ಒಲ್ಲದ ಚುನಾವಣಾ ಮೈತ್ರಿ: ಬಿಜೆಪಿಗೆ ಕಷ್ಟ, ಜೆಡಿಎಸ್ ಗೆ ನಷ್ಟ (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಜೆಡಿಎಸ್ ಜತೆಗಿನ ಮೈತ್ರಿಯ ಕುರಿತು ರಾಜ್ಯ ಬಿಜೆಪಿ ಮುಖಂಡರು ಎದುರಿಸುತ್ತಿರುವ ಇಕ್ಕಟ್ಟಿನ ಸ್ಥಿತಿ.  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಇಡೀ ರಾಜ್ಯ ನಾಯಕರನ್ನ ಕತ್ತಲಲ್ಲಿಟ್ಟು ಬಿಜೆಪಿ ಹೈಕಮಾಂಡ್  ಜಾತ್ಯತೀತ ಜನತಾದಳದ ಜತೆಗೆ ಚುನಾವಣಾ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದರ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಅತೃಪ್ತಿ ಇದೆ. 
ಜೆಡಿಎಸ್-ಬಿಜೆಪಿ ಮೈತ್ರಿ
ಜೆಡಿಎಸ್-ಬಿಜೆಪಿ ಮೈತ್ರಿ
Updated on

ಇದು ಒಲ್ಲದ ಹೊಂದಾಣಿಕೆ…. ಒಪ್ಪುವಂತೆಯೂ ಇಲ್ಲ,. ಬಿಡುವಂತೆಯೂ ಇಲ್ಲ. 

ಜೆಡಿಎಸ್ ಜತೆಗಿನ ಮೈತ್ರಿಯ ಕುರಿತು ರಾಜ್ಯ ಬಿಜೆಪಿ ಮುಖಂಡರು ಎದುರಿಸುತ್ತಿರುವ ಇಕ್ಕಟ್ಟಿನ ಸ್ಥಿತಿ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಇಡೀ ರಾಜ್ಯ ನಾಯಕರನ್ನ ಕತ್ತಲಲ್ಲಿಟ್ಟು ಬಿಜೆಪಿ ಹೈಕಮಾಂಡ್ ಜಾತ್ಯತೀತ ಜನತಾದಳದ ಜತೆಗೆ ಚುನಾವಣಾ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದರ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಅತೃಪ್ತಿ ಇದೆ. ಆದರೆ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಹೆದರಿಕೆ. ಸ್ವಯಂ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಖುದ್ದು ಆಸಕ್ತಿ ವಹಿಸಿ ಈ ಮೈತ್ರಿಗೆ ಮುಂದಾಗಿರುವುದು ರಾಜ್ಯ ಬಿಜೆಪಿ ಘಟಕವನ್ನು ಅಸಹಾಯಕತೆಗೆ ದೂಡಿದೆ. 

ಜನತಾ ಪರಿವಾರದಿಂದ ವಲಸೆ ಬಂದು ನೆಲೆ ಕಂಡುಕೊಂಡಿರುವ ಕೆಲವೇ ಬರೆಳೆಣಿಕಷ್ಟು ನಾಯಕರನ್ನು ಹೊರತುಪಡಿಸಿದರೆ ಉಳಿದಂತೆ ಸಂಘ ಪರಿವಾರದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಂಘಟನಾತ್ಮಕವಾಗಿ ದುಡಿಯುತ್ತಿರುವ ಪಕ್ಷದ ಹೆಚ್ಚಿನ ಸಂಖ್ಯೆಯ ನಾಯಕರು, ಕೆಳ ಹಂತದ ಮುಖಂಡರು, ಕಾರ್ಯಕರ್ತರಿಗೆ ಈ ಮೈತ್ರಿ ಬೇಕಾಗಿಲ್ಲ. ಮೇಲ್ಮಟ್ಟದಲ್ಲಿ ಏನೇ ಮೈತ್ರಿಯಾದರೂ ಕೆಳ ಹಂತದಲ್ಲಿ ಅದು ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳು ತೀರಾ ಕಡಿಮೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಎರಡೂ ಪಕ್ಷಗಳ ನಡುವೆ ಮೈತ್ರಿ ನಿರ್ಧಾರವಾಗಿದೆಯಾದರೂ ಸ್ಥಾನಗಳ ಹೊಂದಾಣಿಕೆ ಇನ್ನೂ ತೀರ್ಮಾನವಾಗಿಲ್ಲ. ಸಂಭವನೀಯ ಕ್ಷೇತ್ರಗಳ ಕುರಿತು ಅಲ್ಲಲ್ಲಿ ಸುದ್ದಿಗಳು ಹರಿದಾಡುತ್ತಿವೆಯಾದರೂ ಅಲ್ಲೂ ಪರಿಸ್ಥಿತಿ ಜೆಡಿಎಸ್ ಗೆ ಅನುಕೂಲವಾಗೇನೂ ಇಲ್ಲ. ತೀವ್ರ ಸ್ವರೂಪದ ಪ್ರತಿರೋಧ ಎದುರಾಗುವ ಎಲ್ಲ ಸಾಧ್ಯತೆಗಳೂ ಇವೆ.

ಮೂರು ತಿಂಗಳ ಹಿಂದಷ್ಟೇ ನಡೆದ ವಿದಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯನ್ನು, ಅದರ ರಾಜ್ಯ ನಾಯಕರನ್ನು ವಾಚಾಮಗೋಚರವಾಗಿ ನಿಂದಿಸಿದ್ದ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೊನ್ನೆ ಕಾವೇರಿ ವಿವಾದ ಕುರಿತಂತೆ ರಾಜ್ಯ ಬಿಜೆಪಿ ನಾಯಕರು ಧರಣಿ ನಡೆಸಿದ ಸಂದರ್ಭದಲ್ಲಿ ಯಾವುದೇ ಹಿಂಜರಿಕೆಯೂ ಇಲ್ಲದೇ, ತಾವಾಗೇ ಖುದ್ದು ಆಸ್ಥೆ ವಹಿಸಿ ಆ ಧರಣಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು ಬಿಟ್ಟರೆ ಬಿಜೆಪಿ ನಾಯಕರೇನೂ ಅವರೊಂದಿಗೆ ಆತ್ಮೀಯತೆಯಿಂದ ಸ್ಪಂದಿಸಲಿಲ್ಲ. ಹೀಗಾಗಿ ಮುಂದೆ ಸ್ಥಾನ ಹೊಂದಾಣಿಕೆ ನಡೆದರೂ ಅದು ಎರಡೂ ಪಕ್ಷಗಳನ್ನು ಹತ್ತಿರ ತರುವ ಸಾಧ್ಯತೆಗಳು ಇಲ್ಲವೇ ಇಲ್ಲ ಎಂದು ಹೇಳಬಹುದು. ಕುಮಾರಸ್ವಾಮಿಯವರೇನೋ ಈ ಮೈತ್ರಿ ಶಾಶ್ವತವಾಗಿರಲಿದೆ ಎಂದೂ ಹೇಳಿದ್ದಾರೆ. ಆದರೆ ಬಿಜೆಪಿ ನಾಯಕರಿಗೆ ಇದು ಇಷ್ಟವಿಲ್ಲದ ಸಂಬಂಧ, ಜೆಡಿಎಸ್ ಪಕ್ಷದ ಜತೆ ಅಂತರ ಕಾಯ್ದುಕೊಂಡೇ ತಮ್ಮ ರಾಜಕೀಯ ತಂತ್ರಗಳನ್ನು ಮುಂದುವರಿಸಲು ಅವರು ನಿರ್ಧರಿಸಿರುವುದರಿಂದ ಮೇಲಾಗಿ ಕುಮಾರಸ್ವಾಮಿ ಮತ್ತು  ಅವರ ಕುಟುಂಬದ ಕುರಿತು ಇನ್ನೂ ಅಪನಂಬಿಕೆಗಳು ಹಾಗೇ ಉಳಿದುಕೊಂಡಿರುವುದರಿಂದ ಈ ಮೈತ್ರಿ ಫಲ ಕೊಡುವ ಲಕ್ಷಣಗಳು ಕಾಣ ಬರುತ್ತಿಲ್ಲ.

ಈ ಮೈತ್ರಿ ಎರಡು ಪ್ರಬಲ ಶಕ್ತಿಗಳ ಸಮೀಕರಣ ಎಂಬ ರೋಮಾಂಚಕ ವಿಶ್ಲೇಷಣೆಗಳೂ ಅಲ್ಲಲ್ಲಿ ಕೇಳಿ ಬರುತ್ತಿವೆ. ಆದರೆ ರಾಜ್ಯ ರಾಜಕಾರಣದ ವಸ್ತು ಸ್ಥಿತಿಯನ್ನು ಆಳಕ್ಕಿಳಿದು ನೋಡಿದರೆ, ಚುನಾವಣೆಯ ನಂತರ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿರುವ ಮತ್ತು ಈ ಮೊದಲು ಪ್ರಾಬಲ್ಯ ಹೊಂದಿದ್ದ ಪ್ರದೇಶಗಳಲ್ಲೇ ನೆಲ ಕಳೆದುಕೊಳ್ಳುವ ಸ್ಥಿತಿಗೆ ಮುಟ್ಟಿರುವ ಜೆಡಿಎಸ್ ಪಕ್ಷಕ್ಕೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಆಸರೆ ಬೇಕಾಗಿತ್ತು. ಕಾಂಗ್ರೆಸ್ ಗೆದ್ದು ಈಗ ಅಧಿಕಾರದಲ್ಲಿರುವುದರಿಂದ ಜತೆಗೇ ಸ್ಥಳೀಯಾಗಿ ಬೇರೆ ಬೇರೆ ಕಾರಣಗಳಿಗೆ ಆ ಪಕ್ಷದ ಜತೆ ಮೈತ್ರಿ ಸಾಧ್ಯವಿಲ್ಲದ ಕಾರಣ ಅನಿವಾರ್ಯವಾಗಿ ಬಿಜೆಪಿಯತ್ತ ನೆರವಿಗಾಗಿ ಕೈಚಾಚುವ ಪರಿಸ್ಥಿತಿಗೆ ತನ್ನನ್ನು ಒಡ್ಡಿಕೊಂಡಿತು. ಆದರೆ ಇದೂ ಕೂಡಾ ಆ ಪಕ್ಷಕ್ಕೆ ಲಾಭ ತರುವ ಸನ್ನಿವೇಶಗಳು ಇಲ್ಲ.

ಮೈತ್ರಿಯ ಕುರಿತು ಜೆಡಿಎಸ್ ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಪಕ್ಷದ ಪ್ರಶ್ನಾತೀತ ನಾಯಕ, ಮಾಜಿ ಪ್ರಧಾನಿ ದೇವೇಗೌಡರು ಬಹಿರಂಗವಾಗಿ ಈ ವಿಚಾರದಲ್ಲಿ ಏನೇ ಸ್ಪಷ್ಟನೆ ಕೊಡಲಿ ಆದರೆ ವಾಸ್ತವಿಕವಾಗಿ ಅವರಿಗೂ ಈ ವಿಚಾರದಲ್ಲಿ ಅಂತಹ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಪುತ್ರ ಕುಮಾರಸ್ವಾಮಿಯ ಒತ್ತಡಕ್ಕೆ ಮಣಿದು ಅವರು ಸಮ್ಮತಿ ಸೂಚಿಸಿರುವುದು ಬಿಟ್ಟರೆ, ಈ ಮೈತ್ರಿ ಭವಿಷ್ಯದಲ್ಲಿ ತಮ್ಮ ಪಕ್ಷದ ಅಸ್ತಿತ್ವಕ್ಕೆ ಹಾಗೂ ಕುಟುಂಬದ ಸಾಮರಸ್ಯಕ್ಕೆ ದಕ್ಕೆ ತರಬಹುದೆಂಬ ಆತಂಕವೂ ಕಾಡುತ್ತಿದೆ.  ಪ್ರಮುಖವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸ್ಥಾನಗಳ ಹೊಂದಣಿಕೆಯಾದರೂ ಅದು ಫಲಿತಾಂದ ರೂಪದಲ್ಲಿ ಫಲ ಕೊಡಲಿಲ್ಲ. ತುಮಕೂರಿನಲ್ಲಿ ಸ್ಪರ್ಧಿಸಿದ್ದ ಗೌಡರ ಪರ ಕಾಂಗ್ರೆಸ್ ನಾಯಕರು ಅದರಲ್ಲೂ ಸಿದ್ದರಾಮಯ್ಯ ಬೆಂಬಲಿಗರು ಕೆಲಸ ಮಾಡಲಿಲ್ಲ. ಮಂಡ್ಯದಲ್ಲೂ ನಿಖಿಲ್ ಕುಮಾರಸ್ವಾಮಿ ಸೋಲಬೇಕಾಯಿತು. ಬಹುತೇಕ ಒಕ್ಕಲಿಗರೇ ನಿರ್ಣಾಯಕವಾಗಿದ್ದ ಕ್ಷೇತ್ರಗಳಲ್ಲಿ ಜೆಡಿಎಸ್ ಸೋಲಬೇಕಾಯಿತು.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲೂ ಅಷ್ಟೆ. ರಾಮನಗರದಿಂದ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಕಾಮಗ್ರೆಸ್ ಅಭ್ಯರ್ಥಿ ಎದುರು ಸೋತರೆ, ಮಂಡ್ಯದಲ್ಲಿ ಜೆಡಿಎಸ್ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳೇಕಾಯಿತು. ಗೌಡರ ಸ್ವಂತ ಜಿಲ್ಲೆ ಹಾಸನದಲ್ಲೂ ಜೆಡಿಎಸ್ ಅಭ್ಯರ್ಥಿಗಳು ಪ್ರಯಾಸದ ಗೆಲುವು ಸಾಧಸಿದರು ಹೊಳೆ ನರಸೀಪುರದಿಂದ ಸ್ಪರ್ದಿಸಿದ್ದ ಗೌಡರ ಇನ್ನೊಬ್ಬ ಪತ್ರ ಎಚ್.ಡಿ.ರೇವಣ್ಣ ಗೆಲ್ಲಲು ತಿಣುಕಾಡಬೇಕಾಯಿತು. ಹಳೇ ಮೈಸೂರು ಪ್ರಾಂತ್ಯದಲ್ಲೂ ಜೆಡಿಎಸ್ ಗಮನಾರ್ಹ ಸಾಧನೆಯನ್ನೇನೂ ಮಾಡಿಲ್ಲ. ಒಟ್ಟಾರೆ ಪರಿಸ್ಥಿತಿ ನೋಡಿದರೆ ದೇವೇಗೌಡರನ್ನು ಬೆಂಬಲಸಿಕೊಂಡು ಬಂದಿದ್ದ ಒಕ್ಕಲಿಗರು ಈಗ ಕಾಂಗ್ರೆಸ್ ಕಡೆ ತಮ್ಮ ನಿಷ್ಠೆ ಬದಲಿಸಿದ್ದಾರೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಹಾಗೂ ಈಗಿನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿರುವ ಡಿ.ಕೆ.ಶಿವಕುಮಾರ್ ಸಂಘಟನಾ ತಂತ್ರದ ಫಲ ಎಂದರೂ ಅದೇನೂ ಅತಿರೇಕವಲ್ಲ.

ಮತ್ತೊಂದು ಸಂಗತಿ ಜೆಡಿಎಸ್ ನ ಕುಟುಂಬ ರಾಜಕಾರಣದ ಕುರಿತಾಗಿ ಪಕ್ಷದ ಕೆಳ ಹಂತದ ಮುಖಂಡರಿಗೇ ಜಿಗುಪ್ಸೆ ಬಂದಿದೆ. ದಿಲ್ಲಿಯಲ್ಲಿ ಇತ್ತಿಚೆಗೆ ಬಿಜೆಪಿಯ ರಾಷ್ಟ್ರೀಯ ನಾಯಕರನ್ನು ಕುಮಾರಸ್ವಾಮಿ ಭೇಟಿ ಮಾಡಿದ ಸಂದರ್ಭದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರನ್ನೇ ಹೊರಗಿಟ್ಟು ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಜತೆಗಿದ್ದುದು ಅವರ ಪುತ್ರ ನಿಖಿಲ್ ಮಾತ್ರ. ಗೌಡರ ಕುಟುಂಬದ ಮತ್ತೊಬ್ಬ ಸದಸ್ಯ ಹಾಗೂ ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ದಿಲ್ಲಿಯಲ್ಲಿದ್ದರೂ ಅವರು ಈ ಮೈತ್ರಿ ಕುರಿತು ಮಾತುಕತೆಯಲ್ಲಿ ಭಾಗವಹಿಸಿರಲಿಲ್ಲ. ಯಾವುದೇ ಸದನದ ಸದಸ್ಯರಲ್ಲದ ರಾಜಕೀಯವಾಗಿ ಅನುಭವವೇ ಇಲ್ಲದ ಪುತ್ರನನ್ನು ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಕುಮಾರಸ್ವಾಮಿ ಕುಟುಂಬದಲ್ಲೇ ಬಿಕ್ಕಟ್ಟು ಮುಂದುವರಿಯಲು ಮತ್ತಷ್ಟು ಅವಕಾಶ ಮಾಡಿಕೊಟ್ಟಿದ್ದಾರೆ. ಬಿಜೆಪಿ ಜತೆಗೆ ಮೈತ್ರಿ ವಿಚಾರದಲ್ಲಿ ಆ ಪಕ್ಷದ ಶಾಸಕರಾದ ಶರಣಗೌಡ ಕಂದಕೂರು, ಶ್ರಿಮತಿ ಶಾರದಾ ಪೂರ್ಯಾನಾಯ್ಕ, ಹಾಗೂ ಶ್ರೀಮತಿ ಕರೆಮ್ಮ ಅವರು ಬಹಿರಂಗವಾಗೇ ಅಸಮಧಾನ ವ್ಯಕ್ತಪಡಿಸಿದ್ದಾರೆ. ಶರಣ ಗೌಡ ಜತೆ ನಿಖಿಲ್ ಕುಮಾರಸ್ವಾಮಿ ನಡೆಸಿದ ಮಾತುಕತೆ ಸಂಪೂರ್ಣ ಸಮಾಧಾನವೇನೂ ತಂದಿಲ್ಲ. 

ಇನ್ನು ಜೆಡಿಎಸ್ ನ್ನು ಈವರೆಗೆ ಬೆಂಬಲಿಸಿಕೊಂಡು ಬಂದಿದ್ದ ಮುಸ್ಲಿಮರು ಇದೀಗ ಸಾರಾ ಸಗಟಾಗಿ ಪಕ್ಷ ತೊರೆಯಲು ಆರಂಭಿಸಿದ್ದಾರೆ. ದೇವೇಗೌಡರು, ಕುಮಾರಸ್ವಾಮಿಯವರ ಮಾತುಗಳಿಂದ ಆಕರ್ಷಣೆಗೊಂಡು ಜೆಡಿಎಸ್ ಸೇರಿ ರಾಜ್ಯ ಘಟಕದ ಅಧ್ಯಕ್ಷರಾದ ಇಬ್ರಾಹಿಂ ಅವರನ್ನು ಕುಮಾರಸ್ವಾಮಿ ಲೆಕ್ಕಕ್ಕೇ ಇಟ್ಟಿಲ್ಲ. ಮೈತ್ರಿ ವಿಚಾರವೂ ಸೇರಿದಂತೆ ಪಕ್ಷದ ಎಲ್ಲ ವಿಚಾರಗಳಲ್ಲೂ ಅವರದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ. ಈ ವಿವಾದದ ನಂತರವೂ ಅವರೊಂದಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಮಾತನಾಡಿಲ್ಲ. ಸಂಪೂರ್ಣ ನಿರ್ಲಕ್ಷ್ಕಕ್ಕೆ ಒಳಗಾಗಿರುವ ಇಬ್ರಾಹಿಂ ಮತ್ತೆ ಕಾಂಗ್ರೆಸ್ ಗೆ ಮರಳುವ ಆಸೆ ಹೊಂದಿದ್ದಾರೆ. ಆದರೆ ಅಲ್ಲೂ ಅವರಿಗೆ ಹಾದಿ ಮುಕ್ತವಾಗಿಲ್ಲ. 

ಜೆಡಿಎಸ್ ಕತೆ ಇದಾದರೆ, ದಿಲ್ಲಿ ಮುಖಂಡರ ಜತೆಗಿನ ಮಾತುಕತೆ ನಂತರವೂ ಕುಮಾರಸ್ವಾಮಿ ಜತೆ ರಾಜ್ಯ ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಬೆಂಗಳೂರಿನ ಮುನಿರತ್ನ ಹೊರತುಪಡಿಸಿ ಉಳಿದ ಯಾವುದೇ ಬಿಜೆಪಿ ಶಾಸಕರು ಹಾಗೂ ಪ್ರಮುಖ ಮುಖಂಡರು ಈ ಮೈತ್ರಿಯಿಂದ ಹರ್ಷ ಚಿತ್ತರಾಗಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಈ ಸನ್ನಿವೇಶ ಬಳಸಿಕೊಂಡು ತಮ್ಮ ಪುತ್ರ ಶಾಸಕ ಬಿ.ವೈ ವಿಜಯೇಂದ್ರ ಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕೊಡಿಸಲು ಪ್ರಯತ್ನ ನಡೆಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಆದರೆ ಸ್ವಯಂ ಯಡಿಯೂರಪ್ಪನವರಿಗೂ ಮೈತ್ರಿ ಇಷ್ಟವಿಲ್ಲ. 

ಎರಡೂ ಪಕ್ಷಗಳಲ್ಲಿನ ಈ ಪರಿಸ್ಥಿತಿಯನ್ನು ಗಮನಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅತೃಪ್ತರನ್ನು ಕಾಂಗ್ರೆಸ್ ನತ್ತ ಸೆಳೆಯುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಅವರ ಈ ತಂತ್ರಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ವಿಧಾನ ಪರಿಷತ್ ಸದಸ್ಯರಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೈ ಜೋಡಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಶೆಟ್ಟರ್ ಬಿಜೆಪಿಯ ಅತೃಪ್ತ ಲಿಂಗಾಯಿತ ನಾಯಕರಿಗೆ ಗಾಳ ಹಾಕಿದ್ದರೆ, ಹಳೇ ಮೈಸೂರು ಪ್ರಾಂತ್ಯದಲ್ಲಿ ಶಿವಕುಮಾರ್ ಜೆಡಿಎಸ್ ನ ಅತೃಪ್ತ ಒಕ್ಕಲಿಗರು, ಅಲ್ಪ ಸಂಖ್ಯಾತ ಮುಖಂಡರನ್ನು ಸಾರಾಸಗಟಾಗಿ ಕಾಂಗ್ರೆಸ್ ಗೆ ಸೇರಿಸಿಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆ ವೇಳೆಗೆ ಜೆಡಿಎಸ್ ನ ಕನಿಷ್ಟ 10 ಶಾಸಕರನ್ನು ಸೆಳೆಯುವ ಯೋಜನೆ ಅವರದ್ದು.  

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com