾರಾ…?
ಕಾಂಗ್ರೆಸ್ ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಇಂಥದೊಂದು ಮುನ್ಸೂಚನೆ ಕಂಡು ಬರುತ್ತಿದೆ. ಎರಡು ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದ ದಿಲ್ಲಿ ಕಾಂಗ್ರೆಸ್ ವರಿಷ್ಠರು ಅಧಿಕಾರ ಹಂಚಿಕೆಯೂ ಸೇರಿದಂತೆ ಪಕ್ಷದ ಆಂತರಿಕ ವಿದ್ಯಮಾನಗಳ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡಬಾರದು, ಹಾಗೊಂದು ವೇಳೆ ನೀಡಿದ್ದೇ ಆದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದರು. ಇದಾಗಿ ಒಂದು ದಿನ ಕಳೆಯುವ ಮೊದಲೇ ವಿಜಯ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಅವರು ಐದು ವರ್ಷವೂ ಸರ್ಕಾರ ಅಧಿಕಾರದಲ್ಲಿರುತ್ತದೆ ಅಷ್ಟೇ ಅಲ್ಲ, ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುತ್ತೇನೆ ಎಂದು ಖಚಿತ ಪಡಿಸಿದ್ದಾರೆ.
ನೇರವಾಗಿ ಐದು ವರ್ಷ ತಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆಂದು ಅವರು ಸ್ಪಷ್ಟವಾಗಿ ಹೇಳಿಲ್ಲ ಎಂಬುದು ನಿಜವಾದರೂ ಇತ್ತೀಚೆಗೆ ಅವರು ಆಯ್ದ ಸಚಿವ ಸಹೋದ್ಯೋಗಿಗಳ ಜತೆ ಗೌಪ್ಯವಾಗಿ ನಡೆಸುತ್ತಿರುವ ಭೋಜನಕೂಟ, ಉಪಹಾರ ಕೂಟಗಳ ಒಳ ಹೊಕ್ಕು ನೋಡಿದರೆ ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ನಡೆಸಿರುವ ಚಟುವಟಿಕೆ ಇದು ಎಂಬುದು ಗೊತ್ತಾಗುತ್ತದೆ. ಒಂದು ವೇಳೆ ಲೋಕಸಭೆ ಚುನಾಣೆ ನಂತರ ಅಧಿಕಾರ ಹಂಚಿಕೆ ವಿಚಾರ ಮುನ್ನೆಲೆಗೆ ಬಂದು ಹೈಕಮಾಂಡ್ ರಾಜೀನಾಮೆ ನೀಡುವಂತೆ ಸೂಚಿಸಿದರೆ ಅಂತಹ ಸೂಚನೆ ವಿರುದ್ಧ ಸಿಡಿದು ನಿಂತು ತಮ್ಮನ್ನು ಬೆಂಬಲಿಸುವ ಶಾಸಕರು, ಸಚಿವರ ಸಂಖ್ಯೆಯನ್ನು ಗಟ್ಟಿ ಮಾಡಿಕೊಳ್ಳುವ ಮತ್ತು ಆ ಮೂಲಕ ಹೈಕಮಾಂಡ್ ಗೆ ಉತ್ತರ ಕೊಡುವ ತಂತ್ರಗಾರಿಕೆ ಅವರದ್ದು. ಅದಕ್ಕಾಗಿ ಅವರು ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಎರಡೂವರೆ ವರ್ಷಕ್ಕೆ ಅಧಿಕಾರ ಹಂಚಿಕೆ ಸೂತ್ರ ರೂಪಿಸಲಾಗಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ. ಮೂಲತಃ ಇದೇ ಕಾಂಗ್ರೆಸ್ ನಲ್ಲಿ ಮೂಡಿರುವ ಗೊಂದಲಕ್ಕೆ ಕಾರಣ. ಇಂಥದೊಂದು ಒಪ್ಪಂದ ಆಗಿದೆಯೆ? ಇಲ್ಲವೆ? ಎಂಬುದನ್ನು ಹೈಕಮಾಂಡ್ ಖಚಿತ ಪಡಿಸದೇ ಪ್ರತಿ ಸಂದರ್ಭದಲ್ಲೂ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯಿಸುತ್ತಿರುವುದೇ ಸಮಸ್ಯೆ ಬಿಗಡಾಯಿಸಲು ಅವಕಾಶಗಳನ್ನು ಸೃಷ್ಟಿಸಿದೆ.
ಇದನ್ನೂ ಓದಿ: ನೂರು ದಿನ… ನೂರು ಗೊಂದಲ, ದಿಕ್ಕು ತಪ್ಪಿದ ಆಡಳಿತ (ಸುದ್ದಿ ವಿಶ್ಲೇಷಣೆ)
ಆಡಳಿತಾತ್ಮಕ ದೃಷ್ಟಿಯಿಂದ ಈ ವಿಷಯ ಕುರಿತ ನಿಲುವನ್ನು ಕಾಂಗ್ರೆಸ್ ಹೈಕಮಾಂಡ್ ಬಹಿರಂಗ ಪಡಿಸದೇ ಇರುವುದು ಸಹಜವಾದರೂ ಅದರ ದೂರಗಾಮಿ ಪರಿಣಾಮಗಳನ್ನು ಮುಂದಾಗಿ ಅಂದಾಜಿಸುವಲ್ಲಿ ವಿಫಲವಾಗಿರುವುದು ಪಕ್ಷದೊಳಗೆ ಮತ್ತಷ್ಟು ತಿಕ್ಕಾಟಗಳಿಗೆ ಕಾರಣವಾಗಿದೆ. ಐದು ವರ್ಷ ಪೂರ್ತಿ ತಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆಯ ಬೆನ್ನಲ್ಲೇ ರಾಮನಗರ, ಮದ್ದೂರು ಕ್ಷೇತ್ರಗಳ ಕಾಂಗ್ರೆಸ್ ಶಾಸಕರು ಒಂದೂವರೆ –ಎರಡು ವರ್ಷಗಳ ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಪ್ರತಿ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಅಧಿಕಾರ ಹಂಚಿಕೆ ಕುರಿತಂತೆ ರಾಜ್ಯ ಕಾಂಗ್ರೆಸ್ ನಲ್ಲಿ ತೆರೆ ಮರೆಯಲ್ಲಿ ನಡಯುತ್ತಿದ್ದ ಯುದ್ಧ ಈಗ ಬೀದಿಗೆ ಬಂದಂತಾಗಿದೆ. ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಶಿವಕುಮಾರ್ ಯಾವುದೇ ವಿವಾದಕ್ಕೆ ಆಸ್ಪದ ಕೊಡದೇ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರ ಬೆಂಬಲಿಗ ಶಾಸಕರೆಂದು ಗುರುತಿಸಿಕೊಂಡಿರುವವರು ಮಾತ್ರ ಹೈಕಮಾಂಡ್ ಸ್ಪಷ್ಟ ಎಚ್ಚರಿಕೆಯ ನಡುವೆಯೂ ಅಧಿಕಾರ ಹಂಚಿಕೆ ಕುರಿತು ಹೇಳಿಕೆ ನೀಡಿದ್ದಾರೆ. ಅಲ್ಲಿಗೆ ಈ ಹೇಳಿಕೆಗಳಿಗೆ ಕೆಪಿಸಿಸಿ ಅಧ್ಯಕ್ಷರೂ ಆದ ಶಿವಕುಮಾರ್ ಅವರ ಪರೋಕ್ಷ ಬೆಂಬಲ ಇದೆ ಎಂಬಂತಾಗಿದೆ.
ಇತ್ತೀಚೆಗೆ ಬೆಳಗಾವಿ ರಾಜಕಾರಣಕ್ಕೆ ಸಂಬಂಧಿಸಿದಂತೆ ಆ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿ ಹೊಳಿ ಮತ್ತು ಶಿವಕುಮಾರ್ ನಡುವೆ ಸಂಘರ್ಷದ ವಾತಾವರಣ ಉಂಟಾಗಿತ್ತು. ಅದರ ಕಹಿ ಮಾಸುವ ಮುನ್ನವೇ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರ ಮನೆಯಲ್ಲಿ ನಡೆದ ಭೋಜನ ಕೂಟದ ನೆಪದಲ್ಲಿ ಸೇರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಡಾ. ಮಹದೇವಪ್ಪ, ಸೇರಿದಂತೆ ಆಯ್ದ ಕೆಲವೇ ಸಚಿವರು ಪ್ರಸ್ತುತ ರಾಜಕಾರಣದ ಕುರಿತು ದೀರ್ಘ ಸಮಾಲೋಚನೆ ನಡೆಸಿದರು. ಈ ಭೋಜನ ಕೂಟಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಹ್ವಾನ ಇರಲಿಲ್ಲ. ಹೆಚ್ಚುವರಿಯಾಗಿ ಇನ್ನೂ ನಾಲ್ಕು ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸಬೇಕೆಂಬ ಬೇಡಿಕೆಯ ಬೆನ್ನಲ್ಲೇ ಈ ಭೋಜನ ಕೂಟದ ಸಭೆ ನಡೆದಿರುವುದು ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಈ ಎಲ್ಲ ಬೆಳವಣಿಗೆಗಳು ಏನೇ ಇದ್ದರೂ ಡಿ.ಕೆ.ಶಿವಕುಮಾರ್ ಮಾತ್ರ ಬಹಿರಂಗವಾಗಿ ಈ ವಿಚಾರ ಕುರಿತಂತೆ ಪ್ರತಿಕ್ರಿಯಿಸುತ್ತಿಲ್ಲ. ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದ್ದಾರೆ. ತಾವು ಹೇಳಬೇಕಾದ್ದನ್ನು ತಮ್ಮ ಬೆಂಬಲಿಗ ಶಾಸಕರ ಮೂಲಕ ಹೇಳಿಸುತ್ತಿರುವುದು ಅದೇ ಸಂದರ್ಭದಲ್ಲಿ ಅಧಿಕಾರ ಹಂಚಿಕೆಯೂ ಸೇರಿದಂತೆ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡದಂತೆ ಪಕ್ಷದ ಮುಖಂಡರು, ಶಾಸಕರುಗಳಿಗೆ ಎಚ್ಚರಿಕೆಯನ್ನೂ ನೀಡುವ ಮೂಲಕ ಮೇಲ್ನೋಟಕ್ಕೆ ಅಂತರ ಕಾಪಾಡಿಕೊಂಡು ಬರುತ್ತಿದ್ದಾರೆ. ಆದರೆ ಈ ಹಗ್ಗ ಜಗ್ಗಾಟ ಹೆಚ್ಚು ದಿನ ಮುಂದುವರಿಯುವ ಸಾಧ್ಯತೆಗಳು ಕಡಿಮೆ. ಶತಾಯ ಗತಾಯ ಅಧಿಕಾರ ಬಿಟ್ಟುಕೊಡದೇ ಇರಲು ನಿರ್ಧರಿಸಿರುವ ಸಿದ್ದರಾಮಯ್ಯ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ನಡೆಯಬಹುದಾದ ಬೆಳವಣಿಗೆಯೊಂದರ ಮೇಲ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: ಬಂಡಾಯದ ಬೆಂಕಿ ಇದ್ದರೂ ಸಿದ್ದರಾಮಯ್ಯ ನಿಗೂಢ ಮೌನ!? (ಸುದ್ದಿ ವಿಶ್ಲೇಷಣೆ)
ರಾಜ್ಯದಲ್ಲಿ ಇತ್ತಿಚೆಗೆ ಕೆಲವು ಉದ್ಯಮಿಗಳ ಮನೆಯ ಮೇಲೆ ನಡೆದಿರುವ ಐ.ಟಿ. ದಾಳಿಯಲ್ಲಿ ಸಿಕ್ಕಿರುವ ಭಾರೀ ಪ್ರಮಾಣದ ಹಣಕ್ಕೆ ರಾಜಕೀಯ ನಂಟಿರುವುದು ಈಗ ಸಾರ್ವತ್ರಿಕವಾಗೇ ಚರ್ಚೆ ಆಗುತ್ತಿದೆ. ಈ ಸನ್ನಿವೇಶವನ್ನು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ರಾಜಕೀಯ ದಾಳವಾಗಿಯೂ ಬಳಸಿಕೊಂಡು ಕಾಂಗ್ರೆಸ್ ನ ಆಯ್ದ ಕೆಲವು ಪ್ರಮುಖರನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಶಸ್ತ್ರ ಝಳಪಿಸುವ ಉದ್ದೇಶವನ್ನೂ ಹೊಂದಿದೆ ಎಂಬ ಮಾತುಗಳು ಚಾಲ್ತಿಗೆ ಬಂದಿದೆ. ಇದೇನಾದರೂ ನಿಜವಾದರೆ ಮುಂಬರುವ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆಗೆ ಮುನ್ನವೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕುವ ಮೂಲಕ ದುರ್ಬಲಗೊಳಿಸಲು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ತಂಡ ತಂತ್ರ ನಡೆಸಿದೆ. ಈಗಾಗಲೇ ದಿಲ್ಲಿ ಸರ್ಕಾರದಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕೇಸರಿವಾಲ್ ಅವರನ್ನೇ ಇ.ಡಿ, ಮೂಲಕ ಕಟ್ಟಿಹಾಕುವ ಪ್ರಯತ್ನ ಆರಂಭಿಸಿರುವ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಅದೇ ರೀತಿಯ ಪ್ರಯತ್ನಕ್ಕೆ ಮುಂದಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಇತ್ತೀಚೆಗೆ ರಾಜ್ಯ ಹೈಕೋರ್ಟ್ ಶಿವಕುಮಾರ್ ಅವರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಮುಕ್ತ ಅವಕಾಶ ನೀಡಿದೆ.ಈ ಅವಕಾಶವನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಶಿವಕುಮಾರ್ ನಾಗಾಲೋಟಕ್ಕೆ ತಡೆ ಒಡ್ಡುವ ಸಾಧ್ಯತೆಗಳೂ ಇಲ್ಲದಿಲ್ಲ. ಈ ಸನ್ನಿವೇಶವನ್ನು ಅರಿತಿರುವ ಕಾಂಗ್ರೆಸ್ ನಲ್ಲಿರುವ ಶಿವಕುಮಾರ್ ವಿರೋಧಿ ಗುಂಪು ಅಧಿಕಾರ ಹಂಚಿಕೆಯ ಮಾತೇ ಇಲ್ಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಐದು ವರ್ಷ ಅವಧಿ ಪೂರ್ಣಗೊಳಿಸುತ್ತಾರೆ ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲೇ ಗುಪ್ತ ಸರಣಿ ಸಭೆಗಳನ್ನು ನಡೆಸುವ ಮೂಲಕ ರಾಜಕೀಯವಾಗಿ ಶಿವಕುಮಾರ್ ಅವನ್ನು ಮೂಲೆಗುಂಪು ಮಾಡಲು ಭೂಮಿಕೆ ಸಿದ್ಧಗೊಳಿಸುತ್ತಿದೆ. ವಿಶೇಷ ಎಂದರೆ ಸಿದ್ದರಾಮಯ್ಯ ಗುಂಪಿನ ಈ ಮಹತ್ವಾಕಾಂಕ್ಷೆಗೆ ಇತ್ತೀಚೆಗೆ ಬಿಜೆಪಿಗೆ ತೀರಾ ಹತ್ತಿರವಾಗಿರುವ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ನೀರೆರೆದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಒಕ್ಕಲಿಗರ ಪಾಳೇಯದಲ್ಲಿ ತಮ್ಮ ಪ್ರಾಬಲ್ಯ ಮರು ಸ್ಥಾಪಿಸಲು ಕಸರತ್ತು ನಡೆಸುತ್ತಿರುವ ಕುಮಾರಸ್ವಾಮಿಗೆ ಪ್ರಬಲರಾಗುತ್ತಿರುವ ಶಿವಕುಮಾರ್ ಅಡ್ಡಿಯಾಗಿದ್ದಾರೆ.ಹೀಗಾಗಿ ಎರಡೂ ಗುಂಪುಗಳಿಗೆ ಸದ್ಯಕ್ಕೆ ಬೃಹತ್ ಸಮಸ್ಯೆಯಾಗಿ ಕಾಡುತ್ತಿರುವುದು ಉಪ ಮುಖ್ಯಮಂತ್ರಿ ಶಿವಕುಮಾರ್ ಒಬ್ಬರೆ.
ಇದನ್ನೂ ಓದಿ: ಡಿ.ಕೆ.ಶಿ ಮಹತ್ವಾಕಾಂಕ್ಷೆಯ ಹಾದಿಯ ತುಂಬ ಮುಳ್ಳುಗಳ ರಾಶಿ...! (ಸುದ್ದಿ ವಿಶ್ಲೇಷಣೆ)
ಇನ್ನು ಬಿಜೆಪಿಯ ವಿಚಾರಕ್ಕೆ ಬಂದರೆ ಅವರನ್ನು ಸರಿ ಸಮನಾಗಿ ಎದುರಿಸುವ ಅದೇ ಸಮುದಾಯದ ನಾಯಕರು ಅಲ್ಲಿಲ್ಲ. ಹೀಗಾಗಿ ಈ ವಿಚಾರಕ್ಕೆ ಸೀಮಿತವಾಗಿ ತಮ್ಮ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು ಅವರಿಗಿರುವ ಆಸರೆ ಮತ್ತು ಅಸ್ತ್ರ ಎಂದರೆ ಕುಮಾರಸ್ವಾಮಿ ಮಾತ್ರ. ಆದರೆ ದಿಲ್ಲಿ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಅವರಿಗಿಂತ ಶಿವಕುಮಾರ್ ಹೆಚ್ಚು ದುಸ್ವಪ್ನವಾಗಿ ಕಾಡುತ್ತಿದ್ದಾರೆ. ಹೀಗಾಗಿ ಅವರ ನೇರ ಗುರಿಯೂ ಶಿವಕುಮಾರ್ ಅವರೇ ಆಗಿದ್ದಾರೆ. ತಮ್ಮ ವಿರುದ್ಧ ನಡೆಯುತ್ತಿರುವ ಈ ಎಲ್ಲ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಶಿವಕುಮಾರ್ ಮೊದಲ ಹಂತವಾಗಿ ಜೆಡಿಎಸ್ ನ ಅಸಮಧಾನಿತ ಶಾಸಕರನ್ನು ಕಾಂಗ್ರೆಸ್ ನತ್ತ ಸೆಳೆಯುವ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ. 19 ಶಾಸಕರನ್ನು ಹೊಂದಿರುವ ಆ ಪಕ್ಷದ ಅರ್ಧಕ್ಕೂ ಹೆಚ್ಚು ಮಂದಿಯನ್ನು ಕಾಂಗ್ರೆಸ್ ಸೇರುವಂತೆ ಮಾಡಿದರೆ ಅಲ್ಲಿಗೆ ಆ ಪಕ್ಷ ಇಬ್ಭಾಗ ಆದಂತಾಗುತ್ತದೆ, ಶಾಸಕ ಸ್ಥಾನ ನಷ್ಟವಾಗುವ ಸನ್ನಿವೇಶವೂ ಬರುವುದಿಲ್ಲ.
ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ರನ್ನು ಮತ್ತು ಬಿಜೆಪಿಯಲ್ಲಿ ಈಗಿರುವ ಅರಾಜಕತೆಯನ್ನು ಬಳಸಿಕೊಂಡು ಅಲ್ಲಿಂದಲೂ ಒಂದಷ್ಟು ಶಾಸಕರು ರಾಜೀನಾಮೆ ಕೊಡುವಂತೆ ಮಾಡಿದರೆ ಕಾಂಗ್ರೆಸ್ ಒಡೆದು ಜೆಡಿಎಸ್ ಜತೆಗೂಡಿ ಸರ್ಕಾರ ರಚಿಸುವ ಬಿಜೆಪಿ ಕನಸು ಭಗ್ನವಾದಂತಾಗುತ್ತದೆ. ಅಲ್ಲಿಗೆ ರಾಜಕೀಯವಾಗಿ ಪಕ್ಷದಲ್ಲಿ ತಮ್ಮ ಪ್ರಾಬಲ್ಯವೂ ಹೆಚ್ಚುತ್ತದೆ ಎಂಬ ಲೆಕ್ಕಾಚಾರ ಅವರದ್ದು.
-ಯಗಟಿ ಮೋಹನ್
yagatimohan@gmail.com