ಬಂಡಾಯದ ಬೆಂಕಿ ಇದ್ದರೂ ಸಿದ್ದರಾಮಯ್ಯ ನಿಗೂಢ ಮೌನ!? (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ರಾಜ್ಯ ಕಾಂಗ್ರೆಸ್ ನಲ್ಲಿ ಬೆಳಗಾವಿ ಬೆಂಕಿ ಮತ್ತೆ ಹೊತ್ತಿಕೊಂಡಿದೆ. ಈ ಬಾರಿ ಅದರ ಮುಂಚೂಣಿಯಲ್ಲಿರುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ.
ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ನಾಯಕರು
Updated on

ಬೆಳಗಾವಿ ಬೆಂಕಿ ಹೊತ್ತಿ ಉರಿಯುತ್ತಾ? ಹಾಗೇ ತಣ್ಣಗಾಗುತ್ತಾ?

ರಾಜ್ಯ ಕಾಂಗ್ರೆಸ್ ನಲ್ಲಿ ಬೆಳಗಾವಿ ಬೆಂಕಿ ಮತ್ತೆ ಹೊತ್ತಿಕೊಂಡಿದೆ. ಈ ಬಾರಿಅದರ ಮುಂಚೂಣಿಯಲ್ಲಿರುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ. ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು, ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರೂ ಹೌದು. ಅವರ ನೇರ ಗುರಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಮತ್ತು ಅವರ ಆಪ್ತ ಬಣದಲ್ಲಿ ಮೊದಲಿನಿಂದಲೂ ಗುರುತಿಸಿಕೊಂಡಿರುವ ಬೆಳಗಾವಿಯ ಇನ್ನೊಬ್ಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಬಂಡಾಯಕ್ಕೆ ಕಾರಣ ಸ್ಥಳೀಯ ಅಧಿಕಾರಿಗಳ ವರ್ಗಾವಣೆಯಲ್ಲಿ ತಮ್ಮ ಶಿಫಾರಸಿಗೆ ಮನ್ನಣೆ ಸಿಗದೇ ಸಹೋದ್ಯೋಗಿ ಸಚಿವೆ ಮಾತೇ ನಡೆದಿರುವುದು ಮತ್ತು ಅದಕ್ಕೆ ಡಿ.ಕೆ.ಶಿವಕುಮಾರ್ ಬೆಂಬಲ ಇದೆ ಎಂಬ ಅನುಮಾನಗಳು ವ್ಯಕ್ತವಾಗಿರುವುದು.

ಇಷ್ಟೆಲ್ಲ ವಿವಾದಗಳ ಮಧ್ಯೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಗೂಢ ಮೌನಕ್ಕೆ ಶರಣಾಗಿರುವುದು ಹಲವು ಸಂಶಯಗಳನ್ನು ಹುಟ್ಟುಹಾಕಿದೆ. ಬರೀ ಅಧಿಕಾರಿಗಳ ವರ್ಗಾವರ್ಗಿ ವಿಚಾರಕ್ಕೆ ಈ ಬಂಡಾಯದ ಕಿಡಿ ಹೊತ್ತಿಕೊಂಡಿಲ್ಲ. ಬದಲಾಗಿ ಇತರೆ ವಿಚಾರಗಳೂ ಇದರಲ್ಲಿ ಅಡಕವಾಗಿವೆ. ಯಥಾ ಪ್ರಕಾರ ಇದು ಸತೀಶ್ ಒಬ್ಬರದ್ದೇ ದನಿಯಲ್ಲ. ಇದರ ಹಿಂದೆ ಕಾಂಗ್ರೆಸ್ ನ ಪ್ರಭಾವೀ ಶಕ್ತಿಗಳ ಬೆಂಬಲವೂ ಇದೆ. ಒಟ್ಟಾರೆ ಪಕ್ಷ ಹಾಗೂ ಸರ್ಕಾರದಲ್ಲಿ ಪ್ರಬಲರಾಗುತ್ತಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರ ವೇಗದ ಓಟಕ್ಕೆ ಕಡಿವಾಣ ಹಾಕುವುದು ಇದರ ಹಿಂದಿರುವ ಉದ್ದೇಶ ಎಂಬುದು ಬೆಳವಣಿಗೆಗಳ ಒಳಹೊಕ್ಕು ನೋಡಿದರೆ ಕಂಡು ಬರುವ ಅಂಶ. 

ಈ ಬೆಳವಣಿಗೆಗಳು ಒಂದು ಕಡೆಯಾದರೆ, ನಡುವೆಯೇ ಆದಾಯಕ್ಕೂ ಮೀರಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವು ಮಾಡಿರುವ ಹೈಕೋರ್ಟ್ ಮೂರು ತಿಂಗಳಲ್ಲಿ ತನಿಖೆ ಮುಗಿಸುವಂತೆ ಸೂಚನೆ ನೀಡಿದೆ. ಇದೂ ಕೂಡಾ ಶಿವಕುಮಾರ್ ಪಾಲಿಗೆ ಮತ್ತೊಂದು ರೀತಿಯಲ್ಲಿ ಹೊಸ ಸಂಕಷ್ಟ ತಂದೊಡ್ಡಿದೆ.

ಸತೀಶ್ ಸಿಟ್ಟಿಗೆ ಕಾರಣ: ಜಾರಕಿಹೊಳಿ ಸಹೋದರರ ಪೈಕಿ ಹೆಚ್ಚು ಮಾತನಾಡದ, ಆದರೆ ಗಂಭಿರ ಸ್ವಭಾವದ ಸತೀಶ್ ಜಾರಕಿಹೊಳಿ ಬೆಳಗಾವಿ ರಾಜಕಾರಣದಲ್ಲಿ ತಮ್ಮದೇ ಪಾರು ಪತ್ಯ ಕಾಪಾಡಿಕೊಂಡಿದ್ದಾರೆ. ಅದನ್ನು ಮೀರಿ ಯಾರೂ ಬೆಳೆಯುವಂತಿಲ್ಲ. ಹಾಗೊಂದು ವೇಳೆ ಬೆಳೆಯಲು ಪ್ರಯತ್ನಿಸಿದವರು ರಾಜಕೀಯವಾಗಿ ಮೂಲೆ ಗುಂಪಾಗಿದ್ದಾರೆ. ಅವರೊಬ್ಬರೇ ಅಲ್ಲ. ಅವರ ಸೋದರ ಈಗ ಬಿಜೆಪಿಯಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡಾ ಇದಕ್ಕೆ ಹೊರತಲ್ಲ. ಈ ಹಿಂದೆ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದಾಗ ಬೆಳಗಾವಿ ಸಹಕಾರಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಆಗಲೂ ಶಾಸಕರಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ ಪ್ರತಿಷ್ಠೆಯ ದೊಡ್ಡ ಕದನವೇ ನಡೆದಿತ್ತು. ಆಗಲೂ ಶಿವಕುಮಾರ್ ಲಕ್ಷ್ಮೀಹೆಬ್ಬಾಳ್ಕರ್ ಪರ ನಿಂತಿದ್ದರು. ಕಡೆಗೆ ಈ ಕಾಳಗ ಮೈತ್ರಿ ಸರ್ಕಾರಕ್ಕೇ ಮುಳ್ಳಾಯಿತು. ಈಗ ಮತ್ತೆ ಶುರುವಾಗಿರುವ ಕದನದಲ್ಲಿ ರಮೇಶ್ ಜಾಗದಲ್ಲಿ ಸತೀಶ್ ನಿಂತಿದ್ದಾರೆ. ಡಿ.ಕೆ.ಶಿವಕುಮಾರ್ ವಿರುದ್ಧ ಗುಡುಗಿ ನನ್ನ ಸಹನೆ ದೌರ್ಬಲ್ಯವಲ್ಲ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. 

ಇದಕ್ಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳ ವರ್ಗಾವಣೆಯೂ ಸೇರಿದಂತೆ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ವರ್ಗಾವಣೆಯಲ್ಲಿ ತಾನು ಶಿಫಾರಸು ಮಾಡಿದ ಅಧಿಕಾರಿಗಳಿಗೆ ಬದಲಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಶಿಫಾರಸು ಮಾಡಿದ ಅಧಿಕಾರಿಗಳನ್ನೇ ತಂದು ಕೂರಿಸುತ್ತಿದ್ದು ಇದರಿಂದ ತನ್ನ ಪ್ರತಿಷ್ಠೆಗೆ ಧಕ್ಕೆ ಆಗಿದೆ ಎಂಬುದು ಸತೀಶ್ ಆರೋಪ. ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೊಳಪಡುವ ಬೆಳಗಾವಿ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರ ವರ್ಗವಾಣೆ ವಿಚಾರದಲ್ಲಿ ಸ್ವತಹಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆದೇಶ ನೀಡಿದ್ದರೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅದನ್ನು ಜಾರಿಗೊಳಿಸದೇ ಬೇರೊಬ್ಬ ಅಧಿಕಾರಿಯನ್ನು ಅಲ್ಲಿಗೆ ವರ್ಗಾಯಿಸಿದ್ದು ಲಕ್ಷ್ಮೀ ಹೆಬ್ಬಾಳ್ಕರ್ ಶಿಫಾರಸಿಗೆ ಮನ್ನನೆ ನೀಡಲಾಗಿದೆ ಎಂಬುದು ಈ ಸಿಟ್ಟಿಗೆ ಮೂಲ ಕಾರಣ.

ಬರೀ ಇದೊಂದೇ ಅಲ್ಲ ಬೆಳಗಾವಿಗೆ ಸಂಬಂಧಿಸಿದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವಾಗ ತನ್ನನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂಬುದು ಸತೀಶ್ ಅಸಮಾಧಾನಕ್ಕೆ ಇನ್ನೊಂದು ಕಾರಣ. ಪ್ರಮುಖ ಸಂಗತಿ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೊದಲಿನಿಂದಲೂ ಆಪ್ತರಾಗಿ ಅವರನ್ನು ಬೆಂಬಲಿಸಿಕೊಂಡು ಬಂದಿರುವ ಸತೀಶ್ ಅವರಿಗೆ ಇದೊಂದು ವರ್ಗಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಪರಮಾಪ್ತರಾದ ಸಚಿವ ಬೈರತಿ ಸುರೇಶ್ ಅವರಿಂದ ಆದೇಶ ಪಡೆಯುವುದು ಕಷ್ಟವೇನೂ ಆಗಿರಲಿಲ್ಲ. ಮುಖ್ಯಮಂತ್ರಿ ಆದೇಶವನ್ನು ನಗರಾಭಿವೃದ್ಧಿ ಸಚಿವರು ಉಲ್ಲಂಘಿಸುತ್ತಾರೆಂಬುದು ನಂಬಲು ಅಸಾಧ್ಯವೇ ಸರಿ. ಮುಖ್ಯಮಂತ್ರಿ ನೀಡುವ ಆದೇಶಗಳನ್ನು ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಪಾಲನೆ ಮಾಡುವುದು ಆಡಳಿತದ ಶಿಷ್ಟಾಚಾರ ಪಾಲನೆ ದೃಷ್ಟಿಯಿಂದಲೂ ಕಡ್ಡಾಯ. 

ಹೀಗಿರುವಾಗ ಮುಖ್ಯಮಂತ್ರಿ ಆದೇಶವನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕಡೆಗಣಿಸಿದ್ದಾರೆ ಎಂಬುದು ಕ್ಷುಲ್ಲಕ ಮತ್ತು ನಂಬಲು ಅಸಾಧ್ಯವಾದ ಮಾತು. ಹಾಗೊಂದು ವೇಳೆ ಆ ಆದೇಶವನ್ನೂ ಸಚಿವರು ಜಾರಿಗೊಳಿಸುವಲ್ಲಿ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದಾದರೆ ಅದರ ಹಿಂದೆ ಬೇರೆ ಕಾನೂನನ್ನೂ ಮೀರಿದ ಕಾರಣಗಳು ಇರಬಹುದು. ಏಕೆಂದರೆ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ನಡೆಯುತ್ತಿರುವ ಕೆಲವು ಆಡಳಿತಾತ್ಮಕ ಸಂಗತಿಗಳು ಸರ್ಕಾರದ ಜನಪ್ರಿಯತೆಗೇ ದೊಡ್ಡ ಸವಾಲಾಗಿ ಪರಿಣಮಿಸಿವೆ. ಅಷ್ಟೇ ಅಲ್ಲ, ಅನೇಕ ಆರೋಪಗಳಿಗೆ ಪುಷ್ಟಿ ನೀಡುವಂತಿವೆ. ಸಹೋದ್ಯೋಗಿ ಸಚಿವರಿಬ್ಬರ ನಡುವೆ ಇಂತಹ ವಿಚಾರಗಳಿಗೆ ಸಂಘರ್ಷ ಉಂಟಾದಾಗ ಸ್ವತಹಾ ಮುಖ್ಯಮಂತ್ರಿಯೇ ಸಮಸ್ಯೆಗಳನ್ನು ಬಗೆಹರಿಸಿದ ಉದಾಹರಣೆಗಳು ಸಾಕಷ್ಟಿವೆ. ಇದು ಸಿದ್ದರಾಮಯ್ಯ ಅವರಿಗೂ ಗೊತ್ತು.

ಆದರೆ ಬೆಳಗಾವಿ ವಿಚಾರದಲ್ಲಿ ಸಮಸ್ಯೆಯನ್ನು ಇಷ್ಟು ದೂರ ಬೆಳೆಯಲು ಬಿಟ್ಟು ಅವರು ನಿಗೂಢ ಮೌನಕ್ಕೆ ಶರಣಾಗಿದ್ದು ಮಾತ್ರ ಅನೇಕ ಊಹಾಪೋಹಗಳಿಗೆದಾರಿ ಮಾಡಿಕೊಟ್ಟಿದೆ. ಇದೇ ಸನ್ನಿವೇಶದಲ್ಲಿ ಸತೀಶ್ ತಮ್ಮ ಬೆಂಬಲಿಗ ಶಾಸಕರ ಜತೆಗೂಡಿ ದಸರಾ ಹಬ್ಬದ ನೆಪದಲ್ಲಿ ಮೈಸೂರು ಪ್ರವಾಸಕ್ಕೆ ಮುಂದಾಗಿದ್ದು ಕಡೆಗೆ ವರಿಷ್ಟರೇ ಅವರನ್ನು ಮನವೊಲಿಸಲು ದಿಲ್ಲಿಯಿಂದ ದೌಡಾಯಿಸಿ ಬಂದಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬೆಂಗಳೂರಿನ ನಿವಾಸದಲ್ಲಿ ಸುದೀರ್ಘ ಸಭೆ ನಡೆಸುವ ಮೂಲಕ ಈ ಪ್ರವಾಸದಿಂದ ಆಗಬಹುದಾಗಿದ್ದ ಸಂಭವನೀಯ ಅನಾಹುತವನ್ನು ತಡೆಯಬೇಕಾಯಿತು. ವಿಶೇಷ ಎಂದರೆ ದಿಲ್ಲಿಯಿಂದ ಬೆಂಗಳೂರಿಗೆ ಬಂದ ಹೈಕಮಾಂಡ್ ಪ್ರತಿನಿಧಿಗಳು ಬಂಡಾಯದ ಬೆಂಕಿಯನ್ನು ಶಮನ ಮಾಡಲು ಕಸರತ್ತು ನಡೆಸುತ್ತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ನಡೆದುಕೊಂಡಿದ್ದು ಮಾತ್ರ ಕುತೂಲದ ಸಂಗತಿ. ಒಂದಂತೂ ಸ್ಪಷ್ಟ ಸತೀಶ್ ಜಾರಕಿಹೊಳಿ ಮಾತಿನ ಧಾಟಿ ನೋಡಿದರೆ ಅವರ ಸಿಟ್ಟು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.

ಅಸಹಾಯಕ ಡಿಕೆಶಿ:
ಇದಕ್ಕೆ ಪೂರಕ ಎಂಬಂತೆ ಉಪ ಮುಖ್ಯಮಂತ್ರಿ ಶಿವಕುಮಾರ್ ಎರಡು ದಿನಗಳ ಹಿಂದೆ ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನ ಸ್ವಾಗತಿಸಲು ಬೆಳಗಾವಿಯ ಇಬ್ಬರು ಸಚಿವರೂ ಬರಲಿಲ್ಲ. ಒಬ್ಬನೇ ಒಬ್ಬ ಶಾಸಕ ಕೂಡಾ ಬರಲಿಲ್ಲ. ತನ್ನದು ದಿಢೀರ್ ಭೇಟಿ ಹಾಗಾಗಿ ಯಾರಿಗೂ ತಿಳಿಸಲು ಆಗಿರಲಿಲ್ಲ ಎಂದು ಶಿವಕುಮಾರ್ ವಿವಾದಕ್ಕೆ ಮುಲಾಮು ಹಚ್ಚುವ ಪ್ರಯತ್ನವನ್ನೇನೋ ಮಾಡಿದರು. ಆದರೆ ಬೆಳಗಾವಿಯಲ್ಲಿ ಅವರ ಕಾರ್ಯಕ್ರಮಗಳು ತಿಂಗಳ ಮೊದಲೇ ನಿರ್ಧರಿತವಾಗಿತ್ತು. ಅದು ಅಧಿಕೃತ ಕಾರ್ಯಕ್ರಮವೂ ಆಗಿತ್ತು. ಹೀಗಾಗಿ ವಿವಾದವನ್ನು ಮುಚ್ಚಿಡುವ ಅವರ ಪ್ರಯತ್ನವೂ ಸಫಲವಾಗಲಿಲ್ಲ. ಬೆಳಗಾವಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲೂ ಸಚಿವರು, ಶಾಸಕರು ಹಾಜರಿರಲಿಲ್ಲ ಅಂದ ಮೇಲೆ ಒಂದಂತೂ ಸ್ಪಷ್ಟ ಶಿವಕುಮಾರ್ ಅವರ ವಿರುದ್ಧ ಕಾಂಗ್ರೆಸ್ ನಲ್ಲೇ ಒಂದು ಗುಂಪು ನಿಧಾನವಾಗಿ ತಂತ್ರಗಳನ್ನು ರೂಪಿಸುತ್ತಿದ್ದು ಸಂಘಟಿತವಾಗುತ್ತಿದೆ. ಕಾಂಗ್ರೆಸ್ ಕಾರ್ಯಾಧ್ಯಕ್ಷರ ಸ್ಥಾನದಿಂದ ತನ್ನನ್ನು ಕೆಳಗಿಳಿಸಿ ಶಾಸಕ ಲಕ್ಷ್ಮಣ ಸವದಿಯವರನ್ನು ಕೂರಿಸುವ ಶಿವಕುಮಾರ್ ಪ್ರಯತ್ನವೂ ಜಾರಕಿಹೊಳಿಯವರ ಸಿಟ್ಟಿಗೆ ಕಾರಣವಾಗಿದೆ. ಸವದಿ ಬದಲು ಬೇರೊಬ್ಬರನ್ನು ಕಾರ್ಯಾಧ್ಯಕ್ಷರ ಸ್ಥಾನಕ್ಕೆ ಅವರು ಸೂಚಿಸಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಒಪ್ಪಿಲ್ಲ. ಇದೀಗ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಮುಂದುವರಿಯಲಿರುವ ಹಿನ್ನಲೆಯಲ್ಲಿ ಅವರು ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ಇರಬೇಕೆ… ಬೇಡವೆ? ಎಂಬ ಬಗ್ಗೆಯೂ ವಿರೋಧಿ ಗುಂಪು ಚರ್ಚೆ ಶರುಮಾಡಿದೆ.

ಒಂದು ಕಡೆ ಜೆಡಿಎಸ್ ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮತ್ತೊಂದು ಕಡೆ ಬಿಜೆಪಿಯ ಕೇಂದ್ರದ ನಾಯಕರು ಹಾಗೂ ರಾಜ್ಯದಲ್ಲಿರುವ ಒಂದು ಗುಂಪು ಮತ್ತೊಂದು ಕಡೆ ಪಕ್ಷದೊಳಗೇ ಇರುವ ವಿರೋಧಿಗಳನ್ನು ಒಟ್ಡಿಗೇ ಎದುರಿಸಬೇಕಾದ ಇಕ್ಕಟ್ಟಿನ ಪರಿಸ್ಥಿತಿಗೆ ಶಿವಕುಮಾರ್ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಪಕ್ಷ ಹಾಗೂ ಸರ್ಕಾರದಲ್ಲಿ ಇಷ್ಟೆಲ್ಲ ಬೆಳವಣಿಗೆಗಳಾಗುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ಯಾವುದರ ಬಗ್ಗೆಯೂ ತುಟಿ ಬಿಚ್ಚಿಲ್ಲ. ಅವರ ನಿಗೂಢ ಮೌನ ನಾನಾ ಅರ್ಥಗಳನ್ನು ಹುಟ್ಟು ಹಾಕಿದೆ.

ಜೆಡಿಎಸ್ ನಲ್ಲಿ: ಇನ್ನು ಜೆಡಿಎಸ್ ನಲ್ಲಿ ಬಿಜೆಪಿ ಜತೆಗಿನ ಮೈತ್ರಿ ವಿರೋಧಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ವಜಾಮಾಡಿ ಮತ್ತೆ ತಮ್ಮ ಪುತ್ರ ಕುಮಾರಸ್ವಾಮಿಯನ್ನು ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ದೇವೇಗೌಡರು ಪ್ರತಿಷ್ಠಾಪನೆ ಮಾಡಿದ್ದಾರೆ. ಅಲ್ಲಿಗೆ ಜೆಡಿಎಸ್ ಒಂದು ಕುಟುಂಬದ ಒಡೆತನದ ಪಕ್ಷ ಎಂಬ ಟೀಕೆಗಳು ಋಜುವಾತಾದಂತಾಗಿದೆ. ಜಾತ್ಯತೀತ ನಿಲುವನ್ನು ಕಾಪಾಡಿಕೊಂಡು ಬಂದ ದೇವೇಗೌಡರು ಬಿಜೆಪಿಯೊಂದಿಗೆ ಕೈ ಜೋಡಿಸುವ ತಮ್ಮ ಪುತ್ರನ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದು ಅಸಹಾಯಕತೆಯೋ? ಪುತ್ರ ಪ್ರೇಮವೋ? ಅಥವಾ ಇದೆಲ್ಲವನ್ನೂ ಮೀರಿ ಕುಟುಂಬದ ಒಗ್ಗಟ್ಟನ್ನು ಉಳಿಸಿಕೊಳ್ಳುವ ಅನಿವಾರ್ಯತೆಯೋ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯಕ್ಕಂತೂ ಜೆಡಿಎಸ್ ಪರಿಸ್ಥಿತಿ ರಾಜ್ಯದಲ್ಲಿ ಉತ್ತಮವಾಗೇನೂ ಇಲ್ಲ.


100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com